Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ತನಿಖಾ ವರದಿ ಸಲ್ಲಿಸುವ ಮುನ್ನ ಸೂಕ್ತ ಪರೀಕ್ಷೆ

Friday, 03.08.2018, 3:04 AM       No Comments

ಬೆಳಗಾವಿ: ಮಾನವ ಹಕ್ಕು ಆಯೋಗಕ್ಕೆ ತನಿಖಾ ವರದಿ ಸಲ್ಲಿಸುವ ಮುನ್ನ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದು ಸೂಕ್ತ. ಅಧೀನ ಅಧಿಕಾರಿ ಉತ್ತರವನ್ನೇ ಮೇಲಧಿಕಾರಿಗಳು ಆಯೋಗಕ್ಕೆ ಸಲ್ಲಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಮಾನವ ಹಕ್ಕು ಆಯೋಗದ ಸದಸ್ಯ ರೂಪಕುಮಾರ ದತ್ತಾ ಎಚ್ಚರಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಯಾ ಇಲಾಖೆಯಲ್ಲಿ ಅಧೀನ ಅಧಿಕಾರಿಗಳು ಇಲ್ಲವೆ ಬೇರೆಯವರು ತನಿಖೆ ನಡೆಸಿ ವರದಿ ಸಲ್ಲಿಸಿರುವುದನ್ನು ಮೇಲಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಆಯೋಗಕ್ಕೆ ಕಳುಹಿಸಬೇಕು ಎಂದರು.

ದೂರುಗಳು ಬಂದಾಗ ಅಧಿಕಾರಿ ಹೇಳಿದ್ದ ಉತ್ತರವನ್ನೇ ಡಿಸಿ, ಎಸ್ಪಿಗಳು ಯಥಾವತ್ ಆಯೋಗಕ್ಕೆ ಕಳಿಸುತ್ತಾರೆ. ಇದರಿಂದ ದೂರುದಾರನಿಗೆ ನ್ಯಾಯ ಸಿಗುವುದಿಲ್ಲ. ಆಯೋಗಕ್ಕೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಅಧಿಕಾರಿಯ ಉತ್ತರಕ್ಕೆ ಪಿರ್ಯಾದಿಯಿಂದ ಪ್ರತಿಕ್ರಿಯೆ ಪಡೆದು ಕಳುಹಿಸಬೇಕು. ಹಿರಿಯ ಅಧಿಕಾರಿಗಳು ಕನಿಷ್ಠ ತನಿಖೆ ನಡೆಸಬೇಕು ಎಂದು ಸೂಚಿಸಿದರು.

2016ರಲ್ಲಿ ಚಿಕ್ಕೋಡಿ ಸಬ್‌ಇನ್ಸ್‌ಪೆಕ್ಟರ್ ಮೇಲೆ ದೂರು ಇತ್ತು. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೇವಲ ಸಬ್‌ಇನ್ಸ್‌ಪೆಕ್ಟರ್ ಉತ್ತರವನ್ನೇ ಆಯೋಗಕ್ಕೆ ಕಳುಹಿಸಿದ್ದರು. ವಿಚಾರಣೆ ನಡೆಸಿದಾಗ ಯಾವುದೇ ಸಾಕ್ಷಿದಾರರ ಹೇಳಿಕೆ ಇರಲಿಲ್ಲ. ದೂರು ಕೊಟ್ಟಿದ್ದು ಚಂದ್ರಪ್ಪ ಪೂಜಾರಿ. ಆದರೆ, ಪೊಲೀಸರು ವಿಚಾರಣೆ ಮಾಡಿದ್ದು ಸಿದ್ದಪ್ಪ ಎನ್ನುವವರನ್ನು. ಹಾಗಾಗಿ ಕೆಳ ಅಧಿಕಾರಿಗಳು ಕೊಟ್ಟ ಉತ್ತರವನ್ನು ಹಿರಿಯ ಅಧಿಕಾರಿಗಳು ಒಮ್ಮೆ ಪರಿಶೀಲಿಸಬೇಕು. ಇನ್ಮೇಲೆ ಇಂಥ ಉತ್ತರ ಕೊಟ್ಟರೆ ಆಯೋಗ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ಆಯೋಗದಲ್ಲಿ ಮೂರು ಪೀಠ ಇವೆ. ನನ್ನ ಪೀಠದಲ್ಲಿ 4000 ಕ್ಕಿಂತ ಜಾಸ್ತಿ ಕೇಸ್‌ಗಳು ಇವೆ. ಬೇರೆ ಪೀಠದಲ್ಲಿಯೂ ಬಹಳ ಇವೆ. ಇಷ್ಟೊಂದು ಕೇಸ್ ಇರುವುದು ಜನರಿಗೆ ಒಳ್ಳೆಯದಲ್ಲ. ಹೀಗಾದರೆ ಜನರು ಆಯೋಗದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಕೇಸ್ ಬಂದ ಮೇಲೆ ಮೂರು ತಿಂಗಳೊಳಗೆ ಇತ್ಯರ್ಥ ಆಗಬೇಕು. ಈಗ ಬರುವ ಕೇಸ್‌ಗಳನ್ನು ಮೂರು ತಿಂಗಳಲ್ಲೇ ಬಗೆಹರಿಸುತ್ತೇವೆ ಎಂದು ನಿರ್ಧರಿಸಿ. ಮೊದಲ ನೋಟಿಸ್‌ಗೆ ಆರು ವಾರ ಸಮಯಾವಕಾಶ ಕೊಡಲು ನಿರ್ಧರಿಸಿ. ಆದರೆ, ಒಂದು ತಿಂಗಳೊಳಗೆ ಉತ್ತರ ಬಾರದಿದ್ದರೆ, ಸಮನ್ಸ್ ಕೊಡಲು ಆಯೋಗದ ಅಧ್ಯಕ್ಷರು ಹೇಳಿದ್ದಾರೆ. ಪ್ರತಿ ಇಲಾಖೆಗೆ ಅಧೀನ ಕಾರ್ಯದರ್ಶಿ ನೋಡಲ್ ಅಧಿಕಾರಿ ಮಾಡಲಾಗಿದೆ. ಅಧಿಕಾರಿಯ ಉತ್ತರ ಕೊಡಿಸುವುದು ಅಧೀನ ಕಾರ್ಯದರ್ಶಿ ಜವಾಬ್ದಾರಿ. ಉತ್ತರ ಕೊಡಲು ಕೊನೆಯ ಸಮಯದ ವರೆಗೆ ಕಾಯುತ್ತಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಬೂದೆಪ್ಪ, ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತನಿಖೆ ವಿಳಂಬ ಸರಿಯಲ್ಲ

2016ರಲ್ಲಿ ಜೈಲು ಸೂಪರಿಂಟೆಂಡೆಂಟ್ ವಿರುದ್ಧ ದೂರು ಇತ್ತು. ಕೈದಿಗಳು ಮೃತರಾದ ಸಂಬಂಧ ನ್ಯಾಯಾಂಗ ತನಿಖೆ ವರದಿ ಕಳುಹಿಸಲು ತುಂಬಾ ವಿಳಂಬ ಆಗಿದೆ. 2016ರಲ್ಲಿಯೇ ತನಿಖೆ ಆಗಿದೆ. ಮೊನ್ನೆ ವರದಿ ಬಂದಿದೆ. ನ್ಯಾಯಾಂಗ ತನಿಖೆಗಳು ವಿಳಂಬವಾಗುವುದು ಸರಿಯಲ್ಲ. ಸಮನ್ವಯ ಕೊರತೆಯಿಂದ ಸಮಸ್ಯೆ ಉಂಟಾಗುತ್ತವೆ ಎಂದು ಆಯೋಗದ ಸದಸ್ಯ ರೂಪಕುಮಾರ ದತ್ತಾ ಹೇಳಿದರು.
…………………….

2ಮಂಜು8- ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾನವ ಹಕ್ಕು ಆಯೋಗದ ಸದಸ್ಯ ರೂಪಕುಮಾರ ದತ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *

Back To Top