ವಿಶಾಖಪಟ್ಟಣ: ತಮಿಳುನಾಡು ಬೌಲರ್ಗಳ ಕರಾರುವಾಕ್ ದಾಳಿಗೆ ತತ್ತರಿಸಿದ ಕರ್ನಾಟಕ ತಂಡ ರಣಜಿ ಕ್ವಾರ್ಟರ್ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೇವಲ 88 ರನ್ಗಳಿಗೆ ಆಲೌಟಾಗಿದ್ದು, ಹಿನ್ನಡೆ ಅನುಭವಿಸಿದೆ.
ಡಾ.ವೈ.ಎಸ್.ರಾಜಶೇಖರ ರೆಡ್ಡಿ, ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ತಮಿಳುನಾಡು ಇಂಗ್ಲೆಂಡ್ ವಿರುದ್ಧದ ಸರಣಿಯ 5ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕೆ.ಎಲ್.ರಾಹುಲ್ ಮತ್ತು ಕರುಣ್ ನಾಯರ್ ಸೇರಿದಂತೆ ಕರ್ನಾಟಕದ ಬ್ಯಾಟ್ಸ್ಮನ್ಗಳನ್ನು ಬೇಗನೇ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇದರ ಪರಿಣಾಮ ಕರ್ನಾಟಕ ತಂಡ 37.1 ಓವರ್ಗಳಲ್ಲಿ ಕೇವಲ 88 ರನ್ಗಳಿಗೆ ಆಲೌಟಾಯಿತು. ಇದಕ್ಕೆ ಪ್ರತಿಯಾಗಿ ಮೊದಲ ಇನಿಂಗ್ಸ್ ಆರಂಭಿಸಿದ ತಮಿಳುನಾಡು ತಂಡ 36 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ. ಮೊದಲ ಇನಿಂಗ್ಸ್ನಲ್ಲಿ 23 ರನ್ ಮುನ್ನಡೆ ಗಳಿಸಿರುವ ತಮಿಳುನಾಡು ಕರ್ನಾಟಕವನ್ನು ಇಕ್ಕಟ್ಟಿಗೆ ಸಿಲುಕಿಸುವ ವಿಶ್ವಾಸದಲ್ಲಿದೆ.
ಕರ್ನಾಟಕದ ಪರ ಸಮರ್ಥ್ (11), ಪಾಂಡೆ (28), ಕರುಣ್ ನಾಯರ್ (14) ಮತ್ತು ನಾಯಕ ವಿನಯ್ ಕುಮಾರ್ (14) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ತಮಿಳುನಾಡಿನ ಅಶ್ವಿನ್ ಕ್ರೖೆಸ್ಟ್ 31 ಕ್ಕೆ 6 ಮತ್ತು ಟಿ.ನಟರಾಜನ್ 18 ಕ್ಕೆ 3 ಉತ್ತಮ ನಿರ್ವಹಣೆ ತೋರಿ ಕರ್ನಾಟಕದ ಬ್ಯಾಟ್ಸ್ಮನ್ಗಳನ್ನು ಕಾಡಿದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ 37.1 ಓವರ್ 88 (ಪಾಂಡೆ, 28, ಅಶ್ವಿನ್ ಕ್ರೖೆಸ್ಟ್ 31 ಕ್ಕೆ 6, ಟಿ.ನಟರಾಜನ್ 18 ಕ್ಕೆ 3)
ತಮಿಳುನಾಡು 36 ಓವರ್ 111 ಕ್ಕೆ 4 (ವಿ.ಶಂಕರ್ 34, ದಿನೇಶ್ ಕಾರ್ತಿಕ್ 31, ಅರವಿಂದ್ 14 ಕ್ಕೆ 2, ಬಿನ್ನಿ 18 ಕ್ಕೆ 1)
– ಏಜೆನ್ಸೀಸ್
(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)