More

    ಕಗ್ಗದ ಬೆಳಕು: ಅಂತರಂಗದ ಕಿಟಕಿಗಳು…

    ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ |

    ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ||

    ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೋಲೆ ಕಿಟಿಕಿಯುಂ |

    ಸಂತತದಪೇಕ್ಷಿತವೊ – ಮಂಕುತಿಮ್ಮ ||

    ‘ಅಂತರಂಗದ ಕಿಟಕಿಗಳನ್ನು ತೆರೆದಿಟ್ಟರೆ ಆಗ ಆತ್ಮವನ್ನು ಚಿಂತೆಯ ಹೊಗೆಯು ಕಾಡಲಾರದು. ಶಾಂತಿ ಬೇಕೆಂದಾದರೆ ಮನೆಗೆ ಗೋಡೆ ಅತ್ಯಗತ್ಯ. ಕಿಟಕಿಗಳನ್ನಿಡುವುದೂ ಅಗತ್ಯ’ ಎನ್ನುತ್ತದೆ ಈ ಕಗ್ಗ.

    ಕಗ್ಗದ ಬೆಳಕು: ಅಂತರಂಗದ ಕಿಟಕಿಗಳು...ಮನೆ ನಿರ್ವಿುಸುವಾಗ ಕೆಡುಕಿನಿಂದ ರಕ್ಷಣೆ ಪಡೆಯುವುದಕ್ಕಾಗಿ ಗೋಡೆಗಳನ್ನಷ್ಟೇ ಅಲ್ಲ. ಗಾಳಿ, ಬೆಳಕುಗಳಾಡಲೆಂದು ಕಿಟಕಿಗಳನ್ನೂ ಇಟ್ಟಿರುತ್ತಾರೆ. ಇದರ ಮೂಲಕ ಹೊರಪ್ರಪಂಚ ಕಾಣುವ, ಒಳಗೊಳ್ಳುವ ಸದುದ್ದೇಶವೂ ಇರುತ್ತದೆ. ಮೇಲ್ಭಾಗದಲ್ಲಿ ಕಾಯುವ ಸೂರೂ ಇರುತ್ತದೆ. ಹೀಗೆ ಸ್ವಚ್ಛ-ನಿರ್ಮಲ ವಾತಾವರಣವಿದ್ದರಷ್ಟೇ ಮನೆ ನೆಮ್ಮದಿ ನೀಡುವ ತಾಣವಾಗುತ್ತದೆ. ಹೀಗಿಲ್ಲದೇ ಹೋದರೆ ಉಸಿರುಕಟ್ಟಿದಂತಾಗುವುದು, ಬಂಧನದಲ್ಲಿದ್ದಂತೆ ಭಾಸವಾಗುತ್ತದೆ. ಮನೆಯಂತೆಯೇ ಮನುಷ್ಯ ತನ್ನ ಆಂತರ್ಯವನ್ನೂ ರೂಪಿಸಿಕೊಳ್ಳಬೇಕು. ಅಂತರಂಗವನ್ನು ಚಿಂತೆ ದಹಿಸತೊಡಗಿದರೆ ವ್ಯಕ್ತಿ ಜೀವನೋತ್ಸಾಹ ಕಳೆದುಕೊಳ್ಳುತ್ತಾನೆ. ಅನಾರೋಗ್ಯಕ್ಕೂ ಒಳಗಾಗುತ್ತಾನೆ. ನೆಮ್ಮದಿ ಮರೀಚಿಕೆಯಾಗುತ್ತದೆ. ಪ್ರತಿಯೊಬ್ಬರಿಗೂ ದುಃಖ ಇರುವುದು ಸಹಜವಾದರೂ ಕೆಲವರಲ್ಲಿ ದುಃಖ ಚಿಂತೆಯಾಗಿ ಹೊಗೆಯಾಡುತ್ತಿರುತ್ತದೆ. ದುಃಖ ಮತ್ತು ಚಿಂತೆ ಥರ ಅಲ್ಲ. ದುಃಖ ಒಮ್ಮೆ ಕಾಣಿಸಿಕೊಳ್ಳಬಹುದು, ದೀರ್ಘ ಕಾಲ ಉಳಿಯುವಂತಹುದಲ್ಲ. ದಿನ ಸರಿದಂತೆ ಮರೆವು ಅದನ್ನು ಒರಸಿ ಬಿಡುತ್ತದೆ. ಆದರೆ ದುಃಖ ಮಾತ್ರ ಕೊರಗಾಗಿ ಮನಸ್ಸಿನಲ್ಲಿಯೇ ಉಳಿದುಬಿಡುತ್ತದೆ. ಅಂತಹ ವ್ಯಕ್ತಿಗಳು ಮೇಲ್ನೋಟಕ್ಕೆ ಆನಂದದಿಂದ ಇರುವಂತೆ ಕಾಣಬಹುದು. ಆಂತರ್ಯವನ್ನು ಶೋಕವು ಜ್ವಲಿಸುತ್ತಿರುತ್ತದೆ. ಒಳಗೊಳಗೆ ಆ ವ್ಯಕ್ತಿ ವಿಲಿವಿಲಿ ಒದ್ದಾಡುತ್ತಿರುತ್ತಾನೆ. ಉನ್ನತ ಉದ್ದೇಶದಿಂದ ಪ್ರಯಾಣ ಹೊರಟ ಆತ್ಮವು, ವಿಷಾದದ ಛಾಯೆಯಿಂದ ಬಲಹೀನವಾಗುತ್ತದೆ, ಆತ್ಮವು ಚಿಂತೆಯ ಹೊಗೆಯೊಳಗೆ ಕಳೆಗುಂದುತ್ತದೆ. ಹೀಗಾಗಬಾರದೆಂದರೆ ವ್ಯಕ್ತಿ ತನ್ನ ಆಂತರ್ಯವನ್ನು ಹೊರಮುಖಕ್ಕೆ ತೆರೆದುಕೊಳ್ಳಬೇಕು. ಇದಕ್ಕೆ ಸಾಧ್ಯವಿರುವಂತಹ ಗವಾಕ್ಷಗಳನ್ನು ಹೊಂದಿಸಿಕೊಳ್ಳಬೇಕು. ಬಹಿರಂಗದಲ್ಲಿರುವ ಬೇನೆ-ಬೇಸರಗಳನ್ನು ಕಾಣುತ್ತಾ ಹೋದಂತೆ ವ್ಯಕ್ತಿಗೆ ತನ್ನೊಳಗಿನ ಚಿಂತೆ ಕ್ಷುಲ್ಲಕವೆನ್ನಿಸಬಹುದು. ಅಥವಾ ಇತರರ ನೋವುಗಳನ್ನು ಕಂಡು ಸ್ಪಂದಿಸ ತೊಡಗಿದರೆ ಆಂತರ್ಯದ ಕ್ಷೋಭೆಗೆ ಪರಿಹಾರ ದೊರೆಯಬಹುದು. ಜೀವನವೇ ಹೋರಾಟ, ಅದರಲ್ಲಿ ಕ್ರಿಯಾಶೀಲರಾಗಿದ್ದರಷ್ಟೇ ಸಂತೃಪ್ತಿ ಹೃದಯಕ್ಕಿಳಿಯುತ್ತದೆ. ಸೃಜನಾತ್ಮಕ ಕೆಲಸಗಳಲ್ಲಿ ಪಾಲ್ಗೊಳ್ಳಬೇಕು. ಯಾವ ಕಾರ್ಯದಲ್ಲಿ ತೊಡಗಿಸಿಕೊಂಡರೆ ಜೀವವು ನಿರಾಳತೆಯನ್ನು ಅನುಭವಿಸುತ್ತದೋ ಆ ಪ್ರವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಅನುಭವದ ಪರಿಧಿ ವಿಶಾಲವಾಗುತ್ತಾ ಹೋದಂತೆ ಅರಿವು ಬೆಳೆಯುತ್ತದೆ. ತನ್ಮೂಲಕ ಜೀವನದ ಪ್ರತಿ ಸನ್ನಿವೇಶ ಅರ್ಥವಾಗುತ್ತದೆ. ಚಿಂತೆ ಎಂದರೆ ಆಂತರಿಕವಾಗಿ ಅನುಭವಿಸುವ ಶೂನ್ಯತೆ. ಈ ಶೂನ್ಯವನ್ನು ತುಂಬುವುದಕ್ಕಾಗಿ ಮೋಜು-ಮಸ್ತಿಗಳಲ್ಲಿ ಕಳೆದುಹೋಗುವ, ಕ್ಷಣಿಕ ಸಂತೋಷಗಳನ್ನು ಬೆನ್ನಟ್ಟಿ ಹೊರಡುವ ಅವಿವೇಕ ಸರಿಯಲ್ಲ. ಸಮಾಜದಿಂದ ಪ್ರತ್ಯೇಕವಾಗಿ ಉಳಿಯುವ, ತಡೆಗೋಡೆ ನಿರ್ವಿುಸಿಕೊಂಡು ಒಂಟಿಯಾಗುಳಿಯುವುದು ಸರಿಯಲ್ಲ. ಚಿಂತೆ ಮಾಡುತ್ತಾ ಕುಳಿತರೆ ಪರಿಹಾರವೆಂದಿಗೂ ದೊರೆಯದು, ನಡೆದು ಹೋದದ್ದನ್ನು ನೆನಪಿಸಿಕೊಂಡು ದುಃಖಿಸುವುದು ಎಡವಿದಲ್ಲೇ ಬಿದ್ದು ಒದ್ದಾಡಿದಂತೆ. ಜೀವನವು ಹರಿಗಡಿಯದೆಯೇ ಹರಿಯಬೇಕಾದರೆ ಸಮಚಿತ್ತದಿಂದ ಬಾಳುವುದು ಅಭ್ಯಾಸವಾಗಬೇಕು. ನಿಯಾಮಕ ಶಕ್ತಿಯೊಂದು ಜೀವನವನ್ನು ಕಾಪಾಡುತ್ತಿದೆ, ಮುನ್ನಡೆಸುತ್ತಿದೆ, ನಾವು ನಿಮಿತ್ತ ಮಾತ್ರ ಎಂಬ ಅಚಲ ನಂಬಿಕೆಯಿಂದಾಗಿ ಜೀವನೋತ್ಸಾಹವು ಮೈಗೂಡುತ್ತದೆ. ಅಹಂಕಾರ-ಮಮಕಾರವನ್ನು ಕಳೆದುಕೊಂಡು ವ್ಯಕ್ತಿಯು ಪ್ರೇಮಸ್ವರೂಪನಾಗುತ್ತಾನೆ. ಆತ್ಮವು ಪರಿಷ್ಕರಿಸಲ್ಪಟ್ಟು ಔನ್ನತ್ಯಕ್ಕೇರುತ್ತದೆ.

    ಎರಡೂ ಕೈಯಲ್ಲಿ ಚೀಲ ಹಿಡಿದುಕೊಂಡು ಅಂಗಡಿಯಿಂದ ಹೊರಬಿದ್ದ ವೃದ್ಧನ ಮೇಲೆ ಹಲ್ಲೆ; ಬ್ಯಾಗ್​​ನಲ್ಲಿದ್ದ ಬಿಳಿ ಬಣ್ಣದ ‘ಅಮೂಲ್ಯ’ ವಸ್ತುವೇ ಇದಕ್ಕೆ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts