Thursday, 24th May 2018  

Vijayavani

ಶಕ್ತಿಸೌಧದ ಮುಂದೆ ಎಚ್​ಡಿಕೆ ಪದಗ್ರಹಣ - ದೇವರು ಹಾಗೂ ಕನ್ನಡ ನಾಡಿನ ಹೆಸರಲ್ಲಿ ಪ್ರಮಾಣವಚನ        ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪದಗ್ರಹಣ -ಮೈತ್ರಿ ಸರ್ಕಾರದಲ್ಲಿ ಅಧಿಕಾರದ ಚುಕ್ಕಾಣಿ        ರಾಜ್ಯದಲ್ಲಿ ಕುಮಾರಪರ್ವ ಶುರು - ವಿಧಾನಸೌಧದ ಮುಂದೆ ತೃತೀಯ ರಂಗದ ವೈಭವ        ವೇದಿಕೆಯಲ್ಲಿ ಮಮತಾ ಬ್ಯಾನರ್ಜಿ ಸಿಡಿಮಿಡಿ - ಎಚ್​ಡಿಡಿ ಸಮಾಧಾನಿಸಿದ್ರೂ ಕರಗದ ಮುನಿಸು        ವಿಧಾನಸೌಧದ ಮುಂದೆ ಜನರ ದಂಡು- ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಕೈ-ದಳ ಕಾರ್ಯಕರ್ತರು        ವರುಣನ ಅಬ್ಬರದ ಬಳಿಕ ಪ್ರಮಾಣವಚನದ ಸಂಭ್ರಮ- ಕುಣಿದು ಕುಪ್ಪಳಿಸಿದ ಎಚ್​ಡಿಕೆ ಅಭಿಮಾನಿಗಳು       
Breaking News

ಜಾತಿ ವರದಿಗೆ ಎಳ್ಳುನೀರು?

Wednesday, 14.02.2018, 3:06 AM       No Comments

| ಹರೀಶ ಬೇಲೂರು

ಬೆಂಗಳೂರು: ರಾಜ್ಯ ರಾಜಕಾರಣಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದೇ ಅರ್ಥೈಸಲಾಗಿದ್ದ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿಗಣತಿ ವರದಿ ವಿಧಾನಸಭೆ ಚುನಾವಣೆ ವರ್ಷದಲ್ಲಿ ಬದಲಾದ ರಾಜಕೀಯ ಲೆಕ್ಕಾಚಾರದ ಇಕ್ಕಟ್ಟಿಗೆ ಸಿಲುಕಿ ಬಿಡುಗಡೆ ಆಗುವುದೇ ಅನುಮಾನವಾಗಿದೆ. ಬರೋಬ್ಬರಿ 175 ಕೋಟಿ ರೂ. ಖರ್ಚು ಮಾಡಿ ಸಿದ್ಧಪಡಿಸಿರುವ ವರದಿಗೆ ಸರ್ಕಾರ ಎಳ್ಳುನೀರು ಬಿಡುವ ಲಕ್ಷಣಗಳು ದಟ್ಟವಾಗಿ ಗೋಚರಿಸಿವೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಜಾತಿ ಸಮೀಕ್ಷೆ ನಡೆಸಿ ಮೂರು ವರ್ಷಗಳಾಗುತ್ತ ಬಂದರೂ ಪಟ್ಟಿ ಬಿಡುಗಡೆಗೆ ಸರ್ಕಾರ ಇನ್ನೂ ಮೀನಮೇಷ ಎಣಿಸುತ್ತಿದೆ. ವರದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿಕೊಳ್ಳುತ್ತಲೇ ಬಂದಿದ್ದ ಸರ್ಕಾರವೀಗ ಚುನಾವಣೆ ವರ್ಷದಲ್ಲಿ ಹೊಸ ಜಾತಿ ಪಟ್ಟಿಯಿಂದ ಅಹಿಂದ ಮತಗಳು ಒಡೆದು ಹೋಗುವ ಆತಂಕದಿಂದ ಹೆಜ್ಜೆ ಹಿಂದಿಟ್ಟಿದೆ. ಚುನಾವಣೆ ಪ್ರಚಾರದಲ್ಲಿ ಮಗ್ನವಾಗಿರುವುದು ಒಂದೆಡೆಯಾದರೆ, ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಬರುವುದರಿಂದ ಆಗಲೇ ವರದಿ ಬಿಡುಗಡೆ ಮಾಡುವುದಾಗಿ ಸಚಿವರು ಹೇಳುತ್ತಿರುವುದು ಜಾತಿಗಣತಿ ವರದಿ ಕಪಾಟು ಸೇರುವ ಮುನ್ಸೂಚನೆ ನೀಡಿದೆ.

8 ದಶಕಗಳ ಬಳಿಕ ನಡೆದ ಗಣತಿ!: ರಾಜ್ಯದಲ್ಲಿ ಜಾತಿಗಣತಿ ನಡೆಸಬೇಕೆಂಬುದು ಸಿದ್ದರಾಮಯ್ಯ ಅವರ ಮಹದಾಸೆಯಾಗಿತ್ತು. ಸಿಎಂ ಆದ ಬಳಿಕ 2013-14ನೇ ಸಾಲಿನ ಬಜೆಟ್​ನಲ್ಲಿ ಜಾತಿಗಣತಿ ನಡೆಸಲಾಗುವುದೆಂದು ಘೋಷಿಸಿದ್ದರು. 1931ರ ನಂತರ ಜಾತಿ ಗಣತಿ ನಡೆದಿರಲಿಲ್ಲ. ಸ್ವಾತಂತ್ರಾ್ಯ ನಂತರ ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ಈ ಸಮೀಕ್ಷೆಯ ಸುದ್ದಿಗೆ ತಂಟೆಗೆ ಹೋಗಿರಲಿಲ್ಲ. 8 ದಶಕಗಳ ನಂತರ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಯಿತು.

ಆದರೆ ಚುನಾವಣೆ ಬರುತ್ತಿರುವಾಗ ಈ ಉಸಾಬರಿ ಏಕೆ ಎಂಬಂತೆ ವರದಿ ಬಹಿರಂಗಪಡಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಚುನಾವಣೆ ನೀತಿಸಂಹಿತೆ ಜಾರಿಯಾಗುವ ಕಾಲ ಹತ್ತಿರದಲ್ಲಿ ರುವುದರಿಂದಲೂ ಜಾತಿಗಣತಿ ವರದಿ ಬಿಡುಗಡೆ ಬಹುತೇಕ ಅಸಂಭವ.

ಜಾತಿಗಣತಿ ವರದಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಇಲಾಖೆಗಳಿಂದ ದ್ವಿತೀಯ ಮೂಲದ ಮಾಹಿತಿ ಬರಬೇಕಿದೆ. ಇದಾದ ಬಳಿಕ ಅಂತಿಮ ವರದಿ ಸಿದ್ಧಪಡಿಸಲಾಗುತ್ತದೆ. ವಿಧಾನಸಭೆ ಚುನಾವಣೆಗೂ ಇದಕ್ಕೂ ಸಂಬಂಧವಿಲ್ಲ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ.

| ಎಚ್.ಕಾಂತರಾಜು ಅಧ್ಯಕ್ಷ, ಹಿಂದುಳಿದ ವರ್ಗಗಳ ಆಯೋಗ

ಗಣತಿಯ ವರದಿ ಬಿಡುಗಡೆಯಾದರೆ?

# ಜಾತಿವಾರು ಸಂಖ್ಯೆಯಲ್ಲಿ ಹೆಚ್ಚು-ಕಡಿಮೆ ಎಂಬ ವಾದ ಉದ್ಭವಿಸಬಹುದು.

# ಹೊಸ ಜಾತಿ ಪಟ್ಟಿಯಿಂದ ಅಹಿಂದ ಮತಗಳು ಒಡೆದು ಹೋಗುವ ಆತಂಕ.

# ಮೇಲ್ವರ್ಗದ ವಿರೋಧಿ ಸರ್ಕಾರವೆಂಬ ಟೀಕೆ ಮತ್ತಷ್ಟು ಹೆಚ್ಚಬಹುದು.

# ಇದನ್ನೇ ಪ್ರತಿಪಕ್ಷಗಳು ರಾಜಕೀಯ ದಾಳವಾಗಿಸಿಕೊಳ್ಳುವ ಸಾಧ್ಯತೆ.

# ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕೆಂಬ ಒತ್ತಾಯ ಹೆಚ್ಚಬಹುದು.

# ಈಗಾಗಲೇ ಒಮ್ಮೆ ಸೋರಿಕೆಯಾಗಿರುವುದರಿಂದ ಈ ವರದಿಯೇ ಸರಿ ಇಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.

ಸೋರಿಕೆ ಆಗಿತ್ತು ವರದಿ!

ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ಜಾತಿಗಣತಿ ವರದಿ ಈ ಹಿಂದೆಯೇ ಸೋರಿಕೆಯಾಗಿ ವರದಿಯಲ್ಲಿದೆ ಎನ್ನಲಾದ ಅಂಕಿಅಂಶಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಅಂಕಿ-ಅಂಶಗಳನ್ನು ಗಮನಿಸಿಯೇ ಆಯಾ ಸಮುದಾಯದವರು ಸಮೀಕ್ಷೆ ಸಮರ್ಪಕವಾಗಿ ನಡೆದಿಲ್ಲ, ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿದೆ ಎಂಬ ಮಾತುಗಳು ಕೇಳಿಬಂದಿದ್ದವು. ವರದಿ ಸೋರಿಕೆ ಹಿನ್ನೆಲೆಯಲ್ಲಿ ಆಯೋಗದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಕೂಡ ಆಗಿದ್ದರು.

ಗಣತಿ ಪರ ವಾದ

# ಪ್ರತಿಯೊಂದು ಜಾತಿಗಳ ಜನಸಂಖ್ಯೆ, ಸ್ಥಿತಿಗತಿಗಳ ಅಧ್ಯಯನ ಸಾಧ್ಯ.

# ಜನಸಂಖ್ಯೆ ಆಧಾರದ ಮೇಲೆ ಕಲ್ಯಾಣ ಯೋಜನೆಗಳ ಹಂಚಿಕೆಗೆ ಅನುಕೂಲ.

# ಶೈಕ್ಷಣಿಕ, ಆರ್ಥಿಕ, ಸಾಮಾ ಜಿಕ, ರಾಜಕೀಯ ನ್ಯಾಯ ಕಲ್ಪಿಸಲು ಉಪಯೋಗ.

ಹೀಗೆ ನಡೆದಿತ್ತು ಸಮೀಕ್ಷೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರ ಏಪ್ರಿಲ್​ನಲ್ಲಿ 175 ಕೋಟಿ ವೆಚ್ಚದಲ್ಲಿ 1.33 ಲಕ್ಷ ಸಿಬ್ಬಂದಿ ಮೂಲಕ ಮನೆಮನೆ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಮುಗಿದ ಬಳಿಕ ಅಂಕಿ-ಅಂಶ ಬಿಡುಗಡೆ ಮಾಡಲು ಆಯೋಗ ತುದಿಗಾಲಿನಲ್ಲಿ ನಿಂತಿತ್ತು. ಆದರೆ, ಸರ್ಕಾರ ಹಿಂಜರಿಯಿತು. ಮುಂದೆ ಬೇರೆ ಪಕ್ಷದ ಸರ್ಕಾರ ರಚನೆಯಾದರೆ ಈ ವರದಿಯನ್ನು ಬಿಡುಗಡೆ ಮಾಡುವ ಗೋಜಿಗೆ ಹೋಗದಿರಬಹುದು. ಹಾಲಿ ಪಕ್ಷವೇ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಬಿಡುಗಡೆ ಭಾಗ್ಯ ಸಿಗಬಹುದು. ಇಲ್ಲದಿದ್ದರೆ ಸಮೀಕ್ಷೆಗಾಗಿ ವ್ಯಯಿಸಿದ 175 ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.

ಬಜೆಟ್ ಮಂಡನೆ ಬಳಿಕ ಸಿಎಂ ಜಾತಿಗಣತಿ ಕುರಿತು ರ್ಚಚಿಸಲಿದ್ದಾರೆ. ಆಯೋಗದವರು ಎಲ್ಲ ಜಾತಿಗಳ ಸ್ಥಿತಿಗತಿ ಹಾಗೂ ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡಬೇಕು ಎಂಬುದರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಅವಧಿಯಲ್ಲೇ ವರದಿ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಒಂದು ವೇಳೆ ಆಗದಿದ್ದರೆ ಮುಂದಿನ ಚುನಾವಣೆಯಲ್ಲೂ ನಾವೇ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ವರದಿ ಬಿಡುಗಡೆ ಮಾಡುತ್ತೇವೆ.

| ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ

Leave a Reply

Your email address will not be published. Required fields are marked *

Back To Top