Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ವಿಕಲಾಂಗ ವೀರ ಚಾರುಚಂದ್ರ ಬಸು

Thursday, 10.08.2017, 3:03 AM       No Comments

ಚಿಕ್ಕಂದಿನಲ್ಲಿ ಪಾರ್ಶ್ವವಾಯು ಬಡಿದು ಆತನ ದೇಹದ ಬಲಭಾಗ ಸ್ವಾಧೀನದಲ್ಲಿರಲಿಲ್ಲ. ಬಲಗಾಲನ್ನು ಎಳೆಯುತ್ತಾ ನಡೆಯಬೇಕಿತ್ತು. ಬಲಗೈಯ ಹಸ್ತದ ಭಾಗವೇ ಇರಲಿಲ್ಲ. ದೇಹ ದುರ್ಬಲವಾಗಿದ್ದರೂ ಮನೋಬಲ ಬಲು ಗಟ್ಟಿ. ಇಂಥ ಯುವಕ್ರಾಂತಿವೀರ ತಾಯ್ನಾಡಿನ ಋಣ ತೀರಿಸಿದ ಬಗೆ ಅನನ್ಯ.

 **

1909ನೇ ಇಸವಿ. ಆಗ ಯುಗಾಂತರ ಕ್ರಾಂತಿ ಸಂಸ್ಥೆಯ ಎಲ್ಲ ಪ್ರಮುಖ ನಾಯಕರೂ ಆಲಿಪುರ ಬಾಂಬ್ ಮೊಕದ್ದಮೆಯಲ್ಲಿ ಬಂಧಿತರಾಗಿ ಸೆರೆಮನೆಯಲ್ಲಿದ್ದರು. ಮೊಕದ್ದಮೆ ಸಾಗಿತ್ತು. ಆವರೆಗೆ ಮಾರ್ಗದರ್ಶಕರಾಗಿದ್ದ ಅರವಿಂದ ಘೊಷ್ ಮತ್ತು ಸಂಸ್ಥೆಯ ಸೂತ್ರಗಳನ್ನು ಹಿಡಿದಿದ್ದ ಬಾರೀಂದ್ರ ಘೊಷ್ ಮೊಕದ್ದಮೆ ಎದುರಿಸುತ್ತಿದ್ದರು. ಯುಗಾಂತರದ ಜವಾಬ್ದಾರಿ ಬಾಘಾ ಜತೀನ್ ಉರುಫ್ ಜತೀಂದ್ರನಾಥ ಮುಖರ್ಜಿಯ ಹೆಗಲೇರಿತ್ತು.

ಜತೀನ್ ಭಗವದ್ಗೀತೆ ತರಗತಿಗಳು ಹಾಗೂ ಯೋಗ ಮುಂತಾದ ದೈನಂದಿನ ಚಟುವಟಿಕೆಗಳ ಮೂಲಕ ಯುವಕರ ಸಂಘಟನೆಯ ಕೆಲಸವನ್ನು ಮುಂದುವರಿಸಿದ್ದ. ಕೊಲ್ಕತಾದ ಹ್ಯಾರಿಸನ್ ರಸ್ತೆಯ ಛಾತ್ರ ಭಂಡಾರ್ ಒಂದು ವ್ಯಾಪಾರಿ ಕೇಂದ್ರ. ಹೊರನೋಟಕ್ಕೆ ಅದೊಂದು ಅಂಗಡಿ. ಆದರೆ ನಿಜ ಅರ್ಥದಲ್ಲಿ ಕ್ರಾಂತಿಕಾರಿ ಯುವಕರು ಸೇರುತ್ತಿದ್ದ ಕ್ರಾಂತಿ ಕೇಂದ್ರ. ಅಲ್ಲಿ ಕ್ರಾಂತಿಕಾರಿಗಳ ತರಬೇತಿಯ ಕೆಲಸ ನಡೆಯುತ್ತಿತ್ತು. ಅಲ್ಲಿ ಜತೀನನೇ ಗುರು.

ಭಾರತದ ಬಿಡುಗಡೆ ನಮ್ಮ ಮೊದಲ ಕರ್ಮ: 1909ರ ಫೆಬ್ರವರಿಯ ಆರಂಭದ ದಿನಗಳು. ಛಾತ್ರ ಭಂಡಾರದಲ್ಲಿ ಗೀತೆಯಲ್ಲಿನ ಕರ್ಮಯೋಗ ಕುರಿತು ಜತೀನನ ತರಗತಿ ನಡೆದಿತ್ತು. ಸುಮಾರು 20-25 ಯುವಕರು ಅಲ್ಲಿ ನೆರೆದಿದ್ದರು. ಜತೀನ್ ಒಂದು ಪ್ರಶ್ನೆ ಹಾಕಿದ; ‘ಗೀತೆಯಲ್ಲಿ ಶ್ರೀಕೃಷ್ಣನು ಪ್ರತಿಯೊಬ್ಬ ಜೀವಿಯೂ ತನ್ನ ಕರ್ಮವನ್ನು ಮಾಡಬೇಕೆಂದು ತಿಳಿಸಿದ್ದಾನೆ. ಹಾಗಾದರೆ ಪ್ರಸ್ತುತ ಸಂದರ್ಭದಲ್ಲಿ ಯುವಕರಾದ ನಮ್ಮ ಆದ್ಯ ಕರ್ಮವೇನು?’

ತರಗತಿಯಲ್ಲಿ ಕುಳಿತು ಏಕಾಗ್ರಚಿತ್ತದಿಂದ ಆಲಿಸುತ್ತಿದ್ದ ಒಬ್ಬ ಕಿಶೋರ ಎಂದು ನಿಂತು, ‘ಪರಕೀಯ ಪ್ರಭುಗಳಿಂದ ನಮ್ಮ ದೇಶವನ್ನು ಬಿಡುಗಡೆ ಮಾಡುವುದು’ ಎಂದು ಥಟ್ಟನೆ ಉತ್ತರಿಸಿದ.

‘ಸರಿಯಾಗಿ ಹೇಳಿದೆ. ಆದರೆ ಬ್ರಿಟಿಷರೇ ನಮ್ಮನ್ನು ಆಳುತ್ತಿದ್ದರೆ ತಪ್ಪೇನು? ಕೆಲವರು ಮಂದಗಾಮಿ ರಾಷ್ಟ್ರ ನಾಯಕರು ಹೇಳುವಂತೆ ಬ್ರಿಟಿಷ್ ಸರ್ಕಾರದಿಂದ ಕೆಲವು ಸವಲತ್ತುಗಳನ್ನು ಬೇಡಿ ಪಡೆದು ನಮ್ಮ ಜೀವನಗಳನ್ನು ಸುಧಾರಿಸಿಕೊಂಡು ಸುಖಮಯ ಜೀವನವನ್ನು ನಡೆಸಬಹುದಲ್ಲ?’

‘ಅದು ಆಲಸಿಗಳ, ನಿರ್ವೀರ್ಯರ ಮಾತು. ಪೌರುಷವಂತರ ಮಾತಲ್ಲ. ಭಾರತ ನಮ್ಮ ಮಾತೃಭೂಮಿ. ಅದು ಪರಕೀಯರ ಕಪಿಮುಷ್ಟಿಯಲ್ಲಿರುವುದನ್ನು ನೋಡಿಯೂ ಸುಮ್ಮನಿರುವವರು ಷಂಡರು. ನಾವು ಈ ಮಣ್ಣಿನ ಮಕ್ಕಳಾಗಿದ್ದರೆ ಭಾರತದ ಬಿಡುಗಡೆ ನಮ್ಮ ಈಗಿನ ಮೊದಲ ಕರ್ಮ!’

ಈ ಉತ್ತರದಿಂದ ಆನಂದಗೊಂಡ ಜತೀನ್, ‘ಶಬ್ಭಾಸ್ ಚಾರು! ನೀನು ಹೇಳಿದ್ದು ಅತ್ಯಂತ ಸರಿಯಾಗಿದೆ’ ಎಂದು ಪ್ರಶಂಸೆಯ ಮಾತುಗಳನ್ನಾಡಿದ.

ಆ ಹುಡುಗನ ಹೆಸರು ಚಾರುಚಂದ್ರ ಬಸು. 1890ರ ಫೆಬ್ರವರಿಯಲ್ಲಿ ಅಂದಿನ ಪೂರ್ವ ಬಂಗಾಳದ (ಈಗಿನ ಬಾಂಗ್ಲಾದೇಶ) ಖುಲ್ನಾ ಜಿಲ್ಲೆಯ ಶೋಭನಾ ಎಂಬ ಹಳ್ಳಿಯಲ್ಲಿ ಕೇಶಬ್​ಚಂದ್ರ ಬಸು ಎಂಬಾತನ ಮಗನಾಗಿ ಹುಟ್ಟಿದ. ಚಿಕ್ಕಂದಿನಲ್ಲಿಯೇ ತಂದೆ ಮಗನ ನಡುವೆ ವಿರಸ ಉಂಟಾಯಿತು. ತಂದೆಗೆ ಧನವ್ಯಾಮೋಹ ಹೆಚ್ಚು. ಮಗನಿಗೆ ಜ್ಞಾನಾರ್ಜನೆಯಲ್ಲಿ ಹೆಚ್ಚಿನ ಆಸಕ್ತಿ. ವಿರಸ ವಿಕೋಪಕ್ಕೆ ಹೋಗಿ ಚಾರುಚಂದ್ರ ಮನೆ ತೊರೆದು ಕಲ್ಕತ್ತೆಗೆ ಬಂದು ಅಲ್ಲಿ ಹಿತೈಷಿ ಎಂಬ ಪ್ರೆಸ್​ನಲ್ಲಿ ಕಂಪೋಸಿಟರ್ ಆಗಿ ಕೆಲಸಕ್ಕೆ ಸೇರಿದ. ರುಸಾ ರಸ್ತೆಯಲ್ಲಿ ಒಂದು ಚಿಕ್ಕ ಕೋಣೆಯಲ್ಲಿ ವಾಸ. ಅವನು ಊಟಕ್ಕೆ ಹೋಗುತ್ತಿದ್ದುದು ಬಾಘಾ ಜತೀನ್ ನಿರ್ವಹಿಸುತ್ತಿದ್ದ ಈಡನ್ ಹೊಟೇಲ್ ಎಂಬ ಮೆಸ್. ಅಲ್ಲಿ ಬಾಘಾ ಜತೀನನ ಸಂಪರ್ಕಕ್ಕೆ ಬಂದು ಜ್ಞಾನ ಸಂಪಾದನೆಗಾಗಿ ಜತೀನನ ಭಗವದ್ಗೀತೆ ತರಗತಿಗಳಿಗೆ ಹೋಗಲಾರಂಭಿಸಿದ.

ದಧೀಚಿ ಮಹರ್ಷಿ ಆದರ್ಶ: ಹತ್ತೊಂಬತ್ತು ವರ್ಷದ ಚಾರುಚಂದ್ರ ಶೈಶವದಿಂದಲೇ ಅಂಗವಿಕಲನಾಗಿದ್ದ. ಶೈಶವದಲ್ಲಿ ಪಾರ್ಶ್ವವಾಯು ಬಡಿದು ದೇಹದ ಬಲಭಾಗ ಸ್ವಾಧೀನದಲ್ಲಿರಲಿಲ್ಲ. ಬಲಗಾಲನ್ನು ಎಳೆಯುತ್ತಾ ನಡೆಯುತ್ತಿದ್ದ ಅವನ ಬಲಗೈ ನಿರುಪಯೋಗಿಯಾಗಿತ್ತು. ಅದರ ಹಸ್ತದ ಭಾಗವೇ ಇರಲಿಲ್ಲ. ಸಣಕಲು ಮನುಷ್ಯ. ದೇಹ ದುರ್ಬಲವಾಗಿದ್ದರೂ ಮನೋಬಲ ಗಟ್ಟಿಯಾಗಿತ್ತು.

ಚಾರುಚಂದ್ರ ಆ ದಿನಗಳಲ್ಲೇ ಒಂದು ಸಲ, ‘ದಾದಾ, ನಮ್ಮ ಕ್ರಾಂತಿಮಾರ್ಗದ ಸಣ್ಣ ಸಣ್ಣ ಪ್ರಯತ್ನಗಳಿಂದ ಬೃಹತ್ತಾದ ಬ್ರಿಟಿಷ್ ಸಾಮ್ರಾಜ್ಯವನ್ನು ಸೋಲಿಸುವುದು ಸಾಧ್ಯವೇ? ಸ್ವರಾಜ್ಯ ಪಡೆಯಲು ಶಕ್ಯವೇ? ನಾವು ಭಾರತ ಬಿಡುಗಡೆ ಹೊಂದುವುದನ್ನು ಕಣ್ಣಾರೆ ಕಾಣಬಲ್ಲವೇ?’ ಎಂದು ಪ್ರಶ್ನಿಸಿದ್ದ. ‘ಇಲ್ಲ. ನಾವು ಸ್ವಾತಂತ್ರ್ಯವನ್ನು ಕಾಣಲಾರೆವು. ನಾವೆಲ್ಲರೂ ಯಜ್ಞದ ಸಮಿತ್ತುಗಳಿದ್ದಂತೆ. ಅದೆಷ್ಟೋ ಸಮಿತ್ತುಗಳ ಸಮರ್ಪಣೆಯ ಅನಂತರ ಯಜ್ಞಫಲ ದೊರೆಯುವುದು. ಕೃಷ್ಣ ಹೇಳಿಲ್ಲವೆ-ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಶು ಕದಾಚನ. ನಾವು ನಮ್ಮ ಪಾಲಿಗೆ ಬಂದ ಕರ್ಮವನ್ನು ಮಾಡಬೇಕು. ದಧೀಚಿ ಮಹರ್ಷಿಗಳು ತಮ್ಮ ಬೆನ್ನುಮೂಳೆಯನ್ನೇ ವಜ್ರಾಯುಧ ಮಾಡಲು ದೇವತೆಗಳಿಗೆ ನೀಡಿ ಆ ಮೂಲಕ ಬಲಿದಾನ ಮಾಡಿ ರಾಕ್ಷಸ ಸಂಹಾರಕ್ಕೆ ಅನುವು ಮಾಡಿಕೊಡಲಿಲ್ಲವೇ. ಅವರಂತೆ ದೇಶ ಬಿಡುಗಡೆಗೆ ನಮ್ಮ ಪ್ರಾಣಗಳನ್ನು ಅರ್ಪಿಸಬೇಕು. ದೇಶ ಜಾಗೃತಗೊಳ್ಳಲೆಂದು ನಾವು ಬುದ್ಧಿ ಪುರಸ್ಸರವಾಗಿ ಮರಣವಪ್ಪಬೇಕು…. ಆಮ್ರೊ ಮಾರ್ಖೊ ಜಾತ್ ಜಾಗ್ಖೆ!’

ಅದೇ ವೇಳೆ ಕ್ರಾಂತಿಕಾರಿಗಳ ಮಧ್ಯೆ ಒಂದು ಚರ್ಚೆ ನಡೆದಿತ್ತು. ಆಲಿಪುರ ಮೊಕದ್ದಮೆಯ ಸಂಬಂಧ ಸರ್ಕಾರಕ್ಕೆ ಬೇಕಾದ ಸಾಕ್ಷ್ಯ ಪುರಾವೆಗಳನ್ನು ಒದಗಿಸುವುದರಲ್ಲಿ ವಿಶೇಷ ಆಸ್ಥೆ ವಹಿಸಿದ ಅಶುತೋಷ್ ಬಿಶ್ವಾಸ್ ಎಂಬ ಪಬ್ಲಿಕ್ ಪ್ರಾಸಿಕ್ಯೂಟರ್ ಬಂಗಾಳ ವಿಭಜನೆಯ ದಿನಗಳಿಂದಲೂ ಕ್ರಾಂತಿಕಾರಿಗಳ ಬೆನ್ನತ್ತಿ ಅವರಿಗೆ ಶಿಕ್ಷೆಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದ್ದ ಮಹಾ ಧೂರ್ತ. ಅರವಿಂದ ಘೊಷ್, ಬಾರೀಂದ್ರ ಘೊಷರಾದಿಯಾಗಿ ಎಲ್ಲ ಆಲಿಪುರ ಮೊಕದ್ದಮೆ ಆಪಾದಿತರ ವಿರುದ್ಧವೂ ಸಾಕ್ಷ್ಯ ಪುರಾವೆ ಒದಗಿಸುತ್ತಿದ್ದವನು ಅವನೇ. ಸತ್ಯೇನ್, ಕನ್ಹಾಯಿಲಾಲರಿಗೆ ಗಲ್ಲುಶಿಕ್ಷೆಯಾಗಲು ಅವನೇ ಕಾರಣ. ಹೀಗಾಗಿ ಅವನು ಹಾಗೆಯೇ ಮುಂದುವರಿಯಲು ಬಿಡಬಾರದೆಂಬುದು ಎಲ್ಲ ಯುಗಾಂತರ ಕ್ರಾಂತಿಕಾರಿಗಳ ಖಚಿತ ಅಭಿಪ್ರಾಯವಾಗಿತ್ತು.

ಒಮ್ಮೆ ಚಾರುಚಂದ್ರ ಜತೀನನೆದುರು ಹೇಳಿದ; ‘ದಾದಾ, ಅಶುತೋಷ್ ಬಿಶ್ವಾಸನ ಕಾರ್ಯಾಚರಣೆಯ ಹೊಣೆಯನ್ನು ನೀವು ನನಗೆ ಒಪ್ಪಿಸಬೇಕು.‘ಆಶ್ಚರ್ಯಚಕಿತನಾದ ಜತೀನ್, ‘ನಿನ್ನ ಕೈಯಲ್ಲಿ ಈ ಕೆಲಸ ಸಾಧ್ಯವೇ ಚಾರು?’ ಎಂದು ಮರು ಪ್ರಶ್ನೆ ಹಾಕಿದ.

‘ಏಕೆ ಅನುಮಾನ ದಾದಾ? ನಾನು ವಿಕಲಾಂಗನೆಂದೇ? ನಿಜ. ನನ್ನ ಶರೀರ ನಿಮ್ಮೆಲ್ಲರ ಶರೀರದಂತಿಲ್ಲ. ನಾನು ದುರ್ಬಲ. ಆದರೆ ಮನಸ್ಸು ಗಟ್ಟಿ ಇದೆ. ಉಕ್ಕಿನ ಸಂಕಲ್ಪ ಶಕ್ತಿ ನನಗಿದೆ.’ ‘ನಿನ್ನಲ್ಲಿ ನನಗೆ ವಿಶ್ವಾಸವಿದೆ. ಆದರೆ ಕೆಲಸ ಕಠಿಣತಮವಾದುದು’. ‘ಅನುಮಾನ ಬೇಡ ದಾದಾ. ನನಗೆ ಕೆಲಸ ಒಪ್ಪಿಸಿ. ನೀವೇ ನೋಡುತ್ತೀರಿ. ನಿಮ್ಮ ಚಾರು ಅದನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸುತ್ತಾನೆಂದು. ‘ಚಾರುಚಂದ್ರನ ದೃಢ ನಿರ್ಧಾರದ ಎದುರು ಸೋತಿದ್ದು ಜತೀನನೇ. ಒಪ್ಪಿಗೆ ನೀಡದೆ ಬೇರೆ ದಾರಿಯೇ ಅವನಿಗೆ ಕಾಣಲಿಲ್ಲ.

ಮೊಂಡು ಕೈಯಿಂದ ಹಾರಿದ ಗುಂಡುಗಳು: 1909ರ ಫೆಬ್ರವರಿ 10. ಬೆಳಗ್ಗೆಯೇ ಜತೀನನ ಬಳಿಗೆ ಬಂದ ಚಾರುಚಂದ್ರ ತಾನು ಸಿದ್ಧನಾಗಿರುವುದಾಗಿ ಹೇಳಿದ.

ಜತೀನ್ ಒಂದು ಪೆಟ್ಟಿಗೆಯಿಂದ ಆರು ಗುಂಡುಗಳು ತುಂಬಿದ ರಿವಾಲ್ವಾರ್ ತೆಗೆದುಕೊಂಡು ಚಾರುಚಂದ್ರನ ಪಾರ್ಶ್ವವಾಯು ಬಡಿದಿದ್ದ ನಿಷ್ಕಿ›ಯ ಬಲಗೈಗೆ ದಾರದಿಂದ ಕಟ್ಟಿದ. ರಿವಾಲ್ವರ್ ಟ್ರಿಗ್ಗರ್​ಗೆ ಒಂದು ದಾರ ಕಟ್ಟಲಾಗಿತ್ತು. ಆ ದಾರವನ್ನು ಎಳೆದರೆ ಗುಂಡು ಹಾರುತ್ತಿತ್ತು. ಆ ವ್ಯವಸ್ಥೆಯ ಮೂಲಕ ಚಾರುಚಂದ್ರ ಆರು ಬಾರಿ ಗುಂಡು ಹಾರಿಸಲು ಸಾಧ್ಯವಾಗುತ್ತಿತ್ತು. ಜತೀನನ ಮುಂದೆ ರಿಹರ್ಸಲ್ ಮಾಡಿ ತನ್ನ ಬಲಿಪಶುವನ್ನು ತಾನು ಹೇಗೆ ಮುಗಿಸಿ ಹಾಕುವೆನೆಂದು ವಿವರಿಸಿದ.

ಅನಂತರ ತನ್ನ ಪ್ರೀತಿಯ ನಾಯಕ ಜತೀನ್ ದಾದಾನ ಕಾಲು ಮುಟ್ಟಿ ನಮಸ್ಕರಿಸಿ, ಆಶೀರ್ವದಿಸಿ ಎಂದ ಆ ಅಂಗವಿಕಲ ಕ್ರಾಂತಿಕಾರಿ. ಭಾವುಕ ಮನಸ್ಸಿನ ಜತೀನನಿಗೆ ಕಣ್ಣಾಲಿಗಳು ತುಂಬಿ ಬಂದವು. ತನ್ನ ಕಿರಿಯ ಕ್ರಾಂತಿಮಿತ್ರನಿಗೆ ಆಶೀರ್ವಾದಿಸಿದ.

ಜತೀನನಿಂದ ಬೀಳ್ಕೊಂಡ ಚಾರುಚಂದ್ರ ನೇರ ಆಲಿಪುರ ನ್ಯಾಯಾಲಯಕ್ಕೆ ಹೋದ. ಅವನು ಶಾಲನ್ನು ಹೊದ್ದು ತನ್ನ ರಿವಾಲ್ವರ್ ಕಟ್ಟಿದ ಬಲಗೈಯನ್ನು ಮುಚ್ಚಿಕೊಂಡಿದ್ದ. ಅಲ್ಲಿ ಓಡಾಡುತ್ತಿದ್ದ ಜನರ ನಡುವೆ ನುಸುಳಿಕೊಂಡು ತನ್ನ ಬೇಟೆಯ ಹುಡುಕಾಟ ಶುರು ಹಚ್ಚಿಕೊಂಡ.

ಅಂದು ಖೋಟಾ ನಾಣ್ಯಗಳ ಸಂಬಂಧ ಜರುಗಲಿದ್ದ ವಿಚಾರಣೆಗಾಗಿ ಸಾಕ್ಷ್ಯಗಳನ್ನು ಒದಗಿಸಿಕೊಳ್ಳುವುದರಲ್ಲಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಗಡಿಬಿಡಿಯಿಂದ ಓಡಾಡುತ್ತಿದ್ದ ಅಶುತೋಷ್ ಬಿಶ್ವಾಸ್ ಚಾರುಚಂದ್ರನ ಕಣ್ಣಿಗೆ ಬಿದ್ದ. ಚಾರುಚಂದ್ರ ಅವನ ಸನಿಹದಲ್ಲೇ ಇದ್ದುಕೊಂಡು ಹಿಂಬಾಲಿಸಲಾರಂಭಿಸಿದ. ಅಶುತೋಷ್ ಕೋರ್ಟ್​ನ ಪೂರ್ವ ದ್ವಾರದಿಂದ ದಕ್ಷಿಣದ ಬಾಗಿಲ ಕಡೆಗೆ ಗಡಿಬಿಡಿಯಿಂದ ಧಾವಿಸುತ್ತಿದ್ದ. ಆ ಬಾಗಿಲಿಗೆ ಐದಾರು ಹೆಜ್ಜೆ ದೂರವಿದ್ದ ಅಷ್ಟೆ. ಚಾರುಚಂದ್ರ ಅವನ ಅತ್ಯಂತ ಸಮೀಪಕ್ಕೆ ಹೋಗಿ ಎದುರು ನಿಂತು ಏನು ಜರುಗುತ್ತಿದೆ ಎಂಬುದು ಅಶುತೋಷನಿಗೆ ತಿಳಿಯುವ ಮುನ್ನವೇ ಟ್ರಿಗ್ಗರ್​ಗೆ ಕಟ್ಟಿದ್ದ ದಾರದ ಮೂಲಕ ಟ್ರಿಗ್ಗರ್ ಎಳೆದೇ ಬಿಟ್ಟ. ಶಾಲಿನೊಳಗಿದ್ದ ರಿವಾಲ್ವರ್ ಸದ್ದು ಮಾಡುತ್ತಾ ಗುಂಡು ಉಗುಳಿತು. ಅದು ಅಶುತೋಷನ ಎದೆಗೆ ಸರಿಯಾಗಿ ಬಡಿದಿತ್ತು. ಅಷ್ಟು ಖಚಿತವಾಗಿತ್ತು ಆ ಅಂಗವಿಕಲನ ಗುರಿ. ಕೂಡಲೇ ಅಶುತೋಷ್​ನ ಬೆಂಗಾವಲಿಗಿದ್ದ ಪೊಲೀಸ್ ಕಾನ್ಸ್​ಟೇಬಲ್ ಚಾರುಚಂದ್ರನ ಮೇಲೆ ಮುಗಿಬಿದ್ದ. ಶಾಲು ಜಾರಿ ಬಿತ್ತು. ರಿವಾಲ್ವರ್ ಕಂಡಿತು!

ಅಷ್ಟರಲ್ಲಿ ಅಯ್ಯೋ ಅಮ್ಮ ಎಂದು ಬೊಬ್ಬಿಡುತ್ತಾ ಅಶುತೋಷ್ ಕೋರ್ಟ್​ನ ಇನ್ಸ್​ಪೆಕ್ಟರ್ ರೂಮನ್ನು ಪ್ರವೇಶಿಸಿದ. ಎದೆ, ಮೂಗು, ಬಾಯಿಗಳಿಂದ ಭುಗ ಭುಗನೇ ಹೊರಚೆಲ್ಲುತ್ತಿತ್ತು ರಕ್ತ.

ಚಾರುಚಂದ್ರ ಅಷ್ಟಕ್ಕೇ ನಿಲ್ಲದೆ ತನ್ನನ್ನು ಹಿಡಿದಿದ್ದ ಪೊಲೀಸರನ್ನು ಝಾಡಿಸಿ ಒದ್ದು ಕಾಲೆಳೆಯುತ್ತಾ ಅಶುತೋಷನ ಹಿಂದೆ ಬಿದ್ದು ಇನ್ನೆರಡು ಗುಂಡುಗಳನ್ನು ತನ್ನ ಪಾರ್ಶ್ವವಾಯು ಬಡಿದ ಕೈಗೆ ಕಟ್ಟಿದ ರಿವಾಲ್ವರಿನಿಂದಲೇ ಹಾರಿಸಿದ. ಅಶುತೋಷ್ ಕೆಳಕ್ಕೆ ಬಿದ್ದು ವಿಲವಿಲ ಒದ್ದಾಡುತ್ತಾ ಕೊನೆಯುಸಿರೆಳೆದ. ಪೊಲೀಸರು ಚಾರುಚಂದ್ರನ ಹೆಡೆಮುರಿ ಕಟ್ಟಿ ಅವನ ಕೈಗಳನ್ನು ತಿರುಚುತ್ತಾ ಸಾಯಬಡಿಯಲಾರಂಭಿಸಿದರು. ಅವನು ಮಾತ್ರ ಸ್ಥಿತಪ್ರಜ್ಞನಂತೆ ಎಲ್ಲವನ್ನೂ ಎದುರಿಸುತ್ತಾ ಹಲ್ಲು ಕಚ್ಚಿ ನಿಂತ.

ಈ ಹತ್ಯೆ ದೈವೇಚ್ಛೆ!: ಫೆಬ್ರವರಿ 13, 1909. ಚಾರುಚಂದ್ರನ ವಿಚಾರಣೆಗಾಗಿ ಆಲಿಪುರ ಜೈಲಿನ ಒಳಗೆ ಒಂದು ವಿಶೇಷ ಶಾಮಿಯಾನ ಸಿದ್ಧಗೊಂಡಿತ್ತು. ಚಾರುವಿನದು ಅನಾಸಕ್ತಿ ಯೋಗ. ಎಷ್ಟೇ ಚಿತ್ರಹಿಂಸೆ ಕೊಟ್ಟರೂ ತನ್ನ ಸಂಸ್ಥೆಯ ಕುರಿತಾಗಲೀ ಅಥವಾ ತನ್ನ ನಾಯಕನ ಬಗೆಗಾಗಲೀ ಒಂದಕ್ಷರವನ್ನೂ ಹೊರಹಾಕಲಿಲ್ಲ.

‘ಅಶುತೋಷ್ ಬಾಬುವನ್ನು ಸಾಯಿಸಬೇಕೆಂದು ನಿರ್ಧರಿಸಿದವನು ನಾನೇ, ನಾನೊಬ್ಬನೇ! ಅವರು ದೇಶದ್ರೋಹಿ. ಇಬ್ಬರು ಕ್ರಾಂತಿಕಾರಿಗಳನ್ನು ಗಲ್ಲಿಗೇರಿಸಲು ಕಾರಣಕರ್ತರು. ಆ ಕಾರಣದಿಂದಲೇ ನಾನು ಅವರನ್ನು ಕೊಂದಿದ್ದು. ಅಶುತೋಷ್ ಬಾಬು ನನ್ನ ಕೈಯಿಂದಲೇ ಸಾಯಬೇಕೆಂಬುದು ದೈವೇಚ್ಛೆ. ಅಂತೆಯೇ ನಾನು ಗಲ್ಲಿಗೇರಬೇಕೆಂಬುದೂ ಪೂರ್ವನಿಶ್ಚಿತ. ಸಮಯ ಕಳೆಯದಂತೆ ನನ್ನನ್ನು ಬೇಗ ಗಲ್ಲಿಗೇರಿಸಿ ನ್ಯಾಯಾಧೀಶರೇ‘ ಎಂದ ಚಾರುಚಂದ್ರನ ಮಾತು ಅಲ್ಲಿದ್ದವರನ್ನು ಗರಬಡಿಸಿತು.

ಕೇಸು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂತು. ಫೆಬ್ರವರಿ 22ರಂದು ವಿಚಾರಣೆ ಪ್ರಾರಂಭ. 23ರಂದು ಅವನ ಫಾಶಿ ಶಿಕ್ಷೆ ಕಾಯಂ ಎಂಬ ತೀರ್ಪ. ಶಿಕ್ಷೆ ಜಾರಿಗೊಳ್ಳಲು ಅವನು ಒಂದೂವರೆ ತಿಂಗಳು ಕಾಯಬೇಕಾಯಿತು.

ಮಾರ್ಚ್ 19ರಂದು ಆಲಿಪುರ ಸೆರೆಮನೆಯಲ್ಲಿಯೇ ನಿಲ್ಲಿಸಲಾಗಿದ್ದ ಗಲ್ಲುಗಂಬವನ್ನೇರಿ ತನ್ನ ಸಂಗಾತಿಗಳಾದ ಖುದಿರಾಮ್ ಬೋಸ್, ಪ್ರಫುಲ್ಲ ಚಾಕಿ, ಸತ್ಯೇನ್ ದಾ, ಕನ್ಹಾಯಿಯರನ್ನು ಸೇರಿಕೊಂಡು ತಾಯಿನಾಡಿನ ತನ್ನ ಋಣ ತೀರಿಸಿದ್ದ ವಿಕಲಾಂಗ ವೀರ ಚಾರುಚಂದ್ರ ಬಸು.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top