Thursday, 21st June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ದೇಶದ ಘನತೆ, ಸಾರ್ವಭೌಮತೆಯ ಪ್ರತೀಕ

Wednesday, 12.07.2017, 3:00 AM       No Comments

‘ನಾವು ಗದ್ದಲದ ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ. ಆದರೂ, ನಮಗೆ ಹೆಚ್ಚೆಚ್ಚು ಪ್ರಜಾಪ್ರಭುತ್ವಗಳ ಅಗತ್ಯವಿದೆ’. -ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಭಾರತವನ್ನು ‘ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯ‘ ಎಂಬ ಘೋಷಣೆಯಲ್ಲಿ ಎರಡು ಅರ್ಥಗಳಿವೆ. ಮೊದಲನೆಯದು, ರಾಷ್ಟ್ರದ ಮುಖ್ಯಸ್ಥನ ಸ್ಥಾನದಿಂದ ಬ್ರಿಟಿಷ್ ರಾಣಿ ಬದಲಿಗೆ ಹೊಸ ವ್ಯವಸ್ಥೆಯ ಸಂಕೇತ. ಮತ್ತು ಎರಡನೇಯದಾಗಿ, ಭಾರತವನ್ನು ‘ಗಣರಾಜ್ಯ‘ ಎಂಬುದಾಗಿ ಘೋಷಿಸಿದ್ದರ ಪರಿಣಾಮವಾಗಿ, ಈ ಹೊಸ ಸಂಕೇತವು ತನ್ನ ಅಧಿಕಾರವನ್ನು ಜನರಿಂದ ಪಡೆಯುವುದು. ‘ಗಣರಾಜ್ಯ‘ ಪದದ ಅರ್ಥ-ದೇಶದ ಪರಮೋಚ್ಚ ಅಧಿಕಾರ ಜನರ ಬಳಿಯಿರುತ್ತದೆ; ಜನರು ಈ ಅಧಿಕಾರವನ್ನು ಚುನಾಯಿತ ಪ್ರತಿನಿಧಿಗಳಿಗೆ ವರ್ಗಾಯಿಸುತ್ತಾರೆ; ಮತ್ತು ದೇಶವು ಚುನಾಯಿತ ಅಥವಾ ನಾಮಕರಣಗೊಂಡ ರಾಷ್ಟ್ರಪತಿಯನ್ನು ಹೊಂದಿರುತ್ತದೆಯೇ ವಿನಾ ಚಕ್ರವರ್ತಿಯನ್ನಲ್ಲ.

ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತದ ಜನತೆಗೆ ಸಾರ್ವಭೌಮತ್ವ ಮತ್ತು ಅಧಿಕಾರ ಹಸ್ತಾಂತರದೊಂದಿಗೆ, ಭಾರತದ ಸಂವಿಧಾನವು, ಇತರ ವಿಷಯಗಳೊಂದಿಗೆ, ಸಂಸತ್​ನ ಮೂಲಕ ಶಾಸನಬದ್ಧ ಅಧಿಕಾರವನ್ನು ಚಲಾಯಿಸಲು ಮತ್ತು ರಾಷ್ಟ್ರಪತಿ ಮೂಲಕ ಕಾರ್ಯಕಾರಿ ಅಧಿಕಾರವನ್ನು ಚಲಾಯಿಸಲು ಅವಕಾಶ ಕಲ್ಪಿಸಿದೆ.

ನಮ್ಮ ಸಂವಿಧಾನದ 52ನೇ ಅನುಚ್ಛೇದದಲ್ಲಿ, ಭಾರತದಲ್ಲಿ ರಾಷ್ಟ್ರಪತಿ ಇರಬೇಕು ಮತ್ತು 53ನೇ ಅನುಚ್ಛೇದದಲ್ಲಿ ಒಕ್ಕೂಟದ ಕಾರ್ಯಕಾರಿ ಅಧಿಕಾರವು ರಾಷ್ಟ್ರಪತಿ ಬಳಿ ಇರಬೇಕು ಮತ್ತು ಅವರಿಂದ ನೇರವಾಗಿ ಇಲ್ಲವೇ ಅಧೀನ ಅಧಿಕಾರಿಗಳ ಮೂಲಕ ‘ಸಂವಿಧಾನಕ್ಕೆ ಅನುಗುಣವಾಗಿ’ ಚಲಾಯಿಸಲ್ಪಡಬೇಕು ಎಂದು ವಿವರಿಸಲಾಗಿದೆ. 74ನೇ ಅನುಚ್ಛೇದವು ರಾಷ್ಟ್ರಪತಿಗೆ ನೆರವಾಗಲು ಮತ್ತು ಸಲಹೆ ನೀಡಲು ಪ್ರಧಾನಮಂತ್ರಿಯು ಮುಖ್ಯಸ್ಥನಾಗಿರುವ ಸಚಿವ ಸಂಪುಟ ಇರಬೇಕು ಎಂದು ಹೇಳಿದೆ.

ನಮ್ಮ ರಾಷ್ಟ್ರದ ಗಣರಾಜ್ಯ ಸ್ವರೂಪವನ್ನು ನಿರ್ವಹಿಸಲು, ಸಂವಿಧಾನ ನಿರ್ವತೃಗಳು ನಿರ್ದಿಷ್ಟ ಕಾರ್ಯವಿಧಾನ ಹೇಳಿದ್ದಾರೆ. ಆ ಪ್ರಕಾರ, ಅನುಚ್ಛೇದ 54 ಮತ್ತು ಅನುಚ್ಛೇದ 55ರ ಪ್ರಕಾರ, ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು, ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡ ಚುನಾಯಕರ ಸಮೂಹವು ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡಬೇಕು. ಎಲ್ಲ ರಾಜ್ಯಗಳಲ್ಲೂ ದ್ವಿಸದನ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ರಾಜ್ಯ ವಿಧಾನ ಪರಿಷತ್ತುಗಳ ಸದಸ್ಯರನ್ನು ಈ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ರಾಷ್ಟ್ರಪತಿ ಚುನಾವಣೆ ಪ್ರಮಾಣಾನುಗುಣ ಪ್ರಾತಿನಿಧ್ಯ ವ್ಯವಸ್ಥೆಗೆ ಅನುಗುಣವಾಗಿ ನಡೆಯುತ್ತದೆ.

ಪ್ರಮಾಣಾನುಸಾರ ಪ್ರಾತಿನಿಧ್ಯ ಎಂದರೆ, ಮತದಾರರ ಸಮುದಾಯದ ಒಬ್ಬ ಸದಸ್ಯನ ಮತದ ಸಂಖ್ಯೆ ಆತ ಪ್ರತಿನಿಧಿಸುವ ರಾಜ್ಯದ ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ. ಇಂತಹ ಲೆಕ್ಕಾಚಾರಕ್ಕಾಗಿ ಸಂವಿಧಾನದ 55ನೇ ಅನುಚ್ಛೇದದಲ್ಲಿ ತಿಳಿಸಿರುವಂತೆ, 1971ರ ಜನಗಣತಿಗೆ ಅನುಗುಣವಾಗಿ ರಾಜ್ಯಗಳ ಜನಸಂಖ್ಯೆಯನ್ನು ತಾಳೆ ನೋಡಲಾಗಿದ್ದು, ಈ ಮಾನದಂಡವು ಕನಿಷ್ಠ 2031ರ ಜನಗಣತಿಯವರೆಗೂ ಮುಂದುವರಿಯುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಹೀಗಾಗಿ ರಾಜ್ಯವಾರು ಜನಸಂಖ್ಯೆಯಲ್ಲಿನ ವ್ಯತ್ಯಾಸವು ವಿವಿಧ ರಾಜ್ಯಗಳ ಶಾಸಕರು ಹೊಂದಿರುವ ಮತಗಳ ಮೌಲ್ಯದಲ್ಲಿ ಪ್ರತಿಫಲಿಸುತ್ತದೆ.

ಸಂಸತ್ ಸದಸ್ಯರ ಮತಗಳ ಲೆಕ್ಕಾಚಾರ ಹೀಗೆ ನಡೆಯುತ್ತದೆ. ಶಾಸಕರು ಹೊಂದಿರುವ ಒಟ್ಟು ಮತಗಳ ಮೌಲ್ಯವನ್ನು ಆ ರಾಜ್ಯದ ಸಂಸತ್ ಸದಸ್ಯರ ಒಟ್ಟು ಸಂಖ್ಯೆಯಿಂದ ಭಾಗಿಸಿ ಒಬ್ಬ ಸಂಸದನ ಮತ ಮೌಲ್ಯ ನಿರ್ಧರಿಸಲಾಗುತ್ತದೆ. ಹೀಗಾಗಿ ಶಾಸಕರು ಹೊಂದಿರುವ ಮತಗಳು ಸಂಸದರ ಮತ ಮೌಲ್ಯಕ್ಕಿಂತ ಭಿನ್ನವಾಗಿರುತ್ತದೆ.

ಹಾಗಾದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಈ ಸಂಕೀರ್ಣತೆಯನ್ನು ಇರಿಸಿರುವ ಉದ್ದೇಶವೇನು? ರಾಷ್ಟ್ರಪತಿಯು ಏಕಕಾಲಕ್ಕೆ ಭಾರತ ಒಕ್ಕೂಟ ಮತ್ತು ರಾಷ್ಟ್ರೀಯ ಅಧಿಕಾರಿಯಾಗಿರುತ್ತಾರೆ ಎಂಬುದನ್ನು ಖಚಿತಪಡಿಸುವುದು ಇದರ ಉದ್ದೇಶ. ರಾಷ್ಟ್ರಪತಿ ಕೇಂದ್ರದ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳಿಗೆ ಸ್ವೀಕಾರಾರ್ಹರಾಗಿರಬೇಕು, ಈ ಎರಡೂ ಸದನಗಳ ವಿಶ್ವಾಸಕ್ಕೆ ಪಾತ್ರರಾಗಿರಬೇಕು. ಇನ್ನೂ ಮುಖ್ಯವಾದ ಒಂದು ಉದ್ದೇಶವಿದೆ. ಅದೆಂದರೆ, ಆಯಾ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ, ರಾಷ್ಟ್ರಪತಿಯು ದೇಶದ ಎಲ್ಲ ರಾಜ್ಯಗಳನ್ನು ಒಳಗೊಂಡ ಒಕ್ಕೂಟದ ಏಕತೆಯ ಸಂಕೇತ ಎಂಬುದು ಇದರ ಅರ್ಥ.

ಸಂವಿಧಾನದ ಪ್ರಕಾರ ರಾಷ್ಟ್ರಪತಿಯ ಸ್ಥಾನಮಾನವೇನು ಎಂಬುದನ್ನು 2013ರಲ್ಲಿ ಸ್ಟೇಟ್ ಆಫ್ ಗುಜರಾತ್ ವರ್ಸಸ್ ಜಸ್ಟೀಸ್ ಆರ್.ಎ. ಮೆಹ್ತಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ. ‘ಭಾರತದ ರಾಷ್ಟ್ರಪತಿಯು ವೈಭವೀಕರಿಸಲ್ಪಟ್ಟ ಅನಾಮಧೇಯನಲ್ಲ. ರಾಷ್ಟ್ರಪತಿಯು ರಾಷ್ಟ್ರದ ಸಾರ್ವಭೌಮತೆ, ಘನತೆ ಗೌರವಗಳನ್ನು ಪ್ರತಿನಿಧಿಸುತ್ತಾರೆ. ಅವರು ರಾಜಕೀಯದಿಂದ ಹೊರತಾದ ವ್ಯಕ್ತಿಯಾಗಿರುತ್ತಾರೆ. ಹೀಗಾಗಿ ಎಲ್ಲ ಪಕ್ಷಗಳ ಜತೆ ಮತ್ತು ವಿವಿಧ ಜನರೊಂದಿಗೆ ನಿಕಟ ಮತ್ತು ಸೌಹಾರ್ದಯುತ ಬಾಂಧವ್ಯವನ್ನು ಹೊಂದಿರುತ್ತಾರೆ. ಆಡಳಿತದ ಮೇಲೆ ಎಚ್ಚರಿಕೆಯ ಕಣ್ಗಾವಲಿಡುವ ತಮ್ಮ ಅಧಿಕಾರವನ್ನು ಅವರು ಸಮಾಲೋಚಿಸುವ, ಎಚ್ಚರಿಸುವ ಹಾಗೂ ಪ್ರೋತ್ಸಾಹಿಸುವ ಸಲುವಾಗಿ ಸದುಪಯೋಗಪಡಿಸಿಕೊಂಡಲ್ಲಿ ಮಾತ್ರ ಅವರ ಉಪಸ್ಥಿತಿಯು ಉತ್ತಮ ಆಡಳಿತಕ್ಕೆ ಕಾರಣವಾಗುತ್ತದೆ ’ಎಂದು ಸುಪ್ರೀಂಕೋರ್ಟ್ ವಿವರಿಸಿದೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಪಾತ್ರದ ಪ್ರಾಮುಖ್ಯವನ್ನು ಈ ಮಾತು ಕಟ್ಟಿಕೊಡುತ್ತದೆ ಎನ್ನಬಹುದು.

ಸಂಸದೀಯ ಮತ್ತು ರಾಷ್ಟ್ರಪತಿ ಆಳ್ವಿಕೆಯ ಮಿಶ್ರ ವ್ಯವಸ್ಥೆ: ಭಾರತದ ಮೇಲಿನ ಬ್ರಿಟಿಷ್ ಸಾರ್ವಭೌಮತ್ವವನ್ನು ಸಂಪೂರ್ಣವಾಗಿ ಕಿತ್ತು ಹಾಕಬೇಕಾದರೆ, ಭಾರತದ ಮೇಲಿನ ಬ್ರಿಟಿಷ್ ಸಂಸತ್ತಿನ ನಿಯಂತ್ರಣ ಕೂಡಾ ಕೊನೆಗೊಳ್ಳಬೇಕಾಗಿತ್ತು ಮತ್ತು ಆ ಸ್ಥಳದಲ್ಲಿ ಅಂತಹ ಅಧಿಕಾರ ಚಲಾಯಿಸುವಂತಹ ಹೊಸ ಸಂಸ್ಥೆಯನ್ನು ಸೃಷ್ಟಿಸಬೇಕಾಗಿತ್ತು. ಪರಿಣಾಮವಾಗಿ ಬ್ರಿಟಿಷ್ ಸಂಪುಟದ ಸಲಹೆಯ ಮೇರೆಗೆ, ಬ್ರಿಟಿಷ್ ರಾಣಿ ಮೂಲಕ ಮಾಡಲಾಗುತ್ತಿದ್ದ ಗವರ್ನರ್ ಜನರಲ್ ಆಫ್ ಇಂಡಿಯಾ ಕಚೇರಿ ನೇಮಕಾತಿ ವ್ಯವಸ್ಥೆಯೂ ಸಂಪೂರ್ಣ ಬದಲಾಗಬೇಕಾಗಿತ್ತು. ಇಲ್ಲೊಂದು ಕುತೂಹಲಕಾರಿ ಅಂಶದತ್ತ ನಿಮ್ಮ ಗಮನ ಸೆಳೆಯುತ್ತೇನೆ. ಭಾರತದ ಗವರ್ನರ್ ಜನರಲ್ ಹುದ್ದೆಯನ್ನು ಹೊಂದಿದ ಏಕೈಕ ಭಾರತೀಯನೆಂದರೆ ಚಕ್ರವರ್ತಿ ರಾಜಗೋಪಾಲಾಚಾರಿ. 1950ರ ಜನವರಿ 26ರಂದು ಈ ಹುದ್ದೆಯನ್ನು ರದ್ದುಪಡಿಸುವ ವೇಳೆಯಲ್ಲಿ ಅವರು ಈ ಪದವಿಯಲ್ಲಿದ್ದರು.

ಭಾರತವನ್ನು ಸಾರ್ವಭೌಮ ದೇಶವಾಗಿಸುವ ನಿಟ್ಟಿನಲ್ಲಿ ಬ್ರಿಟಿಷ್ ರಾಣಿ, ಬ್ರಿಟಿಷ್ ಸಂಸತ್ತು ಮತ್ತು ಭಾರತದ ಗವರ್ನರ್ ಜನರಲ್ ಸ್ಥಾನದಲ್ಲಿ ಭಾರತದ ರಾಷ್ಟ್ರಪತಿ ಹುದ್ದೆ, ಭಾರತೀಯ ಸಂಸತ್ತನ್ನು ಸೃಜಿಸಲಾಯಿತು. ಭಾರತವು ಸಾಮಾನ್ಯವಾಗಿ ಸಂಸದೀಯ ಪ್ರಜಾಪ್ರಭುತ್ವ ಎಂದೇ ಪರಿಚಿತವಾಗಿದೆ. ಹೀಗಿದ್ದರೂ ಸಂವಿಧಾನವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದರೆ, ಅದು ಮಿಶ್ರ(ಹೈಬ್ರಿಡ್) ಆಡಳಿತ ವ್ಯವಸ್ಥೆಯನ್ನು ಹೊಂದಿರುವುದು ಗಮನಕ್ಕೆ ಬರುತ್ತದೆ. ಅಂದರೆ, ಅದು ಸಂಸತ್ತು ಮತ್ತು ರಾಷ್ಟ್ರಪತಿ ಸ್ವರೂಪದ ಆಡಳಿತದ ಮಿಶ್ರಣ. ಈ ಮಿಶ್ರ ವ್ಯವಸ್ಥೆ ರಾಷ್ಟ್ರದ ಹಿತದೃಷ್ಟಿಯಿಂದ ಉತ್ತಮವಾಗಿರುವುದು ಈವರೆಗಿನ ಅನುಭವದಿಂದ ವೇದ್ಯವಾಗುತ್ತದೆ. ಈ ಕುರಿತ ಮತ್ತಷ್ಟು ವಿವರಗಳನ್ನು ಮುಂದಿನ ಕಂತಿನಲ್ಲಿ ನೋಡೋಣ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top