Wednesday, 19th September 2018  

Vijayavani

ಹವಾಲಾ ಕೇಸ್​ನಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಡಿಕೆಶಿಗೆ ಮತ್ತೊಂದು ಕಡೆ ಅನಾರೋಗ್ಯ        ಬಂಧನದಿಂದ ತಪ್ಪಿಸಿಕೊಳ್ಳಲು‌ ಸಚಿವ ಡಿಕೆಶಿ ಶತಪ್ರಯತ್ನ; ವಕೀಲರೊಂದಿಗೆ ಸತತ ಚರ್ಚೆ        ಡಿಕೆಶಿ ವಿರುದ್ಧ ದಾಖಲಾಗಿರುವ ಪ್ರಕರಣದ ಮಾಹಿತಿ ಪಡೆದ ಸಿಎಂ ಎಚ್ಡಿಕೆ; ಅಧಿಕಾರಿಗಳೊಂದಿಗೆ ಚರ್ಚೆ        ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪದ ಬಗ್ಗೆ ಸಿಎಂ ಜತೆ ಚರ್ಚೆಯನ್ನೇ ನಡೆಸಿಲ್ಲ ಎಂದ ಸತೀಶ್​ ಜಾರಿಕಿಹೊಳಿ        ಜೆಡಿಎಸ್​ ಸೇರುವಂತೆ ಆಳಂದ ಬಿಜೆಪಿ ಶಾಸಕ ಸುಭಾಷ್​ ಗುತ್ತೇದಾರ್​ಗೆ ಎಚ್​ಡಿಕೆ ಆಹ್ವಾನ       
Breaking News

ಹಿಗ್ಗಿದ ಕೈ, ಬಾಗಿದ ಕಮಲ

Thursday, 14.06.2018, 3:05 AM       No Comments

ಬೆಂಗಳೂರು: ವಿಧಾನಸಭೆ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ರಚನೆಗೊಂಡು 20 ದಿನ ಕಳೆಯುವ ಮೊದಲೇ ವಿಧಾನ ಪರಿಷತ್​ನ ಆರು ಕ್ಷೇತ್ರ ಹಾಗೂ ಜಯನಗರ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪಕ್ಷಗಳ ಬಲಾಬಲಗಳಲ್ಲಿ ಏರುಪೇರಾಗಿದೆ. ಒಟ್ಟಾರೆ ವಿಧಾನಸಭೆ ಜತೆಯಲ್ಲಿ ಪರಿಷತ್​ನಲ್ಲೂ ಕಾಂಗ್ರೆಸ್ ಬಲ ಹೆಚ್ಚಿಸಿಕೊಂಡರೆ, ಬಿಜೆಪಿ ಪರಿಷತ್​ನ ಒಂದು ಸ್ಥಾನ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡಿದೆ. ಮೇಲ್ಮನೆಯ 2 ಸ್ಥಾನ ಉಳಿಸಿಕೊಳ್ಳು ವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.

ವಿಧಾನಪರಿಷತ್ ವಾರ್

ವಿಧಾನಪರಿಷತ್​ನ ಶಿಕ್ಷಕ, ಪದವೀಧರ (ಆರು) ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಕಡೆ ಬಿಜೆಪಿ, ಎರಡು ಜೆಡಿಎಸ್ ಮತ್ತು ಒಂದೆಡೆ ಕಾಂಗ್ರೆಸ್ ಗೆಲುವಿನ ನಗೆ ಬೀರಿವೆ. ಈ ಆರು ಕ್ಷೇತ್ರಗಳಲ್ಲಿ 4 ಬಿಜೆಪಿ ಹಿಡಿತದಲ್ಲಿದ್ದರೆ, ಎರಡು ಜೆಡಿಎಸ್ ವಶದಲ್ಲಿತ್ತು. ಬಿಜೆಪಿ 1 ಸ್ಥಾನ ಕಳೆದುಕೊಂಡಿದೆ.

