Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಉತ್ತರದಾಯಿತ್ವವಿಲ್ಲದೆ ಆಧಾರ ಸಿಕ್ಕೀತೆ?

Wednesday, 10.05.2017, 3:00 AM       No Comments

ವ್ಯಕ್ತಿಯ ಮಾಹಿತಿಯ ಗೌಪ್ಯತೆಯನ್ನು ಕಾಪಾಡುವ ಹೊಣೆಗಾರಿಕೆಯನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ ನೀಡಲಾಗಿದೆ. ಆದರೆ ಈ ವಿಷಯದಲ್ಲಿ ಏನಾದರೂ ತಪ್ಪುಗಳಾದಲ್ಲಿ, ಪ್ರಾಧಿಕಾರವೇ ದೂರು ನೀಡದ ವಿನಾ, ಆ ತಪ್ಪು ಪರಿಗಣನೆಗೆ ಬಾರದಂತಹ ಅವಕಾಶವನ್ನೂ ಕಾನೂನಿನಲ್ಲಿ ನೀಡಲಾಗಿದೆ. ಇದು ವಿಚಿತ್ರವಲ್ಲವೆ?

ಶತ ಶತಮಾನಗಳಿಂದಲೂ ಬೆಂಕಿಯ ಮೂಸೆಯಲ್ಲಿ ಹದವಾಗಿ ಬೆಂದು ಯಥೋಚಿತವಾಗಿ ಇಂದು ನಮ್ಮ ಕೈಸೇರಿರುವ ಮೂಲಭೂತ ಹಕ್ಕಾಗಿರುವ ಗೋಪ್ಯತೆ ಅಥವಾ ಖಾಸಗಿತನದ ಹಕ್ಕು ಆಧಾರ್ ಕಾಯ್ದೆಯಿಂದ ಹೇಗೆ ಧಕ್ಕೆಗೆ ಒಳಗಾಗಿದೆ? ಕಾಯ್ದೆಯ ಉಪಬಂಧಗಳನ್ನು ಅನುಸರಿಸದಿರುವ ಸಂದರ್ಭಗಳಲ್ಲಿ ಸಿಬ್ಬಂದಿಯನ್ನು ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಕಾಯ್ದೆ ಹೇಗೆ ಮೌನವಾಗಿದೆ ಎಂಬುದನ್ನು ಹಿಂದಿನ ಭಾಗದಲ್ಲಿ ಓದಿದ್ದೇವೆ. ಈ ಕಾಯ್ದೆಯ ಇನ್ನಷ್ಟು ಲೋಪ-ದೋಷಗಳ ಬಗ್ಗೆ ಈ ಭಾಗದಲ್ಲಿ ಓದೋಣ.

ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವೇ (Unique Identification Authority of India- UIDAI)  ಸ್ವತಃ ದೂರು ನೀಡದ ವಿನಾ ಆಧಾರ್ ಕಾಯ್ದೆಯಡಿ ಶಿಕ್ಷಾರ್ಹವಾದ ಅಪರಾಧವನ್ನು ಪರಿಗಣಿಸದಂತೆ ಕಾಯ್ದೆಯ 47ನೇ ಸೆಕ್ಷನ್ ಅಡಿಯಲ್ಲಿ ನ್ಯಾಯಾಲಯಗಳನ್ನು ನಿರ್ಬಂಧಿಸುವ ಮೂಲಕ ಆಧಾರ್ ಪ್ರಾಧಿಕಾರ ಮತ್ತು ಅದರ ಸಿಬ್ಬಂದಿಗೆ ಇನ್ನಷ್ಟು ರಕ್ಷಣೆ ಒದಗಿಸಲಾಗಿದೆ. ಕಾನೂನು ಕ್ರಮಕ್ಕೆ ಒಳಗಾಗಬೇಕಾದ ಪ್ರಾಧಿಕಾರಕ್ಕೆ ಇಂತಹ ಕಾನೂನು ಕ್ರಮಕ್ಕೆ ಮಂಜೂರಾತಿ ನೀಡುವ ಅಧಿಕಾರ ಒದಗಿಸುವ ಈ ನಿಯಮ ಅಸಂಬದ್ಧವೆನ್ನದೆ ವಿಧಿಯಿಲ್ಲ. ‘ಯಾವುದೇ ವ್ಯಕ್ತಿ ತನಗೆ ತಾನೇ ನ್ಯಾಯಾಧೀಶನಾಗಲು ಸಾಧ್ಯವಿಲ್ಲ’ ಎಂಬ ಸಹಜನ್ಯಾಯದ ಸ್ಪಷ್ಟ ಉಲ್ಲಂಘನೆ ಇದು.

ಮಾಹಿತಿಯ ಗೌಪ್ಯತೆ, ರಕ್ಷಣೆ ಮತ್ತು ಭದ್ರತೆಯ ಬಾಧ್ಯತೆಯನ್ನು ಪ್ರಾಧಿಕಾರಕ್ಕೆ ಕಾನೂನು ವಿಧಿಸಿದ್ದರೂ, ಈ ನಿಟ್ಟಿನಲ್ಲಿ ಯಾವುದೇ ತಪ್ಪೆಸಗಿದಲ್ಲಿ ಪ್ರಾಧಿಕಾರದ ವಿರುದ್ಧ ಶಿಕ್ಷಾತ್ಮಕ ಕ್ರಮಕ್ಕೆ ಅವಕಾಶ ಕಲ್ಪಿಸದ್ದು ಕಾಯ್ದೆಯ ಇನ್ನೊಂದು ಅಸಂಗತತೆ. ವಿಶಿಷ್ಟ ಗುರುತು ಪ್ರಾಧಿಕಾರವು (1) ಗುರುತು ಮಾಹಿತಿಯ ಭದ್ರತೆಯನ್ನು ಖಚಿತಪಡಿಸುವುದು (2) ಮಾಹಿತಿಯನ್ನು ಸುರಕ್ಷಿತಗೊಳಿಸುವುದು ಮತ್ತು ರಕ್ಷಿಸುವ ಖಾತರಿ ನೀಡುವುದು ಮತ್ತು (3) ಕೇಂದ್ರೀಯ ಗುರುತುಗಳ ಮಾಹಿತಿ ಭಂಡಾರದಲ್ಲಿ ಸಂಗ್ರಹವಾದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದಿರುವುದು- ಈ ಕರ್ತವ್ಯಗಳನ್ನು ಸೆಕ್ಷನ್ 28 ಕಡ್ಡಾಯಪಡಿಸಿರುವುದರ ಹೊರತಾಗಿಯೂ ಮೇಲೆ ತಿಳಿಸಿದ ಪರಿಸ್ಥಿತಿ ಇದೆ. ಮುಂಬೈ ಕೌನ್ಸಿಲ್, ರತ್ಲಮ್ ವರ್ಸಸ್ ವರ್ಡಿಚಾನ್ ಪ್ರಕರಣದಲ್ಲಿ ‘ಅಧಿಕಾರವನ್ನು ಜನರಿಂದ ಮತ್ತು ಜನರಿಗಾಗಿ ಚಲಾಯಿಸಿದ್ದಕ್ಕಾಗಿ ಎಲ್ಲ ಕಾಲದಲ್ಲೂ ನಾವು ಉತ್ತರದಾಯಿಗಳಾಗಿರುತ್ತೇವೆ ಎಂಬ ವಿಶ್ವಾಸ ಹೊಂದಿರಬೇಕು’ ಎಂದು ಸುಪ್ರೀಂಕೋರ್ಟ್ ಉಲ್ಲೇಖಿಸಿದೆ. ಶ್ರೇಯಾ ಸಿಂಘಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ‘ನಾಗರಿಕರು ತಪ್ಪು ಎಸಗದಂತೆ ತಡೆಯವುದು ಸರ್ಕಾರದ ಕೆಲಸವಲ್ಲ, ಬದಲಿಗೆ ಸರ್ಕಾರವು ತಪ್ಪೆಸಗದಂತೆ ನೋಡಿಕೊಳ್ಳುವುದು ನಾಗರಿಕರ ಕರ್ತವ್ಯ’ ಎಂದು ಸುಪ್ರೀಂಕೋರ್ಟ್ ಹೇಳಿದ್ದು ಇಲ್ಲಿ ಸ್ಮರಣಾರ್ಹ.

