Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಬಾಕಿದೆಲ್ಲ ಬಿಡ್ರಿ, ಜೀವನದಿಂದ ಏನ್ ಪಾಠ ಕಲಿತ್ರಿ ಹೇಳ್ರಲ್ಲ…

Wednesday, 14.02.2018, 3:03 AM       No Comments

| ರವೀಂದ್ರ ಎಸ್. ದೇಶಮುಖ್​

ಕಳೆದ ಅಂಕಣದಲ್ಲಿ, ಮಾತು ಹೇಗೆ ಬದುಕು ಕಟ್ಟುತ್ತೆ ಎಂದು ವಿವರಿಸಿದ್ದೆ. ಹ್ಯೂಮನ್ ಲೈಬ್ರರಿಯ ಪರಿಕಲ್ಪನೆ ಮತ್ತು ಸಾಧಕರ ಮಾತುಗಳನ್ನು ಜಗತ್ತಿಗೆ ತೆರೆದಿಡುವ ಹಲವು ಕಾರ್ಯಕ್ರಮಗಳು ‘ನಮ್ ಕತೆ ಯಾರೂ ಕೇಳೋರಿಲ್ಲ’ ಎಂಬ ಕೊರಗಿಗೆ ಮದ್ದಾಗುತ್ತಿರುವ ಪರಿಯನ್ನು ನೋಡಿದೆವು. ಮಾತಿಗೆ ಎಷ್ಟು ಶಕ್ತಿ ಇದೆಯೋ ಕೇಳಿಸಿಕೊಳ್ಳುವಿಕೆಗೂ ಅಷ್ಟೇ ಶಕ್ತಿಯಿದೆ. ಕೇಳಿಸಿಕೊಳ್ಳುವಿಕೆ ಎಂದರೆ ಬೆರಗು, ಅಚ್ಚರಿ, ಜ್ಞಾನ, ಕಲಿಕೆ, ಕುತೂಹಲ, ಉತ್ಸಾಹ… ಈ ಎಲ್ಲವುಗಳ ಒಂದು ಹದವಾದ ಮಿಶ್ರಣವೇ ಹೌದು. ಕೃಷ್ಣನ ಮಾತು ಅರ್ಜುನ ಕೇಳಿಸಿಕೊಂಡ, ಅದು ಭಗವದ್ಗೀತೆಯೇ ಆಯಿತು. ರಾಮಕೃಷ್ಣರ ಮಾತು ಕೇಳಿಸಿಕೊಂಡ ಸ್ವಾಮಿ ವಿವೇಕಾನಂದರು ಜಗದ್ವಂದ್ಯರಾದರು. ಅದೇ ವಿವೇಕಾನಂದರ ಮಾತು ಕೇಳಿಸಿಕೊಂಡ ಭಾರತ ಮಹಾಶಕ್ತಿಯಾಯಿತು. ಹೀಗೆ ಕೇಳಿಸಿಕೊಳ್ಳುವಿಕೆ ಎಂಬುದು ಒಂದು ಅದ್ಭುತ ಕಲೆ. ಅದಕ್ಕೆ ಅಧ್ಯಾತ್ಮದ ಸ್ಪರ್ಶವೂ ಇದೆ, ನಿತ್ಯಜೀವನಕ್ಕೆ ನೆರವಾಗಬಲ್ಲ ತಾಜಾತನವೂ ಇದೆ. ಆದರೆ, ಇವತ್ತು ಸೋಕಾಲ್ಡ್ ಧಾವಂತದ ಬದುಕಿನಲ್ಲಿ ಯಾರ ಮಾತು ಕೇಳಲು ಯಾರಿಗೂ ಪುರುಸೊತ್ತಿಲ್ಲ. ಅಪ್ಪ-ಅಮ್ಮನ ಮಾತು ಕೇಳಲು ಮಕ್ಕಳಿಗೆ ಪುರುಸೊತ್ತಿಲ್ಲ, ನೆಂಟರ, ಆತ್ಮೀಯರ ನೋವು-ನಲಿವು ಆಲಿಸುವ ತಾಳ್ಮೆ ಇಲ್ಲ.

ಪ್ರತಿಯೊಬ್ಬರೂ ಬದುಕಿನಿಂದ ಒಂದಲ್ಲ ಒಂದು ಪಾಠ ಕಲಿತಿರುತ್ತಾರೆ. ಆ ಅನುಭವದಲ್ಲಿ ಶಿಕ್ಷಣವಿದೆ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲವಿದೆ. ಕನಸುಗಳ ಸಂಭ್ರಮವಿದೆ. ಆದರೆ, ಇಡೀ ಜಗತ್ತನ್ನು ಮಾತನಾಡಿಸುವವರು ಯಾರು? ಅವರ ಮಾತುಗಳನ್ನು, ಅವರು ಕಲಿತ ಜೀವನಪಾಠವನ್ನು ಎಲ್ಲೆಡೆ ತಲುಪಿಸುವವರು ಯಾರು? ಇಂಥದ್ದೊಂದಿಷ್ಟು ಪ್ರಶ್ನೆಗಳು ಕಾಡಿದ್ದೇ ತಡ ಡೆಹ್ರಾಡೂನಿನ 25 ವರ್ಷದ ಹುಡುಗನೊಬ್ಬ ನೇಪಾಳದ ಭೂಕಂಪ ಸಂತ್ರಸ್ತರಿಂದ ಹಿಡಿದು ಸಿರಿಯಾದ ನಿರಾಶ್ರಿತರವರೆಗೆ, ಉತ್ತರಾಖಂಡದ ಹಳ್ಳಿಯಿಂದ ಹಿಡಿದು ಜರ್ಮನಿ, ಫ್ರಾನ್ಸ್​ನ

ಪಟ್ಟಣಗಳವರೆಗೆ ಓಡಾಡಿ ಎಲ್ಲರಿಗೂ ಒಂದೇ ಪ್ರಶ್ನೆ ಕೇಳುತ್ತಿದ್ದಾನೆ- ‘ಆಪ್ ಲೈಫ್ ಸೇ ಕ್ಯಾ ಸಿಖಾ’ ಹೈ? (‘ನೀವು ಜೀವನದಿಂದ ಕಲಿತದ್ದು ಏನು?’). ಹೀಗೆ ಜಗತ್ತಿನ ಒಂದು ಭಾಗದಲ್ಲಿ ದೊರೆತ ಉತ್ತರವನ್ನು ಪ್ರಪಂಚದ ಮತ್ತೊಂದು ಭಾಗಕ್ಕೆ ತಲುಪಿಸಿ ಅಲ್ಲೆಲ್ಲ ಖುಷಿ, ಸಕಾರಾತ್ಮಕ ಭಾವ ಹರಡುತ್ತಿದ್ದಾನೆ. ಎಲ್ಲರ ಜೀವನದಿಂದಲೂ ಕಲಿಯೋದಿದೆ. ಅಲ್ಲೊಂದು ಭರವಸೆಯ ಸಣ್ಣ ಸೆಲೆಯಿದೆ, ಅದು ನಮ್ಮ ಬದುಕಿಗೂ ಹುಣ್ಣಿಮೆಯಂಥ ಬೆಳಕು ನೀಡುತ್ತೆ ಎಂದೆಲ್ಲ ಮನದಟ್ಟು ಮಾಡಿಸುತ್ತಿದ್ದಾನೆ. ಹೀಗೆ ಈತನ ಕೇಳಿಸಿಕೊಳ್ಳುವ ಪರಿಗೆ ಸಾವಿರಾರು ಜೀವನಪಾಠಗಳು ದಕ್ಕಿವೆ, ಆ ಪಾಠಗಳು ಚೆಂದದೊಂದು ಬದಲಾವಣೆಯತ್ತ ಕೊಂಡೊಯ್ಯುತ್ತಿವೆ. ಪ್ರಪಂಚದಲ್ಲಿ 760 ಕೋಟಿ ಜನರಿದ್ದಾರೆ. ಅಂದರೆ 760 ಕೋಟಿ ತಪ್ಪುಗಳು ಇವೆ! ಅಂದರೆ ಅಷ್ಟೇ ಜೀವನಪಾಠಗಳು ಇವೆ. ಇವುಗಳನ್ನು ಬೆಸೆಯಬೇಕು, ಕೇಳಿಸಬೇಕು, ಹಂಚಬೇಕು, ಸಂಭ್ರಮಿಸಬೇಕು ಎನ್ನುವ ಈ ಹುಡುಗನ ಉತ್ಸಾಹಕ್ಕೆ ಲಕ್ಷಾಂತರ ದಿಲ್​ಗಳು ಫಿದಾ ಆಗಿವೆ. ನಟ ಅಮಿತಾಭ್ ಬಚ್ಚನ್ ಇವನಿಂದ ಹಾಡು ಬರೆಸಿಕೊಂಡಿದ್ದಾರೆ, ನಟ ಶಾರುಖ್ ಖಾನ್ ಈತನ ಪಕ್ಕಾ ಫ್ಯಾನ್ ಆಗಿದ್ದಾರೆ.

ದೀಪಕ್ ರಮೋಲಾ. ನೋಡಿ ಹೆಸರಲ್ಲೇ ಬೆಳಕಿದೆ. ದೀಪಕ್​ನ ತಾಯಿ ಬರೀ ಐದನೇ ಕ್ಲಾಸಿನವರೆಗೆ ಓದಿದವರು. ಹಾಗಾಗಿ, ತಾಯಿ ಮಗನಿಗೆ ಸದಾ ಹೇಳುತ್ತಿದ್ದ ಮಾತು ‘ನಾನಂತೂ ಅಕ್ಷರದ ಸುಖ ಕಾಣಲಿಲ್ಲ, ಜ್ಞಾನದ ಬೆಳಕು ಕಾಣಲಿಲ್ಲ. ನೀನು ಓದಿ ತುಂಬ ಎತ್ತರಕ್ಕೆ ಬೆಳೆಯಬೇಕು…’. ಅದೊಂದು ದಿನ ಆತ ಹುಸಿಕೋಪದಲ್ಲೇ ತಾಯಿಯನ್ನು ಕೇಳಿಬಿಟ್ಟ- ‘ಅಮ್ಮ ಸುಮ್ನಿರು, ನೀನು ಓದಿಲ್ಲದಿದ್ದರೆ ಮನೆಯ ಖರ್ಚು-ವೆಚ್ಚಗಳನ್ನು ಹೇಗೆ ಕರಾರುವಾಕ್ ಆಗಿ ಲೆಕ್ಕ ಇಡುತ್ತಿದ್ದೆ? ಸಾಹಿತ್ಯ ಓದಿಲ್ಲದಿದ್ದರೆ ನಮಗೆಲ್ಲ ಹೇಗೆ ಮಾರ್ಗದರ್ಶನ ಮಾಡುತ್ತಿದ್ದೆ?’. ಅದಕ್ಕೆ ಅಮ್ಮ ‘ಮಗು ನಾನು ಶಾಲೆಗೆ ಹೋಗಿ ಕಲಿತಿಲ್ಲ ನಿಜ. ಆದರೆ ಜೀವನದಿಂದಲೇ ಎಲ್ಲವನ್ನೂ ಕಲಿತಿದ್ದೇನೆ’ ಎಂದಾಗ ಇವನ ಕಂಗಳಲ್ಲಿ ಭರವಸೆಯ ಮಿಂಚು. ಹೌದಲ್ವ, ಪ್ರತಿಯೊಬ್ಬರು ಒಂದಲ್ಲ ಒಂದು ಪಾಠವನ್ನು ಬದುಕಿನಿಂದ ಕಲಿತಿರುತ್ತಾರೆ ಮತ್ತು ಆ ಪಾಠ ಮತ್ತೊಬ್ಬರ ನೋವಿಗೆ, ಸಂಕಷ್ಟಕ್ಕೆ ಪರಿಹಾರವಾಗಬಲ್ಲದು, ಖುಷಿಯನ್ನು ತುಂಬಬಹುದು ಎಂದುಕೊಂಡು 2014ರಲ್ಲಿ FUEL (Forward the Understanding of Every Life Lesson) ಎಂಬ ವಿಶಿಷ್ಟ ಪ್ರಯೋಗವನ್ನೇ ಆರಂಭಿಸಿದ್ದಾನೆ. ಹೀಗೆ ದೊರೆತ ಜೀವನಪಾಠಗಳನ್ನು ಕಾರ್ಯಾಗಾರ, ಉಪನ್ಯಾಸ, ಸಾಮಾಜಿಕ ಮಾಧ್ಯಮಗಳ ಮೂಲಕ ಸಮುದಾಯಕ್ಕೆ ತಲುಪಿಸುತ್ತಿದ್ದಾನೆ. ಪುಸ್ತಕವನ್ನೂ ಬರೆದಿದ್ದಾನೆ.

ಅದೊಂದು ದಿನ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ದೀಪಕ್ ಮಹಿಳೆಯೊಬ್ಬರನ್ನು ‘ನಿಮ್ಮ ಜೀವನಪಾಠ ಏನು’ ಎಂದು ಕೇಳಿದ. ಆಕೆ- ‘ನಿಮ್ಮ ಮುಖ ಪ್ರತಿದಿನ ಕನ್ನಡಿಯಲ್ಲಿ ನಿಮ್ಮನ್ನು ಸರ್​ಪ್ರೈಸ್​ಗೊಳಿಸಿದರೆ ನೀವು ಖುಷಿಯಾಗಿದ್ದೀರಿ ಎಂದರ್ಥ’ ಎಂದಳು. ಸಣ್ಣವಾಕ್ಯದಲ್ಲಿ ಜೀವನೋತ್ಸಾಹದ ಎಂಥ ದೊಡ್ಡ ಪಾಠ! ಸ್ವೀಡನ್​ನ 14 ವರ್ಷದ ಬಾಲಕ ಬಾಂಬ್​ಸ್ಪೋಟದಲ್ಲಿ ತನ್ನ ಕುಟುಂಬದ ಎಲ್ಲ ಐದು ಸದಸ್ಯರನ್ನು ಕಳೆದುಕೊಂಡಿದ್ದಾನೆ. ಈತ ಹೇಳಿದ ಮಾತೇನು ಗೊತ್ತೆ- ‘ಡಿಯರ್ ದೀಪಕ್, ಜೀವನ ತುಂಬ ಕಠಿಣ ಮತ್ತು ದುಸ್ತರ ನಿಜ. ಆದರೆ ನಂಬಿಕೆಯಿಟ್ಟು ಮುಂದೆ ಸಾಗಿದರೆ ಒಳ್ಳೇದಾಗುತ್ತೋ ಬಿಡುತ್ತೋ ಬೇರೆ ಪ್ರಶ್ನೆ. ಲೈಫ್ ಅನ್ನು ತುಂಬ ಚೆನ್ನಾಗಿ ಲೀಡ್ ಮಾಡ್ತೇವೆ. ಯಾರೂ ಇಲ್ಲದ ನಾನು ಈಗ ನನ್ನದೇ ದಾರಿಯಲ್ಲಿ ಸಾಗುತ್ತಿದ್ದೇನೆ. ನನ್ನದೇ ಪಥ, ನನ್ನದೇ ಪಯಣ, ಗುರಿ ಸಹ!’. ಪಂಜಾಬಿನ ಕಾಲೇಜೊಂದರ 300 ವಿದ್ಯಾರ್ಥಿನಿಯರಿಗೆ ಸಣ್ಣ ದರ್ಪಣ ನೀಡಿ ಅವರಿಗೆ ದೀಪಕ್ ನೀಡಿದ ಟಾಸ್ಕ್ ‘ಈ ಕನ್ನಡಿಯಲ್ಲಿ ನೋಡಿಕೊಂಡು ನಾಲ್ಕೇ ನಾಲ್ಕು ನಿಮಿಷದಲ್ಲಿ ನಿಮ್ಮ ಮುಖದಲ್ಲಿನ 40 ಸಂಗತಿಗಳನ್ನು, ಹೊಸ ಭಾವಗಳನ್ನು ಗುರುತಿಸಿ ಹೇಳಬೇಕು’. ಅಚ್ಚರಿ ಏನು ಗೊತ್ತೆ? ತುಟಿ ಅಂಚಿನಲ್ಲಿರುವ ಸಣ್ಣ ಮಚ್ಚೆ, ಕಣ್ರೆಪ್ಪೆಗಳ ಹೊಳಪು, ಕೆನ್ನೆಯಲ್ಲಿ ಮೂಡುವ ಗುಳಿ(ಡಿಂಪಲ್)…. ಇದನ್ನೆಲ್ಲ ಅವರು ಮೊದಲ ಬಾರಿ ಗಮನಿಸಿ, ಆ ಭಾವವನ್ನು ಅನುಭವಿಸಿದ್ದರು! ಒಬ್ಬ ವಿದ್ಯಾರ್ಥಿನಿ ಹೀಗೆ ಬರೆದಿದ್ದಳು- ‘ನನ್ನ ನಗು ಚೆನ್ನಾಗಿಲ್ಲ. ಅದು ನಂಗೆ ಸೂಟ್ ಆಗಲ್ಲ ಎಂದು ತಿಳಿದು ತುಂಬ ಮುಜುಗರ ಪಡುತ್ತಿದ್ದೆ. ಇವತ್ತು ಗೊತ್ತಾಯ್ತು ನನ್ನ ನಗುವಿಗೂ ಸೌಂದರ್ಯವಿದೆ, ಅದು ನನಗೆ ಚೆನ್ನಾಗಿ ಒಪ್ಪುತ್ತೆ!!’.

ಉತ್ತರಾಖಂಡದ ಟಿಹರಿ ಗಢವಾಲ್ ಪ್ರದೇಶದ ಸೌಡ್ ಎಂಬ ಹಳ್ಳಿ 600 ವರ್ಷಗಳ ಇತಿಹಾಸದ ಜತೆಗೆ ವಿಶಿಷ್ಟ ಸಂಸ್ಕೃತಿ ಹೊಂದಿದ ಗ್ರಾಮ. 2011ರಲ್ಲಿ 200 ಕುಟುಂಬಗಳಿದ್ದ ಈ ಗ್ರಾಮದಲ್ಲಿ 2017ರಲ್ಲಿ ಉಳಿದದ್ದು ಬರೀ 12 ಕುಟುಂಬಗಳು. ಬಹುತೇಕ ಕುಟುಂಬಗಳು ನಗರಪ್ರದೇಶಗಳಿಗೆ ವಲಸೆ ಹೋಗಿದ್ದವು. ದೀಪಕ್ ಹಾಗೂ ಆತನ ತಂಡ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿ, ಜೀವನಪದ್ಧತಿ ಮತ್ತು ಸಾಂಪ್ರದಾಯಿಕ ಕಲೆಗಳ ಕುರಿತಾದ ಪೇಂಟಿಂಗ್ ಅನ್ನು ಪ್ರತಿ ಮನೆಯ ಗೋಡೆ ಮೇಲೆ ರಚಿಸಿತು. 2017ರ ಜೂನ್ 1ರಿಂದ 30ರವರೆಗೆ ಪೇಂಟಿಂಗ್ ಮಾಡಿದ್ದರ ಫಲ ಸೌಡ್ ಗ್ರಾಮ ಇಂದು ‘ವಿಲೇಜ್ ಆಫ್ ಲೈಫ್ ಲೆಸನ್ಸ್’ ಎಂಬ ಗರಿಮೆ ಪಡೆದುಕೊಂಡಿದೆ. ಈ ಸಣ್ಣ ಹಳ್ಳಿಯನ್ನು, ಅಲ್ಲಿನ ಜೀವನಪಾಠಗಳನ್ನು ಅರಿಯಲು ಹಲವು ದೇಶಗಳ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಕಲೆಯ ಕೇಂದ್ರವಾಗಿ, ಪ್ರೇರಣೆಯ ಸ್ಥಳವಾಗಿದೆ. ಸಿರಿಯಾ ಬಾಂಬ್​ಸ್ಪೋಟದಲ್ಲಿ ಕಣ್ಣೆದುರೇ ನಾಲ್ಕುವರ್ಷದ ಮಗನನ್ನು ಕಳೆದುಕೊಂಡ ತಂದೆ ಆ ದುಃಖದಿಂದ ಹೊರಬರಲು ನಿರಾಶ್ರಿತ ಶಿಬಿರದ ಮಕ್ಕಳಿಗೆ ಊಟ ಒದಗಿಸುತ್ತಿದ್ದಾನೆ, ನೇಪಾಳದ ಭೂಕಂಪಪೀಡಿತ ಹಳ್ಳಿಗಳಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಮತ್ತೆ ಶಾಲೆಯತ್ತ ಮುಖ ಮಾಡಿ, ಹೊಸ ಬದುಕು ಆರಂಭಿಸಿವೆ. ಹೀಗೆ ದೇಶ-ವಿದೇಶಗಳ 70 ಸಾವಿರಕ್ಕೂ ಅಧಿಕ ಜೀವನಪಾಠಗಳನ್ನು ದೀಪಕ್ FUEL ಮೂಲಕ ತಲುಪಿಸುತ್ತಿದ್ದಾನೆ. ‘ಜ್ಞಾನಿಗಳದು ಮಾತ್ರವಲ್ಲ, ಸಾಮಾನ್ಯ ಜನರು, ಗ್ರಾಮೀಣಿಗರು, ಅನಕ್ಷರಸ್ಥರ ಅನುಭವಗಳು ಕೂಡ ಬಹು ಅಮೂಲ್ಯ. ಈ ಅನುಭವ ಮತ್ತು ಕಲಿಕೆಗಳನ್ನೇ ಸಮುದಾಯಕ್ಕೆ ತಲುಪಿಸುತ್ತಿದ್ದೇವೆ. ಅದರಿಂದ ಸಮಾಜದಲ್ಲಿ ಸಕಾರಾತ್ಮಕತೆ ಹೆಚ್ಚಿ ಬದುಕನ್ನು ನೋಡುವ, ಅನುಭವಿಸುವ ಪರಿ ಬದಲಾಗಿದೆ. ನಮಗೆ ಅಷ್ಟೇ ಸಾಕು’ ಎನ್ನುವ ದೀಪಕ್ ಬಾಲ್ಯದಿಂದಲೇ ಕವಿತೆಗಳನ್ನು ರಚಿಸಿಕೊಂಡು ಬಂದಿದ್ದಾನೆ. ಈಗ ಬಾಲಿವುಡ್​ಗೆ ಹಾಡುಗಳನ್ನು ಬರೆಯುವಲ್ಲಿ ಬಿಜಿ.

ಎಲ್ಲಕ್ಕಿಂತ ಮಹತ್ವದ ಜೀವನಪಾಠವೆಂದರೆ ‘ನೆವರ್ ಸ್ಟಾಪ್ ಬಿಲಿವಿಂಗ್’!. ಹೌದು, ನಂಬಿಕೆಯೇ ಜೀವನಕ್ಕೆ ಆಧಾರ. ಮಾನವ ಕಳ್ಳಸಾಗಾಣಿಕೆಗೆ ಗುರಿಯಾದವರು, ಭಯೋತ್ಪಾದಕರ ಅಟ್ಟಹಾಸಕ್ಕೆ ನಲುಗಿದವರು, ದೇಹ ಮಾರಿಕೊಂಡು ಬದುಕು ಸಾಗಿಸುತ್ತಿರುವವರು… ಹೀಗೆ ಇವರಿಗೆಲ್ಲ ಆಸರೆ ನಂಬಿಕೆ!! ಈ ನಂಬಿಕೆ ಕಷ್ಟಗಳನ್ನು ಸೋಲಿಸುತ್ತದೆ, ಜೀವನಾನುಭವ ಕಲಿಸುತ್ತದೆ.

ಇನ್ನೇಕೆ ತಡ, ಮೊಬೈಲ್, ಟಿವಿ ಪಕ್ಕಕ್ಕಿಡಿ; ನಿಮ್ಮ ಮನೆಯವರನ್ನು, ಆತ್ಮೀಯರನ್ನು ಒಮ್ಮೆ ಮನಬಿಚ್ಚಿ ಕೇಳಿ- ‘ಜೀವನ ನಿಮಗೆ ಕಲಿಸಿದ ಪಾಠ ಏನು?’ ಎಂದು. ಅವರ ಉತ್ತರ ನಮ್ಮ ಒಳಗಣ್ಣು ತೆರೆಸಬಹುದು. ಈಗ ಕೇಳಿಸಿಕೊಳ್ಳುವಿಕೆಗೆ ಅಣಿಯಾಗೋಣ, ಯಾವುದೋ ಜೀವನಮಂತ್ರ ನಮಗಾಗಿ ಕಾಯುತ್ತಿರಬಹುದು!!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top