ಮುಂದಿದೆ ಚುನಾವಣೆ ಸರಣಿ

ವಿಧಾನಸಭೆ ಚುನಾವಣೆ ಬಳಿಕ ಇತರ ಚುನಾವಣಾ ಸರಣಿ ಇನ್ನೂ ಮುಂದುವರಿಯಲಿದೆ. ವಿಧಾನಸಭೆಯ ಶಾಸಕರ ಬಲದ ಆಧಾರದಲ್ಲಿ ವಿಧಾನಪರಿಷತ್​ಗೆ ಆಯ್ಕೆಯಾಗಿದ್ದ ಕೆ.ಎಸ್.ಈಶ್ವರಪ್ಪ, ಡಾ.ಜಿ.ಪರಮೇಶ್ವರ್ ಮತ್ತು ವಿ.ಸೋಮಣ್ಣ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಚುನಾಯಿತರಾಗಿದ್ದಾರೆ. ಈ ಪೈಕಿ ಈಶ್ವರಪ್ಪ ಹಾಗೂ ಪರಮೇಶ್ವರ್ ಅವಧಿ 2020ರ ಜೂನ್​ವರೆಗೆ ಹಾಗೂ ಸೋಮಣ್ಣ ಅವಧಿ 2022ರ ಜುಲೈ ತನಕ ಇದೆ. ಇದೀಗ ಈ 3 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ.

ಹಾಗೆಯೇ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ವಿಧಾನಸಭೆಗೆ ಆಯ್ಕೆಯಾಗಿದ್ದು, ಅವರ ಪರಿಷತ್ ಸದಸ್ಯತ್ವ ಅವಧಿ 2022ರ ಜನವರಿವರೆಗೆ ಇದೆ. ಹೀಗಾಗಿ ಈ ಕ್ಷೇತ್ರಕ್ಕೂ ಚುನಾವಣೆ ನಡೆಯಬೇಕಾಗುತ್ತದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಎಂ.ಡಿ.ಲಕ್ಷ್ಮೀನಾರಾಯಣ ಪರಿಷತ್ (ನಾಮ ನಿರ್ದೇಶನ) ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಜತೆಗೆ ಇನ್ನೆರಡು ನಾಮನಿರ್ದೇಶನಗೊಂಡ ಸದಸ್ಯರ ಅವಧಿ ಆಗಸ್ಟ್ ಎರಡನೇ ವಾರದಲ್ಲಿ ಕೊನೆಗೊಳ್ಳಲಿದೆ. ಒಟ್ಟಾರೆ ಮೂರು ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡಬೇಕಾಗುತ್ತದೆ.

ಎರಡು ಉಪ ಚುನಾವಣೆ: ರಾಮನಗರ ಹಾಗೂ ಜಮಖಂಡಿ ವಿಧಾನಸಭೆ ಕ್ಷೇತ್ರಕ್ಕೆ ಇನ್ನೈದು ತಿಂಗಳೊಳಗೆ ಚುನಾವಣೆ ನಡೆಯಬೇಕಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಎರಡು ಕ್ಷೇತ್ರದಲ್ಲಿ ಕಣಕ್ಕಿಳಿದು, ಎರಡರಲ್ಲೂ ಗೆದ್ದಿದ್ದರು. ಅವರು ಚನ್ನಪಟ್ಟಣ ಕ್ಷೇತ್ರದ ಪ್ರತಿನಿಧಿತ್ವ ಉಳಿಸಿಕೊಂಡ ಪರಿಣಾಮ ರಾಮನಗರ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದೆ. ಜಮಖಂಡಿ ಕ್ಷೇತ್ರದ ಶಾಸಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ಮೃತರಾದ ಹಿನ್ನೆಲೆ ಆ ಕ್ಷೇತ್ರಕ್ಕೂ ಚುನಾವಣೆ ನಡೆಯಬೇಕಿದೆ.

ಜಯನಗರ ಕೈವಶ

ಬೆಂಗಳೂರಿನ ಜಯನಗರ ವಿಧಾನಸಭೆ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಬಿಜೆಪಿಯ ಎದುರಾಳಿ ಪ್ರಹ್ಲಾದ್ ವಿರುದ್ಧ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 79ಕ್ಕೆ ಏರಿಕೆಯಾದರೆ ಬಿಜೆಪಿ 104 ಸ್ಥಾನಕ್ಕೆ ಸೀಮಿತಗೊಂಡಿದೆ. ಶಾಸಕ ವಿಜಯ್ಕುಮಾರ್ ನಿಧನದಿಂದ ಈ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿತ್ತು.

ಲೋಕಸಭೆಯ 3 ಸ್ಥಾನಕ್ಕೆ ಉಪ ಚುನಾವಣೆ ಬಾಕಿ

ಲೋಕಸಭೆ ಸದಸ್ಯರಾಗಿದ್ದ ಬಿ.ಎಸ್. ಯಡಿಯೂರಪ್ಪ (ಶಿವಮೊಗ್ಗ), ಬಿ. ಶ್ರೀರಾಮುಲು (ಬಳ್ಳಾರಿ) ಹಾಗೂ ಸಿ.ಎಸ್. ಪುಟ್ಟರಾಜು (ಮಂಡ್ಯ) ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆಯಬೇಕಾಗಿದೆ.


ಬಿಜೆಪಿಗೆ ಮೈನಸ್ ಕಾಂಗ್ರೆಸ್​ಗೆ ಪ್ಲಸ್

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ನಂತರ ಚುನಾವಣೆಗಳನ್ನು ಬಿಜೆಪಿ ಪ್ರತಿಷ್ಠೆಯಾಗಿ ಸ್ವೀಕರಿಸಿದರೂ, ಪದವೀಧರ ಹಾಗೂ ಶಿಕ್ಷಕರ ಆರು ಕ್ಷೇತ್ರಗಳಲ್ಲಿ ಒಂದು ಸ್ಥಾನ ಕಳೆದುಕೊಂಡಿದೆ. ಈ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ 3, ಜೆಡಿಎಸ್ 2 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.

ಆರರಲ್ಲಿ 4 ಸ್ಥಾನ ಹಿಡಿತದಲ್ಲಿಟ್ಟುಕೊಂಡಿದ್ದ ಬಿಜೆಪಿ, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಆಘಾತ ಅನುಭವಿಸಿದೆ. ಬಿಜೆಪಿ ಭದ್ರಕೋಟೆ ಎನ್ನಲಾಗಿದ್ದ ಈ ಕ್ಷೇತ್ರ ಈಗ ಕಾಂಗ್ರೆಸ್ ಪಾಲಾಗಿದ್ದು, ಚಂದ್ರಶೇಖರ ಪಾಟೀಲ್ ಗೆಲುವು ಸಾಧಿಸಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಗಣೇಶ್ ಕಾರ್ಣಿಕ್ ಸೋಲು ಕಂಡಿರುವುದು ಬಿಜೆಪಿಗೆ ಮರ್ವಘಾತ ನೀಡಿದಂತಾಗಿದೆ. ಆದರೆ, ಜೆಡಿಎಸ್ ಹಿಡಿತದಲ್ಲಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಕಿತ್ತುಕೊಂಡಿದ್ದಾರೆ. ಈ ಹಿಂದೆ ಇದೇ ಕ್ಷೇತ್ರ ಪ್ರತಿನಿಧಿಸುತ್ತಿದ್ದ ನಾರಾಯಣಸ್ವಾಮಿ ಹೆಬ್ಬಾಳ ವಿಧಾನಸಭೆ ಉಪ ಚುನಾವಣೆ ಯಲ್ಲಿ ಸ್ಪರ್ಧಿಸಿದ ಕಾರಣ ರಾಜೀನಾಮೆ ನೀಡಿದ್ದರು. ಆಗ ಜೆಡಿಎಸ್ ಗೆದ್ದುಕೊಂಡಿತ್ತು.

ಬೆಂಗಳೂರು ಪದವೀಧರ (ಅ.ದೇವೇಗೌಡ), ನೈಋತ್ಯ ಪದವೀಧರ (ಆಯನೂರು ಮಂಜುನಾಥ್), ಆಗ್ನೇಯ ಶಿಕ್ಷಕ (ವೈ.ಎ.ನಾರಾಯಣಸ್ವಾಮಿ) ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ದಕ್ಷಿಣ ಶಿಕ್ಷಕರ (ಮರಿತಿಬ್ಬೇಗೌಡ) ಮತ್ತು ನೈಋತ್ಯ ಶಿಕ್ಷಕರ (ಎಸ್.ಎಲ್.ಬೋಜೇಗೌಡ) ಕ್ಷೇತ್ರಗಳಲ್ಲಿ ಜೆಡಿಎಸ್, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ (ಚಂದ್ರಶೇಖರ ಪಾಟೀಲ್) ವಿಜಯಶಾಲಿಯಾಗಿದ್ದಾರೆ. ಇಲ್ಲಿ ಈಶಾನ್ಯ ಪದವೀಧರ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡರೆ, ಕಾಂಗ್ರೆಸ್ ಗಳಿಸಿಕೊಂಡಿದೆ.

ಕೈ ತೆಕ್ಕೆಗೆ ಈಶಾನ್ಯ ಪದವೀಧರ: ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ ಈಶಾನ್ಯ ಪದವೀಧರ ಕ್ಷೇತ್ರ ಕಾಂಗ್ರೆಸ್ ವಶವಾಗಿದೆ. ಮೊದಲ ಸುತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್, ಎರಡನೇ ಪ್ರಾಶಸ್ಱದ ಮತ ಎಣಿಕೆಯ ಅಂತಿಮ ಸುತ್ತಿನಲ್ಲಿ 321 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚಂದ್ರಶೇಖರ ಪಾಟೀಲ್ 18,768, ಬಿಜೆಪಿಯ ಕೆ.ಬಿ. ಶ್ರೀನಿವಾಸ್ 18,447 ಮತಗಳನ್ನು ಪಡೆದರು.

ಬೆಂಗಳೂರು ಗೆದ್ದ ಬಿಜೆಪಿ

ಬೆಂಗಳೂರು ಪದವೀಧರ ಕ್ಷೇತ್ರ ಈ ಬಾರಿಯೂ ಬಿಜೆಪಿ ಪಾಲಾಗಿದೆ. ಬೆಂಗಳೂರು ನಗರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಒಳಗೊಂಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ 3,702 ಮತಗಳ ಅಂತರದಿಂದ ಕಾಂಗ್ರೆಸ್​ನ ರಾಮೋಜಿ ಗೌಡ ಅವರನ್ನು ಪರಾಭವಗೊಳಿಸಿದ್ದಾರೆ. ಈ ಹಿಂದೆ ಈ ಕ್ಷೇತ್ರವನ್ನು ಬಿಜೆಪಿಯ ರಾಮಚಂದ್ರಗೌಡ ಪ್ರತಿನಿಧಿಸುತ್ತಿದ್ದರು.


ಮೇಲ್ಮನೆಗೇರಿದ ಚಂಪಾ!

ಈಶಾನ್ಯ ಪದವೀಧರ ಕ್ಷೇತ್ರದಿಂದ ಗೆದ್ದಿರುವ 48ರ ಹರೆಯದ ಡಾ.ಚಂದ್ರಶೇಖರ ಪಾಟೀಲ್ ಎಂಬಿಬಿಎಸ್ ಪದವೀಧರ. ಬೀದರ್ ಜಿಲ್ಲೆ ಹುಮನಾಬಾದ್​ನ ಇವರು, ಮಾಜಿ ಸಚಿವ ದಿ.ಬಸವರಾಜ ಪಾಟೀಲ್ ಪುತ್ರ. ಹಾಲಿ ಗಣಿ, ಭೂ ವಿಜ್ಞಾನ ಮತ್ತು ಮುಜರಾಯಿ ಸಚಿವರಾದ ರಾಜಶೇಖರ ಪಾಟೀಲ್ ಕಿರಿಯ ಸಹೋದರ. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಹೈದರಾಬಾದ್ ಕರ್ನಾಟಕ ಎಜುಕೇಷನ್ ಟ್ರಸ್ಟ್, ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಗಳಡಿ ಆಯುರ್ವೆದ, ದಂತ ವೈದ್ಯ ಸೇರಿ ಹತ್ತಾರು ಶಾಲಾ-ಕಾಲೇಜು ನಡೆಸುತ್ತಿದ್ದಾರೆ. ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿ, ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಮೇಲ್ಮನೆ ಪ್ರವೇಶಿಸಿರುವುದು ವಿಶೇಷ.


ತಿಂಗಳಲ್ಲಿ ಸೋತು ಗೆದ್ದ ವೈಎಎನ್

ಶ್ರೀನಿವಾಸಪುರ ತಾಲೂಕು ಯಾಚನಾಹಳ್ಳಿಯ ವೈ.ಎ.ನಾರಾಯಣಸ್ವಾಮಿ ಇಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ ಹಾಗೂ ಡಾಕ್ಟರೇಟ್ ಪದವಿ ಪಡೆದವರು. 2 ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿದ್ದರು. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು, ರಾಜೀನಾಮೆ ನೀಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡು, ಮತ್ತೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.

ದಳ ತೊರೆದು ಗೆದ್ದರು

ಬೆಂಗಳೂರಿನ ಅ.ದೇವೇಗೌಡ ಸ್ನಾತಕೋತ್ತರ ಪದವೀಧರ (ಎಂಎ). ಮೂರು ಬಾರಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾಗಿದ್ದರು. ಎರಡು ಬಾರಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ಪರ್ಧಿಸಿ ವಿಜಯಶಾಲಿ ಆಗಿದ್ದಾರೆ.


ಆಗ ಸೋಲು ಈಗ ಗೆಲುವು

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆದ್ದ ಬಿ.ಎಲ್. ಬೋಜೇಗೌಡ ಕಡೂರು ತಾಲೂಕು ಸಖರಾಯಪಟ್ಟಣದಲ್ಲಿ 1957ರ ಜು.20ರಂದು ಜನಿಸಿದರು. ಬೆಂಗಳೂರು ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ. ನಗರಸಭೆ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ, ರಾಜ್ಯ ಹಾಗೂ ರಾಷ್ಟ್ರ ಬಾರ್ ಕೌನ್ಸಿಲ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 2008 ಮತ್ತು 2013ರಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ, 2012ರಲ್ಲಿ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಲೋಕಸಭಾ ಉಪಚುನಾವಣೆ (2012)ಯಲ್ಲಿ ಪರಾಭವಗೊಂಡಿದ್ದರು.

ವಿಧಾನಪರಿಷತ್​ಗೆ ಸಹೋದರರ ಪ್ರವೇಶ

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್​ನ ಎಸ್.ಎಲ್.ಬೋಜೇಗೌಡ ಗೆಲುವು ಸಾಧಿಸುವ ಮೂಲಕ ಸಹೋದರರಿಬ್ಬರು ಒಂದೇ ತಿಂಗಳ ಅವಧಿಯಲ್ಲಿ ವಿಧಾನಪರಿಷತ್ ಪ್ರವೇಶಿಸಿದಂತಾಗಿದೆ. ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಧಮೇಗೌಡ ಅವಿರೋಧ ಆಯ್ಕೆಯಾಗಿದ್ದರು. ವಿಧಾನಪರಿಷತ್ ಇತಿಹಾಸದಲ್ಲಿ ಹೀಗೆ ಸಹೋದರರು ಒಟ್ಟಿಗೆ ಒಂದೇ ಅವಧಿಯಲ್ಲಿ ಚುನಾಯಿತರಾಗಿರುವುದು ಇದೇ ಮೊದಲು. ಇಬ್ಬರೂ ಮಾಜಿ ಶಾಸಕ ಎಸ್.ಆರ್.ಲಕ್ಷ್ಮಯ್ಯ ಪುತ್ರರು.


ನಾಲ್ಕೂ ಸದನಗಳ ಪ್ರತಿನಿಧಿ

ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜಯಿಸುವ ಮೂಲಕ ಕೇಂದ್ರ ಮತ್ತು ರಾಜ್ಯದ ನಾಲ್ಕೂ ಸದನಗಳಿಗೆ ಪ್ರವೇಶ ಪಡೆದ ಕೀರ್ತಿಗೆ ಆಯನೂರು ಮಂಜುನಾಥ್ ಪಾತ್ರರಾಗಿದ್ದಾರೆ. 1994ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ, 1998ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. 2010ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 1996, 1999, 2004ರ ಎಂಪಿ ಹಾಗೂ 2005ರ ಲೋಕಸಭೆ ಉಪಚುನಾವಣೆಯಲ್ಲಿ ಸೋತಿದ್ದರು.


ಸೋಲಿಲ್ಲದ ಸರದಾರ

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಸತತ 4 ಬಾರಿ ಗೆಲುವಿನ ನಗೆ ಬೀರಿದ ಮರಿತಿಬ್ಬೇಗೌಡ ಸೋಲಿಲ್ಲದ ಸರದಾರ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಚೆ ದೊಡ್ಡಿಯಲ್ಲಿ 1959ರ ಜು.1ರಂದು ಜನನ. ಸ್ನಾತಕೋತ್ತರ ಪದವೀಧರರಾದ ಇವರು, ಮಳವಳ್ಳಿ ಪಿಕಾರ್ಡ್ ಬ್ಯಾಂಕ್​ಗೆ ನಿರಂತರ 12 ವರ್ಷ ಅಧ್ಯಕ್ಷರಾಗಿದ್ದವರು. ಪರಿಷತ್ ಹಾಲಿ ಉಪ ಸಭಾಪತಿಯಾಗಿದ್ದಾರೆ.


ಜಯದ ಹೊಸ್ತಿಲಲ್ಲಿ ಎಡವಿದ ಬಿಜೆಪಿ

ಬೆಂಗಳೂರು: ಸಂಘಟನೆಯ ಬಲ, ಅನುಕಂಪ ಎಲ್ಲವೂ ಇದ್ದು ಜಯನಗರ ವಿಧಾನಸಭೆ ಚುನಾವಣೆಯನ್ನು ಸೋಲುವ ಮೂಲಕ ರಾಜ್ಯ ಬಿಜೆಪಿಯಲ್ಲಿರುವ ಒಡಕಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

2008ಕ್ಕೂ ಮೊದಲು 4 ಬಾರಿ ಜಯನಗರ ಕ್ಷೇತ್ರವನ್ನು ಕಾಂಗ್ರೆಸ್​ನ ರಾಮಲಿಂಗಾ ರೆಡ್ಡಿ ಪ್ರತಿನಿಧಿಸಿದ್ದರು. 2008ರಲ್ಲಿ ಪಕ್ಕದ ಬಿಟಿಎಂ ಲೇಔಟ್​ಗೆ ಸ್ಥಳಾಂತರವಾದರು. ರೆಡ್ಡಿ ವಿರುದ್ಧ ಸೆಣೆಸಿ ಸೋತಿದ್ದ ಬಿಜೆಪಿಯ ಬಿ.ಎನ್.ವಿಜಯಕುಮಾರ್, 2008ರಲ್ಲಿ ಕ್ಷೇತ್ರದಲ್ಲಿ ಪಕ್ಷದ ಧ್ವಜ ನೆಟ್ಟರು. 2013ರಲ್ಲೂ ಗೆದ್ದರು.

ವಿಜಯಕುಮಾರ್ ನಿಧನರಾಗಿ, ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾದರೂ ಅಭ್ಯರ್ಥಿ ಕುರಿತು ಬಿಜೆಪಿಯಲ್ಲಿ ಸ್ಪಷ್ಟತೆ ಮೂಡಲಿಲ್ಲ. ಕಾಂಗ್ರೆಸ್​ನ ಸೌಮ್ಯಾ ರೆಡ್ಡಿ ಎಡಬಿಡದೆ ಪ್ರಚಾರ ಮುಂದುವರಿಸಿದ್ದರು. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಯಾಗದ ಕಾರಣ ಸ್ಥಳೀಯ ಕಾರ್ಪೆರೇಟರ್​ಗಳೇ ಅಭ್ಯರ್ಥಿಯಾಗಲು ಬಯಸಿದರು. ಇದೇ ಅವಕಾಶ ಬಳಸಿಕೊಂಡ ಕಾಂಗ್ರೆಸ್, ಬಿಜೆಪಿ ಕಾರ್ಪೆರೇಟರ್ ನಾಗರಾಜ್ ಅವರನ್ನು ತನ್ನತ್ತ ಸೆಳೆಯಿತು. ಬಿಜೆಪಿ ನಾಯಕರು ಕಣಕ್ಕಿಳಿಯುವ ವೇಳೆಗೆ ಕಾಲ ಮೀರಿತ್ತು. ಮೈತ್ರಿ ಸರ್ಕಾರದ ಲಾಭವನ್ನೂ ಬಳಸಿಕೊಂಡ ರಾಮಲಿಂಗಾ ರೆಡ್ಡಿ, ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವಂತೆ ಒಪ್ಪಿಸಲು ಯಶಸ್ವಿಯಾದರು. ಪ್ರಾರಂಭದ ಎಡವಟ್ಟನ್ನು ಸರಿಪಡಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಲೇ ಇಲ್ಲ.

ಅಡ್ಜಸ್ಟ್​ಮೆಂಟ್ ಚರ್ಚೆ ಆರಂಭ

ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಜಯನಗರ ಕ್ಷೇತ್ರ ಕಳೆದುಕೊಳ್ಳಲು ಬೆಂಗಳೂರಿನಲ್ಲಿ ನಡೆಯುತ್ತಿರುವ ಅಡ್ಜಸ್ಟ್ ಮೆಂಟ್ ರಾಜಕಾರಣ ಕಾರಣ ಎಂಬ ಚರ್ಚೆಗೆ ಫಲಿತಾಂಶ ನಾಂದಿ ಹಾಡಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಉನ್ನತ ನಾಯಕರ ನಡುವೆ ಬಾಂಧವ್ಯ ಇದೆ. ಇದೇ ರೀತಿ ಮುಂದುವರಿದರೆ, ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂಬ ಚರ್ಚೆಗಳು ಪಕ್ಷದ ವಲಯ ಹಾಗೂ ಜಾಲತಾಣಗಳಲ್ಲಿ ಜೋರಾಗಿದೆ. ಕೈನಲ್ಲಿದ್ದ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಕ್ಕೆ ಕೇಂದ್ರ ಸಚಿವ ಅನಂತಕುಮಾರ್​ಗೂ ರಾಜ್ಯ ರಾಜಕಾರಣದ ಮಟ್ಟಿಗೆ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಗೆಲುವು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಗೆಲುವಲ್ಲ. ಇದು ಕಾಂಗ್ರೆಸ್ ಗೆಲುವು. ನಮ್ಮ ಅಭ್ಯರ್ಥಿ ಸೌಮ್ಯಾ ರೆಡ್ಡಿ ಉತ್ತಮ ಕೆಲಸ ಮಾಡಿದ್ದರು. ಅದರ ಪರಿಣಾಮವಾಗಿ ಗೆದ್ದಿದ್ದಾರೆ.

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

 

ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿರೀಕ್ಷಿತ ಫಲಿತಾಂಶ. ಜನರ ಜತೆಗಿನ ಅವರ ಒಡನಾಟ ಗೆಲುವಿಗೆ ಕಾರಣ.

| ಕುಮಾರಸ್ವಾಮಿ ಮುಖ್ಯಮಂತ್ರಿ

Leave a Reply

Your email address will not be published. Required fields are marked *

Back To Top