Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ಸಿಎಂ ಬುಡದಲ್ಲೇ – 5,500 ಕೋಟಿ ರೂ ಅಕ್ರಮ ಗಣಿಗಾರಿಕೆ!

Sunday, 14.01.2018, 3:05 AM       No Comments

ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗು ತ್ತಿರುವ ಸಂದರ್ಭದಲ್ಲೇ ಮತ್ತೊಂದು ಗಣಿ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚ ಲನ ಮೂಡಿಸುವ ಸಾಧ್ಯತೆ ದಟ್ಟವಾಗಿದೆ.

ಸರ್ಕಾರದ ಸಂಸ್ಥೆಯಾದ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಮೂಲಕ 5,500 ಕೋಟಿ ರೂ. ಮೌಲ್ಯದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಆರೋಪಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆ ವಿರುದ್ಧವೇ ತೊಡೆ ತಟ್ಟಿ ಬಳ್ಳಾರಿಗೆ ಪಾದಯಾತ್ರೆ ಮಾಡಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಕೂಡಲೇ ಈ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ಸವಾಲು ಹಾಕಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು 14 ಪುಟಗಳ ದಾಖಲೆಗಳನ್ನೂ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ಬಹಿರಂಗ ಪಡಿಸಿದ್ದಾರೆ. ಎಂಎಂಎಲ್ ಅಧಿಕಾರಿಗಳ ತಂಡ ನಡೆಸಿದ್ದ ಆಂತರಿಕ ತನಿಖೆಯ ವರದಿ ಉಲ್ಲೇಖಿಸಿದ ಅವರು, ಅಕ್ರಮದಲ್ಲಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಭಾಗಿಯಾಗಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

ಒಪ್ಪಂದಕ್ಕೆ ಮುನ್ನ ಅದಿರು ಅಗೆತ: ಸುಬ್ಬರಾಯನಹಳ್ಳಿ ಗಣಿ ಗುತ್ತಿಗೆಯನ್ನು ಮೆ. ಮುಚಂಡಿ ಇಂಜಿನಿಯರ್ಸ್ ಸಂಸ್ಥೆಗೆ ಉತ್ಖನನಕ್ಕೆ ನೀಡಿದ್ದರೆ, ಮೆ.ಅಮಿತ್ ಅರ್ಥ್ ಮೂವರ್ಸ್​ಗೆ ಡ್ರಿಲ್ಲಿಂಗ್​ಗೆ ಹಾಗೂ ಮೆ. ವಿಶಾಲ್ ಎಂಟರ್​ಪ್ರೖೆಸಸ್ ಅವರಿಗೆ ಕ್ರಷಿಂಗ್ ಮತ್ತು ಸ್ಕ್ರೀನಿಂಗ್​ಗಾಗಿ 2014 ನವೆಂಬರ್ 27ರಿಂದ 2017 ಮಾರ್ಚ್ 31ರ ವರೆಗೆ ರೈಸಿಂಗ್ ಕಾಂಟ್ರಾಕ್ಟ್​ಗೆ ನೀಡಲಾಗಿದೆ. ಇದೇ ರೀತಿ ತಿಮ್ಮಪ್ಪನ ಗುಡಿ ಐರನ್ ಓರ್ ಗಣಿಯನ್ನು 2014 ನವೆಂಬರ್ 27ರಿಂದ 2017 ಮಾರ್ಚ್ 31ರ ವರೆಗೆ ಮೆ.ಸೌತ್ ವೆಸ್ಟ್ ಮೈನಿಂಗ್ ಲಿಮಿಟೆಡ್, ಜೆಎಸ್​ಡಬ್ಲ್ಯು ಬಳ್ಳಾರಿಯವರಿಗೆ ಎಕ್ಸವೇಷನ್​ಗೆ ಹಾಗೂ ವಿಶಾಲ್ ಎಂಟರ್ ಪ್ರೖೆಸಸ್​ಗೆ ಡ್ರಿಲ್ಲಿಂಗ್,ಕ್ರಷಿಂಗ್ ಮತ್ತು ಸ್ಕ್ರೀನಿಂಗ್​ಗಾಗಿ ಮೈಸೂರು ಮಿನರಲ್ಸ್ ಸಂಸ್ಥೆ ರೈಸಿಂಗ್ ಕಾಂಟ್ರಾಕ್ಟ್ ಒಪ್ಪಂದ ಮಾಡಿಕೊಂಡಿದೆ ಎಂದರು.

