More

    ತಾನು ಮೊಸರು ತಿಂದು ಮೇಕೆಯ ಬಾಯಿಗೆ ಒರೆಸಿದ ಕೋತಿ

    ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಬುದ್ಧಿವಂತಿಕೆಗೆ, ವಸ್ತುನಿಷ್ಠ ಚಿಂತನೆ ಮತ್ತು ಮಾತುಗಾರಿಕೆಗೆ ಅಷ್ಟೇನೂ ಹೆಸರಾದವರಲ್ಲ ಎನ್ನುವುದು ಈವರೆಗೆ ದೇಶಕ್ಕೆ ಸ್ಪಷ್ಟವಾಗಿ ತಿಳಿದುಹೋಗಿರುವ ಸಂಗತಿ. ಸಂಸತ್​ನ ಒಳಗೆ ಹೊರಗೆ ಎಲ್ಲೆಂದರಲ್ಲಿ ಅಸಂಬದ್ಧ ಮಾತುಗಳನ್ನು, ಅಪ್ರಬುದ್ಧ ಹಾಗೂ ಅವಿವೇಕಿ ನಡೆಗಳನ್ನು ಪ್ರದರ್ಶಿಸುವ ಇತಿಹಾಸವನ್ನೇ ಅವರು ಸೃಷ್ಟಿಸಿದ್ದಾರೆ. ಈ ಇತಿಹಾಸದಲ್ಲಿ ಕಳೆದೊಂದು ದಶಕದಲ್ಲೇ ಸಿಗುವ ಮೈಲಿಗಲ್ಲುಗಳಲ್ಲಿ ಕೆಲವು ಹೀಗಿವೆ- ‘ಲಷ್ಕರ್-ಎ-ತೋಯ್ಬಾದಿಂದೇನೂ ನಮಗೆ ಅಪಾಯವಿಲ್ಲ, ನಾವು ಗಂಭೀರವಾಗಿ ಪರಿಗಣಿಸಬೇಕಾದ್ದು ಹಿಂದೂ ಭಯೋತ್ಪಾದನೆಯನ್ನು’ಎಂಬ ರಾಷ್ಟ್ರಹಿತಘಾತಕ ಮಾತನ್ನು ಜುಲೈ 20, 2008ರಂದು ಅಮೆರಿಕಾದ ರಾಯಭಾರಿಗೆ ಹೇಳಿದ ರಾಹುಲ್ ತಮ್ಮ ವಿಚಾರಶೂನ್ಯ ನಡೆಯನ್ನು ದೇಶದ ಮುಂದೆ ದೊಡ್ಡದಾಗಿ ಪ್ರದರ್ಶಿಸಿದ್ದು ತಮ್ಮದೇ ಕಾಂಗ್ರೆಸ್ ನೇತೃತ್ವದ ಯುಪಿಎ, ಮನಮೋಹನ್ ಸಿಂಗ್ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯೊಂದರ ಪ್ರತಿಯನ್ನು ಸೆಪ್ಟೆಂಬರ್ 27, 2013ರಂದು ಪತ್ರಿಕಾಗೋಷ್ಠಿಯೊಂದರಲ್ಲಿ ಉನ್ಮಾದದ ಆವೇಶದಲ್ಲಿ ಹರಿದು ಹಾಕುವುದರ ಮೂಲಕ.

    2019ರ ಚುನಾವಣೆಗಳ ಮುನ್ನಾದಿನಗಳಲ್ಲಿ ಫ್ರಾನ್ಸ್​ನಿಂದ ರಫಾಯೆಲ್ ಯುದ್ಧವಿಮಾನಗಳ ಖರೀದಿ ವಿಷಯದಲ್ಲಿ ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮಾಡಿದ ಆಪಾದನೆಗಳಲ್ಲಿ ಮುಖ್ಯವಾದುದು ಉದ್ಯಮಿ ಅನಿಲ್ ಅಂಬಾನಿ ಜೇಬಿಗೆ ಮೋದಿ ಮೂವತ್ತು ಸಾವಿರ ಕೋಟಿ ರೂಪಾಯಿ ಹಾಕಿದ್ದಾರೆ ಎಂದು. ಒಟ್ಟು ಐವತ್ತೊಂಬತ್ತು ಕೋಟಿ ಸಾವಿರ ರೂಪಾಯಿಗಳ ವ್ಯವಹಾರದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹಣವನ್ನು ಒಬ್ಬ ಭಾರತೀಯ ಉದ್ಯಮಿಯ ಜೇಬಿಗೆ ಹಾಕಲು ಹೇಗೆ ಸಾಧ್ಯ, ಇಂತಹ ನಷ್ಟದಾಯಕ ವ್ಯವಹಾರಕ್ಕೆ ಇಳಿಯುವಷ್ಟು ಮೂರ್ಖನಾಗಿತ್ತೇ ಫ್ರೆಂಚ್ ವಿಮಾನ ತಯಾರಿಕಾ ಸಂಸ್ಥೆ ಡಾಸೂ ಎಂಬ ಪ್ರಶ್ನೆಗಳು ರಾಹುಲ್ ತಲೆಯೊಳಗೆ ಬರಲೇ ಇಲ್ಲ! ಹತಾಶೆಯಲ್ಲಿ ಮೋದಿಯವರ ವಿರುದ್ಧ ವೈಯಕ್ತಿಕ ದಾಳಿಗಿಳಿದ ರಾಹುಲ್ ಪ್ರಧಾನಿಯವರನ್ನು ‘ಚೌಕಿದಾರ್ ಚೋರ್ ಹೈ’ ಎಂದು ಕರೆದದ್ದು ನೆನಪಿದೆಯೇ? ಹಾಗೆ ಮಾಡುವ ಮೂಲಕ ಅವರು ದೇಶಕ್ಕೆ ನೆನಪಿಸಿದ್ದು ಮೂರು ದಶಕಗಳ ಹಿಂದಿನ ಬೊಫೋರ್ಸ್ ಹಗರಣ ಮತ್ತು ಪಟ್ನಾ ಆಕಾಶವಾಣಿ ಕೇಂದ್ರದ ಕಾರ್ಯಕ್ರಮವೊಂದರಲ್ಲಿ ಬಾಲೆಯೊಬ್ಬಳು ಹೇಳಿದ ‘ಗಲಿ ಗಲಿ ಮೆ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ’ ಎಂಬ ಮಾತನ್ನು. ಅದು ಸಾಲದು ಎಂಬಂತೆ ತಮ್ಮ ದಿವಂಗತ ತಂದೆಯ ವೃತ್ತಿಯನ್ನೂ ಅವಮಾನಿಸುವ ಕೃತ್ಯವೂ ಅವರಿಂದ ಘಟಿಸಿಹೋಯಿತು. ‘ಹಿಂದೆ ಪೈಲಟ್​ಗಳಿದ್ದರು. ಈಗ ಪೈಲಟ್​ಗಳಿಲ್ಲ. ಅವರು ತಮ್ಮನ್ನು ಪೈಲಟ್​ಗಳೆಂದು ಕರೆದುಕೊಳ್ಳುತ್ತಾರೆ, ಆದರೆ ಅವರು ಮೂಲಭೂತವಾಗಿ ಸಿಸ್ಟಂ ಮ್ಯಾನೇಜರ್​ಗಳಷ್ಟೇ. ವಿಮಾನ ತನ್ನಿಂತಾನೇ ಹಾರುತ್ತದೆ. ಪೈಲಟ್ ಇದ್ದಾನೆ ಎಂದು ಪ್ರಯಾಣಿಕರು ನಂಬಿ ನೆಮ್ಮದಿಯಾಗಿರಲಿ ಎಂದು ಅವರು (ಸಿಸ್ಟಂ ಮ್ಯಾನೇಜರ್​ಗಳು) ಅಲ್ಲಿ ಕುಳಿತಿರುತ್ತಾರೆ ಅಷ್ಟೇ’ ಎಂಬ ರಾಹುಲ್ ಆಣಿಮುತ್ತನ್ನು ವಿಮಾನಚಾಲಕರಾಗಿದ್ದ ರಾಜೀವ್ ಗಾಂಧಿಯವರೇನಾದರೂ ಇಂದು ಬದುಕಿದ್ದು, ಕೇಳಿದ್ದರೆ ಖಂಡಿತವಾಗಿಯೂ ತಲೆತಗ್ಗಿಸುತ್ತಿದ್ದರು. ಈ ನಡುವೆ ‘ಶಿಕಂಜಿ (ನಿಂಬುಪಾನಿ) ಮಾರುತ್ತಿದ್ದವನೊಬ್ಬ ಕೋಕಾ ಕೋಲಾ ಕಂಪನಿ ಸ್ಥಾಪಿಸಿದ್ದ’ ಎಂಬ ‘ಅತ್ಯಂತ ಮಹತ್ವ’ದ ವಿಷಯವನ್ನು ದೇಶ ರಾಹುಲ್ ಗಾಂಧಿಯವರಿಂದ ಅರಿತುಕೊಂಡದ್ದೂ ಆಯಿತು ಬಿಡಿ.

    ಇವೆಲ್ಲಕ್ಕೂ ಕಲಶಪ್ರಾಯವಾದ ಮಾತುಗಳ ಗೊಂಚಲನ್ನೇ ಇದೇ ಫೆಬ್ರವರಿ 2ರಂದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹೇಳಿದ್ದಾರೆ. ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಪ್ರತಿಕ್ರಿಯಿಸುವ ಸಂಸದೀಯ ಸಂಪ್ರದಾಯಕ್ಕನುಗುಣವಾಗಿ ಅಂದು ಅವರು ಮಾಡಿದ ಭಾಷಣ ವರ್ತಮಾನದ ನಿರಾಕರಣೆಯಾಗಿತ್ತು, ಐತಿಹಾಸಿಕ ವಾಸ್ತವಗಳ ತಿರುಚುವಿಕೆಯಾಗಿತ್ತು. ಪ್ರಚೋದನಕಾರಿ, ಆವೇಶಪೂರ್ಣ ಬಡಬಡಿಕೆಯಂತಿದ್ದ ಆ ಭಾಷಣದ ಇಡೀ ಉದ್ದೇಶ ದೇಶ ತಯಾರಿದ್ದರೆ ಅದನ್ನು ಅಡ್ಡದಾರಿಗೆಳೆಯುವುದಾಗಿತ್ತು. ಅದರ ಕೆಲವು ಅಂಶಗಳನ್ನಿಲ್ಲಿ ವಿಶ್ಲೇಷಿಸೋಣ. ಈಗ ಎರಡು ಭಾರತಗಳು ಅಸ್ತಿತ್ವದಲ್ಲಿವೆ; ಒಂದು ಶ್ರೀಮಂತಿಕೆ ಹಾಗೂ ಅಧಿಕಾರಗಳನ್ನು ಕೈಯಲ್ಲಿಟ್ಟುಕೊಂಡಿರುವವರ ಭಾರತ, ಇನ್ನೊಂದು ಬಡವರ ಹಾಗೂ ಬಲಹೀನರ ಭಾರತ ಎಂದು ರಾಹುಲ್ ಗಾಂಧಿ ಹೇಳಿದ ಮಾತನ್ನು 1970ರ ದಶಕದ ಅಂದರೆ ಅವರ ಅಜ್ಜಿ ಪ್ರಧಾನಿಯಾಗಿದ್ದ ದಿನಗಳಿಂದಲೂ ನಾವು ಕೇಳುತ್ತಿದ್ದೇವೆ. ‘ಶ್ರೀಮಂತರ ಇಂಡಿಯಾ’ ಮತ್ತು ‘ಬಡವರ ಭಾರತ’ಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿರುವ ಕಾಲದಲ್ಲಿ ನಾವಿದ್ದೇವೆ ಎಂಬ ವಿಶ್ಲೇಷಣೆಗಳಿಗೆ ರಾಹುಲ್ ಗಾಂಧಿಯವರ ಜೀವಮಾನದಷ್ಟೇ ಇತಿಹಾಸವಿದೆ. ಅವು ಬರತೊಡಗಿದಾಗ ಬಿಜೆಪಿ ಇರಲಿಲ್ಲ. ಕೇಂದ್ರದಲ್ಲೂ, ಹೆಚ್ಚಿನ ರಾಜ್ಯಗಳಲ್ಲೂ ನಿರಂತರವಾಗಿ ಆಡಳಿತ ನಡೆಸುತ್ತಾ ಬಂದಿದ್ದುದು ಕಾಂಗ್ರೆಸ್.

    ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆ ವ್ಯರ್ಥ ಎಂಬ ರಾಹುಲ್ ಅಭಿಪ್ರಾಯಕ್ಕೂ ಸಾಕಷ್ಟು ಇತಿಹಾಸವೇ ಇದೆ. ಸಂಸತ್ತಿನಲ್ಲಿ ಆ ಯೋಜನೆಯ ಲಾಂಛನವನ್ನೂ ಸೇರಿಸಿಕೊಂಡು ಲೇವಡಿಯಾಡಿದ ರಾಹುಲ್ ಗಾಂಧಿ ನಂತರ ಬೆಂಗಳೂರಿನಲ್ಲಿ ಕಾಲೇಜು ಕನ್ಯೆಯರ ಮುಂದೆಯೂ ಅದೇ ಮಾತು ಹೇಳಿದ್ದರು. ‘ಮೇಕ್ ಇನ್ ಇಂಡಿಯಾ ಯಶಸ್ವಿಯಾಗುತ್ತಿರುವಂತೆ ನನಗೇನೂ ಕಾಣುತ್ತಿಲ್ಲ’ ಎಂದ ಅವರು, ಚೀನೀ ಮೊಬೈಲ್ ಫೋನ್​ಗಳು ಭಾರತದಲ್ಲಿ ಹೆಚ್ಚು ಬಿಕರಿಯಾಗುತ್ತಿರುವುದನ್ನು ಉಲ್ಲೇಖಿಸಿ, ‘ನಾವು ಇಲ್ಲಿ ಮೊಬೈಲ್ ಫೋನ್​ನ ಒಂದೊಂದು ಬಟನ್ ಒತ್ತಿದಾಗಲೂ ಒಬ್ಬೊಬ್ಬ ಚೀನೀ ಯುವಕನಿಗೆ ಉದ್ಯೋಗ ದೊರೆಯುತ್ತದೆ’ ಎಂದು ಹೇಳಿದರು. ಇಲ್ಲಿ ಅವರು ಉದ್ದೇಶಪೂರ್ವಕವಾಗಿ ಮರೆತದ್ದೇನೆಂದರೆ, ಅವರು ಆ ಮಾತುಗಳನ್ನು ಹೇಳುತ್ತಿದ್ದ ಹೊತ್ತಿನಲ್ಲೇ ಭಾರತದಲ್ಲಿ ಮಾರಾಟವಾಗುತ್ತಿದ್ದ ಚೀನೀ ಷವೋಮಿ ಮತ್ತು ಬಿಬಿಕೆ ಎಲೆಕ್ಟ್ರಾನಿಕ್ಸ್ ಕಂಪನಿಗಳ 80% ಮೊಬೈಲ್ ಫೋನ್​ಗಳು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತದಲ್ಲೇ ತಯಾರಾಗುತ್ತಿದ್ದವು ಎನ್ನುವುದನ್ನು. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ವಿದೇಶೀ ಮೊಬೈಲ್ ಕಂಪನಿಗಳು ಈ ದೇಶದಲ್ಲಿ ಸ್ಥಾಪಿಸಿದ್ದುದು ಕೇವಲ ಎರಡೇ ತಯಾರಿಕಾ ಘಟಕಗಳು, ರಾಹುಲ್ ಗಾಂಧಿ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರ ಮುಂದೆ ಅಲವತ್ತುಕೊಳ್ಳುತ್ತಿದ್ದ ಹೊತ್ತಿನಲ್ಲಿ ದೇಶದಲ್ಲಿ ವಿದೇಶೀ ಮೊಬೈಲ್ ಫೋನ್ ತಯಾರಿಕಾ ಘಟಕಗಳ ಸಂಖ್ಯೆ 120ಕ್ಕೇರಿತ್ತು ಮತ್ತು ಸುಮಾರು ನಾಲ್ಕು ಲಕ್ಷ ಭಾರತೀಯರಿಗೆ ಉದ್ಯೋಗ ದೊರೆತಿತ್ತು ಎನ್ನುವುದು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಕೇವಲ ಮೊಬೈಲ್ ಪೋನ್ ಕ್ಷೇತ್ರ ಒಂದರಲ್ಲೇ ಆಗಿದ್ದ ಬೆಳವಣಿಗೆ ಎನ್ನುವುದು ಗಮನಿಸಬೇಕಾದ ಅಂಶ. ಇದು ರಾಹುಲ್​ಗೆ ಅನ್ವಯವಾಗುವುದಿಲ್ಲ ಬಿಡಿ. ಯಾಕೆಂದರೆ ಆ ಯೋಜನೆಯ ಬಗ್ಗೆ ಅವರಲ್ಲಿ ಅದೇ ಅಜ್ಞಾನವಿದೆ ಮತ್ತು ಕಳೆದ ಬುಧವಾರವೂ ಸಂಸತ್ತಿನಲ್ಲೇ ಅದನ್ನವರು ಪ್ರದರ್ಶಿಸಿದ್ದಾರೆ.

    ರಾಹುಲ್ ಮತ್ತೊಂದು ಆಪಾದನೆಯೆಂದರೆ ‘ಪ್ರಧಾನಿ ಮೋದಿ ಚಕ್ರವರ್ತಿಯ ಹಾಗೆ ವರ್ತಿಸುತ್ತಿದ್ದಾರೆ, ಯಾರ ಮಾತನ್ನೂ ಕೇಳುವುದಿಲ್ಲ’ ಎಂದು. ನಿಜ ಹೇಳಬೇಕೆಂದರೆ ಆ ಸ್ವಭಾವವನ್ನು ದೊಡ್ಡದಾಗಿ ಪ್ರದರ್ಶಿಸಿದ್ದು ಮೊದಲ ಪ್ರಧಾನಿ ಜವಾಹರ್​ಲಾಲ್ ನೆಹರೂ, ರಾಹುಲ್ ಗಾಂಧಿಯವರ ಮುತ್ತಜ್ಜ. ಈ ಬಗ್ಗೆ ಎರಡೇ ಉದಾಹರಣೆ ನೀಡುವುದಾದರೆ, ಕಾಶ್ಮೀರ ವಿಷಯದಲ್ಲಿ ಸರ್ದಾರ್ ಪಟೇಲ್ ಮತ್ತು ಜನರಲ್ ತಿಮ್ಮಯ್ಯನವರ ಮಾತುಗಳನ್ನು ನೆಹರೂ ಕೇಳಿದ್ದರೆ ಇಂದು ಕಾಶ್ಮೀರ ಎಂಬ ರಕ್ಷಣಾ ಸಮಸ್ಯೆ ಇರುತ್ತಿರಲಿಲ್ಲ; ಅದೇ ನೆಹರೂ ಸಂವಿಧಾನಶಿಲ್ಪಿ ಬಿ.ಆರ್. ಅಂಬೇಡ್ಕರ್​ರ ಮಾತು ಕೇಳಿದ್ದರೆ ಕಾಶ್ಮೀರ ಎಂಬ ಸಾಂವಿಧಾನಿಕ ಸಮಸ್ಯೆ ಹುಟ್ಟುತ್ತಿರಲಿಲ್ಲ ಮತ್ತು ಅವೆರಡನ್ನೂ ಸರಿಪಡಿಸುವ ಹೆಣಗಾಟದಲ್ಲಿ ಇಂದು ಮೋದಿ ಸರ್ಕಾರ ತೊಡಗಿಕೊಳ್ಳುವ ಅಗತ್ಯವೂ ಇರುತ್ತಿರಲಿಲ್ಲ. ಹಾಗೆಯೇ, ಚೀನಾ ಗಡಿಗೆ ಸಂಬಂಧಿಸಿದಂತೆ ಅದೇ ನೆಹರೂ ಅದೇ ಸರ್ದಾರ್ ಪಟೇಲ್ ಮತ್ತು ಜ. ತಿಮ್ಮಯ್ಯನವರ ಮಾತುಗಳಿಗೆ ಬೆಲೆಕೊಟ್ಟು ಅದರಂತೆ ನಡೆದುಕೊಂಡಿದ್ದರೆ ಇಂದು ಚೀನಾ ನಮಗೆ ಕಂಟಕವಾಗಿ ಬೆಳೆದು ನಿಲ್ಲುತ್ತಿರಲಿಲ್ಲ.

    ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನಿರಲಿ, ಸವೋಚ್ಚ ನ್ಯಾಯಾಲಯವನ್ನೇ ತನ್ನ ಕೈಗೊಂಬೆಯಾಗಿಸಿಕೊಳ್ಳಹೊರಟ, ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ತನ್ನ ಅಜ್ಜಿ ಎನ್ನುವುದನ್ನು ರಾಹುಲ್ ಮರೆತಿರುವಂತಿದೆ. ಇನ್ನು, ತನಗೆ ಬೇಕಾದವರನ್ನು ಒಟ್ಟುಗೂಡಿಸಿ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ ಎಂಬ ಸೂಪರ್ ಕ್ಯಾಬಿನೆಟ್ ಕಟ್ಟಿಕೊಂಡು ಮನಮೋಹನ್ ಸಿಂಗ್ ಸರ್ಕಾರದ ಮೇಲೆ ಸವಾರಿ ನಡೆಸಹೊರಟ ಸೋನಿಯಾ ಗಾಂಧಿಯವರ ನೆನಪು ರಾಹುಲ್​ಗೆ ಇರಲು ಸಾಧ್ಯವೇ? ಸಂಸತ್​ನಲ್ಲಿ ರಾಹುಲ್ ಗಾಂಧಿ ಚೀನಾ ಮತ್ತು ಪಾಕಿಸ್ತಾನಗಳ ಬಗ್ಗೆ ಆಡಿದ ಮಾತಂತೂ ಅತಿ ದೊಡ್ಡ ನಗೆಚಟಾಕಿಯೇ ಸರಿ. ಅದರ ವಿಶ್ಲೇಷಣೆಗೆ ಪೀಠಿಕೆಯಾಗಿ ವಿದೇಶನೀತಿಯ ಬಗ್ಗೆ ಅವರ ಜ್ಞಾನ ಮತ್ತು ದೇಶರಕ್ಷಣೆಯ ಬಗ್ಗೆ ಅವರ ನಿಷ್ಠೆಯ ಮಟ್ಟವನ್ನು ಅಳೆಯುವ ಉದಾಹರಣೆಯೊಂದನ್ನು ನೆನಪಿಸಿಕೊಳ್ಳೋಣ.

    ನಾಲ್ಕು ವರ್ಷಗಳ ಹಿಂದೆ ಲಂಡನ್​ನಲ್ಲಿ ಪತ್ರಕರ್ತರ ಸಮಾವೇಶವನ್ನುದ್ದೇಶಿಸಿ ಮಾತಾಡುತ್ತಾ ರಾಹುಲ್ ಗಾಂಧಿ, ಚೀನಾ ಜತೆಗಿನ ಹಿಂದಿನ ವರ್ಷದ ದೊಕ್ಲಾಮ್ ಮುಖಾಮುಖಿಯನ್ನು ಮೋದಿ ಸರಿಯಾಗಿ ನಿರ್ವಹಿಸಲಿಲ್ಲವೆಂದೂ, ಅದು ಮೋದಿ ಸರ್ಕಾರದ ವೈಫಲ್ಯವೆಂದೂ ವರ್ಣಿಸಿದ್ದಲ್ಲದೇ, ಬುದ್ಧಿಜೀವಿಗಳ ಪೋಸ್ ಕೊಡುತ್ತಾ, ‘ದೊಕ್ಲಾಮ್ ಒಂದು ಪ್ರಕ್ರಿಯೆ ಎಂದು ನಾನು ತಿಳಿಯುತ್ತೇನೆ, ಆದರೆ ಮೋದಿ ಅದನ್ನೊಂದು ಘಟನೆಯಾಗಷ್ಟೇ ನೋಡಿದರು’ ಎಂದರು. ಆದರೆ, ‘ದೊಕ್ಲಾಮ್ ವಿಷಯದಲ್ಲಿ ಮೋದಿ ಸರ್ಕಾರ ವಿಫಲಗೊಂಡಿತು ಎಂದು ಹೇಳುವ ನೀವು ಅಧಿಕಾರದಲ್ಲಿದ್ದಿದ್ದರೆ ಹೇಗೆ ನಿಭಾಯಿಸುತ್ತಿದ್ದಿರಿ?’ ಎಂಬ ಪ್ರಶ್ನೆ ಬಂದಾಗ, ‘ದೊಕ್ಲಾಮ್ ಬಗ್ಗೆ ನನ್ನಲ್ಲಿ ವಿವರಗಳಿಲ್ಲ. ಹೀಗಾಗಿ ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದಾಗದು’ ಅಂದರು! ಅಷ್ಟೊತ್ತಿನಿಂದ ದೊಕ್ಲಾಮ್ ಒಂದು ಘಟನೆಯಲ್ಲ, ಅದೊಂದು ಪ್ರಕ್ರಿಯೆ ಎಂದೆಲ್ಲಾ ಬಡಬಡಿಸುತ್ತಿದ್ದ ಈ ಮಹಾನ್ ರಾಜಕೀಯ ಮುತ್ಸದ್ದಿಯಲ್ಲಿ ಸಮಸ್ಯೆಯ ಬಗ್ಗೆ ಯಾವ ವಿವರವೂ ಇಲ್ಲ ಎನ್ನುವುದನ್ನು ಅಂತಾರಾಷ್ಟ್ರೀಯ ಪತ್ರಿಕಾಬಳಗ ದಂಗಾಗಿ ನಿರುಕಿಸಿತು. 2017ರ ದೊಕ್ಲಾಮ್ ಬಿಕ್ಕಟ್ಟಿನ ದಿನಗಳಲ್ಲಿ ಇದೇ ರಾಹುಲ್ ಗಾಂಧಿ ನವದೆಹಲಿಯಲ್ಲಿನ ಚೀನೀ ರಾಯಭಾರಿಯನ್ನು ಖುದ್ದಾಗಿ ಭೇಟಿ ಮಾಡಿದ್ದರು ಮತ್ತು ‘ಈ ದೇಶದ ಒಬ್ಬ ನಾಯಕನಾಗಿ ದೊಕ್ಲಾಮ್ ಬಗ್ಗೆ ವಿವರಗಳನ್ನು ಪಡೆದುಕೊಳ್ಳುವ ಹಕ್ಕು ನನಗಿದೆ’ ಎಂದು ಸಮರ್ಥಿಸಿಕೊಂಡಿದ್ದರು! ಆದರೆ ಚೀನೀ ರಾಯಭಾರಿಯಿಂದ ಪಡೆದುಕೊಂಡ ಆ ವಿವರಗಳು ಲಂಡನ್​ಗೆ ಹಾರುವ ಹೊತ್ತಿಗೆ ಅವರಿಗೇ ಮರೆತುಹೋಗಿದ್ದವು. ನಿಜವಾಗಿಯೂ ಮರೆತುಹೋಗಿದ್ದವೇ ಅಥವಾ ದೊಕ್ಲಾಮ್ ನೆಪದಲ್ಲಿ ಚೀನೀಯರೊಂದಿಗೆ ರ್ಚಚಿಸಿದ್ದು ಬೇರೆಯೇ ವಿಷಯವೇ? ಹಾಗಿದ್ದರೆ ಅದೇನು? ಇನ್ನೂ ಉತ್ತರ ಸಿಕ್ಕಿಲ್ಲ.

    ಈಗ, ಚೀನಾ ಮತ್ತು ಪಾಕಿಸ್ತಾನಗಳನ್ನು ದೂರ ಇರಿಸುವುದು ಭಾರತದ ಎಲ್ಲ ಸರ್ಕಾರಗಳ ನೀತಿಯಾಗಿತ್ತು, ಆದರೆ ಮೋದಿ ಸರ್ಕಾರ ಅವೆರಡನ್ನೂ ಒಂದುಗೂಡಿಸಿದೆ ಎಂಬ ರಾಹುಲ್ ಗಾಂಧಿಯವರ ಆಪಾದನೆಯನ್ನು ನೋಡೋಣ. ಈ ಬಗೆಗಿನ ವಿವರಗಳು ಇಡೀ ದೇಶಕ್ಕೆ ಗೊತ್ತಿವೆ, ಚೀನಾ ಮತ್ತು ಪಾಕಿಸ್ತಾನಗಳ ನಡುವೆ ಭೂಸಂಪರ್ಕವೇ ಇರಲಿಲ್ಲ. ಆದರೆ ನೆಹರೂ ಮಹಾಶಯ ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನದ ವಶದಲ್ಲೇ ಬಿಟ್ಟು ಕದನವಿರಾಮ ಘೊಷಿಸಿದ್ದರಿಂದ ಇಂದು ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದು ನಾವು ಕರೆಯುವ ಆ ಪ್ರದೇಶದ ಮೂಲಕ ಆ ಎರಡು ದೇಶಗಳು ನೇರ ಭೂಸಂಪರ್ಕ ಸ್ಥಾಪಿಸಿಕೊಂಡವು. ಮುಂದೆ ಜನವರಿ 1963ರಲ್ಲಿ ಅಂದರೆ ನೆಹರೂ ಬದುಕಿದ್ದಾಗಲೇ, ಅವೆರಡು ದೇಶಗಳು ಒಪ್ಪಂದವೊಂದನ್ನು ಮಾಡಿಕೊಂಡು ತಮ್ಮ ನಡುವಿನ ಗಡಿಯನ್ನು ಗುರುತಿಸಿಕೊಂಡವು. 1965ರ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪರವಾಗಿ ನಿಂತ ಚೀನಾ ನಮ್ಮ ವಿರುದ್ಧ ಕಾರ್ಯಾಚರಣೆ ನಡೆಸುವ ಧಮಕಿ ಒಡ್ಡಿತು. ಇಂದು ರಾಹುಲ್ ಗಾಂಧಿ ಹೇಳುವ ದ್ವಿರಂಗ ಯುದ್ಧದ ಅಪಾಯ ನಮ್ಮೆದುರು ಮೊದಲು ಕಾಣಿಸಿಕೊಂಡದ್ದು ಆಗ. ಅದೇ ಅಪಾಯ 1971ರ ಯುದ್ಧದಲ್ಲೂ ಎದುರಾಗಿತ್ತು. ಮುಂದಿನ ಮೂರು ವರ್ಷಗಳಲ್ಲಿ ಚೀನಾ ಮತ್ತು ಪಾಕಿಸ್ತಾನಗಳು ಆಕ್ರಮಿತ ಕಾಶ್ಮೀರದ ಮೂಲಕ ಕಾರಾಕೊರಂ ಹೆದ್ದಾಗಿ ನಿರ್ವಿುಸಿ ಇನ್ನಷ್ಟು ಹತ್ತಿರಾದವು. ಆ ಯಾವ ಸಮಯದಲ್ಲೂ ಬಿಜೆಪಿ ಅಧಿಕಾರದಲ್ಲಿರಲಿಲ್ಲ. ಇದ್ದದ್ದು ರಾಹುಲ್ ಗಾಂಧಿಯವರ ಮುತ್ತಜ್ಜ, ಅಜ್ಜಿ.

    ತನ್ನ ಪಕ್ಷದ, ತನ್ನ ವಂಶದ ಹಿಂದಿನವರು ಮಾಡಿದ್ದೆಲ್ಲವನ್ನೂ ಬಿಜೆಪಿ ಮತ್ತು ಮೋದಿಯವರ ತಲೆಗೆ ಕಟ್ಟುವ ರಾಹುಲ್ ಗಾಂಧಿಯವರ ತಲೆಯಲ್ಲಿ ಏನಿದೆ?

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts