Friday, 25th May 2018  

Vijayavani

Breaking News

ಆಮಿಷದ ಅಬ್ಬರದಿಂದ ರಾಜ್ಯವ್ಯಾಪಿ ಲಕ್ಷ್ಮೀ ಖ್ಯಾತಿ

Sunday, 15.04.2018, 3:04 AM       No Comments

| ರಾಜೇಶ ವೈದ್ಯ ಬೆಳಗಾವಿ

ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಭವಿಷ್ಯ ನಿರ್ಧರಿಸಲಿರುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಈ ಬಾರಿ ಚುನಾವಣೆ ಘೊಷಣೆ ಪೂರ್ವದಿಂದಲೇ ಕುಕ್ಕರ್, ಗ್ಯಾಸ್ ಸ್ಟೌ ಹಂಚುವಿಕೆ ಮೂಲಕ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ರಂಗೋಲಿ ಸ್ಪರ್ಧೆ ಮತ್ತಿತರ ಆಯೋಜನೆಗಳ ಹೆಸರಿನಲ್ಲಿ ಕ್ಷೇತ್ರದ ಜನರಿಗೆ ಗೃಹೋಪಯೋಗಿ ವಸ್ತುಗಳ ವಿತರಣೆಗೆ ಮುಂದಾದ ಹೆಬ್ಬಾಳ್ಕರ್, ಈ ವಿವಾದದ ಸುಳಿಯಲ್ಲಿ ಸಿಲುಕಿ ತತ್ತರಗೊಳ್ಳುವಂತಾಗಿದೆ.

ಕ್ಷೇತ್ರದಲ್ಲಿ ಮರಾಠಿ ಭಾಷಿಕ ಮತದಾರರೇ ನಿರ್ಣಾಯಕ. ಮರಾಠಿ ಹಾಗೂ ಕನ್ನಡದಲ್ಲಿ ಅರಳು ಹುರಿದಂತೆ ಮಾತನಾಡುತ್ತ, ಹಾಸ್ಯಚಟಾಕಿ ಹಾರಿಸುತ್ತ ಜನರನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುವ ಸಂಜಯ ಪಾಟೀಲ 2 ಬಾರಿ ವಿಜಯಿಯಾಗಿದ್ದಾರೆ. ಮಾಜಿ ಶಾಸಕ ಎಂಇಎಸ್​ನ ಮನೋಹರ ಕಿಣೇಕರ ವಿರುದ್ಧ ಸ್ಪರ್ಧಿಸಿ, ಮರಾಠಿ ಭಾಷಿಕರ ಮತ ಸೆಳೆಯುವಲ್ಲಿ ಯಶಸ್ವಿಯೂ ಆಗಿದ್ದಾರೆ.

‘ಮಹಾ’ ನಾಯಕರು: ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ ಪರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಬಿಜೆಪಿ ಮುಖಂಡರಾದ ಪಂಕಜಾ ಮುಂಡೆ, ಪೂನಂ ಮಹಾಜನ್ ಮುಂತಾದವರು ಪ್ರಚಾರ ನಡೆಸಲಿದ್ದಾರೆ. ಪಂಕಜಾ ಮತ್ತು ಪೂನಂ ಅವರನ್ನು ಕರೆತರುವ ಮೂಲಕ ಮರಾಠಿ ಭಾಷಿಕರ ಜತೆ ಮಹಿಳಾ ಮತದಾರರನ್ನು ಸೆಳೆಯುವ ತಂತ್ರ ಬಿಜೆಪಿಯದು. ಜನರ ಸಂಪರ್ಕವನ್ನೇ ಬಂಡವಾಳ ಮಾಡಿಕೊಂಡಿರುವ ಸಂಜಯ ಪಾಟೀಲ, ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ನಿರತರಾಗಿದ್ದಾರೆ. ಎಂಇಎಸ್ ಮುಖಂಡ, ಮಾಜಿ ಮೇಯರ್ ಶಿವಾಜಿ ಸುಂಠಕರರನ್ನು ಸೆಳೆದು ತಮ್ಮ ಸ್ಥಿತಿಯನ್ನೂ ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ.

ಬಿಜೆಪಿ ಎಂಇಎಸ್?

ಕಳೆದ ಬಾರಿ ಚುನಾವಣೆ ಅಂಕಿ ಅಂಶ ಗಮನಿಸಿದರೆ, ಬಿಜೆಪಿಗೆ ಎಂಇಎಸ್ ನೇರ ಪ್ರತಿಸ್ಪರ್ಧಿ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಈ ಬಾರಿ ಕೂಡ ಎಂಇಎಸ್ ಪರ ಎನ್​ಸಿಪಿ ಹಾಗೂ ಶಿವಸೇನೆ ಬ್ಯಾಟಿಂಗ್ ಮಾಡುತ್ತಿದ್ದು, ಶರದ್ ಪವಾರ್ ಹಾಗೂ ಶಿವಸೇನೆ ಮುಖಂಡರು ಪ್ರಚಾರದ ಕಣಕ್ಕೆ ಧುಮುಕಿದ್ದಾರೆ. ಬಿಜೆಪಿ ಹಾಗೂ ಎಂಇಎಸ್ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ಇರಲಿದೆ.

ಹೆಬ್ಬಾಳ್ಕರ್​ಗೆ ಪಾಟೀಲ ಕಾಟ?

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಇಲ್ಲ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ವಿರೋಧಿಯಾಗಿರುವ ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಕಾಂಗ್ರೆಸ್ ತೊರೆದು ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆ. ರೈತರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಇವರು, 2 ತಿಂಗಳಿನಿಂದ ರೈತರ ಮನೆ ಮನೆಗೆ ತಿರುಗಿ ಜಿದ್ದಿನಿಂದ ಪ್ರಚಾರ ನಡೆಸಿರುವುದು ಹೆಬ್ಬಾಳ್ಕರ್​ಗೆ ನಡುಕ ಹುಟ್ಟಿಸಿದೆ. ಜತೆಗೆ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಸಹ ಲಕ್ಷಿ್ಮೕ ಹೆಬ್ಬಾಳ್ಕರ್ ಅವರನ್ನು ವಿರೋಧಿಸುತ್ತಿದ್ದಾರೆ. ಇದು ಅವರ ಪಾಲಿಗೆ ದೊಡ್ಡ ಸಮಸ್ಯೆಯೂ ಹೌದು.

ಶಾಸಕರಾಗುವವರು ಜನರ ಜತೆ ಉತ್ತಮ ಸಂಪರ್ಕ ಹೊಂದಿರಬೇಕು. ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೇವಲ ಚುನಾವಣೆ ಹೊಸ್ತಿಲಲ್ಲಿ ಉಡುಗೊರೆ ನೀಡಿ, ನಂತರ ಮರೆತರೆ ಪ್ರಯೋಜನವಿಲ್ಲ. ಈಗಿನ ಶಾಸಕರನ್ನು ಅವರ ಆಪ್ತ ಸಹಾಯಕರ ನೆರವಿಲ್ಲದೇ ಯಾವುದೇ ವೇಳೆಯಲ್ಲಿ ಯಾರೂ ಬೇಕಾದರೂ ನೇರವಾಗಿ ಸಂರ್ಪಸಬಹುದು. ದೂರವಾಣಿ ಕರೆಗೂ ಸ್ಪಂದಿಸುವ ಗುಣವಿದೆ. ಜನತೆ ಜನಪ್ರತಿನಿಧಿಯಿಂದ ಇದನ್ನೇ ಬಯಸುತ್ತಾರೆ.

| ಚೇತನಾ ಅಬಸಗೇಕರ ಗ್ರಾಪಂ ಸದಸ್ಯೆ

 

Leave a Reply

Your email address will not be published. Required fields are marked *

Back To Top