More

    ಜಗದಗಲ: ಸೈದ್ಧಾಂತಿಕ ಬದ್ಧತೆಯನ್ನು ನಾಯಕರೇ ಮರೆತರೆ…

    ಪಾಕಿಸ್ತಾನದ ಸೃಷ್ಟಿಗೆ ತಮ್ಮನ್ನು ಮುಡಿಪಾಗಿಟ್ಟ ಜಿನ್ನಾ ಅದಕ್ಕಾಗಿ ಸುಳ್ಳು, ಮೋಸದ ಮಾರ್ಗಗಳನ್ನು ಹಿಡಿಯಲು ಹಿಂಜರಿಯಲಿಲ್ಲ. ಒಂದು ಕಡೆ ಬ್ರಿಟಿಷ್ ಆಡಳಿತಕ್ಕೆ ಪ್ರಿಯವಾಗುವಂತೆ ನಡೆದುಕೊಳ್ಳುತ್ತ, ಮತ್ತೊಂದೆಡೆ ಮುಸ್ಲಿಂಧರ್ಮದ ಹೆಸರು ಹೇಳಿಕೊಂಡು ಅದರ ರಕ್ಷಣೆಗಾಗಿ ಪಾಕಿಸ್ತಾನ ಅತ್ಯಗತ್ಯ ಎಂದು ಮುಸ್ಲಿಂನಾಯಕರ, ನವಾಬರ ಮನಗೆಲ್ಲುತ್ತ ಹೋದರು.

    ಜಗದಗಲ: ಸೈದ್ಧಾಂತಿಕ ಬದ್ಧತೆಯನ್ನು ನಾಯಕರೇ ಮರೆತರೆ...ಇದು 2017 ಜುಲೈ 2ರ (ಭಾನುವಾರ) ಸಂಜೆಯ ಘಟನೆ. ಅಂದಿನ ರಾಷ್ಟ್ರಪತಿಗಳ ಕುರಿತಾದ ‘ಪ್ರಣಬ್ ಮುಖರ್ಜಿ: ಎ ಸ್ಟೇಟ್ಸ್​ಮ್ಯಾನ್’ ಕೃತಿಯ ಲೋಕಾರ್ಪಣೆ ಸಮಾರಂಭ, ರಾಷ್ಟ್ರಪತಿ ಭವನದಲ್ಲೇ. ಸಹಜವಾಗಿಯೇ ಅದು ಸರ್ಕಾರದ; ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಪ್ರಮುಖರ ಒಡ್ಡೋಲಗ. ಹಿರಿಯ ಬಿಜೆಪಿ ನಾಯಕ, ಮಾಜಿ ಗೃಹಮಂತ್ರಿ ಲಾಲ್​ಕೃಷ್ಣ ಆಡ್ವಾಣಿ ನಿಧಾನವಾಗಿ ಹಾಲ್ ಪ್ರವೇಶಿಸಿದರು, ಮತ್ತೂ ನಿಧಾನವಾಗಿ ಖಾಲಿ ಆಸನವೊಂದರತ್ತ ಹೆಜ್ಜೆ ಹಾಕಿದರು. ಅವರ ಹೆಜ್ಜೆಯ ದಿಕ್ಕನ್ನು ಗಮನಿಸಿ, ಅವು ತಮ್ಮತ್ತಲೇ ಬರುತ್ತಿವೆ ಎಂದು ಗುರುತಿಸಿದ ಮೂವರು ಬಿಜೆಪಿ ನಾಯಕರು ತಂತಮ್ಮ ಆಸನಗಳಿಂದ ಏದ್ದರು, ಎದ್ದು ದೂರದೂರಕ್ಕೆ ಹೊರಟು ಹೋದರು. ತೊಂಬತ್ತು ವರ್ಷಗಳ ಆಡ್ವಾಣಿಯವರ ಕಣ್ಣುಗಳಲ್ಲಿ ನೀರು ಜಿನುಗಿತು.

    ಪಕ್ಷ ಕಟ್ಟಿದ ಹಿರಿಯ ನಾಯಕನೊಬ್ಬನಿಗೆ ಇದು ಸಹಜವಾಗಿಯೇ ಅವಮಾನ. ಹೀಗೇಕಾಯಿತು? ಇದಕ್ಕೆ ಉತ್ತರ ಹುಡುಕಹೊರಟರೆ ರಾಜಕೀಯ ಪಕ್ಷವೊಂದರ ಹಿರಿಯ ನಾಯಕನೊಬ್ಬ ಹೇಗಿರಬಾರದು ಎಂಬುದಕ್ಕೆ ಆಡ್ವಾಣಿ ಒಂದು ಉದಾಹರಣೆಯಾಗಿ ನಿಂತಿದ್ದಾರೆ ಎಂಬ ಸತ್ಯ ಹೊರಬರುತ್ತದೆ, ಅನೇಕರಿಗೆ ಪಾಠ ವಾಗುತ್ತದೆ. ಆ ಸತ್ಯವೇನು, ಆ ಪಾಠಗಳೇನು ನೋಡೋಣ.

    ಭಾರತೀಯ ಜನತಾ ಪಕ್ಷದ ಮೂಲ ಭಾರತೀಯ ಜನಸಂಘ, ಅದರ ಮೂಲ ರಾಷ್ಟ್ರೀಯ ಸ್ವಯಂಸೇವಕ ಸಂಘ. 100 ವರ್ಷಗಳ ಹಿಂದೆ ಇದೇ ಸಮಯದಲ್ಲಿ ದಿನೇದಿನೆ ಉಗ್ರವಾಗತೊಡಗಿದ್ದ ಪಾಕಿಸ್ತಾನದ ಸೃಷ್ಟಿಯ ಆಗ್ರಹದ ಹಿಂದಿದ್ದದ್ದು ಬ್ರಿಟಿಷ್ ಸಾಮ್ರಾಜ್ಯಶಾಹಿ ಹುನ್ನಾರ ಮತ್ತು ಮುಸ್ಲಿಂ ಲೀಗ್ ನಾಯಕರ ರಾಜಕೀಯ ಹಾಗೂ ಆರ್ಥಿಕ ಲಾಲಸೆಗಳು. ಆ ಆಗ್ರಹ ಒಂದು ಬಿರುಗಾಳಿಯ ರೂಪ ಪಡೆದುಕೊಳ್ಳತೊಡಗಿದ್ದು ಆ ಎರಡು ದುಷ್ಟಶಕ್ತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲಾಗದ ಕಾಂಗ್ರೆಸ್​ನ ನಿರ್ವೀರ್ಯತೆಯಿದಾಗಿ. ಬ್ರಿಟಿಷ್ ವಸಾಹತುಶಾಹಿಗಳ ಜತೆ ಸೇರಿಕೊಂಡು ಮುಸ್ಲಿಂ ಲೀಗ್ ಸೃಷ್ಟಿಸಿದ ದೇಶ ಒಡೆಯುವ ಕುಕೃತ್ಯ ಸಹಜವಾಗಿಯೇ ಭಾರತದ ಐತಿಹಾಸಿಕ ಹಿರಿಮೆಗರಿಮೆಗಳ ಬಗ್ಗೆ ಅಭಿಮಾನವಿದ್ದ, ಆ ಕಾರಣದಿಂದಲೇ ಈ ದೇಶ ಅಖಂಡವಾಗಿಯೇ ಉಳಿದು ಮಹಾಯುದ್ಧೋತ್ತರ ಜಗತ್ತಿನಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಬಯಸಿದ್ದ ಅಸಂಖ್ಯ ಭಾರತಿಯರಿಗೆ ಸಮ್ಮತವೆನಿಸಲಿಲ್ಲ. ವಿಭಜನೆಯನ್ನು ಪರಿಣಾಮಕಾರಿಯಾಗಿ ವಿರೋಧಿಸದ, ಆ ಮೂಲಕ ಬ್ರಿಟಿಷ್ ವಸಾಹತುಶಾಹಿಗಳು ಮತ್ತು ಮುಸ್ಲಿಂ ಲೀಗ್​ನ ಹುನ್ನಾರಗಳಿಗೆ ಪ್ರತಿಯಾಗಿ ಪರಿಣಾಮಕಾರಿ ಜನಾಭಿಪ್ರಾಯ ಮೂಡಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಬಗ್ಗೆ ದೇಶಪ್ರೇಮಿಗಳಿಗೆ ಭ್ರಮನಿರಸನವಾಗಿತ್ತು. ಅಂತಹವರೆಲ್ಲ ಒಟ್ಟುಗೂಡಿ 1925ರಲ್ಲಿ (ಮುಸ್ಲಿಂ ಲೀಗ್ ಸ್ಥಾಪನೆಯಾದ 19 ವರ್ಷಗಳ ನಂತರ) ಸೃಷ್ಟಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಧ್ಯೇಯಗಳಲ್ಲೊಂದು ಅಖಂಡ ಭಾರತಕ್ಕೆ ನಿಷ್ಠೆ.

    ಇಂತಹ ದೇಶಾಭಿಮಾನಿಗಳ ಪ್ರಯತ್ನವನ್ನೂ ಮೀರಿ 1947ರಲ್ಲಿ ಅಖಂಡ ಭಾರತ ತುಂಡಾಗಿಯೇ ಹೋದಾಗ ಆರೆಸ್ಸೆಸ್​ಗೆ ತೀವ್ರ ಆಘಾತವಾದದ್ದು ಸಹಜ. ಆಗ ನಿರಾಶರಾದ ಆರೆಸ್ಸೆಸ್ ಬೆಂಬಲಿಗರು ದೇಶವಿಭಜನೆಯಿಂದ ನೊಂದದ್ದಲ್ಲದೆ ಕಾಂಗ್ರೆಸ್​ನ ಮುಸ್ಲಿಂ-ಪರ ನೀತಿಗಳಿಂದ ಭ್ರಮನಿರಸನಗೊಂಡ ಹಿಂದೂಗಳು ಮತ್ತು ರಾಷ್ಟ್ರೀಯತಾ ಮನೋಭಾವದ ಮುಂದಾಳುಗಳು ಸೃಷ್ಟಿಸಿದ ರಾಜಕೀಯ ಪಕ್ಷ ಭಾರತೀಯ ಜನಸಂಘ. ಹೀಗಾಗಿಯೇ ಪಾಕಿಸ್ತಾನದ ಅಸ್ತಿತ್ವದ ನಿರಾಕರಣೆ, ಅದಕ್ಕೆ ಕಾರಣರಾದವರ ಬಗ್ಗೆ ತಿರಸ್ಕಾರ ಹಾಗೂ ಅಖಂಡ ಭಾರತದ ಪರಿಕಲ್ಪನೆಗೆ ನಿಷ್ಠೆ-ಜನಸಂಘದ ಅಸ್ತಿತ್ವದ ಸೈದ್ಧಾಂತಿಕ ಬುನಾದಿಗಳಾಗಿದ್ದವು. 1975-77ರ ತುರ್ತು ಪರಿಸ್ಥಿತಿ ನಿರ್ವಿುಸಿದ ಹೊಸ ರಾಜಕೀಯ ಸಮೀಕರಣಗಳ ಒತ್ತಡಗಳಿಗೆ ಸಿಲುಕಿ ಜನಸಂಘ 1977-79ರ ಜನತಾ ಪ್ರಯೋಗದ ಭಾಗವಾಯಿತು. ಆದರೆ ತನ್ನಲ್ಲಿನ ಆಂತರಿಕ ವಿರೋಧಾಭಾಸಗಳಿಂದಲೇ ವಿಫಲವಾಗುವ ಎಲ್ಲ ಸೂಚನೆಗಳನ್ನೂ ಜನತಾ ಪ್ರಯೋಗ ಆರಂಭದಲ್ಲೇ ಹೊರಗೆಡವಿತ್ತು. ಅಂತಿಮವಾಗಿ ಅದು ಆಗಿಯೇ ಹೋಗಿ, 1980 ಏಪ್ರಿಲ್ 6ರಂದು ಭಾರತೀಯ ಜನತಾ ಪಕ್ಷವಾಗಿ ಮರುಹುಟ್ಟು ಪಡೆದಾಗಲೂ ಜನಸಂಘದ ಸೈದ್ಧಾಂತಿಕ ಬುನಾದಿ ಶಿಥಿಲಗೊಳ್ಳಲಿಲ್ಲ. 2005ರಲ್ಲಿ ಆಡ್ವಾಣಿ ಕೊಡಲಿಯೇಟು ಹಾಕಿದ್ದು ಆ ಬುನಾದಿಗೇ.

    ಬಿಜೆಪಿ ಅಧಿಕಾರ ಕಳೆದುಕೊಂಡ ಮರುವರ್ಷ 2005ರಲ್ಲಿ ಆಡ್ವಾಣಿ ಪಾಕಿಸ್ತಾನದ ಅಸ್ತಿತ್ವವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡು ಅಖಂಡ ಭಾರತ ಕಲ್ಪನೆಯಿಂದ ದೂರ ಸರಿಯುವ ಸೂಚನೆ ನೀಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು. ಅದು ಆರಂಭ. ಮುಂದಿನ ಎರಡೇ ದಿನಗಳಲ್ಲಿ ಅವರು ಕರಾಚಿಯಲ್ಲಿನ ಜಿನ್ನಾರ ಸಮಾಧಿಸ್ಥಳಕ್ಕೆ ಭೇಟಿ ನೀಡಿ ಪಾಕಿಸ್ತಾನದ ಸೃಷ್ಟಿಕರ್ತನನ್ನು ‘ಸೆಕ್ಯೂಲರ್’ ಎಂದು ಕರೆದದ್ದಲ್ಲದೆ ‘ಹಿಂದೂ-ಮುಸ್ಲಿಂ ಸ್ನೇಹದ ರಾಯಭಾರಿ’ ಎಂದು ಬಣ್ಣಿಸಿದರು. ನಿಷ್ಠಾವಂತ ಬಿಜೆಪಿಗರಿಗೆ ಇದು ಆಘಾತ. ಯಾಕೆಂದರೆ ಆಡ್ವಾಣಿ ಬಣ್ಣಿಸಿದ್ದು ಜಿನ್ನಾರ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ.

    ತಮ್ಮ ಸಾಮಾಜಿಕ-ರಾಜಕೀಯ ಬದುಕಿನ ಆರಂಭದ ದಿನಗಳಲ್ಲಿ ಜಿನ್ನಾ ಹಿಂದೂ-ಮುಸ್ಲಿಂ ಸೌಹಾರ್ದದ ಪರವಾಗಿ ಇದ್ದದ್ದು ಉಂಟು. ಅದನ್ನು ನಿಷ್ಠುರ ಸತ್ಯಗಳನ್ನು ನಿರ್ಭಿಡೆಯಿಂದ ಹೇಳುವುದಕ್ಕೆ ಹೆಸರಾಗಿದ್ದ ಸರೋಜಿನಿ ನಾಯ್ಡು ಅವರೇ ಗುರುತಿಸಿ ಶ್ಲಾಘಿಸಿದ್ದರು. 1927ರ ಕಾಂಗ್ರೆಸ್ ಸಮಾವೇಶದಲ್ಲಿ ಗಾಂಧೀಜಿ ಅನುಯಾಯಿಗಳು ಜಿನ್ನಾರನ್ನು ವೇದಿಕೆಯಿಂದ ಕೆಳಗೆಳೆದು ಅವಮಾನಿಸದೇ ಹೋಗಿದ್ದರೆ ಆ ಪ್ರತಿಭಾವಂತ ನಾಯಕ ಕಾಂಗ್ರೆಸ್​ನಲ್ಲೇ ಉಳಿದು ಹಿಂದೂ-ಮುಸ್ಲಿಂ ಭಾವೈಕ್ಯತೆ ಬಗ್ಗೆ ಮಾತಾಡುತ್ತ ದಿನಗಳೆದುಬಿಡುತ್ತಿದ್ದರೇನೋ. ಆದರೆ ತಮಗಾದ ಅವಮಾನದಿಂದ ಮನನೊಂದು ಅವರು ಲಂಡನ್​ಗೆ ತೆರಳಿದಾಗ ಆ ಪ್ರಚಂಡ ವಾಗ್ಮಿಯನ್ನು ತಮ್ಮತ್ತ ಸೆಳೆದುಕೊಳ್ಳುವುದು ಮುಸ್ಲಿಂ ಲೀಗ್ ನಾಯಕರಿಗೆ ಸುಲಭವಾಯಿತು. ನಂತರ ನಾವು ನೋಡುವುದು ಬೇರೆಯೇ ಜಿನ್ನಾರನ್ನು. ಪಾಕಿಸ್ತಾನದ ಸೃಷ್ಟಿಗೆ ತಮ್ಮನ್ನು ಮುಡಿಪಾಗಿಟ್ಟ ಜಿನ್ನಾ ಅದಕ್ಕಾಗಿ ಸುಳ್ಳು, ಮೋಸದ ಮಾರ್ಗಗಳನ್ನು ಹಿಡಿಯಲು ಹಿಂಜರಿಯಲಿಲ್ಲ. ಒಂದು ಕಡೆ ಬ್ರಿಟಿಷ್ ಆಡಳಿತಕ್ಕೆ ಪ್ರಿಯವಾಗುವಂತೆ ನಡೆದುಕೊಳ್ಳುತ್ತ, ಮತ್ತೊಂದೆಡೆ ಮುಸ್ಲಿಂಧರ್ಮದ ಹೆಸರು ಹೇಳಿಕೊಂಡು ಅದರ ರಕ್ಷಣೆಗಾಗಿ ಪಾಕಿಸ್ತಾನ ಅತ್ಯಗತ್ಯ ಎಂದು ಮುಸ್ಲಿಂನಾಯಕರ, ನವಾಬರ ಮನಗೆಲ್ಲುತ್ತ ಹೋದರು. ದಿನಕ್ಕೆ ಐದು ಬಾರಿಯ ಪ್ರಾರ್ಥನೆ ಸೇರಿ ಇಸ್ಲಾಂನ ಯಾವ ನಿಯಮವನ್ನೂ ಪಾಲಿಸದ, ಪಾರ್ಸಿ ಸ್ತ್ರೀಯನ್ನು ವಿವಾಹವಾಗಿದ್ದ, ಹಂದಿಮಾಂಸ ಮತ್ತು ಮದ್ಯವನ್ನು ಇಷ್ಟಪಟ್ಟು ಸೇವಿಸುತ್ತಿದ್ದ ಜಿನ್ನಾ ಇಸ್ಲಾಂ ಬಗ್ಗೆ ಮಾತಾಡುವುದು ಹಾಸ್ಯಾಸ್ಪದವಾಗಿತ್ತು. ಹೀಗಾಗಿಯೇ ಮುಸ್ಲಿಂ ಲೀಗಿಗಳು ಅವರನ್ನು ‘ಕಾಯದ್-ಎ-ಆಜಂ’ (ಮಹಾನಾಯಕ) ಎಂದು ಕೊಂಡಾಡಿದರೆ ಜಮಾತ್-ಎ-ಹಿಂದ್​ನ ಸ್ಥಾಪಕ ಮೌಲಾನಾ ಮೌದೂದಿಯವರು ‘ಕಾಫಿರ್-ಎ-ಆಜಂ’ (ಮಹಾ ಧರ್ಮದ್ರೋಹಿ) ಎಂದು ಲೇವಡಿ ಮಾಡುತ್ತಿದ್ದರು. ಆದರೇನು, ಈಗಿನಂತೆ ಆಗಲೂ ಮುಖಕ್ಕಿಂತ ಮುಖವಾಡಗಳೇ ಹೆಚ್ಚು ಗೌರವ ಪಡೆಯುತ್ತಿದ್ದ ಕಾರಣ ಜಿನ್ನಾರ ಆಷಾಡಭೂತಿತನವನ್ನು ಗುರುತಿಸಿದವರು ಕಡಿಮೆ. ಅವರಿಗೆ ಇಸ್ಲಾಂ ಬಗೆಗೂ ಪ್ರೀತಿಯೇನೂ ಇರಲಿಲ್ಲ. ‘ನೀವು ಪಾಕಿಸ್ತಾನವನ್ನು ಒಂದು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುತ್ತೀರಾ’ ಎಂದು ಮುಂದೆ ಪಾಕ್ ಅಧ್ಯಕ್ಷರಾದ ಇಸ್ಕಂದರ್ ಮಿರ್ಜಾ 1945ರಲ್ಲಿ ಕೇಳಿದಾಗ ಜಿನ್ನಾ ‘ನಾನ್ಸೆನ್ಸ್! ನಾನೊಂದು ಆಧುನಿಕ ರಾಷ್ಟ್ರವನ್ನು ನಿರ್ವಿುಸುತ್ತೇನೆ’ ಅಂದಿದ್ದರು. ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆದಾದ ಮೇಲೆ ತಮ್ಮ ನಿಜ ಬಣ್ಣವನ್ನು ಅವರು ಬಹಿರಂಗವಾಗಿಯೇ ಹೊರಗೆಡಹಿದರು.

    1947 ಆಗಸ್ಟ್ 12ರಂದು ಪಾಕಿಸ್ತಾನದ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆಯಲ್ಲಿ ‘ಪಾಕಿಸ್ತಾನ ಒಂದು ಆಧುನಿಕ, ಧರ್ಮನಿರಪೇಕ್ಷ ರಾಜ್ಯವಾಗಿ ಉಗಮಿಸಬೇಕು’ ಎಂದು ಘೊಷಿಸಿದರು. ಮಕ್ಕಳ ಕಥೆಯಲ್ಲಿದ್ದಂತಹ ಗುಳ್ಳೆನರಿ ತನ್ನ ಕೃತಕ ನೀಲಿ (ಹಸಿರು!) ಬಣ್ಣವನ್ನು ತೊಳೆದುಕೊಂಡು ನಿಜ ಬಣ್ಣದಲ್ಲಿ ನಿಂತಿತ್ತು. ತನ್ನ ಅಧಿಕಾರಲಾಲಸೆಯ ಪೂರೈಕೆಗಾಗಿ ಧರ್ಮದ ಹೆಸರನ್ನು ದುರುಪಯೋಗಪಡಿಸಿಕೊಂಡು ಅಖಂಡ ಭಾರತವನ್ನು ಎರಡು ತುಂಡಾಗಿಸಿದ ಜಿನ್ನಾ ಬಗ್ಗೆ ಆರೆಸ್ಸೆಸ್​ಗೆ ರೋಷ ಉಂಟಾದದ್ದು ಸಹಜವೇ ಆಗಿತ್ತು. ಇಂತಹ ಜಿನ್ನಾರನ್ನು ಆಡ್ವಾಣಿ ಹೊಗಳಹೊರಟದ್ದು ಆರೆಸ್ಸೆಸ್​ಗಾಗಲೀ, ಬಿಜೆಪಿಗಾಗಲೀ ಸಮ್ಮತವೆನಿಸಲು ಸಾಧ್ಯವೇ ಇರಲಿಲ್ಲ. ಇದು ಪಕ್ಷವನ್ನು ಕಟ್ಟಿ, ಅದನ್ನು ಅಧಿಕಾರದ ಹತ್ತಿರಕ್ಕೆ ತಂದಿದ್ದ ಹಿರಿಯ ಆಡ್ವಾಣಿಯವರಿಗೆ ಹೇಗೆ ತಿಳಿಯಲಿಲ್ಲ?

    ಇದು ಇಷ್ಟಕ್ಕೇ ನಿಲ್ಲಲಿಲ್ಲ. ಕಾಂಗ್ರೆಸ್ ಮತ್ತು ಗಾಂಧಿ ಪರಿವಾರದ ಆರ್ಥಿಕ ಭ್ರಷ್ಟಾಚಾರದ ವಿರುದ್ಧ ಬಿಜೆಪಿ 1987ರಲ್ಲೇ ಯುದ್ಧ ಸಾರಿತು. ಆ ಯುದ್ಧದ ಪ್ರಮುಖ ನೇತಾರ ಆಡ್ವಾಣಿಯವರೇ ಆಗಿದ್ದರು ಮತ್ತು ಅವರ ಪ್ರಮುಖ ಅಸ್ತ್ರ ರಾಜೀವ್ ಮತ್ತು ಸೋನಿಯಾ ಗಾಂಧಿ ಸ್ವಿಸ್ ಬ್ಯಾಂಕ್​ಗಳಲ್ಲಿ ಅಗಾಧ ಪ್ರಮಾಣದಲ್ಲಿ ಕಳ್ಳಹಣ ಇಟ್ಟಿದ್ದಾರೆಂಬ ಆರೋಪ. ಈ ಆರೋಪದ ಪರವಾಗಿ ಆಡ್ವಾಣಿಯವರಲ್ಲದೆ ಇತರ ಬಿಜೆಪಿ ನಾಯಕರು ಹಲವಾರು ವಿಶ್ವಸನೀಯ ಎನಿಸುವಂಥ ಆಧಾರಗಳನ್ನು ದೇಶದ ಮುಂದೆ ಇಡುತ್ತ ಬಂದದ್ದೂ ಉಂಟು. ಇದೆಲ್ಲವನ್ನೂ ಮರೆತು ಯುಪಿಎ ಆಡಳಿತಾವಧಿಯಲ್ಲಿ ಆಡ್ವಾಣಿ ಸೋನಿಯಾರಿಗೆ ಹತ್ತಿರವಾದರು. ಅಷ್ಟೇ ಅಲ್ಲ, ಆ ಕಾಂಗ್ರೆಸ್ ನಾಯಕಿಯ ವಿರುದ್ಧ ತಾವೂ ಸೇರಿ ಬಿಜೆಪಿ ನಾಯಕರುಗಳು ಮಾಡಿದ ಭ್ರಷ್ಟಾಚಾರ ಹಾಗೂ ಸ್ವಿಸ್ ಬ್ಯಾಂಕ್​ನಲ್ಲಿ ಕಳ್ಳಹಣ ಇಟ್ಟಿದ್ದಾರೆಂಬ ಆರೋಪಗಳೆಲ್ಲ ಸತ್ಯದೂರ ಎಂದವರು 2011ರಲ್ಲಿ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿಬಿಟ್ಟರು. ಕಾಂಗ್ರೆಸ್ ವಿರುದ್ಧ ಬಿಜೆಪಿ ಸಾಗಿಸಿಕೊಂಡು ಬಂದಿದ್ದ ಹೋರಾಟದ ಬೇರನ್ನೇ ಕತ್ತರಿಸುವ ಕೆಲಸ ಇದು.

    ಆಡ್ವಾಣಿ ಹೀಗೇಕೆ ಮಾಡಿದರು? ಕೆಲ ‘ಸಾಕ್ಷ್ಯಾಧಾರ’ಗಳ ಮೇಲೆ ಊಹೆಯೊಂದನ್ನು ಮಾಡುವ ಅವಕಾಶ ನಮಗಿದೆ. 1992 ಡಿಸೆಂಬರ್ 6ರಂದು ಉದ್ರಿಕ್ತ ಕರಸೇವಕರು ಬಾಬ್ರಿ ಮಸೀದಿಯನ್ನು ಕೆಡವಿದರಷ್ಟೇ. ಈ ಕೃತ್ಯಕ್ಕೆ ಪೂರ್ವಯೋಜನೆ ರೂಪಿಸಿದ, ಮಸೀದಿ ಧ್ವಂಸಕ್ಕೆ ಪ್ರಚೋದನೆ ನೀಡಿದ ಆಪಾದನೆ ಆಡ್ವಾಣಿ ಮೇಲೂ ಇತ್ತು ಮತ್ತು ಆ ಕುರಿತಾಗಿ ನ್ಯಾಯಿಕ ವಿಚಾರಣೆ 1993ರಲ್ಲೇ ಆರಂಭವಾಗಿತ್ತು. ವಿವಾದಿತ ಸ್ಥಳದಲ್ಲಿ ಹಲವಾರು ಗುಪ್ತ ಕ್ಯಾಮೆರಾಗಳನ್ನು ಆಳವಡಿಸುವ ವ್ಯವಸ್ಥೆಯನ್ನು ಆಗಿನ ರಕ್ಷಣಾಮಂತ್ರಿ ಶರದ್ ಪವಾರ್ ಮಾಡಿದ್ದರು ಎನ್ನಲಾಗುತ್ತದೆ. ಹೀಗಾಗಿ ಇಡೀ ಘಟನೆ ಚಿತ್ರೀಕರಣಗೊಂಡು ರಕ್ಷಣಾ ಇಲಾಖೆಯ ಕೈಸೇರಿತು ಎಂಬ ಮಾತೂ ಇದೆ. ಅದನ್ನು ಬೇಕೆಂದಾಗ ನ್ಯಾಯಾಲಯಕ್ಕೆ ಸಲ್ಲಿಸಿ ಆಡ್ವಾಣಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಅವಕಾಶ ಸೋನಿಯಾರಿಗಿತ್ತು ಎಂದು ಹೇಳಲಾಗುತ್ತದೆ. ಈ ಇಕ್ಕಟ್ಟನ್ನು ನಿವಾರಿಸಿಕೊಳ್ಳಲೆಂದೇ ಆಡ್ವಾಣಿ ಸೋನಿಯಾರಿಗೆ ಹತ್ತಿರವಾಗಿರಬೇಕು, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್ ನಾಯಕಿಯ ಪರವಾಗಿ ಹೇಳಿಕೆ ಕೊಟ್ಟಿರಬಹುದು. ಈ ಊಹೆಗೆ ಇಂಬುಗೊಡುವುದು ಹತ್ತುವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ ಬಾಬ್ರಿ ಮಸೀದಿ ಧ್ವಂಸದ ಕುರಿತಾದ ನ್ಯಾಯಿಕ ಪ್ರಕ್ರಿಯೆ ಒಂದಿಂಚೂ ಮುಂದೆ ಸಾಗಲಿಲ್ಲ ಎಂಬ ವಿಷಯ. ಒಟ್ಟಿನಲ್ಲಿ, ಸೋನಿಯಾ-ಪರ ನಿಲುವುಗಳಿಂದ ಆಡ್ವಾಣಿ ಬಿಜಿಪಿಯ ಕಾಂಗ್ರೆಸ್-ವಿರೋಧದ ಬುಡವನ್ನೇ ಕತ್ತರಿಸಲು ಹೊರಟರು. ಪ್ರತಿಯಾಗಿ ಬಿಜೆಪಿ ಅವರ ರಾಜಕೀಯ ಭವಿಷ್ಯದ ಬುಡವನ್ನೇ ಕತ್ತರಿಸಿಹಾಕಿತು. 2014ರ ಲೋಕಸಭಾ ಚುನಾವಣೆಗಳಲ್ಲಿ ಆಡ್ವಾಣಿ ಬಯಸಿದ ಕ್ಷೇತ್ರವನ್ನು ಅವರಿಗೆ ನಿರಾಕರಿಸಿ ಅವರ ಬಗ್ಗೆ ತನ್ನ ನಿಲುವನ್ನು ಬಿಜೆಪಿ ಅವರಿಗೇ ಮನವರಿಕೆ ಮಾಡಿಕೊಟ್ಟಿತು. ಇದು ಮುಂದುವರಿದು 3 ವರ್ಷಗಳ ನಂತರ ರಾಷ್ಟ್ರಪತಿ ಭವನದಲ್ಲಿ ಆಡ್ವಾಣಿ ಕಣ್ಣಲ್ಲಿ ನೀರು ತರಿಸಿತು.

    ಇಲ್ಲಿ ಮತ್ತೊಬ್ಬ ಹಿರಿಯ ನಾಯಕ ಜಸ್ವಂತ್ ಸಿಂಗ್ ಬಗೆಗೂ ಒಂದು ಮಾತು ಹೇಳಬೇಕು. 2005ರಲ್ಲಿ ಆಡ್ವಾಣಿ ಮಾಡಿದ್ದನ್ನೇ ಸಿಂಗ್ 4 ವರ್ಷಗಳ ನಂತರ ಇನ್ನೂ ದೊಡ್ಡದಾಗಿ ಮಾಡಿದರು. 2009ರಲ್ಲಿ ಪ್ರಕಟಿಸಿದ ದೇಶವಿಭಜನೆಯ ಬಗೆಗಿನ ತಮ್ಮ “Jinnah: India-Partition Independence’ ಕೃತಿಯಲ್ಲಿ ಜಿನ್ನಾರನ್ನು ಸೆಕ್ಯೂಲರ್ ಮನೋಭಾವದವರೆಂದು ಬಿಂಬಿಸಿದ್ದಲ್ಲದೆ ದೇಶವಿಭಜನೆಯಲ್ಲಿ ಅವರು ಪ್ರಮುಖ ‘ದೋಷಿ’ ಅಲ್ಲ ಎಂಬಂತೆ ಚಿತ್ರಿಸಿದರು. ಆ ಕಾರಣಕ್ಕಾಗಿ ಅವರು ಇತರ ಬಿಜೆಪಿ ಮುಂದಾಳುಗಳಿಂದ ಉಗ್ರ ಪ್ರತಿಕ್ರಿಯೆಯನ್ನು ಎದುರಿಸಬೇಕಾಯಿತು. ಅಷ್ಟೇ ಅಲ್ಲ, 2014ರ ಚುನಾವಣೆಗಳಲ್ಲಿ ಸಿಂಗ್​ರಿಗೆ ಬಿಜೆಪಿ ಟಿಕೆಟ್ ಅನ್ನೇ ನಿರಾಕರಿಸಲಾಯಿತು, ಬಂಡೆದ್ದು ಸ್ವತಂತ್ರವಾಗಿ ಸ್ಪರ್ಧಿಸಹೊರಟ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ತಾವೇ ಕಟ್ಟಿ ಬೆಳೆಸಿದ ಪಕ್ಷಕ್ಕೆ ತಾವೇ ನೀಡಿದ್ದ ಸೈದ್ಧಾಂತಿಕ ಅಸ್ತಿಬಾರವನ್ನು ತಮ್ಮ ಕೈಯಾರೆ ಒಡೆಯವುದು ಸಂಘಟನಾತ್ಮಕ ದೃಷ್ಟಿಯಿಂದ ಅದೆಷ್ಟು ಅನುಚಿತ ಎನ್ನುವುದನ್ನು ಈ ಇಬ್ಬರು ನಾಯಕರ ಬದುಕಿನಿಂದ ವೇದ್ಯವಾಗುತ್ತದೆ.

    ಅಧ್ಯಕ್ಷ ಟ್ರಂಪ್ ವಿದೇಶನೀತಿಗಳ ಮೂಲಸೆಲೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts