More

    ಇಂದು ಸಂವಿಧಾನ ದಿನ| ಸಾಂವಿಧಾನಿಕ ನೈತಿಕತೆಯ ಸಂಭ್ರಮದ ಕ್ಷಣ

    ಇಂದು ಸಂವಿಧಾನ ದಿನ| ಸಾಂವಿಧಾನಿಕ ನೈತಿಕತೆಯ ಸಂಭ್ರಮದ ಕ್ಷಣ

    ನಮ್ಮ ಸಂವಿಧಾನ ಹೊಂದಿರುವ ನೈತಿಕತೆ ಸಮಾಜ ಒಪ್ಪಿರುವ ನೈತಿಕತೆಗಿಂತ ಭಿನ್ನವಾಗಿದೆ. ಸಂವಿಧಾನದಲ್ಲಿ ಅಡಕವಾಗಿರುವ ಉದಾತ್ತ ತತ್ತ್ವಗಳಿಗೆ ಬದ್ಧವಾಗಿರುವುದೇ ಸಾಂವಿಧಾನಿಕ ನೈತಿಕತೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ಸಂವಿಧಾನವನ್ನು ವ್ಯಾಖ್ಯಾನಿಸುವ ತತ್ತ್ವವನ್ನೇ ಸಾಂವಿಧಾನಿಕ ನೈತಿಕತೆ ಎಂದೂ ಪರಿಗಣಿಸಬಹುದಾಗಿದೆ.

    ಯಾವುದು ಸರಿ-ಯಾವುದು ತಪು್ಪ, ಯಾವುದು ಒಳಿತು-ಯಾವುದು ಕೆಡುಕು ಎಂದು ಜನರಿಗೆ ಮಾರ್ಗದರ್ಶನ ಕೊಡುವ ಕೆಲವು ತತ್ತ್ವಗಳನ್ನು ಸಾಮಾನ್ಯವಾಗಿ ನೈತಿಕತೆ ಎಂದು ಕರೆಯುತ್ತಾರೆ. ಸಮಾಜದಲ್ಲಿ ವ್ಯಕ್ತಿಯ ನಡತೆಗೆ ಇರುವ ಮಾರ್ಗದರ್ಶಿ ಸೂತ್ರವನ್ನೇ ನೈತಿಕತೆ ಎಂದರೂ ನಡೆಯುತ್ತದೆ. ಈ ನೈತಿಕ ಮೌಲ್ಯಗಳು ನಿಂತ ನೀರಲ್ಲ; ಕಾಲ ಸರಿದಂತೆ ಅವೂ ಬದಲಾಗುತ್ತಿರುತ್ತವೆ. ನೈತಿಕವಾಗಿ ಇಂದು ಸರಿಯೆನಿಸಿದ್ದು ನಾಳೆಯೂ ಸರಿಯೆಂದು ಕಾಣಿಸದಿರಬಹುದು.

    ಒಂದು ಉದಾಹರಣೆ ಮೂಲಕ ಇದನ್ನು ವಿವೇಚಿಸೋಣ. ಮನುಷ್ಯನ ಕೊಲೆಯನ್ನು ಯಾವತ್ತೂ ನೈತಿಕವಾಗಿ ತಪು್ಪ ಎಂದೇ ಪರಿಗಣಿಸಲಾಗುತ್ತದೆ. ಆದರೆ, ನೈತಿಕವಾಗಿ ತಪ್ಪೆನಿಸುವ ಈ ಕೃತ್ಯಕ್ಕೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂಬುದನ್ನು ಸಮಾಜ ಹೇಗೆ ಪರಿಗಣಿಸುತ್ತದೆ ಎನ್ನುವುದನ್ನು ಗಮನಿಸಬೇಕು. ಮರಣದಂಡನೆಯನ್ನು ಇಂದು ಸಮಾಜ ಒಪ್ಪಿದರೂ ಮುಂದಿನ ದಿನಗಳಲ್ಲಿ ಅದನ್ನೊಂದು ಶಿಕ್ಷೆಯ ರೂಪವಾಗಿ ಪರಿಗಣಿಸದಿರಲೂಬಹುದು. ಯಾವುದೇ ಒಬ್ಬ ಮಾನವನನ್ನು ಕೊಲ್ಲುವುದು ನೈತಿಕವಾಗಿ ಸರಿಯಲ್ಲ ಎಂಬ ಮೂಲ ತತ್ತ್ವವನ್ನೇ ಬಳಸಿ ಮರಣದಂಡನೆಯ ಚಿಂತನೆಯನ್ನು ನಿರಾಕರಿಸಲೂಬಹುದು.

    ಸಾಂವಿಧಾನಿಕ ನೈತಿಕತೆ: ನಮ್ಮ ಸಂವಿಧಾನ ಹೊಂದಿರುವ ನೈತಿಕತೆ ಸಮಾಜ ಒಪ್ಪಿರುವ ನೈತಿಕತೆಗಿಂತ ಭಿನ್ನವಾಗಿದೆ. ಸಂವಿಧಾನದಲ್ಲಿ ಅಡಕವಾಗಿರುವ ಉದಾತ್ತ ತತ್ತ್ವಗಳಿಗೆ ಬದ್ಧವಾಗಿರುವುದೇ ಸಾಂವಿಧಾನಿಕ ನೈತಿಕತೆ. ಸಾಂವಿಧಾನಿಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ಸಂವಿಧಾನವನ್ನು ವ್ಯಾಖ್ಯಾನಿಸುವ ತತ್ತ್ವವನ್ನೇ ಸಾಂವಿಧಾನಿಕ ನೈತಿಕತೆ ಎಂದೂ ಪರಿಗಣಿಸಬಹುದಾಗಿದೆ. ಅಂದರೆ, ಸಂವಿಧಾನವನ್ನು ಅಕ್ಷರಶಃ ಓದುವುದು ಮಾತ್ರವಲ್ಲ, ಸಂವಿಧಾನಾತ್ಮಕತೆಯನ್ನು ರಕ್ಷಿಸುವ ಅಂತಿಮ ಉದ್ದೇಶದಿಂದ ಅದನ್ನು ಓದಬೇಕೆಂಬುದೇ ಇದರ ಅರ್ಥ.

    ಅಂತಿಮ ಗುರಿ: ಒಳಗೊಳ್ಳುವಿಕೆ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ಪ್ರಕ್ರಿಯೆಯನ್ನು ಖಾತರಿಪಡಿಸುವುದನ್ನು ಈ ಅಂತಿಮ ಗುರಿ ಒಳಗೊಂಡಿರುತ್ತದೆ. ವೈಯಕ್ತಿಕ ಮತ್ತು ಸಾಮೂಹಿಕ ಹಿತಗಳನ್ನು ಪೂರ್ಣಗೊಳಿಸುವುದು, ಯಾವ ಪ್ರಜೆಗಾಗಿ ಹಾಗೂ ಪ್ರಜೆಯಿಂದ ಸಂವಿಧಾನವಿದೆಯೋ ಅಂಥ ಪ್ರತಿಯೊಬ್ಬ ಪ್ರಜೆಯ ಪೂರ್ಣ ವ್ಯಕ್ತಿತ್ವದ ಅನಾವರಣಕ್ಕೆ ಅವಕಾಶ ನೀಡುವ ನ್ಯಾಯಾಂಗ ವ್ಯವಸ್ಥೆ ಮತ್ತಿತರ ಸ್ವಾತಂತ್ರ್ಯಗಳ ರಕ್ಷಣೆಗೆ ಬದ್ಧತೆಯನ್ನು ಅದು ಒಳಗೊಂಡಿರುತ್ತದೆ.

    ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ವೈಯಕ್ತಿಕ ನೈತಿಕತೆಗೂ ಸಾಂವಿಧಾನಿಕ ನೈತಿಕತೆಗೂ ವ್ಯತ್ಯಾಸವಿರುವುದು ಸ್ಪಷ್ಟವಾಗುತ್ತದೆ. ಸಾಂವಿಧಾನಿಕ ನೈತಿಕತೆಯು ಪ್ರಜಾಸತ್ತಾತ್ಮಕ ಜೀವನದ ಅತ್ಯಂತ ಮೂಲಭೂತ ಪರಿಕಲ್ಪನೆಗಳನ್ನು ರಕ್ಷಿಸುವುದರ ಮೇಲೆ ಗಮನ ಕೇಂದ್ರೀಕರಿಸಿರುತ್ತದೆ. ‘ಸಾರ್ವಜನಿಕ ನೈತಿಕತೆಯಲ್ಲಿ, ಅಸ್ತಿತ್ವದಲ್ಲಿರುವ ಜನಪ್ರಿಯ ನಂಬಿಕೆಗಳ ಆಧಾರದಲ್ಲಿ ಸಮಾಜದ ನಡವಳಿಕೆ ನಿರ್ಧರಿತವಾಗುತ್ತದೆ. ಆದರೆ, ಸಾಂವಿಧಾನಿಕ ನೈತಿಕತೆಯಲ್ಲಿ ವೈಯಕ್ತಿಕ ಹಕ್ಕುಗಳು ಸಮಾಜದ ಜನಪ್ರಿಯ ನಂಬಿಕೆಗಳ ಆಧಾರದಲ್ಲಿ ನಿರ್ಧಾರವಾಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ವ್ಯಾಖ್ಯಾನಿಸಿದ್ದಾರೆ.

    ಸುಪ್ರೀಂ ಕೋರ್ಟ್​ನ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ, ಸಾರ್ವಜನಿಕ ಅಥವಾ ವೈಯಕ್ತಿಕ ನೈತಿಕತೆ ಬದಲಿಗೆ ಸಾಂವಿಧಾನಿಕ ನೈತಿಕತೆಗೆ ಪ್ರಾಧಾನ್ಯ ನೀಡುವ ಮೂಲಕ ಸಮಾಜವನ್ನು ಪರಿವರ್ತಿಸುವುದು ಅದರ ಗುರಿ ಎನ್ನುವಂತೆ ಕಾಣುತ್ತದೆ. ಸಾಂವಿಧಾನಿಕ ನೈತಿಕತೆಯ ಉನ್ನತ ಸ್ಥಾನವನ್ನು ಮಾನ್ಯ ಮಾಡಿರುವ ಕೋರ್ಟ್​ಗಳು, ಸಂವಿಧಾನದ ಮೌಲ್ಯಗಳಿಂದ ದೂರವುಳಿಯುವ ಸರ್ಕಾರಗಳನ್ನು ಸರಿದಾರಿಗೆ ತರಲು ಅದನ್ನೊಂದು ಸಾಧನವಾಗಿ ಬಳಸಿಕೊಳ್ಳುತ್ತಿವೆ. ವಾಕ್ ಸ್ವಾತಂತ್ರ್ಯ, ಎಲ್ಲ ನಾಗರಿಕರಿಗೆ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯ ಇವೇ ಮುಂತಾದವು ಆ ಮೌಲ್ಯಗಳಾಗಿವೆ.

    ಇಂದು ಸಂವಿಧಾನ ದಿನ| ಸಾಂವಿಧಾನಿಕ ನೈತಿಕತೆಯ ಸಂಭ್ರಮದ ಕ್ಷಣ

    ಸಾಂವಿಧಾನಿಕ ನೈತಿಕತೆಯನ್ನು ರಕ್ಷಿಸಬೇಕಾದರೆ ಸಂವಿಧಾನದಲ್ಲಿ ಬರೆದಿರುವ ವಿಚಾರಗಳಿಗೆ ಅಕ್ಷರಶಃ ಜೋತುಬಿದ್ದರೆ ಸಾಲದು. ಅದರ ವ್ಯಾಖ್ಯಾನವನ್ನೂ ಮೀರಿ ಕಾರ್ಯಾಚರಿಸಬೇಕಾಗುತ್ತದೆ ಎಂಬ ನಿಯಮವನ್ನು ನಮ್ಮ ಕೋರ್ಟ್​ಗಳು ಇತ್ತೀಚಿನ ದಿನಗಳಲ್ಲಿ ಅಳವಡಿಸಿಕೊಂಡಂತೆ ಕಾಣುತ್ತದೆ. ಸಂವಿಧಾನದ ಪಠ್ಯದಲ್ಲಿ ಇಲ್ಲದ ಪದಗಳನ್ನೂ ಅವುಗಳು ತಮ್ಮ ವ್ಯಾಖ್ಯಾನಗಳಲ್ಲಿ ಸೇರ್ಪಡೆ ಮಾಡುತ್ತಿವೆ. ಉದಾಹರಣೆಗೆ, ಭಾರತದಲ್ಲಿ ಸಲಿಂಗಕಾಮ (ಹೋಮೋಸೆಕ್ಸುವಲ್)ವನ್ನು ಕ್ರಿಮಿನಲ್ ಅಪರಾಧ ಎಂದು ಸಾರುವ ಐಪಿಸಿಯ 377ನೇ ಸೆಕ್ಷನ್ ಅನ್ನು ತೆಗೆದು ಹಾಕುವಾಗ ಸುಪ್ರೀಂ ಕೋರ್ಟ್ ಬಹುವಾಗಿ ಅವಲಂಬಿಸಿದ್ದು ಸಾಂವಿಧಾನಿಕ ನೈತಿಕತೆಯನ್ನೇ.

    ಲೈಂಗಿಕತೆಯ ಆದ್ಯತೆ ವ್ಯಕ್ತಿಗೆ ಸಂಬಂಧಿಸಿದ್ದಾಗಿದ್ದು ಅವರ ವೈಯಕ್ತಿಕತೆ ಹಾಗೂ ಅಸ್ಮಿತೆಗೆ ಸಂಬಂಧ ಹೊಂದಿರುವಂಥದ್ದಾಗಿದೆ. ವ್ಯಕ್ತಿಗಳ ಆಂತರ್ಯದ ಗುಣಸ್ವಭಾವದ ಆಧಾರದಲ್ಲಿ ತಾರತಮ್ಯ ಎಸಗುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸಂವಿಧಾನದ ನೈತಿಕತೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೋರ್ಟ್ ಆ ಸಂದರ್ಭದಲ್ಲಿ ಹೇಳಿತ್ತು. ಇದರಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ, ವೈಯಕ್ತಿಕ ಅಥವಾ ಸಾರ್ವಜನಿಕ ನೈತಿಕತೆಯು ಸಂವಿಧಾನಾತ್ಮಕ ನೈತಿಕತೆಗಿಂತ ಭಿನ್ನವಾಗಿರಬಹುದು. ಎರಡನೆಯದಾಗಿ, ವೈಯಕ್ತಿಕ ಹಕ್ಕುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಂವಿಧಾನಿಕ ನೈತಿಕತೆಯನ್ನು ಬಳಸಬಹುದು.

    ವ್ಯಕ್ತಿಯ ಲೈಂಗಿಕ ಆಯ್ಕೆ ಏನಾಗಿರಬೇಕೆನ್ನುವುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಆದರೆ, ಅದನ್ನು ಸಂವಿಧಾನದ 21ನೇ ವಿಧಿ ಖಾತರಿಪಡಿಸಿರುವ ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದಡಿ ಮೂಲಭೂತ ಹಕ್ಕಾಗುತ್ತದೆ ಎಂದು ಕೋರ್ಟ್ ವ್ಯಾಖ್ಯಾನಿಸಿತು. ಆದ್ದರಿಂದ ಸಾಂವಿಧಾನಿಕ ನೈತಿಕತೆಯು ಸಂವಿಧಾನದಲ್ಲಿ ಏನು ಬರೆದಿದೆ ಎನ್ನುವುದು ಮಾತ್ರವಲ್ಲ; ಅದರ ಅಂತರಾರ್ಥವೂ ಆಗಿರುತ್ತದೆ. ಇದೇನೇ ಇದ್ದರೂ, ನಾಣ್ಯದ ಇನ್ನೊಂದು ಮುಖವನ್ನು ಪರಿಶೀಲಿಸುವುದಾದರೆ, ವ್ಯಾಖ್ಯಾನದ ಇಂಥ ಹಕ್ಕುಗಳನ್ನು ನ್ಯಾಯಾಧೀಶರಿಗೆ ನೀಡಿದರೆ ಅದರಿಂದ ಅಪಾಯಕಾರಿ ಪರಿಣಾಮವೂ ಉಂಟಾಗಬಹುದು.

    ಬೇರೆ ಬೇರೆ ನ್ಯಾಯಾಧೀಶರ ಮಿದುಳು ವಿಭಿನ್ನವಾಗಿ ಚಿಂತಿಸಬಹುದು. ಒಂದು ವಿಷಯದ ಮೇಲೆ ಭಿನ್ನವಾದ ಅಭಿಪ್ರಾಯಗಳನ್ನು ನ್ಯಾಯಾಧೀಶರು ಹೊಂದಿರುವ ಸಾಧ್ಯತೆಯಿದ್ದು ಮಹತ್ವದ ವಿಷಯಗಳಲ್ಲಿ ಸಂಘರ್ಷಾತ್ಮಕ ವ್ಯಾಖ್ಯಾನ ಹೊರಹೊಮ್ಮಬಹುದು. ಶಬರಿಮಲೆ ಪ್ರಕರಣ ಇದಕ್ಕೊಂದು ಉತ್ತಮ ಉದಾಹರಣೆ.

    ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿಷೇಧ ವಿಚಾರದ ಪ್ರಕರಣ ಸವೋನ್ನತ ನ್ಯಾಯಾಲಯದ ಐವರು ನ್ಯಾಯಾಧೀಶರ ಪೀಠದ ಮುಂದೆ ಇತ್ತು. 10ರಿಂದ 50 ವಯೋಮಾನದ ಮಹಿಳೆಯರು ದೇವಾಲಯ ಪ್ರವೇಶಿಸುವ ಮೇಲೆ ನಿರ್ಬಂಧ ವಿಧಿಸುವುದು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗುತ್ತದೆ ಎಂದು ನಾಲ್ವರು ಜಡ್ಜ್​ಗಳು ಬಹುಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, ನ್ಯಾ. ಇಂದು ಮಲ್ಹೋತ್ರಾ ಇದಕ್ಕೆ ಭಿನ್ನ ಸ್ವರ ದಾಖಲಿಸಿದರು.

    ‘ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಧರ್ಮವನ್ನು ಅನುಸರಿಸುವ ಹಕ್ಕು ಇರುತ್ತದೆ ಹಾಗೂ ಯಾರೂ ಅದರಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎನ್ನುವುದು ಸಾಂವಿಧಾನಿಕ ನೈತಿಕತೆಯಾಗಿದೆ. ಧರ್ಮದ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಿಸುವಂತಿಲ್ಲ’ ಎನ್ನುವುದು ಇಂದು ಮಲ್ಹೋತ್ರಾ ಅವರ ಭಿನ್ನಮತದ ಟಿಪ್ಪಣಿಯಾಗಿತ್ತು.

    ಜನಜನಿತವಾದ ಸಾರ್ವಜನಿಕ ನೈತಿಕತೆಯಲ್ಲಿ ಹೇಗೆ ಭಿನ್ನತೆ ಇರುತ್ತದೋ ಸಾಂವಿಧಾನಿಕ ನೈತಿಕತೆ ಕೂಡ ನ್ಯಾಯಾಧೀಶರುಗಳ ವೈಯಕ್ತಿಕ ಪರಿಕಲ್ಪನೆಯ ಆಧಾರದಲ್ಲಿ ಭಿನ್ನವಾಗಿ ಇರಬಹುದಾಗಿದೆ. ಅಮೂರ್ತವಾದ ಸಾಂವಿಧಾನಿಕ ನೈತಿಕತೆಯನ್ನು ಆಧರಿಸಿದ್ದಕ್ಕಾಗಿ ಶಬರಿಮಲೆ ತೀರ್ಪು ವ್ಯಾಪಕ ಟೀಕೆಗೆ ಗುರಿಯಾ ಯಿತು. ಅದರಲ್ಲೂ ವಿಶೇಷವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಇದನ್ನೊಂದು ‘ಅಪಾಯಕಾರಿ ಅಸ್ತ್ರ’ ಎಂದು ಹೇಳಿದ್ದನ್ನು ಮಾಧ್ಯಮಗಳು ವ್ಯಾಪಕ ವಾಗಿ ಪ್ರಚಾರ ಮಾಡಿದ್ದವು. ಆದರೆ ಸಮಯ ಕಳೆದಂತೆ ಹಾಗೂ ಸಾಂವಿಧಾನಿಕ ನೈತಿಕತೆ ಕುರಿತು ಹೆಚ್ಚೆಚ್ಚು ನಿರ್ಧಾರಗಳು ಪ್ರಕಟವಾದಂತೆ ಸಾಂವಿಧಾನಿಕ ನೈತಿಕತೆ ಎಂದರೇನು ಎನ್ನುವುದು ಇನ್ನಷ್ಟು ಸ್ಪಷ್ಟವಾಗುತ್ತಾ ಹೋಗುತ್ತದೆ. ನಮ್ಮಂತೆ ಸಂವಿಧಾನ ಕೂಡ ಒಂದು ಜೀವಂತ ವಸ್ತು. ಅದು ಕೂಡ ಸಮಯ ಸರಿದಂತೆ ಬೆಳೆಯುತ್ತಾ ಹಾಗೂ ಬದಲಾಗುತ್ತಾ ಹೋಗುತ್ತದೆ. ಆದರೆ ನ್ಯಾಯ, ಸ್ವಾತಂತ್ರ್ಯ, ಜಾತ್ಯತೀತತೆ, ಸಮಾನತೆ ಮತ್ತು ಭ್ರಾತೃತ್ವ ಮುಂತಾದ ಮೂಲ ವಿಚಾರ ಹಾಗೂ ಅವುಗಳ ನೈತಿಕತೆಯು ಸರ್ಕಾರದ ಏಕಪಕ್ಷೀಯ ಕ್ರಮಗಳ ವಿರುದ್ಧ ಪ್ರಜೆಗಳಿಗೆ ಉತ್ತಮ ರಕ್ಷಣೆಯನ್ನು ಖಾತರಿಪಡಿಸುತ್ತದೆ.

    ಹೀಗಾಗಿ, ‘ಸಂವಿಧಾನ ದಿನ’ದಂದು ‘ಸಾಂವಿಧಾನಿಕ ನೈತಿಕತೆ’ಯನ್ನು ಸಂಭ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts