Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಹರ್​ನಾಮ್ ಕೌರ್ ಎಂಬ ಮತ್ತೋರ್ವ ತ್ಯಾಗಜೀವಿ

Thursday, 05.07.2018, 3:05 AM       No Comments

ದೇಶಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡುವ ಹುಕಿಗೆ ಬಿದ್ದು, ಊರು-ಮನೆ ಬಿಟ್ಟು ಹೋರಾಟಗಳಲ್ಲಿ ತೊಡಗಿಸಿಕೊಂಡ ಕೆಲ ಪುರುಷರು ಜನಮಾನಸದಲ್ಲಿ ಚಿರಸ್ಥಾಯಿಯಾಗೇನೋ ನಿಂತುಬಿಟ್ಟರು; ಆದರೆ ಅವರ ಸಂಗಾತಿಗಳೆನಿಸಿಕೊಂಡವರು ಇಂಥ ಯಾವುದೇ ಮಾನ್ಯತೆ ಇಲ್ಲದೆ ಮೌನವಾಗಿ ರೋದಿಸಬೇಕಾಗಿ ಬಂತು. ಅಂಥವರ ಪೈಕಿ ಒಬ್ಬಳು ಹರ್​ನಾಮ್ ಕೌರ್.

ವು 1909ರ ದಿನಗಳು. ಅದು ಭಗತ್ ಸಿಂಗ್ ಹುಟ್ಟಿ ಬೆಳೆದ ಗ್ರಾಮ ಬಂಗಾ. ಗದರ್ ವೀರ ಸರ್ದಾರ್ ಅಜಿತ್ ಸಿಂಗ್ ಲಾಹೋರ್​ನಿಂದ ತನ್ನ ಹೆಂಡತಿ ಹರ್​ನಾಮ್ ಕೌರ್​ಳನ್ನು ಕರೆದುಕೊಂಡು ಬಂದು ಅಲ್ಲಿ ಬಿಟ್ಟಿದ್ದಾನೆ. ಅವಳಿಗೆ ಜ್ವರ ಸುಡುತ್ತಿದೆ. ಅತಿ ನಿತ್ರಾಣಾವಸ್ಥೆಯಲ್ಲಿ ನರಳುತ್ತಿದ್ದಾಳೆ.

ಅಜಿತ್ ಸಿಂಗ್ ತನ್ನ ಸಾಮಾನು ಸರಂಜಾಮನ್ನೆಲ್ಲ ಒಂದು ಚೀಲದಲ್ಲಿ ತುಂಬಿಕೊಂಡು ಹೆಂಡತಿಗೆ ಹೇಳಿದ- ‘ನಾನು ಹೋಗಿಬರುತ್ತೀನಿ’.

‘ಯಾವಾಗ ಬರುತ್ತೀರಿ?’ ಅವಳು ಕ್ಷೀಣಧ್ವನಿಯಲ್ಲಿ ಕೇಳಿದ್ದಳು.

‘ನಾಳಿದ್ದು ಬರುತ್ತೇನೆ’ ಎಂದ ಅವನು.

‘ನಾಳಿದ್ದು’ ಬಂದುಹೋಯಿತು. ಆಗಿನಿಂದ ಪ್ರತಿದಿನ ಅವನ ನಿರೀಕ್ಷೆಯಲ್ಲಿಯೇ ಕಳೆದುಹೋಯಿತು. ಅವನೆಲ್ಲಿದ್ದನೋ ಯಾರೂ ಹೇಳುವವರಿಲ್ಲ. ಎಲ್ಲಿಂದಲಾದರೂ ಅವನ ಪತ್ರ ಬರಬಹುದೆಂಬ ನಿರೀಕ್ಷೆ ಬಿಟ್ಟು ಅವಳ ಬಾಳಿನಲ್ಲಿ ಏನೂ ಉಳಿದಿರಲಿಲ್ಲ. ಹಾಗೆಯೇ ಇಪ್ಪತ್ತು ವರ್ಷಗಳು ಉರುಳಿಹೋಗಿದ್ದವು.

ಭಗತ್ ಸಿಂಗ್​ನ ಪ್ರಯತ್ನದಿಂದ, ಅವನ ಚಿಕ್ಕಪ್ಪ ಅಜಿತ್ ಸಿಂಗ್ ಬ್ರೆಜಿಲ್​ನಲ್ಲಿರುವುದು ತಿಳಿದುಬಂತು. ಅವಳಿಗೆ ಮತ್ತೆ ಆಸೆ ಚಿಗುರಿತು. ಭಗತ್ ಸಿಂಗ್​ನ ತಮ್ಮ ಐದನೇ ಕ್ಲಾಸಿನ ಕುಲ್​ತಾರ್ ಸಿಂಗ್​ಗೆ ಹೇಳಿ ಒಂದು ಪತ್ರ ಬರೆಸಿದಳು- ‘ನೀವು ಮೂರನೆಯ ದಿನವೇ ಬರುತ್ತೇನೆಂದು ಹೇಳಿ ಹೋದವರು ಇದುವರೆಗೆ ಯಾಕೆ ಬಂದಿಲ್ಲ?’. ಅದಕ್ಕೆ ಗಂಡನಿಂದ ಉತ್ತರ ಬಂತು- ‘ಪ್ರೀತಿಪಾತ್ರಳೇ, ಮೂರು ದಿನ ಹಾಗೂ ಅನೇಕ ವರ್ಷಗಳ ನಡುವೆ ಒಂದಕ್ಷರ ಮಾತ್ರ ವ್ಯತ್ಯಾಸವಿದೆ’ (ಹಿಂದಿಯಲ್ಲಿ ‘ಪರಸೋಂ’ ಎಂದರೆ ನಾಳಿದ್ದು. ‘ಬರಸೋಂ’ ಎಂದರೆ ಹಲವು ವರ್ಷಗಳು). ಅವನೇನೋ ಚಮತ್ಕಾರದ ಉತ್ತರ ನೀಡಿದ್ದ. ಆದರೆ ಅವಳ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ.

ಮೂವತ್ತೆಂಟು ವರ್ಷಗಳ ನಂತರ: ಇದಾದ ನಂತರ ಹದಿನೆಂಟು ವರ್ಷಗಳು ಉರುಳಿಹೋದವು. 1947ರಲ್ಲಿ ಭಾರತವನ್ನು ಬಿಟ್ಟುಹೋಗುವುದಾಗಿ ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಆಟ್ಲಿ ಘೊಷಿಸಿದ್ದ. ಆಗ ಭಾರತದಲ್ಲಿ 1946ರ ಸೆಪ್ಟೆಂಬರ್​ನಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿತ್ತು. ಅದುವರೆಗೆ ಬಹಿಷ್ಕೃತನಾಗಿದ್ದ ಅಜಿತ್ ಸಿಂಗ್, ತನ್ನ ಅಣ್ಣ ಕಿಶನ್ ಸಿಂಗ್ (ಭಗತ್ ಸಿಂಗ್ ತಂದೆ) ಪ್ರಯತ್ನದಿಂದಾಗಿ ಭಾರತಕ್ಕೆ ಬರುವಂತಾಯಿತು. ಅವನು ಹಿಂದಿರುಗಿ ಬಂದು ದೆಹಲಿಯಲ್ಲಿ, ಮಧ್ಯಂತರ ಕಾಲದ ಪ್ರಧಾನಿಯ ನಿವಾಸದಲ್ಲೇ ತಂಗಿದ್ದ.

ಈ ಸಂತೋಷದ ಸುದ್ದಿ ಹರ್​ನಾಮ್ ಕೌರ್​ಳಿಗೂ ತಲುಪಿತ್ತು. ಅವಳು ಸಂಭ್ರಮ ಸಂತೋಷಗಳಿಂದ ದೆಹಲಿಗೆ ಬಂದಳು. ಅವನಿಗಾಗ 66 ವರ್ಷ. ಅವಳು ಅವನಿಗಿಂತ 2-3 ವರ್ಷ ಚಿಕ್ಕವಳಷ್ಟೆ. ಅವಳು ಪರಿವಾರದವರೊಂದಿಗೆ ಪ್ರಧಾನಮಂತ್ರಿ ನಿವಾಸದ ಅಜಿತ್ ಸಿಂಗ್ ಇದ್ದ ಕೋಣೆಯನ್ನು ಪ್ರವೇಶಿಸಿದಳು. ಪರಿವಾರದವರು ಅವನನ್ನು ಮುತ್ತಿಕೊಂಡರು.

ಅವಳು ನಾಲ್ಕಾರು ಹೆಜ್ಜೆ ದೂರದಲ್ಲಿ ಒಬ್ಬಂಟಿಯಾಗಿ ನಿಂತಳು. ರಾಮಾಯಣದ ಊರ್ವಿುಳೆ, ಗಂಡ ಲಕ್ಷ್ಮಣನಿಗಾಗಿ ಕಾದಿದ್ದು 14 ವರ್ಷ! ಹರ್​ನಾಮ್ ಕೌರ್ ಕಾದಿದ್ದು 38 ವರ್ಷಗಳು! ಆಕೆ ಅನುಮಾನಾಸ್ಪದವಾಗಿ ಪತಿಯನ್ನು ನೋಡುತ್ತ ನಿಂತಳು. ಅವಳ ಮುಂದೆ ಪ್ರಶ್ನೆಯೊಂದು ಧುತ್ತೆಂದು ಎದ್ದುನಿಂತಿತ್ತು- ‘ಅವರೇನಾ ಇವರು? 38 ವರ್ಷಗಳ ಹಿಂದೆ ಕಳೆದುಹೋದವರು? ನಾನು ಹಗಲಿರುಳೂ ಪ್ರತೀಕ್ಷೆಯಲ್ಲಿದ್ದುದು ಇವರ ಕುರಿತೇನಾ? ಎಲ್ಲರೂ ಇವರೇ ಎನ್ನುತ್ತಿದ್ದಾರೆ. ನನಗೇಕೋ ನಂಬಿಕೆಯೇ ಬರುತ್ತಿಲ್ಲವಲ್ಲ…..’.

ಅವಳ ಮನಸ್ಸು ನಂಬಿಕೆ-ಅಪನಂಬಿಕೆಗಳ ತೂಗುಯ್ಯಾಲೆಯಲ್ಲಿ ತೂಗಾಡುತ್ತಿತ್ತು. ಬೆಪ್ಪಾಗಿ ಗರಬಡಿದವಳಂತೆ ನಿಂತಿದ್ದ ಅವಳನ್ನು ಅವನೇ ಕರೆದಿದ್ದ, ‘ಬಾ ಹರ್​ನಾಮ್ ಬಾ ಬಳಿಗೆ’.

ಉಹ್ಹೂಂ ಅವಳಿಗೆ ಹೋಗಲು ಮನಸ್ಸಾಗಲಿಲ್ಲ. 38 ವರ್ಷಗಳ ಕೆಳಗೆ ಕೊನೆಯದಾಗಿ ಬಿಟ್ಟುಹೋದಾಗ ತನ್ನ ಪತಿದೇವ ಯಾವ ರೂಪದಲ್ಲಿದ್ದನೋ ಅದೇ ರೂಪವನ್ನು ಹೃದಯದಲ್ಲಿರಿಸಿಕೊಂಡು ಅವನನ್ನೇ ಧ್ಯಾನಿಸುತ್ತ ನಾಲ್ಕು ದಶಕಗಳನ್ನು ಕಳೆದಿದ್ದಳು ಆ ಮುಗ್ಧೆ. ಆದರೆ ಆಗಿನ ಅವನ ರೂಪಕ್ಕೂ ಈಗ ತಾನು ನೋಡುತ್ತಿರುವ ರೂಪಕ್ಕೂ ಸಂಬಂಧವಿಲ್ಲವಲ್ಲ? ಎಲ್ಲಿ ಹೋಯಿತು ಅವನ ಶಿಖೆ, ಮುಂಡಾಸು? ಗಡ್ಡ ಮೀಸೆ? ಪರೀಕ್ಷೆ ಮಾಡಿಯೇಬಿಡಬೇಕೆಂದು ತನ್ನ ಹಿಂದಿನ ಬಳಗದವರ ಹೆಸರುಗಳನ್ನೆಲ್ಲ ಕೇಳಿದಳು. ಅವರಿಬ್ಬರೂ ಜತೆಗಿದ್ದಾಗಿನ ಘಟನೆಗಳ ಬಗ್ಗೆ ಪ್ರಶ್ನಿಸಿದಳು. ಅವನೂ ಬುದ್ಧಿವಂತ ಶಾಲಾ ವಿದ್ಯಾರ್ಥಿಯಂತೆ ಪಟಪಟ ಉತ್ತರಿಸಿದ್ದ. ಆಮೇಲೆ ಮೆಲುದನಿಯಲಿ, ‘ಸರಿ, ಅವನೇ ಇರಬಹುದು’ ಎಂದುಕೊಂಡು ಅವಳು ಅರೆಮನಸ್ಸಿನಿಂದ ಸ್ವೀಕರಿಸಿದಳು.

ಹರ್​ನಾಮ್ ನನ್ನನ್ನು ಕ್ಷಮಿಸು: ದಿನಗಳು ಉರುಳಿದವು. 1947ರ ಆಗಸ್ಟ್ 15 ಬಂತು. ಸ್ವಾತಂತ್ರೊ್ಯೕದಯವಾಯಿತು. ಆ ಕ್ಷಣವನ್ನು ಅವನು ಸಂಭ್ರಮಿಸಿದ. ಬೆಳಗಿನ ಜಾವ ನಾಲ್ಕು ಗಂಟೆ. ಅಜಿತ್ ಸಿಂಗ್ ಮನೆಯವರನ್ನೆಲ್ಲ ಎಬ್ಬಿಸಿ ಹೇಳಿದ, ‘ನಾನೀಗ ಹೊರಡುತ್ತಿದ್ದೇನೆ’. ಹರ್​ನಾಮ್ ಕೌರ್ ಹಾಸ್ಯಮಿಶ್ರಿತ ಆಶ್ಚರ್ಯದಿಂದ ನಗುತ್ತ ‘ಎಲ್ಲಿಗೆ?’ ಎಂದಳು. ಅವನು ಅವಳನ್ನು ಬಳಿ ಕರೆದ. ಅವಳು ಕುಳಿತಲ್ಲಿಂದ ಎದ್ದುಹೋಗಿ ಗಂಡನ ಬಳಿ ನಿಂತಳು. ಅವನು ಕೈಜೋಡಿಸಿ ಅವಳಿಗೆ ನಮಸ್ಕರಿಸಿ, ‘ನಾನು ನಿನ್ನನ್ನು ಮದುವೆ ಮಾಡಿಕೊಂಡೆ. ನಿನ್ನನ್ನು ಸಾಕಿ ಸಲಹಿ ಸೇವೆಮಾಡುವುದು ನನ್ನ ಕರ್ತವ್ಯ ಆಗಿತ್ತು. ಆದರೆ ನಾನು ಭಾರತಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡೆ. ಅನಿವಾರ್ಯವಾಗಿ ನಿನ್ನನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಏನೇ ಆದರೂ ನನ್ನಿಂದ ನಿನಗಾಗಿರುವ ಅನ್ಯಾಯ ಅಕ್ಷಮ್ಯ. ಹರ್​ನಾಮ್ ನನ್ನನ್ನು ಕ್ಷಮಿಸು’ ಎನ್ನುತ್ತ ಬಗ್ಗಿ ಆಕೆಯ ಎರಡೂ ಪಾದಗಳನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಂಡ.

ನಂತರ ಹೆಚ್ಚೇನೂ ನಡೆಯಲಿಲ್ಲ. ಹಿಂದಕ್ಕೆ ದಿಂಬಿಗೆ ಒರಗಿ ಒಮ್ಮೆ ಗಟ್ಟಿಯಾಗಿ ‘ಜೈಹಿಂದ್’ ಎಂದು ಕೂಗಿದ ಅಷ್ಟೆ. ಪ್ರಾಣಪಕ್ಷಿ ಹಾರಿಹೋಯಿತು!

ಹೌದು. ಅಜಿತ್ ಸಿಂಗ್​ನ ಪತ್ನಿಯಾಗಿ ಅವಳು ದಾಂಪತ್ಯ ಜೀವನ, ಸುಖ-ಸಂತೋಷಗಳನ್ನು ಅನುಭವಿಸಲೇ ಇಲ್ಲ. ಅವಳ ಜೀವನವಿಡೀ ಆತನ ದೊಡ್ಡ ಪರಿವಾರದ ಪಾಲನೆ ಪೋಷಣೆಗಳಲ್ಲೇ ಸವೆದುಹೋಯಿತು.

ಅವಳ ತಂದೆ ಜನ್ಮನೀಡಿದ ತಂದೆಯಲ್ಲ, ಸಾಕುತಂದೆ. ಯಾರೋ ಬಡ ದಂಪತಿಗೆ ಹುಟ್ಟಿದ ಹರ್​ನಾಮ್ನ್ನು ಧನಪತ್​ರಾಯ್ ಎಂಬ ಸ್ಥಿತಿವಂತ ಜಮೀನುದಾರ ಸಾಕಿ ದೊಡ್ಡವಳನ್ನು ಮಾಡಿ ಅಜಿತ್ ಸಿಂಗ್​ನ ಕೈಯಲ್ಲಿ ಕಂಕಣ ಕಟ್ಟಿಸಿದ.

ಮದುವೆಗೆ ಮುಂಚೆ ಅವಳು ಏನೇನೋ ಕನಸಿನ ಹಂದರಗಳನ್ನು ಕಟ್ಟಿಕೊಂಡಿದ್ದುಂಟು. ಆದರೆ ಅಜಿತ್ ಸಿಂಗ್​ನ ಕೈ ಹಿಡಿದು ಅವನ ಮನೆಗೆ ಕಾಲಿಟ್ಟ ಕೆಲ ಸಮಯದಲ್ಲೇ ಅವಳ ಕನಸಿನ ಸೌಧ ಕುಸಿದುಬಿದ್ದಿತ್ತು. ಏಕೆಂದರೆ ಅವಳು ಸೇರಿದ್ದು ಒಂದು ಹುಚ್ಚರ ಮನೆಯನ್ನು. ಮಾವನಿಂದ ಹಿಡಿದು ಎಲ್ಲರೂ ಹುಚ್ಚರೇ. ಅವರೆಲ್ಲರಿಗೂ ಮೈಮನಗಳಲ್ಲಿ ತುಂಬಿಕೊಂಡಿದ್ದು ಬ್ರಿಟಿಷರನ್ನು ಹೊರಗಟ್ಟಿ ಸ್ವರಾಜ್ಯ ಸ್ಥಾಪಿಸುವ ಗುರಿ.

ಆ ಮನೆಯದು ವಿಶಾಲ ಪರಿವಾರ. ಮೂವರು ಸೋದರರು. ಹಿರಿಯ ಸೊಸೆ ವಿದ್ಯಾವತಿ ದೇವಿ. ಭಗತ್ ಸಿಂಗ್​ನಿಗೆ ಜನ್ಮವಿತ್ತು ದೇಶ ಸ್ವಾತಂತ್ರ್ಯಪಥದಲ್ಲಿ ಮುಂದುವರಿಯಲು ಪ್ರೇರೇಪಿಸಿದವಳು. ಹರ್​ನಾಮ್ ಮಧ್ಯಮಳು. ಕಿರಿಯಳು ಸ್ವರ್ಣಸಿಂಹನ ಹೆಂಡತಿ ಹುಕುಮ್ ಕೌರ್.

ಜಗತ್-ಭಗತ್​ರೇ ಅವಳ ಮಕ್ಕಳು: ಅಜಿತ್ ಸಿಂಗ್ ಮದುವೆಯಾದ ಹೊಸದರಲ್ಲೇ ಲಾಲಾ ಲಜಪತ್​ರಾಯ್ರೊಂದಿಗೆ ಮಾಂಡಲೆ ಜೈಲು ಸೇರಿದ್ದ. ಅಲ್ಲಿಂದಲೇ ಶುರುವಾಯ್ತು ಅವಳ ನಾಲ್ಕು ದಶಕಗಳ ವಿರಹ ಜೀವನ. ಅವನು ಬಂದ, ಬಂದ ಹಾಗೆಯೇ ಹೋಗಿಯೂಬಿಟ್ಟ! ನಂತರ ಮುಂದುವರಿಯಿತು ಪರಿವಾರದ ಸೇವಾಜೀವನ 15 ವರ್ಷಗಳ ಕಾಲ!

ಮನೆಗೆ ವೃದ್ಧಮಾವ ಅರ್ಜುನ ಸಿಂಹನೇ ಯಜಮಾನ. ಹಿರಿಯ ಮಗ ಕಿಶನ್ ಸಿಂಹನದು ಮನೆ ನಡೆಸುವ ಜವಾಬ್ದಾರಿ. ಅವನೂ ಸಮಾಜಸೇವೆ, ಅನಾಥಾಶ್ರಮ, ಸ್ವಾತಂತ್ರ್ಯ ಚಳವಳಿ ಹೀಗೆ ಮನೆ ಕಡೆ ಗಮನ ಕೊಡುವುದು ಅಷ್ಟಕ್ಕಷ್ಟೇ. ಇನ್ನು ಸೊಸೆಯರದೇ ಮನೆ ಹೊಣೆಗಾರಿಕೆ.

ಕಿಶನ್ ಸಿಂಹನಿಗೆ ಇಬ್ಬರು ಮಕ್ಕಳು- ಹಿರಿಯ ಮಗ ಜಗತ್ ಸಿಂಗ್, ಕಿರಿಯ ಮಗ ಭಗತ್ ಸಿಂಗ್. ಇಬ್ಬರೂ ಪಾಠಶಾಲೆಗೆ ಒಟ್ಟಿಗೆ ಹೋಗುತ್ತಿದ್ದರು. ಶಾಲೆಯಲ್ಲೇ ಪೋಸ್ಟ್ ಆಫೀಸು. ಹರ್​ನಾಮ್ ಕೌರ್​ಳಿಗೆ ದಿನನಿತ್ಯ ಸಂಜೆ ಶಾಲೆಯಿಂದ ಹಿಂದಿರುಗುವ ಮಕ್ಕಳನ್ನು ಎದುರುನೋಡುವುದೇ ಕೆಲಸ. ಅವರಿಬ್ಬರೂ ಬಂದಾಕ್ಷಣ ಅವರನ್ನು ಎತ್ತಿಕೊಂಡು ಆಕೆ ಕೇಳುತ್ತಿದ್ದ ಪ್ರಶ್ನೆ ‘ನಿಮ್ಮ ಚಿಕ್ಕಪ್ಪನ ಪತ್ರ ಬಂದಿದೆಯೇ?’. ಅದಕ್ಕೆ ಆ ಮಕ್ಕಳ ಮಾಮೂಲು ಉತ್ತರ ‘ಇಲ್ಲ’. ಪ್ರತಿದಿನ ಪತಿರಾಯನ ಪತ್ರಕ್ಕಾಗಿ ಕಾಯುತ್ತಿದ್ದ ಆ ಹೆಣ್ಣಿನ ಉತ್ಸಾಹ ಮಕ್ಕಳ ಈ ಉತ್ತರದಿಂದ ಜರ್ರನೆ ಇಳಿದುಹೋಗಿ ಮತ್ತೆ ಮೂಕಯಾತನೆ ಮುಂದುವರಿಯುತ್ತಿತ್ತು.

ಹರ್​ನಾಮ್​ಗೆ ಆ ಮನೆಯಲ್ಲಿ ಸಂತೋಷ ನೀಡುತ್ತಿದ್ದವರು ಕಿಶನ್ ಸಿಂಹನ ಎರಡು ಕುಡಿಗಳು, ಜಗತ್ ಮತ್ತು ಭಗತ್. ಇವರು, ‘ನಾವು ದೊಡ್ಡವರಾದ ಮೇಲೆ ಇಂಗ್ಲಿಷ್​ನವರನ್ನು ನಮ್ಮ ದೇಶದಿಂದ ಓಡಿಸಿ ಚಿಕ್ಕಪ್ಪನನ್ನು ಮನೆಗೆ ಕರೆದುಕೊಂಡು ಬರ್ತೀವಿ, ಅಳಬೇಡ ಸುಮ್ಮನಿರು ಚಿಕ್ಕಮ್ಮ’ ಎಂದು ಮುದ್ದುಮುದ್ದಾಗಿ ಬಾಲಭಾಷೆಯಲ್ಲಿ ಹೇಳುತ್ತಿದ್ದರೆ ಅವಳು ಆ ಮಾತುಗಳಲ್ಲೇ ಭರವಸೆ ಕಾಣುತ್ತಿದ್ದಳು. ಇಂಥ ಮಕ್ಕಳಲ್ಲಿ ದೊಡ್ಡವನಾದ ಜಗತ್, ಏಳೆಂಟು ವಯಸ್ಸಿನಲ್ಲೇ ಹಠಾತ್ತನೆ ದೇವರಪಾದ ಸೇರಿಕೊಂಡ. ಅವಳ ಪಾಲಿಗಿದ್ದ ಎರಡು ಕಣ್ಣುಗಳಲ್ಲಿ ಒಂದು ಹೋದಂತಾಗಿ ಈಗ ಅವಳ ಸಮಸ್ತ ಆಸ್ತಿಯೂ ಭಗತ್ ಸಿಂಗ್​ನೇ ಆಗಿದ್ದ.

ಹರ್​ನಾಮ್ ಕೌರ್ ಮತ್ತು ಓರಗಿತ್ತಿ ಹುಕುಮ್ ಕೌರ್​ರ ಪ್ರತಿನಿತ್ಯದ ಕಾಯಕ ಗಂಟೆಗಟ್ಟಳೆ ಕುಳಿತು ಚರಕಾದಲ್ಲಿ ನೂಲು ತೆಗೆಯುವುದು. ದಿನಕ್ಕೆ ಇಷ್ಟು ಎಂದು ನಿಗದಿಯಾದ ನೂಲು ಉತ್ಪಾದನೆಯಾಗಲೇಬೇಕಿತ್ತು. ಇದು ಧಾನ್ಯ ಬೀಸುವ ಕೆಲಸದ ಜತೆಯಲ್ಲೇ ಮಾಡಬೇಕಾಗಿದ್ದ ಕೆಲಸ. ಅವಳು ಚರಕಾ ಸುತ್ತುತ್ತಿದ್ದರೆ ಅಕ್ಕಪಕ್ಕದ ಮನೆಯ ಯಾರೋ ಒಬ್ಬಳು ಮಹಿಳಾಮಣಿ ಬಂದು, ‘ನಿನ್ನ ಗಂಡನಿಂದ ಏಕೆ ಪತ್ರ ಬಂದಿಲ್ಲ ಗೊತ್ತೆ? ಅವನು ಈಗಾಗಲೇ ಪರದೇಶಿ ಪರಂಗಿ ಹೆಣ್ಣನ್ನು ಮದ್ವೆ ಮಾಡ್ಕೊಂಡು ಹಾಯಾಗಿದ್ದಾನೆ. ನೀನಿಲ್ಲಿ ಗಂಡನ ಚಿಂತೆ ಮಾಡ್ತಾ ಚರಕಾ ಸುತ್ತುತ್ತಾ ಕುಳಿತಿರು….’ ಮುಂತಾಗಿ ಅವಳ ತಲೆಯಲ್ಲಿ ಹುಳುಬಿಟ್ಟು ಹೋಗುತ್ತಿದ್ದಳು. ಇದನ್ನು ಕೇಳಿ ಹರ್​ನಾಮ್ ಜಂಘಾಬಲವೇ ಉಡುಗಿಹೋಗುತ್ತಿತ್ತು.

ಕೆಲವೊಮ್ಮೆ ಪತ್ರಿಕೆಗಳಲ್ಲಿ ‘ಅಜಿತ್ ಸಿಂಗ್ ಸತ್ತುಹೋದ’ ಎಂಬ ಸುದ್ದಿ ಪ್ರಕಟಗೊಳ್ಳುತ್ತಿತ್ತು. ಆಗ ಅವಳ ವೇದನೆ ತೀವ್ರವಾಗುತ್ತಿತ್ತು. ಅದರಿಂದ ಅವಳನ್ನು ಸಮಾಧಾನಪಡಿಸಿ ಹೊರತರಬೇಕಾದರೆ ಮನೆಮಂದಿ ಭೂಮ್ಯಾಕಾಶ ಒಂದು ಮಾಡಬೇಕಾಗುತ್ತಿತ್ತು. ಅವಳು ಅದನ್ನು ಮರೆಯುವಷ್ಟರಲ್ಲಿ ಇನ್ನಾರೋ ಬಂದು ‘ಅವನು ಅಫ್ಘಾನಿಸ್ತಾನದಲ್ಲಿ ಎಲ್ಲೋ ಗುಂಡೇಟು ತಿಂದು ಸತ್ತ ಎಂಬ ತಾಜಾ ವರ್ತಮಾನ ಬಂದಿದೆ’ ಎಂದು ಮತ್ತೊಂದು ಆಸ್ಪೋಟ ಉಂಟುಮಾಡುತ್ತಿದ್ದರು. ಇಷ್ಟೆಲ್ಲ ಆದರೂ ಅವಳ ಅಂತರಾತ್ಮ ಮಾತ್ರ ‘ನನ್ನ ಗಂಡ ಬದುಕಿದ್ದಾನೆ. ಒಂದಲ್ಲ ಒಂದು ದಿನ ನನ್ನನ್ನು ಸೇರಲು ಹಿಂದಿರುಗಿ ಬರುತ್ತಾನೆ’ ಎನ್ನುತ್ತಲೇ ಇತ್ತು. ಆ ಭರವಸೆ ಮಾತ್ರ ಯಾರು ಏನೇ ಹೇಳಿದರೂ ಅಚಲವಾಗಿತ್ತು. ಅವಳ ಭರವಸೆ ಈಡೇರಿದ್ದು 1947ರಲ್ಲಿ, 38 ವರ್ಷಗಳು ಕಾದ ನಂತರ! ಅದು ಅಲ್ಪಕಾಲೀನ ಮಿಲನ. ಅವಳು ತನ್ನ ಗಂಡ ಬಂದಿದ್ದಾನೆಂಬುದನ್ನು ಅರ್ಥಮಾಡಿಕೊಳ್ಳುವ ಮೊದಲೇ ಅವನು ಇಹಲೋಕಕ್ಕೆ ವಿದಾಯ ಹೇಳಿಬಿಟ್ಟ.

ಆಕೆ ಭಗತ್ ಸಿಂಗ್​ನನ್ನು ಲಾಹೋರ್ ಜೈಲಿನಲ್ಲಿ ನೋಡಿದಾಗ ಅವನು ಗಲ್ಲಿನ ದಿನದ ಪ್ರತೀಕ್ಷೆಯಲ್ಲಿದ್ದ. ಅವನನ್ನು ಸಮಾಧಿ ಮಾಡಿದ ಸ್ಥಳದಲ್ಲಿಯೇ ತನ್ನ ಸಮಾಧಿಯನ್ನೂ ಮಾಡಬೇಕೆಂಬುದು ಅವಳ ಇಚ್ಛೆಯಾಗಿತ್ತು. ಗಂಡನಿಗಾಗಿ ಕಾಯುತ್ತಿದ್ದ ನಾಲ್ಕು ದಶಕಗಳ ದೀರ್ಘಾವಧಿಯಲ್ಲಿ ಅಕ್ಕಪಕ್ಕದ ಮನೆಯ ಹುಡುಗಿಯರನ್ನು ಸೇರಿಸಿ ಅವರಿಗೆ ಪಾಠಗಳನ್ನು, ಕುಶಲಕಲೆಗಳನ್ನು ಹೇಳಿಕೊಡುತ್ತಿದ್ದಳು. ಹಿಂದಿ ಮತ್ತು ಪಂಜಾಬಿ ಭಾಷೆಗಳನ್ನು ಕಲಿಸುತ್ತಿದ್ದಳು. ಅಪಘಾತದಲ್ಲಿ ಮೂಳೆ ಮುರಿದುಕೊಂಡು ಬಂದವರ ಮೂಳೆಗಳನ್ನು ಜೋಡಿಸಿ ಸರಿಪಡಿಸುತ್ತಿದ್ದಳು. ಆದರೆ ಅದು ಸೇವೆ ಮಾತ್ರ. ಯಾವ ಪ್ರತಿಫಲವನ್ನೂ ಪಡೆಯುತ್ತಿರಲಿಲ್ಲ. ಹೀಗಾಗಿ ಅವಳು ಊರಿನ ಪ್ರೀತಿಯ ಅಧ್ಯಾಪಕಿಯಾಗಿ, ವೈದ್ಯೆಯಾಗಿ ಜನಾನುರಾಗಿಯಾಗಿದ್ದಳು.

ಎಲ್ಲಕ್ಕಿಂತ ಮಿಗಿಲಾಗಿ ಅವಳಿಗೆ ಮನಶ್ಶಾಂತಿ ನೀಡುತ್ತಿದ್ದುದು ಗಂಡ ಪರದೇಶಕ್ಕೆ ಹೋಗುವ ಮುನ್ನ ಹೇಳಿಕೊಟ್ಟಿದ್ದು- ಅದೇ ಭಗವದ್ಗೀತೆಯ ದಿನನಿತ್ಯದ ಪಠಣ. ರಾತ್ರಿ ಗೀತೆ ಓದದೇ ಮಲಗುತ್ತಿರಲಿಲ್ಲ. ಅದನ್ನು ಓದುತ್ತಿದ್ದರೆ ಗಂಡನಿಗೆ ತಾನು ತೋರಿಸುತ್ತಿರುವ ನಿಷ್ಠೆ ಎಂಬ ನಂಬಿಕೆ. ಎಂಥ ಪತಿಭಕ್ತಿ!

ಗಂಡ ಪರದೇಶಗಳಲ್ಲಿ, ತನ್ನ ದೇಶದ ಸ್ವಾತಂತ್ರ್ಯದ ಸಲುವಾಗಿ ಹೋರಾಡುತ್ತಿದ್ದಾನೆಂಬ ಸಂಗತಿ ಹರ್​ನಾಮ್ ಕೌರ್​ಳಿಗೆ ಹೆಮ್ಮೆಯ ಸಂಗತಿ. ಆದರೆ ಅವನು ಹಿಂದಿರುಗಿದ ಮೇಲೆ ಹೆಚ್ಚು ಕಾಲ ಅವನ ಸಹವಾಸ ಸಿಗಲಿಲ್ಲ. ಅವನು ಬೇಗ ತೀರಿಹೋದ. ಅಂದಿನಿಂದ ಅವಳು ದೀರ್ಘಮೌನಿಯಾಗಿಬಿಟ್ಟಳು. ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ.

1962ರ ಫೆಬ್ರವರಿಯಲ್ಲಿ ಫಿರೋಜ್​ಪುರದಲ್ಲಿದ್ದಳು. ಆಗ ಅಲ್ಲಿಯೇ ಅವಳ ದೇಹಾವಸಾನವಾಯಿತು. ಈ ಮಹಾಸಾಧಿ್ವು ದಹನ ಸಂಸ್ಕಾರವನ್ನು ಅವಳ ಅಂತಿಮ ಇಚ್ಛೆಯಂತೆ ಭಗತ್ ಸಿಂಗ್​ನ ಸಮಾಧಿಯ ಪಕ್ಕದಲ್ಲಿಯೇ ಮಾಡಲಾಯಿತು. ಮೌನವಾಗಿ ನೋವನ್ನನುಭವಿಸುತ್ತ ದಶಕಗಳ ಜೀವನ ಸವೆಸಿದ ಹರ್​ನಾಮ್ ಕೌರ್​ಳಂಥವರನ್ನು ಇಂದು ನೆನೆಯುವವರು ಯಾರು?

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top