Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ರಾಷ್ಟ್ರವನ್ನು ಪ್ರತಿನಿಧಿಸಿದರೂ ರಾಷ್ಟ್ರವನ್ನಾಳದ ರಾಷ್ಟ್ರಪತಿ….

Thursday, 13.07.2017, 3:00 AM       No Comments

ಭಾರತವನ್ನು ಸಾರ್ವಭೌಮ ದೇಶವಾಗಿಸುವ ನಿಟ್ಟಿನಲ್ಲಿ ಬ್ರಿಟಿಷ್ ರಾಣಿ, ಬ್ರಿಟಿಷ್ ಸಂಸತ್ತು ಮತ್ತು ಭಾರತದ ಗವರ್ನರ್ ಜನರಲ್ ಸ್ಥಾನದಲ್ಲಿ ಭಾರತದ ರಾಷ್ಟ್ರಪತಿ ಹುದ್ದೆ, ಭಾರತೀಯ ಸಂಸತ್ತನ್ನು ರಚಿಸಲಾಯಿತು ಎಂಬ ಮಾಹಿತಿಯನ್ನು ನಿನ್ನೆಯ ಕಂತಿನಲ್ಲಿ ಓದಿದೆವು. ಈ ಕುರಿತಾದ ಮತ್ತಷ್ಟು ಸಂಗತಿಗಳನ್ನು ಇಂದು ಅವಲೋಕಿಸೋಣ.

ಸಂವಿಧಾನದ 74ನೇ ಪರಿಚ್ಛೇದವು, ಪ್ರಧಾನಮಂತ್ರಿ ನೇತೃತ್ವದ ಸಚಿವ ಸಂಪುಟವನ್ನು ಹೊಂದಲು ಅವಕಾಶ ನೀಡಿರುವುದರ ಜತೆಗೆ, ರಾಷ್ಟ್ರಪತಿಯು ಸಚಿವ ಸಂಪುಟದ ನೆರವು ಮತ್ತು ಸಲಹೆ ಪ್ರಕಾರ ತನ್ನ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಹೇಳುತ್ತದೆ. ಸಚಿವ ಸಂಪುಟ ಮತ್ತು ರಾಷ್ಟ್ರಪತಿಗಳ ನಡುವಿನ ಈ ಸಂಬಂಧವು ವಾಸ್ತವವಾಗಿ ಕಾರ್ಯಾಂಗ ಮತ್ತು ಶಾಸಕಾಂಗದ ನಡುವಿನ ಹೊಕ್ಕುಳಬಳ್ಳಿ ಇದ್ದಂತೆ.

ಸಂಸದೀಯ ಆಡಳಿತ ವ್ಯವಸ್ಥೆ ಎಂದರೆ, ಸಂಸತ್ತಿನಲ್ಲಿ ಬಹುಮತ ಹೊಂದಿರುವ ಒಂದು ರಾಜಕೀಯ ಪಕ್ಷ ಅಥವಾ ರಾಜಕೀಯ ಪಕ್ಷಗಳ ಮೈತ್ರಿಕೂಟವು ಸರ್ಕಾರವನ್ನು ರಚಿಸುವುದು ಎಂದರ್ಥ. ಅಂದರೆ, ಆ ಪಕ್ಷ ಅಥವಾ ಮೈತ್ರಿಕೂಟದ ಸದಸ್ಯರು ಸಚಿವ ಸಂಪುಟವನ್ನು ರಚಿಸುವರು. ಹೀಗೆ ರಚಿತವಾಗುವ ಸಚಿವ ಸಂಪುಟವು ಸಮಷ್ಟಿಯ ರೂಪದಲ್ಲಿ ಸಂಸತ್ತಿಗೆ ಉತ್ತರದಾಯಿಯಾಗಿರುತ್ತದೆ. ವರ್ತಮಾನದ ಸರ್ಕಾರ ಮತ್ತು ಶಾಸನಸಭೆಯ ಈ ಸಹಜ ಕೊಂಡಿಯು ಸಂಸದೀಯ ಆಡಳಿತ ವ್ಯವಸ್ಥೆಯ ಪ್ರಮಾಣಕ ಮುದ್ರೆಯಾಗಿರುತ್ತದೆ. ಭಾರತೀಯ ಸಂಸತ್ತು ಒಂದು ಚಕ್ರವಾಗಿದ್ದರೆ, ಸಚಿವ ಸಂಪುಟವು ಈ ಚಕ್ರದೊಳಗಿನ ಚಕ್ರವಾಗಿದೆ.

ರಾಷ್ಟ್ರಪತಿಯು ‘ಸಂವಿಧಾನಕ್ಕೆ ಅನುಸಾರವಾಗಿ’ ಒಕ್ಕೂಟದ ಕಾರ್ಯಕಾರಿ ಅಧಿಕಾರ ಚಲಾಯಿಸುವುದು ಅವಶ್ಯವಾಗಿರುವುದನ್ನು ಉಲ್ಲೇಖಿಸುವ ಪರಿಚ್ಛೇದ 53ರ ಜತೆಗೆ ಪರಿಚ್ಛೇದ 74ನ್ನು ಓದಿದಾಗ, ನಮ್ಮ ಸಂವಿಧಾನ ನಿರ್ವತೃಗಳು ಸಮ್ಮಿಶ್ರ ಪದ್ಧತಿಯೊಂದನ್ನು ಸ್ವೀಕರಿಸಿ ಅಳವಡಿಸಿಕೊಂಡಿರುವುದು ಅರಿವಾಗುತ್ತದೆ; ಸಂಸತ್ತು, ಪ್ರಧಾನಮಂತ್ರಿ ನೇತೃತ್ವದ ಸಚಿವ ಸಂಪುಟ ಹಾಗೂ ರಾಷ್ಟ್ರಪತಿಗಳ ನಡುವೆ ಪರಸ್ಪರ ಅವಲಂಬನೆಯ ಆಳವಾದ ಬೇರುಗಳ ಬಾಂಧವ್ಯವನ್ನು ಅವರು ಸೃಷ್ಟಿಸಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ರಾಷ್ಟ್ರಪತಿಗಳು ನಾಮಮಾತ್ರದ ನಾಯಕರಲ್ಲ, ಸಂವಿಧಾನದ ಅಡಿಯಲ್ಲಿ ಚಲಾಯಿಸಬಲ್ಲಂಥ ಗಣನೀಯ ಅಧಿಕಾರಗಳು ಅವರಿಗಿವೆ ಎಂಬುದಿಲ್ಲಿ ಖಚಿತವಾಗುತ್ತದೆ.

ಈ ಗ್ರಹಿಕೆಗೆ ಪೂರಕವಾಗಿರುವ ಪರಿಚ್ಛೇದ 74ಕ್ಕೆ ನೀಡಲಾಗಿರುವ ನಿಬಂಧನೆಯು ಈ ನಿಟ್ಟಿನಲ್ಲಿ ಮತ್ತಷ್ಟು ಸ್ಪಷ್ಟತೆಯನ್ನು ಒದಗಿಸುತ್ತದೆ. ಅಂದರೆ, ‘ಸಾರ್ವತ್ರಿಕವಾಗಿ ಅಥವಾ ಅನ್ಯಥಾ ಮಾರ್ಗದಲ್ಲಿ ಬಂದ ಇಂಥದೊಂದು ಸಲಹೆಯನ್ನು ಮರುಪರಿಶೀಲಿಸಲು ರಾಷ್ಟ್ರಪತಿಯವರಿಗೆ ಸಚಿವ ಸಂಪುಟದ ಅಗತ್ಯ ಬೀಳಬಹುದು ಮತ್ತು ಇಂಥದೊಂದು ಮರುಪರಿಗಣನೆಯ ನಂತರ ನೀಡಲಾದ ಸಲಹೆಗೆ ಅನುಸಾರವಾಗಿ ರಾಷ್ಟ್ರಪತಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ ಎನ್ನುತ್ತದೆ ಈ ನಿಬಂಧನೆ. ಅಂದರೆ, ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿಗಳು ಕಾರ್ಯನಿರ್ವಹಿಸಲು ಬದ್ಧರು ಎಂದು ಹೇಳುವುದರ ಜತೆಗೆ, ಸಚಿವ ಸಂಪುಟವು ಸಲಹೆಯ ಮರುಪರಿಶೀಲನೆ ಮಾಡುವಂತೆ ಮಾಡುವ ನಿರ್ದಿಷ್ಟ ಅಧಿಕಾರವೂ ರಾಷ್ಟ್ರಪತಿಗಳಿಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಸ್ವಾರಸ್ಯಕರ ಸಂಗತಿಯೆಂದರೆ, ‘ಸಚಿವ ಸಂಪುಟದ ಸಲಹೆಗೆ ವ್ಯತಿರಿಕ್ತವಾಗಿ’ ಮತ್ತು ‘ಸಚಿವ ಸಂಪುಟದ ಸಲಹೆ ಇಲ್ಲದೆಯೇ’ ಕೆಲಸ ಮಾಡಲೂ ನಮ್ಮ ಸಂವಿದಾನದ ಕೆಲವೊಂದು ವಿಚಾರಗಳಲ್ಲಿ ರಾಷ್ಟ್ರಪತಿಗಳಿಗೆ ಅವಕಾಶ ಕಲ್ಪಿಸಿದೆ. ಉದಾಹರಣೆಗೆ, ಕೇಂದ್ರದ ಆಡಳಿತ ವ್ಯವಹಾರಗಳು ಮತ್ತು ಶಾಸನಕ್ಕಾಗಿರುವ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕರೆ ಕಳಿಸುವ ಅಧಿಕಾರವನ್ನು ನಮ್ಮ ಸಂವಿಧಾನವು ರಾಷ್ಟ್ರಪತಿಗಳಿಗೆ ಕೊಟ್ಟಿದೆ, ಮತ್ತು ಹೀಗೆ ಕರೆ ಬಂದಾಗ, ಅಂಥ ಮಾಹಿತಿಯನ್ನು ಒದಗಿಸುವುದು ಪ್ರಧಾನಮಂತ್ರಿಗಳ ಕರ್ತವ್ಯವಾಗುತ್ತದೆ.

ರಾಷ್ಟ್ರಪತಿಗಳು ಚಲಾಯಿಸುವ ಇನ್ನೊಂದು ಮಹತ್ವದ ಅಧಿಕಾರವು ಸಂವಿಧಾನದ ಪರಿಚ್ಛೇದ 111ರ ಅಡಿಯಲ್ಲಿ ಬರುತ್ತದೆ. ಇದರ ಅನುಸಾರ, ಸಂಸತ್​ನಿಂದ ಅಂಗೀಕರಿಸಲ್ಪಟ್ಟ ಮಸೂದೆಯೊಂದು ರಾಷ್ಟ್ರಪತಿಗಳ ಅಂಕಿತಕ್ಕೆ ಬಂದಾಗ, ಮರುಪರಿಶೀಲನೆ ಮಾಡುವಂತೆ ಸೂಚಿಸಿ ರಾಷ್ಟ್ರಪತಿಗಳು ಅದನ್ನು ವಾಪಸ್ ಕಳಿಸಬಹುದು. ಅನೇಕ ಸಂದರ್ಭಗಳಲ್ಲಿ, ರಾಷ್ಟ್ರಪತಿಗಳು ಸ್ವಯಂಪ್ರೇರಣೆಯಿಂದಲೇ ಮಸೂದೆಗಳನ್ನು ವಾಪಸ್ ಕಳುಹಿಸಿದ್ದೂ ಇದೆ, ತತ್ಪಲವಾಗಿ ಇಂಥ ಮಸೂದೆಗಳು ಹಲವು ಬಾರಿ ಮಾರ್ಪಾಡುಗೊಂಡಿವೆ.

ಇದು, ಅಮೆರಿಕದಲ್ಲಿರುವ ಸಂಪೂರ್ಣ ಅಧ್ಯಕ್ಷೀಯ ಮಾದರಿಯ ಪ್ರಜಾಸತ್ತಾತ್ಮಕ ಆಡಳಿತಕ್ಕೆ ತದ್ವಿರುದ್ಧವಾಗಿರುವಂಥದ್ದು. ಇದನ್ನು ಕೊಂಚ ವಿವರಿಸುವುದಾದರೆ, ಬಹುತೇಕ ಭಾರತದ ಸಚಿವರು ಮತ್ತು ಸಚಿವಾಲಯಗಳ ರೀತಿಯಲ್ಲೇ ಅಮೆರಿಕದ ಅಧ್ಯಕ್ಷರು ತಮ್ಮ ಅಧೀನದಲ್ಲಿ ವಿಭಿನ್ನ ‘ಕಾರ್ಯದರ್ಶಿಗಳನ್ನು’ ಹೊಂದಿದ್ದು ಅವರು ವಿವಿಧ ‘ಇಲಾಖೆಗಳ’ ಉಸ್ತುವಾರಿ ಆಗಿರುತ್ತಾರೆ. ಆದಾಗ್ಯೂ, ಅಮೆರಿಕದ ಅಧ್ಯಕ್ಷರು ಮತ್ತು ಭಾರತದ ರಾಷ್ಟ್ರಪತಿಗಳ ನಡುವಿನ ಒಂದು ಮೂಲಭೂತ ವ್ಯತ್ಯಾಸವೇನೆಂದರೆ, ತಮ್ಮ ಯಾವುದೇ ಕಾರ್ಯದರ್ಶಿ ತಮಗೆ ನೀಡುವ ಸಲಹೆಯನ್ನು ಅಮೆರಿಕ ಅಧ್ಯಕ್ಷರು ಅಂಗೀಕರಿಸಬೇಕಾದ ಬದ್ಧತೆಯೇನೂ ಇಲ್ಲ. ಚುಟುಕಾಗಿ ಹೇಳುವುದಾದರೆ, ಭಾರತದ ರಾಷ್ಟ್ರಪತಿಗಳು ರಾಷ್ಟ್ರದ ಮುಖ್ಯಸ್ಥರೇ ವಿನಾ, ಕಾರ್ಯಾಂಗದ ಮುಖ್ಯಸ್ಥರಲ್ಲ; ಅವರು ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆಯೇ ವಿನಾ, ರಾಷ್ಟ್ರವನ್ನು ಆಳುವುದಿಲ್ಲ.

ಪರಿಣಾಮವಾಗಿ, 1974ರಲ್ಲಿ ಶಂಶೇರ್ ಸಿಂಗ್ ವರ್ಸಸ್ ಪಂಜಾಬ್ ರಾಜ್ಯ ಸರ್ಕಾರ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ವಿಶ್ಲೇಷಿಸಿದಂತೆ, ಭಾರತದ ಸಂವಿಧಾನದ ಪರಿಚ್ಛೇದ 77ರ ಅಡಿಯಲ್ಲಿ ಮಾಡಲಾದ ವ್ಯವಹಾರ ನಿಯಮಗಳ ಅಡಿಯಲ್ಲಿ ಯಾವುದೇ ಸಚಿವ ಅಥವಾ ಅಧಿಕಾರಿ ಕೈಗೊಳ್ಳುವ ತೀರ್ವನವು, ರಾಷ್ಟ್ರಪತಿಗಳ ತೀರ್ವನವಾಗುತ್ತದೆ.

ಚುನಾವಣೆಗಳಲ್ಲಿ ಯಾವುದೇ ಒಂದು ಪಕ್ಷ ಸ್ಪಷ್ಟ ಬಹುಮತ ಗಳಿಸದೆ ಅಸ್ಪಷ್ಟ ಫಲಿತಾಂಶ ಹೊಮ್ಮಿದಾಗ, ರಾಷ್ಟ್ರಪತಿಗಳು ಮಹತ್ವದ ಪಾತ್ರ ವಹಿಸುತ್ತಾರೆ. ಸಂಯುಕ್ತ ರಂಗ ಸರ್ಕಾರದ ಪತನವಾಗಿ 11ನೇ ಲೋಕಸಭೆ ವಿಸರ್ಜನೆಯಾದ ಪರಿಣಾಮವಾಗಿ 12ನೇ ಲೋಕಸಭೆಗೆ ನಡೆದ 1998ರ ಸಾರ್ವತ್ರಿಕ ಚುನಾವಣಾ ಸಂದರ್ಭ ಇದಕ್ಕೊಂದು ಉದಾಹರಣೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಚುನಾವಣಾಪೂರ್ವ ಮೈತ್ರಿಕೂಟಕ್ಕೆ ನಿರ್ಣಾಯಕ ಬಹುಮತ ಬರಲಿಲ್ಲ. ಈ ಸಂದರ್ಭದಲ್ಲಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು, ‘ದೊಡ್ಡ ಪಕ್ಷದ ಅಥವಾ ಪಕ್ಷಗಳ ಮೈತ್ರಿಕೂಟದ ನಾಯಕನಿಗೆ ಸರ್ಕಾರ ರಚಿಸುವ ಮೊದಲ ಅವಕಾಶವನ್ನು ಸಾಮಾನ್ಯವಾಗಿ ನೀಡಲಾಗುತ್ತದೆಯಾದರೂ, ಇದೊಂದು ಸಾರ್ವಕಾಲಿಕ ಸೂತ್ರ ಆಗಬೇಕೆಂದೇನೂ ಇಲ್ಲ; ಏಕೈಕ ದೊಡ್ಡಪಕ್ಷ ಅಥವಾ ಪಕ್ಷಗಳ ಮೈತ್ರಿಕೂಟಕ್ಕೆ ಸೇರದ ಸಂಸದರು ಒಗ್ಗೂಡಿ, ಏಕೈಕ ದೊಡ್ಡಪಕ್ಷದ ಹಕ್ಕುದಾರಿಕೆಯನ್ನು ಮೀರಿಸುವ ಸಂಖ್ಯಾಬಲವನ್ನು ತೋರಿಸುವಂಥ ಸನ್ನಿವೇಶಗಳು ಉದ್ಭವವಾಗಬಹುದು‘ ಎಂದು ಅಭಿಪ್ರಾಯಪಟ್ಟಿದ್ದರು. ಅಷ್ಟೇ ಅಲ್ಲ, ಇಂತಹ ಪರಿಸ್ಥಿತಿಯಲ್ಲಿ ದೊಡ್ಡಪಕ್ಷದ ನಾಯಕನ ಸಾಬೀತುಪಡಿಸಬಲ್ಲ ಹಕ್ಕುದಾರಿಕೆ/ಸಮರ್ಥನೆಯ ಮೇಲೆ ಪ್ರಧಾನಮಂತ್ರಿಯ ಆಯ್ಕೆ ಪ್ರಕ್ರಿಯೆಯು ಸುತ್ತುತ್ತದೆ ಎಂಬುದೂ ಅವರ ಅಭಿಪ್ರಾಯವಾಗಿತ್ತು. ಹೀಗೆ ಮಾಡುವ ಮೂಲಕ, ಅಂಕಗಣಿತೀಯ ಪರೀಕ್ಷೆಯನ್ನು, ಅಂದರೆ ಹೆಚ್ಚು ಸಂಖ್ಯೆಯ ಸ್ಥಾನಗಳನ್ನು ಹೊಂದಿರುವ ಪಕ್ಷವನ್ನು ಮೊದಲು ಆಹ್ವಾನಿಸುವ ಪರಿಪಾಠವನ್ನು ರಾಷ್ಟ್ರಪತಿಗಳು ಪರಿಗಣಿಸಲಿಲ್ಲ ಮತ್ತು (ರಾಷ್ಟ್ರಪತಿ ಆರ್. ವೆಂಕಟರಾಮನ್ ಕೂಡ ಹಿಂದೆ ಇದೇ ಮಾರ್ಗವನ್ನು ಅನುಸರಿಸಿದ್ದರು) ಮತ್ತು ಸ್ವಂತ ವಿವೇಚನೆಯನ್ನು ಮೆರೆದಿದ್ದರು.

ಭಾರತದ ರಾಷ್ಟ್ರಪತಿ ಅಮೆರಿಕ ಅಧ್ಯಕ್ಷರಷ್ಟು ಪ್ರಭಾವಶಾಲಿಯಲ್ಲ, ಶಕ್ತಿಶಾಲಿಯಲ್ಲ ಮತ್ತು ಅವರು ಹಾಗೆ ಆಗಬೇಕಾದ್ದೂ ಇಲ್ಲ. ಅದೇ ವೇಳೆಗೆ, ಭಾರತದ ರಾಷ್ಟ್ರಪತಿ ಬ್ರಿಟಿಷ್ ರಾಣಿಯಷ್ಟು ದುರ್ಬಲರಲ್ಲ ಮತ್ತು ಅಂಥ ಪರಿಸ್ಥಿತಿ ಎಂದಿಗೂ ಬರುವುದಿಲ್ಲ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

Leave a Reply

Your email address will not be published. Required fields are marked *

Back To Top