ಜೈಪುರ: ನನ್ನ ಹೆತ್ತವರೇ ನನ್ನ ಗಂಡನನ್ನು ಕೊಲೆ ಮಾಡಿಸಿರುವುದು. ಅದನ್ನು ನಾನೇ ಕಣ್ಣಾರೆ ಕಂಡಿದ್ದೇನೆ ಎಂದು ಗರ್ಭಿಣಿಯೊಬ್ಬಳು ಆರೋಪಿಸಿದ್ದಾಳೆ.
ಜೈಪುರ ಮೂಲದ ಮಮತಾ ಚೌಧರಿ (30) ಈ ಆರೋಪ ಮಾಡಿದ್ದು, ಪ್ರೇಮ ಮತ್ತು ಜಾತಿ ವಿಷಯಕ್ಕೆ ಸಂಬಂಧಿಸಿದಂತೆ ಪೋಷಕರು ಈ ಕುಕೃತ್ಯ ಎಸಗಿದ್ದಾರೆ ಎಂದು ಹೇಳಿದ್ದಾಳೆ.
ಕೇರಳದ ಎಂಜಿನಿಯರ್ ಅಮಿತ್ ನಯ್ಯರ್ ಹಾಗೂ ನಾವು ಅಕ್ಕ-ಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದೆವು. ಇಬ್ಬರಲ್ಲಿ ಪ್ರೇಮಾಂಕುರವಾಯಿತು. ನಂತರ ನಾವಿಬ್ಬರು ಮದುವೆಯಾದೆವು. ಇದನ್ನು ನನ್ನ ಪೋಷಕರು ವಿರೋಧಿಸಿದ್ದರು. ಅವರ ವಿರೋಧದ ನಡುವೆಯೇ ನಾವು ಮದುವೆಯಾಗಿ, ಒಂದು ವರ್ಷದಿಂದ ಸಂಸಾರ ಮಾಡುತ್ತಿದ್ದೆವು.
ಎಲ್ಲಾ ಸರಿ ಹೋಗಿದೆ ಎಂದುಕೊಳ್ಳುತ್ತಿದ್ದಂತೆ ಒಂದು ದಿನ ನಮ್ಮ ಪೋಷಕರು ಮನೆಗೆ ಬಂದು ನಮ್ಮ ಜೊತೆ ನಯವಾಗಿ ಮಾತನಾಡಿದರು. ಆದರೆ, ಅವರ ಹಿಂದೆಯೇ ಬಂದ ಇನ್ನಿಬ್ಬರು ಅಗುಂತಕರು ನನ್ನ ಗಂಡನ ಎದೆಗೆ ನಾಲ್ಕು ಸುತ್ತು ಗುಂಡು ಹಾರಿಸಿದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು’ ಎಂದು ಮಮತಾ ಚೌಧರಿ ತಿಳಿಸಿದ್ದಾಳೆ.
ನನ್ನ ಪತಿಯನ್ನು ಕೊಲೆ ಮಾಡಿರುವ ಪೋಷಕರು ನಮಗೆ ವಂಚನೆ ಮಾಡಿದ್ದಾರೆ. ನಾನು ಈಗ 6 ತಿಂಗಳ ಗರ್ಭಿಣಿಯಾಗಿದ್ದು, ನನಗೆ ದಿಕ್ಕುದೋಚದಂತಾಗಿದೆ ಎಂದು ಮಮತಾ ಅಲವತ್ತುಕೊಂಡಿದ್ದಾಳೆ.
‘ಮಮತಾ ಚೌಧರಿ ಹಾಗೂ ನಯ್ಯರ್ ಅವರ ವಿವಾಹಕ್ಕೆ ಪೋಷಕರಿಂದ ವಿರೋಧವಿತ್ತು ಎನ್ನಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಗುಪ್ತಾ ತಿಳಿಸಿದ್ದಾರೆ.