Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ಚೀನಾ ಕೈಲಿ ಚುಂಬಿ ಎಂಬ ವಿಷದ ಕೊಂಡಿಯ ದುಂಬಿ

Wednesday, 12.07.2017, 3:00 AM       No Comments

ಕೆಲವೇ ವರ್ಷಗಳ ಹಿಂದೆ ಭಾರತವನ್ನು ಮಿತ್ರನಂತೆ ಪರಿಗಣಿಸುತ್ತಿದ್ದ ಚೀನಾ ಈಚೆಗೆ ಏಕೆ ಕದನ ಕುತೂಹಲವನ್ನು ತೋರಿಸುತ್ತಿದೆ ಎಂಬ ಕುರಿತ ಚರ್ಚೆಯನ್ನು ಕಳೆದ ವಾರ ಕೈಗೆತ್ತಿಕೊಂಡಿದ್ದೆ. ಭಾರತವನ್ನು ಎದುರಿಸಲು ಅಥವಾ ಹೆದರಿಸಲು ಚೀನಾ ಈಗ ದೊಕ್ಲಾಮ್ ಪ್ರಸ್ತಭೂಮಿಯನ್ನೇ ಏಕೆ ಆಯ್ಕೆ ಮಾಡಿಕೊಂಡಿದೆ ಎನ್ನುವುದು ಅರ್ಥವಾಗಬೇಕಾದರೆ ತಮ್ಮ ಸಾಮರಿಕ ಯೋಜನೆಗಳಲ್ಲಿ ಚೀನೀಯರು ಚುಂಬಿ ಕಣಿವೆಗೆ ನೀಡುವ ಮಹತ್ವವನ್ನು ಗುರುತಿಸುವುದು ಅಗತ್ಯವಾಗುತ್ತದೆ.

ಸಿಕ್ಕಿಂ ರಾಜ್ಯ ಮತ್ತು ಭೂತಾನ್ ನಡುವಿರುವ ಚುಂಬಿ ಕಣಿವೆ ಭಾರತದ ಭುಜದಲ್ಲಿ ಕಠಾರಿಯಂತೆ ನೆಟ್ಟು ನಿಂತಿರುವ ಚೀನೀ ಪ್ರದೇಶ. 1890ರಲ್ಲಿ ಆಗ ಅರೆಸ್ವಾಯತ್ತ ದೇಶಗಳಾಗಿದ್ದ ಸಿಕ್ಕಿಂ ಮತ್ತು ಟಿಬೆಟ್ ನಡುವಿನ ಗಡಿಯ ಬಗ್ಗೆ ಬ್ರಿಟನ್ ಹಾಗೂ ಟಿಬೆಟ್ ಮಧ್ಯೆ ಒಪ್ಪಂದವಾದಾಗ ಚುಂಬಿ ಕಣಿವೆ ಟಿಬೆಟ್​ನ ಅಧಿಕೃತ ಭಾಗವೆಂದು ಬ್ರಿಟನ್ ಮಾನ್ಯ ಮಾಡಿತು. ಟಿಬೆಟ್ ಚೀನಾದ ಅಧಿಕೃತ ಭಾಗವೆಂದು 1954ರಲ್ಲಿ ನೆಹರೂ ಸರ್ಕಾರ ಮಾನ್ಯಮಾಡಿದಾಗ ಚುಂಬಿ ಕಣಿವೆ ಚೀನಾದ್ದೆಂದು ಭಾರತ ಅಧಿಕೃತವಾಗಿ ಒಪ್ಪಿಕೊಂಡಂತಾಯಿತು. ಚುಂಬಿ ಕಣಿವೆ ಭಾರತದ ‘ಹೊರಗಿರುವ’ ಕಾರಣದಿಂದಾಗಿ ಮುಂದೆ ದೇಶದ ರಕ್ಷಣೆಗೆ ಒದಗಬಹುದಾದ ಅಪಾಯಗಳು ಎರಡೂ ಸಂದರ್ಭಗಳಲ್ಲಿ ಭಾರತದ ಸರ್ಕಾರಗಳ ಗಮನಕ್ಕೆ ಬರಲಿಲ್ಲ. ಬ್ರಿಟಿಷರ ಕಾಲದಲ್ಲೇನೋ ಟಿಬೆಟ್ ಸ್ವತಂತ್ರವಾಗಿದ್ದ ಹಾಗೂ ತನಗೆ ಅಪಾಯವೊಡ್ಡುವಷ್ಟು ಅಪಾಯಕಾರಿ ಮತ್ತು ಮಹತ್ವಾಕಾಂಕ್ಷಿಯಾಗಿಲ್ಲದಿದ್ದ ಕಾರಣ ಭಾರತ ನೆಮ್ಮದಿಯಿಂದಿರಬಹುದಾಗಿತ್ತು. ಆದರೆ, ಯಾವಾಗ ವಿಸ್ತಾರವಾದಿ ಚೀನಾ 1950ರಲ್ಲಿ ಟಿಬೆಟ್ ಅನ್ನು ಆಕ್ರಮಿಸಿಕೊಂಡಿತೋ ಆಗ ಚುಂಬಿ ಕಣಿವೆ ಭಾರತಕ್ಕೆ ಮಹತ್ವದ್ದಾಗಿಬಿಟ್ಟಿತು. ಇದಕ್ಕೆ ಸಕಾರಣಗಳಿದ್ದವು.

ಟಿಬೆಟನ್ನು ನುಂಗಿ ನೊಣೆದ ಚೀನಾ ಅಷ್ಟಕ್ಕೇ ತೃಪ್ತವಾಗುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದು ಸ್ವತಃ ಚೀನೀ ಸರ್ವಾಧಿಕಾರಿ ಮಾವೊ ಝೆ ಡಾಂಗ್. ಮಾವೋ 1955ರಲ್ಲಿ ಟಿಬೆಟನ್ನು ಚೀನಾದ ಅಂಗೈಯೆಂದೂ, ಲಡಾಖ್, ನೇಪಾಳ, ಸಿಕ್ಕಿಂ, ಭೂತಾನ್ ಹಾಗೂ ನೇಫಾ (ಈಗಿನ ಅರುಣಾಚಲ ಪ್ರದೇಶ) ಅದರ ಐದು ಬೆರಳುಗಳೆಂದೂ ಬಣ್ಣಿಸಿದರು. ಅದನ್ನು ಉದ್ಧರಿಸಿದ ಚೀನೀ ಸರ್ಕಾರೀ ನಿಯಂತ್ರಿತ ಪತ್ರಿಕೆಗಳು ‘ಅಂಗೈ ಚೀನಾಕ್ಕೆ ಸೇರಿ ಆಯಿತು, ಇನ್ನು ಬೆರಳುಗಳ ಸರದಿ‘ ಎಂದು ಹೇಳತೊಡಗಿದಾಗ ಚೀನಾದ ಮುಂದಿನ ವಿಸ್ತಾರವಾದಿ ನಡೆಗಳು ಏನಿರಬಹುದೆಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿಬಿಟ್ಟಿತು. ಆಗಿನ್ನೂ ಭಾರತ-ಚೀನಾ ಗಡಿ ಸಮಸ್ಯೆ ಬಹಿರಂಗವಾಗಿ ಉಲ್ಬಣಿಸಿರಲಿಲ್ಲ. ಅವೇನಿದ್ದರೂ ಹಿಂದಿ-ಚೀನೀ ಭಾಯಿ ಭಾಯಿ, ಪಂಚಶೀಲ ತತ್ವಗಳು ಎಂಬ ಚೀನೀ ಮಂಕುಬೂದಿಯನ್ನು ನೆಹರೂರ ಭಾರತ ತನ್ನ ನೆತ್ತಿಯ ಮೇಲೆ ಸ್ವಇಚ್ಛೆಯಿಂದ ಧಾರಾಳವಾಗಿ ಎರಚಿಕೊಂಡು ಮಂಪರಿನಲ್ಲಿದ್ದ ದುರಂತದ ದಿನಗಳಾಗಿದ್ದವು.

ಆದರೆ ಅದೇ ಸಮಯದಲ್ಲಿ ಭಾರತದ ಕೊರಳಿನ ಸುತ್ತ ಉರುಳು ಹಾಕುವ ದೂರಗಾಮಿ ಯೋಜನೆಗಾಗಿ ಚೀನಾ ತಯಾರಿ ಮಾಡಿಕೊಳ್ಳುತ್ತಿತ್ತು. ಆ ಯೋಜನೆಯ ಅನುಷ್ಠಾನದಲ್ಲಿ ಚುಂಬಿ ಕಣಿವೆ ಸಾಮರಿಕವಾಗಿ ಮಹತ್ವದ್ದಾಗಲಿತ್ತು. ಕಳೆದ ಶತಮಾನದ ಆರಂಭದಲ್ಲಿ ಬ್ರಿಟಿಷ್ ಭಾರತದ ಸೇನೆ ಈಗಿನ ಅರುಣಾಚಲ ಪ್ರದೇಶವನ್ನು ಆಕ್ರಮಿಸಿಕೊಂಡು ಭಾರತಕ್ಕೆ ಸೇರಿಸಿಕೊಂಡದ್ದನ್ನೂ, ಅದರ ಮುಂದುವರಿಕೆಯಾಗಿ 1913-14ರಲ್ಲಿ ಮೆಕ್​ವುಹೋನ್ ಗಡಿರೇಖೆಯನ್ನು ಟಿಬೆಟ್ ಮತ್ತು ಭಾರತದ ನಡುವಿನ ಹೊಸ ಗಡಿಯಾಗಿಸಿದ್ದನ್ನೂ ತಾನು ಮಾನ್ಯಮಾಡುವುದಿಲ್ಲವೆಂದು ಚೀನಾ 1956ರ ನಂತರ ಮತ್ತೆಮತ್ತೆ ಹೇಳತೊಡಗಿತು. ಆದರೆ 1890ರ ಸಿಕ್ಕಿಂ-ಟಿಬೆಟ್ ಗಡಿ ಒಪ್ಪಂದದ ಬಗ್ಗೆ ಚಕಾರವೆತ್ತಲಿಲ್ಲ. ಅದರ ಅರ್ಥ ಮೆಕ್​ವುಹೋನ್ ರೇಖೆ ತನಗೆ ಅನುಕೂಲಕರವಲ್ಲ, ಅದಕ್ಕೆ ವಿರುದ್ಧವಾಗಿ ಸಿಕ್ಕಿಂ-ಟಿಬೆಟ್ ಗಡಿ ತನಗೆ ಅನುಕೂಲಕರ ಎಂದು ಚೀನಾ ಭಾವಿಸಿದೆ ಎನ್ನುವುದು ಸ್ಪಷ್ಟವಾಯಿತು. ಈ ವಿಷಯದಲ್ಲಿ ಚೀನೀ ರಹಸ್ಯ ಚಿಂತನೆ ಹೀಗಿತ್ತು- ಪೂರ್ವದ ಕೆಲಭಾಗಗಳ ಹೊರತಾಗಿ ಇಡೀ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸಹೊರಟರೂ ಉನ್ನತ ಹಿಮಾಲಯ ಪರ್ವತಗಳ ದಕ್ಷಿಣಕ್ಕಿರುವ ಆ ರಾಜ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದು ಚಳಿಗಾಲದಲ್ಲಿ ಅಸಾಧ್ಯ ಎಂಬ ವಾಸ್ತವಪ್ರಜ್ಞೆ ಚೀನೀ ನಾಯಕರಿಗಿತ್ತು. ಈ ಕಾರಣದಿಂದಾಗಿಯೇ ಅವರು 1962ರ ಯುದ್ಧದಲ್ಲಿ ಆಕ್ರಮಿಸಿಕೊಂಡಿದ್ದ ಅರುಣಾಚಲದ ಪಶ್ಚಿಮ ಭಾಗಗಳನ್ನು ಭಾರತಕ್ಕೇ ಬಿಟ್ಟುಕೊಟ್ಟು ಚಳಿಗಾಲ ಆರಂಭವಾಗುವ ಮೊದಲೇ ಏಕಪಕ್ಷೀಯವಾಗಿ ಕದನಸ್ತಂಭನ ಘೊಷಿಸಿ ಆತುರಾತುರವಾಗಿ ಹಿಮಾಲಯ ದಾಟಿ ಟಿಬೆಟ್​ಗೆ ಓಡಿಹೋದದ್ದು. (ಇದನ್ನು ‘ಪ್ರಶಾಂತ ಹಿಮಾಲಯದ ಅಶಾಂತ ಗಡಿ‘ ಕೃತಿಯಲ್ಲಿ ವಿವರವಾಗಿ ಬರೆದಿದ್ದೇನೆ.) ಅವರ ಮೊದಲಿನ ರಹಸ್ಯ ಯೋಜನೆಯ ಪ್ರಕಾರ ಒಂದೇ ಸಲ ಪಶ್ಚಿಮದ ಅಕ್ಸಾಯ್ ಚಿನ್, ಮಧ್ಯದ ಚುಂಬಿ ಕಣಿವೆ ಹಾಗೂ ಪೂರ್ವದ ಅರುಣಾಚಲ ಪ್ರದೇಶ ಗಡಿಗಳಲ್ಲಿ ಸೇನಾಶಕ್ತಿ ಜಮಾಯಿಸಿಕೊಂಡು ಭಾರತದ ಮೇಲೆ ಎರಗಿ ಚುಂಬಿ ಕಣಿವೆಯ ಮೂಲಕ ದಕ್ಷಿಣಕ್ಕೆ ಬಂದು, ಪೂರ್ವ ಪಾಕಿಸ್ತಾನದಿಂದ ಗಡಿ ದಾಟಿ ಬಂದ ಪಾಕಿಸ್ತಾನೀ ಸೇನೆಯೊಂದಿಗೆ ಉತ್ತರ ಬಂಗಾಲದ ಕೂಚ್ ಬಿಹಾರ್​ನಲ್ಲಿ ಕೂಡಿಕೊಂಡು ಅಸ್ಸಾಮ್ ಕೋಕ್ರಜಾರ್ ಮೂಲಕ ಪೂರ್ವಕ್ಕೆ ಸಾಗಿ ಇಡೀ ಈಶಾನ್ಯ ರಾಜ್ಯಗಳು ಹಾಗೂ ಭೂತಾನನ್ನು ಆಕ್ರಮಿಸಿಕೊಳ್ಳುವುದಾಗಿತ್ತು. ಈ ಮಾರ್ಗದ ಮೂಲಕ ಸಾಗಿದರೆ ಮಾತ್ರ ವರ್ಷಪೂರ್ತಿ ಅರುಣಾಚಲ ಪ್ರದೇಶವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಚೀನೀ ನಾಯರಿಗೆ ತಿಳಿದಿತ್ತು. ಹಾಗೆ ಆಕ್ರಮಿಸಿಕೊಂಡ ನಂತರ ಭೂತಾನ್, ಅರುಣಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಚೀನಾದ ಒಡೆತನಕ್ಕೆ ಹಾಗೂ ಇನ್ನುಳಿದ ಎಲ್ಲಾ ಪೂರ್ವೇತ್ತರ ರಾಜ್ಯಗಳು ಪೂರ್ವ ಪಾಕಿಸ್ತಾನದ ಭಾಗವಾಗುವ ಹಂಚಿಕೆ ಚೀನೀ ಹಾಗೂ ಪಾಕಿಸ್ತಾನೀ ನಾಯಕರದಾಗಿತ್ತು. ಹಾಗೆ ಮಾಡುವುದರ ಮೂಲಕ 1947ರ ಮುಸ್ಲಿಂ ಲೀಗ್ ಕಣ್ಣುಹಾಕಿದ್ದ ಪ್ರದೇಶಗಳೆಲ್ಲವೂ ಪೂರ್ವ ಪಾಕಿಸ್ತಾನಕ್ಕೆ ದೊರಕಿದಂತಾಗುತ್ತಿತ್ತು. ಚೀನೀಯರ ಬಗ್ಗೇ ಹೇಳುವುದಾದರೆ, ತಾವು ದಕ್ಷಿಣ ಟಿಬೆಟ್ ಎಂದು ಕರೆಯುವ ಅರುಣಾಚಲ ಪ್ರದೇಶದ ಮೇಲೆ ಪೂರ್ಣ ಹಿಡಿತ ಸಾಧಿಸುವುದಲ್ಲದೇ ಪೂರ್ವ ಪಾಕಿಸ್ತಾನದ ಮೂಲಕ ಬಂಗಾಳ ಕೊಲ್ಲಿಗೆ ನೇರ, ನಂಬಿಗಸ್ತ ಹಾಗೂ ನಿರಂತರ ಸಂಪರ್ಕ ಸಾಧಿಸಬಹುದೆಂದೂ ಅವರು ಲೆಕ್ಕಹಾಕಿದ್ದರು. ಅವರ ಯೋಜನೆಯಂತೇ ಇತಿಹಾಸದ ಚಕ್ರ ತಿರುಗಿದ್ದರೆ ಇಡೀ ಪೂರ್ವೇತ್ತರ ರಾಜ್ಯಗಳನ್ನು ಕಳೆದುಕೊಂಡ ಭಾರತ ಪೂರ್ವವಲಯದಲ್ಲಿ ಚೀನಾವನ್ನು ಎದುರಿಸುವ ಸಾಮರ್ಥ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿತ್ತು. ಇದು ಚುಂಬಿ ಕಣಿವೆಯನ್ನು ಚೀನಾ ಉಪಯೋಗಿಸಿಕೊಳ್ಳಹೊರಟಿದ್ದ ಬಗೆ.

ಆದರೆ ತನ್ನೆಲ್ಲಾ ತಯಾರಿ ಪೂರ್ಣಗೊಳ್ಳುವ ಮೊದಲೇ ಭಾರತದೊಡನೆ ಯುದ್ಧಕ್ಕಿಳಿಯುವ ಅನಿವಾರ್ಯತೆಗೆ ಚೀನಾ 1962ರಲ್ಲಿ ಒಳಗಾಯಿತು. ಉನ್ನತ ಕುನ್​ಲುನ್ ಪರ್ವತಗಳು ಟಿಬೆಟನ್ನು ಚೀನಾದಿಂದ ಪ್ರತ್ಯೇಕಿಸುತ್ತಿದ್ದ ಕಾರಣ ಹಾಗೂ ಆ ಪರ್ವತಗಳ ಮೂಲಕ ರಸ್ತೆ ನಿರ್ಮಾಣ ಆ ದಿನಗಳಲ್ಲಿ ಕಷ್ಟಕರವಾಗಿದ್ದರಿಂದಾಗಿ ಪಶ್ಚಿಮ ಟಿಬೆಟ್ ಮೇಲೆ ನಿಯಂತ್ರಣ ಹೊಂದಲು ಚೀನೀಯರಿಗೆ ಸಮತಟ್ಟಾದ ಅಕ್ಸಾಯ್ ಚಿನ್ ಪ್ರಸ್ತಭೂಮಿ ಅತ್ಯಗತ್ಯವಾಗಿತ್ತು. 1959-62ರ ನಡುವೆ ಭಾರತ ಸರ್ಕಾರ ಅನುಸರಿಸಿದ ‘ಮುಂಚೂಣಿ‘ ನೀತಿಯಿಂದಾಗಿ ಭಾರತೀಯ ಸೇನೆ ಅಕ್ಸಾಯ್ ಚಿನ್ ಅನ್ನು ಇಂಚಿಂಚಾಗಿ ಆಕ್ರಮಿಸಿಕೊಂಡು ಚೀನೀಯರು ನಿರ್ವಿುಸಿದ್ದ ರಸ್ತೆಯ ಸನಿಹಕ್ಕೆ ತಲುಪಿದಾಗ ಚೀನೀಯರು ಗತ್ಯಂತರವಿಲ್ಲದೇ ಭಾರತದ ಮೇಲೆ ಯುದ್ಧ ಸಾರಬೇಕಾಯಿತು. ಆಗ ಚೀನಾಗೆ ಮುಖ್ಯವೆನಿಸಿದ್ದು ಅರುಣಾಚಲ ಪ್ರದೇಶಕ್ಕಿಂತಲೂ ಟಿಬೆಟ್ ಜತೆ ಸಂಪರ್ಕ ಕಲ್ಪಿಸಿದ್ದ ಅಕ್ಸಾಯ್ ಚಿನ್. ಹಾಗಾಗಿ ಅವರು ಅಕ್ಸಾಯ್ ಚಿನ್ ಅನ್ನು ಇಡಿಯಾಗಿ ಆಕ್ರಮಿಸಿಕೊಂಡು ತಮ್ಮ ಹಿಡಿತದಲ್ಲಿ ಇಟ್ಟುಕೊಂಡರು, ಅರುಣಾಚಲ ಪ್ರದೇಶವನ್ನು ಭಾರತಕ್ಕೇ ಮರಳಿ ಕೊಟ್ಟು ಓಡಿಹೋದರು. ಅಲ್ಲದೇ, ಪೂರ್ಣ ತಯಾರಿ ಇಲ್ಲದ ಕಾರಣ ಚುಂಬಿ ಕಣಿವೆಯ ಮೂಲಕ ಕೂಚ್ ಬಿಹಾರ್​ನತ್ತ ಮುನ್ನುಗ್ಗುವ ಯೋಜನೆಯನ್ನು ಕೈಬಿಡುವ ಒತ್ತಡಕ್ಕೂ ಒಳಗಾದರು.

ಮತ್ತೆ ಚೀನೀಯರು ಚುಂಬಿ ಕಣಿವೆಯತ್ತ ಗಮನ ಹರಿಸಿದ್ದು 1967ರಲ್ಲಿ. ಆಗ ಅಕ್ಸಾಯ್ ಚಿನ್​ನತ್ತ ಕಣ್ಣೆತ್ತಿ ನೋಡುವ ಸಾಮರ್ಥ್ಯವೂ ಭಾರತಕ್ಕಿರಲಿಲ್ಲ, ಅರುಣಾಚಲ ಪ್ರದೇಶದಲ್ಲೂ ಮೆಕ್​ವುಹೋನ್ ಗಡಿರೇಖೆ ದಾಟಿ ಟಿಬೆಟ್​ನಲ್ಲಿ ಚೀನಿಯರ ಆಡಳಿತಕ್ಕೆ ಸವಾಲೊಡ್ಡುವ ಸ್ಥಿತಿಯಲ್ಲಂತೂ ಭಾರತ ಇರಲೇ ಇಲ್ಲ. ಅಲ್ಲದೇ ಚೀನಾ ಮತ್ತು ಪಾಕಿಸ್ತಾನಗಳ ಜತೆಗಿನ ಯುದ್ಧಗಳಿಂದಾಗಿ ಹಣಕಾಸಿನ ತೀವ್ರ ತೊಂದರೆಗೆ ಸಿಕ್ಕಿದ ಭಾರತ ತನ್ನ ಹೆಮ್ಮೆಯ ಪಂಚವಾರ್ಷಿಕ ಯೋಜನೆಗಳನ್ನು ಮರೆತು ವಾರ್ಷಿಕ ಯೋಜನೆಯನ್ನಷ್ಟೇ ಅನುಸರಿಸುವ ದುಃಸ್ಥಿತಿಗೆ ಒಳಗಾಗಿತ್ತು. ಈ ಕಾರಣಗಳಿಂದಾಗಿ ತನ್ನ ಯೋಜನೆಯ ಅನುಷ್ಠಾನಕ್ಕೆ ಇದೇ ಸರಿಯಾದ ಸಮಯವೆಂದು ಎಣಿಸಿದ ಚೀನಾ 1967ರ ಸೆಪ್ಟೆಂಬರ್ 11ರಂದು ಚುಂಬಿ ಕಣಿವೆಗೆ ಹೊಂದಿಕೊಂಡ ಸಿಕ್ಕಿಂನ ನಾಥು ಲಾ ಗಡಿಯಲ್ಲಿ ಭಾರತದ ಪ್ರತಿಕ್ರಿಯಾ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಯತ್ನ ಮಾಡಿತು. ಆದರೆ, ಪರಿಣಾಮ ಮಾತ್ರ ಸಂಪೂರ್ಣ ಅನಿರೀಕ್ಷಿತವಾಗಿತ್ತು.

ವಾಸ್ತವವಾಗಿ 1962ರ ಯುದ್ಧವನ್ನು ಸೋತದ್ದು ಭಾರತದ ರಾಜಕೀಯ ನಾಯಕತ್ವ, ಭಾರತೀಯ ಸೇನೆಯಲ್ಲ. ತಮ್ಮ ಅರ್ತಾಕ ಚಿಂತನೆ ಹಾಗೂ ಯೋಜನೆಗಳ ಮೂಲಕ ನೆಹರೂ ಸೇನೆಯನ್ನು ಯುದ್ಧಕ್ಕೆ ದೂಡಿದರು. ಚೀನಾದಂತಹ ವೈರಿಯ ವಿರುದ್ಧ ಹೋರಾಡಲು ಅಗತ್ಯವಾದ ಯಾವ ಅನುಕೂಲತೆಗಳನ್ನೂ ಅವರು ಸೇನೆಗೆ ಒದಗಿಸಿಕೊಟ್ಟಿರಲಿಲ್ಲ. ‘ಚೀನೀಯರನ್ನು ಹೊರದಬ್ಬಿ’ ಎಂದು ಆದೇಶಿಸಿ ಮರುಗಳಿಗೆ ಆ ಉತ್ತರಕುಮಾರ ವಿಮಾನ ಹತ್ತಿ ಕೊಲಂಬೋಗೆ ಹೊರಟುಹೋಗಿದ್ದರು. ಅವರ ಹುಚ್ಚಾಟಕ್ಕೆ ಅಂತಿಮವಾಗಿ ಬಲಿಯಾದದ್ದು ನಮ್ಮ ಸೇನೆ. ಆದರೆ ಅವರ ಪುತ್ರಿ ಇಂದಿರಾ ತಂದೆಗಿಂತಲೂ ಸಹಸ್ರಪಟ್ಟು ವಿವೇಕಿಯಾಗಿದ್ದರು. ಚೀನೀ ಸೇನೆ ಪಶ್ಚಿಮದಲ್ಲಿ ಕಾರಾಕೊರಂ ಪರ್ವತಗಳನ್ನು, ಪೂರ್ವದಲ್ಲಿ ಹಿಮಾಲಯ ಪರ್ವತಗಳನ್ನು ದಾಟಿ ಇತ್ತ ಬರಲಾರದು ಎಂದವರು ಅರಿತಿದ್ದರು. ಚೀನೀಯರ ದೂರಗಾಮಿ ಯೋಜನೆಗಳ ಸುಳಿವು ಹಿಡಿದಿದ್ದ ಅವರು ಚುಂಬಿ ಕಣಿವೆಗೆ ಹೊಂದಿಕೊಂಡ ಸಿಕ್ಕಿಂ ಗಡಿಯಲ್ಲಿ ತಂಟೆಯನ್ನು ನಿರೀಕ್ಷಿಸಿದ್ದರು. ಹಾಗಾಗಿಯೇ ಅವರು ಅಲ್ಲಿ ಅಗತ್ಯ ತಯಾರಿಯನ್ನೂ ರಹಸ್ಯವಾಗಿಯೇ ಮಾಡಿದ್ದರು. ಇದೆಲ್ಲದರ ಪರಿಣಾಮವಾಗಿ, ನಾಥು ಲಾ ಗಡಿಯಲ್ಲಿ ಚೀನೀಯರು ಮುಂದೊತ್ತಿ ಬಂದದ್ದೇ ಭಾರತೀಯ ಸೇನೆ ಉಗ್ರವಾಗಿ ಪ್ರತಿಕ್ರಿಯಿಸಿತು. ಮುಂದಿನ ಐದು ದಿನಗಳಲ್ಲಿ ನಡೆದ ಹಣಾಹಣಿಯಲ್ಲಿ ಭಾರತದ 67 ಸೈನಿಕರು ಮಡಿದರೆ ಚೀನೀಯರ ಸಾವಿನ ಸಂಖ್ಯೆ ಮುನ್ನೂರು ದಾಟಿತು. ಅವಾಕ್ಕಾಗಿ ಹಿಮ್ಮೆಟ್ಟಿದ ಚೀನೀಯರು ಮತ್ತೊಮ್ಮೆ ಶಕ್ತಿಗೂಡಿಸಿಕೊಂಡು ಅಕ್ಟೋಬರ್ 1ರಂದು ಹತ್ತಿರದ ಚೊ ಲಾ ಗಡಿಯಲ್ಲಿ ಮತ್ತೊಂದು ದಾಳಿ ಎಸಗಿದರು. ಭಾರತೀಯ ಸೇನೆ ಅಲ್ಲೂ ಚೀನೀಯರ ಸೊಕ್ಕಡಗಿಸಿತು. ನಮ್ಮ ಕಡೆಯ ಸಾವಿನ ಸಂಖ್ಯೆ 21. ಚೀನೀಯರು ಕಳೆದುಕೊಂಡ ಸೈನಿಕರ ಸಂಖ್ಯೆ ತಿಳಿದುಬಂದಿಲ್ಲ. ಆದರೆ ಅವರು ಹಿಮ್ಮೆಟ್ಟಿದ ಪರಿಯೇ ಅವರಿಗಾದ ಹಾನಿಯ ಮಟ್ಟದ ಸೂಚನೆ ಕೊಡುತ್ತದೆ. ‘1962ರ ಯುದ್ಧದ ಸೋಲನ್ನು ನೆನಪಿಸಿಕೊಳ್ಳಿ’ ಎಂದು ಈಗ ನಮಗೆ ಹೇಳುತ್ತಿರುವ ಚೀನೀಯರು 1967ರಲ್ಲಿ ತಮಗೆ ಬಿದ್ದ ಹೊಡೆತವನ್ನು ಮರೆತುಬಿಟ್ಟಿದ್ದಾರೆ. ಜಾಣಮರೆವು ಅದು.

ಜಾಣೆ ಇಂದಿರಾ ಇಷ್ಟಕ್ಕೇ ನಿಲ್ಲಲಿಲ್ಲ. ಮುಂದೊಂದು ದಿನ ಚುಂಬಿ ಕಣಿವೆಯ ಮೂಲಕ ಚೀನಿಯರು ಕೂಚ್​ಬಿಹಾರ್ ಪ್ರದೇಶಕ್ಕೆ ನುಗ್ಗಿಬಂದರೂ ಅವರಿಗೆ ಪಾಕಿಸ್ತಾನದ ಸಹಕಾರ ಸಿಗಕೂಡದೆಂದು ಹಂಚಿಕೆ ಹೂಡಿದರು. ಅದಕ್ಕಾಗಿಯೇ ಅವರು 1971ರ ಪಾಕಿಸ್ತಾನದ ಅಂತರ್ಯುದ್ಧದಲ್ಲಿ ಕೈತೂರಿಸಿದ್ದು. ಹಿಂದೂ-ದ್ವೇಷ ಹಾಗೂ ಪಾಕಿಸ್ತಾನದ ನಿರ್ವಣದ ಬೇಡಿಕೆ ಪಶ್ಚಿಮ ಪಾಕಿಸ್ತಾನಕ್ಕಿಂತಲೂ ಪೂರ್ವ ಪಾಕಿಸ್ತಾನದಲ್ಲಿ ಅಧಿಕವಾಗಿತ್ತು ಎಂಬ ಇತಿಹಾಸಜ್ಞಾನ ಅವರಿಸಿತ್ತು. ಆ ಕಾರಣದಿಂದಾಗಿಯೇ ಪೂರ್ವ ಪಾಕಿಸ್ತಾನ ಸ್ವತಂತ್ರವಾದರೂ ಭಾರತಕ್ಕೆ ನಿಜವಾದ ಮಿತ್ರನಾಗಲಾರದು ಎಂದೂ ಅವರಿಗೆ ಗೊತ್ತಿತ್ತು. ಆದರೆ, ಸ್ವತಂತ್ರ ಪೂರ್ವ ಪಾಕಿಸ್ತಾನ ಭಾರತದ ವಿರುದ್ಧ ಚೀನಾ ಜತೆ ಕೈ ಜೋಡಿಸುವಷ್ಟು ಎಂದೂ ಸಮರ್ಥವಾಗಲಾರದು, ಅಷ್ಟರಮಟ್ಟಿಗೆ ನಮ್ಮ ಪೂರ್ವೇತ್ತರ ರಾಜ್ಯಗಳನ್ನು ನಾವು ರಕ್ಷಿಸಿಕೊಳ್ಳಬಹುದು ಎಂದೂ ಇಂದಿರಾ ಅರಿತಿದ್ದರು. ಹೀಗಾಗಿಯೇ ಚೀನಾ, ಅಮೆರಿಕಾ, ಪಶ್ಚಿಮ ಯೂರೋಪ್ ಹಾಗೂ ಇಡೀ ಮುಸ್ಲಿಂ ಜಗತ್ತಿನ ವಿರೋಧವನ್ನು ಎದುರಿಸಿ ನಿಂತು ಪೂರ್ವ ಪಾಕಿಸ್ತಾನವನ್ನು ಸ್ವತಂತ್ರಗೊಳಿಸಿಬಿಟ್ಟರು. ಪಾಕಿಸ್ತಾನದ ಪರ ಯುದ್ಧಕ್ಕಿಳಿಯದಂತೆ ಇಂದಿರಾ ಚೀನಾದ ಕೈಗಳನ್ನು ಕಟ್ಟಿಹಾಕಿದ ಪರಿ ಜಗತ್ತನ್ನೇ ಬೆರಗುಗೊಳಿಸಿತು.

ಅಂದು ಚುಂಬಿ ಕಣಿವೆಯ ದಾರಿಯಿಂದ ದೂರ ಸರಿದ ಚೀನಾ ಈಗ ಮತ್ತೆ ಅಲ್ಲಿ ತಂಟೆ ತೆಗೆದಿದೆ. ಅದರ ಈಗಿನ ಹುನ್ನಾರ ಮತ್ತು ಅದರಿಂದಾಗಬಹುದಾದ ಪರಿಣಾಮದ ವಿಶ್ಲೇಷಣೆ ಮುಂದಿನ ವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top