ಮೈಸೂರು ಮಿನರಲ್ಸ್​ನೊಂದಿಗೆ 2014 ನವೆಂಬರ್ 27ರಂದು ಎಕ್ಸವೇಷನ್ ಒಡಂಬಡಿಕೆಗೆ ಸಹಿ ಮಾಡಿದ ಮೆ. ಎಸ್.ಎಸ್. ಮುಚಂಡಿ ಇಂಜಿನೀಯರ್ಸ್ ಸಂಸ್ಥೆ ಅಗ್ರಿಮೆಂಟ್​ಗೂ ಒಂದು ವಾರ ಮೊದಲೇ ಅದಿರು ತೆಗೆದಿದೆ. ಈ ಸಂಸ್ಥೆ ರೈಸಿಂಗ್ ಕಾಂಟ್ರಾಕ್ಟ್ ಪಡೆದಿರುವ ಗಣಿಗಳಲ್ಲಿ ಮೆ.ಸೌತ್ ವೆಸ್ಟ್ ಮೈನಿಂಗ್ ಕಂಪೆನಿ ಅದಿರು ತೆಗೆಯಲು ಅಧಿಕಾರಿಗಳು ಪರೋಕ್ಷ ಸಮ್ಮತಿ ನೀಡಿ ಅಕ್ರಮಕ್ಕೆ ಕಾರಣರಾಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಪುಸ್ತಕದಲ್ಲಿ ಸಹಿಯೇ ಇಲ್ಲ!

ಅದಿರು ಉತ್ಪಾದನೆ ವಹಿವಾಟು ಪುಸ್ತಕದಲ್ಲಿ ಎಂಎಂಎಲ್​ನ ಉಸ್ತುವಾರಿ ಅಧಿಕಾರಿ ಸಹಿ ಮಾಡುವುದು ಕಡ್ಡಾಯ. ಆದರೆ, 22.12.2015ರಿಂದ 31.03.2016ರ ವರೆಗಿನ ಅವಧಿಯಲ್ಲಿ ಮೈನ್ಸ್ ಪ್ರೊಡಕ್ಸನ್ ರಿಜಿಸ್ಟರ್ ಸಂಖ್ಯೆ 3ರಲ್ಲಿ ಎಂಎಂಎಲ್​ನ ಉಸ್ತುವಾರಿ ಅಧಿಕಾರಿ ಸಹಿಯನ್ನೇ ಮಾಡಿಲ್ಲ. ಜತೆಗೆ ಮಾರ್ಚ್ 2016ರ ತಿಂಗಳಿನಲ್ಲಿ ರೈಸಿಂಗ್ ಕಾಂಟ್ರಾಕ್ಟರ್ ಕೂಡ ಸಹಿ ಮಾಡಿಲ್ಲ ಎಂದು ದಾಖಲೆ ಸಮೇತ ಕುಮಾರಸ್ವಾಮಿ ಬಿಚ್ಚಿಟ್ಟರು.

2014-15ನೇ ಸಾಲಿನಲ್ಲಿ ಮೈಸೂರು ಮಿನರಲ್ಸ್ ಸಂಸ್ಥೆಯ ಅಧಿಕೃತ ದಾಖಲೆಯ ಪ್ರಕಾರ 22,90, 715 ಟನ್ ಅದಿರು ಉತ್ಪಾದಿಸಿ 8,96,000 ಮೆ.ಟನ್ ಸಂಸ್ಕರಿಸಲಾಗಿದೆ. 13,94,715 ಮೆ.ಟನ್ ಗಣಿಗಾರಿಕೆ ಮಾಡಿದ್ದರೂ ವರದಿ ಮಾಡಿಲ್ಲ.

2014-15ರಿಂದ 2016-17ರವರೆಗೆ ರಾಜ್ಯ ಸರ್ಕಾರ ಇಂಡಿಯನ್ ಬ್ಯೂರೋ ಆಫ್ ಮೈನ್ಸ್​ಗೆ ನೀಡಿದ ವರದಿ ಪ್ರಕಾರ 60,56, 440 ಮೆಟ್ರಿಕ್ ಟನ್ ಅದಿರು ಈ ಮೈನಿಂಗ್ ಗುತ್ತಿಗೆ ಪ್ರದೇಶದಲ್ಲಿ ಉತ್ಪಾದನೆಯಾಗಿದೆ. ಇದಕ್ಕೆ 3 ಪಟ್ಟು ಅದಿರು ಸೇರಿಸಿ ಪ್ರತಿ ಟನ್​ಗೆ 3 ಸಾವಿರ ರೂ.ಲೆಕ್ಕ ಹಾಕಿದರೆ ಅಕ್ರಮ ಅದಿರಿನ ಮೌಲ್ಯ 5,450ಕೋಟಿ ರು. ಮೌಲ್ಯವಾಗುತ್ತದೆ ಎಂದು ಹೇಳಿದರು.

ತುಷಾರ್ ಗಿರಿನಾಥ್ ನೇರ ಕಾರಣ

ಎಂಎಂಎಲ್​ನ ಹಾಲಿ ನಿರ್ದೇಶಕರು ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅಕ್ರಮ ಅದಿರು ಸಾಗಾಣೆ ಹಿಂದಿನ ರೂವಾರಿ. ಹಾಗಾಗಿ ಇದರಲ್ಲಿ ಮುಖ್ಯಮಂತ್ರಿಗಳು ಷಾಮೀಲಾಗಿರುವ ಸಾಧ್ಯತೆಯಿದೆ ಎಂದು ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅಕ್ರಮದ ಬಗ್ಗೆ ಕೂಡಲೇ ತನಿಖೆಗೆ ಆದೇಶಿಸಬೇಕು. ಯಾವ ತನಿಖೆ ಎಂಬುದನ್ನು ಅವರೇ ತೀರ್ವನಿಸಲಿ. ಇಲ್ಲದಿದ್ದರೆ ಜೆಡಿಎಸ್ ಈ ಹಗರಣದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಿದೆ ಎಂದು ಅವರು ಎಚ್ಚರಿಸಿದರು.

ಮುಖ್ಯಾಂಶಗಳು:

# ಜೂನ್ 2016ರಲ್ಲಿ ಉತ್ಪಾದನೆಯಾದ ಅದಿರಿನ ಒಟ್ಟು ಪ್ರಮಾಣ- 1,95,580 ಮೆ.ಟನ್.

# ಎಂಎಂಎಲ್​ನ ದಾಖಲೆಯಲ್ಲಿ ನಮೂದಿಸಿರುವುದು-65.580 ಮೆ.ಟನ್.

# 2016ರ ಜುಲೈನಲ್ಲಿ ಅದಿರು ಉತ್ಪಾದನೆಯಾಗಿದ್ದು-2,22,326 ಮೆ.ಟನ್.

# ದಾಖಲೆಗಳಲ್ಲಿ ಅಧಿಕೃತವಾಗಿ ನಮೂದಾಗಿದ್ದು – 95,630 ಮೆ.ಟನ್.

# 2014-15ನೇ ಸಾಲಿನಲ್ಲಿ ಗಣಿಗಾರಿಕೆ ಮಾಡಿದ ಒಟ್ಟು ಅದಿರಿನ ಪ್ರಮಾಣ- 22,90,715 ಮೆ. ಟನ್, ದಾಖಲೆಯಲ್ಲಿ ನಮೂದಾಗಿದ್ದು ಕೇವಲ 8,96,000 ಮೆ.ಟನ್.

# ಅನಧಿಕೃತವಾಗಿ ಸಾಗಾಣಿಕೆಯಾದ ಒಟ್ಟು ಅದಿರಿನ ಪ್ರಮಾಣ -13,94,715 ಟನ್.

ಪ್ರಾಮಾಣಿಕ ಅಧಿಕಾರಿಗಳ ಎತ್ತಂಗಡಿ!

ಎಂಎಂಎಲ್​ನ ಅಕ್ರಮವನ್ನು ಪತ್ತೆ ಹಚ್ಚಿ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡಿದ ಹೇಮಲತಾ ಎಂಬ ಅಧಿಕಾರಿಯನ್ನು ಕೆಲವೇ ದಿವಸದಲ್ಲಿ ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಮುನೀಷ್ ಮೌದ್ಗಿಲ್ ಕೂಡ ಒಂದೇ ತಿಂಗಳಲ್ಲಿ ಎತ್ತಂಗಡಿಯಾದರು. ಒಟ್ಟು 8 ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ತುಷಾರ್​ಗಿರಿನಾಥ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೌಕರ ಹರೀಶ್ ಎಂಬಾತನ ಮೂಲಕ ಈ ಎಲ್ಲ ಅಕ್ರಮಗಳನ್ನು ನಡೆಸುತ್ತಿದ್ದಾರೆ ಕುಮಾರಸ್ವಾಮಿ ಎಂದು ಆರೋಪಿಸಿದರು.

ನೆಪಕ್ಕೆ ಮಾತ್ರ ಸಚಿವ…

ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೆಪಮಾತ್ರಕ್ಕೆ ವಿನಯ ಕುಲಕರ್ಣಿ ಸಚಿವರಾಗಿದ್ದು, ಅವರನ್ನು ಸಮಾಜ ಒಡೆಯುವ ಕೆಲಸಕ್ಕೆ, ಧರ್ಮ ಪ್ರಚಾರಕ್ಕೆ ನೇಮಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಅನುಮತಿಗಿಂತ ಹೆಚ್ಚು ಮೈನಿಂಗ್

ಎಂಎಂಎಲ್​ಗೆ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನ ಗುಡಿ ಐರನ್ ಓರ್ ಮೈನ್ಸ್ ಎಂಬ 2 ಕಬ್ಬಿಣದ ಅದಿರಿನ ಗಣಿ ಗುತ್ತಿಗೆಗಳಿದ್ದು, ಈ ಕಂಪನಿ ವರ್ಷಕ್ಕೆ 30 ಲಕ್ಷ ಟನ್ ಅದಿರು ತೆಗೆಯಲು ಅನುಮತಿ ಪಡೆದಿವೆ. ಆದರೆ, 2014-15 ರಿಂದ 2016-17ರ ವರೆಗೆ ಹೆಚ್ಚುವರಿ ಯಾಗಿ 60,56,44 ಟನ್ ಅದಿರು ತೆಗೆದು ಸಾಗಣೆ ಮಾಡಿವೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಮನ ಲೆಕ್ಕ, ಕೃಷ್ಣನ ಲೆಕ್ಕ

ಜುಲೈ 2015ರಲ್ಲಿ 1, 05,820 ಮೆಟ್ರಿಕ್ ಟನ್ ಅದಿರು ಉತ್ಪಾದನೆಯಾದರೆ, ಇಲಾಖೆಯ ದಾಖಲೆಗಳಲ್ಲಿ ಕೇವಲ 52,920 ಮೆ.ಟನ್ ಅದಿರು ಉತ್ಪಾದನೆಯಾಗಿದೆ ಎಂದು ತೋರಿಸಿ, 52, 900 ಮೆ.ಟನ್ ಅದಿರನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಎಚ್​ಡಿಕೆ ದೂರಿದರು.

2015ರ ಜುಲೈ ತಿಂಗಳಿನ ಅದಿರು ಉತ್ಪಾದನೆ ರಿಜಿಸ್ಟರ್​ನಲ್ಲಿ ಪುಟ ಸಂಖ್ಯೆ 26 ಮತ್ತು 27ರ ನಡುವೆ ಪುಟ ಸಂಖ್ಯೆ 237ರಿಂದ 240ರವರೆಗಿನ 4 ಪುಟಗಳನ್ನು ಸೇರಿಸಿದ್ದಾರೆ. 2016ರ ಜನವರಿ 17 ರಿಂದ 18ರ ವರೆಗಿನ ಮೈನ್ಸ್ ಪ್ರೊಡಕ್ಸನ್ ರಿಜಿಸ್ಟರ್​ನ ಪುಟ ಸಂಖ್ಯೆ 237ರಿಂದ 240ರವರೆಗಿನ ಪುಟಗಳು ಮಾಯವಾಗಿರುವುದು ಈ ಗಣಿ ಗುತ್ತಿಗೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಪುಷ್ಟಿ ನೀಡುತ್ತಿವೆ ಎಂದು ಕುಮಾರಸ್ವಾಮಿ ತಿಳಿಸಿದರು.

Leave a Reply

Your email address will not be published. Required fields are marked *

Back To Top