Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ನನ್ನ ಹೆಸರು ಸುನಾಮಿಕಾ, ನನ್ನ ಕಥೆ ಏನೆಂದರೆ…

Wednesday, 21.03.2018, 3:05 AM       No Comments

| ರವೀಂದ್ರ ಎಸ್​. ದೇಶ​ಮುಖ್​

ಕಷ್ಟ, ಆಘಾತದ ಕ್ಷಣದಲ್ಲೂ ಸಾಂತ್ವನ, ವಿಶ್ವಾಸ ಮೂಡಿಸುವ ಮಾನವೀಯ ಹೆಜ್ಜೆಗಳನ್ನು ಇರಿಸಿದರೆ ಆ ಕ್ಷಣವನ್ನು ಗೆಲ್ಲುವ ಜತೆಗೆ ಧೈರ್ಯ ಕಳೆದುಕೊಂಡ ಸಮುದಾಯದಲ್ಲಿ ಹೊಸ ವಿಶ್ವಾಸ, ಚೈತನ್ಯ ಮೂಡಿಸಬಹುದು ಎಂಬುದಕ್ಕೆ ‘ಸುನಾಮಿಕಾ’ ಪ್ರಯೋಗ ಸಾಕ್ಷಿಯಾಗಿದೆ. ಆಪತ್ತಿನ ಸಂದರ್ಭದಲ್ಲಿ ಸ್ವಲ್ಪ ಸೃಜನಾತ್ಮಕವಾಗಿ ಪರಿಹಾರದ ಹೆಜ್ಜೆ ಇಟ್ಟರೆ ಸಿಗುವ ಫಲಿತಾಂಶ ಅದ್ಭುತ.

ನೈಸರ್ಗಿಕ ಪ್ರಕೋಪಗಳು ತಂದೊಡ್ಡುವ ಭೌತಿಕ ಹಾನಿ, ಮಾನಸಿಕ ಆಘಾತ ಇವನ್ನೆಲ್ಲ ಭರಿಸುವುದು ಸುಲಭದ ಮಾತಲ್ಲ. ಭೂಕಂಪ, ನೆರೆ, ಬರ… ಹೀಗೆ ಪ್ರಕೃತಿ ಮುನಿದಾಗಲೆಲ್ಲ ನಮ್ಮ ಪ್ರಭುತ್ವಗಳು ಅಷ್ಟೋ ಇಷ್ಟೋ ‘ಪರಿಹಾರ’ ಘೋಷಿಸಿ ಕಣ್ಣೊರೆಸುವ ತಂತ್ರ ಅನುಸರಿಸುತ್ತವೆಯೇ ಹೊರತು ಸಂತ್ರಸ್ತ ಸಮುದಾಯವನ್ನು ಸಶಕ್ತಗೊಳಿಸುವುದು ಹೇಗೆ ಎಂದು ಯೋಚಿಸುವುದೇ ಇಲ್ಲ. ಸರ್ಕಾರ ಹಂಚಿದ ಪುಡಿಗಾಸು, ಬ್ರೆಡ್ಡು-ಬಿಸ್ಕಿಟ್ಟು ನಾಲ್ಕು ದಿನದಲ್ಲಿ ಖಾಲಿಯಾಗಿ ಬಡವರು ಮತ್ತೆ ನೈರಾಶ್ಯದಿಂದ, ಶೂನ್ಯದೃಷ್ಟಿಯಿಂದ ಆಕಾಶವನ್ನು ದಿಟ್ಟಿಸುತ್ತಾರೆ, ಹಣೆಬರಹವನ್ನು ಶಪಿಸುತ್ತಾರೆ. 2004ರಲ್ಲಿ ಬಂದೆರಗಿದ ಸುನಾಮಿ ಜನಜೀವನವನ್ನು ಹೇಗೆ ತತ್ತರಗೊಳಿಸಿತು ಎಂಬ ದೃಶ್ಯಗಳು ಇಂದಿಗೂ ನಮ್ಮ ಕಣ್ಮುಂದೆ ಹಾದುಹೋಗುತ್ತವೆ.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಅರೋವಿಲ್ಲೆ (ಮಾನವೀಯ ಏಕತೆ ಸಾರುವ ಅಂತಾರಾಷ್ಟ್ರೀಯ ಟೌನ್​ಶಿಪ್)ಯ ಭಾಗದಲ್ಲಿ 2004 ಡಿಸೆಂಬರ್ 24ರ ಸುನಾಮಿ ಕರಾಳ ಅಧ್ಯಾಯವನ್ನೇ ಬರೆಯಿತು. ಸಾವಿರಾರು ಜನರ ಬದುಕನ್ನು ಕಿತ್ತುಕೊಂಡಿತು. 19 ಗ್ರಾಮಗಳ ಹನ್ನೊಂದು ಸಾವಿರ ಜನರು, ಐದು ಸಾವಿರ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಯಿತು. ಈ ಪೈಕಿ ಎರಡು ಸಾವಿರ ಕುಟುಂಬಗಳು ಜೀವನ ನಿರ್ವಹಣೆಗೆ ನಂಬಿದ್ದು ಮೀನುಗಾರಿಕೆಯನ್ನೇ. ಸುನಾಮಿಯ ಹೊಡೆತಕ್ಕೆ ಬಡ ಕುಟುಂಬಗಳು ತಮ್ಮ ದೋಣಿ, ಪುಟ್ಟ ಮನೆಯನ್ನೂ ಕಳೆದುಕೊಂಡಾಗ ಅರೋವಿಲ್ಲೆಯ ತಂಡ ನೆರವಿಗಾಗಿ ಧಾವಿಸಿತು. ಆರ್ಥಿಕ ಚೈತನ್ಯ ಕಳೆದುಕೊಂಡ ಜನರು ಮಾನಸಿಕ ಆಘಾತಕ್ಕೆ ಒಳಗಾಗಿದ್ದರು, ಮಹಿಳೆಯರಂತೂ ಮುಂದೇನು ಎಂದು ದಿಕ್ಕುತೋಚದೆ ಎಳೆಕಂದಮ್ಮಗಳನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಹತ್ತಾರು ಗ್ರಾಮಗಳಲ್ಲಿ ಇದೇ ದೃಶ್ಯಗಳು ಮರುಕಳಿಸಿದವು. ಅರೋವಿಲ್ಲೆ ತಂಡದ ಒಬ್ಬ ಮಹಿಳೆ, ಸಮಾಜಸೇವಕಿ ಉಮಾ ಪ್ರಜಾಪತಿ ಇದೆಲ್ಲ ಕಂಡು ದಂಗಾಗಿ ಹೋದರು. ಮಹಿಳೆಯರಲ್ಲಿ ವಿಶ್ವಾಸ ತುಂಬಲು ಏನಾದರೂ ಮಾಡ ಬೇಕು ಎಂಬ ಯೋಚನೆ ಅವರ ತಲೆ ಕೊರೆಯಲು ಆರಂಭಿಸಿತು. ಆದರೆ, ನಿರ್ದಿಷ್ಟವಾಗಿ ಮಾಡುವುದೇನು ಎಂದು ಹೊಳೆಯುತ್ತಿರಲಿಲ್ಲ.

ತಂಡದ ಸದಸ್ಯರೊಂದಿಗೆ ಚರ್ಚೆ ಮಾಡಿದರು. ಒಂದಿಷ್ಟು ಹಳೇ ಬಟ್ಟೆ ಸಂಗ್ರಹಿಸಿದರು. ಆ ಮೂಟೆಯನ್ನು ಗ್ರಾಮೀಣ ಮಹಿಳೆಯರ ಬಳಿ ಕೊಂಡೊಯ್ದು ‘ನೀವು ಈ ಬಟ್ಟೆಯಿಂದ ಪುಟ್ಟ ಪುಟ್ಟ ಗೊಂಬೆ ತಯಾರಿಸಿ. ಅದನ್ನು ನಾವೇ ಖರೀದಿಸುತ್ತೇವೆ’ ಎಂದರು. ಹಳೇ ಹರಕಲು ಬಟ್ಟೆಯಿಂದ ಗೊಂಬೆ ತಯಾರಿಸಬಹುದೇ ಎಂದು ಮಹಿಳೆಯರು ಚಿಂತಿಸುತ್ತಿರುವಾಗಲೇ ‘ಕರಕುಶಲ ತರಬೇತಿ ಕಾರ್ಯಕ್ರಮ’ವನ್ನು ತಾವೇ ರಚಿಸಿ ಗೊಂಬೆ ತಯಾರು ಮಾಡುವುದನ್ನು ಹೇಳಿಕೊಟ್ಟರು. ಮೊದಲ ಹಂತದಲ್ಲಿ 2005ರ ಫೆಬ್ರವರಿ 2ರಿಂದ ಮೇ 26ರವರೆಗೆ ಏಳು ಗ್ರಾಮಗಳಲ್ಲಿ 23 ತರಬೇತಿಗಳು ನಡೆದವು. 470ಕ್ಕೂ ಅಧಿಕ ಮಹಿಳೆಯರು ಇದರಲ್ಲಿ ಪಾಲ್ಗೊಂಡರು. ಸಾವಿರಾರು ಗೊಂಬೆಗಳು ತಯಾರಾದವು! ಇದಕ್ಕೆ ಹೆಸರೇನಿಡುವುದು ಎಂಬ ಚರ್ಚೆ ಆರಂಭವಾದಾಗ ಅಂತಿಮಗೊಂಡ ಮುದ್ದಾದ ಹೆಸರು ‘ಸುನಾಮಿಕಾ!’ ಸುನಾಮಿ ಸಂಕಷ್ಟ, ದುಃಖವನ್ನು ನೆನಪಿಸಿದರೆ ಆ ಸಂಕಷ್ಟಕ್ಕೆ ಸವಾಲೊಡ್ಡಿದ ಸ್ವಾವಲಂಬನೆಯ ಪ್ರತೀಕವಾಗಿ ಸುನಾಮಿಕಾ ಪ್ರೇರಣೆ ನೀಡುತ್ತಾಳೆ.

ಉಮಾ ಪ್ರಜಾಪತಿ ಮತ್ತು ಅವರ ತಂಡ ಈ ಕಾರ್ಯಕ್ಕೆ ವೇಗ ನೀಡುತ್ತ ಹೋದಂತೆ ಸುನಾಮಿಕಾ ಜನರ ಮನ ಗೆಲ್ಲತೊಡಗಿದಳು. ಗ್ರಾಮೀಣ ಮಹಿಳೆಯರು ಇದರ ತಯಾರಿಕೆ ಮೂಲಕ ಜೀವನ ನಿರ್ವಹಣೆ ಮಾಡತೊಡಗಿದರು. ಪ್ರತಿ ಮಹಿಳೆಗೆ ತಿಂಗಳಿಗೆ ಸರಾಸರಿ ಒಂದು ಸಾವಿರದಿಂದ ಮೂರು ಸಾವಿರದವರೆಗೆ ಆದಾಯ ಬರತೊಡಗಿತು. ಹೌದು, ಇಷ್ಟೆಲ್ಲ ಗೊಂಬೆಗಳನ್ನು ಉಮಾ ಮತ್ತವರ ತಂಡ ಹೇಗೆ ಖರೀದಿಸುತ್ತದೆ, ಅದಕ್ಕೆ ದುಡ್ಡೆಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಗೊಂಬೆಗಳನ್ನು ಖರೀದಿ ಮಾಡಿದ್ದು, ಮಾಡುತ್ತಿರುವುದು ಸಮಾಜದ ದುಡ್ಡಿನಿಂದಲೇ! ಹೌದು, ಹಳೇ ಬಟ್ಟೆ ಮೂಲಕ ಕರಕುಶಲ ಕಲೆಯನ್ನು ಮಹಿಳೆಯರಿಗೆ ಕಲಿಸಿ ಅದು ಅವರಿಗೆ ಬದುಕಿನ ದಾರಿಯಾಗುತ್ತಿದೆ ಎಂಬ ಸಂಗತಿ ತಿಳಿದೊಡನೆಯೇ ಇದರಿಂದ ಸ್ಪೂರ್ತಿ ಪಡೆದ ಕಾಪೋರೇಟ್ ಕಂಪನಿಗಳು ದೇಣಿಗೆ ನೀಡಲು ಆರಂಭಿಸಿದವು. ಮೊದಲ 18 ತಿಂಗಳಲ್ಲೇ 40 ಲಕ್ಷ ರೂಪಾಯಿಯಷ್ಟು ದೇಣಿಗೆ ಹರಿದುಬಂದ ಪರಿಣಾಮ ಸುನಾಮಿಕಾ ಸಂಪೂರ್ಣ ಸ್ವಾವಲಂಬಿಯಾದಳು (www.tsunamika.org).

ಮೊದಲಿಗೆ ಮಹಿಳೆಯರಲ್ಲಿ ವಿಶ್ವಾಸದ ಕೊರತೆ ಇತ್ತು. ಆದರೆ ಸೂಕ್ತ ತರಬೇತಿ ನೀಡಿದ ಮೇಲೆ ಅವರ ಮುಖದ ಮೇಲೆ ನಗು ಅರಳಿತು, ಸುನಾಮಿಯ ಆಘಾತ ನಿಧಾನವಾಗಿ ಕರಗಲು ಆರಂಭಿಸಿತು. ಒಂದಿಷ್ಟು ಹಳೇ ಬಟ್ಟೆ, ದಾರದಿಂದ ಇಷ್ಟು ಸುಂದರ ಗೊಂಬೆಗಳನ್ನು ಮಾಡಬಹುದು ಎಂಬ ಕಲ್ಪನೆ ನಿಜವಾದ ಮೇಲೆ ಮಹಿಳೆಯರಿಗೆ ತಮ್ಮ ಸೃಜನಶೀಲತೆ ಬಗ್ಗೆ ಹೆಮ್ಮೆಯ ಭಾವ ಸೃಷ್ಟಿಯಾಯಿತು. ಉಮಾ ಅವರು ಸ್ಥಾಪಿಸಿರುವ ಉಪಾಸನಾ ಡಿಜೈನ್ ಸ್ಟುಡಿಯೋ ಈ ಯೋಜನೆಗೆ ವೃತ್ತಿಪರತೆಯ ಸ್ಪರ್ಶ ನೀಡಿತು. ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ

(ಎನ್​ಐಎಫ್​ಟಿ) ಈ ಕಾರ್ಯಕ್ರಮವನ್ನು ಬಹುವಾಗಿ ಮೆಚ್ಚಿಕೊಂಡು, ಒಂದಿಷ್ಟು ಮಹಿಳೆಯರಿಗೆ ತರಬೇತಿ ನೀಡಿತು. ಹಲವಾರು ಕಾಪೋರೇಟ್ ಕಂಪನಿಗಳು ತಮ್ಮ ಸಿಬ್ಬಂದಿ ಮತ್ತು ಗ್ರಾಹಕರುಗಳಿಗೆ ಹೊಸ ವರ್ಷದಂದು ಉಡುಗೊರೆಯಾಗಿ ಸುನಾಮಿಕಾ ಗೊಂಬೆಗಳನ್ನೇ ನೀಡುವ ಸಂಪ್ರದಾಯ ಹಾಕಿಕೊಂಡವು. ಪರಿಣಾಮ, ನೋಡುನೋಡುತ್ತಿದ್ದಂತೆ ಸುನಾಮಿಕಾ ಸಪ್ತಸಮುದ್ರಗಳನ್ನು ದಾಟಿ ಅಲ್ಲಿನ ಜನರ ಮನಸ್ಸು ಗೆದ್ದಳು. ಅಷ್ಟೇ ಅಲ್ಲ, ಮಕ್ಕಳು ಹುಟ್ಟುಹಬ್ಬದಂದು ಸಹಪಾಠಿಗಳಿಗೆ, ಗೆಳೆಯರಿಗೆ ‘ಸುನಾಮಿಕಾ’ಳನ್ನೇ ಉಡುಗೊರೆಯಾಗಿ ಕೊಡತೊಡಗಿದರು.

