More

    ಜನ ಕುರಿಗಳಾದಾಗ ಜನನಾಯಕರು ನರಿಗಳಾಗುತ್ತಾರೆ!

    ಜನ ಕುರಿಗಳಾದಾಗ ಜನನಾಯಕರು ನರಿಗಳಾಗುತ್ತಾರೆ!ಒಂದು ಕಾಲದಲ್ಲಿ ಸಾಮಾನ್ಯ ಶ್ರೀಲಂಕೀಯ ಸಾಮಾನ್ಯ ಭಾರತೀಯನಿಗಿಂತಲೂ ಚೆನ್ನಾಗಿ ಉಣ್ಣುತ್ತಿದ್ದ, ಉಡುತ್ತಿದ್ದ, ಉತ್ತಮ ಆರೋಗ್ಯ ಸೇವೆಗಳನ್ನು ಅನುಭವಿಸುತ್ತಿದ್ದ. ತೀರಾ ಇತ್ತೀಚಿನವರೆಗೂ ಶ್ರೀಲಂಕಾ ತನ್ನ ಜನರಿಗೆ ಸಾಕು ಎನ್ನಿಸುವಷ್ಟು ಭತ್ತವನ್ನು ಬೆಳೆದುಕೊಂಡು, ವಿದೇಶಗಳಿಗೂ ಹೇರಳವಾಗಿ ರಫ್ತು ಮಾಡುವಷ್ಟು ಚಹಾ, ತೆಂಗು, ಸಾಂಬಾರ ಜಿನಸುಗಳನ್ನು ಉತ್ಪಾದಿಸಿಕೊಂಡು, ಲಕ್ಷಲಕ್ಷ ವಿದೇಶೀ ಪ್ರವಾಸಿಗರನ್ನು ಆಕರ್ಷಿಸಿಕೊಂಡು, ಅವರಿಂದ ಬಿಲಿಯನ್​ಗಟ್ಟಲೆ ಡಾಲರ್​ಗಳನ್ನು ಗಳಿಸಿಕೊಂಡು ನೆಮ್ಮದಿಯಾಗಿತ್ತು. 1983-2009ರ ನಡುವಿನ ಅಂತರ್ಯುದ್ಧದ ದಿನಗಳಲ್ಲೂ ಅದರ ಆರ್ಥಿಕ ಸುಭದ್ರತೆಗೆ ಧಕ್ಕೆಯಾಗಿರಲಿಲ್ಲ. ಅದೆಲ್ಲವೂ ಬದಲಾಗತೊಡಗಿದ್ದು ಹದಿಮೂರು ವರ್ಷಗಳ ಹಿಂದೆ.

    ವಾಸ್ತವವಾಗಿ 2009ರ ಬೇಸಗೆಯಲ್ಲಿ ಅಧ್ಯಕ್ಷ ಮಹಿಂದ ರಾಜಪಕ್ಷ ಮತ್ತು ರಕ್ಷಣಾ ಕಾರ್ಯದರ್ಶಿ ಗೋತಬಯ ರಾಜಪಕ್ಷ ಎಲ್​ಟಿಟಿಇಯನ್ನು ನಿರ್ಣಾಯಕವಾಗಿ ಸೋಲಿಸಿದಾಗ ಶ್ರೀಲಂಕಾದ ಕಷ್ಟಗಳೆಲ್ಲವೂ ಕಳೆದು ಆ ದ್ವೀಪ ಮತ್ತೆ ದ್ವೀಪಸ್ವರ್ಗವಾಗಬೇಕಾಗಿತ್ತು. ಆದರೆ ಅದೇನು ಕರ್ಮವೋ ಅದರೆದುರು ಚೀನೀ ಭೂತ ವಕ್ಕರಿಸಿಬಿಟ್ಟಿತು. ಸಾಮಾನ್ಯವಾಗಿ ಪಶ್ಚಿಮದ ದೇಶಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಸಾಲ ನೀಡುವಾಗ ಆ ಹಣ ಸರಿಯಾದ ಕಾರ್ಯಕ್ಕೆ ವಿನಿಯೋಗವಾಗಿ, ಸಾಲ ಪಡೆದ ದೇಶಗಳು ಲಾಭ ಗಳಿಸಿ ಸಾಲವನ್ನೂ ತೀರಿಸಿ ತಾವೂ ಬೆಳೆಯುವಂತೆ ನೋಡಿಕೊಳ್ಳುತ್ತವೆ. ಜತೆಗೆ ಬಡ್ಡಿದರ ಸಹ ಕಡಿಮೆ, ಒಂದರಿಂದ ಒಂದೂವರೆ ಪರ್ಸೆಂಟ್ ಅಷ್ಟೇ. ಆದರೆ ಚೀನೀ ಕಮ್ಯೂನಿಸ್ಟರು ಹಿಡಿದ ದಾರಿಯೇ ಬೇರೆ. ಅವರು ಏಶಿಯಾ ಮತ್ತು ಆಫ್ರಿಕಾದ ಆಯಕಟ್ಟಿನ ದೇಶಗಳಿಗೆ ಸಾಲ ನೀಡಿದ್ದು ನಿರುತ್ಪಾದಕ ಹಾಗೂ ವ್ಯರ್ಥ ಯೋಜನೆಗಳಿಗಾಗಿ. ಜತೆಗೆ ಬಡ್ಡಿದರ ನಾಲ್ಕರಿಂದ ಐದು ಪರ್ಸೆಂಟ್! ಸಾಲ ಪಡೆದ ದೇಶಗಳು ಯೋಜನೆ ಅರ್ಧವೂ ಪೂರ್ಣವಾಗುವ ಮೊದಲೇ ಬಡ್ಡಿಯ ಹೊರೆಯಲ್ಲಿ ಕುಸಿದುಹೋಗುತ್ತವೆ ಮತ್ತು ಅದರಿಂದಾಗಿ ಯೋಜನೆ ಇನ್ನಷ್ಟು ಕುಂಠಿತವಾಗುತ್ತದೆ. ಪೂರ್ಣಗೊಂಡರೂ ಅದರಿಂದ ಯಾವುದೇ ಲಾಭ ಬಾರದೇ ಸಾಲ ತೀರಿಸಲಾಗದೇ ಬಸವಳಿಯುತ್ತವೆ. ಅವು ಆ ಸ್ಥಿತಿ ತಲುಪಿದಾಗ ತಾನು ಸಾಲ ನೀಡಿರುವ ಯೋಜನೆಗಳು ಅರ್ಧಂಬರ್ಧ ಅನುಷ್ಠಾನಗೊಂಡಿರುವ ಪ್ರದೇಶಗಳನ್ನೇ ತನ್ನ ಕೈಗೆ ತೆಗೆದುಕೊಳ್ಳುವಂತಹ ಮತ್ತು ಯೋಜನೆಯ ಬಗ್ಗೆ ಯಾವುದೇ ತಗಾದೆ ಉಂಟಾದಲ್ಲಿ ಅದು ಚೀನೀ ನ್ಯಾಯಾಲಯದಲ್ಲೇ ತೀರ್ವನವಾಗಬೇಕೆಂಬ ಕಲಮುಗಳನ್ನು ಚೀನಾ ಮೂಲ ಒಪ್ಪಂದದಲ್ಲೇ ಸೇರಿಸಿರುತ್ತದೆ. ಇದೇ ಚೀನೀ ಕಮ್ಯೂನಿಸ್ಟ್ ಸರ್ಕಾರದ ಕುಖ್ಯಾತ ‘ಸಾಲಸಂಕೋಲೆ’ ಯೋಜನೆ. ಅದಕ್ಕಿರುವ ಸುಂದರ ಹೆಸರು Belt and Road Initiative (BRI).

