Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಅದ್ಭುತ ಕನಸು, ನಿಷ್ಕಲ್ಮಶ ನಗು ಮತ್ತು ಪ್ರೀತಿಯ ಪ್ರಪಂಚ

Wednesday, 14.06.2017, 3:00 AM       No Comments

ಲ್ಲಿ ಕಾಲಿಟ್ಟ ತಕ್ಷಣವೇ ಹೊಸ ಪ್ರಪಂಚಕ್ಕೆ ಬಂದ ಅನುಭವ. ಪುಸ್ತಕದಲ್ಲಿ ನಾವೆಲ್ಲ ಓದುತ್ತೇವಲ್ಲ, ಆತ್ಮವಿಶ್ವಾಸ, ಛಲ, ಸ್ಥೈರ್ಯ, ಸಕಾರಾತ್ಮಕತೆ, ಮಾನವೀಯತೆ, ಅಂತಃಕರಣ, ಸ್ವಾವಲಂಬನೆ, ಘನತೆ… ಇವೆಲ್ಲವೂ ಅಲ್ಲಿ ಕಣ್ಣೆದುರೇ ಓಡಾಡುತ್ತಿದ್ದರೆ ಮನದಂಗಳದಲ್ಲಿ ಸಡಗರವೋ ಸಡಗರ! ಅಲ್ಲಿನ ಒಬ್ಬೊಬ್ಬ ವ್ಯಕ್ತಿಯೂ ಸ್ಪೂರ್ತಿಯ ಚಿಲುಮೆ ಅಷ್ಟೇ ಅಲ್ಲ ಯಾವುದೋ ಮಂದಿರದ ಮೂರ್ತಿಗಳಂತೆ, ಭಗವಂತನ ಮೊಗದ ಪ್ರಭೆಯಂತೆ ಕಂಡರು. ಏಕೆಂದರೆ, ಅವರೆಲ್ಲ ರಿಯಲ್ ಹೀರೋಗಳು. ಸುತ್ತಲ ಸಮಾಜ, ಜನರು ಅಷ್ಟೇಕೆ ಮನೆಯವರೂ ಕೂಡ ‘ಇದೆಲ್ಲ ನಿನ್ನಿಂದಾಗದು, ಸುಮ್ನಿರು’ ಎಂದು ತಾತ್ಸಾರ ತೋರುತ್ತ ಅವಮಾನದ ಕಣ್ಣೀರು ಜಾರಿಸಿದಾಗ ಸ್ವಾವಲಂಬನೆ, ಸಾಧನೆಯಿಂದ ಎಲ್ಲರನ್ನೂ ಬೆರಗುಗೊಳಿಸಿ ಬದುಕಿನ ದಾರಿಯನ್ನು ತೋರಿಸಿಕೊಟ್ಟವರಿವರು.

ಇಂಥದ್ದೊಂದು ಮಾನವೀಯತೆಯ, ಸ್ವಾವಲಂಬನೆಯ ದೇವಾಲಯ ಇರೋದು ಬೆಂಗಳೂರಿನ ರಾಜಾಜಿನಗರದ ಕೈಗಾರಿಕಾ ಪ್ರದೇಶದಲ್ಲಿ. ವಿಂಧ್ಯಾ ಇ-ಇನ್ಪೋಮೀಡಿಯಾ ಅದರ ಹೆಸರು. ಇಲ್ಲಿರುವ 1400 ಸಿಬ್ಬಂದಿ ಪೈಕಿ ಶೇ.90ಕ್ಕೂ ಹೆಚ್ಚು ಜನ ಬಹುವಿಧದ ಅಂಗವೈಕಲ್ಯ ಹೊಂದಿರುವವರು. ಎರಡೂ ಕೈ ಇಲ್ಲದವರು ನೆಲದಲ್ಲೇ ಕೀಬೋರ್ಡ್ ಇಟ್ಟು ಟಪಟಪನೇ ಟೈಪಿಸುತ್ತಾರೆ, ಕಾಲೇ ಇಲ್ಲದ ವ್ಯಕ್ತಿ ಕೈಯನ್ನೇ ಕಾಲಾಗಿಸಿಕೊಂಡು ಸರಸರನೇ ಕೆಲಸ ಮಾಡುತ್ತಾರೆ. ಎರಡೂ ಕಣ್ಣಿಲ್ಲದಿದ್ದರೂ ಕಂಪ್ಯೂಟರ್ ಪರದೆ ಮೇಲೆ ಬರುವ ಸೂಚನೆಗಳನ್ನು ಗ್ರಹಿಸುತ್ತ, ಗ್ರಾಹಕರೊಡನೆ ಸಂರ್ಪಸುತ್ತ ಕಾಲ್ ಸೆಂಟರನ್ನು ವೃತ್ತಿಪರವಾಗಿ ನಿರ್ವಹಿಸುತ್ತಾರೆ. ಮಾತು ಬರದವರು ಡೇಟಾ ಎಂಟ್ರಿ ಮಾಡಿದರೆ, ಆಟಿಸಂ ಹೊಂದಿದವರು ತಾವೇನು ಕಡಿಮೆ ಎಂಬಂತೆ ಯಾವುದಾದರೊಂದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಪುಟ್ಟದಾಗಿ ಹುಟ್ಟಿಕೊಂಡ ವಿಂಧ್ಯಾ ಇಂದು ವಿಂಧ್ಯಪರ್ವತದಂತೆಯೇ ಎತ್ತರಕ್ಕೆ ಬೆಳೆದಿರುವ ಹಿಂದೆ ಸ್ವಾರಸ್ಯಕರ ಕಥೆ ಇದೆ, ಒಬ್ಬ ಹೆಣ್ಣಿನ ಆತ್ಮಬಲವಿದೆ. ಸಣ್ಣ ವಯಸ್ಸಲ್ಲೇ ನಾಯಕತ್ವ, ಮಮತೆ, ಮಾನವೀಯತೆ, ಸ್ವಾವಲಂಬನೆಯ ಗುಣಗಳನ್ನು ಮೈವೆತ್ತುಕೊಂಡಿರುವ ಈ ಶಕ್ತಿಯ ಹೆಸರು ಪವಿತ್ರಾ ವೈ.ಎಸ್. 21-22ನೇ ವಯಸ್ಸಲ್ಲಿ ಲೈಫನ್ನು ಎಂಜಾಯ್ ಮಾಡೋದು ಹೇಗೆ ಎಂಬ ಚಿಂತೆಯಲ್ಲೇ ಬಹುತೇಕರು ಮುಳುಗಿರುವಾಗ ಈಕೆ ವಿಶಿಷ್ಟವಾದದ್ದು ಏನಾದರೂ ಮಾಡಬೇಕು ಎಂಬ ಕನಸು ಹೆಣೆಯುತ್ತಿದ್ದರು. ಕನಸುಗಳಿಗೆ ಇನ್ನೂ ಬಣ್ಣ ತುಂಬುತ್ತಿರುವ ಹೊತ್ತಲ್ಲೇ ತಂದೆ ವಿಧಿವಶರಾದರು. ಆಗಷ್ಟೇ ಬಿ.ಕಾಂ. ಪದವಿ ಮುಗಿದಿತ್ತು. ಮನೆಯವರು ಮದುವೆ ಮಾಡಿದರು. ಹೊಸ ಜೀವನ ಆರಂಭವಾಯಿತು. ಪತಿ ಅಶೋಕ್​ಗಿರಿ ಡಿ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಪತ್ನಿಯ ಕನಸುಗಳಿಗೆ ಬೆಂಬಲವಾಗಿ ನಿಂತರು. ಸ್ವಯಂಉದ್ಯೋಗ ಆರಂಭಿಸಿ ಸ್ವಾವಲಂಬಿ ಬಾಳು ರೂಪಿಸಿಕೊಳ್ಳಬೇಕೆಂಬ ಆಶಯ ಪವಿತ್ರಾರದ್ದು. ಆದರೆ, ಏನು ಮಾಡೋದು ಎಂಬ ಯೋಚನೆ ಕಾಡುತ್ತಿತ್ತು.

ಅದೆಷ್ಟೋ ಅಂಗವಿಕಲರು ಉನ್ನತ ಶಿಕ್ಷಣ ಪಡೆದರೂ ಉದ್ಯೋಗಕ್ಕಾಗಿ ಪರದಾಡುವುದು ಗೋಚರಿಸಿತು. ಅಲ್ಲದೆ, ಬಿಪಿಒ ತರಬೇತಿ ಕೇಂದ್ರಗಳು ಅಭ್ಯರ್ಥಿಗಳಿಂದ ಸದಾ ತುಂಬಿ ತುಳುಕುತ್ತಿರುವುದು ಅರಿವಿಗೆ ಬಂತು. ಅದು 2006ನೇ ವರ್ಷ. ಒಂಭತ್ತು ತಿಂಗಳ ಹೆಣ್ಣುಮಗು ಕಂಕುಳಲ್ಲಿತ್ತು. ಅಂಗವಿಕಲರನ್ನೇ ಜತೆಯಾಗಿಸಿಕೊಂಡು ವೃತ್ತಿಪರ ಸಂಸ್ಥೆ ಕಟ್ಟೋಣ, ಬಿಪಿಒ ಆರಂಭಿಸೋಣ ಎಂಬ ಸಂಕಲ್ಪದಿಂದ ‘ವಿಂಧ್ಯಾ’ ಜನಿಸಿದಳು. ಆರಂಭದಲ್ಲಿ ಎಡರುತೊಡರುಗಳು, ‘ಏನೋ ಮಾಡಲು ಹೊರಟಿದ್ದಾಳೆ, ಎಲ್ಲಿ ಲಾಸ್ ಆಗುತ್ತೋ’ ಎಂಬ ಅನುಮಾನಗಳು ಹತ್ತಿರದವರಿಂದಲೇ ವ್ಯಕ್ತವಾದವು. ನಿಜಕ್ಕೂ ಅದು ಸವಾಲಾಗಿತ್ತು. ಅಂಗವಿಕಲರಿಗೆ ಶೈಕ್ಷಣಿಕ ಅರ್ಹತೆ ಇದ್ದರೂ ಅವರನ್ನು ಉದ್ಯೋಗಕ್ಕೆ ಅಣಿಯಾಗಿಸಿ, ಕೆಲಸದ ಗುಣಮಟ್ಟದಲ್ಲಿ ರವೆಯಷ್ಟೂ ಕಡಿಮೆಯಾಗದಂತೆ ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ. ಪತಿ ಉಳಿತಾಯದಲ್ಲಿ ಸಂಗ್ರಹಿಸಿಟ್ಟ 5 ಲಕ್ಷ ರೂ. ಹೂಡಿಕೆ ಮಾಡಿಯಾಯ್ತು. ಆರಂಭದ ದಿನಗಳಲ್ಲಿ ಸಂಬಳ ಕೊಡಲು ಕಷ್ಟವಾದರೂ ಸಿಬ್ಬಂದಿಯೆಲ್ಲ ಮನೆಯ ಸದಸ್ಯರಂತೆ ಆಗಿಬಿಟ್ಟಿದ್ದರು. ‘ಸಂಬಳ ಲೇಟಾದ್ರೂ ಅಡ್ಡಿ ಇಲ್ಲ. ಉಳಿಯಲು ವ್ಯವಸ್ಥೆ ಮಾಡಿ ಕೊಡಿ ಮೇಡಂ’ ಎಂದಾಗ ಆಫೀಸಿನ ಕಾನ್ಪರೆನ್ಸ್ ರೂಮ್ ಸಂಜೆ ನಂತರ ವಾಸ್ತವ್ಯದ ಕೋಣೆಯಾಗಿ ಬದಲಾಯಿತು. ಎರಡು ವರ್ಷ ಪವಿತ್ರಾ ಒಬ್ಬರೇ ಸಂಸ್ಥೆಯ ನೊಗಹೊತ್ತರು. 2008ರಲ್ಲಿ ಪತಿ ಅಶೋಕ್​ಗಿರಿ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿಗೆ ಸಂಸ್ಥೆಯೊಂದಿಗೆ ತೊಡಗಿಸಿಕೊಂಡರು. ಕ್ರಮೇಣ ಸಿಬ್ಬಂದಿ ಸಂಖ್ಯೆ, ಪ್ರಾಜೆಕ್ಟ್​ಗಳು, ವರ್ತಕರು ಹೆಚ್ಚತೊಡಗಿದರು. ಪ್ರಸಕ್ತ, ಏರ್​ಟೆಲ್, ಕೆನರಾ ಬ್ಯಾಂಕ್, ಎಸ್​ಎಪಿ, ಯಾಹೂ, ಟೈಟನ್, ಇಂಡಸ್​ಇಂಡ್ ಬ್ಯಾಂಕ್, ವಿಪ್ರೋ, ಮೆಟ್​ಲೈಫ್ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ ‘ವಿಂಧ್ಯಾ’ (ಸಂಪರ್ಕಕ್ಕಾಗಿ: ಡಿಡಿಡಿ.ಡಜ್ಞಿಛಜಢಚಜ್ಞಿ್ಛ.ಟಞ ಮಿಂಚಂಚೆ:ಜ್ಞಿ್ಛಃಡಜ್ಞಿಛಜಢಚಜ್ಞಿ್ಛ.ಟಞ ದೂರವಾಣಿ ಸಂಖ್ಯೆ: 080-4127 9201) ಸೇವೆ ಒದಗಿಸುತ್ತಿದೆ.

ಎಲ್ಲ ಸಿಬ್ಬಂದಿ ಅಂಗವಿಕಲ ಎಂಬ ಟ್ಯಾಗ್ ಕಳಚಿಕೊಂಡು ಆತ್ಮವಿಶ್ವಾಸದಿಂದ ಬದುಕುತ್ತಿದ್ದಾರೆ. ಅವರ ದುಡಿಮೆ, ಸಂಬಳ ಕುಟುಂಬದವರಿಗೆ ಆಸರೆಯಾಗುವ ಜತೆಗೆ ಬದುಕು ಕಟ್ಟಿಕೊಂಡಿರುವ ಪರಿ ಸ್ಪೂರ್ತಿದಾಯಕ. ಮುಖ್ಯವಾಗಿ, ಇಡೀ ಬಿಪಿಒವನ್ನು ವೃತಿಪರವಾಗಿ ಕಟ್ಟಲಾಗಿದ್ದು, ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡಲಾಗುತ್ತಿದೆ. ಅಲ್ಲದೆ, ಆಯಕಟ್ಟಿನ ಹುದ್ದೆಗಳ ನಿರ್ವಹಣೆಗೂ ಅಣಿಯಾಗುವಂತೆ ತರಬೇತಿ ಮೂಲಕ ಇವರನ್ನೇ ತಯಾರು ಮಾಡಲಾಗುತ್ತಿದೆ. ಒಂದೇ ಕೈ ಹೊಂದಿರುವ ಗಜೇಂದ್ರ ಖಾಂಡ್ವೇಕರ್ ಹಲವು ವರ್ಷ ಕೆಲಸಕ್ಕೆ ಅಲೆದಲೆದು ‘ವಿಂಧ್ಯಾ’ದಲ್ಲಿ ಸೇರಿಕೊಂಡರು. ಇದೀಗ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆವರೆಗೂ ತಲುಪಿರುವ ಅವರು ‘ಈ ಸಂಸ್ಥೆ ಮತ್ತು ಪವಿತ್ರಾ ಅವರು ಬರೀ ನಮ್ಮ ಬದುಕು ರೂಪಿಸಿಲ್ಲ. ಸಾರ್ಥಕವಾಗಿ ಬಾಳುತ್ತ ಇತರರ ಬದುಕನ್ನು ಕಟ್ಟಿಕೊಡುವುದನ್ನೂ ಹೇಳಿಕೊಟ್ಟಿದ್ದಾರೆ’ ಎಂದು ಭಾವಪೂರ್ಣವಾಗಿ ಹೇಳುವಾಗ ಮುಖದಲ್ಲಿ ಸಂತೃಪ್ತಿಯ ಹೊಳಪು ಕಾಣುತ್ತಿತ್ತು. ಇವರಂತೆ ಹಲವರು ಟೀಮ್ ಲೀಡರ್​ಗಳಾಗಿದ್ದಾರೆ, ಹಲವು ವಿಭಾಗದ ಕೆಲಸ ನೋಡಿಕೊಳ್ಳುತ್ತಿದ್ದಾರೆ.

‘ಎಲ್ಲರಿಗೂ ಒಂದಲ್ಲ ಒಂದು ಬಗೆಯ ವೈಕಲ್ಯ(ಕೊರತೆ) ಇದ್ದೇ ಇರುತ್ತದೆ. ಆದರೆ, ದೈಹಿಕ ಅಂಗವಿಕಲತೆ ಹೊಂದಿದವರಿಗೆ ತಮ್ಮ ಕೊರತೆ ಯಾವುದು ಎಂಬುದು ಗೊತ್ತಿರುತ್ತದೆ. ನಮ್ಮಂಥವರಿಗೆ ಅದೂ ಗೊತ್ತಿರುವುದಿಲ್ಲ. ಅಂಗವಿಕಲರು ಘನತೆಯಿಂದ, ನಮ್ಮೊಡನೆ ಬಾಳುವಂತೆ ಮಾಡಬೇಕು. ಅವರಿಗೆ ಎಲ್ಲ ಸಾಮರ್ಥ್ಯ ಇದೆ. ಅವಕಾಶ ಬೇಕಷ್ಟೇ. ಇಷ್ಟು ದೊಡ್ಡ ಕಂಪನಿ ನಮ್ಮಿಂದ ಆಗಿದ್ದಲ್ಲ. ಈ ಎಲ್ಲ ಸಿಬ್ಬಂದಿಯ ಕಾರ್ಯಕ್ಷಮತೆ ಹಾಗೂ ಸೃಜನಶೀಲತೆಯಿಂದ ಆಗಿರುವಂಥದ್ದು. ಸಮಾಜದ ಮಾನಸಿಕತೆ, ಚಿಂತನೆ ಬದಲಾದರೆ ಯಾವುದೇ ಅಂಗವಿಕಲರು ಶಿಕ್ಷಣ, ಕೆಲಸಕ್ಕಾಗಿ ಪರದಾಡಬೇಕಿಲ್ಲ’ ಎಂದು ಹೇಳುವ ಪವಿತ್ರಾ ಅವರು ಕೆಲ ವಿಧವೆಯರು ಹಾಗೂ ವಿಚ್ಛೇದಿತ ಬಡ ಮಹಿಳೆಯರಿಗೂ ಆಶ್ರಯ ಕೊಟ್ಟಿದ್ದಾರೆ. ಎಲ್ಲ ಸಿಬ್ಬಂದಿಗೆ ಸಾಂಕೇತಿಕ ಶುಲ್ಕದಲ್ಲಿ ವಸತಿ ಸೌಲಭ್ಯ, ಕ್ಯಾಂಟೀನ್ ಸೌಲಭ್ಯ ಕಲ್ಪಿಸಿದ್ದಾರೆ. ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ಬಹುತೇಕ ರಾಜ್ಯಗಳ ಅಂಗವಿಕಲರು ಇಲ್ಲಿ ಒಂದು ಕುಟುಂಬದಂತೆ ಬದುಕುತ್ತ ಪ್ರೀತಿಯ ಪ್ರಪಂಚ ಕಟ್ಟಿಕೊಂಡಿದ್ದಾರೆ. ಹೈದರಾಬಾದ್​ನಲ್ಲೂ ಇತ್ತೀಚೆಗಷ್ಟೇ ಹೊಸ ಶಾಖೆ ಆರಂಭಿಸಲಾಗಿದ್ದು, ಅಲ್ಲೂ ಹತ್ತಾರು ಅಂಗವಿಕಲರಿಗೆ ಉದ್ಯೋಗ ಕಲ್ಪಿಸಲಾಗಿದೆ.

‘ಪ್ರಪಂಚದಲ್ಲಿ ಉತ್ತಮ ಹಾಗೂ ಸುಂದರವಾದ ವಸ್ತುವನ್ನು ನೋಡಲು ಅಥವಾ ರ್ಸ³ಸಲು ಸಾಧ್ಯವಿಲ್ಲ. ಅದನ್ನು ಹೃದಯದಿಂದಲೇ ಅನುಭವಿಸಬೇಕು’ ಎಂಬ ಹೆಲನ್ ಕೆಲರ್ ಮಾತಿನಂತೆ ಪವಿತ್ರಾ ಅವರು ಅಂಗವಿಕಲರ ಶಕ್ತಿ-ಸಾಮರ್ಥ್ಯವನ್ನು ಹೃದಯದಿಂದಲೇ ಅರಿತರು. ತಾವು ಕಂಡ ಕನಸನ್ನು ಸಾಕಾರಗೊಳಿಸುವ ಹಾದಿಯಲ್ಲಿ ಬಂದ ಸವಾಲುಗಳನ್ನು ನಿವಾರಿಸಿದರು. ಬದ್ಧತೆ ಹೇಗಿರಬೇಕು ಎಂಬುದಕ್ಕೆ ಉದಾಹರಣೆ ನೋಡಿ-ಪವಿತ್ರಾ ಅವರಿಗೆ ಎರಡನೇ ಹೆಣ್ಣುಮಗು ಆದಾಗ ಕಂಪನಿಯ ಕಾರ್ಯಚಟುವಟಿಕೆಗಳು ವೇಗ ಪಡೆದಿದ್ದವು. ಅದಕ್ಕೆಂದೇ, 15 ದಿನದ ಮಗುವಿನೊಂದಿಗೆ ಆಫೀಸಿಗೆ ಬಂದು ಕೆಲಸದಲ್ಲಿ ತಲ್ಲೀನರಾದರು. ಮಗು ಅತ್ತಾಗ ಹಾಲು ಉಣಿಸಿ, ಮಲಗಿಸಿ ಮತ್ತೆ ಕೆಲಸವೆಂಬ ಧ್ಯಾನದಲ್ಲಿ ತೊಡಗುತ್ತಿದ್ದರು. ಆರಂಭದ ದಿನಗಳಲ್ಲಿ ಮಾತುಬಾರದ ಹುಡುಗಿಯೊಬ್ಬಳು ಬಂದು ಕೆಲಸ ಕೇಳಿದಾಗ ‘ಕ್ಷಮಿಸು ಸೈನ್ ಲಾಗ್ವೆಂಜ್ ನಮ್ಮಲ್ಲಿನ್ನೂ ಕಲಿತಿಲ್ಲ. ನೀನು ಹೇಳುವುದು ನಮಗೆ ಅರ್ಥವಾಗುವುದು ಹೇಗೆ?’ ಎಂದು ಪವಿತ್ರಾ ಪ್ರಶ್ನಿಸಿದಾಗ ಆ ಹುಡುಗಿ ‘ನೀವು ನನಗೆ ಕೆಲಸ ಕಲಿಸಿಕೊಡಿ, ನಾನು ನಿಮಗೆ ಸೈನ್ ಲಾಂಗ್ವೇಜ್ ಕಲಿಸುತ್ತೇನೆ’ ಎಂದಳು. ಆಕೆಗೆ ಕೆಲಸ ನೀಡಿ, ಅವಳಿಂದ ಸೈನ್ ಲಾಂಗ್ವೇಜ್ ಕಲಿತ ಪವಿತ್ರಾ ಇಂದು ಇದನ್ನೇ ವಿಂಧ್ಯಾದ ಆಡಳಿತ, ವ್ಯಾವಹಾರಿಕ ಭಾಷೆಯಾಗಿಸಿದ್ದಾರೆ.

ಎಲ್ಲ ಹಬ್ಬ, ಉತ್ಸವ, ಸಂತಸಗಳನ್ನು ಈ ತುಂಬು ಕುಟುಂಬ ಒಟ್ಟಾಗಿ ಆಚರಿಸುತ್ತದೆ. ತಿಂಗಳಿಗೊಮ್ಮೆ ‘ಕಾಫಿ ವಿತ್ ಪವಿತ್ರಾ’ ಕಾರ್ಯಕ್ರಮದ ಮೂಲಕ ಹೊಸದಾಗಿ ಸೇರ್ಪಡೆಯಾದ ಸಿಬ್ಬಂದಿಯೊಡನೆ ಮುಖಾಮುಖಿಯಾಗುತ್ತಾರೆ. ಅವರೆಲ್ಲರ ತಾಯಿಯಂತೆ ದುಃಖಕ್ಕೆ ಮುಲಾಮು ಹಚ್ಚುತ್ತಾರೆ, ಸಂತಸಕ್ಕೆ ಗರಿ ಮೂಡಿಸುತ್ತಾರೆ. ‘ಅಂಗವಿಕಲರು ಘನತೆಯ ಬಾಳು ಬದುಕಬೇಕು. ಅದಕ್ಕಾಗಿ ಅವರು ದುಡಿಮೆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ನಮ್ಮ ಸಂಸ್ಥೆ ಇಂಥವರಿಗೆ ಕೆಲಸ ನೀಡಲು ಸಿದ್ಧ. ದೇಶದ ಯಾವುದೇ ಭಾಗದ ಅಂಗವಿಕಲರು ಇಲ್ಲಿ ಬಂದು ಕೆಲಸ ಮಾಡಬಹುದು’ ಎನ್ನುವ ಪವಿತ್ರಾ 2020ರ ಹೊತ್ತಿಗೆ 5 ಸಾವಿರ ಸಿಬ್ಬಂದಿ ಹೊಂದುವ ಗುರಿ ಇರಿಸಿಕೊಂಡಿದ್ದಾರೆ.

ಹೆಣ್ಣನ್ನು ಶಕ್ತಿಯ ಪ್ರತೀಕವಾಗಿ ಕಾಣುತ್ತದೆ ನಮ್ಮ ಸಂಸ್ಕೃತಿ. ಪವಿತ್ರಾ ಅವರ ಆ ಪ್ರೇರಣೆಯ ಮಾತು, ಕೆಲಸ ಕಂಡಾಗ ಆ ಶಕ್ತಿ ಎಷ್ಟೆಲ್ಲ ರೂಪಗಳಲ್ಲಿ ಆವಿರ್ಭಾವವಾಗಿದೆಯಲ್ಲ ಎಂಬ ಸಂತಸ ಅರಳುತ್ತಿರುವಾಗಲೇ ಅವರ ನಗುಮುಖದಲ್ಲಿ ಸಾರ್ಥಕತೆಯ ನೂರು ಭಾವಗಳು ಕಂಡವು. ಇದು ಹೃದಯದಿಂದ ಮಾಡುವ ಕೆಲಸದ ಶಕ್ತಿ, ಹೆಣ್ಣೊಬ್ಬಳ ಅಂತಃಕರಣದ ಶಕ್ತಿ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top