Wednesday, 19th September 2018  

Vijayavani

ಗೌಡರ ಫ್ಯಾಮಿಲಿ ವಿರುದ್ಧ ಮತ್ತೆ ಸಿಡಿದೆದ್ದ ಮಂಜು- ಡಿಸಿ, ಕಂದಾಯ ಸಚಿವರಿಗೆ ನಾಳೆ  ದೂರು ನೀಡಲಿರುವ ಎ.ಮಂಜು        ಎದುರಾಳಿ ಇಲ್ದೇ ಚೆಸ್ ಆಡೋದೇಗೆ - ಡಿಕೆಶಿ ದರ್ಪದ ಮಾತಿಗೆ ಬಿಎಸ್​ವೈ ತಿರುಗೇಟು - ಇತ್ತ ಅಪ್ಪ-ಮಕ್ಕಳ ವಿರುದ್ಧವೂ ವಾಗ್ದಾಳಿ        ಬಿಜೆಪಿಗೆ ಹೋದ್ರೆ ಬೆಳೆಯಕ್ಕಾಗಲ್ಲ, ಪಕ್ಷದಲ್ಲಿದ್ರೆ ಹೆಚ್ಚು ಲಾಭ - ಬಂಡೆದ್ದಿದ್ದ ಬ್ರದರ್ಸ್ ಕೂಲ್ ಮಾಡಿದ್ದೇ ಸಹೋದರ ಲಖನ್        ದಿಲ್ಲಿಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ - ಖಾಲಿ ಇರೋ 6 ಸ್ಥಾನಗಳಿಗೆ ಲಾಬಿ ಜೋರು - ಭಿನ್ನಮತಕ್ಕೆ ರಾಹುಲ್ ಹಾಡ್ತಾರಾ ಇತಿಶ್ರೀ..?        ತ್ರಿವಳಿ ತಲಾಖ್ ಸುಗ್ರೀವಾಜ್ಞೆಗೆ ಅಸ್ತು - ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ - ಮುಸ್ಲಿಂ ಮಹಿಳೆಯರಿಗೆ ಕೊನೆಗೂ ಸಿಕ್ತು ನ್ಯಾಯ       
Breaking News

ಟೀಕಿಸುವ ಮುನ್ನ ಯೋಚಿಸಿ

Friday, 06.07.2018, 3:04 AM       No Comments

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚುವರಿಯಾಗಿ ಬಿಡಿಗಾಸು ತರುವ ಯೋಗ್ಯತೆ ಇಲ್ಲದ ಬಿಜೆಪಿ ನಾಯಕರು ಬಜೆಟ್​ನಲ್ಲಿ ಏನೂ ಇಲ್ಲ ಅಂದುಕೊಳ್ಳುವುದು ಬೇಡ. ಟೀಕಿಸುವ ಮೊದಲು ಬಜೆಟ್ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಕ್ಷಗಳಿಗೆ ಎದಿರೇಟು ನೀಡಿದ್ದಾರೆ.

ಬಜೆಟ್ ಮಂಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೇ ಜಿಲ್ಲೆಗಳಿಗೆ ಬಜೆಟ್ ಮೀಸಲಾಗಿದೆ ಎಂದು ವಿರೋಧ ಪಕ್ಷದ ಮುಖಂಡರು ಟೀಕಿಸಿದ್ದಾರೆ. ನಮ್ಮ ಪಕ್ಷಕ್ಕೆ 37 ಸೀಟುಗಳನ್ನು ಗೆಲ್ಲಿಸಿ ಕೊಟ್ಟ ಜನರಿಗೆ 300 ಕೋಟಿ ರೂ.ಗಳ ಯೋಜನೆ ನೀಡಿದರೆ ತಪ್ಪೇನಿದೆ ಎಂದು ಬಲವಾಗಿ ಸಮರ್ಥಿಸಿಕೊಂಡರು.

ರೈತರ ಸಾಲ ಮನ್ನಾ ಮಾಡಲು ಹಣ ಎಲ್ಲಿಂದ ತರಬೇಕು ಎಂದು ಹಿಂದೆ ಯಡಿಯೂರಪ್ಪ ಹೇಳಿದ್ದರು. ಈಗ ಶೆಟ್ಟರ್ ಕೂಡ ಏನೂ ಮಾಡಿಲ್ಲ ಎಂದು ಟೀಕಿಸಿದ್ದನ್ನು ಗಮನಿಸಿದ್ದೇನೆ. ರೈತರ 34 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ ಮಾಡಲು ಹುಬ್ಬಳ್ಳಿಯಿಂದ ಹಣ ಪ್ರಿಂಟ್ ಮಾಡಿ ತರಬೇಕಾ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಹಿಂದೆ ಶೆಟ್ಟರ್ ಸಾಲ ಮನ್ನಾ ಮಾಡಿದ್ದನ್ನು ಸಿದ್ದರಾಮಯ್ಯನವರು ತೀರಿಸಬೇಕಾಯಿತು. ಈಗ ಎರಡು ತಿಂಗಳು ಕಳೆಯುವ ಮೊದಲೇ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹೋರಾಟ ಆರಂಭಿಸಿದ್ದಾರೆ. ನಾನೂ ಸದನದಲ್ಲಿ ಸೂಕ್ತ ಉತ್ತರ ಕೊಡುತ್ತೇನೆ ಎಂದರು.

ಬಜೆಟ್ ಹಾಸನಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದ ಬಿಜೆಪಿ ನಾಯಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಾಸನದಲ್ಲಿ ಬಿಜೆಪಿ ಶಾಸಕರಿದ್ದಾರೆ. ಅವರು ಬೇಡ ಎಂದರೆ ರಿಂಗ್ ರಸ್ತೆಗೆ ನೀಡಿರುವ 30 ಕೋಟಿ ರೂ.ಗಳ ಯೋಜನೆ ವಾಪಸ್ ಪಡೆಯಲಾಗುವುದು. ಮುಂದೆ ಜನತೆ ತೀರ್ಮಾನ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾದರಿಯಲ್ಲೇ ಆರ್ಯವೈಶ್ಯ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ. ಬೆಂಗಳೂರು ಸೇರಿ

ಕರಾವಳಿ, ಉತ್ತರ ಕರ್ನಾಟಕ ಹೀಗೆ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಗಮನ ಕೊಡಲಾಗಿದೆ. ಕರಾವಳಿಯಲ್ಲಿ ಬೆಂಕಿ ಹಚ್ಚಿದವರನ್ನು ಜನರು ನಂಬಬಾರದು ಎಂದು ನಾನು ಮನವಿ ಮಾಡುತ್ತೇನೆ. ಕಲಬುರಗಿಯಲ್ಲಿ ಸೋಲಾರ್ ಪ್ಯಾನಲ್ ಉತ್ಪಾದನಾ ಘಟಕ, ಬೀದರ್, ಕೊಪ್ಪಳ, ಬಳ್ಳಾರಿ, ಯಾದಗಿರಿಗೆ ಕೂಡ ಕೆಲ ಹೊಸ ಕೊಡುಗೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ್ದ ಆಯವ್ಯಯ 2,09,181 ಕೋಟಿ ರೂ. ಆಗಿತ್ತು. ಇಂದು ಅದು ಒಟ್ಟು 2,18,488 ಕೋಟಿ ರೂ. ಆಗಿದ್ದು ಒಟ್ಟು 9,307 ಕೋಟಿ ರೂ ಹೆಚ್ಚುವರಿಯಾಗಿ ಮಂಡಿಸಲಾಗಿದೆ. ಆರ್ಥಿಕ ಶಿಸ್ತಿಗೆ ಧಕ್ಕೆ ಬಾರದ ರೀತಿಯಲ್ಲಿ ಬಜೆಟ್ ರೂಪಿಸಿದ್ದೇನೆ. ಹೀಗಾಗಿ ಯಾರೂ ಕೂಡ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿ, ತಪು್ಪ ಗ್ರಹಿಕೆ ಹೊಂದಬೇಕಾದ ಅಗತ್ಯ ಇಲ್ಲ ಎಂದು ವಿರೋಧಿಗಳಿಗೆ ತಾಕೀತು ಮಾಡಿದರು.

ಅರ್ಥವ್ಯವಸ್ಥೆ ಹೇಗಿದೆ?

ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು 2016-17ರಲ್ಲಿದ್ದ ಶೇ.7.5ಕ್ಕೆ ಪ್ರತಿಯಾಗಿ 2017-18ರಲ್ಲಿ ಶೇ.8.5 ಬೆಳವಣಿಗೆ ಕಂಡಿದೆ. ಕೃಷಿ ವಲಯವು ಶೇ.4.9 ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ಕಳೆದ ಸಾಲಿನ ಶೇ.3.7ಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಕೈಗಾರಿಕಾ ವಲಯವು ಶೇ.4,9ರ ಬೆಳವಣಿಗೆಯನ್ನು ಹಾಗೂ ಕಳೆದ ಸಾಲಿನ ಶೇ.89ರ ಎದುರಾಗಿ ಸೇವಾ ವಲಯವು ಶೇ.10.4ರಷ್ಟು ಬೆಳವಣಿಗೆ ದರ ದಾಖಲಿಸುವ ನಿರೀಕ್ಷೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ತೆರಿಗೆ ಹೆಚ್ಚಳಕ್ಕೆ ಸಮರ್ಥನೆ

ಪೆಟ್ರೊಲ್ ಮೇಲಿನ ತೆರಿಗೆ ಶೇ.30ರಿಂದ ಶೇ.32ಕ್ಕೆ, ಡೀಸೆಲ್ ಮೇಲಿನ ತೆರಿಗೆಯನ್ನು ಶೇ.19ರಿಂದ ಶೇ.21ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಪೆಟ್ರೊಲ್ ಲೀಟರ್​ಗೆ 1.14, ಡೀಸೆಲ್ ಲೀಟರ್​ಗೆ1.12 ಹೆಚ್ಚಳ ಆಗಲಿದೆ. ಇಷ್ಟು ಹೆಚ್ಚಳ ಆದ ಬಳಿಕವೂ ರಾಜ್ಯದಲ್ಲಿ ದರ ದಕ್ಷಿಣ ಭಾರತದಲ್ಲೇ ಕಡಿಮೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಯಾವುದೇ ಸರ್ಕಾರ ತಾಯಿ ಹೃದಯ ಹೊಂದಿರಬೇಕು ಎನ್ನವುದು ನನ್ನ ನಂಬಿಕೆ. ಹೀಗಾಗಿ ಮೈತ್ರಿ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಮಾತೃ ಮಮತೆಯಿಂದ ರೂಪಿಸಿ ಅನುಷ್ಠಾನಗೊಳಿಸುವ ಆಶಯ ನಮ್ಮದು.

| ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

ಎಚ್ಡಿಕೆಗೆ ಚೊಚ್ಚಲ ಬಜೆಟ್

ಸರ್ಕಾರ ರಚನೆ ವೇಳೆ ತಮ್ಮನ್ನು ಸಾಂರ್ದಭಿಕ ಶಿಶು ಎಂದು ಕರೆದುಕೊಂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚೊಚ್ಚಲ ಬಜೆಟ್ ಅನ್ನು ಗುರುವಾರ ನಿರರ್ಗಳವಾಗಿ ಮಂಡಿಸಿ ಗಮನ ಸೆಳೆದರು. ಒಂದೆರಡು ಕಡೆ ಅಂಕಿಸಂಖ್ಯೆಯನ್ನು ತಪ್ಪಾಗಿ ಹೇಳಿ ನಂತರ ಸಾವರಿಸಿಕೊಂಡಿದ್ದನ್ನು ಬಿಟ್ಟರೆ, ನಿರ್ವಿಘ್ನ ವಾಗಿ ಕರ್ತವ್ಯ ನಿಭಾಯಿಸಿದರು. ಮಿರಿಮಿರಿ ಮಿಂಚುವ ಶ್ವೇತ ವಸ್ತ್ರಧಾರಿಯಾಗಿ ವಿಧಾನಸೌಧಕ್ಕೆ ಆಗಮಿಸುವ ಮುನ್ನ ಅವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. 11.30ಕ್ಕೆ ವಿಧಾನಸಭೆಗೆ ಆಗಮಿಸಿ 78 ಪುಟಗಳ ಬಜೆಟ್ ಅನ್ನು ಮಧ್ಯಾಹ್ನ 1.20ಕ್ಕೆ ಓದಿ ಮುಗಿಸಿದರು.

ಮಂಡನೆ ವೇಳೆಯೇ ಆಕ್ರೋಶ

ಬಜೆಟ್ ಮಂಡನೆ ವೇಳೆಯೇ ಪ್ರತಿಪಕ್ಷ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದ ಪ್ರಸಂಗ ನಡೆಯಿತು. ಸಿಎಂ ಕುಮಾರಸ್ವಾಮಿ ಒಂದೊಂದೇ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಹಾಸನ, ರಾಮನಗರ ಹೆಸರು ಪದೇಪದೆ ಕೇಳಿದಾಗ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಬಿಜೆಪಿ ಶಾಸಕರು ಮೇಜು ಕುಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಎರಡು ಮೂರು ಬಾರಿ ಇದೇ ರೀತಿಯ ಬೆಳವಣಿಗೆ ನಡೆದಾಗ ತಾವು ಕುಳಿತಲ್ಲಿಂದಲೇ ಎಚ್.ಡಿ.ರೇವಣ್ಣ ಸಿಟ್ಟು ತೋರ್ಪಡಿಸಿದರು. ಹಾಸನ ಅಂದ್ರೆ ಅದೇಕೆ ಹಾಗೆ ಆಡ್ತೀರಾ ಎಂದು ಗೊಣಗಿದರು. ರೈತರ ಸಾಲಮನ್ನಾ ಘೋಷಣೆಯಾಗುತ್ತಿದ್ದಂತೆ ಇತಿಮಿತಿಗಳ ಬಗ್ಗೆ ಶಾಸಕರು ತಮ್ಮತಮ್ಮಲ್ಲೇ ಚರ್ಚೆ ನಡೆಸಿದ್ದು ಕಂಡುಬಂತು. ಅಂತಿಮವಾಗಿ ಬಜೆಟ್ ಮಂಡನೆ ಮುಗಿದ ಬಳಿಕ ಆಡಳಿತ ಪಕ್ಷದ ಶಾಸಕರು ಟೇಬಲ್ ಕುಟ್ಟಿ ಸ್ವಾಗತಿಸಿ ಸಂಭ್ರಮಿಸುವ ಗೋಜಿಗೆ ಹೋಗದೆ ಸಭಾಂಗಣದಿಂದ ಹೊರಬಿದ್ದರು. ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಜಿ.ಪರಮೇಶ್ವರ್ ಮತ್ತು 10-12 ಶಾಸಕರು ಮಾತ್ರ ಗ್ಯಾಲರಿಯಲ್ಲಿದ್ದ ಮಾಧ್ಯಮಗಳ ಕ್ಯಾಮರಾಗೆ ಫೋಸ್ ನೀಡಿದರು. ಇನ್ನೊಂದು ಕಡೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮಾತ್ರ ಕಲಾಪ ದಿನದ ಮಟ್ಟಿಗೆ ಮುಂದೂಡಲ್ಪಟ್ಟು 15 ನಿಮಿಷವಾದರೂ ಖುರ್ಚಿ ಬಿಟ್ಟು ಕದಲದೇ ಬಜೆಟ್ ಬಗ್ಗೆ ಸ್ವ-ಪಕ್ಷದ ಶಾಸಕರಿಂದ ಅಭಿಪ್ರಾಯ ಪಡೆದು ನೋಟ್ ಮಾಡಿಕೊಳ್ಳುತ್ತಿದ್ದರು.


ಬಜೆಟ್​ನಲ್ಲಿ ರೈತರಿಗೆ ಸಿಗಲಿಲ್ಲ ನ್ಯಾಯ

ಬೆಂಗಳೂರು: ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನುಡಿದಂತೆ ನಡೆಯದೇ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಾದ ಬಳಿಕ ಮೊಗಸಾಲೆಯಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿರುವ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿ, ಈಗ 2017ರ ಡಿಸೆಂಬರ್ 31ವರೆಗೆ ಅನ್ವಯವಾಗುವಂತೆ 2 ಲಕ್ಷದವರೆಗೆ ರೈತರ ಸುಸ್ತಿಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿರುವ ಎಷ್ಟು ರೈತರ ಖಾತೆಗಳ ಸಾಲಮನ್ನಾ ಆಗಲಿದೆ?, ಸಹಕಾರಿ ಸಂಘಗಳಲ್ಲಿ ಸಾಲ ಮಾಡಿರುವ ಎಷ್ಟು ರೈತರ ಖಾತೆಗಳ ಈ ಸಾಲಮನ್ನಾ ಅನ್ವಯವಾಗಲಿದೆ ಎಂಬುದರ ಕುರಿತು ಯಾವುದೇ ವಿವರ ನೀಡಿಲ್ಲ. ಹೀಗೆ ಅಸ್ಪಷ್ಟ ಘೋಷಣೆ ಮಾಡಿ, ನಮ್ಮ ರೈತರಿಗೆ ವಂಚನೆ ಮಾಡಿದ್ದಾರೆ. ಕೇವಲ ಸ್ವಹಿತದ ರಾಜಕೀಯ ಕಾರಣಗಳಿಗಾಗಿ ಈ ಬಜೆಟ್ ಮಂಡಿಸಲಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಮುನ್ನೋಟವಾಗಲಿ, ಇಚ್ಛಾಶಕ್ತಿಯಾಗಲಿ ಈ ಬಜೆಟ್​ನಲ್ಲಿ ಇಲ್ಲ ಎಂದು ಬಿಎಸ್​ವೈ ಗುಡುಗಿದ್ದಾರೆ. ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಭತ್ಯೆ ನೀಡುವುದಾಗಿ ಅದನ್ನು ಕೈಬಿಟ್ಟಿದ್ದಾರೆ. ಇಂತಹ ಭರವಸೆ ನೀಡಿ, ಜೆಡಿಎಸ್ 37 ಸ್ಥಾನ ಗೆದ್ದಿದ್ದರೂ, ಅವರು ಈಗ ಜನತೆಗೆ ದ್ರೋಹ ಮಾಡಿದ್ದಾರೆ.

ನೇಕಾರರಿಗೇಕೆ ಅನ್ಯಾಯ

ನೇಕಾರರು, ಸ್ತ್ರೀಶಕ್ತಿ ಸ್ವಹಾಯ ಸಂಘಗಳು, ಮೀನುಗಾರರ ಸಾಲಮನ್ನಾ ಮಾಡುವ ಭರವಸೆಯನ್ನು ಕುಮಾರಸ್ವಾಮಿ ಅವರೇ ನೀಡಿದ್ದರು. ಆದರೆ ಈಗ ಬಜೆಟ್​ನಲ್ಲಿ ಈ ವರ್ಗದ ಜನತೆಯ ಸಾಲಮನ್ನಾದ ಬಗೆಗಿನ ಉಲ್ಲೇಖವೇ ಇಲ್ಲ್ಲೇಕೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರ ಪ್ರಾಬಲ್ಯದ ಒಂದೆರಡು ಜಿಲ್ಲೆಗಳಿಗೆ ಯೋಜನೆಗಳನ್ನು ಘೋಷಿಸುವ ಸಲುವಾಗಿ ಬಜೆಟ್ ಮಂಡಿಸಿ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಇದೊಂದು ಜನ ವಿರೋಧಿ ಬಜೆಟ್. ಬಡ-ಮಧ್ಯಮ ವರ್ಗದ ಜನತೆಯ ಮೇಲೆ ಬರೆ ಎಳೆದು ಅವರ ಸಂಕಷ್ಟಗಳನ್ನು ಹೆಚ್ಚಿಸಲಾಗಿದೆ. ನಿರುದ್ಯೋಗಿಗಳನ್ನು ನಿರ್ಲಕ್ಷಿಸಲಾಗಿದೆ. ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಳದಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಲಿದೆ. ಇದು ಕೂಡ ಬಡವರಿಗೆ ಹೊರೆಯಾಗಲಿದೆ. ಅನ್ನ ಭಾಗ್ಯದ ಯೋಜನೆಯಡಿ ಬಡಜನರಿಗೆ ವಿತರಿಸಲಾಗುವ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿ, ಬಡವರಿಗೆ ನೆರವು ನೀಡುವಲ್ಲಿ ವಿಫಲರಾಗಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷ ನಾಯಕ

 


ಸಿದ್ದರಾಮಯ್ಯ ಗುದ್ದಿಗೆ ಗುಣಗಾನದ ಉತ್ತರ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಬಗ್ಗೆ ಆಕ್ಷೇಪ ಎತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಜೆಟ್​ನಲ್ಲಿ ಗುಣಗಾನದ ಉತ್ತರ ಸಿಕ್ಕಿದೆ.

ಗುರುವಾರ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಆರಂಭಿಕ ಮಾತುಗಳಲ್ಲಿ ನಿಕಟಪೂರ್ವ ಸರ್ಕಾರದ ತೀರ್ವನಗಳು ಮತ್ತು ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ ಬಗ್ಗೆ ಕೊಂಡಾಡಿದರು. ಆಯವ್ಯಯದ ಪೀಠಿಕೆಯಲ್ಲಿ ‘ಇದು ನಮ್ಮ ಮೈತ್ರಿ ಸರ್ಕಾರದ ಪ್ರಥಮ ಮುಂಗಡ ಪತ್ರ. ಮೈತ್ರಿ ಸರ್ಕಾರದ ಒಲವು- ನಿಲುವುಗಳು; ಕರ್ನಾಟಕದ ಕನಸು ನನಸುಗಳು; ಸಂಕಷ್ಟ- ಸವಾಲುಗಳು ಇದರಲ್ಲಿ ಪ್ರತಿಬಿಂಬಿತವಾಗಿದೆ’ ಎಂದು ಸಿಎಂ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸಮನ್ವಯ ಸಮಿತಿ ಆಶಯದಂತೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದ್ದೇವೆಂಬುದನ್ನೂ ಪ್ರಸ್ತಾಪಿಸಿದ್ದಾರೆ. ಪ್ರಗತಿಯ ಹಿನ್ನೋಟ ಶಿರ್ಷಿಕೆಯಡಿ ನಿಕಟಪೂರ್ವ ಸರ್ಕಾರದ ಸಾಧನೆ ಕೊಂಡಾಡಿದ ಕುಮಾರಸ್ವಾಮಿ ‘ನಿಕಟಪೂರ್ವ ಸರ್ಕಾರ ರಾಜ್ಯದ ಪ್ರಗತಿಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿದೆ. ಅದನ್ನು ನಾನು ಇಲ್ಲಿ ಸ್ಮರಿಸಿಕೊಳ್ಳುತ್ತಾ ಈ ಹಿಂದೆ ಫೆಬ್ರವರಿ 16ರಂದು ಮಂಡಿಸಿದ್ದ ಆಯವ್ಯಯದಲ್ಲಿ ಘೋಷಿಸಿರುವ ಎಲ್ಲ ಕಾರ್ಯಕ್ರಮ ಮುಂದುವರೆಸುತ್ತೇನೆ’ ಎಂದು ಹೇಳಿದರು.

ವಿಶೇಷವಾಗಿ ಅನ್ನಭಾಗ್ಯ ಯೋಜನೆಯನ್ನು ಕೊಂಡಾಡಿದ್ದಾರೆ. ಬಡಜನರು ಅನ್ನಕ್ಕಾಗಿ ಯಾರ ಮುಂದೆಯೂ ಕೈಚಾಚದೆ ಸ್ವಾಭಿಮಾನದಿಂದ ಬದುಕಬೇಕು ಎನ್ನುವ ಉದಾತ್ತ ಧ್ಯೇಯದ ಯೋಜನೆಯನ್ನು ಜಾರಿಗೊಳಿಸಿದ ಏಕೈಕ ರಾಜ್ಯ ಕರ್ನಾಟಕ ಎನ್ನುವುದು ನಮ್ಮ ಹೆಗ್ಗಳಿಕೆ’ ಎಂದು ಬಣ್ಣಿಸಿದ್ದಾರೆ. ಕ್ಷೀರಭಾಗ್ಯದಿಂದ ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ವೃದ್ಧಿಯಾಗಿದ್ದು, ಕಾರ್ಯಕ್ರಮ ರಾಷ್ಟ್ರದ ಗಮನ ಸೆಳೆದಿದೆ. ಕೃಷಿಭಾಗ್ಯದಿಂದ ಅಂತರ್ಜಲ ವೃದ್ಧಿಸಿ ಸುತ್ತಮುತ್ತಲಿನ ಪರಿಸರ ಹಸಿರುಗೊಂಡಿದೆ ಎಂದು ವಿವರಿಸುವ ಜತೆಗೆ ಮೊದಲ 14 ಪುಟಗಳನ್ನು ಹಿಂದಿನ ಸರ್ಕಾರದ ಸಾಧನೆಯನ್ನೇ ಬಿಂಬಿಸಿರುವುದು ವಿಶೇಷ.

Leave a Reply

Your email address will not be published. Required fields are marked *

Back To Top