    ಸರಿ, ತಮ್ಮ ದೇಶಕ್ಕೇ ಕಂಟಕಕಾರಿಯಾದ ಇಂತಹ ಸಾಲಗಳನ್ನು ರಾಷ್ಟ್ರನಾಯಕರು ಹೇಗೆ ಒಪ್ಪಿಕೊಳ್ಳುತ್ತಾರೆ ಎನ್ನುವುದು ನಿಮ್ಮ ಪ್ರಶ್ನೆಯಾಗಿರಬಹುದು. ಅವರಿಗೆ ಲಂಚ ನೀಡಿ ಬಲೆಗೆ ಕೆಡವಿಕೊಳ್ಳುವುದು ಚೀನಾದ ಕುಯೋಜನೆಯ ಒಂದು ಅವಿಭಾಜ್ಯ ಭಾಗ. ಸರಿ, ಅವರಿಗೆ ಕೊಟ್ಟ ಲಂಚ ಚೀನಾಗೆ ನಷ್ಟ ಎನಿಸುವುದಿಲ್ಲವೇ? ಹಾಗೇನೂ ಇಲ್ಲ. ಅಂತಾರಾಷ್ಟ್ರೀಯ ಬಡ್ಡಿದರಕ್ಕಿಂತ ಮೂರು ಪಟ್ಟು ಹೆಚ್ಚಿನ ಬಡ್ಡಿಯನ್ನು ಚೀನಾ ಹೇರುತ್ತದಲ್ಲ, ಅದರಲ್ಲೇ ಲಂಚದ ಹಣ ಹಿಂದಕ್ಕೆ ಬಂದುಬಿಡುತ್ತದೆ! ಚೀನೀ ಕಮ್ಯೂನಿಸ್ಟರ ಈ ದುರುಳ ಲೆಕ್ಕಾಚಾರ ಬಂಡವಾಳಶಾಹಿಗಳಿಗೂ ಹೊಳೆದ ಉದಾಹರಣೆ ಸಿಗುವುದಿಲ್ಲ. ಸಿಕ್ಕಿದ್ದರೆ ಕಾರ್ಲ್ ಮಾರ್ಕ್ಸ್ ಹದಿನೆಂಟು ವರ್ಷ ಹೆಣಗಿ ‘ದಾಸ್ ಕ್ಯಾಪಿಟಲ್’ ಬರೆಯುತ್ತಿರಲಿಲ್ಲ.

    ಈ ಹುನ್ನಾರಕ್ಕೆ ಬಲಿಬಿದ್ದ ದೇಶಗಳಲ್ಲಿ ಶ್ರೀಲಂಕಾ ಒಂದು. 2005-15ರ ನಡುವಿನ ತನ್ನ ಅಧ್ಯಕ್ಷಾವಧಿಯಲ್ಲಿ ಮಹಿಂದ ರಾಜಪಕ್ಷ ಚೀನಾಗೆ ಏಳು ಸಲ ಭೇಟಿ ನೀಡಿದ್ದರು ಅಂದರೆ ಚೀನೀ ‘ಸತ್ಕಾರ’ಕ್ಕೆ ಅವರೆಷ್ಟು ಮನಸೋತಿದ್ದಿರಬೇಕು! ಮುಂದೆ ಆಗಬಾರದ್ದೇ ಆಯಿತು! ರಾಜಪಕ್ಷರುಗಳೇನೋ ಜನವರಿ 2015ರಲ್ಲಿ ಅಧಿಕಾರ ಕಳೆದುಕೊಂಡು ಮನೆಗೆ ಹೋಗಿ ಚೀನೀ ಲಂಚದಿಂದ ಐಷಾರಾಮಿ ಜೀವನ ನಡೆಸತೊಡಗಿದರು. ಅವರು ಮಾಡಿದ ಪಾಪದ ಹೊರೆ ಸಿರಿಸೇನ ವಿಕ್ರಮಸಿಂಘ ಸರ್ಕಾರದ ಮೇಲೆ ಬಿತ್ತು. ಅದರ ಚಿತ್ರವನ್ನು ನಿಮಗೆ ನೀಡಲು ಕೇವಲ ಮೂರು ಯೋಜನೆಗಳ ದುರ್ಗತಿಯನ್ನು ಹೇಳುತ್ತೇನೆ. ಚೀನೀ ಸಾಲದಿಂದ ಆರಂಭಿಸಿದ ಕೊಲಂಬೋ ಬಂದರು ಯೋಜನೆ ವ್ಯಾವಹಾರಿಕವಲ್ಲ ಎಂದು ತೀರ್ವನಿಸಲ್ಪಟ್ಟು ಸ್ಥಗಿತಗೊಂಡಿತು. ಮಟ್ಟಾಲಾ ವಿಮಾನನಿಲ್ದಾಣಕ್ಕೆ ಯಾವ ವಿಮಾನವೂ ಬಾರದೇ ಅದರ ಹೆಚ್ಚಿನ ಕಟ್ಟಡಗಳನ್ನು ಸುಗ್ಗಿಕಾಲಗಳಲ್ಲಿ ಭತ್ತ ಸಂಗ್ರಹಣೆಯ ಗೋಡೌನ್​ಗಳಾಗಿ ಬಳಸಲು ಬಾಡಿಗೆ ಕೊಡಲಾಯಿತು! ಆದರೆ ಸಾಲಕ್ಕೆ ಬಡ್ಡಿ ಮತ್ತು ಅವಧಿ ಪೂರೈಸಿದ ಸಾಲದ ಮರುಪಾವತಿಗಾಗಿ ಚೀನಾ ಒಂದೇಸಮನೆ ಒತ್ತಡ ಹೇರತೊಡಗಿತು. ಅರ್ಧಂಬರ್ಧ ಪೂರ್ಣಗೊಂಡು ನನೆಗುದಿಗೆ ಬಿದ್ದ ಹಂಬನತೋಟ ಬಂದರನ್ನು ನಿರ್ವಾಹವಿಲ್ಲದೇ ಚೀನಾಗೆ 99 ವರ್ಷಗಳಿಗೆ ಗುತ್ತಿಗೆಗೆ ಬಿಟ್ಟುಕೊಡುವ ಒತ್ತಡಕ್ಕೆ 2017ರಲ್ಲಿ ಶ್ರೀಲಂಕಾ ಸಿಲುಕಿಹೋಯಿತು.

    ಇಂತಹ ಸನ್ನಿವೇಶದಲ್ಲಿ, 2019ರ ಈಸ್ಟರ್ ಭಾನುವಾರದಂದು ಶ್ರೀಲಂಕಾಗೆ ಇಸ್ಲಾಮಿಕ್ ಭಯೋತ್ಪಾದನೆ ಕಾಲಿಟ್ಟಿತು. ಏಪ್ರಿಲ್ 21ರಂದು, ಕೊಲಂಬೋ ನಗರದ ಮೂರು ಚರ್ಚ್​ಗಳು, ಮೂರು ಐಷಾರಾಮಿ ಹೋಟೆಲ್​ಗಳು, ದೇಹೀವಲದ ಒಂದು ವಸತಿಗೃಹ ಮತ್ತು ದೇಮತಗೋಡದ ವಸತಿ ಸಮುಚ್ಚಯದಲ್ಲಿ ಒಟ್ಟು ಹತ್ತು ಆತ್ಮಹತ್ಯಾ ಬಾಂಬ್ ದಾಳಿಗಳಾದವು, 46 ವಿದೇಶೀಯರೂ ಸೇರಿದಂತೆ 269 ಜನ ಮೃತರಾದರು. ಇದರ ದುಷ್ಪರಿಣಾಮ ಬಿದ್ದದ್ದು ಪ್ರವಾಸೋದ್ಯಮದ ಮೇಲೆ. ಎಲ್​ಟಿಟಿಇ ವಿರುದ್ಧದ ಅಂತರ್ಯುದ್ಧದ ದಿನಗಳಲ್ಲೂ ಅಶಾಂತಿ ಸೀಮಿತವಾಗಿದ್ದದ್ದು ಉತ್ತರ ಮತ್ತು ಈಶಾನ್ಯದ ತಮಿಳು ಜಿಲ್ಲೆಗಳಿಗಷ್ಟೇ. ರಾಜಧಾನಿ ಕೊಲಂಬೋದಲ್ಲಿ ಆಗಾಗ ಉಚ್ಚ ನಾಯಕರ ಹತ್ಯೆಯಾಗುತ್ತಿದ್ದರೂ ಸಿಂಹಳೀ ಜಿಲ್ಲೆಗಳಲ್ಲಿ ಜನಸಾಮಾನ್ಯರ ಬದುಕು ಸಹಜವಾಗಿಯೇ ನಡೆಯುತ್ತಿತ್ತು; ಸಮುದ್ರತೀರಗಳಲ್ಲಿ ವಿದೇಶೀ ಪ್ರವಾಸಿಗರ ದಂಡು ಯಾವಾಗಲೂ ಇರುತ್ತಿತ್ತು. ಆದರೆ ಈ ಈಸ್ಟರ್ ಬಾಂಬ್ ದಾಳಿಗಳಾದದ್ದೇ ಪ್ರವಾಸಿಗರ ಬರುವಿಕೆ ಇಳಿಯತೊಡಗಿ, ಇನ್ನೊಂದು ವರ್ಷದಲ್ಲಿ ಕರೊನಾ ಮಾರಿ ಅಮರಿಕೊಳ್ಳುತ್ತಿದ್ದಂತೇ ಪೂರ್ತಿಯಾಗಿ ನಿಂತುಹೋಯಿತು. ವಾರ್ಷಿಕ ಆದಾಯದ ಶೇಕಡಾ 10ರಷ್ಟನ್ನು ವಿದೇಶೀ ಪ್ರವಾಸಿಗರ ಡಾಲರ್​ಗಳಿಂದಲೇ ಗಳಿಸುತ್ತಿದ್ದ ಶ್ರೀಲಂಕಾಗೆ ಇದು ಬಹು ದೊಡ್ಡ ಹೊಡೆತ. ವಿವೇಕಿ ನಾಯಕತ್ವ ದೇಶಕ್ಕೆ ಮುಖ್ಯವಾಗುವುದು ಇಂತಹ ಸನ್ನಿವೇಶದಲ್ಲಿ. ನಾಯಕರಿಗಿಂತ ಜನರನ್ನು ದೂಷಿಸುವುದು ಸೂಕ್ತವೆಂದು ನನಗನಿಸುತ್ತದೆ. ತೆರಿಗೆಗಳನ್ನು ಭಾರಿ ಪ್ರಮಾಣದಲ್ಲಿ ಇಳಿಸುತ್ತೇನೆ ಎಂದು ಗೋತಬಯ ರಾಜಪಕ್ಷ ನವೆಂಬರ್ 2019ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಹೇಳಿದಾಗ ದೇಶದ ದುರವಸ್ಥೆಗೆ ಮೂಲ ಕಾರಣ ಈ ರಾಜಪಕ್ಷ ಕುಟುಂಬ ಎನ್ನುವುದನ್ನು ಜನತೆ ಮರೆತುಬಿಟ್ಟರು. ಪರಿಣಾಮವಾಗಿ ಗೋತಬಯ ಭಾರಿ ಬಹುಮತದೊಂದಿಗೆ ಅಧ್ಯಕ್ಷರಾದರು. ಮಾತು ಕೊಟ್ಟಂತೆ ತೆರಿಗೆಗಳಲ್ಲಿ 30% ಕಡಿತ ಮಾಡಿದೊಡನೇ ಅವರು ಅಣ್ಣ ಮಹಿಂದರನ್ನು ಪ್ರಧಾನಮಂತ್ರಿಯಾಗಿ, ದೊಡ್ಡಣ್ಣ, ಚಮಲ್​ರನ್ನು, ಮಹಿಂದರ ಮಗ ನಮಲ್​ರನ್ನು ಮಂತ್ರಿಗಳನ್ನಾಗಿಸಿಕೊಂಡದ್ದನ್ನು ಜನ ಒಪ್ಪಿಕೊಂಡರು. ಒಂದು ಹಂತದಲ್ಲಿ ರಾಜಪಕ್ಷ ಕುಟುಂಬದ 40 ಜನ ಶ್ರೀಲಂಕಾದ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಉಚ್ಚ ಸ್ಥಾನಗಳನ್ನು ಹಿಡಿದುಕೊಂಡಿದ್ದರು! ತೆರಿಗೆ ಕಡಿಮೆಯಾದ ಸಂಭ್ರಮದಲ್ಲಿ ಜನ ಇಡೀ ದೇಶ ರಾಜಪಕ್ಷರುಗಳ ಕಪಿಮುಷ್ಟಿಯಲ್ಲಿ ಸಿಲುಕುತ್ತಿದ್ದುದನ್ನು ಗಮನಿಸಲೇ ಇಲ್ಲ. ಜನ ಕುರಿಗಳಾದಾಗ ಜನನಾಯಕರು ನರಿಗಳಾಗುತ್ತಾರೆ.

    ಸುಯೆಜ್​ನಿಂದ ಪೂರ್ವದ ಜಗತ್ತಿನ ಅತಿ ಭಯಂಕರ ಗೆರಿಲ್ಲಾ ನಾಯಕ ಎಂದು ಹೆಸರಾಗಿದ್ದ ಪ್ರಭಾಕರನ್​ನನ್ನು ಹತ್ಯೆಗೈದು ಎಲ್​ಟಿಟಿಇಯನ್ನು ಬಗ್ಗುಬಡಿದದ್ದು ರಕ್ಷಣಾ ಕಾರ್ಯದರ್ಶಿಯಾಗಿ ಗೋತಬಯರ ಸಾಧನೆ, ನಿಜ. ಅದಕ್ಕಾಗಿಯೇ ಅವರಿಗೆ ‘ಟರ್ವಿುನೇಟರ್’ ಎಂಬ ಹೆಸರೂ ಬಂತು. ಆದರೆ ಅವರಿಗೆ ಆಡಳಿತದ ಅನುಭವ, ಅಥವಾ ಅದನ್ನು ಕಲಿಯಬೇಕೆನ್ನುವ ಇರಾದೆ ಲವಲೇಶವೂ ಇರಲಿಲ್ಲ. ಮೂವತ್ತೆರಡು ತಿಂಗಳುಗಳ ಅಧಿಕಾರಾವಧಿಯಲ್ಲಿ ಅವರು ತಮ್ಮದೇ 112 ಆದೇಶಗಳನ್ನು ಹಿಂತೆಗೆದು ಕೊಂಡರು! ಅವರು ತೆಗೆದುಕೊಂಡ ಹಲವು ನಿರ್ಣಯಗಳು ಲಂಕಾವನ್ನು ಆರ್ಥಿಕ ಅಧಃಪತನದ ಪ್ರಪಾತಕ್ಕೆ ನೂಕುತ್ತಾ ಹೋದವು. ಅವುಗಳಲ್ಲಿ ಒಂದೆರಡನ್ನು ನೋಡೋಣ.

    ವಿದೇಶೀ ಪ್ರವಾಸಿಗರು ಮತ್ತವರು ತರುತ್ತಿದ್ದ ಡಾಲರ್​ಗಳು ನಿಂತುಹೋದದ್ದು ಶ್ರೀಲಂಕಾದ ಸಾಲ ಮರುಪಾವತಿ ಮೇಲೆ ದೊಡ್ಡ ಹೊಡೆತ ನೀಡಿತು. ಅದನ್ನು ಸರಿತೂಗಿಸಿಕೊಳ್ಳಲು ಮತ್ತಷ್ಟು ಡಾಲರ್​ಗಳನ್ನು ವಿದೇಶಗಳಿಂದ ನೇರ ಸಾಲವಾಗಿ ಮತ್ತು ಸಾವರಿನ್ ಬಾಂಡ್​ಗಳನ್ನು ಹೊರಡಿಸುವುದರ ಮೂಲಕ ಪಡೆಯಲಾಯಿತು. ಇದರಿಂದಾಗಿ ದೇಶದ ಒಟ್ಟು ವಿದೇಶೀ ಸಾಲ 51 ಬಿಲಿಯನ್​ಗೇರಿತು. ಶ್ರೀಲಂಕಾದ ಒಟ್ಟು ವಿದೇಶೀ ಸಾಲ ಈ ವರ್ಷದ ಆರಂಭದ ಹೊತ್ತಿಗೆ ಅದರ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆ(ಜಿಡಿಪಿ)ಯ 111.42% ಇತ್ತು ಅಂದರೆ ಆ ದೇಶದ ಉತ್ಪಾದನೆಗಿಂತಲೂ ಸಾಲವೇ ಹೆಚ್ಚಾಗಿತ್ತು. ದೊಡ್ಡ ಹಾಗೂ ನಿರಂತರ ಆದಾಯವಿರುವ ದೇಶಗಳು ಇಂತಹ ಹೊರೆಯನ್ನು ನಿರಾಯಾಸವಾಗಿಯೇ ನಿಭಾಯಿಸಿಕೊಳ್ಳುತ್ತವೆ. ಜಪಾನ್, ಅಮೆರಿಕಾ ಹಾಗೂ ಫ್ರಾನ್ಸ್​ಗಳ ಸಾಲವಂತೂ ಅವುಗಳ ಜಿಡಿಪಿಯ 200 ಪರ್ಸೆಂಟ್​ಗಿಂತಲೂ ಹೆಚ್ಚು! ಆದರೆ ನಿರಂತರವಾಗಿ ಹೇರಳ ಆದಾಯ ಬರುತ್ತಲೇ ಇರುತ್ತದೆ ಎನ್ನುವ ಧೈರ್ಯದಿಂದಲೇ ಅಷ್ಟು ಸಾಲ ಮಾಡುತ್ತವೆ. ಶ್ರೀಲಂಕಾವನ್ನು ಅವುಗಳಿಗೆ ಹೋಲಿಸಲಾಗುವುದಿಲ್ಲ.

    ಮಹಿಂದ ತನ್ನ ಹತ್ತು ವರ್ಷಗಳ ಅಧ್ಯಕ್ಷಾವಧಿಯಲ್ಲಿ ವ್ಯರ್ಥ ಯೋಜನೆಗಳಿಗಾಗಿ ಅಪಾರ ಸಾಲದ ಹಣ ಸುರಿದು, ಅಗತ್ಯ ಗ್ರಾಹಕ ವಸ್ತುಗಳ ಉತ್ಪಾದನೆಯನ್ನು ನಿರ್ಲಕ್ಷಿಸಿದ್ದರಿಂದಾಗಿ ದೈನಂದಿನ ಬಳಕೆಯ ವಸ್ತುಗಳು, ಔಷಧಗಳು, ಪೆಟ್ರೋಲ್ ಮತ್ತು ಡೀಸೆಲ್​ಗಳ ಆಮದಿಗಾಗಿ ಶ್ರೀಲಂಕಾ ಪ್ರತಿ ತಿಂಗಳು 1.6 ಬಿಲಿಯನ್ ಡಾಲರ್ ವ್ಯಯಿಸಬೇಕು. ಇದರೊಂದಿಗೆ ಸಾಲಗಳ ಮರುಪಾವತಿ ಹಾಗೂ ಬಡ್ಡಿ ಪಾವತಿ, ಮೆಚ್ಯೂರ್ ಆದ ಸಾವರಿನ್ ಬಾಂಡ್​ಗಳಿಗೆ ಅಸಲು-ಬಡ್ಡಿ ಪಾವತಿಗಾಗಿ ವರ್ಷವೊಂದಕ್ಕೆ ಐದರಿಂದ ಏಳು ಬಿಲಿಯನ್ ಡಾಲರ್ ಬೇಕು! ವಿದೇಶೀ ಪ್ರವಾಸಿಗರು ಬರುವುದು ನಿಂತುಹೋದದ್ದರಿಂದ ನಾಲ್ಕೂವರೆಯಿಂದ ಐದು ಬಿಲಿಯನ್ ಡಾಲರ್ ಆದಾಯ ಪೂರ್ಣವಾಗಿ ನಿಂತು ಶ್ರೀಲಂಕಾದ ಆಮದು ಸಾಮರ್ಥ್ಯ ಕುಗ್ಗಿಹೋಗಿ ಅಗತ್ಯವಸ್ತುಗಳ ಕೊರತೆ ಕಾಣಿಸಿಕೊಂಡಿತು. ಜುಲೈ 2021ರಲ್ಲಿ ಕೃಷಿಯನ್ನು ಸಾರಾಸಗಟಾಗಿ ಸಾವಯವಗೊಳಿಸುವ ನಿರ್ಣಯ ಕೈಗೊಂಡ ಗೋತಬಯ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿರ್ಬಂಧಿಸಿದಾಗ ಅಗತ್ಯ ಪ್ರಮಾಣದ ಸಾವಯವ ಗೊಬ್ಬರ ಸಿಗದೇ ಕೃಷಿ ಏಕಾಏಕಿ ಹಾಳುಬಿತ್ತು. ಪರಿಣಾಮವಾಗಿ ನಿನ್ನೆಯವರೆಗೂ ಅಕ್ಕಿ ರಫ್ತು ಮಾಡುತ್ತಿದ್ದ ದೇಶದಲ್ಲಿ ಅದೇ ಅಕ್ಕಿಯ ಕೊರತೆ ಭೂತಾಕಾರವಾಗಿ ಎದ್ದು ನಿಂತಿತು. ಜತೆಗೆ ಪ್ರಮುಖ ರಫ್ತು ಸರಕುಗಳಾದ ಚಹಾ ಮತ್ತು ಸಾಂಬಾರ ಜಿನಸುಗಳ ಉತ್ಪಾದನೆಯೂ ಇಳಿದುಹೋಗಿ ಅವು ತರುತ್ತಿದ್ದ ವಿದೇಶೀ ವಿನಿಮಯವೂ ನಿಂತುಹೋಯಿತು. ಹೀಗಾಗಿ ರಫ್ತುಗಳು ಸರಿಸುಮಾರು ಪೂರ್ತಿಯಾಗಿ ಕುಗ್ಗಿ, ಆಮದುಗಳು ಅಗಾಧವಾಗಿ ಏರಿದ್ದರಿಂದ ವಿದೇಶೀ ವಿನಿಮಯ ಭಂಡಾರ ವೇಗವಾಗಿ ಕರಗತೊಡಗಿತು. ನವೆಂಬರ್ 2019ರಲ್ಲಿ ಗೋತಬಯ ಅಧಿಕಾರಕ್ಕೆ ಬಂದಾಗ ಏಳು ಬಿಲಿಯನ್ ಡಾಲರ್ ಇದ್ದ ವಿದೇಶೀ ವಿನಿಮಯ ಸಂಗ್ರಹ ಜುಲೈ 2021ರಲ್ಲಿ ಅವರು ರಾಸಾಯನಿಕ ಗೊಬ್ಬರ ಬಳಕೆಯನ್ನು ನಿರ್ಬಂಧಿಸುವ ಹೊತ್ತಿಗೆ ಎರಡು ಬಿಲಿಯನ್ ಡಾಲರ್​ಗಿಳಿಯಿತು. ಈ ವರ್ಷದ ಆರಂಭದ ಹೊತ್ತಿಗೆ ಅದು ಕೇವಲ ಐವತ್ತು ಮಿಲಿಯನ್ ಡಾಲರ್​ಗಳಿಗೆ ಇಳಿದು ದಿನಬಳಕೆಯ ಅಗತ್ಯವಸ್ತುಗಳನ್ನೂ ಆಮದು ಮಾಡಿಕೊಳ್ಳಲಾಗದ ಸ್ಥಿತಿ!

    ಮಹಿಂದ ರಾಜಪಕ್ಷ ಮೇ 9ರಂದು ಪ್ರದಾನಮಂತ್ರಿ ಸ್ಥಾನ ತೊರೆದು ಓಡಿಹೋದಾಗ ದೇಶದಲ್ಲಿ ಒಂದು ಮಿಲಿಯನ್ ಡಾಲರ್ ಸಹ ಇರಲಿಲ್ಲವಂತೆ! ಹೀಗಾಗಿ ಕೊಲಂಬೋ ಬಂದರಿನಲ್ಲಿ ಮಾರ್ಚ್ ಕೊನೆಯ ವಾರದಿಂದಲೂ ನಿಂತಿದ್ದ ಹಡಗಿನಿಂದ ಹಣ ತೆತ್ತು ಪೆಟ್ರೋಲ್ ಬಿಡಿಸಿಕೊಳ್ಳುವುದಕ್ಕೂ ಆಗದ ದುಸ್ಥಿತಿ!

    ಈಗ ಗೋತಬಯ ಸಹ ಓಡಿಹೋಗಿದ್ದಾರೆ. ಮಾಲ್ದೀವ್ಸ್ ಮೂಲಕ ಸಿಂಗಪುರಕ್ಕೆ ಹೋದ ಅವರು ಚಾಂಗಿ ವಿಮಾನನಿಲ್ದಾಣದಲ್ಲಿ ಇಳಿದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಸಿದ್ಧ ಉಡುಪುಗಳ ಅಂಗಡಿಗೆ ನುಗ್ಗಿದ್ದು. ಒಂದು ಕಾಲದ ಬಲಾಢ್ಯ ಅಧ್ಯಕ್ಷ, ‘ಚುನಾಯಿತ ಸರ್ವಾಧಿಕಾರಿ’ ಉಟ್ಟ ಬಟ್ಟೆಯಲ್ಲಿ ದೇಶ ಬಿಟ್ಟು ಓಡಿದರೇ ಅಥವಾ ನಾನಿಲ್ಲದ ಲಂಕಾ ಏನಾದರೇನು ಎಂದು ಹೊಸಬಟ್ಟೆ ತೊಟ್ಟು ಮಜಾ ಮಾಡುತ್ತಿದ್ದಾರೋ? ಈ ಜಿಜ್ಞಾಸೆಯೊಂದಿಗೆ ಚೀನೀ ಸಾಲಸಂಕೋಲೆಗೆ ಸಿಲುಕಿ, ಹಿಂದಿನ ಸಿಂಧೂ ಕಣಿವೆಯ ನಾಗರಿಕತೆಯಂತೇ ಇತಿಹಾಸದ ಗರ್ಭದಲ್ಲಿ ಸೇರಿಹೋಗುವ ಅಪಾಯ ಎದುರಿಸುತ್ತಿರುವ ಪಾಕಿಸ್ತಾನದತ್ತ ಮುಂದಿನವಾರ ಗಮನ ಹರಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts