Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಬೇಸಿಗೆ ಶಿಬಿರಗಳು ಮತ್ತು ಇಕಾಲಜಿಯ ಸತ್ಯಗಳು

Saturday, 06.05.2017, 3:05 AM       No Comments

ಮಕ್ಕಳನ್ನು ನಾಲ್ಕುಗೋಡೆಯ ನಡುವೆಯೇ ಕೂಡಿಹಾಕಿ ನೀಡುವ ಶಿಕ್ಷಣ ‘ಮಾಹಿತಿ ತುಂಬುವ’ ಕಸರತ್ತಾಗುವುದೇ ವಿನಾ, ಪ್ರತ್ಯಕ್ಷಾನುಭವ ನೀಡದು. ಮಕ್ಕಳನ್ನು ಕಾಡು, ತೊರೆ, ಜಲಪಾತಗಳೆಡೆಗೆ ಒಯ್ದು ಪ್ರಕೃತಿಯ ರಸಾನುಭೂತಿಯನ್ನು ಉಣಬಡಿಸಿದರೆ, ತಾವೂ ಈ ನಿಸರ್ಗದ ಒಂದು ಪುಟ್ಟಭಾಗವಾಗಿದ್ದೇವೆ ಎಂಬ ಭಾವನೆ ಅವರಲ್ಲಿ ಅಚ್ಚೊತ್ತುವುದರಲ್ಲಿ ಸಂದೇಹವಿಲ್ಲ.

 ಈ ದೇಶದ ಎಲ್ಲ ಶಾಲೆಗಳೂ ಹೀಗೆಯೇ. ಸಂಜೆ ಲಾಂಗ್​ಬೆಲ್ ಆಗುವಾಗ ಮಕ್ಕಳು ‘ಹುರ್ರೇ’ ಎಂದು ಹುಚ್ಚೆದ್ದು ತರಗತಿ ಕೋಣೆಗಳಿಂದ ಹೊರಗಡೆ ಹಾರಿಬಂದು ಅಂಗಳಕ್ಕೆ ಇಳಿದು ಕುಣಿಯುತ್ತಾ ತಮ್ಮ ತಮ್ಮ ಮನೆಯ ದಾರಿ ಹಿಡಿಯುತ್ತವೆ. ಮರುದಿನ ಬೆಳಗ್ಗೆ ಅದೇ ಶಾಲೆಗೆ ಬರುವ ಅದೇ ಮುಖಗಳನ್ನು ನೋಡಬೇಕು. ಅದೇ ವಿಷಾದ, ಅದೇ ನೋವು, ಮಣಭಾರದ ಚೀಲ. ತರಗತಿಯೊಳಗಡೆ ಸಂತಾಪಸೂಚಕ ಸಭೆಯ ಹಾಗೆಯೇ. ಗೆಲುವು ಇಲ್ಲ, ನಲಿವು ಇಲ್ಲ. ಮಿಲಿಟರಿ ಶಾಲೆಯಂತೆ. ಎಲ್ಲದರಲ್ಲೂ ಅಚ್ಚುಕಟ್ಟು, ಮಿತಿಮೀರಿದ ಶಿಸ್ತು.