ಕಾನೂನಿನ ಸಮಾನತೆಯ ತತ್ತ್ವವು ನಾಗರಿಕರಿಗೆ ಅನ್ವಯಿಸುವಂತೆಯೇ ಸರ್ಕಾರಕ್ಕೂ ಅನ್ವಯಿಸಬೇಕು ಎಂದು ಯೂನಿಯನ್ ಆಫ್ ಇಂಡಿಯಾ ವರ್ಸಸ್ ಜುಬ್ಬಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಜನರು ಹಾಗೂ ಖಾಸಗಿ ಸಂಸ್ಥೆಗಳಿಗೆ ಒಂದು ಮಾನದಂಡ ಸರ್ಕಾರಕ್ಕೆ ಇನ್ನೊಂದು ಮಾನದಂಡ ಇರಲಾಗದು ಮತ್ತು ಇರಬಾರದು ಎಂದೂ ಕೋರ್ಟ್ ಹೇಳಿದೆ.

ಯಾವುದೇ ಶಾಸನಾತ್ಮಕ ಕ್ರಮವನ್ನು ವಿಧಿರೀತ್ಯಾ ಕೈಗೊಳ್ಳಬೇಕು ಅದಿಲ್ಲವಾದಲ್ಲಿ ಅಂಥ ಕ್ರಮ ಕೈಗೊಳ್ಳಲೇಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ (ಮ್ಯಾನೇಜ್​ವೆುಂಟ್, ಅಸಿಸ್ಟೆಂಟ್ ಸಾಲ್ಟ್ ಕಮೀಷನರ್ ವರ್ಸಸ್ ಸೆಕ್ರೆಟರಿ, ಸೆಂಟ್ರಲ್ ಸಾಲ್ಟ್ ಮಜ್ದೂರ್ ಯೂನಿಯನ್ ಪ್ರಕರಣ). ಕಾನೂನುಬದ್ಧ ಪ್ರಾಧಿಕಾರಗಳ ಎಲ್ಲ ಕ್ರಮಗಳೂ ಕಾನೂನಿನ ನಾಲ್ಕು ಚೌಕಟ್ಟುಗಳ ಒಳಗೆ ಇರಬೇಕು, ಇಲ್ಲದಿದ್ದಲ್ಲಿ ಅವು ಅನೂರ್ಜಿತಗೊಳ್ಳುತ್ತವೆ. ಶಾಸನಬದ್ಧ ವಿಧಿಗಳ ಉಲ್ಲಂಘನೆಯಾದಲ್ಲಿ ಅದಕ್ಕೆ ವಿಧಿಸಬೇಕಾದ ಸಿವಿಲ್ ಹಾಗೂ ದಂಡದ ಶಿಕ್ಷೆ ಬಗ್ಗೆ ಆ ಕಾನೂನಿನಲ್ಲೇ ಉಲ್ಲೇಖವಿರಬೇಕು. ಆ ಮೂಲಕ ಸಾರ್ವಜನಿಕ ಸೇವಕರ ಉತ್ತರದಾಯಿತ್ವವನ್ನು ಖಚಿತಪಡಿಸಬೇಕು. ಆದರೆ ಆಧಾರ್ ಕಾಯ್ದೆಯಲ್ಲಿ ಇದರ ಅಭಾವ ಢಾಳಾಗಿ ಕಾಣುವಂತಿದೆ.

ಆಧಾರ್ ಕಾಯ್ದೆ ಶಂಕಾಸ್ಪದವಾಗಿರುವುದರ ಜತೆಗೇ, ಮೇಲೆ ತಿಳಿಸಿರುವ ಅದರ ಲೋಪದೋಷಗಳು, ಇದೂ ಅಲ್ಲದೆ ನಾಗರಿಕನ ಖಾಸಗಿತನದ ಮೂಲಭೂತ ಹಕ್ಕಿನಲ್ಲಿ ಯಾವುದೇ ಉತ್ತರದಾಯಿತ್ವವಿಲ್ಲದೆ ಸರ್ಕಾರದ ಹಸ್ತಕ್ಷೇಪಕ್ಕೆ ಮುಕ್ತ ಅವಕಾಶ ನೀಡುವಿಕೆಯ ಒಪ್ಪಿಕೊಳ್ಳಲಾಗದಂತಹ ಮತ್ತು ಖಂಡನಾರ್ಹವಾದ ವಿಚಾರವು ವಿಶ್ಲೇಷಣೆ ಸಲುವಾಗಿ ಈಗ ಸುಪ್ರೀಂಕೋರ್ಟಿನ ಮುಂದೆ ಇದೆ. ಸಾರ್ವಜನಿಕ ಅಧಿಕಾರಿಗಳ ಉತ್ತರದಾಯಿತ್ವ ಮತ್ತು ದಂಡನಾರ್ಹತೆಯನ್ನು ಕಾನೂನಿನಲ್ಲಿ ಉಲ್ಲೇಖಿಸಿರಬೇಕು ಎಂದು ರುಡುಲ್ ಶಾ ವರ್ಸಸ್ ಸ್ಟೇಟ್ ಆಫ್ ಬಿಹಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಉಲ್ಲೇಖಿಸಿದೆ.

ಭ್ರಷ್ಟಾಚಾರವು ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ಒದಗಿಸಲಾಗಿರುವ ನಾಗರಿಕ ಹಕ್ಕುಗಳ ಉಲ್ಲಂಘನೆಗೆ ಸಮವಾಗುತ್ತದೆ. ಕರ್ತವ್ಯ ನಿರ್ವಹಣೆಯ ವೇಳೆಯಲ್ಲಿ ಸಚಿವನೊಬ್ಬ ವೈಯಕ್ತಿಕವಾಗಿ ಮಾತ್ರವೇ ಅಲ್ಲ, ತನ್ನ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳ ಕ್ರಮ ಮತ್ತು ವರ್ತನೆಗಳಿಗಾಗಿಯೂ ಜನರಿಗೆ ಉತ್ತರದಾಯಿ ಮತ್ತು ಹೊಣೆಗಾರನಾಗಿರುತ್ತಾನೆ ಎಂಬುದಾಗಿ ಜೈಪುರ ಡೆವಲಪ್​ವೆುಂಟ್ ಅಥಾರಿಟಿ ವರ್ಸಸ್ ದೌಲತ್ ಮಲ್ ಜೈನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಹೀಗಿರುವಾಗ ನಮ್ಮ ಖಾಸಗಿತನದ ರಕ್ಷಣೆಗಾಗಿ ಇನ್ನೂ ಹೆಚ್ಚಿನ ಅವಕಾಶಗಳನ್ನು ಒದಗಿಸಬಹುದಲ್ಲ? ಸರ್ಕಾರದ ಇತ್ತೀಚಿನ ಹಸ್ತಕ್ಷೇಪಗಳು ಮತ್ತು ವ್ಯವಹಾರ ವಿಧಾನಗಳು, ಸಂಭವನೀಯ ದುರುಪಯೋಗದಿಂದ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ ಕ್ರಮವಾಗಬೇಕೆಂಬ ಭಾವನೆಗೆ ಮತ್ತಷ್ಟು ಇಂಬುಕೊಡುವಂತಿದೆ.

Leave a Reply

Your email address will not be published. Required fields are marked *

Back To Top