More

    ನಕಲಿ ಪರಿಸರವಾದಿಗಳೂ, ನೈಜ ದೇಶವಿರೋಧಿಗಳೂ…; ಭಾಗ-1

    ನಕಲಿ ಪರಿಸರವಾದಿಗಳೂ, ನೈಜ ದೇಶವಿರೋಧಿಗಳೂ...; ಭಾಗ-12004-14ರ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಕಲ್ಲಿದ್ದಲು, ಕಾಮನ್​ವೆಲ್ತ್ ಕ್ರೀಡಾಕೂಟ, 2ಜಿ ಸ್ಪೆಕ್ಟ್ರಂ ಹಗರಣಗಳು ಸೇರಿದಂತೆ ವರ್ಷಕ್ಕೊಂದು ಭಾರಿ ಭ್ರಷ್ಟಾಚಾರಗಳನ್ನು ದೇಶ ಕಂಡಿತ್ತು ಮತ್ತು ಅವುಗಳಲ್ಲಿ ಆಡಳಿತ ಪಕ್ಷದ ದೊಡ್ಡದೊಡ್ಡ ನಾಯಕರೇ ಭಾಗಿಯಾಗಿದ್ದನ್ನೂ ನೋಡಿತ್ತು. ಆ ವರ್ಷಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿ, ಆರ್ಥಿಕ ರಾಜಧಾನಿ ಮುಂಬೈ ಜತೆಗೆ ಬೆಂಗಳೂರು, ಅಹ್ಮದಾಬಾದ್, ಪುಣೆ, ಜೈಪುರ, ಹೈದರಾಬಾದ್, ಶ್ರೀನಗರ ಸೇರಿ ಹಲವಾರು ನಗರಗಳು ಭಯೋತ್ಪಾದಕ ದಾಳಿಗಳನ್ನು ಅನುಭವಿಸಿದವು. ಆದರೆ ಮೇ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶ ಯಾವುದೇ ಆರ್ಥಿಕ ಭ್ರಷ್ಟಾಚಾರಗಳನ್ನು ಕಂಡಿಲ್ಲ, ಕಾಶ್ಮೀರದ ಹೊರತಾಗಿ ಬೇರೆಲ್ಲೂ ಭಯೋತ್ಪಾದಕ ದಾಳಿಯನ್ನೂ ಅನುಭವಿಸಿಲ್ಲ. ಆರ್ಥಿಕ ಕ್ಷೇತ್ರವನ್ನೇ ತೆಗೆದುಕೊಂಡರೆ ವ್ಯವಹಾರಕ್ಕೆ ಅನುಕೂಲಕರ ಸ್ಥಿತಿಯನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 2014ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ 2019ರಲ್ಲಿ 63ನೇ ಸ್ಥಾನಕ್ಕೇರಿತು. ಅದಕ್ಕೆ ಪೂರಕವಾಗಿ ದೇಶದಲ್ಲಿ ನೇರ ವಿದೇಶೀ ಹೂಡಿಕೆಯೂ ಏರುತ್ತ ಹೋಗಿ, ಆ ಕ್ಷೇತ್ರದಲ್ಲಿ ಜಾಗತಿಕವಾಗಿ ಅಗ್ರಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿ ಭಾರತ 57 ಬಿಲಿಯನ್ ಡಾಲರ್​ಗಳ ಹೂಡಿಕೆಯನ್ನು ಆಕರ್ಷಿಸಿತು. ದೇಶದ ವಿದೇಶೀ ವಿನಿಮಯ ಭಂಡಾರವೂ 550 ಬಿಲಿಯನ್ ಡಾಲರ್​ಗಳನ್ನು ದಾಟಿತು. ದೇಶದೊಳಗೇ, ಮುದ್ರಾ ಯೋಜನೆಯಿಂದ ಸಣ್ಣಪ್ರಮಾಣದ ಕೈಗಾರಿಕೆ-ವ್ಯವಹಾರಗಳಿಗೆ ವ್ಯಾಪಕ ಪ್ರೋತ್ಸಾಹ ಸಿಕ್ಕಿದರೆ; ಉಜ್ವಲಾ, ಪ್ರಧಾನಮಂತ್ರಿ ಆವಾಸ್ ಯೋಜನೆಗಳಂತಹ ಹಲವು ಜನಪರ ಯೋಜನೆಗಳ ಮೂಲಕ ಬಡಜನರ ಬದುಕನ್ನು ಉತ್ತಮಗೊಳಿಸುವ ನಿಟ್ಟಿನಲ್ಲೂ ಸರ್ಕಾರ ಪ್ರಶಂಸಾರ್ಹ ಕೆಲಸಗಳನ್ನು ಮಾಡುತ್ತಿದೆ.

    ಕಳೆದ ವರ್ಷ ದೇಶದ ಮೇಲೆರಗಿದ ಕರೊನಾ ಮಹಾಮಾರಿ ಅರ್ಥವ್ಯವಸ್ಥೆಯನ್ನು ಹಾಳುಗೆಡವಿತು. ಕರೊನಾ ಮಾರಿಗೆ ಜಗತ್ತೇ ತತ್ತರಿಸಿರುವಾಗ, ಜಪಾನ್​ನಂತಹ ಬಲಾಢ್ಯ ಅರ್ಥವ್ಯವಸ್ಥೆಯೇ ಆರ್ಥಿಕ ಹಿಂಜರಿತಕ್ಕೆ ಸರಿದಾಗ ನಮ್ಮ ಅರ್ಥವ್ಯವಸ್ಥೆಗೆ ಹೊಡೆತ ಬಿದ್ದದ್ದು ಅತಿಶಯವೇನಲ್ಲ. ಆದಾಗ್ಯೂ, 2020-21ರ ಮೊದಲ ಎರಡು ತ್ರೖೆಮಾಸಿಕಗಳಲ್ಲಿ (ಏಪ್ರಿಲ್-ಜೂನ್, ಜುಲೈ-ಸೆಪ್ಟೆಂಬರ್) ಹಿಂಜರಿತಕ್ಕೊಳಗಾದ ಭಾರತದ ಅರ್ಥವ್ಯವಸ್ಥೆ ಮೂರನೆಯ ಕ್ವಾರ್ಟರ್​ನಲ್ಲಿ (ಅಕ್ಟೋಬರ್-ಡಿಸೆಂಬರ್) ಜಗತ್ತೇ ಬೆರಗಾಗುವಂತೆ ಚೇತರಿಸಿಕೊಂಡು ಐಎಂಎಫ್ ಮತ್ತು ವಿಶ್ವಬ್ಯಾಂಕ್​ಗಳಿಂದ ಪ್ರಶಂಸೆ ಗಳಿಸಿದೆ. ಈ ಚೇತರಿಕೆಯನ್ನು ಜಾಗತಿಕ ಅರ್ಥವ್ಯವಸ್ಥೆಯೊಂದಿಗೆ ತುಲನೆ ಮಾಡಿದ ಐಎಂಎಫ್, 2021-22ರಲ್ಲಿ ಭಾರತದ ಅರ್ಥವ್ಯವಸ್ಥೆ ಶೇಕಡ 11ರ ದರದಲ್ಲಿ ನಾಗಾಲೋಟ ಸಾಧಿಸಲಿದೆ ಮತ್ತು ಈ ಅಭಿವೃದ್ಧಿ ದರ ಜಾಗತಿಕವಾಗಿ ಅತಿ ಹೆಚ್ಚಿನದಾಗಿರುತ್ತದೆ ಎಂದು ಲೆಕ್ಕಹಾಕಿದೆ.

    ವಿದೇಶನೀತಿಯಲ್ಲಿ ಕಳೆದ ಏಳು ವರ್ಷಗಳಲ್ಲಿ ದೇಶದ ಸಾಧನೆ ಗಮನಾರ್ಹ. ಪಾಕಿಸ್ತಾನದ ಭಯೋತ್ಪಾದಕ ದಾಳಿಗಳಿಗೆ ಪ್ರತಿಯಾಗಿ ನಮ್ಮ ರಕ್ಷಣಾಪಡೆಗಳು ಭಯೋತ್ಪಾದಕ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿ ಆ ದೇಶಕ್ಕೆ ಪಾಠ ಕಲಿಸಿರುವುದಲ್ಲದೇ ಅದರ ನ್ಯೂಕ್ಲಿಯರ್ ಬ್ಲಾಕ್​ವೆುೕಲ್ ಅನ್ನು ಪೊಳ್ಳಾಗಿಸಿವೆ. ನರೇಂದ್ರ ಮೋದಿಯವರ ಚಾಣಾಕ್ಷ ವಿದೇಶಾಂಗ ನೀತಿಗಳಿಂದಾಗಿ ಇಂದು ಅಮೆರಿಕ ಇರಲಿ, ಪ್ರಮುಖ ಮುಸ್ಲಿಂ ದೇಶಗಳಾದ ಸೌದಿ ಅರೇಬಿಯಾ ಮತ್ತು ಯುಎಇಗಳು ಪಾಕಿಸ್ತಾನವನ್ನು ದೂರ ತಳ್ಳಿ ಭಾರತಕ್ಕೆ ಹತ್ತಿರವಾಗಿವೆ; ಅಷ್ಟರ ಮಟ್ಟಿಗೆ ಪಾಕಿಸ್ತಾನದ ರಾಜತಂತ್ರ ಹಾಗೂ ಆರ್ಥಿಕ ಬುನಾದಿ ಕುಸಿದಿದೆ. ಚೀನಾದ ವಿಷಯಕ್ಕೆ ಬಂದರೆ, ಸರ್ಕಾರದ ದೃಢನಿಶ್ಚಯದ ಬೆಂಬಲದೊಂದಿಗೆ ನಮ್ಮ ರಕ್ಷಣಾಪಡೆಗಳು 2017ರಲ್ಲಿ ಚೀನಾದ ದೊಕ್ಲಾಂ ದುಸ್ಸಾಹಸವನ್ನು ವಿಫಲಗೊಳಿಸಿದ್ದಲ್ಲದೆ ಕಳೆದ ವರ್ಷ ಲಡಾಖ್​ನಲ್ಲಿಯೂ ಚೀನೀ ಸೇನೆಗೆ ತಕ್ಕ ಪಾಠ ಕಲಿಸಿ ಹಿಮ್ಮೆಟ್ಟಿಸಿವೆ. ಜತೆಗೆ, ಹಿಂದೂ ಮಹಾಸಾಗರದಲ್ಲಿ ಚೀನೀ ತಂಟೆಗಳನ್ನು ಹದ್ದುಬಸ್ತಿಗೆ ತರಲು ಮೋದಿ ಸರ್ಕಾರ ಸೂಕ್ತ ಹಾಗೂ ಅಭೂತಪೂರ್ವ ರಾಜತಾಂತ್ರಿಕ ಹಾಗೂ ಸೇನಾ ಕ್ರಮಗಳನ್ನು ಕೈಗೊಂಡು ಆ ಧೂರ್ತ ದೇಶವನ್ನು ಧೃತಿಗೆಡಿಸಿದೆ. ಅಮೆರಿಕ, ಸೌದಿ ಅರೇಬಿಯಾ, ಯುಎಇ, ಫ್ರಾನ್ಸ್, ಜಪಾನ್, ಆಸ್ಟ್ರೇಲಿಯಾ, ತೈವಾನ್ ಮುಂತಾದ ಪ್ರಮುಖ ದೇಶಗಳ ಜತೆ ಭಾರತದ ಸಂಬಂಧಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಸದೃಢಗೊಂಡಿವೆ.

    ಇದೆಲ್ಲವನ್ನೂ ಸಾಧಿಸಿರುವುದು ಎನ್​ಡಿಎ ಸರ್ಕಾರದ ನೀತಿಗಳು ಮತ್ತು ಯೋಜನೆಗಳು. ಇದನ್ನು ಎರಡು ವರ್ಷಗಳ ಹಿಂದೆಯೇ ಗುರುತಿಸಿದ ದೇಶದ ಮತದಾರರು ಎನ್​ಡಿಎಗೆ, ಮುಖ್ಯವಾಗಿ ಬಿಜೆಪಿಗೆ ಅಭೂತಪೂರ್ವ ಬೆಂಬಲವನ್ನು ತೋರಿಸಿಯೂ ಆಗಿದೆ. ಹೀಗಿದ್ದೂ, ಎನ್​ಡಿಎ ಸರ್ಕಾರದ ವಿರುದ್ಧ ಒಂದಲ್ಲ ಒಂದು ‘ಆಂದೋಲನ’ಗಳು ನಿರಂತರವಾಗಿ ನಡೆಯುತ್ತಿರುವುದೇಕೆ? ಸರ್ಕಾರವಷ್ಟೇ ಅಲ್ಲ, ದೇಶದ ಹೆಸರನ್ನೇ ಅಂತಾರಾರಾಷ್ಟ್ರೀಯ ಮಟ್ಟದಲ್ಲಿ ಹೀಗಳೆಯುವ ಪ್ರಯತ್ನಗಳು ಒಂದರ ಹಿಂದೊಂದರಂತೆ ನಡೆಯುತ್ತಿರುವುದೇಕೆ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು, ಪ್ರಸಕ್ತ ರೈತ ಆಂದೋಲನದ ಹಿಂದಿರುವ ಶಕ್ತಿಗಳು ಮತ್ತು ವ್ಯಕ್ತಿಗಳನ್ನು ಗುರುತಿಸುವುದರಿಂದಲೇ ಆರಂಭಿಸೋಣ.

    ಮೊದಲಿಗೆ ಗ್ರೆಟಾ ಥನ್​ಬರ್ಗ್ ಅಲಕ್ಷ್ಯದಿಂದ ಹೊರಗೆಡಹಿ, ಭಾರತಕ್ಕೆ ಉಪಕರಿಸಿದ ‘ಟೂಲ್ಕಿಟ್’ ಅನ್ನೇ ನೋಡೋಣ. ಈ ಟೂಲ್ಕಿಟ್​ನಲ್ಲಿರುವ ‘ಸೂಚನೆ’ಗಳನ್ನು ಕ್ರಮಬದ್ಧವಾಗಿ ಜೋಡಿಸಿದರೆ ಈ ಚಿತ್ರಸರಣಿ ಸಿಗುತ್ತದೆ- 1. ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಸಂಭ್ರಮದ ಸಂದರ್ಭದಲ್ಲಿ ದೆಹಲಿಯಲ್ಲಿ ವ್ಯಾಪಕ ಅಶಾಂತಿಯುಂಟುಮಾಡಬೇಕು, 2. ಆ ಮೂಲಕ ಸುರಕ್ಷಾ ಪಡೆಗಳನ್ನು ಪ್ರಚೋದಿಸಿ ಅವು ಗೋಲಿಬಾರ್ ಮಾಡಿ ಆಂದೋಲನಕಾರರನ್ನು ಕೊಲ್ಲುವಂತೆ ಪ್ರೇರೇಪಿಸಬೇಕು, 3. ನಂತರ ಮೋದಿ ರೈತರ ಹತ್ಯಾಕಾಂಡದಲ್ಲಿ ತೊಡಗಿದ್ದಾರೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಬೇಕು. ಅಂದರೆ ಈ ಟೂಲ್ಕಿಟ್ ‘ರೈತ ಅಂದೋಲನ’ದ ನೆಪದಲ್ಲಿ ದಾಂಧಲೆ, ಅಶಾಂತಿ, ಅರಾಜಕತೆ ಮತ್ತು ರಕ್ತಪಾತದ ಮೂಲಕ ‘ಬೇರಾವುದೋ’ ಉದ್ದೇಶವನ್ನು ಸಾಧಿಸಿಕೊಳ್ಳುವ ನೀಲಿನಕ್ಷೆ! ಇತರ ಟೂಲ್ಕಿಟ್​ಗಳಿಂದ ಇದನ್ನು ಪ್ರತ್ಯೇಕಿಸಿ ಗಂಭೀರವಾಗಿ ಪರಿಗಣಿಸ ಬೇಕಾಗಿರುವುದು ಈ ಕಾರಣಕ್ಕಾಗಿ.

    ಈ ಬಗೆಯ ಅಶಾಂತಿಯನ್ನು ಹುಟ್ಟುಹಾಕಲು ಹೊರಟವರಾರು? ಆ ವಿವರಗಳೂ ಟೂಲ್ಕಿಟ್​ನಲ್ಲೇ ಸಿಗುತ್ತವೆ. ಗುಪ್ತವಾಗಿ, ಖಾಸಗಿಯಾಗಿ ಹಂಚಿಕೆಯಾಗಬೇಕಾಗಿದ್ದ ಆ ಟೂಲ್ಕಿಟ್ ಅನ್ನು ಟ್ವಿಟರ್ ಮೂಲಕ ಜಗತ್ತಿಗೇ ಸಾರಿದ ಗ್ರೆಟಾ ಥನ್​ಬರ್ಗ್​ಳ ಅತಿಬುದ್ಧಿವಂತಿಕೆಗೆ ನಾವು ಕೃತಜ್ಞರಾಗಿರಲೇಬೇಕು. ಆಕೆ ಹೊರಗೆಡಹಿದ ಟೂಲ್ಕಿಟ್​ನಲ್ಲಿ ಮೂರು ಸಂಘಟನೆಗಳು ಪ್ರಮುಖವಾಗಿ ಉಲ್ಲೇಖಗೊಂಡಿವೆ. ಅವೆಂದರೆ ‘ಯುಗ್ಮಾ ನೆಟ್​ವರ್ಕ್’ ಎಂಬ ಉಗ್ರ ಎಡಪಂಥೀಯ ಪರಿಸರವಾದಿ ಸಂಘಟನೆ, ‘ವಿಯಾ ಕ್ಯಾಂಪಸೀನಾ’ ಎಂಬ ಸಮಾಜವಾದಿ ಸಂಘಟನೆ, ಪ್ರಜಾಪ್ರಭುತ್ವ ವಿಧಾನದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸುವುನ್ನೇ ಉದ್ದೇಶವನ್ನಾಗಿಸಿಕೊಂಡಿರುವ ‘ಎಕ್ಸ್​ಟಿಂಕ್ಷನ್ ರೆಬೆಲಿಯನ್’ (ಎಕ್ಸ್​ಆರ್) ಎಂಬ ಉಗ್ರ ಎಡಪಂಥೀಯ ಅರಾಜಕತಾ ಸಂಘಟನೆ. (‘ಅಲ್ಟ್ರಾ ಲೆಫ್ಟಿಸ್ಟ್’ ಅಥವಾ ‘ಉಗ್ರ ಎಡಪಂಥೀಯ’ ಎನ್ನುವುದನ್ನು ನಮ್ಮ ಭಾರತೀಯ ಸಂದರ್ಭದಲ್ಲಿ ‘ನಕ್ಸಲರು’ ಎಂದು ಕರೆಯಲಾಗುತ್ತದೆ!)

    ಎಕ್ಸ್​ಆರ್ ಸ್ಥಾಪನೆಯಾದದ್ದು 2018ರಲ್ಲಿ ಬ್ರಿಟನ್​ನಲ್ಲಿ. ಈ ಮೂರು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಅದು ವಿವಿಧ ದೇಶಗಳಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದೆ. ಅದರ ಹೊಸ ಟಾರ್ಗೆಟ್ ನಮ್ಮ ಭಾರತ ಎನ್ನುವುದನ್ನು ಈ ಟೂಲ್ಕಿಟ್ ಬಹಿರಂಗಪಡಿಸುತ್ತದೆ. ಫೆಬ್ರವರಿ 3ರ ಸಂಜೆ ಗ್ರೆಟಾ ಟೂಲ್ಕಿಟ್​ನ ಲಿಂಕ್ ಅನ್ನು ಟ್ವಿಟರ್​ನಲ್ಲಿ ಹಂಚಿಬಿಟ್ಟಾಗ ಆ ಗೂಗಲ್ ಡಾಕ್ಯುಮೆಂಟ್ ಅನ್ನು ಆತುರಾತುರವಾಗಿ ಎಡಿಟ್ ಮಾಡಿ ಎಲ್ಲ ‘ಅಪಾಯಕಾರಿ’ ವಿವರಗಳನ್ನು ಅಳಿಸುತ್ತಿದ್ದವರಲ್ಲಿ ಸದ್ಯಕ್ಕೆ ನಮಗೆ ಸಿಕ್ಕಿರುವುದು ಮೂರು ಹೆಸರುಗಳು- ಮರೀನಾ ಪ್ಯಾಟರ್​ಸನ್, ನಿಕಿತಾ ಜೇಕಬ್ ಮತ್ತು ದಿಶಾ ರವಿ.

    ಇವರಲ್ಲಿ ಮರೀನಾ ಪ್ಯಾಟರ್​ಸನ್ ಎಕ್ಸ್​ಆರ್​ನ ಸಕ್ರಿಯ ಕಾರ್ಯಕರ್ತೆ, ಇರುವುದು ಬ್ರಿಟನ್​ನಲ್ಲೇ. ಭಾರತದಲ್ಲಿರುವ ನಿಕಿತಾ ಜೇಕಬ್ ಮತ್ತು ಶಂತನು ಮುಳೂಕ್ ಎಕ್ಸ್​ಆರ್ ಜತೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಆಧರಿಸಿ ಮಾಧ್ಯಮಗಳು ಹೇಳುತ್ತಿವೆ. ಇವರಿಬ್ಬರ ಜತೆ ದಿಶಾ ರವಿ ಸೇರಿ ಟೂಲ್ಕಿಟ್ ಸಿದ್ಧಪಡಿಸಿದ್ದಾರೆ ಎಂದು ಇದುವರೆಗಿನ ತನಿಖೆಗಳ ಆಧಾರದ ಮೇಲೆ ದೆಹಲಿ ಪೊಲೀಸ್ ಹೇಳುತ್ತಿದೆ. ಆ ಮೂವರು ಅದನ್ನು ತಯಾರಿಸಿದ್ದು ಕೆನಡಾದ ‘ಪೊಯೆಟಿಕ್ ಜಸ್ಟಿಸ್ ಫೌಂಡೇಶನ್’ (ಪಿಜೆಐ) ಎಂಬ ಖಲಿಸ್ತಾನೀ ಸಂಘಟನೆಯ ‘ಆಸ್ಕ್ ಇಂಡಿಯಾ ವೈ.ಕಾಮ್ ಎಂಬ ವೆಬ್​ಸೈಟ್​ಗಾಗಿ, ಅದರ ಸ್ಥಾಪಕ ಮೊನ್​ವಿುೕಂದರ್ ಸಿಂಗ್ ಧಾಲಿವಾಲ್ ಜನವರಿ 26ರಂದು ‘ಕೃಷಿ ಕಾನೂನುಗಳ ವಾಪಸಾತಿಯೊಂದಿಗೆ ಈ ಆಂದೋಲನ ನಿಲ್ಲುವುದಿಲ್ಲ, ಅದು ಸಮಾಪ್ತವಾಗುವುದು ಖಲಿಸ್ತಾನ ಸ್ಥಾಪನೆಯೊಂದಿಗೆ’ ಎಂದು ಕೆನಡಾದಲ್ಲಿ ಭಾಷಣ ಬಿಗಿಯುತ್ತಿದ್ದ. ದೆಹಲಿ ಪೊಲೀಸ್ ಹೇಳುತ್ತಿರುವ ಹೊಸ ವಿಷಯವೆಂದರೆ ಪಿಜೆಐನ ಇಮೇಲ್ ಅಕೌಂಟ್​ನ ಪಾಸ್​ವರ್ಡ್ ದಿಶಾ ರವಿಯ ಬಳಿ ಇತ್ತು, ಆಕೆ ಆ ಮೂಲಕ ಆ ಅಕೌಂಟ್ ಅನ್ನು ಹ್ಯಾಂಡಲ್ ಮಾಡುತ್ತಿದ್ದರು ಅಂತ! ಈಗ ಸರಪಳಿ ಸಂಪೂರ್ಣವಾಯಿತಲ್ಲ?

    ಈ ಟೂಲ್ಕಿಟ್​ನಲ್ಲಿ ನೀಡಲಾಗಿರುವ ಸೂಚನೆಗಳನ್ನೂ ‘ರೈತ ಆಂದೋಲನ’ ಸಾಗಿಬಂದ ಗತಿಯನ್ನೂ ತಾಳೆ ಹಾಕಿದರೆ ಇನ್ನೊಂದು ಅಚ್ಚರಿಯ ವಿಷಯ ಹೊರಬರುತ್ತದೆ. ದೆಹಲಿಯ ಗಡಿಯಲ್ಲಿ ‘ರೈತರು’ ಜಮಾವಣೆಯಾಗತೊಡಗಿದ್ದು ನವೆಂಬರ್ 27ರಂದು. ನವೆಂಬರ್ 29ರಿಂದಲೇ ಅವರು ಟೂಲ್ಕಿಟ್​ನಲ್ಲಿದ್ದ ಸೂಚನೆಗಳನ್ನು ಪಾಲಿಸತೊಡಗಿದ್ದುದು ಕಂಡುಬರುತ್ತದೆ. ಅಂದರೆ ಟೂಲ್ಕಿಟ್​ನ ಇತಿಹಾಸ ಆಳವಾಗಿಯೇ ಇದೆ! ತಮಗೆ ಸಹಕರಿಸಬಲ್ಲವರ ವಾಟ್ಸ್​ಆಪ್ ಗ್ರೂಪ್ ಒಂದನ್ನು ದಿಶಾ ರವಿ ‘ಇಂಟರ್​ನ್ಯಾಷನಲ್ ಫಾರ್ಮರ್ಸ್ ಪ್ರೊಟೆಸ್ಟ್’ ಎಂಬ ಹೆಸರಿನಲ್ಲಿ ಡಿಸೆಂಬರ್ 6ರಂದೇ ಹುಟ್ಟುಹಾಕಿದ್ದರು.

    ಈಗ ವಿಷಯದ ಮತ್ತೊಂದು ಮಗ್ಗುಲತ್ತ ಹೊರಳೋಣ. ಮೊ ಧಾಲಿವಾಲ್ ಮತ್ತವನ ಪಿಜೆಐ ಹೊರತಾಗಿ, ಈ ಟೂಲ್ಕಿಟ್ ಷಡ್ಯಂತ್ರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳೆಲ್ಲರೂ ಪರಿಸರವಾದಿಗಳು ಮತ್ತು ಪರಿಸರವಾದಿ ಸಂಘಟನೆಗಳು. ಏಕಾಏಕಿ ಪಂಜಾಬ್ ಮತ್ತು ಹರಿಯಾಣ ‘ರೈತರ’ ಪರವಾಗಿ ಷಡ್ಯಂತ್ರ ರೂಪಿಸಿದ ಇವರಾರೂ ಅದೇ ಪಂಜಾಬ್ ಮತ್ತು ಹರಿಯಾಣದ ರೈತರು ಬೆಳೆಯ ಉಳಿಕೆಗೆ ಬೆಂಕಿ ಹಚ್ಚಿ ಪ್ರತಿ ಚಳಿಗಾಲದ ಒಂದರೆಡು ತಿಂಗಳು ರಾಜಧಾನಿ ದೆಹಲಿ ಸೇರಿ ವಾಯವ್ಯ ಭಾರತದ ಗಾಳಿಯನ್ನು ಉಸಿರಾಡಲಾಗದ ಮಟ್ಟಕ್ಕೆ ಕಲುಷಿತಗೊಳಿಸುವುದರ ಬಗ್ಗೆ ಒಂದು ಮಾತೂ ಆಡಿಲ್ಲ! ಪಂಜಾಬ್​ನಲ್ಲಿ ನೀರಿನ ಯದ್ವಾತದ್ವಾ ದುರ್ಬಳಕೆಯಿಂದ ಅಂತರ್ಜಲ ಮಟ್ಟ ಗಾಬರಿಗೊಳಿಸುವ ಮಟ್ಟಕ್ಕೆ ಕುಸಿದಿರುವುದರ ಬಗ್ಗೆ, ಅತಿಯಾದ ರಸಗೊಬ್ಬರಗಳ ಉಪಯೋಗದಿಂದಾಗಿ ಮಣ್ಣು ಸತ್ವಹೀನವಾಗುತ್ತಿರುವುದನ್ನು ತಡೆಯುವ ಬಗ್ಗೆ ಯಾವ ಟೂಲ್ಕಿಟ್ ಅನ್ನೂ ತಯಾರಿಸಿಲ್ಲ! ಅಂದರೆ ಪರಿಸರವಾದದ ಮುಖವಾಡದ ಹಿಂದೆ ಇವರು ಮಾಡುತ್ತಿರುವುದು ಬೇರೆಯೇ ಕೆಲಸ! ಅದೇನೆಂದು ಶೋಧಿಸಹೊರಟರೆ ಇನ್ನಷ್ಟು ಭಯಾನಕ ಸತ್ಯಗಳು ಹೊರಬೀಳುತ್ತವೆ.

    ನಕಲಿ ಪರಿಸರವಾದಿಗಳೂ, ನೈಜ ದೇಶವಿರೋಧಿಗಳೂ...; ಭಾಗ-1
    ನಿಕಿತಾ ಜೇಕಬ್, ದಿಶಾ ರವಿ

    ಕೃಷಿ ಕಾನೂನುಗಳನ್ನು ಬಹಿರಂಗವಾಗಿ ವಿರೋಧಿಸುತ್ತಿರುವ ಬಹಳಷ್ಟು ವ್ಯಕ್ತಿಗಳು ಮತ್ತು ಸಂಘಟನೆಗಳು ಹಾಗೂ ಅವರ ಹಿಂದೆ ಸಂಚುಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಪರಿಸರವಾದಿ ಸಂಘಟನೆಗಳು ‘ಸರ್ಕಾರೇತರ ಸಂಘಟನೆಗಳು’ ಅಂದರೆ ‘ನಾನ್​ಗವರ್ನ್​ವೆುಂಟಲ್ ಆರ್ಗನೈಜೇಷನ್ಸ್’ (ಎನ್​ಜಿಓ) ಎಂಬ ಗುಂಪಿಗೆ ಸೇರುತ್ತವೆ. ಎನ್​ಜಿಓ ಅಂದರೆ ನಿಜವಾದ ಅರ್ಥದಲ್ಲಿ ಲಾಭಾಕಾಂಕ್ಷೆಯಿಲ್ಲದೆ ಸಮಾಜದ ಉನ್ನತಿಗಾಗಿ ಶ್ರಮಿಸುವ ಸಂಘಟನೆಗಳು. ಭಾರತದಲ್ಲಿನ ಎನ್​ಜಿಓಗಳು ಜನಹಿತಕಾರಿ ಕಾರ್ಯಯೋಜನೆಗಳನ್ನು ಜಾರಿಯಲ್ಲಿಡಲು ವಿದೇಶಗಳಿಂದಲೂ ಹಣ ಸ್ವೀಕರಿಸಲು ಇಂದಿರಾ ಗಾಂಧಿ ಸರ್ಕಾರ ‘ಫಾರಿನ್ ಕಾಂಟ್ರಿಬ್ಯೂಷನ್ಸ್ ರೆಗ್ಯುಲೇಟರಿ ಆಕ್ಟ್’ (ಎಫ್​ಸಿಆರ್​ಎ) ಮೂಲಕ ಅವಕಾಶ ಮಾಡಿಕೊಟ್ಟಿತು. ಹಿನ್ನೋಟದಲ್ಲಿ ಇಂದಿರಾ ಸರ್ಕಾರದ ಈ ನಡೆ ಸೋವಿಯತ್​ಹಣ ಇಲ್ಲಿನ ಎಡಪಂಥೀಯರಿಗೆ ಸುಲಭವಾಗಿ ಸಿಗಲು ದಾರಿಮಾಡಿಕೊಡುವ ವ್ಯವಸ್ಥಿತ ತಂತ್ರದಂತೆ ಕಾಣುತ್ತದೆ.

    ಶೀತಲ ಸಮರದ ದಿನಗಳಲ್ಲಿ ಸೋವಿಯತ್ ಕಮ್ಯೂನಿಸ್ಟ್ ಸರ್ಕಾರ ಜಗತ್ತಿನಾದ್ಯಂತ ತನ್ನ ಪರವಾಗಿ ಮಾತಾಡುವವರ, ಸುಳ್ಳು ಲೇಖನ ಬರೆಯುವವರ ಬೃಹತ್ ಪಡೆಯೊಂದನ್ನೇ ಸೃಷ್ಟಿಸಿಕೊಂಡಿತ್ತು. ಲೇಖಕರು, ಬುದ್ಧಿಜೀವಿಗಳು, ಪತ್ರಕರ್ತರು ಮತ್ತು ಇಡಿಇಡೀ ಪತ್ರಿಕೆಗಳು, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳೂ ಇದ್ದ ಈ ಪಡೆಯನ್ನು ಸೋವಿಯತ್ ಗುಪ್ತಚರ ಸಂಸ್ಥೆ ಕೆಜಿಬಿ ಹೇರಳ ಹಣ ಕೊಟ್ಟು ಸಾಕುತ್ತಿತ್ತು. ಕೆಲ ವರ್ಷಗಳ ಹಿಂದ ಬಯಲಾದ ಕೆಜಿಬಿ ರಹಸ್ಯ ದಾಖಲೆಯೊಂದರ ಪ್ರಕಾರ 1980ರ ಮಧ್ಯಭಾಗದಲ್ಲಿ ಅಂದರೆ ಆರ್ಥಿಕ ಸಂಕಷ್ಟದಿಂದ ಸೋವಿಯತ್ ಯೂನಿಯನ್ ಕುಸಿಯತೊಡಗಿದ್ದ ಸಂದರ್ಭದಲ್ಲೇ ಅದು ಹೀಗೆ ಹಣ ಕೊಟ್ಟು ತನ್ನ ಪರವಾಗಿ ಬರೆಸಿಕೊಂಡ ಲೇಖನಗಳು ಹದಿನಾರು ಸಾವಿರ! ಹೀಗೆ ಸೋವಿಯತ್​ಹಣ ತಿಂದು ಅದರ ಪರವಾಗಿ ತುತ್ತೂರಿ ಊದುತ್ತಿದ್ದವರು ಭಾರತದಲ್ಲೂ ಹೇರಳವಾಗಿದ್ದರು. ಅವರಿಗೆ ಹೀಗೆ ಸುಳ್ಳು ಹೇಳಿ, ಬರೆದು ಹಣ ಮಾಡಿಕೊಳ್ಳುವುದೊಂದು ದಂಧೆಯೇ ಆಗಿಹೋಗಿತ್ತು.

    ನಂತರ ಸೋವಿಯತ್ ಯೂನಿಯನ್ ಕುಸಿದು, ಈ ದಂಧೆಗಾರರಿಗೆ ಹಣದ ಮೂಲ ಬತ್ತಿಹೋದದ್ದು, ಇವರು ಕಳ್ಳ ಆದಾಯದ ಬದಲೀ ಮೂಲಗಳನ್ನು ಹುಡುಕಿಕೊಂಡದ್ದು, ಅದಕ್ಕಾಗಿ ತೊಟ್ಟ ಮುಖವಾಡಗಳು, ಆ ಮುಖವಾಡಗಳನ್ನು ಕಿತ್ತುಹಾಕಲು ತಾನು ಅಧಿಕಾರಕ್ಕೆ ಬಂದಾಗಿನಿಂದಲು ಮೋದಿ ಸರ್ಕಾರ ಪ್ರಯತ್ನ ನಡೆಸಿದ್ದು, ಅದು ಕಳೆದ ಸೆಪ್ಟೆಂಬರ್​ನಲ್ಲಿ ಪೂರ್ಣಗೊಂಡದ್ದು, ಅದೆಲ್ಲದರಿಂದಾಗಿ ಈ ದಂಧೆಗಾರರಿಗೆ ತಟ್ಟಿದ ಬಿಸಿ ಮತ್ತು ಹತಾಶೆಗೊಂಡು ಅವರು ಮೋದಿ ಸರ್ಕಾರದ ವಿರುದ್ಧ ರೂಪಿಸತೊಡಗಿದ ಷಡ್ಯಂತ್ರಗಳು- ಇವುಗಳ ವಿವರ ಲೇಖನದ ಮುಂದಿನ ಭಾಗದಲ್ಲಿ.

    (ಲೇಖಕರು: ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts