Saturday, 22nd September 2018  

Vijayavani

ಸಂಕಷ್ಟ ತಂದ ದಂಗೆ ಹೇಳಿಕೆ - ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು - ರಾಷ್ಟ್ರಪತಿಗಳಿಗೆ ಮಾಹಿತಿ ರವಾನೆ ಸಾಧ್ಯತೆ        ಸಿಎಂ ಬೇಜವಾಬ್ಧಾರಿ ಹೇಳಿಕೆಗೆ ರಾಜ್ಯಾದ್ಯಂತ ಖಂಡನೆ - ಬಿಜೆಪಿ ಕಾರ್ಯಕರ್ತರ ಪ್ರೊಟೆಸ್ಟ್​ - ಬಾಗಲಕೋಟೆಯಲ್ಲಿ ಬ್ಯಾನರ್​ ದಹನ        ಮಲೆನಾಡಲ್ಲಿ ಪ್ರವಾಹದ ಬೆನ್ನಲ್ಲೇ ಮತ್ತೊಂದು ಬರೆ - ನೆರೆ ಬಳಿಕ ಬತ್ತುತ್ತಿವೆ ನದಿಗಳು - ಆತಂಕದಲ್ಲಿ ಚಿಕ್ಕಮಗಳೂರು ಜನತೆ        ಶತಮಾನದ ಆಸ್ಪತ್ರೆಗೆ ಸರ್ಕಾರದ ಬೀಗ - ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ - ಉಡುಪಿಯಲ್ಲಿ ಉಚಿತ ಚಿಕಿತ್ಸೆ ಇನ್ನು ಮರೀಚಿಕೆ..?        ಮೈಸೂರಲ್ಲಿ ನಾಡಹಬ್ಬಕ್ಕೆ ತಯಾರಿ - ಮಾವುತರಿಗೆ ಜಿಲ್ಲಾಡಳಿತದ ಭೂರಿ ಭೋಜನ - ಕೇರಂ ಆಡಿ ಸಂತಸಪಟ್ಟ ಕಾವಾಡಿಗರು        ಹುಬ್ಬಳ್ಳಿಯಲ್ಲಿ ಅಷ್ಟವಿನಾಯಕ ಸ್ಪರ್ಧೆ - ಅಲಂಕಾರದಲ್ಲಿ ಹಿರೇಪೇಟೆಯ ವಿನಾಯಕ ಪ್ರಥಮ- ಗಾಂಧಿ ಚೌಕ್ ಗಣಪ ಉತ್ತಮ ವಿಗ್ರಹ       
Breaking News

ತಿಲಕರ ಬಲಗೈ ಬಂಟ ಧರ್ಮವೀರ ಡಾ. ಮೂಂಜೆ

Thursday, 22.03.2018, 3:05 AM       No Comments

| ಡಾ. ಬಾಬು ಕೃಷ್ಣಮೂರ್ತಿ

ಹಿಂದೂ ಸಮಾಜ ಜಾಗೃತಿ ಹಾಗೂ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡ ಧೀಮಂತರಲ್ಲಿ ಡಾ. ಮೂಂಜೆ ಎದ್ದುಕಾಣುವ ಹೆಸರು. ಇಪ್ಪತ್ತನೆಯ ಶತಮಾನದ ಅರ್ಧದಷ್ಟು ಕಾಲ ಹಿಂದೂಗಳಲ್ಲಿ ಸ್ವಾಭಿಮಾನ ಹಾಗೂ ಧೈರ್ಯವನ್ನು ತುಂಬಿದ ಸಿಂಹಸದೃಶ ವ್ಯಕ್ತಿತ್ವ ಅವರದು.

ಭಾರತಕ್ಕೆ ಸ್ವಾತಂತ್ರ್ಯ ಬಂದ ಆರೂವರೆ ತಿಂಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಜೀವನಪೂರ್ತಿ ತೊಡಗಿಸಿಕೊಂಡಿದ್ದ ಒಂದು ಜ್ಯೋತಿ ನಂದಿಹೋಯಿತು. ಆ ಸಾವು ಸಂಭವಿಸಿದ್ದು 1948ರ ಮಾರ್ಚ್ 4ರಂದು. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಹೀಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು- ‘ಡಾಕ್ಟರ್ ಮೂಂಜೆಯವರು ರಾಷ್ಟ್ರಕ್ಕೆ ಹಲವಾರು ರೀತಿಗಳಲ್ಲಿ ಸೇವೆ ಸಲ್ಲಿಸಿದರು. ಅವರು ಸ್ಥಾಪಿಸಿದ ಸೈನಿಕಶಾಲೆ ಶಿಸ್ತಿನ ಪ್ರಜ್ಞೆಯನ್ನು ಬೆಳೆಸಿದ ಅನೇಕ ಮಂದಿಯನ್ನು ನಾಡಿಗೆ ನೀಡಿ ಸಾರ್ಥಕಗೊಂಡಿದೆ’. ಆ ಮೂಂಜೆ ಯಾರು ಗೊತ್ತೆ?

ಅವು ಭಾರತದ ಅತ್ಯಂತ ಗೊಂದಲಮಯ ದಿನಗಳು. ಆಗ ಭಾರತೀಯರಲ್ಲಿ ಐಕಮತ್ಯದ ಕೊರತೆ ಇತ್ತು. ಗಾಯದ ಮೇಲೆ ಉಪ್ಪು ಸುರಿದಂತೆ, ಒಡೆದು ಆಳುವ ನೀತಿಯ ಬ್ರಿಟಿಷರು ಮುಸ್ಲಿಮರ ಮೂಲಭೂತವಾದವನ್ನು ಬಡಿದೆಬ್ಬಿಸಿ, ಹಿಂದೂಗಳ ವಿರುದ್ಧ ಆಕ್ರಮಣ ಮಾಡುವಂತೆ ತಂತ್ರ ಹೂಡಿದರು.

ಒಂದು ಕಡೆ ಬ್ರಿಟಿಷ್, ಇನ್ನೊಂದು ಕಡೆ ಮುಸ್ಲಿಂ, ಮಗದೊಂದು ಕಡೆ ಕ್ರೈಸ್ತ ಪಾದ್ರಿಗಳ ಮತಾಂತರ ಆಕ್ರಮಣಗಳಿಂದ ಹಿಂದೂಗಳ ಅಸ್ತಿತ್ವಕ್ಕೇ ಧಕ್ಕೆ ಬಂದಂತಹ ಸಂದಿಗ್ಧ ಸಮಯದಲ್ಲಿ ದಯಾನಂದ, ವಿವೇಕಾನಂದರಂತಹ ಯೋಗಿಗಳೂ ಮದನಮೋಹನ ಮಾಳವೀಯ, ಲೋಕಮಾನ್ಯ ತಿಲಕರಂಥ ರಾಜಕೀಯ ನಾಯಕರೂ ಹಿಂದೂಗಳ ಜಾಗೃತಿಗಾಗಿ ಶ್ರಮಿಸತೊಡಗಿದರು. ಅದರ ಫಲವಾಗಿ ಹಿಂದೂ ಸಮಾಜದ ರಕ್ಷಣೆಗಾಗಿಯೇ ಹಿಂದೂ ಮಹಾಸಭಾ, ಆರ್ಯ ಸಮಾಜ, ಆರೆಸ್ಸೆಸ್ ಮುಂತಾದ ಸಂಘಟನೆಗಳು ಹುಟ್ಟಿಕೊಂಡವು.

ತಾತ್ಯಾ ಟೋಪೆಯ ಸ್ಪೂರ್ತಿ: ಹಿಂದೂ ಸಮಾಜ ಜಾಗೃತಿ ಹಾಗೂ ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ಸಂಪೂರ್ಣ ಕಾರ್ಯೋನ್ಮುಖರಾದವರ ಪೈಕಿ ಡಾ. ಮೂಂಜೆ ಒಬ್ಬರು. ಅವರ ಪೂರ್ತಿ ಹೆಸರು ಡಾ. ಬಾಲಕೃಷ್ಣ ಶಿವರಾಮ ಮೂಂಜೆ. ಅವರು ಹಿಂದೂ ಜಾಗೃತಿಯ ಕಾರ್ಯದಲ್ಲಿ ಎಷ್ಟು ನಿಮಗ್ನರಾಗಿದ್ದರೋ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಅಷ್ಟೇ ಮುಖ್ಯಪಾತ್ರ ವಹಿಸಿದ್ದರು.

1872ರ ಡಿಸೆಂಬರ್ 12ರಂದು ಅಂದಿನ ಮಧ್ಯಭಾರತದ (ಈಗಿನ ಛತ್ತೀಸ್​ಗಢ ರಾಜ್ಯ) ಬಿಲಾಸ್​ಪುರ ಎಂಬಲ್ಲಿ ಮೂಂಜೆ ಜನನ. ವೇದಾಧ್ಯಯನ ಸಂಪನ್ನನಾದ ಆತನ ತಂದೆ ಶಿವರಾಮ ಪಂತ ದೇಶಭಕ್ತನೂ ಆಗಿದ್ದ. 1857ರ ಸಂಗ್ರಾಮದ ಮುಂಚೂಣಿಯ ನಾಯಕ ಸೇನಾಪತಿ ತಾತ್ಯಾಟೋಪೆ ಸಂಗ್ರಾಮ ತಣ್ಣಗಾದ ನಂತರ ಭೂಗತನಾಗಿ ಕೆಲ ತಿಂಗಳು ಅಲೆಮಾರಿಯಂತೆ ದೇಶವನ್ನು ಸುತ್ತಾಡಿದ. ಆಗ ಒಮ್ಮೆ ಬಿಲಾಸಪುರಕ್ಕೂ ಬಂದಿದ್ದಾಗ ಶಿವರಾಮ ಪಂತನು ತಾತ್ಯಾಟೋಪೆಗೆ ಕೆಲಕಾಲ ಆಶ್ರಯ ನೀಡಿ ಶುಶ್ರೂಷೆ ಮಾಡಿದ. ತಾನು ಅಂಥ ಮಹಾಪುರುಷನಿಗೆ ಆಶ್ರಯ ನೀಡಿದ್ದನ್ನು ಶಿಶುವಾಗಿದ್ದಾಗಲೇ ಮಗ ಬಾಲಕೃಷ್ಣನಿಗೆ ತಿಳಿಸುತ್ತ ತಾತ್ಯಾಟೋಪೆಯನ್ನು ವರ್ಣಿಸಿ ಗುಣಗಾನ ಮಾಡುತ್ತಿದ್ದ. ಅಪ್ಪ ವರ್ಣಿಸಿದ ತಾತ್ಯಾಟೋಪೆ ಬಾಲಕೃಷ್ಣನ ಜೀವನಪರ್ಯಂತ ಅವನ ನೆನಪಿನ ಒಂದು ಭಾಗವಾಗಿಬಿಟ್ಟ.

ಶಿವರಾಮ ಪಂತ ತಾತ್ಯಾಟೋಪೆಯ ನೆನಪಿಗಾಗಿ ಮಗನನ್ನು ‘ತಾತ್ಯಾ’ ಎಂದೇ ಕರೆಯುತ್ತಿದ್ದ. ತಾನೂ ಬ್ರಿಟಿಷ್ ಆಕ್ರಮಕರ ವಿರುದ್ಧ ಹೋರಾಡಬೇಕೆಂದು ಕನಸು ಕಾಣುತ್ತಿದ್ದ ಬಾಲಕೃಷ್ಣ ದಿನಂಪ್ರತಿ ವ್ಯಾಯಾಮ, ಕುದುರೆ ಸವಾರಿ, ಯೋಗಾಭ್ಯಾಸ ಮಾಡಿ ಸದೃಢ ಶರೀರವನ್ನು ಬೆಳೆಸಿಕೊಂಡ.

1889ರಲ್ಲಿ ಬಾಲಕೃಷ್ಣ ಮೆಟ್ರಿಕ್ ಪಾಸಾದ. ಆವೇಳೆಗೆ ಅಂದಿನ ಪದ್ಧತಿಯ ಪ್ರಕಾರ ಮದುವೆಯೂ ಆಗಿತ್ತು. ವಿದ್ಯಾಭ್ಯಾಸ ಮುಂದುವರಿಸಲು ನಾಗಪುರಕ್ಕೆ ಹೋಗಬೇಕಿತ್ತು. ಅವನೇ ಹಿರಿಯ ಮಗನಾಗಿದ್ದುದರಿಂದ ಕುಟುಂಬವನ್ನು ನಾಗಪುರಕ್ಕೆ ಸ್ಥಳಾಂತರಿಸಬೇಕಾಗಿ ಬಂತು. ಅಲ್ಲಿ ಅವನಿಗೆ ತಿಂಗಳಿಗೆ 15 ರೂ. ವಿದ್ಯಾರ್ಥಿವೇತನ ದೊರೆಯುತ್ತಿದ್ದರೂ ಅದು ಯಾವ ಮೂಲೆಗೆ? ಹೆಚ್ಚಿನ ಆದಾಯಕ್ಕಾಗಿ ಮಕ್ಕಳಿಗೆ ಮನೆಪಾಠ ಮಾಡುತ್ತಿದ್ದ.

ಅವನಿಗೆ ಪಂ. ದೇಹಾಡ್​ರಾಯ್ ಎಂಬ ಸಂಸ್ಕೃತ ಅಧ್ಯಾಪಕರು ಕಾಲೇಜಿನಲ್ಲಿ ದೊರೆತು ಸಂಸ್ಕೃತ ಕಲಿಸಿ, ಸನಾತನ ಧರ್ಮದ ಹಿರಿಮೆ ಗರಿಮೆಗಳನ್ನು ತಿಳಿಸಿದರು. ಆ ಓದಿನಿಂದ ಅವನ ಧರ್ಮನಿಷ್ಠೆ ನೂರುಪಟ್ಟು ಹೆಚ್ಚಿತು. ಅದು ಅವನನ್ನು ಒಬ್ಬ ‘ಧರ್ಮವೀರ’ನನ್ನಾಗಿ ರೂಪಿಸಿತು.

ಸಮಾಜಸೇವೆಗಾಗಿ ಡಾಕ್ಟರ್ ಆದ: ತನ್ನ ಸಮಾಜ ಬಾಂಧವರ ರೋಗ-ರುಜಿನಗಳು, ಅವಕ್ಕೆ ಸರಿಯಾದ ಪರಿಹಾರಗಳಿಲ್ಲದೆ ಜನರು ಹುಳುಗಳಂತೆ ಸಾಯುತ್ತಿರುವುದನ್ನು ಕಂಡು, ದೀನ ದಲಿತರ ಸೇವೆಗಾಗಿ ತಾನು ವೈದ್ಯಶಿಕ್ಷಣ ಪಡೆದು ಡಾಕ್ಟರ್ ಆಗಬೇಕೆಂಬ ಆಶಯವನ್ನು ತಂದೆಗೆ ಪತ್ರ ಬರೆದು ತಿಳಿಸಿದರು. ತಂದೆ ವೈದಿಕ ಸಂಪ್ರದಾಯದ ತನ್ನ ಮಗ ‘ಹೆಣ ಕೊಯ್ಯುವ’ ಆಂಗ್ಲ ವೈದ್ಯನಾಗುವುದು ಬೇಡ ಎಂದು ಪ್ರತಿಭಟಿಸಿದಾಗ ಅವರ ಮಾತಿಗೆ ಸಮ್ಮತಿಸದೆ ತನ್ನ ಇಚ್ಛೆಯಂತೆ ವೈದ್ಯಕೀಯ ಶಿಕ್ಷಣ ಪಡೆಯಲು, ಯಾರಿಗೂ ತಿಳಿಸದೆ ಮುಂಬಯಿಗೆ ಹೋಗಿ ಗ್ರಾಂಟ್ ಮೆಡಿಕಲ್ ಕಾಲೇಜು ಸೇರಿಯೆಬಿಟ್ಟರು.

ಮೂಂಜೆ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೇ ಭಯಂಕರ ಪ್ಲೇಗ್ ಮಾರಿ ಮಹಾರಾಷ್ಟ್ರದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತು. ಆಗ ಪ್ಲೇಗ್ ಪೀಡಿತರ ಸೇವೆಗೆ ಮೂಂಜೆ ಧುಮುಕಿದ. ಸದಾಕಾಲ ಸಮಾಜ ಹಾಗೂ ದೇಶದ ಚಿಂತನೆ ಮಾಡುತ್ತಿದ್ದ ಮೂಂಜೆಗೆ ಹಿಂದೂ ಸಮಾಜದಂಥ ಪ್ರಾಚೀನ ಸಮಾಜವನ್ನು ಶಕ್ತಿಶಾಲಿಯನ್ನಾಗಿ ಮಾಡಬೇಕೆಂಬ ಹಂಬಲ ಆರಂಭದ ದಿನಗಳಿಂದಲೂ ಇತ್ತು. ಹೀಗಾಗಿ ಯುದ್ಧಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅಧ್ಯಯನ ಮಾಡಿದರು. ಆವೇಳೆಗೆ ದಕ್ಷಿಣ ಆಫ್ರಿಕಾದಲ್ಲಿ ಬೋಯರ್ ಯುದ್ಧ ತಲೆಹಾಕಿತು. ಯುದ್ಧದಲ್ಲಿ ಬಹಳ ಜನ ಗಾಯಗೊಳ್ಳುತ್ತಿದ್ದರು. ಅವರ ಸೇವೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ಡಾಕ್ಟರ್ ಮೂಂಜೆ ಅಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಗಾಂಧೀಜಿಯವರೊಡನೆ ಕೆಲದಿನ ತಂಗಿದ್ದರು. ಆಗ ಬ್ರಿಟಿಷರ ಕರಾಳ ಕೃತ್ಯಗಳನ್ನು ಕುರಿತು ಇಬ್ಬರೂ ರ್ಚಚಿಸಿದ್ದರು.

1885ರಲ್ಲಿ ಆರಂಭಗೊಂಡ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆರಂಭದ ವರ್ಷಗಳಲ್ಲಿ ಬ್ರಿಟಿಷ್ ಆಡಳಿತದ ‘ಸೇಫ್ಟಿ ವಾಲ್ವ್’ ಆಗಿ ಕೆಲಸ ಮಾಡುತ್ತಿತ್ತು. ಅದರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ತುಂಬಿದವರು ಲಾಲ್, ಬಾಲ್, ಪಾಲ್. ಬ್ರಿಟಿಷರ ಆಡಳಿತ ಭಾರತಕ್ಕೆ ಭಗವಂತನ ವರದಾನವೆಂದು ಹಾಡಿ ಹೊಗಳುತ್ತಿದ್ದ ಮಂದಗಾಮಿ ನಾಯಕರಾದ ಗೋಖಲೆ, ಫಿರೋಜ್ ಷಾ ಮೆಹ್ತಾ, ಸುರೇಂದ್ರನಾಥ ಬ್ಯಾನರ್ಜಿಯವರ ನಿಲುವುಗಳನ್ನು ವಿರೋಧಿಸಿದ ತಿಲಕ್ ಬಣದೊಂದಿಗೆ ಗುರುತಿಸಿಕೊಂಡ ಮೂಂಜೆ ತಿಲಕರ ನಾಯಕತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡರು. 1906ರಲ್ಲಿ ಕಲ್ಕತ್ತಾದಲ್ಲಿ ನಡೆದ, ರವೀಂದ್ರನಾಥ ಟ್ಯಾಗೋರ್, ಸೋದರಿ ನಿವೇದಿತಾ ಭಾಗವಹಿಸಿದ್ದ ಶಿವಾಜಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ತಿಲಕರು ಹೋದಾಗ ಅವರ ಬಲಗೈ ಬಂಟರಾಗಿದ್ದವರು ಮೂಂಜೆಯೇ.

ಸೂರತ್ ಕಾಂಗ್ರೆಸ್ ಅಧಿವೇಶನ: ಆ ದಿನಗಳಲ್ಲಿ ಕಾಂಗ್ರೆಸ್​ನಲ್ಲಿ ಮಂದಗಾಮಿ ಹಾಗೂ ತೀವ್ರಗಾಮಿಗಳ ಲಟಾಪಟಿ ಬಲುಜೋರು. ತಿಲಕ್, ಪಾಲ್, ಲಜಪತರಾಯ್, ಅರವಿಂದ, ಚಿದಂಬರಂ ಪಿಳ್ಳೆ ಮುಂತಾದ ಧೀಮಂತ ದಿಗ್ಗಜರ ತೀವ್ರಗಾಮಿ ಗುಂಪಿಗೂ ಗೋಖಲೆ, ಮೆಹ್ತಾ, ಸುರೇಂದ್ರನಾಥರ ಮಂದಗಾಮಿ ಗುಂಪಿಗೂ ಬಹಿರಂಗ ಹಣಾಹಣಿಯಾಗಿದ್ದು 1907ರ ಡಿಸೆಂಬರ್​ನಲ್ಲಿ ನಡೆದ ಸೂರತ್ ಕಾಂಗ್ರೆಸ್ ಅಧಿವೇಶನದಲ್ಲಿ. ತಿಲಕ್ ಗುಂಪನ್ನು ಸದೆಬಡಿಯಲು ಫಿರೋಜ್ ಷಾ ಮೆಹ್ತಾ ಗೂಂಡಾಗಳನ್ನು ನೇಮಿಸುತ್ತಿದ್ದಾರೆಂಬ ಸುದ್ದಿ ತಿಳಿದು ತಿಲಕರ ಕಡೆ ಅದಕ್ಕೆ ಪ್ರತಿಯಾಗಿ ಸ್ವಯಂಸೇವಕರ ತಂಡವನ್ನು ಸಿದ್ಧಪಡಿಸಿದವರು ಡಾ. ಮೂಂಜೆ. ಉದ್ದ ಲಾಠಿಧಾರಿಗಳಾದ ನೂರಾರು ಯುವಕರನ್ನು ನಾಗಪುರದಿಂದ ಕರೆತಂದ ಮೂಂಜೆ, ಮೆಹ್ತಾರ ಗೂಂಡಾಗಳು ತಿಲಕರ ಮೇಲೆ ದಾಳಿಮಾಡಲು ಬಂದಾಗ, ತಮ್ಮ ಗುರುವಿನ ರಕ್ಷಣೆಗೆ ಲಾಠಿ ಹಿಡಿದು ನಿಂತು ಗೂಂಡಾಗಳನ್ನು ಹಿಮ್ಮೆಟ್ಟಿಸುವುದರಲ್ಲಿ, ಮೆಹ್ತಾರ ಮುಖಭಂಗ ಮಾಡುವುದರಲ್ಲಿ ಯಶಸ್ವಿಯಾದರು. ಅಂದಿನಿಂದ ಮೂಂಜೆ ಮೇಲೆ ತಿಲಕರ ಪ್ರೇಮ, ನಂಬಿಕೆ ಇನ್ನೂ ಹೆಚ್ಚಿತು.

1914ರಲ್ಲಿ ಮಹಾಯುದ್ಧದ ವೇಳೆ ಭಾರತದ ವೈಸರಾಯ್ ಯುದ್ಧದಲ್ಲಿ ತಮಗೆ ಸಹಾಯ ಮಾಡುವಂತೆ ಯಾಚಿಸಲು ಸಮಾಲೋಚನೆಗೆ ಕರೆದ ಭಾರತದ ಹಲವರು ಪ್ರಮುಖ ಮುಖಂಡರ ಪೈಕಿ ಮೂಂಜೆ ಕೂಡ ಒಬ್ಬರಾಗಿದ್ದರು. ‘ಭಾರತಕ್ಕೆ ಸ್ವಾತಂತ್ರ್ಯ ಕೊಡುವುದಾದರೆ ನಾವು ಯುದ್ಧದಲ್ಲಿ ನಿಮ್ಮ ಪರ ಸಹಕರಿಸುತ್ತೇವೆ’ ಎಂಬ ಕರಾರನ್ನು ಮುಂದಿಟ್ಟರು ಮೂಂಜೆ. ಆದರೆ ವೈಸರಾಯ್ ಈ ಕರಾರನ್ನು ಹೇಗೆ ತಾನೇ ಒಪ್ಪಿಯಾನು?

ಗಾಂಧಿಯುಗ ಆರಂಭ: 1920ರಲ್ಲಿ ತಿಲಕರ ಮರಣಾನಂತರ ಗಾಂಧೀಜಿ ಕಾಂಗ್ರೆಸ್ಸಿನ ಮುಂದಾಳತ್ವ ವಹಿಸಿಕೊಂಡಾಗ ಅವರ ಅಹಿಂಸಾ ಮಾರ್ಗ, ಬೂಟಾಟಿಕೆಯ ಹಿಂದೂ-ಮುಸ್ಲಿಂ ಐಕಮತ್ಯ, ಮುಸ್ಲಿಮರಿಗಾಗಿ ಹಿಂದೂಗಳು ಸರ್ವರೀತಿಯ ತ್ಯಾಗಗಳನ್ನು ಮಾಡಬೇಕೆಂಬ ಅವರ ಕರೆ ಮೂಂಜೆಯವರಿಗೆ ಪಥ್ಯವಾಗಲಿಲ್ಲ. ಅವರು ಬಹಳ ಪ್ರಾಕ್ಟಿಕಲ್ ಮನುಷ್ಯ. ಕಾಂಗ್ರೆಸ್ಸನ್ನು ಬದಿಗಿರಿಸಿ ಹಿಂದೂ ಸಮಾಜ ಸಂಘಟನಾ ಕಾರ್ಯಕ್ಕೆ ಕಟಿಬದ್ಧರಾಗಿ ಪೂರ್ಣ ಅರ್ಪಿಸಿಕೊಂಡರು.

ಆರೆಸ್ಸೆಸ್ ಸಂಸ್ಥಾಪಕ ಡಾಕ್ಟರ್ ಹೆಡಗೆವಾರ್ ಕಿಶೋರಾವಸ್ಥೆಯಿಂದಲೂ ಮೂಂಜೆ ಸಂಪರ್ಕದಲ್ಲಿದ್ದರು. ಆಗಿನ ದಿನಗಳಲ್ಲಿ ನಾಗಪುರ ಮೂಂಜೆಯವರ ಕೇಂದ್ರ. ಹೀಗಾಗಿ ಹೆಡಗೆವಾರರ ಶ್ರೇಯೋಭಿಲಾಷಿಯಾಗಿ ಅವರಿಗೆ ಎಲ್ಲ ರೀತಿಯ ಉತ್ತೇಜನ ನೀಡಿ, ವೈದ್ಯಕೀಯ ಶಿಕ್ಷಣಕ್ಕಾಗಿ ಅವರನ್ನು ಕಲ್ಕತ್ತಾಗೆ ಕಳಿಸಿ, ಅಲ್ಲಿ ಅನುಶೀಲನ ಸಮಿತಿ ಎಂಬ ಕ್ರಾಂತಿಕಾರಿ ಸಂಘಟನೆಯಲ್ಲಿ ಸೇರುವಂತೆ ಮಾಡಿದ ಮೂಂಜೆ ಆರೆಸ್ಸೆಸ್ ಸ್ಥಾಪನೆಯಲ್ಲಿ ಅಪಾರ ಆಸಕ್ತಿ ವಹಿಸಿ ಸಂಪೂರ್ಣ ಬೆಂಬಲ ನೀಡಿದರು.

ಆಗ ಮುಸ್ಲಿಮರು ಅಮಾಯಕ ಹಿಂದೂಗಳ ಮೇಲೆ ವಿನಾಕಾರಣ ಮಾರಣಾಂತಿಕ ಆಕ್ರಮಣಗಳನ್ನು ಮಾಡುತ್ತಿದ್ದುದನ್ನು ಕಂಡು ಸ್ವಸಂರಕ್ಷಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ನಿರ್ಧರಿಸಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಲು ಹಿಂದೂ ಯುವಕರ ಅಖಾಡಗಳಂತೆ ಆರೆಸ್ಸೆಸ್ ವರ್ತಿಸಬೇಕೆಂಬ ಪರಿಕಲ್ಪನೆ ಮಾಡಿದರು. ಒಮ್ಮೆ ಮುಂಬಯಿಯಲ್ಲಿ ಸಹಸ್ರಾರು ಸಂಖ್ಯೆಯ ದುಷ್ಕರ್ವಿುಗಳು ಹಿಂದೂಗಳ ಹತ್ಯೆಯ ಯೋಜನೆ ಮಾಡಿದಾಗ ಅದಕ್ಕೆ ಪ್ರತಿಯಾಗಿ ರಾತ್ರೋರಾತ್ರಿ ಮುಂಬಯಿ ಗಿರಣಿಗಳ ಕಾರ್ವಿುಕರನ್ನು ಪ್ರೇರೇಪಿಸಿ ಆಕ್ರಮಣಕಾರಿಗಳನ್ನು ಬಡಿದಟ್ಟಿದ ಸೇನಾನಿ ಅವರಾಗಿದ್ದರು. ಭೋಂಸ್ಲೆ ಸೈನಿಕ ಶಾಲೆಯನ್ನು ಸ್ಥಾಪಿಸಿ ಗ್ವಾಲಿಯರ್ ಮಹಾರಾಜರಿಂದ ಅದರ ಪ್ರಾರಂಭೋತ್ಸವ ಮಾಡಿಸಿ ಅಲ್ಲಿ ತರುಣರಿಗೆ ಸೈನಿಕ ಶಿಕ್ಷಣ ದೊರೆಯುವಂತೆ ವ್ಯವಸ್ಥೆಗೊಳಿಸಿದರು.

ವಿನಾಯಕ ದಾಮೋದರ ಸಾವರ್ಕರರು ಅಂಡಮಾನಿನ ಕಾರಾಗೃಹದಿಂದ ಬಿಡುಗಡೆ ಹೊಂದಿ ಹಿಂದಿರುಗಿದಾಗ ಅವರ ಜತೆ ಸೇರಿ ಹಿಂದೂ ಮಹಾಸಭಾವನ್ನು ಕಟ್ಟಲು ದುಡಿದರು. 1927ರಲ್ಲಿ ಹಿಂದೂ ಮಹಾಸಭಾ ಅಧ್ಯಕ್ಷರಾದ ಅವರು, 1937ರಲ್ಲಿ ಅಧ್ಯಕ್ಷತೆಯನ್ನು ಸಾವರ್ಕರ್​ಗೆ ಹಸ್ತಾಂತರಿಸಿದರು.

1930ರ ದಶಕದಲ್ಲಿ ಹಿಂದೂ ಸಮಾಜದ ಸ್ಪೃ್ಯಾಸ್ಪೃ್ಯ ಪ್ರಶ್ನೆ ರಾಜಕೀಯದಲ್ಲಿ ಮುಂಚೂಣಿಗೆ ಬಂದ ಕಾಲ. ಬ್ರಿಟಿಷರು ಹಿಂದೂ ಸಮಾಜದಲ್ಲಿನ ಈ ಭೇದಭಾವವನ್ನು ಬಳಸಿಕೊಂಡು ಒಡಕು ತರಲು ಚುನಾವಣೆಗಳಲ್ಲಿ ಮೀಸಲು ಕ್ಷೇತ್ರಗಳನ್ನು ಕುರಿತು ಕಮ್ಯುನಲ್ ಅವಾರ್ಡ್ ಮುಂದಿರಿಸಿದಾಗ ಅದೊಂದು ‘ಅಮೂಲ್ಯ ಅನುಕೂಲ’ವೆಂದು ಬಿ.ಆರ್. ಅಂಬೇಡ್ಕರ್ ಭಾವಿಸಿದರು. ಮದ್ರಾಸಿನ ಸಮಾಜ ಸುಧಾರಕ ಹಾಗೂ ದಲಿತ ನಾಯಕ ಅಂಬೇಡ್ಕರರಷ್ಟೇ ಮುಖ್ಯರೆಂದು ಜನ ಭಾವಿಸುತ್ತಿದ್ದ ಎಂ.ಸಿ. ರಾಜಾ ಅದನ್ನು ಒಪ್ಪಲಿಲ್ಲ. ಸಮಾಜದ ಸ್ಪೃ್ಯಾಸ್ಪೃ್ಯ ತಾರತಮ್ಯಗಳ ವಿರುದ್ಧ ಹೋರಾಡುತ್ತಿದ್ದ ದಲಿತ ಹಾಗೂ ಇತರ ಹಿಂದೂ ನಾಯಕರ ಸಂಕಲ್ಪವನ್ನು ಅದು ದುರ್ಬಲಗೊಳಿಸುತ್ತದೆಂದು ರಾಜಾ ಭಾವಿಸಿದರು. ಅವರೊಂದಿಗೆ ಏಕೀಭವಿಸಿದ ಮೂಂಜೆ ಒಂದಾಗಿ ‘ರಾಜಾ-ಮೂಂಜೆ ಒಪ್ಪಂದ’ ಮಾಡಿಕೊಂಡು ಸಮಾಜ ಒಡೆದುಹೋಗುವುದನ್ನು ತಡೆಯಲು ಯತ್ನಿಸಿದರು. ಅದು ಫಲಿಸದೆ ಕೊನೆಗೆ ಅಂಬೇಡ್ಕರರು ಹಿಂದೂ ಧರ್ಮವನ್ನು ತೊರೆಯಲು ಮುಂದಾದಾಗ, ತಮ್ಮನ್ನು ಕೂಡಿಕೊಳ್ಳುವಂತೆ ಅವರಿಗೆ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳಿಂದ ಆಹ್ವಾನ ಬಂದಾಗ ಅಂಬೇಡ್ಕರರಿಗೆ ಮೊದಲು ಸಿಖ್ ಮತವನ್ನು ಸೇರಬೇಕೆಂಬ ಅಭಿಪ್ರಾಯ ಮೂಡಿತ್ತು. ಆಗ ಮೂಂಜೆ ಅವರಿಗೆ ಭಾರತ ಮೂಲದ ಧರ್ಮಕ್ಕೇ ಮತಾಂತರಗೊಳ್ಳುವ ಸಂಕಲ್ಪ ತೊಟ್ಟು ತಮ್ಮ ಸಹಸ್ರಾರು ಹಿಂಬಾಲಕರೊಂದಿಗೆ ಬೌದ್ಧ ಮತಾನುಯಾಯಿಗಳಾಗಿದ್ದು ಈಗ ಇತಿಹಾಸ.

ಎರಡು ದುಂಡುಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದ ಮೂಂಜೆ, ಕ್ರಿಪ್ಸ್ ಕಮಿಷನ್ನಿನ ಸಭೆಗಳಲ್ಲಿ ಭಾಗವಹಿಸಿ ಹಿಂದಿರುಗುವಾಗ ಯುರೋಪಿನ ಅನೇಕ ರಾಷ್ಟ್ರಗಳನ್ನು ಕಂಡರು. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆರಂಭದ ದಿನಗಳಲ್ಲಿ ಸ್ಪೂರ್ತಿ ನೀಡಿದ ಮ್ಯಾಝಿನಿ, ಗ್ಯಾರಿಬಾಲ್ಡಿಯರ ಇಟಲಿಗೆ ಹೋಗಿ ಆಗ ಅಲ್ಲಿ ಸರ್ವಾಧಿಕಾರಿಯಾಗಿದ್ದ ಮುಸ್ಸೊಲೋನಿಯನ್ನು ಭೇಟಿ ಮಾಡಿದರು; ಭಾರತ ಸ್ವಾತಂತ್ರ್ಯಕ್ಕೆ ಸುಭಾಷ್​ಚಂದ್ರ ಬೋಸ್ ಹಿಟ್ಲರ್​ನನ್ನು ಸಂರ್ಪಸಿದ ಹಾಗೆ. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಅಸ್ತಮಿಸಿ ಸ್ವಾತಂತ್ರೊ್ಯೕದಯವಾದ ಆ ಐತಿಹಾಸಿಕ ಸಂದರ್ಭವನ್ನು ಕಂಡ ಧರ್ಮವೀರ, ಕರ್ಮಯೋಗಿ ಡಾಕ್ಟರ್ ಮೂಂಜೆ 1948 ಮಾರ್ಚ್ 4ರಂದು ಇಹಲೋಕ ತೊರೆದರು. ಇಪ್ಪತ್ತನೆಯ ಶತಮಾನದ ಅರ್ಧದಷ್ಟು ಕಾಲ ಹಿಂದೂಗಳಲ್ಲಿ ಸ್ವಾಭಿಮಾನ, ಸಾಹಸ ಹಾಗೂ ಧೈರ್ಯಗಳನ್ನು ತುಂಬಿದ ಸಿಂಹಸದೃಶ ವ್ಯಕ್ತಿತ್ವದ ಡಾ. ಮೂಂಜೆಯವರ ಕಾರ್ಯಗಳನ್ನು ಬಲ್ಲವರೆಷ್ಟು ಮಂದಿ?

Leave a Reply

Your email address will not be published. Required fields are marked *

Back To Top