ಬಲಿಯಾಗುತ್ತಿವೆ ಪುಟ್ಟಜೀವಗಳು: ನನಗೊಂದು ಹುಚ್ಚು ಆಸೆ. ಸಂಜೆ ಶಾಲೆ ಬಿಡುವಾಗ ಮಕ್ಕಳ ಮುಖದಲ್ಲಿರುವ ಖುಷಿ, ಸಂತೋಷ, ಸಂಭ್ರಮ, ಉಲ್ಲಾಸ ಇವೆಲ್ಲ ಬೆಳಗ್ಗೆ ಅವರು ಸ್ಕೂಲಿಗೆ ಬರುವಾಗಲೂ ಇರುವಂತಹ ಶಾಲೆ. ಯಂತ್ರ ಮಾಡದೆ ಮಕ್ಕಳನ್ನು ಮಕ್ಕಳಂತೆಯೇ ಕಲಿಸುವ-ನೋಡಿಕೊಳ್ಳುವ ಶಾಲೆ. ಬಹುಶಃ ಇಲ್ಲ ಎನ್ನುವಷ್ಟು ಕಡಿಮೆ. ಈ ಜಗತ್ತಿನ ಪ್ರತಿ ಮಗುವಿಗೂ ಬೇಕಾಗುವ, ಬೇಕಾಗಿಯೇ ಇರುವ ಆ ಸುಖವನ್ನು ಹಿರಿಯರು ಅಂದರೆ ಅವರ ತಂದೆ-ತಾಯಿ ಕಟ್ಟಿದ ನಾಗರಿಕತೆ ಕಸಿದುಕೊಂಡಿದೆ. ತಮ್ಮ ತಮ್ಮ ಹುಚ್ಚಿನ ಅಚ್ಚಿಗೆ ಎರಕ ಹೊಯ್ಯುವ ಪ್ರಯತ್ನಕ್ಕೆ ಈ ಪುಟ್ಟಜೀವಗಳು ಬಲಿಯಾಗುತ್ತಿವೆ.

ನನ್ನ ಶಾಲಾದಿನಗಳು ನೆನಪಾಗುತ್ತಿವೆ. ಪ್ರತಿ ಮಗುವೂ ಆಗ ನನ್ನ ಹಾಗೆಯೇ ನಡೆದೇಹೋಗಬೇಕು. ಶಾಲೆಯ ಆ ದಾರಿಯನ್ನು ವರ್ತಮಾನದ ಮಗು ಕಳಚಿಕೊಂಡದ್ದೇ ಬಹುದೊಡ್ಡ ಕೊರತೆ. ವಿಮಾನ ಚಿಟ್ಟೆಯ ಬಾಲಮುರಿದು ಅದಕ್ಕೆ ಕೀಸ್ತಾರದ ಹೂವು ಸಿಕ್ಕಿಸಿ ಹಾರಿಬಿಡುತ್ತಿದ್ದುದು, ಪಾಟಿಚೀಲವನ್ನು ಯಾವುದಾದರೂ ಮರದ ಕೊಂಬೆಗೆ ನೇತುಹಾಕಿ ಹೊಳೆ ಕೋಡಿಗೆ ಇಳಿದು ಮರಳಲ್ಲಿ ಮನೆ ಕಟ್ಟುತ್ತಿದ್ದುದು, ಮೀನು ಹಿಡಿಯುತ್ತಿದ್ದುದು, ಊರು ಸೇರುವ ದಾರಿಯಲ್ಲಿ ಅಡ್ಡವಾದ ಪಾಲ-ಸಂಕದ ಮೇಲೆ ಕೂತು ಕೆಳಗೆ ಹರಿಯುತ್ತಿದ್ದ ಕೆಂಪುನೀರಿಗೆ ಕಾಲುಕೊಟ್ಟು ಆ ಒಯ್ಲು-ಸುಳಿಯ ಸುಖ ಅನುಭವಿಸುತ್ತಿದ್ದುದು, ಕಾಡು ನುಗ್ಗಿ ಬಗೆಬಗೆಯ ಹಣ್ಣುಗಳನ್ನು ತಿನ್ನುತ್ತಿದ್ದುದು, ಮಳೆ, ಚಳಿ, ಸಿಡಿಲು-ಗುಡುಗು, ಹೊಳೆ, ಬೆಟ್ಟ, ಕಾಡು, ಕಣಿವೆಯ ಒಳಗೆಲ್ಲ ಒಂದು ಇರುವೆಯಂತೆ, ಒಂದು ನವಿಲಿನಂತೆ ಪಾಲು ಪಡೆದು ರಾತ್ರಿಯಾಗುವಾಗ ಮನೆ ಸೇರಿ ಮತ್ತೆ ಅದೇ ದಾರಿಯಲ್ಲಿ ಮರುದಿನ ಶಾಲೆ ಸೇರಿದ ಸುಖ, ಪರಮಸುಖ ಇವತ್ತಿನ ಮಗುವಿಗೆ ಎಲ್ಲಿದೆ?

ಕೋಳಿಗೂಡಿನ ಥರದ ಆಟೋರಿಕ್ಷಾದಲ್ಲಿ ಹತ್ತಿಪ್ಪತ್ತು ಮಕ್ಕಳನ್ನು ತುಂಬಿಕೊಂಡು ಶಾಲೆಯ ಮುಂದೆ ಅವರನ್ನು ಸುರಿಯುವ, ಅದೇ ಶಾಲೆಯ ತರಗತಿಯೊಳಗಡೆ ಪುಸ್ತಕದೊಳಗಡೆಯ ಪುಟ ಬಿಡಿಸಿ ಇದು ಮರ, ಹುಲಿ, ಚಿಟ್ಟೆ, ನವಿಲು ಎಂದು ಪುಸ್ತಕದ ಬದನೆಕಾಯಿಯನ್ನು ತೋರಿಸುವ ವರ್ತಮಾನ ಪ್ರಕೃತಿಯ ಬೀಜವನ್ನು, ತಾನೂ ಈ ನಿಸರ್ಗದ ಒಂದು ಪುಟ್ಟ ಭಾಗವೆಂಬ ಭಾವನೆಯನ್ನು ಬಿತ್ತುವುದೇ ಇಲ್ಲ.

ಇವತ್ತಿನ ಮಗುವಿಗೂ ಅದೇ ಸೇತುವೆ, ಅದೇ ಹೊಳೆ, ಅದೇ ಕೆಂಪುನೀರು, ಅದರಡಿಯ ಮೀನು, ಕಪ್ಪೆ, ಹಾವು, ಕಾಡುಕಾಯಿ-ಹೂವು, ಮರಳಿನ ಆಟ, ಕಣ್ಣಾಮುಚ್ಚಾಲೆ ಎಲ್ಲದರಲ್ಲೂ ಆಸೆ-ಆಸಕ್ತಿ ಇದೆ. ಆದರೆ ಅವರನ್ನು ಹೆತ್ತ ನಮ್ಮಲ್ಲಿ ಹಿಂಗದ ಆಸೆ-ಅಪೇಕ್ಷೆಗಳು ಮಿತಿಮೀರಿ ಅವರ ಸಹಜ-ಸ್ವಾಭಾವಿಕ ಬದುಕು ಬದಲಾಗಿ ದೊಡ್ಡವರ ಎರಕದಲ್ಲೇ ಅವರು ಬೆಳೆಯಬೇಕಾಗಿದೆ.

ಬಗೆಬಗೆಯ ಪ್ರಲೋಭನೆಗಳು: ಇನ್ನೇನು ಕೆಲವೇ ಕೆಲವು ದಿನ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಫಲಿತಾಂಶ ಪ್ರಕಟವಾಗಬೇಕು. ಗರಿಷ್ಠ ಅಂಕ, ರ್ಯಾಂಕು ಪಡೆದವರ ಫೋಟೋ ಛಾಪಿಸಿ ಹೆದ್ದಾರಿ ಉದ್ದಕ್ಕೂ ಜಾಹೀರಾತುಗಳು ರಾರಾಜಿಸುತ್ತವೆ. ‘ಬನ್ನಿ, ಬನ್ನಿ. ನಮ್ಮಲ್ಲಿ ಬನ್ನಿ. ಮುಂದಿನ ಬಾರಿ ಇದೇ ಜಾಹೀರಾತಿನಲ್ಲಿ ನಿಮ್ಮ ಮಗುವಿನ ಚಿತ್ರ ಇರುತ್ತದೆ’ ಎಂದೆಲ್ಲಾ ಗಾಳಗಳು ಸಿದ್ಧವಾಗುತ್ತಿವೆ. ಎಷ್ಟೆಷ್ಟು ಮಕ್ಕಳಿಗೆ ಹಿಂಸೆ ಕೊಡುತ್ತಾರೆ, ಎಷ್ಟೆಷ್ಟು ಮಕ್ಕಳಿಗೆ ಬಿಗಿಯಾಗಿ ಟೈ-ಷೂ ಕಟ್ಟಿಸುತ್ತಾರೆ, ಎಷ್ಟೆಷ್ಟು ಹೋಂವರ್ಕ್​ನ ಭಾರದಲ್ಲಿ ದುಡಿಯುತ್ತಾರೆ, ಎಷ್ಟೆಷ್ಟು ಹೆಚ್ಚೆಚ್ಚು ಫೀಸು ತೆಗೆದುಕೊಳ್ಳುತ್ತಾರೆ ಅಂತ ಹೆತ್ತವರು ಶಾಲೆಗಳಲ್ಲೇ ಕ್ಯೂ ನಿಲ್ಲುತ್ತಾರೆ. ಇದರ ಪರಿಣಾಮ ನಮ್ಮ ಮುಂದೆಯೇ ಇದೆ. ಒಂದು ಭ್ರಾಂತಿ, ಮನೋವಿಕಾರದ ಸೃಷ್ಟಿ ಎಲ್ಲೆಡೆ ತುಂಬಿದೆ.

ಈಗ ಶಾಲೆಗಳಿಗೆ ರಜೆಯ ಅವಧಿ. ಮಕ್ಕಳಿಗೆ? ಹೊಸದಾಗಿ ಬೇಸಿಗೆ ಶಿಬಿರಗಳು. ಮತ್ತದೇ ಜಾಹೀರಾತು. ಅದೇ ಸಂಪನ್ಮೂಲ ವ್ಯಕ್ತಿಗಳು. ಚಿತ್ರ, ಕೊಲಾಜ್, ಗಾಳಿಪಟ, ಆವೆಮಣ್ಣು, ಹಾಡು, ಪ್ರಹಸನ, ನಾಟ್ಯ, ಮುಖವಾಡ, ಕಿರುನಾಟಕ- ವಾರದ ಅವಧಿಗೆ ಸಾವಿರಾರು ರೂ. ಫೀಸು. ಶಾಲೆಗೂ-ಶಿಬಿರಕ್ಕೂ ಒಂದೇ ಒಂದು ವ್ಯತ್ಯಾಸ. ಪುಸ್ತಕ-ಚೀಲ ತರುವ ಕಿರಿಕಿರಿಯಿಲ್ಲ. ಗೋಡೆ ನಡುವಿನ ಬಂಧನವಿಲ್ಲ. ಮಕ್ಕಳೆಲ್ಲಾ ಅಂಗಳದಲ್ಲಿರುತ್ತಾರೆ. ಬಾವಿಯಿಂದ ಮೇಲೆ ಬರುತ್ತಾರೆ. ಶಿಬಿರದ ಸುಖ, ಅನುಭವ, ಕಲಿಕೆ ಎಷ್ಟು ದಿನ ಉಳಿಯುತ್ತದೆ? ಮತ್ತೆ ಅದೇ ಶಾಲೆ, ಅದೇ ಸಿಲಬಸ್, ಅದೇ ಮೇಷ್ಟ್ರು, ಅದೇ ಗಂಟೆ, ಅದೇ ಹೋಂವರ್ಕ್. ಆ ವ್ರತದಲ್ಲಿ ಶಿಬಿರದ ಸುಖ ನಿಧಾನವಾಗಿ ಇಂಗಿಹೋಗುತ್ತದೆ. ಶಿಕ್ಷಣದಾರಿಯ ಆಮಿಷ, ಅಪ್ಪ-ಅಮ್ಮನ ಆಸೆಯಲ್ಲೇ ಮಗು ಹತಾಶವಾಗುತ್ತದೆ. ಅಂಕದ ಆಸೆಗೆ ಹೆಣಗುತ್ತದೆ.

ಅರಿವೇ ಗುರು: ನಮ್ಮ ಶಾಲೆ, ಪಠ್ಯ, ಶಿಕ್ಷಕರ ಹಾಗೆಯೇ ಈ ಶಿಬಿರಗಳೂ ಬದಲಾಗುವುದಿಲ್ಲ. ಬದಲಾಗಬೇಕು, ಬರೀ ರ್ಚವಿತ-ಚರ್ವಣಗಳಾಗಬಾರದು. ಮಕ್ಕಳನ್ನು ಗೋಡೆ, ಅಂಗಳ, ಊರು ದಾಟಿಸಿ ಕಾಡು-ಪ್ರಕೃತಿಯ ಒಳಗೆ ಒಯ್ಯಬೇಕು. ಕಳೆದ ವರ್ಷ ಗುತ್ತಿಗಾರು ಸಮೀಪ ಪಶ್ಚಿಮಘಟ್ಟದ ನಡುವೆ ಇರುವ ಹಳ್ಳಿಗಾಡಿನ ಮಕ್ಕಳಿಗೆ ಸ್ಥಳೀಯ ಪತ್ರಕರ್ತ ಮಹೇಶ್ ನಡೆಸಿದ ಶಿಬಿರಕ್ಕೆ ಭೇಟಿನೀಡಿದ್ದೆ. ಅವರು ಮೊದಲ ದಿನ ಮಾಡಿದ್ದು ಇಷ್ಟೇ. ಎಲ್ಲಾ ಪುಟ್ಟಮಕ್ಕಳನ್ನು ಊರಿನ ನಡುವೆ ಹರಿಯುವ ಹೊಳೆಗೆ ಇಳಿಸಿ ಹೊಳೆಯ ದಂಡೆಯಲ್ಲೇ ಸುಮಾರು ಎರಡು ಕಿ.ಮೀ. ನಡೆಸಿದ್ದು. ಅದೇ ಊರಿನ ಮಕ್ಕಳು, ಅದೇ ಊರಿನ ಹೊಳೆ. ಅದರ ಉದ್ದ-ಅಗಲ, ಆಳ, ಹೆಸರು, ನೀರಬಳಕೆ, ಗಿಡಮೂಲಿಕೆಗಳು, ಮರಳು, ಕಲ್ಲು, ಜಲಚರಗಳು- ಎಲ್ಲದರ ಪರಿಚಯವೂ ಆ ಮಕ್ಕಳಿಗಾಯಿತು. ಮಕ್ಕಳು ಕಂಡದ್ದು ದಾಖಲಿಸಿದರು. ಅಲ್ಲಲ್ಲಿ ನೀರಿಗಿಳಿದು ಈಜಿದರು. ಹೊಳೆದಂಡೆಯಲ್ಲೇ ಉಂಡರು. ಮೀನುಹಿಡಿದರು. ಕಲ್ಲುಗಳನ್ನು ಎತ್ತಿತಂದರು. ಮರಳಮನೆ ಕಟ್ಟಿದರು. ಅಷ್ಟೂ ಮಕ್ಕಳ ಮನಸ್ಸಿನಲ್ಲಿ ತಮ್ಮ ಊರ ನಡುವೆ ಹರಿಯುವ ಹೊಳೆ ಅಚ್ಚಾಯಿತು. ಅದು ಎಲ್ಲಿ ಹುಟ್ಟುತ್ತದೆ, ಎಲ್ಲಿ ಸೇರುತ್ತದೆ ಗೊತ್ತಾಯಿತು. ಆ ಹೊಳೆ ಇಲ್ಲದೆ ತಮ್ಮ ಊರಿಗೆ ಬದುಕೇ ಇಲ್ಲ ಎಂಬುದು ಗೊತ್ತಾಯಿತು. ತಮ್ಮೂರಿನ ಕೃಷಿಬದುಕು ಇರುವುದೇ ಆ ಹೊಳೆಯಿಂದ ಎಂಬ ಅರಿವು ಬಂತು. ನಾವು ಗಂಗೆಯ ಬಗ್ಗೆ ಮಾತನಾಡುತ್ತೇವೆ, ಕಾವೇರಿಯ ಬಗ್ಗೆ ಮಾತನಾಡುತ್ತೇವೆ, ತಿರುಗುವ ನೇತ್ರಾವತಿಯ ಬಗ್ಗೆ ಮಾತನಾಡುತ್ತೇವೆ. ಆದರೆ ನಮಗೆ ನಮ್ಮ ಮನೆಮುಂದೆ ಹರಿಯುವ ಪುಟ್ಟ ತೊರೆಯ, ಹೊಳೆಯ ಹೆಸರೇ ಗೊತ್ತಿರುವುದಿಲ್ಲ. ನಮ್ಮ ತರಗತಿಯೊಳಗಡೆ ಪುಸ್ತಕ ಇಟ್ಟುಕೊಂಡು ಪ್ರಕೃತಿಯನ್ನು ಬೋಧಿಸುತ್ತೇವೆ. ಕರಿಹಲಗೆಯ ಮೇಲೆ ರೇಖೆ ಎಳೆದು ಇಲ್ಲಿಂದ ಇಲ್ಲಿಯವರೆಗೆ ಎಂದು ನದಿಯನ್ನು ಗುರುತಿಸುತ್ತೇವೆ. ಆದರೆ ಅದೇ ನದಿ ನಮ್ಮ ಕಣ್ಮುಂದೆ ಇದ್ದರೂ ಮರೆಯುತ್ತೇವೆ.

ನಮ್ಮ ಮಕ್ಕಳು ಐಟಿ-ಬಿಟಿಯಲ್ಲಿ ಭವಿಷ್ಯದಲ್ಲಿ ಏನೇ ಸಾಧಿಸಲಿ, ಕಲಿಕೆಯ ದಾರಿಯಲ್ಲೇ ಜಗತ್ತಿನ ಯಾವುದೇ ಮೂಲೆ ಸೇರಲಿ, ಆದರೆ ಈ ಜಗತ್ತಿನ ಕೊನೆಯ ವ್ಯಕ್ತಿಯವರೆಗೂ ಅವನಿಗೆ ಬೇಕಾದ ಗಾಳಿ, ನೀರು, ಆಹಾರಗಳು ಇದೇ ಪ್ರಕೃತಿಯಿಂದ ಬರಬೇಕು. ಅದಕ್ಕಾಗಿ ನಾವು ಪ್ರಕೃತಿಯನ್ನು ಅವಲಂಬಿಸಬೇಕು ಎಂಬುದು ನಿರ್ವಿವಾದ.

ಪ್ರಕೃತಿಯ ಅವಸಾನ ನಮ್ಮ ಅವಸಾನವೂ ಹೌದು ಎಂಬುದು ನಮ್ಮ ಪಠ್ಯದ ಭಾಗವಾಗಬೇಕು. ಕೃಷಿ, ಪರಿಸರ, ಪ್ರಕೃತಿ, ನೆಲ-ಜಲಗಳು ನಮ್ಮ ಶಿಕ್ಷಣದಲ್ಲಿ ಮಕ್ಕಳ ಆಯ್ಕೆಗಳಲ್ಲ, ಅನಿವಾರ್ಯಗಳಾಗಬೇಕು. ಅವು ನಮ್ಮ ಮೂಲಪಠ್ಯದಲ್ಲೇ ಸೇರಬೇಕು. ನಮ್ಮ ಶಿಕ್ಷಣ ಮಗುವಿಗೆ ಇಂದು ಉದ್ಯೋಗದ ದಾರಿ ತೋರಿಸುತ್ತಿದೆ, ಬದುಕಿನ ದಾರಿ ತೋರಿಸುವುದಿಲ್ಲ. ಅರಿವು ನೆಲಕೇಂದ್ರಿತವಾದಾಗ ಮಾತ್ರ ಇಂಥ ಸೂಕ್ಷ್ಮಗಳು, ಬೇರುಸತ್ಯ-ಸತ್ವಗಳು ದಕ್ಕುತ್ತವೆ.

(ಲೇಖಕರು ಕನ್ನಡ ಪ್ರಾಧ್ಯಾಪಕರು ಮತ್ತು ಪರಿಸರಾಸಕ್ತ ಕೃಷಿಕರು)

Leave a Reply

Your email address will not be published. Required fields are marked *

Back To Top