Friday, 22nd June 2018  

Vijayavani

ಕೊಲೆ ಆರೋಪಿ ಬಂಧಿಸುವ ವೇಳೆ ಹೈಡ್ರಾಮ - ಖಾಕಿ ಮೇಲೆಯೇ ಹಲ್ಲೆಗೆ ಯತ್ನ - ಹಂತಕನ ಮೇಲೆ ಖಾಕಿ ಫೈರಿಂಗ್‌        ಹಣಕಾಸು ವಿಷಯಕ್ಕೆ ಗಂಡಹೆಂಡತಿ ನಡುವೆ ಫೈಟ್‌ - ಪತ್ನಿ ಮೇಲೆ ಪತಿ ಶೂಟೌಟ್‌ - ನಾಪತ್ತೆಯಾಗಿರೋ ಹಂತಕನಿಗಾಗಿ ಖಾಕಿ ತಲಾಶ್‌        ಅಗರ್ ಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ - ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಕಾರ್ಖಾನೆ - ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಘಟನೆ        ಸರ್ಕಾರದ ಅಸ್ತಿತ್ವಕ್ಕೆ ಗಂಡಾಂತರ - ಸಿಎಂ ಕೈಗೆ ಸಿಕ್ಕಿದೆ ಗುಪ್ತಚರ ವರದಿ - ಸರ್ಕಾರ ಉಳಿಸಿಕೊಳ್ಳಲು ಎಚ್‌ಡಿಕೆ ಮಾಸ್ಟರ್‌ ಪ್ಲಾನ್‌        ಹಸಿರ ಸಿರಿ ನಡುವೆ ದುರ್ನಾಥ - ವಾಕ್‌ ಹೋದವರಿಗೆ ವಾಕರಿಕೆ - ಗಬ್ಬು ನಾರುತ್ತಿದೆ ಕಬ್ಬನ್‌ಪಾರ್ಕ್‌        ಜನದಟ್ಟಣೆ ನಿಯಂತ್ರಣಕ್ಕೆ BMRCL ಪರಿಹಾರ - ಮೆಟ್ರೋ ರೈಲಿಗೆ 3 ಬೋಗಿಗಳ ಸೇರ್ಪಡೆ - ಇಂದಿನಿಂದ ನೇರಳೆ ಮಾರ್ಗದಲ್ಲಿ ಓಡಾಟ       
Breaking News

ಪಾಕಿಸ್ತಾನಕ್ಕೆ ಎಪ್ಪತ್ತಾಯಿತು, ಕ್ಷಮಿಸಿ, ತಪ್ಪಾಯಿತು

Wednesday, 09.08.2017, 3:02 AM       No Comments

ವಿಭಜನೆ ನಂತರದ ಭಾರತ ಉಳಿದು ಬೆಳೆಯುತ್ತದೆಂದು ಪಶ್ಚಿಮದ ದೇಶಗಳಿಗೆ ನಂಬಿಕೆಯೇ ಇರಲಿಲ್ಲ. ಅದೇ ಪಾಕಿಸ್ತಾನ ತನ್ನ ಧಾರ್ವಿುಕ ಏಕತೆಯಿಂದಾಗಿ ಮಜಬೂತು ಬೆಳವಣಿಗೆ ಸಾಧಿಸುತ್ತದೆ ಎಂಬುದು ಇವರ ಎಣಿಕೆಯಾಗಿತ್ತು. ಆದರೆ ಆದದ್ದೇನು? ಇದಕ್ಕೆ ಕಾರಣವೇನು?

ಭಾರತದ ಕಾಫಿರ್ ಹಿಂದೂಗಳ ದಬ್ಬಾಳಿಕೆಯಿಂದ ಶ್ರದ್ಧಾವಂತ ಮುಸ್ಲಿಮರನ್ನು ರಕ್ಷಿಸುವ, ಅಲ್ಪಸಂಖ್ಯಾತರಾದ ಅವರ ಉನ್ನತಿಗೆ ಬಹುಸಂಖ್ಯಾತ ಹಿಂದೂಗಳಿಂದ ಯಾವ ಅಡ್ಡಿಆತಂಕವೂ ಎದುರಾಗಕೂಡದೆಂಬ ಉದ್ದೇಶದಿಂದ ಸೃಷ್ಟಿಯಾದ ದೇಶ ಪಾಕಿಸ್ತಾನ. ಆ ದೇಶ ಇನ್ನೊಂದು ವಾರದೊಳಗೆ ತನ್ನ ಸ್ವತಂತ್ರ ಅಸ್ತಿತ್ವದ ಏಳು ದಶಕಗಳನ್ನು ಪೂರೈಸಲಿದೆ. ಈ ಸಂದರ್ಭದಲ್ಲಿ, ತನ್ನ ಮೂಲ ಉದ್ದೇಶದಲ್ಲಿ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದರ ರಿಯಾಲಿಟಿ ಚೆಕ್ ಅಗತ್ಯವೆನಿಸುತ್ತದೆ. ನಮ್ಮ ಇತಿಹಾಸಕ್ಕೆ ಬಹುವಾಗಿ ತಳುಕು ಹಾಕಿಕೊಂಡ ಈ ಎಪ್ಪತ್ತು ವರ್ಷಗಳನ್ನು ಒಂದು ಅಂಕಣಬರಹದ ಮಿತಿಯಲ್ಲಿ ಹಿಡಿದಿಡುವ ಪ್ರಯತ್ನವನ್ನಿಲ್ಲಿ ಮಾಡುತ್ತಿದ್ದೇನೆ. ಪೀಠಿಕೆಯಾಗಿ, ಪಾಕಿಸ್ತಾನ ವಿಶ್ವಕ್ಕೆ ತೋರಿಸುತ್ತಿರುವ ತನ್ನ ಎರಡು ಚಿತ್ರಗಳನ್ನು ನಿಮಗೆ ಪರಿಚಯಿಸುತ್ತೇನೆ.

ಸ್ವತಂತ್ರ ಭಾರತದಂತೇ ಏಳು ದಶಕದ ಇತಿಹಾಸ ಹೊಂದಿರುವ ಪಾಕಿಸ್ತಾನ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಮತ್ತು ಅವಕಾಶವನ್ನು ತನ್ನ ಜನತೆಗೆ ನೀಡಿದ್ದು ಬಹಳ ಕಡಿಮೆ ಸಲ. ಪಾಕಿಸ್ತಾನೀಯರಿಗೆ ತಮ್ಮ ಸರಕಾರವನ್ನು ಆಯ್ಕೆಮಾಡುವ ಮೊಟ್ಟಮೊದಲ ಅವಕಾಶ ದೊರೆತದ್ದು 1970ರಲ್ಲಿ ಅಂದರೆ ದೇಶ ಅಸ್ತಿತ್ವಕ್ಕೆ ಬಂದ ಇಪ್ಪತ್ತಮೂರು ವರ್ಷಗಳ ನಂತರ! ಮೊದಲ ಹನ್ನೊಂದು ವರ್ಷಗಳಲ್ಲಿ ಜನತೆಯ ಅನುಮತಿಯಿಲ್ಲದೇ, ಅವರ ಆಸೆಆಕಾಂಕ್ಷೆಗಳನ್ನು ಲೆಕ್ಕಿಸದೇ ಬಂದು ತರಗೆಲೆಗಳಂತೆ ತೂರಿಹೋದ ಏಳೆಂಟು ಸರಕಾರಗಳು, ನಂತರ ಮೂರುಬಾರಿ ನಾಲ್ಕು ಸೇನಾಧಿಕಾರಿಗಳು ನಡೆಸಿದ ಒಟ್ಟು ಮೂವತ್ತನಾಲ್ಕು ವರ್ಷಗಳ ಸೇನಾಡಳಿತ, ಇವುಗಳ ನಡುನಡುವೆ ಆಗೊಮ್ಮೆ ಈಗೊಮ್ಮೆ ನಡೆದ ಚುನಾವಣೆಗಳು. ಜನರಿಂದ ಚುನಾಯಿತರಾದರೂ ಸ್ವತಂತ್ರವಾಗಿ ಆಡಳಿತ ನಡೆಸಲಾಗದೇ ಸೇನೆ ಮತ್ತು ಬಾಹ್ಯ ಶಕ್ತಿಗಳೊಂದಿಗೆ ರಾಜಿ ಮಾಡಿಕೊಂಡು ಜನತೆಯ ಆಶೋತ್ತರಗಳನ್ನು ಧಿಕ್ಕರಿಸಿದ ಜನಪ್ರತಿನಿಧಿ ಸರಕಾರಗಳು ಪಾಕಿಸ್ತಾನದ ಇದುವರೆಗಿನ ರಾಜಕೀಯ ಇತಿಹಾಸದ ಲಕ್ಷಣಗಳು. ಇದನ್ನು ಇನ್ನೂ ಪರಿಣಾಮಕಾರಿಯಾಗಿ ಹೇಳುವುದಾದರೆ ಪಾಕಿಸ್ತಾನ ಇದುವರೆಗೆ ಕಂಡದ್ದು ಹತ್ತು ಚುನಾವಣೆಗಳು, ಹದಿನಾಲ್ಕು ಪ್ರಧಾನಮಂತ್ರಿಗಳು, ಮೂರು ಸೇನಾ ಕ್ರಾಂತಿಗಳು, ನಾಲ್ವರು ಸೇನಾಡಳಿತಗಾರರು, ಒಬ್ಬರು ನಾಗರಿಕ ಸೇನಾಡಳಿಗಾರ; ಒಬ್ಬರು ಹಾಲಿ, ಇಬ್ಬರು ಮಾಜಿ ಪ್ರಧಾನಮಂತ್ರಿಗಳ ಹತ್ಯೆ, ಒಬ್ಬ ಪ್ರಧಾನಮಂತ್ರಿಗೆ ನೇಣು, ಒಬ್ಬ ಸೇನಾ ಸರ್ವಾಧಿಕಾರಿಯ ಹತ್ಯೆ, ಒಂದು ಅಂತರ್ಯುದ್ಧ, ಹತ್ತು ಲಕ್ಷದಷ್ಟು ನಿಶ್ಶಸ್ತ್ರ ನಾಗರಿಕರ ಅಮಾನುಷ ಕಗ್ಗೊಲೆ, ಒಮ್ಮೆ ದೇಶ ವಿಭಜನೆ- ಇವು ಇದುವರೆಗಿನ ಪಾಕಿಸ್ತಾನೀ ರಾಜಕಾರಣದ ರಕ್ತಸಿಕ್ತ ಇತಿಹಾಸ.

ವಿರೋಧಾಭಾಸ: ಕಾಫಿರ್ ಹಿಂದೂಗಳಿಂದ ಪ್ರತ್ಯೇಕವಾಗಿ ಬದುಕಲು ಮುಸ್ಲಿಮರು ಪಾಕಿಸ್ತಾನವನ್ನು ಸೃಷ್ಟಿಸಿಕೊಂಡರಷ್ಟೇ. ಆದರೆ, ತಾವೇ ಸೃಷ್ಟಿಸಿದ ತಾಲಿಬಾನ್ ಅವರನ್ನೀಗ ಕಾಫಿರ್​ಗಳು ಎಂದು ಕರೆಯುತ್ತಿದೆ! 2015ರ ಡಿಸೆಂಬರ್ 16ರಂದು ಏಳು ಮಂದಿ ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು ಪಾಕ್ ಸೇನಾಸಿಬ್ಬಂದಿಯ ಮಕ್ಕಳಿಗೇ ಮೀಸಲಾದ ಪೆಶಾವರ್ ನಗರದಲ್ಲಿನ ಆರ್ವಿು ಪಬ್ಲಿಕ್ ಸ್ಕೂಲ್​ನ 132 ಎಳೆವಯಸ್ಸಿನ ವಿದ್ಯಾರ್ಥಿಗಳನ್ನು ಬರ್ಬರವಾಗಿ ಹತ್ಯೆಗೈದರು. ಈ ಪೈಶಾಚಿಕ ರಕ್ತದೋಕುಳಿಗೆ ಇಡೀ ವಿಶ್ವ ಮರುಗುತ್ತಿದ್ದಂತೆ ತಾಲಿಬಾನ್ ನಾಯಕರು ‘ಈಗ ಸೈನಿಕರ ಮಕ್ಕಳನ್ನು ಕೊಂದಿದ್ದೇವೆ, ಮುಂದೆ ರಾಜಕಾರಣಿಗಳ ಮಕ್ಕಳನ್ನು ಕೊಲ್ಲುತ್ತೇವೆ‘ ಎಂದು ಘೊಷಿಸಿದರು. ಅದಕ್ಕೆ ಅವರು ನೀಡಿದ್ದು ಒಂದೇ ಒಂದು ಸರಳ ಕಾರಣ. ಅವರ ಅಭಿಪ್ರಾಯದಲ್ಲಿ ಪಾಕಿಸ್ತಾನೀ ಸೈನಿಕರು ಮತ್ತು ರಾಜಕಾರಣಿಗಳು ‘ಕಾಫಿರರು‘ ಅಂದರೆ ‘ವಾಜಿಬ್-ಉಲ್-ಖತಲ್‘ ಅಂದರೆ ಮರಣಕ್ಕೆ ಯೋಗ್ಯರಾದವರು! ಇಸ್ಲಾಂನ ಹೆಸರಿನಲ್ಲಿ ಸೃಷ್ಟಿಯಾದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್ ಅನ್ನು ಇಸ್ಲಾಮಿಕ್ ಕಾನೂನುಗಳ ಮೂಲಕ ಆಳುತ್ತಿರುವ ಮುಸ್ಲಿಂ ರಾಜಕಾರಣಿಗಳು ಮತ್ತು ಆ ದೇಶದ ಮುಸ್ಲಿಂ ಸೈನಿಕರು ತಾಲಿಬಾನಿಗಳ ದೃಷ್ಟಿಯಲ್ಲಿ ಕಾಫಿರರು! ಪಾಕಿಸ್ತಾನದ ಅಸ್ತಿತ್ವದ ವಿರೋಧಾಭಾಸಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದು ಸಿಗಲಾರದು.

ನಲವತ್ತೇಳರಲ್ಲಿ ಹುಳು ಹಿಡಿದ ಬೀಜದಿಂದ ಮೊಳಕೆಯೊಡೆದಂತಿದ್ದ ಸ್ವತಂತ್ರ ಭಾರತ ಮುಂದೆ ಬೆಳೆದು ಹೆಮ್ಮರವಾಗುತ್ತದೆಂಬ ನಂಬಿಕೆ ವಿಶ್ವಸಮುದಾಯದಲ್ಲಿ ಹೆಚ್ಚಿನವರಿಗೆ ಇರಲೇ ಇಲ್ಲ. ಭಾರತ ಅನತಿ ಕಾಲದಲ್ಲಿ ಛಿದ್ರವಾಗುತ್ತದೆ ಎಂಬ ‘ನಂಬಿಕೆ‘ ಐವತ್ತು-ಅರವತ್ತರ ದಶಕದಲ್ಲಿ ಪಶ್ಚಿಮದ ದೇಶಗಳ ಸರ್ಕಾರೀ ವಲಯಗಳಲ್ಲಿ ವ್ಯಾಪಕವಾಗಿತ್ತು. ಈ ದೇಶ ಒಂದಾಗಿ ಉಳಿದರೂ ಹೆಚ್ಚು ಕಾಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಕೆಲ ವಿಶ್ಲೇಷಕರು ಷರಾ ಬರೆದೂ ಇದ್ದರು. ಇದಕ್ಕೆ ವಿರುದ್ಧವಾಗಿ, ಧಾರ್ವಿುಕ ಏಕತೆಯಿಂದಾಗಿ ಸದೃಢ ರಾಷ್ಟ್ರವಾಗಿ ಬೆಳೆದು ಏಷಿಯಾದ ಇತಿಹಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆಂದು ಪಶ್ಚಿಮದ ದೊಡ್ಡಮನುಷ್ಯರುಗಳು ಕೊಂಡಾಡಿದ್ದದ್ದು ಪಾಕಿಸ್ತಾನವನ್ನು. ಆದರೆ ಅವರ ನಂಬಿಕೆಗೆ ವಿರುದ್ಧವಾಗಿ ಪಾಕಿಸ್ತಾನ ಹುಟ್ಟಿದ ಕಾಲು ಶತಮಾನ ಪೂರೈಸುವುದರೊಳಗೇ ಎರಡು ತುಂಡಾದ್ದಲ್ಲದೇ ಕಳೆದೊಂದು ದಶಕದಿಂದಲೂ ‘ದಕ್ಷಿಣ ಏಷಿಯಾದ ರೋಗಿಷ್ಠ‘ನಾಗಿ ನರಳುತ್ತಿದೆ. ಒಂದು ಅರ್ಥದಲ್ಲಿ ಅದೀಗ ಏಷಿಯಾವಷ್ಟೇ ಏಕೆ ಅಮೆರಿಕಾ ಸೇರಿದಂತೆ ಇಡೀ ಪ್ರಪಂಚದ ಇತಿಹಾಸದಲ್ಲೇ ಬಲು ಮಹತ್ವದ ಪಾತ್ರ ನಿರ್ವಹಿಸುತ್ತಿರುವುದೇನೋ ನಿಜ. ಆದರೆ ಅದು ನಕಾರಾತ್ಮಕ ಹಾಗೂ ವಿನಾಶಕಾರೀ ಪಾತ್ರ ಎನ್ನುವುದಷ್ಟೇ ದುರಂತ.

ಹೀಗೇಕಾಯಿತು?: ಇದಕ್ಕೆ ಉತ್ತರ ದೊರೆಯುವುದು ಪಾಕಿಸ್ತಾನದ ಸೃಷ್ಟಿಯ ಹಿಂದಿದ್ದ ಸುಳ್ಳುಗಳಲ್ಲಿ, ಅಪ್ರಾಮಾಣಿಕತೆಗಳಲ್ಲಿ. ಹಿಂದೂಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ರಾಷ್ಟ್ರಗಳು, ಅವೆರಡೂ ಒಂದೇ ರಾಜ್ಯದಲ್ಲಿ (ಸರಕಾರದಡಿಯಲ್ಲಿ) ಇರಲು ಸಾಧ್ಯವಿಲ್ಲ ಎಂಬ ದ್ವಿರಾಷ್ಟ್ರ ಸಿದ್ಧಾಂತ ವಾಸ್ತವವಾಗಿ ಇದ್ದ ಕಾರಣಗಳನ್ನು ಮರೆಮಾಚಲು ಸೃಷ್ಟಿಯಾದ ಒಂದು ಮಂದ ಮುಸುಕು. ಪಾಕಿಸ್ತಾನದ ಸೃಷ್ಟಿಗೆ ಇದ್ದ ನಿಜವಾದ ಕಾರಣಗಳು ಬೇರೆಯೇ ಇವೆ. ಅವೆಲ್ಲವನ್ನೂ ಸಂಕ್ಷಿಪ್ತವಾಗಿ ಎರಡು ಗುಂಪುಗಳಲ್ಲಿ ಒಟ್ಟುಗೂಡಿಸಬಹುದು. ಒಂದು- ಹಿಂದೂಮಹಾಸಾಗರದತ್ತ ರಷಿಯನ್ನರ ಮುಂದೊತ್ತುವಿಕೆಯನ್ನು ತಡೆಗಟ್ಟಲು ಭಾರತದ ಪಶ್ಚಿಮೋತ್ತರದಲ್ಲಿ ತನ್ನ ಮಾತನ್ನು ಕೇಳುವ, ತಮ್ಮ ಸೇನಾ ಠಿಕಾಣೆಗಳಿಗೆ ಅವಕಾಶ ನೀಡುವ ಪುಟ್ಟ ರಾಷ್ಟ್ರವೊಂದರ ಅಗತ್ಯವಿದೆ ಎಂದು ಬ್ರಿಟಿಷ್ ಸರಕಾರ ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಅರಿತದ್ದು ಮತ್ತು ಅದಕ್ಕಾಗಿ ಅಗತ್ಯವಾದ ಸಿದ್ಧತೆಗಳನ್ನು ಲಂಡನ್​ನ ಮುಂದಿನ ಎಲ್ಲಾ ಸರಕಾರಗಳು ಹಂತಹಂತವಾಗಿ ರೂಪಿಸಿದ್ದು; ಎರಡು- ಕಾಂಗ್ರೆಸ್ ನೇತೃತ್ವಕ್ಕೊಳಗಾಗಬಹುದಾದ, ಹಿಂದೂ ಪ್ರಾಬಲ್ಯದ ಸ್ವತಂತ್ರ ಭಾರತದಲ್ಲಿ ತಮ್ಮ ಆರ್ಥಿಕ ಹಿತಾಸಕ್ತಿಗಳು ನಿರ್ಲಕ್ಷ್ಯಕ್ಕೊಳಗಾಗುತ್ತವೆ ಮತ್ತು ತಮ್ಮ ರಾಜಕೀಯ ಆಶೋತ್ತರಗಳಿಗೆ ಸೂಕ್ತ ಅವಕಾಶವಿರುವುದಿಲ್ಲ ಎಂದು ಭಾವಿಸಿದ ಲಕ್ನೋ, ಬಾಂಬೆ ಮತ್ತು ಹೈದರಾಬಾದ್​ನ ಕೆಲವೇ ಕೆಲವು ಶ್ರೀಮಂತ ಮುಸ್ಲಿಂ ಕುಟುಂಬಗಳು ‘ಮುಸ್ಲಿಂ ಲೀಗ್‘ ಎಂಬ ಹಣೆಪಟ್ಟಿಯೊಂದಿಗೆ ತಮಗಷ್ಟೇ ಮೀಸಲಾದ ರಾಜಕೀಯ ವ್ಯವಸ್ಥೆಯೊಂದನ್ನು ಅಸ್ತಿತ್ವಕ್ಕೆ ತರುವುದಕ್ಕಾಗಿ ರೂಪಿಸಿದ ಕಾರ್ಯಯೋಜನೆಗಳು. ಇದರರ್ಥ, ತನ್ನ ಸಾಮ್ರಾಜ್ಯಶಾಹಿ ಸ್ವಾರ್ಥಕ್ಕಾಗಿ ಏಷಿಯನ್ ಜನತೆಯೊಂದರ ಭವಿಷ್ಯವನ್ನು ಬಲಿಗೊಡಲು ಮುಂದಾದ ಒಂದು ಯೂರೋಪಿಯನ್ ಸರಕಾರ ಮತ್ತು ತಮ್ಮ ಆರ್ಥಿಕ ಮತ್ತು ರಾಜಕೀಯ ಲಾಲಸೆಗಳಿಗಾಗಿ ದೇಶವನ್ನು ಒಡೆಯಲು ಮುಂದಾದ ಒಂದು ಅತಿಪುಟ್ಟ ದೇಶೀಯ ಗುಂಪು ತಮ್ಮ ವ್ಯವಸ್ಥಿತ ಜಂಟೀ ಕಾರ್ಯಯೋಜನೆಗಳ ಮೂಲಕ ಪಾಕಿಸ್ತಾನವನ್ನು ಅಸ್ತಿತ್ವಕ್ಕೆ ತರುವುದರಲ್ಲಿ ಯಶಸ್ವಿಯಾದವು.

ಈ ಕಾರ್ಯಯೋಜನೆಯಲ್ಲಿ ಬ್ರಿಟಿಷ್ ಸರಕಾರ ಮತ್ತು ಮುಸ್ಲಿಂ ಲೀಗ್ ಎಲ್ಲ ಹಂತಗಳಲ್ಲೂ ಒಂದಕ್ಕೊಂದು ಸಂಪೂರ್ಣವಾಗಿ ಸಹಕರಿಸಿದವು. ಆ ಸಹಕಾರ ಆರಂಭವಾದದ್ದು ‘ಶಿಮ್ಲಾ ಡೆಪ್ಯುಟೇಷನ್‘ ಎಂಬ ಉತ್ತರ ಭಾರತದ ಶ್ರೀಮಂತ ನವಸಾಕ್ಷರ ಮುಸ್ಲಿಮರ ಗುಂಪೊಂದು 1906ರಲ್ಲಿ ವೈಸ್​ರಾಯ್ ಲಾರ್ಡ್ ಮಿಂಟೋ ಅವರನ್ನು ಭೇಟಿಯಾದಾಗ. ಅಲ್ಲಿಂದಾಚೆಗೆ ಬ್ರಿಟಿಷ್ ಸರಕಾರ ಮತ್ತು ಮುಸ್ಲಿಂ ಲೀಗ್ ನಡುವೆ ಹೊಕ್ಕುಬಳಕೆ, ಸಹಯೋಗ-ಸಹಕಾರ ಅದೆಷ್ಟು ಗಾಢಗೊಳ್ಳುತ್ತಾ ಸಾಗಿತೆಂದರೆ ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಸಮರಕ್ಕೆ ನಿಂತರೆ ಮುಸ್ಲಿಂ ಲೀಗ್ ಬ್ರಿಟಿಷ್ ಸತ್ತೆಯ ಜತೆಗೆ ನಿಂತು ಕಾಂಗ್ರೆಸ್ ವಿರುದ್ಧ ಸಮರ ಸಾರಿತು ಮತ್ತು ಆ ಸಮರ ನಲವತ್ತರ ದಶಕದಲ್ಲಿ ಹಿಂಸಾತ್ಮಕವಾಯಿತು. ಇತಿಹಾಸವನ್ನು ವಸ್ತುನಿಷ್ಠವಾಗಿ ಅವಲೋಕಿಸಿದರೆ ತಿಳಿಯುವ ಸತ್ಯವೇನೆಂದರೆ ಈಗ ಪಾಕಿಸ್ತಾನವಾಗಿರುವ ಪ್ರದೇಶದ ಜನರಿಗೆ ಮುಸ್ಲಿಮರಿಗೆಂದೇ ಪ್ರತ್ಯೇಕ ರಾಷ್ಟ್ರವೊಂದರ ನಿರ್ವಣದ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ಅದು ಬೇಕಾಗಿದ್ದದ್ದು ಲಕ್ನೋ, ಬಾಂಬೆ, ಹೈದರಾಬಾದ್ ಮತ್ತು ಈಗಿನ ಬಾಂಗ್ಲಾದೇಶದ ಪ್ರಭಾವಿ ಮುಸ್ಲಿಮರಿಗೆ. ಹೀಗಾಗಿಯೇ, ಇಂದಿನ ಪಾಕಿಸ್ತಾನದಲ್ಲಿ ಅಂದು ಮುಸ್ಲಿಂ ಲೀಗ್​ಗೆ ಬೆಂಬಲದ ನೆಲೆಯೇ ಇರಲಿಲ್ಲ. ಪಾಕಿಸ್ತಾನದ ಸೃಷ್ಟಿಯ ನಂತರ ಈಗಿನ ಭಾರತದಿಂದ ಅಲ್ಲಿಗೆ ವಲಸೆ ಹೋದ ಮುಸ್ಲಿಂ ಲೀಗ್​ನ ನೇತಾರರು ಸ್ಥಳೀಯ ಜಮೀನುದಾರರುಗಳಿಗೆ ಲೀಗ್​ನ ಗ್ರಾಮಾಂತರ ನಾಯಕತ್ವವನ್ನು ನೀಡುವ ಮೂಲಕ ಪಂಜಾಬ್​ನಲ್ಲಿ ಮುಸ್ಲಿಂ ಲೀಗ್ ಅನ್ನು ಬೇರೂರಿಸಲು ಪ್ರಯತ್ನಿಸಿದರು. ಇಂತಹ ಪ್ರಯತ್ನದ ಫಲ ಸಿಂಧ್​ನಲ್ಲಿ ದಕ್ಕಿದ್ದು ಭಾರತದಿಂದ ವಲಸೆ ಹೋಗಿದ್ದ ಮುಸ್ಲಿಮರಿಗೆ. ಪಾಕಿಸ್ತಾನದ ಮುಂದಿನ ಬಹುತೇಕ ಆಂತರಿಕ ಸಮಸ್ಯೆಗಳಿಗೆ ಇದು ಮೂಲವಾಯಿತು. ರಾಜಕೀಯಕ್ಕಿಳಿದ ಪಂಜಾಬೀ ಜಮೀನುದಾರರು ಅನತಿಕಾಲದಲ್ಲೇ ರಾಷ್ಟ್ರರಾಜಕಾರಣವನ್ನು ತಮ್ಮ ಕೈಗೆ ತೆಗೆದುಕೊಂಡರು. ಅವರ ಜತೆ ಅಧಿಕಾರಕ್ಕಾಗಿ ಸೆಣಸಾಟಕ್ಕಿಳಿದದ್ದು ಪಂಜಾಬಿಗಳಿಂದಲೇ ತುಂಬಿದ್ದ ಸೇನೆ. ಹೀಗೆ, ರಾಷ್ಟ್ರ ರಾಜಕಾರಣ ಪಂಜಾಬೀ ಊಳಿಗಮಾನ್ಯ ಪ್ರಭುಗಳು ಮತ್ತು ಸೇನಾಧಿಕಾರಿಗಳ ಕೈಗೆ ಬೀಳುತ್ತಿದ್ದಂತೇ ಇತರ ಮೂರು ಪ್ರಾಂತ್ಯಗಳ ಮೇಲೆ ಪಂಜಾಬ್​ನ ಜನಾಂಗಿಯ, ಆರ್ಥಿಕ, ಭಾಷಿಕ ಹಾಗೂ ಸಾಂಸ್ಕೃತಿಕ ದಬ್ಬಾಳಿಕೆಗೆ ಮೊದಲಾಯಿತು. ಪರಿಣಾಮವಾಗಿಯೇ, ಸಿಂಧ್, ಬಲೂಚಿಸ್ತಾನ್ ಹಾಗೂ ಖೈಬರ್-ಪಖ್ತೂನ್​ಖ್ವಾ (ಹಿಂದಿನ ಗಡಿನಾಡು ಪ್ರಾಂತ್ಯ) ಪ್ರಾಂತ್ಯಗಳಲ್ಲಿ ಪ್ರತ್ಯೇಕತೆಯ ಭಾವನೆಯೂ ಮೊಳಕೆಯೊಡೆಯಿತು. 1982ರಲ್ಲಿ ಉತ್ತುಂಗಕ್ಕೇರಿದ ಅದು ಒಂದು ಹಂತದಲ್ಲಿ ಪಾಕಿಸ್ತಾನವನ್ನು ಭೂಪಟದಿಂದ ಮಾಯ ಮಾಡುವ ಹಂತಕ್ಕೂ ಹೋಗಿತ್ತು. ಆದರೆ ತನ್ನ ಸೋವಿಯೆತ್ ವಿರುದ್ಧದ ಸಮರದಲ್ಲಿ ಅಮೆರಿಕಾಗೆ ಪಾಕಿಸ್ತಾನ ಅತ್ಯಗತ್ಯವಾಗಿದ್ದ ಕಾರಣ ಈ ಪ್ರತ್ಯೇಕತಾ ಆಂದೋಲನಗಳನ್ನು ವಾಷಿಂಗ್​ಟನ್ ಹಾಗೂ ಇಸ್ಲಾಮಾಬಾದ್​ಗಳೆರಡೂ ಜಾಣತನದಿಂದ ಕುಗ್ಗಿಸಿಬಿಟ್ಟವು. ಈಗ ಅಮೆರಿಕಾಗೆ ಪಾಕಿಸ್ತಾನ ಬೇಕಾಗಿಲ್ಲ. ಆದರೆ ಅಮೆರಿಕಾದ ಸ್ಥಾನದಲ್ಲಿ ಚೀನಾ ಬಂದು ಕುಳಿತಿದೆ. ಆ ಕಮ್ಯೂನಿಸ್ಟ್ ದೈತ್ಯನಿಗೆ ಪಾಕಿಸ್ತಾನ ಅಸ್ತಿತ್ವದಲ್ಲಿ ಮುಂದುವರಿಯಲೇಬೇಕು. ಬಲೂಚಿ ಹಾಗೂ ಪಖ್ತೂನ್ ಪ್ರತ್ಯೇಕತಾವಾದವನ್ನು ಪಾಕ್ ನಾಯಕತ್ವಕ್ಕಿಂತಲೂ ಚೀನೀ ನಾಯಕತ್ವ ಪ್ರಬಲವಾಗಿ ವಿರೋಧಿಸುತ್ತದೆ ಮತ್ತು ಹತ್ತಿಕ್ಕುತ್ತದೆ. ಒಂದುವೇಳೆ, ಇತಿಹಾಸ ಒಂದು ಅಚ್ಚರಿಯ ತಿರುವು ತೆಗೆದುಕೊಂಡು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನದ ಜತೆಗೆ ಚೀನಾ ಹೊಂದಿರುವ ಭೌಗೋಳಿಕ ಸಂಪರ್ಕವನ್ನು ಕತ್ತರಿಸಿಬಿಟ್ಟರೆ? ಆಗ ಪಾಕಿಸ್ತಾನ ಛಿದ್ರಛಿದ್ರವಾಗುವುದನ್ನು ದೇವರೂ ತಪ್ಪಿಸಲಾರ.

ಸಂಘರ್ಷ ತಾರಕಕ್ಕೆ: ಪಾಕಿಸ್ತಾನದ ಭವಿಷ್ಯ ಹೀಗೆ ತೂಗುಯ್ಯಾಲೆಯಲ್ಲಿರುವಂತೇ ಅಲ್ಲಿ ವಿವಿಧ ಬಗೆಯ ಧಾರ್ವಿುಕ ರಕ್ತದೋಕುಳಿ ಸಹ ನೆರೆಯ ನೀರಿನಂತೆ ಏರುತ್ತಿದೆ. ಮುಸ್ಲಿಮರಿಗೆ ಶಾಂತಿ, ಸಮೃದ್ಧಿಯ ಸ್ವರ್ಗವಾಗಬೇಕಾಗಿದ್ದ ಪಾಕಿಸ್ತಾನದಲ್ಲಿ ಸುನ್ನಿ- ಶಿಯಾ ಸಂಘರ್ಷ ದಿನನಿತ್ಯದ ಮಾತಾಗಿ, ಮಸೀದಿಗಳಲ್ಲಿ ಪ್ರಾರ್ಥನೆಗೈಯುವವರ ಮೇಲೆ ಗುಂಡಿನ ಮಳೆಗರೆವ ಘಟನೆಗಳು ಘಟಿಸುತ್ತಿವೆ. ಇದರ ಜತೆಗೆ, ಅಫ್ಘಾನಿಸ್ತಾನ ಹಾಗೂ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಲೆಂದು ಪಾಕಿಸ್ತಾನ ಸೃಷ್ಟಿಸಿದ ಭಯೋತ್ಪಾದನಾ ಸಂಘಟನೆಗಳು ಫ್ರಾಂಕೆನ್​ಸ್ಟೈನ್ ರಕ್ಕಸನಂತೆ ಭಯಾನಕವಾಗಿ ಬೆಳೆದು ತಮ್ಮ ರಕ್ತದಾಹಕ್ಕೆ ಪಾಕಿಸ್ತಾನವನ್ನೇ ಗುರಿಯಾಗಿಸಿಕೊಳ್ಳುತ್ತಿವೆ. ಅವುಗಳ ಕೃಪೆಯಿಂದಾಗಿ ಭಯೋತ್ಪಾದನಾ ದಾಳಿಗಳಲ್ಲಿ ಪಾಕಿಸ್ತಾನಕ್ಕೀಗ ಇರಾಕ್ ನಂತರ ವಿಶ್ವದಲ್ಲೇ ಎರಡನೆಯ ಸ್ಥಾನ. ಹೀಗೆ, ಧಾರ್ವಿುಕ ಹಾಗೂ ಜನಾಂಗೀಯ ಐಕ್ಯತೆಯನ್ನು ಸಾಧಿಸಲಾರದೇ, ಅಸ್ತಿತ್ವಕ್ಕಾಗಿ ಮೊದಲು ಅಮೆರಿಕಾ ಈಗ ಚೀನಾದಂತಹ ವಿದೇಶೀ ಶಕ್ತಿಗಳ ಮೇಲೆ ಅವಲಂಬಿತವಾಗಿರುವ ಪಾಕಿಸ್ತಾನವನ್ನು ನೋಡಿದಾಗೆಲ್ಲಾ ನನಗೆ ಸಿಂಧಿ ಕಥೆಯೊಂದು ಗಾಢವಾಗಿ ನೆನಪಾಗುತ್ತದೆ. ಸಂಭಾಷಣೆಯ ರೂಪದಲ್ಲಿದ್ದ ಹತ್ತೋ ಹನ್ನೆರಡೋ ಸಾಲುಗಳ ಆ ಅತಿಪುಟ್ಟ ಕಥೆಯ ನೆನಪಿರುವ ಸಾಲುಗಳು ಸರಿಸುಮಾರು ಹೀಗಿದ್ದವು:

‘ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ಏಕೆ ಸೃಷ್ಟಿಸಲಾಯಿತು?‘ ‘ಯಾಕೆಂದರೆ ಉಪಖಂಡದ ಮುಸ್ಲಿಮರಿಗೆ ತಮ್ಮದೇ ರಾಷ್ಟ್ರವೊಂದರ ಅಗತ್ಯವಿತ್ತು.‘ ‘ಯಾಕೆ ಅಗತ್ಯವಿತ್ತು?’ ‘ಅವರೆಲ್ಲರೂ ತಾವು ಪಂಜಾಬಿಗಳು, ಸಿಂಧಿಗಳು, ಪಠಾಣರು, ಬಲೂಚಿಗಳು ಅಂತ ತಮ್ಮತಮ್ಮಲ್ಲಿ ಭೇದ ತೋರದೇ ತಾರತಮ್ಯವಿಲ್ಲದೇ ತಾವೆಲ್ಲರೂ ಮುಸ್ಲಿಮರು ಎಂದು ತಿಳಿದು ಸಮಾನತೆಯಿಂದ ಬದುಕಲು ಅವರದೇ ಅದ ರಾಷ್ಟ್ರವೊಂದರ ಅಗತ್ಯವಿತ್ತು.‘ ‘ಅಂದರೆ ಈಗ ಪಾಕಿಸ್ತಾನದಲ್ಲಿ ಎಲ್ಲರೂ ಸಮಾನರೇ? ಪಂಜಾಬಿಗಳು, ಸಿಂಧಿಗಳು, ಪಠಾಣರು, ಬಲೂಚಿಗಳು ಎಂಬ ಭೇದ ಈಗಲೂ ಇದೆಯಲ್ಲ?‘

‘ಹೌದು, ಇದೆ.‘ ‘ಹಾಗಿದ್ದರೆ ಪಾಕಿಸ್ತಾನವನ್ನು ಸೃಷ್ಟಿಸುವ ಅಗತ್ಯವಿತ್ತೇ?‘

‘ತಪ್ಪಾಯಿತು. ಕ್ಷಮಿಸಿ. ಇನ್ನೊಂದು ಸಲ ಹೀಗೆ ಮಾಡುವುದಿಲ್ಲ.‘

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top