Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಕ್ರಾಂತಿಕಾರಿ ಇತಿಹಾಸದ ಸ್ವರ್ಣ ಹೆಸರು

Thursday, 21.06.2018, 3:03 AM       No Comments

| ಡಾ. ಬಾಬು ಕೃಷ್ಣಮೂರ್ತಿ

ಕ್ಷಯರೋಗದಿಂದ ಹಾಸಿಗೆ ಹಿಡಿಯುವವರೆಗೂ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ಅಸ್ತ್ರ ಝುಳಪಿಸಿದ ಧೀಮಂತನೇ ಸ್ವರ್ಣ ಸಿಂಹ. ಮುಂದೊಮ್ಮೆ ಭಗತ್ ಸಿಂಗ್ ಜೈಲುಪಾಲಾದಾಗ, ಇತಿಹಾಸ ಪ್ರಸಿದ್ಧ ಉಪವಾಸ ಸತ್ಯಾಗ್ರಹ ನಡೆಸಲು ಪ್ರೇರಣೆ ದೊರೆತಿದ್ದು ತನ್ನ ಈ ಚಿಕ್ಕಪ್ಪನಿಂದಲೇ ಎಂಬುದು ಗಮನಾರ್ಹ.

ದೇಶ-ವಿದೇಶಗಳಲ್ಲಿ ಜನಪ್ರಿಯವಾಗಿರುವ ಹೆಸರು ಭಗತ್ ಸಿಂಗ್. ಅವನ ತಂದೆ ಕಿಶನ್ ಸಿಂಹ (ಸಿಂಗ್)ನ ಹೆಸರೂ ಸ್ವಲ್ಪಮಟ್ಟಿಗೆ ಪರಿಚಿತ. ಅವನ ಚಿಕ್ಕಪ್ಪ ಸರ್ದಾರ್ ಅಜಿತ್ ಸಿಂಗ್ ಅವಿರತ ಹೋರಾಟದ ಪ್ರಯುಕ್ತ ಕ್ರಾಂತಿಕಾರಿ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ವಿುಸಿಕೊಂಡಿದ್ದ. ಭಗತ್ ಸಿಂಗ್​ನ ಇನ್ನೊಬ್ಬ ಚಿಕ್ಕಪ್ಪನೂ ತನ್ನದೇ ಆದ ರೀತಿಯಲ್ಲಿ ಕ್ರಾಂತಿಕಾರಿಯಾಗಿ ದೇಶಕ್ಕಾಗಿ ಅಹರ್ನಿಶಿ ದುಡಿದಿದ್ದ. ಭಗತ್ ಗಲ್ಲಿಗೇರಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಇಂಧನ ಒದಗಿಸಿದ 21 ವರ್ಷಗಳ ಮೊದಲೇ ಆತ ಬಲಿದಾನ ಮಾಡಿದ್ದ. ಜೀವ ತೊರೆದಾಗ ಅವನ ವಯಸ್ಸು 23! ಅದೇ ವಯಸ್ಸಿನಲ್ಲಿ ಭಗತ್ ಗಲ್ಲಿಗೇರಿದ್ದು. ಅರ್ಜುನ ಸಿಂಹನ ಮೂರನೆಯ ಮಗ, ಭಗತ್ ಸಿಂಗ್​ನ ಎರಡನೇ ಚಿಕ್ಕಪ್ಪನ ಹೆಸರು ಸ್ವರ್ಣ ಸಿಂಹ. ಅವನು ಹುಟ್ಟಿದ್ದು 1887ರಲ್ಲಿ. ಅರ್ಜುನ ಸಿಂಹನಿಂದಲೇ ಆರಂಭಗೊಂಡ ಆರ್ಯಸಮಾಜದ ಕೌಟುಂಬಿಕ ವಾತಾವರಣ, ತನ್ಮೂಲಕ ಮನೆಯಲ್ಲಿ ನೆಲೆಸಿದ ದೇಶಭಕ್ತ ವಾತಾವರಣದ ಕುಡಿ ಆತ. ತನ್ನ 16-17ನೆಯ ವಯಸ್ಸಿನಲ್ಲಿ ಸಂಪೂರ್ಣವಾಗಿ ಕ್ರಾಂತಿಯಜ್ಞದಲ್ಲಿ ಧುಮುಕಿ ಕೊನೆಯುಸಿರಿನವರೆಗೆ ಹಿಂದಿರುಗಿ ನೋಡಲಿಲ್ಲ.

ವಯಸ್ಸು ಕಿರಿದು ಕೆಲಸ ಹಿರಿದು: ಸ್ವರ್ಣ ಸಿಂಹ ತನ್ನ ಅಣ್ಣನ ಮಗನಂತೆ ಗಲ್ಲಿಗೇರಿ ಇಡೀ ದೇಶದಲ್ಲಿ ಆಂದೋಲನ ಉಂಟುಮಾಡಲಿಲ್ಲ. ಆದರೆ ಕ್ಷಯರೋಗದಿಂದ ಹಾಸಿಗೆ ಹಿಡಿಯುವವರೆಗೆ ಬ್ರಿಟಿಷ್ ಸರ್ಕಾರದ ವಿರುದ್ಧ ಅವಿರತ ಹೋರಾಟ ಮಾಡಿದ. ಅಣ್ಣಂದಿರ ಬಲಗೈ ಬಂಟನಾಗಿ ಅವರ ಅಪೇಕ್ಷೆಗಳನ್ನು ಶಿರಸಾವಹಿಸಿ ಪೂರೈಸುತ್ತಿದ್ದ.

1904-05ನೇ ಇಸವಿಗಳಲ್ಲಿ ದೇಶದಲ್ಲಿ ಭೀಕರ ಕ್ಷಾಮ. ಅದರಲ್ಲೂ ರಾಜಸ್ಥಾನದಲ್ಲಿ ಅದು ವಿಕೋಪಕ್ಕೆ ಮುಟ್ಟಿತ್ತು. ಚಿಕ್ಕಮಕ್ಕಳ ರೋದನ ಮುಗಿಲುಮುಟ್ಟಿತ್ತು. ದೀನ ದುರ್ಬಲ ತಂದೆ-ತಾಯಿಯರು ಹೆಣ್ಣುಮಕ್ಕಳನ್ನು ಸಾಕಲಾರದೆ ಬೇರೆಯವರಿಗೆ ಒಪ್ಪಿಸಿಬಿಡುತ್ತಿದ್ದರು. ಹೆಣ್ಣುಮಕ್ಕಳನ್ನು ಕೊಂಡೊಯ್ಯುತ್ತಿದ್ದವರು ಅವರ ದುರ್ಬಳಕೆ ಮಾಡಿಕೊಳ್ಳುವುದು, ತಮ್ಮ ಮತಗಳಿಗೆ ಮತಾಂತರಿಸುವುದು ಅಥವಾ ಬೇರೆ ದೇಶದವರಿಗೆ ಮಾರುವುದೂ ನಡೆಯುತ್ತಿತ್ತು.

ಈ ಹೃದಯ ವಿದ್ರಾವಕ ಸ್ಥಿತಿಯನ್ನು ನೋಡಿಯೇ ಕಿಶನ್ ಸಿಂಹ ಅನಾಥಾಶ್ರಮವನ್ನು ಸ್ಥಾಪಿಸಿದ. ಅದಕ್ಕೆ ತನ್ನ ಕಿರಿಯ ತಮ್ಮ ಸ್ವರ್ಣ ಸಿಂಹನನ್ನೇ ಮೇಲ್ವಿಚಾರಕನನ್ನಾಗಿ ನೇಮಿಸಿ ಅದರ ಯೋಗಕ್ಷೇಮದ ಬಗ್ಗೆ ನಿಶ್ಚಿಂತೆಯಿಂದಿದ್ದು ಇತರ ದೇಶಸೇವಾ ಕಾರ್ಯಗಳಲ್ಲಿ ನಿರತನಾದ.

ಅಂದಿನ ರಾಷ್ಟ್ರನಾಯಕ, ‘ಪಂಜಾಬಿನ ಸಿಂಹ’ ಲಾಲಾ ಲಜಪತರಾಯರ ಸಲಹೆಯಂತೆ ಕಿಶನ್ ಸಿಂಹ ಲಾಹೋರಿನ ಮೋರಿ ದರ್ವಾಜಾ ಎಂಬಲ್ಲಿ ಸ್ಥಾಪಿಸಿದ್ದ ಈ ಅನಾಥಾಲಯದ ಹೊಣೆಹೊತ್ತ ಸ್ವರ್ಣ ಸಿಂಹ ಅಲ್ಲಿದ್ದ ಸುಮಾರು 50 ಮಕ್ಕಳಿಗೆ ತಂದೆಯಂತೆ, ಗುರುವಿನಂತೆ ಆದ. ಹಗಲಿರುಳೂ ಅವನಿಗೆ ಆ ಮಕ್ಕಳದೇ ಚಿಂತೆ. ಅವರ ಹೊಟ್ಟೆಬಟ್ಟೆಯ ವ್ಯವಸ್ಥೆಯ ಮಾತ್ರವಲ್ಲದೆ ವಿವಿಧ ಕಾರ್ಯಕ್ರಮಗಳ ಮೂಲಕ ಅವರಿಗೆ ದೇಶಭಕ್ತಿ, ಧರ್ಮಶ್ರದ್ಧೆಗಳ ಸಂಸ್ಕಾರವನ್ನೂ ನೀಡಿದ. ಅನಾಥಾಶ್ರಮ ಅಭಿವೃದ್ಧಿಯಾಗುತ್ತಿದ್ದಂತೆ ಅದನ್ನು ಹವೇಲಿ ರಾಜಾ ಹರ್​ಬನ್ಸ್ ಸಿಂಹ ಎಂಬುವರ ಬೃಹತ್ ಬಂಗಲೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಇನ್ನೂ ಹೆಚ್ಚು ವ್ಯವಸ್ಥಿತವಾಗಿ ತರಬೇತಿಯ ಕೆಲಸ ಮುಂದುವರಿಯಿತು. ಅವನು ತಯಾರು ಮಾಡಿದ್ದ ಕಿಶೋರರ ದೇಶಭಕ್ತಿ ಹಾಗೂ ಧೈರ್ಯಕ್ಕೆ ಒಂದು ಉದಾಹರಣೆಯಾಗಿ ಅನಾಥಾಶ್ರಮದ ಕಿಶೋರ ಖುಷಿರಾಮ್ ಎನ್ನುವವನ ಘಟನೆಯನ್ನು ನೋಡಬಹುದು.

ವೀರಹುತಾತ್ಮ ಖುಷಿರಾಮ್ 1919ರಲ್ಲಿ ವಿಸ್ತರಿಸುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ನಿರ್ಬಂಧಿಸಲು ಅನ್ಯಾಯ, ಅಕ್ರಮಗಳಿಂದ ಕೂಡಿದ್ದ ರೌಲಟ್ ಆಕ್ಟ್ ಜಾರಿಗೆ ತರಲು ಬ್ರಿಟಿಷ್ ಸರ್ಕಾರ ಸಿದ್ಧಗೊಳ್ಳುತ್ತಿದ್ದಾಗಲೇ ಅದಕ್ಕೆ ತೀವ್ರ ಪ್ರತಿಭಟನೆಗಳು ಎದುರಾದವು. ಅದರ ವಿರುದ್ಧ ಜನ ಸಿಡಿದೆದ್ದಿದ್ದರು. ಅದರ ಒಂದು ಪರಿಣಾಮವೇ ಕುಪ್ರಸಿದ್ಧ ಜಲಿಯನ್​ವಾಲಾ ಬಾಗ್ ದುರಂತ.

ಲಾಹೋರಿನ ಬಾದಷಾಹಿ ಮಸೀದಿಯಲ್ಲಿ ಒಂದು ಬೃಹತ್ ಸಭೆ ನಡೆಯಿತು. ಅದನ್ನು ಸಂಘಟಿಸುವುದರಲ್ಲಿ ಸ್ವರ್ಣ ಸಿಂಹ ಹಾಗೂ ಅವನ ಅನಾಥಾಶ್ರಮದ ಕಿಶೋರರ ಪಾತ್ರ ಬಹುಮುಖ್ಯವಿತ್ತು. ಖುಷಿರಾಮ್ ಕೂಡ ಆ ಸಭೆಯಲ್ಲಿ ಕ್ರಿಯಾಶೀಲನಾಗಿ ಭಾಗವಹಿಸಿದ್ದ. ಆ ಮಧ್ಯೆ ಹೇಳದೆ ಕೇಳದೆ ಪೊಲೀಸರು ಲಾಠಿ ಚಾರ್ಜ್​ಗೆ ಶುರುಹಚ್ಚಿಕೊಂಡರು. ಖುಷಿರಾಮ್ ಮೇಲೆ ಲಾಠಿ ಏಟುಗಳನ್ನು ಹೊಡೆದಾಗ ಅವನು ಕೈಯಲ್ಲಿದ್ದ ಪ್ಲಕಾರ್ಡ್​ನ ಕೋಲಿನಿಂದಲೇ ಅದನ್ನು ತಡೆಯಲಾರಂಭಿಸಿದ.

ಲಾಠಿ ಚಾರ್ಜ್​ಗೆ ಪ್ರದರ್ಶನಕಾರರು ಬಗ್ಗದಿದ್ದಾಗ ಗುಂಡು ಹಾರಿಸಲು ಮ್ಯಾಜಿಸ್ಟ್ರೇಟ್ ಆಜ್ಞಾಪಿಸಿದ. ಗುಂಡಿನ ಸುರಿಮಳೆ ಶುರುವಾಯಿತು. ಅದೊಂದು ಚರಿತ್ರೆಯ ವಿಲಕ್ಷಣ ಕ್ಷಣ! ಖುಷಿರಾಮನಿಗೆ ಒಂದು ಗುಂಡು ಬಡಿಯಿತು. ಅದನ್ನು ಲೆಕ್ಕಿಸದೆ ಖುಷಿರಾಮ ‘ಭಾರತ್ ಮಾತಾ ಕೀ ಜೈ’ ಎಂದು ಕೂಗುತ್ತ ಹೆಜ್ಜೆ ಮುಂದಿಡುತ್ತಲೇ ಇದ್ದ. ಪೊಲೀಸನಿಗೆ ಆಶ್ಚರ್ಯ! ಒಂದೇ ಗುಂಡಿಗೆ ಪ್ರಾಣ ಬಿಡುವವರನೇಕರು. ಖುಷಿರಾಮ ಪ್ರತಿಭಟಿಸುತ್ತಲೇ ಇದ್ದ. ಇನ್ನೊಬ್ಬ ಪೊಲೀಸ್ ಅವನ ಮೇಲೆ ಇನ್ನೊಂದು ಗುಂಡು ಹಾರಿಸಿದ. ಅದನ್ನು ಲೆಕ್ಕಿಸದೆ ಖುಷಿರಾಮ್ ಹೋರಾಟ ಮುಂದುವರಿಸಿದ್ದ. ಅವನ ಆವೇಶ ಕಂಡು ಇನ್ನೂ ಕೆಲ ಪೊಲೀಸರು ಗುಂಡು ಹಾರಿಸಿದರು. ದೇಹಕ್ಕೆ 12 ಗುಂಡುಗಳು ಹೊಕ್ಕ ನಂತರ ಅವನು ಕೆಳಗೆ ಬಿದ್ದು ಹುತಾತ್ಮನಾದ. ಇದೊಂದು ಅದ್ಭುತ ಪವಾಡವೇ ಸರಿ! ಎಲ್ಲೋ ಇದ್ದ ಸ್ವರ್ಣ ಸಿಂಹ ಅಲ್ಲಿಗೆ ಧಾವಿಸಿದ. ಸತ್ತವನು, ತಾನೇ ರೂಪಿಸಿದ್ದ, ರಾಜಸ್ಥಾನದಿಂದ ಕರೆತಂದಿದ್ದ ಅನಾಥ ಬಾಲಕರ ಪೈಕಿ ಒಬ್ಬ. ಈಗ ಅವನಿಗಾಗಿ ಮರುಗುತ್ತಿದ್ದವನು ಒಬ್ಬನೇ- ಅವನನ್ನು ಪೋಷಿಸಿ, ಬೆಳೆಸಿದ ಅನಾಥಾಶ್ರಮದ ಮೇಲ್ವಿಚಾರಕ ಸ್ವರ್ಣ ಸಿಂಹ.

ಅನಾಥಾಶ್ರಮವನ್ನು ದೇಶಭಕ್ತರ ವಿಶ್ವವಿದ್ಯಾಲಯ ವನ್ನಾಗಿಸಿದ್ದ ಶ್ರೇಯಸ್ಸು ಸ್ವರ್ಣ ಸಿಂಹನದು. ಅದಕ್ಕೆ ಸೂಫಿ ಅಂಬಾ ಪ್ರಸಾದ್ ಹಾಗೂ ಅಣ್ಣಂದಿರ ಬೆಂಬಲವಿತ್ತು. ಲಾಲಾ ಲಜಪತರಾಯರ ಮಾರ್ಗದರ್ಶನವಿತ್ತು.

ಹೋರಾಟದ ಮುಂಚೂಣಿಯಲ್ಲಿ: 1905-1906ರ ವರ್ಷದಲ್ಲಿ ಭಾರತದಲ್ಲಿ ಎರಡು ಪ್ರಮುಖ ಸ್ವಾತಂತ್ರ್ಯ ಚಳವಳಿಗಳು ಅರಳಿದ್ದವು. ಒಂದು ಬಂಗಾಳ ವಿಭಜನೆ ಪರಿಣಾಮ ಶುರುವಾಗಿದ್ದ ಸ್ವದೇಶಿ ಚಳವಳಿ. ಇನ್ನೊಂದು ಅಜಿತ್ ಸಿಂಹ ಹುಟ್ಟುಹಾಕಿದ ಪಂಜಾಬಿನ ‘ಪಗಡಿ ಸಂಭಾಲ್​ಸ ಓ ಜಟ್ಟಾ’ ಚಳವಳಿ. ಪಂಜಾಬಿನ ಚಳವಳಿ ಆ ಪ್ರಾಂತ್ಯಕ್ಕೆ ಸರಿದೂಗುವಂತೆ ಕ್ಷಾತ್ರತೇಜದಿಂದ ಕೂಡಿತ್ತು.

ಚಳವಳಿಯ ಪ್ರವರ್ತಕ ಅಜಿತ್ ಸಿಂಹ ಅದಕ್ಕೆ ಸ್ಪೂರ್ತಿದಾತನಾಗಿದ್ದರೆ ತಮ್ಮ ಸ್ವರ್ಣ ಸಿಂಹ ಅದರ ಸಂಘಟಕ. ಅವನ ಪ್ರಚಾರದಿಂದಾಗಿಯೇ ಆ ಚಳವಳಿ ವ್ಯಾಪ್ತಿ ಪಡೆಯಿತು. ಚಿಕ್ಕ ಅಣ್ಣ ಅಜಿತ್ ಸಿಂಹ ಮಾಂಡಲೆ ಜೈಲಿನಲ್ಲಿದ್ದ. ದೊಡ್ಡಣ್ಣ ಕಿಶನ್ ಸಿಂಹನ ಮೇಲೆ ವಾರಂಟ್ ಇದ್ದುದರಿಂದ ಆತ ನೇಪಾಳದಲ್ಲಿ ರಾಣಾನ ಆಶ್ರಯದಲ್ಲಿದ್ದ. ಆಗ ಚಳವಳಿ ಮುಂದುವರಿಸುವ ಜವಾಬ್ದಾರಿ ಸ್ವರ್ಣ ಸಿಂಹನ ಮೇಲೆ ಬಿದ್ದಿತ್ತು. ಅಜಿತ್ ಸಿಂಹನ ಬಂಧನ ಕುರಿತು ಆತ ಬರೆದ ಲೇಖನ, ಅದರ ಧೈರ್ಯ ಹಾಗೂ ತೀವ್ರ ಭಾಷೆಯಿಂದಾಗಿ ಸಾರ್ವತ್ರಿಕ ಗಮನ ಸೆಳೆಯಿತು. ಪೊಲೀಸರು ಅವನನ್ನು ಹುಡುಕಲಾರಂಭಿಸಿದರು.

ಅಷ್ಟರಲ್ಲಿ ಒಂದು ಘಟನೆ ನಡೆದು ಸ್ವರ್ಣ ಸಿಂಹ ಮುಂಚೂಣಿಗೆ ಬರಬೇಕಾಯಿತು. ಒಬ್ಬ ಬ್ರಿಟಿಷ್ ಸೂಪರಿಂಟೆಂಡೆಂಟ್ ಒಂದು ಹಂದಿಯನ್ನು ಕೊಂದು ಚಪ್ರಾಸಿಗೆ ಅದನ್ನು ಎತ್ತಿಹಾಕಲು ಹೇಳಿದ. ಚಪ್ರಾಸಿ ಮುಸಲ್ಮಾನ. ಹಂದಿ ಎಂದರೆ ಇಸ್ಲಾಂಗೆ ವಿರೋಧ. ತಾನು ಅದನ್ನು ಎತ್ತಿಹಾಕುವುದಿಲ್ಲವೆಂದು ಆತ ಪ್ರತಿಭಟಿಸಿದ. ಕೂಡಲೆ ಆ ಬ್ರಿಟಿಷರವನು ಗುಂಡು ಹಾರಿಸಿ ಚಪ್ರಾಸಿಯನ್ನು ಕೊಂದ. ಆ ಸುದ್ದಿಯನ್ನು ‘ಪಂಜಾಬಿ’ ಎಂಬ ಇಂಗ್ಲಿಷ್ ಪತ್ರಿಕೆ ಮುದ್ರಿಸಿತು. ಪೊಲೀಸರು ಪತ್ರಿಕೆಯ ಮಾಲೀಕ ಮತ್ತು ಸಂಪಾದಕರನ್ನು ಬಂಧಿಸಿದರು. ಅದನ್ನು ವಿರೋಧಿಸಿ ಸಭೆ, ಮೆರವಣಿಗೆ ನಡೆಸಬೇಕಾದಾಗ ಅನಿವಾರ್ಯವಾಗಿ ಸಭೆಯ ಸಂಘಟನೆಯನ್ನು ಸ್ವರ್ಣ ಸಿಂಹ ಮಾಡಬೇಕಾಯಿತು, ಮುಂಚೂಣಿಗೆ ಬರಲೇಬೇಕಾಯಿತು. ಈ ಪ್ರತಿಭಟನಾ ಸರಣಿಯ ಸೂತ್ರಧಾರ ಸ್ವರ್ಣ ಸಿಂಹನೇ ಎಂಬುದರಲ್ಲಿ ಪೊಲೀಸ್ ಇಲಾಖೆಗೆ ಅನುಮಾನವಿರಲಿಲ್ಲ. ಸಹಕಾರಿಗಳ ಜತೆ ಅವನ ಬಂಧನವಾಯಿತು. ವಿಚಾರಣೆ ಎಂಬ ನ್ಯಾಯಾಲಯ ನಾಟಕ ನಡೆದು 1907ರ ಜುಲೈ 20ರಂದು ಬಂಧಿತರಿಗೆಲ್ಲ ಶಿಕ್ಷೆ ಘೊಷಣೆಯಾಯಿತು. ಸ್ವರ್ಣ ಸಿಂಹನಿಗೆ ಒಂದೂವರೆ ವರ್ಷ ಕಠಿಣ ಶಿಕ್ಷೆ!

ಜೈಲುವಾಸದ ಉಡುಗೊರೆ: ಸ್ವರ್ಣ ಸಿಂಹನನ್ನು ಇನ್ನೊಬ್ಬನೊಂದಿಗೆ ಜೋಡಿಸಿ ಕಟ್ಟಿ ಜೋಡೆತ್ತುಗಳಂತೆ ಬಳಸಿ ಆಳವಾದ ಬಾವಿಯಿಂದ ನೀರೆತ್ತುವ ಶಿಕ್ಷೆ. ಇನ್ನೂ ವಿಶೇಷವೆಂದರೆ ನೀರನ್ನು ತುಂಬಿಕೊಂಡಿರುವ ತಗಡಿನ ಪಾತ್ರೆಗೆ ರಂಧ್ರಗಳು. ನೀರು ಮೇಲೆ ಬರುವ ವೇಳೆಗೆ ತಳಭಾಗದಲ್ಲಿ ಅಲ್ಪಸ್ವಲ್ಪ ನೀರಿರುತ್ತಿತ್ತು. ಈ ಕುತಂತ್ರವನ್ನು ಕಂಡು ಪ್ರತಿಭಟಿಸಿದ ಸ್ವರ್ಣ ಸಿಂಹ ಎಲ್ಲ ಕೈದಿಗಳನ್ನು ಒಟ್ಟುಗೂಡಿಸಿ ಪ್ರದರ್ಶನ ನಡೆಸಿದ. ಜೈಲು ಅಧಿಕಾರಿಗಳಿಗೂ ಕೈದಿಗಳಿಗೂ ಶುರುವಾಯಿತು ಜಟಾಪಟಿ. ಕೈದಿಗಳ ಕೈಗಳಿಗೆ ಕೋಳಗಳು ಬಿದ್ದವು.

ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಇತಿಹಾಸ ಪ್ರಸಿದ್ಧ ಉಪವಾಸ ಸತ್ಯಾಗ್ರಹ ನಡೆಸಲು ಪ್ರೇರಣೆ ದೊರೆತಿದ್ದು ಚಿಕ್ಕಪ್ಪನಿಂದಲೇ. ಸ್ವರ್ಣ ಸಿಂಹ ಜೈಲಿನ ದೌರ್ಜನ್ಯ, ಅನಾಚಾರ, ಹಿಂಸಾಚಾರಗಳ ವಿರುದ್ಧ ಹೋರಾಟ ಆರಂಭಿಸಿ ಉಪವಾಸ ಮಾಡಿದ. ಆಗ ಅವನಿಗೆ 21 ವರ್ಷದ ಆಸುಪಾಸು. ಆತನ ಪತ್ನಿ ಹುಕುಮ್ ಕೌರ್ ಏನೇನೋ ಕನಸುಗಳನ್ನು ಕಟ್ಟಿಕೊಂಡು ಅರ್ಜುನ ಸಿಂಹನ ಸೊಸೆಯಾಗಿ ಬಂದವಳು. ಆದರೆ ಅವಳ ಕನಸುಗಳೆಲ್ಲ ಭಗ್ನವಾದವು.

ಜೈಲಿನಲ್ಲಿ ನೀಡಿದ ಶಿಕ್ಷೆಗಳಿಂದ ಸ್ವರ್ಣ ಸಿಂಹ ಜರ್ಜರಿತನಾದ. ಕೊಳಕು ಆಹಾರ, ಜೈಲು ಸಿಬ್ಬಂದಿಯಿಂದ ಅವಾಚ್ಯ ಬೈಗುಳ. ದೀರ್ಘಕಾಲ ಕತ್ತಲುಕೋಣೆಯಲ್ಲಿ ಕೂಡಿಹಾಕಿರುತ್ತಿದ್ದರು. ಕೋಣೆಯಿಂದ ಹೊರಬಂದರೆ ಧಾನ್ಯ ಬೀಸುವ ಕೆಲಸ. ಗೋಧಿ ಬೀಸಿ ಬೀಸಿ ಕೈಗಳಲ್ಲಿ ಬೊಬ್ಬೆಗಳೆದ್ದವು. ಆ ಕೊಳಕು ವಾತಾವರಣ, ಕೆಟ್ಟ ಆಹಾರ, ಕ್ರೂರಶಿಕ್ಷೆಗಳ ನಡುವೆ ಸ್ವರ್ಣ ಸಿಂಹನ ಆರೋಗ್ಯ ಕೆಡುತ್ತಲೇಹೋಯಿತು. ಜ್ವರ, ಕೆಮ್ಮು ಆರಂಭವಾಯಿತು. ಕಫದ ಜತೆ ರಕ್ತದ ಗಡ್ಡೆಗಳು. ಸ್ವರ್ಣ ಸಿಂಹನಿಗೆ ಎರಡನೆಯ ಹಂತದ ಕ್ಷಯರೋಗ ಎಂದು ವೈದ್ಯರು ತೀರ್ವನಿಸಿದರು. ಅವನು ಬದುಕುಳಿಯುವುದು ಅಸಂಭವ ಎಂಬ ಅಂತಿಮನುಡಿ. ಅವನ ಸ್ಥಿತಿಯನ್ನು ಪರಿಗಣಿಸಿ ಬಿಡುಗಡೆ ಮಾಡಲಾಯಿತು.

ಹೆಂಡತಿಗೆ ಉಳಿಸಿಹೋಗಿದ್ದು ವೈಧವ್ಯ!: ದಷ್ಟಪುಷ್ಟ ಮನುಷ್ಯನಾಗಿ ಜೈಲನ್ನು ಪ್ರವೇಶಿಸಿದ್ದ ಸ್ವರ್ಣ ಸಿಂಹ, ಗುಳಿಬಿದ್ದ ಕಣ್ಣುಗಳು, ಕಡ್ಡಿಗಳಂತಾಗಿದ್ದ ಕೈಕಾಲುಗಳು, ಮೂಳೆ ಬಿಟ್ಟುಕೊಂಡಿದ್ದ ಎದೆಗೂಡಿನೊಂದಿಗೆ ಇಬ್ಬರ ಸಹಾಯದಿಂದ ಹೆಜ್ಜೆಹಾಕುತ್ತ ಮನೆ ಪ್ರವೇಶಿಸಿದ. ಗಂಡ ಬಿಡುಗಡೆಯಾಗಿ ಬರುತ್ತಾನೆಂಬ ಆಸೆಯಿಂದ ಕಾಯುತ್ತಿದ್ದ ಹೆಂಡತಿಗೆ ಅವನ ದಾರುಣ ಸ್ಥಿತಿ ಕಂಡು ಎದೆ ಧಸಕ್ಕೆಂದಿತು. ಈಗ ಅವಳಿಗೆ ಉಳಿದಿದ್ದು ರುಗ್ಣಶಯ್ಯೆಯಲ್ಲಿದ್ದ ಪತಿಸೇವೆ. ರಕ್ತ ತುಂಬಿದ ಕಫವನ್ನು ಶೇಖರಿಸಿ ಹೊರಚೆಲ್ಲುವುದು, ಅವನ ಮಲಮೂತ್ರಗಳನ್ನು ತೆಗೆದುಕೊಂಡು ಹೊರಗೆ ಹಾಕುವುದು, ಸ್ನಾನ ಮಾಡಿಸುವುದು, ಔಷಧ ಮತ್ತು ಹಣ್ಣಿನ ರಸ ಕುಡಿಸುವುದು ಇತ್ಯಾದಿ. ಸ್ವರ್ಣ ಸಿಂಹ-ಹುಕುಮ್ ಕೌರ್ ದಾಂಪತ್ಯ ಜೀವನ ಸುಖದ ಕ್ಷಣವನ್ನೇ ಕಾಣಲಿಲ್ಲ. ಹೆಂಡತಿಗೆ ನ್ಯಾಯ ಒದಗಿಸಲಿಲ್ಲ ಎಂಬ ವೇದನೆ ಮರಣಶಯ್ಯೆಯಲ್ಲಿದ್ದ ಸ್ವರ್ಣ ಸಿಂಹನನ್ನು ಸದಾ ಕಾಡುತ್ತಿತ್ತು. ಸುಮಾರು ಒಂದೂವರೆ ವರ್ಷ ಹೀಗೆಯೇ ಕಳೆಯಿತು ಅವರ ದಾಂಪತ್ಯ ಜೀವನ! ಕೊನೆಗೆ 1910ರಲ್ಲಿ ತನ್ನ 23ನೆಯ ವಯಸ್ಸಿನಲ್ಲಿ ಕಣ್ಣುಮುಚ್ಚಿದ. ಹುಕುಮ್ ಕೌರ್​ಳ ಸುದೀರ್ಘ ವೈಧವ್ಯಕ್ಕೆ ನಾಂದಿಹಾಡಿದ. ಸುಮಾರು 2-3 ವರ್ಷದ ಮಗು ಭಗತ್ ಸಿಂಗ್​ಗೆ ಚಿಕ್ಕಪ್ಪನ ಅಂತಿಮಯಾತ್ರೆ ನೋಡುವ ಭಾಗ್ಯ! ಆತನ ಹೌತಾತ್ಮ್ಯದ ಅಂತಿಮ ದರ್ಶನ ಪಡೆದಿದ್ದ ಭಗತ್ ಸಿಂಗ್​ಗೆ ಅದೇ ಹೋರಾಟಕ್ಕೆ ಸ್ಪೂರ್ತಿಯ ಚಿಲುಮೆಯಾಗಬೇಕೆ!?

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

Back To Top