Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

‘ಅವನನ್ನು ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿಯಾಗಿಸಬೇಕು’

Thursday, 07.06.2018, 3:05 AM       No Comments

ಅಜಿತ್ ಸಿಂಗ್ ವಿದೇಶಗಳಲ್ಲೂ ಯುದ್ಧಕೈದಿಗಳನ್ನು ಒಟ್ಟಾಗಿಸಿ ಭಾರತ ಸ್ವಾತಂತ್ರ್ಯಸಂಗ್ರಾಮಕ್ಕೆ ಬಲ ತುಂಬಿದ. ಇಟಲಿಯಲ್ಲಿ ಸುಭಾಷ್​ಚಂದ್ರ ಬೋಸ್​ರನ್ನು ಭೇಟಿ ಮಾಡಿ ತಾನು ಸ್ಥಾಪಿಸಿದ ಸಂಪರ್ಕ ಜಾಲಗಳನ್ನು ಒದಗಿಸಿದ. ತಾಯ್ನಾಡಿನಿಂದ 40 ವರ್ಷ ದೂರವಿದ್ದ ಅಜಿತ್ ಸ್ವಾತಂತ್ರ್ಯಪ್ರಾಪ್ತಿಯ ಸಿಹಿಸುದ್ದಿ ಕೇಳಿ ಜೀವನಪಯಣ ಕೊನೆಗೊಳಿಸಿದ.

ಕ್ರಾಂತಿಕಾರಿ ಭಗತ್ ಸಿಂಗ್​ನ ಚಿಕ್ಕಪ್ಪ ಅಜಿತ್ ಸಿಂಗ್​ಗೆ ತಿಲಕರೆಂದರೆ ಅತೀವ ಪೂಜ್ಯ ಭಾವನೆ. ಅವರ ಸಿಂಹಸದೃಶ ವ್ಯಕ್ತಿತ್ವ ಹಾಗೂ ನಿರ್ಭೀತ ವಿಚಾರಧಾರೆ ಅವನನ್ನು ಅವರ ಏಕನಿಷ್ಠ ಹಿಂಬಾಲಕನನ್ನಾಗಿ ಮಾಡಿತ್ತು. 1907ರ ಡಿಸೆಂಬರ್ ಕೊನೆಯಲ್ಲಿ ಸೂರತ್​ನಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ ಪಂಜಾಬ್​ನಿಂದ ಒಂದು ದೊಡ್ಡಪಡೆಯನ್ನೇ ತಿಲಕರನ್ನು ಬೆಂಬಲಿಸಲು ಕರೆದೊಯ್ದಿದ್ದ. ಅಲ್ಲಿ ಉಗ್ರವಾದಿಗಳಿಗೂ ಸೌಮ್ಯವಾದಿಗಳಿಗೂ ನಡೆದ ಘರ್ಷಣೆಯಲ್ಲಿ ಅಜಿತ್ ಸಿಂಗ್​ನ ಪಾತ್ರ ಮುಖ್ಯವಾದುದಾಗಿತ್ತು. ತಿಲಕರ ವಿಚಾರಗಳ ಕ್ರಿಯಾಶೀಲ ರೂಪವೇ ಅಜಿತ್ ಸಿಂಗ್ ಆಗಿದ್ದ. ಸೂರತ್ ಅಧಿವೇಶನದಲ್ಲಿ ಅಣ್ಣ ಕಿಶನ್ ಸಿಂಗ್​ನದೂ (ಭಗತ್ ಸಿಂಗ್ ತಂದೆ) ಪ್ರಮುಖ ಪಾತ್ರವಿತ್ತು.

ಅಜಿತ್ ಸಿಂಗ್​ನ ವ್ಯಕ್ತಿತ್ವಕ್ಕೆ ಮಾರುಹೋದ ತಿಲಕರು, ‘ಸರ್ದಾರ್ ಅಜಿತ್ ಸಿಂಗ್ ಒಬ್ಬ ವಿಶಿಷ್ಟ ವ್ಯಕ್ತಿ! ಅವನನ್ನು ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿಯನ್ನಾಗಿಸಬೇಕು. ಅವನಷ್ಟು ಯೋಗ್ಯನಾದ ಪುರುಷ ನಮ್ಮಲ್ಲಿ ಬೇರಾರೂ ಇಲ್ಲ’ ಎಂದು ಮರುದಿನದ ಉಗ್ರವಾದಿಗಳ ಸಭೆಯಲ್ಲಿ ತಮ್ಮ ಅನಿಸಿಕೆಯನ್ನು ಹೇಳಿಯೂ ಬಿಟ್ಟರು. ಅದಕ್ಕಿಂತ ಮಹತ್ವದ ಸರ್ಟಿಫಿಕೇಟ್ ಬೇರಾವುದಿದ್ದೀತು! 1908ರಲ್ಲಿ ತಿಲಕರ ಬಂಧನವಾದಾಗ ಅವನೂ ಸೂಫಿ ಅಂಬಾ ಪ್ರಸಾದರೂ ತಿಲಕರ ಬಿಡುಗಡೆಯಾಗುವವರೆಗೆ ಕಾವಿ ಬಟ್ಟೆ ಧರಿಸಿ ಸ್ವಾತಂತ್ರ್ಯ ಹೋರಾಟದ ತಿಲಕರ ಸಂದೇಶವನ್ನು ಮನೆಮನೆಗೂ ತಲಪಿಸುವ ನಿರ್ಧಾರ ತಳೆದು ಅದರಂತೆ ನಡೆದುಕೊಂಡರು.

ಸೂಫಿ ಅಂಬಾ ಪ್ರಸಾದರ ಸಂಪಾದಕತ್ವದಲ್ಲಿ ‘ಪೇಶ್ವಾ’ ಪತ್ರಿಕೆ ಆರಂಭಿಸಿ ಜನ ಅದಕ್ಕಾಗಿ ಹಾತೊರೆಯುವಂತೆ ಮಾಡಿದ. ಸರ್ಕಾರ ಅದನ್ನು ‘ಅತಿ ಹೆಚ್ಚು ರಾಜದ್ರೋಹ ಮಾಡುತ್ತಿರುವ ಪತ್ರಿಕೆ’ ಎಂದು ಕರೆಯಿತು. ಅಷ್ಟೇ ಅಲ್ಲ, ಅದರಲ್ಲಿನ ಅಜಿತ್ ಸಿಂಗ್​ನ ಉಗ್ರ ಲೇಖನಗಳೂ ಮತ್ತು ಅವನ ಆವೇಶಭರಿತ ಭಾಷಣಗಳೂ ಜನರಲ್ಲಿ ಉಂಟು ಮಾಡುತ್ತಿದ್ದ ಸಮರೋತ್ಸಾಹವನ್ನು ಕಂಡು ಅವನನ್ನು ಬಂಧಿಸಿ ‘ಮರಣದಂಡನೆ’ಗೆ ಗುರಿ ಮಾಡುವಂತೆ ದೋಷಾರೋಪ ಪಟ್ಟಿ ಸಿದ್ಧವಾಯಿತು. ಈ ಸುದ್ದಿ ಹಿತೈಷಿಗಳಿಂದ ಅಣ್ಣ ಕಿಶನ್ ಸಿಂಗ್​ಗೆ ಮುಟ್ಟಿ ಅಜಿತ್ ಸಿಂಗ್​ನನ್ನು ಜೀವಾಪಾಯದಿಂದ ಪಾರು ಮಾಡಲು ವಿದೇಶಕ್ಕೆ ಕಳಿಸಬೇಕೆಂದು ನಿರ್ಧರಿಸಿದ. ಪತ್ನಿ ಹರ್​ನಾಮ್ ಕೌರಳನ್ನು ಏಕಾಕಿಯಾಗಿರಲು ಬಿಟ್ಟ ಅಜಿತ್ ಸಿಂಗ್ ವಿದೇಶಕ್ಕೆ ಹೋಗಲು ಸಿದ್ಧನಾದ. ತನ್ನ ಅಣ್ಣನ ಮಗ ಭಗತ್ ಸಿಂಗ್​ನ ಪ್ರೀತಿಯ ‘ಚಾಚಾ’ ಆಗಿದ್ದ ಅವನು ಆ ಪುಟ್ಟ ಮಗು ಮುಂದೊಮ್ಮೆ ತಾನು ಹಚ್ಚಿದ ಪಂಜನ್ನು ಹಿಡಿದು ಹೊರಟು ಹುತಾತ್ಮನಾಗುವುದನ್ನು ನೋಡುವವನಾಗಿದ್ದ!

ಮನೆಗೆ ಅಂತಿಮ ವಿದಾಯ: ಇದ್ದಕ್ಕಿದ್ದಂತೆ ಒಂದು ರಾತ್ರಿ ಅಜಿತ್ ಸಿಂಗ್ ಮಡದಿಗೆ, ಮನೆಮಂದಿಗೆ ಅಂತಿಮ ವಿದಾಯ ಹೇಳಿ ಮನೆಯನ್ನು ತೊರೆದೇ ಬಿಟ್ಟ. ಜೊತೆಯಲ್ಲಿ ಸೂಫಿ ಅಂಬಾ ಪ್ರಸಾದ್ ಹಾಗೂ ಇನ್ನೂ ಕೆಲವರು ಕ್ರಾಂತಿಕಾರಿಗಳು ಸಾಥಿಗಳಾಗಿದ್ದರು. ಅಜಿತ್ ಸಿಂಗ್ ತನ್ನ ಹೆಸರನ್ನು ಮಿರ್ಜಾ ಹಸನ್​ಖಾನ್ ಎಂದು ಬದಲಾಯಿಸಿ ಅದಕ್ಕೆ ತಕ್ಕಂತೆ ವೇಷ ಹಾಕಿಕೊಂಡು ಕರಾಚಿಯ ಬಂದರಿನಿಂದ ಹಡಗು ಹತ್ತಿ ಇರಾನಿನ ಬುಷೇರ್ ಬಂದರು ತಲಪಿದ. ಅಲ್ಲಿ ಭಾರತದ ಈ ಕ್ರಾಂತಿಕಾರಿಗಳನ್ನು ಸ್ವಾಗತಿಸಲು ಇರಾನ್ ಇಂಡಿಪೆಂಡೆನ್ಸ್ ಪಾರ್ಟಿಯ ಪ್ರಮುಖರು ಕಾದು ನಿಂತಿದ್ದರು. ಬುಷೇರ್​ನಿಂದ ಶೀರಾಜ್​ಗೆ ಅವರನ್ನು ಕರೆದೊಯ್ದರು.

ಇರಾನಿ ಕ್ರಾಂತಿಕಾರಿಗಳು, ಉತ್ತರ ಭಾಗದಲ್ಲಿ ಪ್ರಭಾವಿಯಾಗಿದ್ದ ರಷ್ಯಾ ಜಾರರ ಪ್ರಭುತ್ವದ ವಿರುದ್ಧ ಹಾಗೂ ದಕ್ಷಿಣ ಭಾಗದ ಬ್ರಿಟಿಷ್ ಪ್ರಭಾವದ ವಿರುದ್ಧ ಕ್ರಾಂತಿಯಲ್ಲಿ ತೊಡಗಿದ್ದರು. ಅಜಿತ್ ಸಿಂಗ್ ಅವರಿಗೆ ಜೊತೆಯಾಗಿ ನಿಂತ. ‘ಹಯಾತ್’ ಎಂಬ ಪಾರ್ಸಿ ಪತ್ರಿಕೆ ಆರಂಭಿಸಿ ಇರಾನಿ ಕ್ರಾಂತಿಕಾರಿಗಳ ಪರ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ ಕುರಿತು ಬರೆಯಲಾರಂಭಿಸಿದ. ಇರಾನಿನ ಬ್ರಿಟಿಷ್ ಪೊಲೀಸರ ಕಣ್ಣು ಅವನ ಮೇಲೆ ಬಿದ್ದು ಬಂಧಿಸಿದರು. ಇರಾನಿ ಕ್ರಾಂತಿಕಾರಿಗಳ ಮಧ್ಯಪ್ರವೇಶದಿಂದ ಅಜಿತ್ ಬಿಡುಗಡೆಯಾದ. ಅಲ್ಲಿಂದ ಮುಂದೆ ಪೊಲೀಸರ ಕಾಟ ಹತ್ತು ಪಟ್ಟು ಹೆಚ್ಚಿದ್ದರಿಂದ ಪ್ಯಾರಿಸ್​ಗೆ ತನ್ನ ನೆಲೆ ಬದಲಾಯಿಸಿದ.

ಪ್ಯಾರಿಸ್ ಹಾದಿಯಲ್ಲಿ ಟರ್ಕಿಯಲ್ಲಿ ಅಲ್ಲಿನ ಜನನಾಯಕ ಕಮಾಲ್ ಪಾಶಾರನ್ನು ಭೇಟಿಯಾಗಿ ಭಾರತದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಚಟುವಟಿಕೆಗಳ ಪರಿಚಯ ನೀಡಿದ. ಪ್ಯಾರಿಸ್ಸಿನಲ್ಲಿ ಕೆಲಕಾಲ ಇದ್ದು ಜ್ಯೂರಿಚ್​ನಲ್ಲಿದ್ದ ಲೆನಿನ್​ನನ್ನು ಭೇಟಿ ಮಾಡಿ ರಷ್ಯಾ ಕ್ರಾಂತಿ ಚಟುವಟಿಕೆಗಳ ಬಗ್ಗೆ ರ್ಚಚಿಸಿದ. ಲೆನಿನ್​ಗೆ ಭಾರತದಲ್ಲಿನ ಬೆಳವಣಿಗೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅವನೂ ಭಾರತದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ.

ಜರ್ಮನಿಯ ಕೈಸರ್ ಸ್ನೇಹ: ಪ್ಯಾರಿಸ್ಸಿನಿಂದ ಸ್ವಿಜರ್​ಲ್ಯಾಂಡ್ ಮತ್ತು ಅಲ್ಲಿಂದ ಜರ್ಮನಿಗೆ ತೆರಳಿದ. ಆಗ 1912ನೇ ಇಸವಿ. ಜರ್ಮನಿಗೆ ಎರಡನೆಯ ವಿಲ್​ಹೆಲ್ಮ್ ನಾಯಕ. ಅವನನ್ನು ಕೈಸರ್ ಎಂದು ಕರೆಯಲಾಗುತ್ತಿತ್ತು. ಅಜಿತ್ ಸಿಂಗ್ ಅವನನ್ನು ಭೇಟಿ ಮಾಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬ್ರಿಟನ್ ವೈರಿಯಾದ ಜರ್ಮನಿ ಸಹಾಯ ಮಾಡುವುದು ಸೂಕ್ತವೆಂದು ಹೇಳಿದಾಗ ಕೈಸರ್ ‘ನಮ್ಮ ಯುದ್ಧ ಕೇವಲ ಫ್ರಾನ್ಸ್​ನೊಂದಿಗೆ ಮಾತ್ರ’ ಎಂದು ಉತ್ತರಿಸಿದ. ಆಗ ಅಜಿತ್ ಸಿಂಗ್ ನೀಡಿದ ಉತ್ತರ ಅವನ ಅಂತಾರಾಷ್ಟ್ರೀಯ ಪರಿಜ್ಞಾನವನ್ನು ಹೊರಚೆಲ್ಲುವಂತಿತ್ತು; ‘ಜರ್ಮನಿ ಇಡೀ ಯುರೋಪನ್ನು ಆಕ್ರಮಿಸಲು ಹೊರಟಿದೆ. ಹೀಗಾಗಿ ಬ್ರಿಟನ್ ಸುಮ್ಮನಿರುವುದಿಲ್ಲ. ಜರ್ಮನಿ ಹಾಗೂ ಬ್ರಿಟನ್ ನಡುವೆ ವೈರ ಬೆಳೆಯುತ್ತಲೇ ಹೋಗುತ್ತದೆ. ಬ್ರಿಟನ್ ನಮ್ಮ ಶತ್ರುವೂ ಹೌದು ನಿಮ್ಮ ಶತ್ರುವೂ ಹೌದು. ಬ್ರಿಟನ್ ವಿರುದ್ಧ ಹೋರಾಡುತ್ತಿರುವ ನಮಗೆ ನೀವು ಎಲ್ಲ ಬಗೆಯ ಸಹಾಯ ನೀಡುವುದು ಸೂಕ್ತ ಅಲ್ಲವೇ? ಅದರಿಂದ ನಿಮ್ಮ ಹೋರಾಟಕ್ಕೂ ಲಾಭವಲ್ಲವೇ?’ ಹೀಗೆ ಜರ್ಮನಿಯ ಚಕ್ರವರ್ತಿ ವಿಲ್​ಹೆಲ್ಮ್ ಜತೆ ಪ್ರಬುದ್ಧವಾಗಿ ವಾದಿಸಿ ತನ್ನ ಮುಂದಿನ ಯೋಜನೆ ವಿವರಿಸಿದ. ಆದರೂ, ಕೈಸರ್ ಸ್ಪಷ್ಟ ಭರವಸೆಯನ್ನೇನೂ ನೀಡಲಿಲ್ಲ. ಇದೆಲ್ಲ ಮೊದಲ ಮಹಾಯುದ್ಧ ವಿಧಿಯುಕ್ತವಾಗಿ ಆರಂಭವಾಗುವುದಕ್ಕೆ ಮೊದಲು ನಡೆದ ಸಂಗತಿ.

ಮೊದಲ ಮಹಾಯುದ್ಧದಲ್ಲಿ: 1914ರಲ್ಲಿ ಯುದ್ಧ ಶುರುವಾದಾಗ ಅಜಿತ್ ಸಿಂಗ್​ನ ಚಟುವಟಿಕೆ ಇನ್ನೂ ತೀವ್ರಗೊಂಡಿತು. ಬ್ರಿಟಿಷ್ ಭಾರತ ಸೈನ್ಯದ ಸೈನಿಕರಲ್ಲಿ ಸ್ವಾತಂತ್ರ್ಯ ಸಂದೇಶವನ್ನು ಪಸರಿಸುವ ಕೆಲಸ ನಡೆದೇ ಇತ್ತು. ಇನ್ನೊಂದು ಕಡೆ ಗದರ್ ಪಾರ್ಟಿ ಭಾರತದಲ್ಲಿ ಕ್ರಾಂತಿ ಉಂಟು ಮಾಡುವ ಪ್ರಯತ್ನ ನಡೆಸಿತ್ತು. ಅಮೆರಿಕದಲ್ಲಿ ಲಾಲಾ ಹರದಯಾಳರ ನೇತೃತ್ವದಲ್ಲಿ ಸಾವಿರಾರು ಸಿಖ್ ಯೋಧರು ಕ್ರಾಂತಿ ಮಾಡಲು ಭಾರತಕ್ಕೆ ಮರಳುವ ಉಮೇದಿನಲ್ಲಿದ್ದರು. ಮೊದಲ ಮಹಾಯುದ್ಧದಲ್ಲಿ ಅಜಿತ್ ಸಿಂಗ್ ಪೂರ್ಣ ಚಟುವಟಿಕೆಯಿಂದ ದುಡಿದನಾದರೂ ಪರಿಸ್ಥಿತಿಗಳು ಅನುಕೂಲವಾಗಿರದ ಕಾರಣ ಯಶಸ್ಸು ದೂರವೇ ಉಳಿಯಿತು. ಯುದ್ಧಾಂತ್ಯದ ವೇಳೆಗೆ ಜರ್ಮನಿ ಸೋಲನ್ನು ಅನುಭವಿಸುತ್ತದೆ ಎಂದು ಮುಂದಾಲೋಚನೆ ಮಾಡಿದ್ದ ಅಜಿತ್ ಸಿಂಗ್ ತನ್ನ ನೆಲೆಯನ್ನು ಬ್ರೆಜಿಲ್​ಗೆ ಬದಲಾಯಿಸಿದ.

ಬ್ರೆಜಿಲ್​ನಲ್ಲಿ 16 ವರ್ಷಗಳ ಕಾಲ ನೆಲೆಸಿದ್ದ ಅವನು ಕೆಲಕಾಲ ಪ್ರಾಧ್ಯಾಪಕನಾಗಿ, ಬಟ್ಟೆಗಿರಣಿಯ ಮ್ಯಾನೇಜರನಾಗಿ, ಟೂತ್​ಪೇಸ್ಟ್ ಕಂಪನಿಯ ಮ್ಯಾನೇಜರ್ ಆಗಿ ಜೀವನ ಸಾಗಿಸಿದ. ಭಾರತಕ್ಕೆ ಹಿಂದಿರುಗಬೇಕೆಂಬ ಆಸೆ ಬಲವಾಗಿದ್ದರೂ ಬ್ರಿಟಿಸ್ ಸರ್ಕಾರ ಅವನ ಭಾರತ ಪ್ರವೇಶ ನಿಷೇಧಿಸಿದ್ದರಿಂದ ಆಸೆ ಆಸೆಯಾಗಿಯೇ ಉಳಿದುಹೋಯಿತು.

ಎರಡನೆಯ ಮಹಾಯುದ್ಧದ ಮುನ್ಸೂಚನೆ ದೊರೆಯಲಾರಂಭವಾದಾಗ ಅವನು ಮತ್ತೆ ಕ್ರಿಯಾಶೀಲನಾದ. 1939ರ ಸೆಪ್ಟೆಂಬರ್ 3ರಂದು ಎರಡನೆಯ ಮಹಾಯುದ್ಧ ಶುರುವಾಯಿತು. ಅಜಿತ್ ಸಿಂಗ್ ಭಾರತೀಯರನ್ನು ಸ್ವಾತಂತ್ರ್ಯ ಚಳವಳಿಗೆ ಪ್ರೇರೇಪಿಸುವ ಅವಕಾಶ ಪಡೆಯಲೆಂದು ತನ್ನ ಪೂರ್ವಪರಿಚಿತನಾದ ಇಟಲಿಯ ಸರ್ವಾಧಿಕಾರಿ ಮುಸಲೋನಿಯನ್ನು ಸಂರ್ಪಸಿ ತಾನು ರೇಡಿಯೋ ಮೂಲಕ ಬ್ರಿಟಿಷ್​ವಿರೋಧಿ ಪ್ರಚಾರ ಮಾಡುವುದಾಗಿ ಹೇಳಿ ಅದನ್ನು ಕಾರ್ಯರೂಪಕ್ಕೆ ತಂದು ಯಶಸ್ವಿ ಪ್ರಯೋಗವನ್ನಾಗಿ ಮಾಡಿದ. ಭಾರತದಲ್ಲಿಯೂ ಜನ ಅವನ ಪ್ರೇರಣಾತ್ಮಕ ಭಾಷಣಗಳನ್ನು ಕೇಳಲು ತವಕಗೊಂಡಿದ್ದರು. ಬ್ರಿಟಿಷ್ ಸೈನ್ಯದ ಭಾರತೀಯ ಸಿಪಾಯಿಗಳು ಕದ್ದುಮುಚ್ಚಿ ಅವನ ಭಾಷಣ ಕೇಳಿ ಬ್ರಿಟಿಷ್​ವಿರೋಧಿ ಭಾವನೆಗಳನ್ನು ಬೆಳೆಸಿಕೊಳ್ಳುತ್ತಿದ್ದರು.

ಸುಭಾಷರಿಗೆ ಸಲಹೆ, ಸಹಾಯ: ಅದೇ ವೇಳೆ ಭಾರತದಲ್ಲಿ ಕಾಂಗ್ರೆಸ್​ನ ಜನಪ್ರಿಯ ನಾಯಕರಾಗಿದ್ದ ಸುಭಾಷ್​ಚಂದ್ರ ಬೋಸ್ ಬೃಹತ್ ಯೋಜನೆ ರಚಿಸಿಕೊಂಡು ಕಲ್ಕತ್ತೆಯ ಗೃಹಬಂಧನದಿಂದ ತಪ್ಪಿಸಿಕೊಂಡು ಇಟಲಿಗೆ ಬಂದರು. ಅಲ್ಲಿ ಅಜಿತ್ ಸಿಂಗ್-ಬೋಸ್ ಭೇಟಿಯಾಯಿತು. ಅಜಿತ್ ಆವೇಳೆಗೆ ಜರ್ಮನಿ ಮತ್ತು ಇಟಲಿಯಲ್ಲಿ ಉತ್ತಮ ಸಂಪರ್ಕ ಜಾಲ ನಿರ್ವಿುಸಿದ್ದ. ಅದನ್ನು ಸುಭಾಷರಿಗೆ ಜೋಡಿಸುವುದರ ಮೂಲಕ ಅವರು ಮುನ್ನಡೆಯಲು ಅನುಕೂಲ ಮಾಡಿಕೊಟ್ಟ.

ಇತ್ತ ರೋಮ್ಲ್ಲಿ ಭಾರತೀಯ ಯುದ್ಧಕೈದಿಗಳನ್ನು ಸೇರಿಸಿ ಆಜಾದ್ ಹಿಂದ್ ಸೇನೆಯನ್ನು ರಚಿಸಿದ. ಆ ಸೈನಿಕರಿಗೆಲ್ಲ ಪ್ರೀತಿಯ ಮಳೆ ಸುರಿಸಿ, ‘ನಾನು ನಿಮ್ಮಲ್ಲಿ ಭಗತ್ ಸಿಂಗನನ್ನು ಕಾಣುತ್ತಿದ್ದೀನಿ’ ಎಂದು ಹೇಳಿ ಆವೇಳೆಗೆ ಇತಿಹಾಸ ಪುರುಷನಾಗಿ ಹುತಾತ್ಮನಾಗಿದ್ದ ಅಣ್ಣನ ಮಗನನ್ನು ನೆನಪು ಮಾಡಿಕೊಂಡು ಅಶ್ರುಧಾರೆ ಸುರಿಸಿದ. ನೇತಾಜಿ ಇಟಲಿಗೆ ಬಂದು ಅಜಿತ್ ಸಿಂಗ್​ನ ಆಜಾದ್ ಹಿಂದ್ ಸೇನೆಯನ್ನು ನೋಡಿ ಸಂತುಷ್ಟರಾಗಿ ಮತ್ತೆ ಜರ್ಮನಿಗೆ ಹಿಂದಿರುಗಿದರು.

ಆವೇಳೆಗೆ ಯುದ್ಧಕ್ಕೆ ತಿರುವು ದೊರೆತು ಇಟಲಿಯ ಸೈನ್ಯ ದಿಕ್ಕಾಪಾಲಾಯಿತು. ಇಟಲಿ ನಾಯಕರು ಆಜಾದ್ ಹಿಂದ್ ಸೇನೆಯ ಸಹಾಯ ಯಾಚಿಸಿದರು.

‘ನಾವು ಭಾರತಕ್ಕಾಗಿ ಮಾತ್ರ ಹೋರಾಡುವವರೆ ಹೊರತು ಬೇರೆಯವರ ಬಾಡಿಗೆ ಸೈನಿಕರಾಗಿ ಹೋರಾಡುವವರಲ್ಲ’ ಎಂದ ಅಜಿತ್ ಸಿಂಗ್. ಕೊನೆಗೆ ಆ ಸೈನಿಕರನ್ನು ಉದೇನಾ ಎಂಬಲ್ಲಿದ್ದ ಯುದ್ಧಕೈದಿಗಳ ಶಿಬಿರಕ್ಕೆ ಕಳಿಸಲಾಯಿತು. 1943ರ ಅ.8ರಂದು ಇಟಲಿಯ ಪತನವಾಯಿತು. ಅಜಿತ್ ಬಗೆಗೆ ಮಾಹಿತಿ ಇದ್ದ ಬ್ರಿಟಿಷರು ಅವನನ್ನು ಹಿಡಿಯಲು ಉಪಕ್ರಮಿಸಿ, 1945ರ ಮೇ 2ರಂದು ಬಂಧಿಸಿದರು. ಮೊದಲು ಇಟಲಿಯ ಸೆರೆಮನೆಯೊಂದರಲ್ಲಿ ಅವನನ್ನು ಕೂಡಿ ಹಾಕಲಾಗಿತ್ತು. ಜರ್ಮನಿ ಶರಣಾಗತವಾದ ಕೂಡಲೇ ಅವನನ್ನು ಜರ್ಮನಿಯ ಜೈಲೊಂದಕ್ಕೆ ವರ್ಗಾಯಿಸಲಾಯಿತು.

ಜೀವನದ ಗುರಿ ಪೂರೈಸಿತು!: ಆಗ ಬ್ರಿಟನ್ನಿನ ಮಿತ್ರರಾಷ್ಟ್ರವಾಗಿದ್ದ ಅಮೆರಿಕದ ಬಂಧನದಲ್ಲಿದ್ದಾಗ ಅಮೆರಿಕದ ಸೈನ್ಯಾಧಿಕಾರಿಯೊಬ್ಬ ಅಜಿತ್​ನನ್ನು ಬಿಡುಗಡೆ ಮಾಡಿದರೂ ಅವನನ್ನು ಬಂಧಿಸಲು ಕಾದು ಕುಳಿತಿದ್ದ ಬ್ರಿಟಿಷರು ಗಪ್ಪನೆ ಹಿಡಿದು ಕೆಟ್ಟ ವಾತಾವರಣದ ಸೆರೆಮನೆಯಲ್ಲಿ ದೂಡಿ ಚಿತ್ರಹಿಂಸೆ ನೀಡಿದರು. ಅವನು ಅಲ್ಲಿಂದ ಬಿಡುಗಡೆಯಾದ ಅನಂತರ ಬ್ರಿಟನ್​ಗೆ ಹೋಗಿ ಹಿತೈಷಿಗಳೊಂದಿಗೆ ತಂಗಿದ್ದ. ತಾಯಿನಾಡಿಗೆ ಮರಳುವ ಇಚ್ಛೆ ಎಷ್ಟೇ ಪ್ರಬಲವಾಗಿದ್ದರೂ ಬ್ರಿಟಿಷರು ಪ್ರವೇಶವನ್ನು ನಿಷೇಧಿಸಿದ್ದರಿಂದ ಅಲ್ಲಿಯೇ ಇರಬೇಕಾಯಿತು. ನೆಹರು ನಾಯಕತ್ವದಲ್ಲಿ ಭಾರತದಲ್ಲಿ ಹಂಗಾಮಿ ಸರ್ಕಾರ ರಚನೆಯಾದಾಗ ಕಿಶನ್ ಸಿಂಗ್ ನೆಹರುರನ್ನು ಭೇಟಿ ಮಾಡಿ ಅಜಿತ್ ಸಿಂಗ್ ಬಗ್ಗೆ ತಿಳಿಸಿದ. ನೆಹರು ಲಂಡನ್ನಿನ ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆದು ಅಜಿತ್​ನನ್ನು ಭಾರತಕ್ಕೆ ಕಳುಹಿಸಿಕೊಡುವಂತೆ ತಿಳಿಸಿದರು. ಹೀಗೆ ಬಿಡುಗಡೆಯಾದ ಅಜಿತ್ ಸಿಂಗ್ ಕರಾಚಿಗೆ ಬಂದ. ಅಲ್ಲಿಂದ ನೆಹರುರ ಅಪೇಕ್ಷೆಯಂತೆ ದೆಹಲಿಗೆ ಹೋದ. ಅಲ್ಲಿಗೆ ಅವನ ಪತ್ನಿ ಹರ್​ನಾಮ್ ಕೌರ್ ಬಂದಳು. 40 ವರ್ಷಗಳ ಅನಂತರದ ಭೇಟಿ! ಅವಳಿಗೆ ಗಂಡನ ಗುರುತೇ ಸಿಗಲಿಲ್ಲ. ಊರ್ವಿುಳೆ ಗಂಡ ಲಕ್ಷ್ಮಣನಿಗಾಗಿ ಕಾದಿದ್ದು 14 ವರ್ಷ. ಹರ್​ನಾಮ್ ಕೌರ್ ಗಂಡನಿಗಾಗಿ ಕಾದಿದ್ದು 40 ವರ್ಷ! ಆದರೆ ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ.

ಅತ್ತ 1947ರ ಆಗಸ್ಟ್ 15ರಂದು ಇಡೀ ದೇಶ ಸ್ವಾತಂತ್ರೊ್ಯೕತ್ಸವ ಆಚರಿಸುತ್ತಿದ್ದರೆ ಅನಾರೋಗ್ಯದ ಕಾರಣ ಅಜಿತ್ ಡಾಲ್​ಹೌಸಿ ಎಂಬ ಊರಿನಲ್ಲಿ ತಂಗಿದ್ದ. ಭಾರತ ಸ್ವತಂತ್ರವಾದ ಸಿಹಿಸುದ್ದಿ ಕೇಳಿ, ‘ದೇವರೇ ನಿನಗೆ ಧನ್ಯವಾದ. ನನ್ನ ಜೀವನದ ಗುರಿ ಪೂರೈಸಿತು. ಜೈಹಿಂದ್!’ ಎಂದ. ಅದೇ ಅವನ ಬಾಯಿಂದ ಹೊರಬಿದ್ದ ಕೊನೆಯ ಶಬ್ದಗಳು. ಅಷ್ಟೆ. ಅವನು ಅಂತಿಮ ಪಯಣ ಹೊರಟಿದ್ದ. ಕಾಲಗರ್ಭದಲ್ಲಿ ಸೇರಿಹೋದ.

(ಅಜಿತ್ ಸಿಂಗ್​ನ ಸಾಹಸಗಾಥೆಯ ಹೆಚ್ಚಿನ ವಿವರಗಳನ್ನು ಅರಿಯಲು ಇದೇ ಅಂಕಣಕಾರರ ‘ಯುಗದ್ರಷ್ಟ ಭಗತ್ ಸಿಂಗ್’ ಓದಿ. ಪ್ರತಿಗಳಿಗಾಗಿ ಸಂರ್ಕಿಸಿ: 94481-10034)

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top