Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಭಾರತದ ಐಟಿ ರಂಗ ಬಿಕ್ಕಟ್ಟಿನತ್ತ ಸಾಗುತ್ತಿದೆಯೇ?

Friday, 19.05.2017, 3:05 AM       No Comments

ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಚರ್ಚೆಯಾಗುತ್ತಿರುವ ವಿಷಯ- ‘ಎಚ್ 1 ಬಿ ವೀಸಾ’. ಅಮೆರಿಕದ ಉದ್ಯೋಗರಂಗದಲ್ಲಿ ವಿದೇಶಿಯರ ಪಾರಮ್ಯ ಮುರಿದು, ಅಮೆರಿಕನ್ನರಿಗೆ ಹೆಚ್ಚೆಚ್ಚು ಉದ್ಯೋಗಾವಕಾಶ ಒದಗಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಿಂತನೆ ಜಾಗತಿಕ ಮಟ್ಟದಲ್ಲಿ ತಲ್ಲಣ, ಸಂಚಲನೆಯನ್ನು ಸೃಷ್ಟಿಸಿದ್ದುಂಟು. ಈ ವಿಷಯದ ಕುರಿತು ಮತ್ತಷ್ಟು ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

| ಎನ್. ಪಾರ್ಥಸಾರಥಿ

ಅಮೆರಿಕನ್ನರಿಗೆ ಹೆಚ್ಚು ಉದ್ಯೋಗ ಸೃಷ್ಟಿ ಮಾಡಿಕೊಡುವ ಸಲುವಾಗಿ ಎಚ್ 1 ಬಿ ವೀಸಾ ನೀತಿ ಬಿಗಿಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಕಟಿಸಿದ ಹೊಸ ಉಪಕ್ರಮಗಳ ಬಗ್ಗೆ ಕೆಲ ದಿನಗಳ ಹಿಂದೆ ನಾನು ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದು ಓದುಗರಿಗೆ ನೆನಪಿರಬಹುದು. ‘ಎಚ್1 ಬಿ ವೀಸಾ ವ್ಯವಸ್ಥೆಯಲ್ಲಿನ ಸಂಭಾವ್ಯ ಬದಲಾವಣೆಗಳು ಟಿಸಿಎಸ್, ಇನ್ಪೋಸಿಸ್ ಮತ್ತು ವಿಪ್ರೊದಂತಹ ಭಾರತೀಯ ಐಟಿ ಕಂಪನಿಗಳಿಗೆ ಅಚ್ಚರಿಯನ್ನು ಉಂಟು ಮಾಡಲಾರವು. ಅವು ಪರಿಷ್ಕೃತ ವೀಸಾ ವ್ಯವಸ್ಥೆಯ ವಾಸ್ತವಗಳಿಗೆ ಸ್ಪಂದಿಸಿ ತಮ್ಮ ವಹಿವಾಟನ್ನು ಮುಂದಕ್ಕೆ ಒಯ್ಯಬಲ್ಲವು. ವಾಸ್ತವವಾಗಿ ಇರುವ ಟೀಕೆ ಏನೆಂದರೆ, ಭಾರತದ ಐಟಿ ಕಂಪನಿಗಳು ವಿದೇಶಗಳಲ್ಲಿ ಕಾರ್ಯಾಚರಿಸುತ್ತಿದ್ದರೂ ಭಾರತೀಯ ಕಂಪನಿಗಳಾಗಿಯೇ ಕಾರ್ಯನಿರ್ವಹಿಸುತ್ತಿವೆ. ವಿಶಾಲ್ ಸಿಕ್ಕಾ ಅವರಂತಹ ನಾಯಕರು ಭಾರತೀಯ ಕಂಪನಿಗಳನ್ನು ಜಾಗತಿಕ ಕಂಪನಿಗಳನ್ನಾಗಿಸುವಲ್ಲಿ ಮುಂಚೂಣಿಯ ಪಾತ್ರ ವಹಿಸಬೇಕು’ ಎಂದು ನಾನು ಆ ಲೇಖನದಲ್ಲಿ ಬರೆದಿದ್ದೆ.

ಅದಾದ ಕೆಲ ದಿನಗಳಲ್ಲಿ, ಜಾಗತಿಕ ಸಾಫ್ಟ್​ವೇರ್ ಕಂಪನಿ ಇನ್ಪೋಸಿಸ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ವಿಶಾಲ್ ಸಿಕ್ಕಾ ಅವರು ಮುಂದಿನ ಎರಡು ವರ್ಷಗಳಲ್ಲಿ 10,000 ಅಮೆರಿಕನ್ ಕೆಲಸಗಾರರನ್ನು ತಮ್ಮ ಸಂಸ್ಥೆ ನೇಮಕ ಮಾಡಿಕೊಳ್ಳಲಿದೆ ಎಂದು ಪ್ರಕಟಿಸಿದರು. ಈ ಪ್ರಕಟಣೆಯು ತನ್ನ ಎಚ್ 1ಬಿ ವೀಸಾ ನೀತಿ ಬದಲಾವಣೆಯ ಯಶಸ್ಸಿನ ಪರಿಣಾಮ ಎಂದು ಟ್ರಂಪ್ ಆಡಳಿತವು ಪ್ರತಿಪಾದಿಸಿಕೊಂಡು ಬೀಗಿದೆ.

ಇನ್ಪೋಸಿಸ್ ಒಂದೇ ಅಲ್ಲ, ಸುಮಾರು 2,60,000 ನೌಕರರನ್ನು ಹೊಂದಿರುವ ಪ್ರಮುಖ ಐಟಿ ಉದ್ಯಮ ಕಾಗ್ನಿಝುಂಟ್ ಕೂಡಾ ತನ್ನ ಅಮೆರಿಕ ನೌಕರಪಡೆಯಲ್ಲಿ ಸಾಕಷ್ಟು ಬದಲಾವಣೆ ಮಾಡುವುದಾಗಿಯೂ, ಮುಕ್ತ ಮಾರುಕಟ್ಟೆಯಲ್ಲಿನ ತಜ್ಞ ವೃತ್ತಿಪರರನ್ನು ನೇಮಿಸಿಕೊಳ್ಳುವ ಮೂಲಕ ಎಚ್1ಬಿ ವೀಸಾ ಅವಲಂಬನೆಯನ್ನು ಕಡಿಮೆಗೊಳಿಸುವುದಾಗಿಯೂ ಹೇಳಿದೆ. ಅದರ ನೌಕರರಲ್ಲಿ ಶೇಕಡಾ 75ರಷ್ಟು ನೌಕರರು ಭಾರತೀಯರು ಎಂಬುದು ಗಮನಾರ್ಹ. ಟಿಸಿಎಸ್ ಕೂಡಾ ಹೆಚ್ಚು ಅಮೆರಿಕನ್ನರನ್ನೇ ನೇಮಿಸಿಕೊಳ್ಳಲಿದೆ. ಭಾರತದ ಪ್ರಮುಖ ಐಟಿ ಕಂಪನಿಗಳು ಈ ವರ್ಷ ಅತ್ಯಂತ ಕಡಿಮೆ ಸಂಖ್ಯೆಯ ಎಚ್1ಬಿ ವೀಸಾಗಳಿಗಾಗಿ ಅರ್ಜಿ ಸಲ್ಲಿಸಿವೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಲಾಭ-ಹಾನಿ: ನಾಲ್ಕು ತಂತ್ರಜ್ಞಾನ ಮತ್ತು ಸಂಶೋಧನಾ ಹಬ್​ಗಳನ್ನು ಉತ್ತರ ಅಮೆರಿಕದಾದ್ಯಂತ ಸ್ಥಾಪಿಸಲು ಇನ್ಪೋಸಿಸ್ ಯೋಜಿಸಿದೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್- ಎಐ), ಯಂತ್ರ ಕಲಿಕೆ (ಮಷಿನ್ ಲರ್ನಿಂಗ್), ಬಳಕೆದಾರರ ಅನುಭವ, ಹೊಸ ಡಿಜಿಟಲ್ ತಂತ್ರಜ್ಞಾನಗಳು, ಕ್ಲೌಡ್ ಮತ್ತು ಬಿಗ್ ಡಾಟಾ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಬಗೆಗೆ ಈ ಮೂಲಕ ಒತ್ತು ನೀಡುವುದು ಇನ್ಪೋಸಿಸ್ ಯೋಜಿಸಿದೆ. ಇಂತಹ ಕ್ರಮಗಳು ದೀರ್ಘಾವಧಿಯಲ್ಲಿ ಭಾರತೀಯ ಕಂಪನಿಗಳು ನೈಜ ಜಾಗತಿಕ ಕಂಪನಿಗಳಾಗಿ ಗುರುತಿಸಿಕೊಳ್ಳಲು ನೆರವಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿ ಅವರು ಪಡೆಯುವ ಪ್ರತಿಯೊಬ್ಬ ಅಮೆರಿಕನ್ ಸಾಫ್ಟ್​ವೇರ್ ಉದ್ಯೋಗಿಗೆ ಪ್ರತಿಯಾಗಿ ಭಾರತವು ಕಡಲಾಚೆಯ ಕಾರ್ಯಾಚರಣೆಯ 2-3 ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು. ಬಹುಶಃ ಅಮೆರಿಕದ ವಿಶ್ವವಿದ್ಯಾಲಯಗಳ ಮೂಲಕ ಉನ್ನತ ಪದವಿಗಳನ್ನು ಪಡೆಯುತ್ತಿರುವ ಭಾರತೀಯರು ಮತ್ತು ಅತ್ಯುನ್ನತ ಕೌಶಲ ಹೊಂದಿರುವ ಭಾರತದ ವೃತ್ತಿಪರರು ಎಚ್1ಬಿ ವೀಸಾ ಮಾರ್ಗದ ಮೂಲಕವೇ ಉದ್ಯೋಗಗಳನ್ನು ಪಡೆಯಬೇಕಾಗುತ್ತದೆ. ಕಡಿಮೆ ಕೌಶಲ ಹೊಂದಿದ ಮತ್ತು ಅನುಭವ ಹೊಂದಿದ ಇತರರಿಗೆ ಎಚ್1ಬಿ ವೀಸಾವು ಅಡೆತಡೆಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕೂಡಾ ಕೆಲಸದ ವೀಸಾ ಮೇಲೆ ನಿರ್ಬಂಧಗಳನ್ನು ವಿಧಿಸಿವೆ ಎಂಬುದು ಮಹತ್ವದ ವಿಚಾರ. ಸಿಂಗಾಪುರ ಕೂಡಾ ಭಾರತದ ಐಟಿ ವೃತ್ತಿಪರರಿಗೆ ವೀಸಾ ಮೇಲೆ ನಿಯಂತ್ರಣಗಳನ್ನು ಹೇರಿದೆ. ಇಂಗ್ಲೆಂಡ್ ಪ್ರಾಯೋಗಿಕವಾಗಿ ತಾಂತ್ರಿಕ ಕೆಲಸಗಾರರಿಗೆ ಅಲ್ಪಾವಧಿ ವೀಸಾ ನೀಡಿಕೆಯನ್ನು ನಿಲ್ಲಿಸಿದೆ.

ಹೆಚ್ಚಿದ ಚಿಂತೆ: ಇತರ ರಾಷ್ಟ್ರಗಳು ಎಚ್1ಬಿ ವೀಸಾ ನೀತಿಯಲ್ಲಿ ಮಾಡುವ ಬದಲಾವಣೆಗಳು ಮತ್ತು ನಿಯಂತ್ರಣಗಳು, ಅಮೆರಿಕದ ಗ್ರೀನ್ ಕಾರ್ಡ್ ಪಡೆಯುವ ಅಥವಾ ಇತರ ರಾಷ್ಟ್ರಗಳಿಗೆ ವಲಸೆ ಹೋಗುವ ಹಲವಾರು ಭಾರತೀಯರ ಕನಸುಗಳನ್ನು ಭಗ್ನಗೊಳಿಸಿದೆ. ಸ್ವತಃ ಭಾರತದಲ್ಲಿಯೇ ಐಟಿ ರಂಗದಲ್ಲಿ ಭಾರಿ ಪ್ರಮಾಣದಲ್ಲಿ ನೌಕರಿ ನಷ್ಟವಾಗುವ ಸಾಧ್ಯತೆ ಇರುವುದು ಇದಕ್ಕೂ ಹೆಚ್ಚಿನ ಚಿಂತೆಯ ವಿಷಯ.

ಕಾಗ್ನಿಝುಂಟ್ ಕಂಪನಿಯು ತನ್ನ ನೌಕರಪಡೆಯನ್ನು ಕಡಿತಗೊಳಿಸುವ ನಿರೀಕ್ಷೆ ಇದ್ದು, 10,000ಕ್ಕೂ ಹೆಚ್ಚು ಮಂದಿ ನೌಕರಿ ಕಳೆದುಕೊಳ್ಳುವ ಸಾಧ್ಯತೆಗಳಿವೆ. ವಿಪ್ರೊ ಹಲವಾರು ನೂರು ನೌಕರಿಗಳನ್ನು ಕಡಿತಗೊಳಿಸಲು ಕ್ರಮ ಕೈಗೊಂಡಿದೆ. ಇತರ ಹಲವಾರು ಐಟಿ ಕಂಪನಿಗಳೂ ತಮ್ಮ ಕಾರ್ವಿುಕ ಬಲವನ್ನು ಕಡಿಮೆ ಮಾಡುತ್ತಿವೆ. ಡಿಜಿಟಲೀಕರಣ ಎಲ್ಲ ಕಡೆಗೂ ವ್ಯಾಪಿಸಿರುವುದರಿಂದ ಕೆಲಸದ ನಷ್ಟ ಐಟಿ ಕಂಪನಿಗಳಿಗಷ್ಟೇ ಸೀಮಿತ ಎಂದು ಭಾವಿಸಬೇಕಿಲ್ಲ. ಲಾರ್ಸನ್ ಅಂಡ್ ಟೂಬ್ರೊ (ಎಲ್ ಅಂಡ್ ಟಿ) ಕಳೆದ ವರ್ಷ 14,000 ನೌಕರರನ್ನು ಉದ್ಯೋಗದಿಂದ ತೆಗೆದುಹಾಕಿದೆ. ಖಾಸಗಿ ರಂಗದಲ್ಲಿ ಎರಡನೇ ಅತ್ಯಂತ ದೊಡ್ಡ ಸಾಲ ನೀಡಿಕೆ ಸಂಸ್ಥೆಯಾಗಿರುವ ಎಚ್​ಡಿಎಫ್​ಸಿ ಬ್ಯಾಂಕ್, ನೋಟು ಅಮಾನ್ಯೀಕರಣದ ಬಳಿಕ 6000 ನೌಕರರನ್ನು ವಜಾಗೊಳಿಸಿದೆ.

ನೌಕರರ ವಜಾ ಆತಂಕ ಒಂದೆಡೆಯಾದರೆ, ಮತ್ತೊಂದೆಡೆ ಹೊಸ ನೇಮಕಾತಿಗಳು ಭಾರಿ ಪ್ರಮಾಣದಲ್ಲಿ ತಗ್ಗಿವೆ ಎಂಬುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಉದಾಹರಣೆಗೆ: ಇನ್ಪೋಸಿಸ್, ಯಾಂತ್ರೀಕರಣದ ಹಿನ್ನೆಲೆಯಲ್ಲಿ ಶೇಕಡಾ 60ರಷ್ಟು ನೇಮಕಾತಿಗಳನ್ನು ಕಡಿತಗೊಳಿಸಿದೆ. 2016-17ರಲ್ಲಿ ಇನ್ಪೋಸಿಸ್ ತನ್ನ ನೌಕರ ಪಡೆಗೆ ಕೇವಲ 6,320 ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದೆ. ಹಿಂದಿನ ವರ್ಷ ಅದು ಮಾಡಿಕೊಂಡಿದ್ದ ನೇಮಕಾತಿ 17,857. ಇನ್ಪಿ ಸಿಇಒ ವಿಶಾಲ್ ಸಿಕ್ಕಾ ಅವರು ಯಾಂತ್ರೀಕರಣದಿಂದಾಗಿ ಭಾರತದಲ್ಲಿ ನೌಕರಿ ಮೇಲೆ ದೊಡ್ಡ ಪ್ರಮಾಣದ ಪರಿಣಾಮವಾಗಬಹುದು ಎಂದು ಈ ಷರ್ವದ ಪೆಬ್ರವರಿಯಲ್ಲಿ ಎಚ್ಚರಿಕೆ ನೀಡಿದ್ದರು. ಯಾಂತ್ರೀಕರಣದ ಜತೆಗೆ ಅಧ್ಯಕ್ಷ ಟ್ರಂಪ್ ಅವರ ಎಚ್1ಬಿ ನೀತಿಯಲ್ಲಿನ ಬದಲಾವಣೆಗಳು ಭಾರತೀಯ ಐಟಿ ಉದ್ಯಮವನ್ನು ತಲ್ಲಣಗೊಳಿಸಿವೆ.

ಯಾಂತ್ರೀಕರಣ ಮತ್ತು ತಾಂತ್ರಿಕ ಮುನ್ನಡೆಗಳಿಂದಾಗಿ, ಐದು ಪ್ರಮುಖ ಐಟಿ ಕಂಪನಿಗಳು ಈ ಹಣಕಾಸು ವರ್ಷದಲ್ಲಿ ಸುಮಾರು 60,000 ಸಾಫ್ಟ್ ವೇರ್ ಎಂಜಿನಿಯರ್​ಗಳನ್ನು ಮಾತ್ರ ಕ್ಯಾಂಪಸ್ ಮುಖಾಂತರ ನೇಮಕ ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದು ಕಳೆದ ವರ್ಷದ ನೇಮಕಾತಿಗೆ ಹೋಲಿಸಿದರೆ ಶೇಕಡಾ 50ರಷ್ಟು ಕಡಿಮೆ.

ಹಾಲಿ ಪರಿಸ್ಥಿತಿಯು ಹೊಸ ಐಟಿ ಪದವೀಧರರು ಮತ್ತು ಐಟಿ ವೃತ್ತಿಯನ್ನು ಬಯಸುವವರಿಗೆ ಎಚ್ಚರಿಕೆಯ ಗಂಟೆಯಾಗಬೇಕು. ನೌಕರಿ ಮಾರುಕಟ್ಟೆಯಲ್ಲಿ ಉದ್ಯೋಗಕ್ಕೆ ಅಗತ್ಯವಾದ ಕೌಶಲದ ಅಭಾವದಿಂದಾಗಿ, ಭಾರತದ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ಶೇಕಡಾ 80 ಪದವೀಧರರಿಗೆ ಉದ್ಯೋಗ ಸಿಗುವುದಿಲ್ಲ ಎಂಬ ಅಂದಾಜಿದೆ. ಅಂದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಕಥೆ ನೋಡಿ.

ಭಾರತದ ಐಟಿ ಕ್ರಾಂತಿಯಲ್ಲಿ ಕರ್ನಾಟಕ ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರು ಮುಂಚೂಣಿಯಲ್ಲಿದೆ ಎಂಬುದು ಗೊತ್ತಿರುವ ಸಂಗತಿಯೇ. ಆದ್ದರಿಂದ ಸದ್ಯದ ಪರಿಸ್ಥಿತಿಯ ಗಂಭೀರತೆಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಮತ್ತು ಐಟಿ ಸಂಬಂಧಿತ ಶಿಕ್ಷಣದ ಗುಣಮಟ್ಟ ವರ್ಧನೆಗೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಕೈಗಾರಿಕೆಗಳಲ್ಲಿ ಇಂಟರ್ನ್​ಶಿಪ್ ವ್ಯವಸ್ಥೆ ಮಾಡುವ ಮೂಲಕ ಕೌಶಲಗಳನ್ನು ಕಲಿಸಬೇಕು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕೌಶಲಗಳನ್ನು ವಿದ್ಯಾರ್ಥಿಗಳು ಗಳಿಸುವಂತೆ ಮಾಡಬೇಕು.

ಎಚ್ಚರಿಕೆ ಗಂಟೆ: ಎಚ್1ಬಿ ವೀಸಾ ಮತ್ತು ಯಾಂತ್ರೀಕರಣದ ಸಂಕಟಗಳ ಜತೆಗೆ, ಭಾರತೀಯ ಐಟಿ ಉದ್ಯಮದಲ್ಲಿ ಸಾಮೂಹಿಕ ಉದ್ಯೋಗ ಕಡಿತಕ್ಕೆ ಇನ್ನೂ ಒಂದು ಪ್ರಮುಖ ಕಾರಣವಿದೆ. ಮೆ.ಮೆಕಿನ್ಸೆ ಮತ್ತು ಕಂಪನಿ ನಡೆಸಿದ ಇತ್ತೀಚಿನ ಅಧ್ಯಯನ ವರದಿ ಪ್ರಕಾರ, ಈಗಿನ ಕಾರ್ವಿುಕ ಪಡೆಯ ಅರ್ಧದಷ್ಟು ಮಂದಿ ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಅಪ್ರಸ್ತುತರಾಗಲಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಭಿನ್ನ ಹಾದಿ ಹಿಡಿದಿರುವ ಕಾರಣದಿಂದ ಹಲವಾರು ವರ್ಷಗಳ ಅನುಭವ ಹೊಂದಿದ್ದು, ಮಧ್ಯವಯಸ್ಸು, ಅಥವಾ ಹಿರಿಯ ಹಂತಗಳಲ್ಲಿ ಇರುವವರು ಕೂಡಾ ಮರುಕೌಶಲಗಳನ್ನು ಕಲಿತುಕೊಳ್ಳದಿದ್ದರೆ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂಬುದರತ್ತ ವರದಿ ಬೊಟ್ಟುಮಾಡಿದೆ.

ಭಾರತದಲ್ಲಿನ ಬಹುತೇಕ ಪ್ರಮುಖ ಐಟಿ ಕಂಪನಿಗಳು ಈ ಅಪಾಯದ ಅಂಶವನ್ನು ಅರ್ಥ ಮಾಡಿಕೊಂಡಿದ್ದು, ತಮ್ಮ ನೌಕರರಿಗೆ ಮರುಕೌಶಲ ಕಲಿಕೆಯ ಕಾರ್ಯವನ್ನು ಆರಂಭಿಸಿರುವುದು ಸಮಾಧಾನದ ಸಂಗತಿಯೇ ಸರಿ. ಆದರೆ ನೌಕರರಲ್ಲಿ ಬಹುತೇಕ ಮಂದಿಗೆ ಅಗತ್ಯ ಕೌಶಲಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗದಿರಬಹುದು ಎಂಬ ಚಿಂತೆಯೂ ಈ ಕಂಪನಿಗಳಿಗೆ ಇಲ್ಲದಿಲ್ಲ.

ದೇಶದ ಅತಿದೊಡ್ಡ ಸಾಫ್ಟ್​ವೇರ್ ರಫ್ತುದಾರ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ತನ್ನ ಒಂದು ಲಕ್ಷ ಮಂದಿ ನೌಕರರನ್ನು ಭವಿಷ್ಯಕ್ಕೆ ಅಣಿಯಾಗುವಂತೆ ಮಾಡಲು ಅವರಿಗೆ ಡಿಜಿಟಲ್ ಮತ್ತು ಕ್ಲೌಡ್ ತಂತ್ರಜ್ಞಾನಗಳಲ್ಲಿ ಕೌಶಲಗಳನ್ನು ಕಲಿಸಿಕೊಡಲು ಬಯಸಿದೆ.

ಯಾಂತ್ರೀಕರಣ, ಇತರ ರಾಷ್ಟ್ರಗಳ ಉದ್ಯೋಗ ವೀಸಾ ನಿಯಂತ್ರಣ ಮತ್ತು ತಂತ್ರಜ್ಞಾನದಲ್ಲಿ ಆಗಿರುವ ಭಾರಿ ಬದಲಾವಣೆ ಐಟಿ ರಂಗವನ್ನು ಅನಿಶ್ಚಿತತೆಯತ್ತ ಒಯ್ಯುತ್ತಿದ್ದು, ನೌಕರರು ಪ್ರತಿಯೊಂದು ಹಂತದಲ್ಲೂ ಸ್ವಯಂ ಕಲಿಕೆಗೆ ಗಮನ ನೀಡಿ, ಕಾಲಕ್ಕೆ ಸರಿಯಾಗಿ ಪ್ರಸ್ತುತರಾಗಿ ಇರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.

ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಸುಧಾರಿಸಲು ಎಐಸಿಟಿಇ ಮತ್ತು ಯುಜಿಸಿ ದೊಡ್ಡ ಅಡಚಣೆಗಳಾಗುತ್ತಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು ಇತ್ತೀಚೆಗೆ ಹೇಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರವು ಅಗ್ರ ಶ್ರೇಯಾಂಕದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಪಠ್ಯಸೂಚಿ ತಯಾರಿ, ಸಿಬ್ಬಂದಿ ನೇಮಕಾತಿ ಮತ್ತು ಇತರ ಶೈಕ್ಷಣಿಕ ವಿಚಾರಗಳಲ್ಲಿ ಪೂರ್ಣ ಸ್ವಾಯತ್ತತೆ ನೀಡುವ ಬಗ್ಗೆ ಯೋಜಿಸುತ್ತಿದೆ. ಐಟಿ ರಂಗ ಮತ್ತು ಶಿಕ್ಷಣ ಸಂಸ್ಥೆಗಳು ಈ ಬಿಕ್ಕಟ್ಟು ಎದುರಾಗದಂತೆ ನೋಡಿಕೊಳ್ಳಲು ಅತ್ಯಾಧುನಿಕ ಕೌಶಲಗಳ ಕಲಿಕೆಗೆ ಅನುಕೂಲವಾಗುವಂತಹ ಪರಿಸ್ಥಿತಿ ಸೃಷ್ಟಿಸಲು ಸರ್ಕಾರದ ಜತೆ ಸಹಕರಿಸುತ್ತವೆ ಎಂದು ಹಾರೈಸೋಣ.

(ಲೇಖಕರು ಮಾಜಿ ರಾಯಭಾರಿ, ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *

Back To Top