ನಂಬ್ತೀರೋ, ಬಿಡ್ತೀರೋ, ಅರೋವಿಲ್ಲೆಯ ಕೆಲ ಗ್ರಾಮಗಳಲ್ಲಿ ಹತ್ತಾರು ಮಹಿಳೆಯರಿಂದ ಆರಂಭವಾದ ಈ ಬದಲಾವಣೆ ಪ್ರಸಕ್ತ ವಿಶ್ವದ ತೊಂಭತ್ತಕ್ಕೂ ಅಧಿಕ ರಾಷ್ಟ್ರಗಳನ್ನು ತಲುಪಿದೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ಎರಡು ಕೋಟಿಗೂ ಅಧಿಕ ಗೊಂಬೆಗಳು ಮಾರಾಟವಾಗಿದ್ದು, ‘ಗಿಫ್ಟ್ ಎಕಾನಮಿ’ (ಉಡುಗೊರೆ ಆರ್ಥಿಕತೆ)ಯ ಹೊಸ ಸಾಧ್ಯತೆಯನ್ನು ಜಗದೆದುರು ಪರಿಚಯಿಸಿದೆ. ಈ ಸಣ್ಣ ಉಡುಗೊರೆ, ಬಡ ಮಹಿಳೆಯರ ಸಂಕಷ್ಟ ಕಳೆಯುತ್ತೆ, ಅವರ ಮಕ್ಕಳ ಓದಿಗೆ ನೆರವಾಗುತ್ತೆ ಅನ್ನೋದಾದರೆ ನಾವೂ ನೆರವಾಗ್ತೀವಿ ಅಂತ ನೂರಾರು ಕೈಗಳು ಸಹಾಯಕ್ಕೆ ಬಂದವು. ಪ್ರಸಕ್ತ ತಮಿಳುನಾಡಿನ ಸಾವಿರಕ್ಕಿಂತ ಅಧಿಕ ಮಹಿಳೆಯರು ಜೀವನ ನಿರ್ವಹಣೆಗಾಗಿ ಇದನ್ನೇ ಅವಲಂಬಿಸಿದ್ದು, ಸುನಾಮಿಕಾ ಸದ್ದಿಲ್ಲದೆ ಮಹಿಳಾ ಸಬಲೀಕರಣದ ದೊಡ್ಡ ಯಶೋಗಾಥೆಯನ್ನು ಬರೆದಿದ್ದಾಳೆ! 2005ರಲ್ಲಿ ಎನ್​ಐಎಫ್​ಟಿ ಉಮಾ ಪ್ರಜಾಪತಿಯವರಿಗೆ Award of Excellence ನೀಡಿ ಗೌರವಿಸಿದ್ದರೆ, ಹತ್ತಾರು ಶಾಲೆಗಳು ಮಕ್ಕಳಿಗೆ ‘ಸುನಾಮಿಕಾ’ ಕಥೆ ಮೂಲಕ ಪ್ರೇರಣೆ ತುಂಬುತ್ತಿವೆ.

ಸಕಾರಾತ್ಮಕ ಬದಲಾವಣೆಯತ್ತ ಹೆಜ್ಜೆ ಇಟ್ಟರೆ ಎಷ್ಟೊಂದು ಅದ್ಭುತ ಫಲಿತಾಂಶಗಳು ಪ್ರಾಪ್ತವಾಗುತ್ತವೆ ಎಂಬುದಕ್ಕೆ ಈ ಪ್ರಯೋಗ ಸಾಕ್ಷಿ. ಸುಮ್ಮನೇ ಗಮನಿಸಿ. ಸುನಾಮಿ ಆಘಾತದಿಂದ ಮಹಿಳೆಯರು ಜೀವನೋತ್ಸಾಹವನ್ನೇ ಕಳೆದುಕೊಂಡಿದ್ದರು. ಸುನಾಮಿಕಾಳ ಪರಿಕಲ್ಪನೆ, ಅದು ಅವರ ಕೈಯಲ್ಲಿ ರೂಪು ಪಡೆದು ಆವಿರ್ಭಾವಗೊಂಡಾಗ ಆ ಮುಗ್ಧ ಮಹಿಳೆಯರ ಮುಖದಲ್ಲಿ ಮಿಂಚಿನಂಥ ನಗು ಮೂಡಿಸಿತು. ತಾವು ಸ್ವಾವಲಂಬಿಯಾಗಿ ಬದುಕು ಸಾಗಿಸಬಹುದು ಎಂಬ ವಿಶ್ವಾಸವನ್ನು ಜಾಗೃತಗೊಳಿಸಿತು, ಕೀಳರಿಮೆ ದೂರಗೊಳಿಸಿತು. ಸಾವಿರಕ್ಕೂ ಅಧಿಕ ಮಹಿಳೆಯರು ಭಾವನಾತ್ಮಕವಾಗಿಯೂ ಬೆಸೆದು, ಸಂಬಂಧಗಳು ದೃಢಗೊಂಡವು. ‘ಹಂಚಿಕೊಳ್ಳುವಿಕೆ’ ಅಂದರೆ ಕೆಲಸದಲ್ಲಿ, ಆದಾಯದಲ್ಲಿ, ಖುಷಿಯಲ್ಲಿ ಹೀಗೆ ಪ್ರತಿಯೊಂದರ ಹಂಚಿಕೊಳ್ಳುವಿಕೆ ಎಷ್ಟು ಆನಂದ ನೀಡುತ್ತೆ ಎಂಬುದನ್ನು ಪ್ರತ್ಯಕ್ಷವಾಗಿ ಅನುಭವಿಸಿದರು. ಬೆವರಿನ ಶ್ರಮದಿಂದ ಮಾಡಿದ ಉತ್ಪನ್ನವನ್ನು ಉಡುಗೊರೆಯಾಗಿ ನೀಡಿದರೆ ಅದರ ಮೌಲ್ಯ, ಖುಷಿ ಎಷ್ಟು ಅತ್ಯುನ್ನತ ಎಂಬುದನ್ನು ಕಾಪೋರೇಟ್ ಕಂಪನಿಗಳೂ ಅರಿತವು. ಜೀವನ ನಿರ್ವಹಣೆಯ ಸಶಕ್ತ ದಾರಿ ತೋರಿಸಿದರೆ ಸಮಷ್ಟಿ ಸ್ವಾವಲಂಬಿಯಾಗಿ ಶಕ್ತಿಯುತವಾಗುತ್ತದೆ ಎಂಬುದನ್ನು ಉಮಾ ಪ್ರಜಾಪತಿ ಸಾಬೀತು ಪಡಿಸಿದರಲ್ಲದೆ, ಈ ಸ್ಪೂರ್ತಿಗಾಥೆಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಹಂಚಿಕೊಂಡು ಅಲ್ಲೂ ಪ್ರೇರಣೆಯ ತೇರು ಎಳೆದಿದ್ದಾರೆ.

2015ರಿಂದ ಇವರ ತಂಡ ಕರಾವಳಿ ಪರಿಸರ ಸಂರಕ್ಷಣೆಯಲ್ಲೂ ತೊಡಗಿಕೊಂಡಿದ್ದು, ಅದಕ್ಕಾಗಿ ಪರಿಸರ ಕಾರ್ಯಕರ್ತರ ದೊಡ್ಡ ಪಡೆಯನ್ನೇ ಕಟ್ಟಿದೆ. ಬೀಚ್​ಗಳ ಸಂರಕ್ಷಣೆ, ಕರಾವಳಿಯ ಕುಲಕಸಬುಗಳ ರಕ್ಷಣೆ, ಉತ್ತೇಜನ, ನೀರು ಇಂಗಿಸುವಿಕೆ ಸೇರಿದಂತೆ ಹಲವು ಕಾರ್ಯಗಳಲ್ಲಿ ನಿರತವಾಗಿದೆ.

ಅರೋವಿಲ್ಲೆ ಸಮುದ್ರತೀರದಲ್ಲಿ ಸುನಾಮಿಕಾಳ ಪ್ರತಿಕೃತಿಯನ್ನು ಇರಿಸಲಾಗಿದ್ದು- ಧೈರ್ಯ, ಆತ್ಮವಿಶ್ವಾಸ, ಜವಾಬ್ದಾರಿ, ಹೆಮ್ಮೆ, ಸ್ಪೂರ್ತಿ, ಸ್ವಾವಲಂಬನೆಯ ಪ್ರತೀಕವಾಗಿ, ಸ್ತ್ರೀ ಶಕ್ತಿಯ ದ್ಯೋತಕವಾಗಿ ಸುನಾಮಿಕಾ ಜಡ ಮನಸ್ಸುಗಳನ್ನು ಜಾಗೃತಗೊಳಿಸುತ್ತಿದ್ದಾಳೆ, ಸಾವಿರಾರು ಮಹಿಳೆಯರಿಗೆ ಬೆಳಕಿನ ದಾರಿ ತೋರಿದ್ದಾಳೆ.

ಒಂದು ಗೊಂಬೆ ಜಗತ್ತಿಗೆ ಪ್ರೇರಣೆ ನೀಡಬಹುದಾದರೆ ನಾವು-ನೀವೆಲ್ಲ ಸಮಾಜಕ್ಕೆ ಏನೆಲ್ಲ ಕೊಡುಗೆ ನೀಡಬಹುದಲ್ಲವೇ? ಸ್ವಾವಲಂಬನೆಯ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಸಾಗೋಣ. ಉತ್ಕರ್ಷದ ಶಿಖರದಲ್ಲಿ ವಿಜಯಧ್ವಜ ಸ್ಥಾಪಿಸೋಣ.

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *

Back To Top