More

    ವಸತಿ ಸಾಲ ಪುನರ್​ರಚನೆ; ಪ್ರಸ್ತಾವನೆ ಸಲ್ಲಿಸಲು ಸೂಚನೆ

    ಮುಂಬೈ: ಗೃಹ ಸಾಲದ ಮರುಪಾವತಿ ಅವಧಿಯನ್ನು ಮರುರೂಪಿಸಿದ ಮೇಲೂ ಅದು ಮೂಲ ಅವಧಿಗಿಂತ ಎರಡು ವರ್ಷದಷ್ಟು ಹೆಚ್ಚಾಗದಂತೆ ನೋಡಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಸಹಿತ ಎಲ್ಲ ಬ್ಯಾಂಕ್​ಗಳು ಕ್ರಮಕೈಗೊಳ್ಳುತ್ತಿವೆ. ಕರೊನಾ ಲಾಕ್​ಡೌನ್ ಕಾರಣ ಮಾಸಿಕ ಕಂತು (ಇಎಂಐ) ಪಾವತಿಯನ್ನು ಕೆಲ ಅವಧಿಗೆ ಮುಂದೂಡಿದರೂ ಸಾಲ ಮರುಪಾವತಿ ಮೂಲ ಅವಧಿಗಿಂತ ಅತಿ ಹೆಚ್ಚು ವಿಸ್ತರಣೆಯಾಗದಂತೆ ನೋಡಿಕೊಳ್ಳುವುದು ಅವುಗಳ ಉದ್ದೇಶವಾಗಿದೆ. ಅದಕ್ಕಾಗಿ ಹಲವು ಆಯ್ಕೆಗಳನ್ನು ನೀಡಲು ಬ್ಯಾಂಕ್​ಗಳು ಯೋಜಿಸಿವೆ.

    ಸಾಲಗಾರರು ಸಂಪೂರ್ಣ ಆದಾಯ ನಷ್ಟ ಹೊಂದಿದಲ್ಲಿ ಇಎಂಐ ಪಾವತಿಯನ್ನು ಕೆಲ ಕಾಲ ಮುಂದೂಡುವುದು, ಕರೊನಾ ಸಾಂಕ್ರಾಮಿಕತೆಯಿಂದಾಗಿ ಆದಾಯ ಅಥವಾ ವೇತನದಲ್ಲಿ ಕಡಿತವಾದಲ್ಲಿ ಇಎಂಐ ಪಾವತಿ ಕೆಲ ವರ್ಷ ಕಾಲ ಮುಂದೂಡುವುದು ಆಯ್ಕೆಗಳಲ್ಲಿ ಸೇರಿವೆ. ರಿಸರ್ವ್ ಬ್ಯಾಂಕ್ ನೇಮಿಸಿದ್ದ ಕೆ.ವಿ. ಕಾಮತ್ ಸಮಿತಿಯು ಚಿಲ್ಲರೆ ಹಾಗೂ ಗೃಹ ಸಾಲ ಪುನರ್​ರಚನೆ ವಿಚಾರವನ್ನು ಪರಿಶೀಲಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಎಷ್ಟು ಗ್ರಾಹಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬುದನ್ನು ತಿಳಿದ ನಂತರ, ಆಯಾ ಬ್ಯಾಂಕ್​ಗಳು ಪ್ರಸ್ತಾಪನೆ ರೂಪಿಸಿ ಮುಂದಿನ ತಿಂಗಳೊಳಗೆ ತಮ್ಮ ಆಡಳಿತ ಮಂಡಳಿಗಳಿಗೆ ಸಲ್ಲಿಸಲಿವೆ.

    ಸಾಲ ಮರುಪಾವತಿ ಮಾಡದಿರುವವರನ್ನು (ಡಿಫಾಲ್ಟರ್ಸ್) ಅನುತ್ಪಾದಕ ಆಸ್ತಿ (ಎನ್​ಪಿಎ) ಎಂದು ಪರಿಗಣಿಸಲಾಗುವ ಅಪಾಯವನ್ನು ತಪ್ಪಿಸಲು ಸಾಲಗಳನ್ನು ಮರುರೂಪಿಸಲು ಬ್ಯಾಂಕ್​ಗಳು ಉತ್ಸುಕವಾಗಿವೆ. ಭದ್ರತಾ ಕ್ರಮಗಳನ್ನು ಜಾರಿ ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೂಡ ಇದು ಸಕಾಲವಲ್ಲ ಎಂಬುದೂ ಬ್ಯಾಂಕ್​ಗಳ ಅಭಿಪ್ರಾಯವಾಗಿದೆ. ಸಾಲ ಮರುಪಾವತಿ ಅವಧಿಯನ್ನು ಎರಡು ವರ್ಷ ವಿಸ್ತರಿಸಲು ಬ್ಯಾಂಕ್​ಗಳಿಗೆ ಆರ್​ಬಿಐ ಅವಕಾಶ ಕಲ್ಪಿಸಿದ್ದರೂ ಎರಡು ವರ್ಷಗಳ ಕಾಲಾವಕಾಶ ನೀಡಲು ಅಸಾಧ್ಯ ಎಂದು ಬ್ಯಾಂಕ್​ಗಳು ಹೇಳಿವೆ. 15 ವರ್ಷದ ಸಾಲ ಹೊಂದಿರುವವರಿಗೆ ಈಗ ಆರು ತಿಂಗಳು ಮುಂದೂಡಿಕೆ (ಮೊರಟೋರಿಯಂ) ಅವಕಾಶ ಸಿಕ್ಕರೂ ಅವರ ಒಟ್ಟಾರೆ ಸಾಲದ ಅವಧಿ 14 ತಿಂಗಳಷ್ಟು ವಿಸ್ತರಣೆಯಾಗುತ್ತದೆ. ಅಂದರೆ ಬ್ಯಾಂಕ್​ಗಳು ಇಎಂಐ ಅನ್ನು ಕೆಲವು ತಿಂಗಳಷ್ಟೆ ಮುಂದೂಡಬಹುದು ಎನ್ನುವುದು ಇದರ ಅರ್ಥವಾಗಿದೆ. ಪುನರ್​ರೂಪಿತ ಸಾಲಗಳ ಮೇಲೆ ಶೇಕಡ 10ರಷ್ಟು ಹೆಚ್ಚುವರಿ ಮೊತ್ತ ನಿಗದಿಪಡಿಸಬೇಕಾಗುತ್ತದೆ ಎನ್ನುವುದು ಬ್ಯಾಂಕ್​ಗಳ ಅಭಿಪ್ರಾಯ. ಇದರಿಂದಾಗಿ ಬಡ್ಡಿ ದರದಲ್ಲಿ 30 ಮೂಲಾಂಶದವರೆಗೆ ಏರಿಕೆಯಾಗುತ್ತದೆ.

    ಸೆಪ್ಟೆಂಬರ್ ಗಡುವು: ಸೆಪ್ಟೆಂಬರ್ 15ರೊಳಗೆ ವರದಿ ಸಲ್ಲಿಸುವಂತೆ ಕಾಮತ್ ಸಮಿತಿಗೆ ಆರಬಿಐ ಸೂಚಿಸಿತ್ತು. ಸಾಲ ಪುನರ್​ರೂಪಿಸುವಾಗ ವಿವಿಧ ಮಾನದಂಡಗಳನ್ನು ಸಮಿತಿ ಅಳವಡಿಸಿಕೊಳ್ಳಬೇಕು ಎಂಬುದು ಬ್ಯಾಂಕ್​ಗಳ ನಿರೀಕ್ಷೆಯಾಗಿದೆ. ಗರಿಷ್ಠ ಸಾಲ-ಈಕ್ವಿಟಿ ಅನುಪಾತ, ಹೋಟೆಲ್, ವಿಮಾನ ಯಾನ, ರಿಯಲ್ ಎಸ್ಟೇಟ್ ಅಥವಾ ನಿರ್ಮಾಣ ಮುಂತಾದ ವಲಯಗಳಿಗೆ ಅಗತ್ಯ ವಿನಾಯತಿಗಳನ್ನು ನೀಡುವುದು ಅದರಲ್ಲಿ ಸೇರಿವೆ.

    ಭಾರಿ ಇಳಿಕೆಯಾಗಲಿದೆ ಎಲ್​ಪಿಜಿ ಬೆಲೆ; ಸಿಎನ್​ಜಿ, ಪಿಎನ್​ಜಿ ದರವೂ ಕುಸಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts