Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ಕೌಟುಂಬಿಕ ಮೌಲ್ಯಗಳ ಅನುಷ್ಠಾನದಲ್ಲಿದೆ ತಲಾಕ್​ಗೆ ಪರಿಹಾರ

Tuesday, 13.06.2017, 3:00 AM       No Comments

ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬ ವ್ಯವಸ್ಥೆಗೆ, ಅದರ ಮೌಲ್ಯಗಳಿಗೆ ತುಂಬ ಮಹತ್ವವಿದೆ. ಈ ಕಾರಣದಿಂದಲೇ ಕುಟುಂಬ ಮತ್ತು ಸಮಾಜ ಗಟ್ಟಿ ಹಾಗೂ ಸತ್ವಯುತವಾಗಿರಲು ಸಾಧ್ಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಈ ಮೌಲ್ಯಗಳ ಕೊರತೆಯ ಪರಿಣಾಮ ತಲಾಕ್​ನಂಥ ಹಲವು ಸಾಮಾಜಿಕ ಸಮಸ್ಯೆಗಳು ಉಲ್ಬಣವಾಗುತ್ತಿವೆ.

 

ಮದುವೆ, ಬಾಳಸಂಗಾತಿಯ ವಿಷಯ ಬಂದಾಗ ಕುಟುಂಬದ ಹಿರಿಯರು ಸಾಮಾನ್ಯವಾಗಿ ಹೇಳುವ ಮಾತನ್ನು ನೀವೂ ಕೇಳಿಯೇ ಇರುತ್ತೀರಿ. ‘ಆ ಭಗವಂತ ಜೋಡಿಗಳನ್ನು ಸ್ವರ್ಗದಲ್ಲಿಯೇ ನಿಶ್ಚಯಿಸಿರುತ್ತಾನೆ. ದಾಂಪತ್ಯದ ಬಂಧಕ್ಕೆ ಅಲ್ಲೇ ಬೆಸುಗೆ ಏರ್ಪಟ್ಟಿರುತ್ತದೆ. ಅದೆಲ್ಲವೂ ಪೂರ್ವನಿಶ್ಚಿತ. ಇಲ್ಲಿ (ಭೂಮಿಯಲ್ಲಿ) ನಡೆಯುವುದು ನಿಮಿತ್ತ ಮಾತ್ರ’ ಎಂಬುದೇ ಆ ನುಡಿ. ಹೀಗಾಗಿಯೇ ಮದುವೆ ಎಂಬ ವ್ಯವಸ್ಥೆಗೆ ನಮ್ಮ ಸಮಾಜದಲ್ಲಿ ತುಂಬ ಮನ್ನಣೆಯಿದೆ. ಮದುವೆಯೆಂದರೆ ಗಂಡು-ಹೆಣ್ಣು ಕೇವಲ ಸತಿ-ಪತಿಗಳಾಗಿ ಬದಲಾಗುವುದಲ್ಲ. ಹೀಗೆ ಸತಿ-ಪತಿಯಾಗುವ ಜೋಡಿಯು ಸಂಸಾರದ ಸರ್ವ ಜವಾಬ್ದಾರಿಗಳನ್ನು ನಿರ್ವಹಿಸಬೇಕು, ಸಂತಾನಕ್ಕೆ ಎಲ್ಲ ಸಂಸ್ಕಾರಗಳನ್ನು ನೀಡಿ ಉತ್ತಮ ಪ್ರಜೆಯಾಗಿ ರೂಪಿಸಬೇಕು. ಅದೆಲ್ಲಕ್ಕಿಂತಲೂ ಮುಖ್ಯವಾಗಿ, ಸಂಬಂಧಗಳ ಮಹತ್ವ ಅರಿತುಕೊಂಡು ಕುಟುಂಬದಲ್ಲಿ ಯಾರನ್ನೂ ಅವಗಣನೆ ಮಾಡದೆ, ನೋವು ನೀಡದೆ ಪರಿವಾರದ ರಥವನ್ನು ಮುಂದೆ ಕೊಂಡೊಯ್ಯಬೇಕು. ಇದೆಲ್ಲ ಸಾಧ್ಯವಾಗುವುದು ಹೇಗೆ? ಈ ರೀತಿ-ನೀತಿಗಳನ್ನು, ಮೌಲ್ಯಗಳನ್ನು ಯಾವುದೇ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿಸುವುದಿಲ್ಲ. ಇದು ಸಾಕಾರವಾಗಬೇಕಾಗಿದ್ದು ಕೌಟುಂಬಿಕ ಮೌಲ್ಯಗಳಿಂದಲೇ. ಅಂದರೆ, ಕುಟುಂಬದಲ್ಲಿ ಅಂಥದ್ದೊಂದು ವ್ಯವಸ್ಥೆ, ವಾತಾವರಣ ನಿರ್ವಣವಾಗಬೇಕು. ಅದಕ್ಕಾಗಿ, ಕುಟುಂಬದ ಪ್ರತಿ ಸದಸ್ಯರನ್ನೂ ಗೌರವ, ಪ್ರೀತಿ, ಮಮತೆ, ಘನತೆಯಿಂದ ಕಾಣುವ ಮನೋಭಾವ ಇರಬೇಕು. ಆಗಲೇ, ಕುಟುಂಬಗಳು ಸಮಾಜದ ಆಸ್ತಿಯಾಗುತ್ತವೆ.

ನಾನು ಪ್ರವಾಸ ಹೋದ ಎಷ್ಟೋ ಕಡೆ ಅವಿಭಕ್ತ ಕುಟುಂಬಗಳನ್ನು, ಅಲ್ಲಿ ಸಂಬಂಧ, ಅಂತಃಕರಣಕ್ಕಿರುವ ಮಹತ್ವವನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ. ಅದಕ್ಕಾಗಿಯೇ ಅಲ್ಲೆಲ್ಲ ವಿವಾಹ ವ್ಯವಸ್ಥೆ ಕುಸಿಯದೆ ಭದ್ರವಾಗಿ ಉಳಿಯುತ್ತದೆ. 40-50 ವರ್ಷ ಅನ್ಯೋನ್ಯವಾಗಿ ದಾಂಪತ್ಯ ನಡೆಸಿದವರನ್ನು ಕಂಡಾಗ ಖುಷಿಯಾಗುತ್ತದೆ. ಕುಟುಂಬ ವ್ಯವಸ್ಥೆ ಹಾಗೂ ಮೌಲ್ಯಗಳು, ಜಗಳ, ಅಂತಃಕಲಹ, ದುರಾಸೆ, ಸ್ವಪ್ರತಿಷ್ಠೆ, ಅಹಂಕಾರಗಳಿಗೆ ಆಸ್ಪದ ನೀಡುವುದಿಲ್ಲ. ಅದೇ, ಕುಟುಂಬದ ಬೇರುಗಳೇ ಶಿಥಿಲವಾಗಿದ್ದರೆ ಅಲ್ಲಿ ಹಲವು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದುಂಟು.

ವಿವಾಹ ಎಂಬ ಪವಿತ್ರ ಸಂಬಂಧ: ಶರೀಯತ್ ಇಸ್ಲಾಂ ಸಮುದಾಯಕ್ಕೆ ಸಂಬಂಧಿಸಿದ್ದು. ಶರೀಯತ್​ನಲ್ಲಿ ಎರಡು ಶಬ್ದ ಅಥವಾ ವ್ಯವಸ್ಥೆಗಳ ಬಳಕೆ ವ್ಯಾಪಕ ಪ್ರಮಾಣದಲ್ಲಿ ಆಗುತ್ತದೆ. ಒಂದು ನಿಕಾಹ್, ಮತ್ತೊಂದು ತಲಾಕ್. ಇವೆರಡೂ ಎಂಥ ವಿರೋಧಾಭಾಸದ ಪದಗಳು ನೋಡಿ! ಮುಸ್ಲಿಂ ಯುವಕ ಮತ್ತು ಯುವತಿ ಜೀವನಸಂಗಾತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸುವಾಗ ಹೇಳುವ ಮಂತ್ರವನ್ನು ನಿಕಾಹ್ ಎಂದು ಹೇಳಲಾಗುತ್ತದೆ. ನಿಕಾಹ್ ಓದಿದ ಬಳಿಕ ಯುವಕ-ಯುವತಿ ಪತಿ-ಪತ್ನಿಯಾಗಿ ಗೃಹಸ್ಥಾಶ್ರಮ ಸೇರುತ್ತಾರೆ. ಇದೇ ಜೋಡಿ ಬೇರ್ಪಡಬೇಕಾದರೆ, ಸಂಬಂಧಗಳಿಗೆ ವಿದಾಯ ಹೇಳಬೇಕಾದರೆ ‘ತಲಾಕ್’ ಪ್ರಕ್ರಿಯೆ ಅನುಸರಿಸಲಾಗುತ್ತದೆ. ಇದನ್ನು ಯಾಕೆ ಪ್ರಸ್ತಾಪಿಸಿದೆನೆಂದರೆ, ವಿಶ್ವದ ಬಹುತೇಕ ಧರ್ಮಗಳು ವಿವಾಹ ವ್ಯವಸ್ಥೆ ಹೇಗಿರಬೇಕು ಎಂದು ವ್ಯಾಖ್ಯಾನಿಸಿ, ಬಹುತೇಕ ಆ ಪ್ರಕಾರ ನಡೆದುಕೊಳ್ಳುತ್ತಿವೆ. ಗಮನಿಸಬೇಕಾದ್ದು ಎಂದರೆ ಈ ಧರ್ಮಗಳು ವಿವಾಹ ವ್ಯವಸ್ಥೆ ಬಗ್ಗೆ ಅಂದರೆ ಸಂಬಂಧಗಳನ್ನು ಬೆಸೆಯುವ ಬಗ್ಗೆ ಹೇಳಿವೆಯೇ ಹೊರತು ವಿಚ್ಛೇದನ (ಸಂಬಂಧ ಮುರಿಯುವುದು)ದ ಬಗ್ಗೆ ಅಲ್ಲ. ಯಾವುದೋ ಕಾರಣಕ್ಕೆ ಗಂಡ-ಹೆಂಡತಿ ಬೇರೆಯಾಗುವುದು ಅನಿವಾರ್ಯವಾದರೆ ಅದಕ್ಕೆ ಕಾನೂನು ನೆರವಾಗುತ್ತದೆ. ಕಾನೂನು/ನ್ಯಾಯಾಲಯ ಕೂಡ ದಿಢೀರನೆ ವಿಚ್ಛೇದನ ನೀಡುವುದಿಲ್ಲ. ಮೊದಲಿಗೆ, ಗಂಡ-ಹೆಂಡತಿಯಲ್ಲಿ ಸಂಧಾನ ಮಾಡಿಸಲು, ಆ ಸಂಬಂಧವನ್ನು ಉಳಿಸಲು ಯತ್ನಿಸುತ್ತದೆ. ಅವರಿಬ್ಬರೂ ಒಟ್ಟಾಗಿ ಬಾಳಲು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ ಇದ್ದಲ್ಲಿ ಮಾತ್ರ ವಿಚ್ಛೇದನಕ್ಕೆ ಅನುಮತಿ ನೀಡುತ್ತದೆ. ಆದರೆ, ಮದುವೆ ವ್ಯವಸ್ಥೆಯನ್ನು ರೂಪಿಸಿದ ಧರ್ಮ ಇಲ್ಲೆಲ್ಲೂ ಮಧ್ಯಪ್ರವೇಶಿಸುವುದಿಲ್ಲ. ಮುಸ್ಲಿಂರಲ್ಲಿ ನಿಕಾಹ್ ಮತ್ತು ತಲಾಕ್ ಎರಡನ್ನೂ ಧರ್ಮದ ಹೆಸರಿನಲ್ಲಿ ನಿರ್ಧರಿಸಲಾಗುತ್ತದೆ.

ಸಿಗುತ್ತಿಲ್ಲ ಪರಿಹಾರದ ಹಾದಿ: ಇತ್ತೀಚಿನ ದಿನಗಳಲ್ಲಂತೂ ತಲಾಕ್ ರಾಷ್ಟ್ರೀಯ ಸಮಸ್ಯೆಯಾಗಿ, ರಾಷ್ಟ್ರೀಯ ಚರ್ಚಾವಿಷಯವಾಗಿ ಮಾರ್ಪಟ್ಟಿದೆ. ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಸಾವಿರಾರು ಮಹಿಳೆಯರು ತಲಾಕ್ ವಿರುದ್ಧ ದನಿಯೆತ್ತಿದ್ದಾರೆ, ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತಲಾಕ್ ತಮ್ಮ ನೆಮ್ಮದಿಯನ್ನು, ಬದುಕುವ ಹಕ್ಕನ್ನು ಕಿತ್ತುಕೊಳ್ಳುತ್ತಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಪ್ರಕರಣ ಸವೋಚ್ಚ ನ್ಯಾಯಾಲಯಕ್ಕೂ ತಲುಪಿದೆ. ವಿಚಾರಣೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಾಗೂ ಮುಸ್ಲಿಂ ಮಹಿಳಾ ಸಂಘಟನೆಗಳು ತಲಾಕನ್ನು ವಿರೋಧಿಸಿವೆ. ಸಾಮಾಜಿಕ ಚಿಂತಕರು, ಮನೋವಿಜ್ಞಾನಿಗಳು, ಹಲವು ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳು ಈ ನಿಟ್ಟಿನಲ್ಲಿ ಚರ್ಚೆ, ವಿಚಾರ-ವಿಮರ್ಶೆ ನಡೆಸುತ್ತಿದ್ದಾರೆ, ಪರಿಹಾರದ ದಾರಿಯನ್ನು ಹುಡುಕುತ್ತಿದ್ದಾರೆ. ಆದರೂ, ತಲಾಕ್ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂಬುದು ಅಚ್ಚರಿಯ ಹಾಗೂ ವಿಷಾದದ ಸಂಗತಿ. ವಾಟ್ಸ್​ಆಪ್, ಫೇಸ್​ಬುಕ್, ಸ್ಪೀಡ್​ಪೋಸ್ಟ್ ಮೂಲಕವೂ ತಲಾಕ್ ನೀಡಲಾಗುತ್ತಿದೆ ಎಂದರೆ ಈ ವಿಚಿತ್ರ ಮನಸ್ಥಿತಿಯ ಬಗ್ಗೆ ಕಳವಳವಾಗುತ್ತದೆ, ಸಂಬಂಧಗಳು ಅದೆಷ್ಟು ಅಗ್ಗದಲ್ಲಿ ಮುರಿದು ಹೋಗುತ್ತಿವೆಯಲ್ಲ ಎಂದು ವೇದನೆಯಾಗುತ್ತದೆ.

ಸಣ್ಣ ಕಾರಣಕ್ಕೆ ಸಂಸಾರದ ವಿಭಜನೆ: ಯಾವೆಲ್ಲ ಕಾರಣಗಳಿಗಾಗಿ ತಲಾಕ್ ನೀಡಲಾಗುತ್ತಿದೆ ಎಂಬುದನ್ನು ಅವಲೋಕಿಸಿದರೆ ಗಾಬರಿಯಾಗುತ್ತದೆ. ಇದು ಇತ್ತೀಚೆಗಷ್ಟೇ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದ ಘಟನೆ. ಎರಡು ದಿನದ ಮಟ್ಟಿಗಾಗಿ ತವರುಮನೆಗೆ ಹೋದ ಹೆಂಡತಿಯನ್ನು ಕರೆಯಲು ಹೋದ ಗಂಡ. ಸಂಜೆ ಮನೆಗೆ ಮರಳಬೇಕಿತ್ತು. ಪತ್ನಿ ಗಂಡನಿಗೆ ರಂಜಾನ್ ಉಪವಾಸದ ಬಳಿಕ ಇಫ್ತಾರ್​ಗಾಗಿ ಖರ್ಜೂರ ತರಲು ಹೇಳಿದಳು. ಅತ್ತೆ ಮನೆಗೆ ಬಂದಾಗ ಇದು ತನಗೆ ಮಾಡಿದ ಅವಮಾನ ಎಂದು ಭಾವಿಸಿಕೊಂಡ ಈ ಪತಿರಾಯ ಖರ್ಜೂರ ತರಲು ನಿರಾಕರಿಸಿದ. ಇದಕ್ಕಾಗಿ ಪತ್ನಿಯೂ ಏನೋ ಒಂದು ಮಾತು ಅಂದಳು. ಅಷ್ಟರಲ್ಲೇ, ಇವನ ಆಕ್ರೋಶದ ಕಟ್ಟೆ ಒಡೆದು ‘ತಲಾಕ್ ತಲಾಕ್ ತಲಾಕ್’ ಎಂದು ಹೇಳಿಬಿಟ್ಟ! ಎರಡು ಗಂಟೆ ಬಳಿಕ ಸಿಟ್ಟು ತಣ್ಣಗಾದಾಗ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತಾದರೂ ಪರಿಸ್ಥಿತಿ ಕೈಮೀರಿ ಹೋಗಿತ್ತು. ಇದು ಒಂದೆರಡು ಮನೆಗಳ ಕಥೆಯಲ್ಲ. ಸಣ್ಣಪುಟ್ಟ ವಾದಕ್ಕೋ, ಭಿನ್ನಾಭಿಪ್ರಾಯಕ್ಕೋ, ಮನಸ್ತಾಪಕ್ಕೋ ಬೇಸತ್ತು ಕೂಡಲೇ ತಲಾಕ್ ಹೇಳಿಬಿಡುವ ಅವಸರದ ಬುದ್ಧಿ ಸಂಸಾರಗಳನ್ನೇ ನಾಶ ಮಾಡುತ್ತಿದೆ. ಮಹಿಳೆಯರು, ಮಕ್ಕಳ ಬದುಕನ್ನು ನರಕಸದೃಶವಾಗಿಸುತ್ತಿದೆ. ಇಷ್ಟೆಲ್ಲ ಅರಿವು, ಜಾಗೃತಿ ಮೂಡಿಸಿದರೂ ತಲಾಕ್ ಪ್ರಕರಣಗಳು ಹೆಚ್ಚುತ್ತಿರುವುದಾದರೂ ಏಕೆ ಎಂಬ ಕುರಿತು ಇತ್ತೀಚೆಗೆ ಸಮೀಕ್ಷೆಯೊಂದನ್ನು ಕೈಗೊಳ್ಳಲಾಯಿತು. ದೆಹಲಿ ಮೂಲದ ಸೆಂಟರ್ ಫಾರ್ ರಿಸರ್ಚ್ ಆಂಡ್ ಡಿಫೆನ್ಸ್ ಇನ್ ಡೆವಲಪ್​ವೆುಂಟ್ ಪಾಲಿಸಿ(ಸಿಆರ್​ಡಿಡಿಪಿ) ಸಂಸ್ಥೆಯು ಆನ್​ಲೈನ್ ಸಮೀಕ್ಷೆ ನಡೆಸಿ, ತಲಾಕ್​ಗೆ ಕಾರಣಗಳನ್ನು ಶೋಧಿಸುವ ಪ್ರಯತ್ನ ಮಾಡಿತು. ಸುಮಾರು 1 ಲಕ್ಷ ಮುಸಲ್ಮಾನ ಮಹಿಳೆಯರು, ಪುರುಷರು ಪಾಲ್ಗೊಂಡ ಈ ಸಮೀಕ್ಷಾಕಾರ್ಯದ ಉಸ್ತುವಾರಿ ಹೊತ್ತಿದ್ದು ಸಾಚಾರ್ ಸಮಿತಿಯ ಸದಸ್ಯರಾಗಿದ್ದ ಡಾ.ಅಬು ಸಾಲೇಹ್ ಶರೀಫ್.

ಹಲವು ಕಾರಣಗಳು: ತಲಾಕ್​ಗೆ ಪ್ರಮುಖವಾಗಿ ವರದಕ್ಷಿಣೆ ಹಾಗೂ ಮಕ್ಕಳಾಗದಿರುವುದು, ಇಲ್ಲವೆ ಗಂಡುಮಗುವಾಗದಿರುವುದು ಕಾರಣ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂತು. ಆನ್​ಲೈನ್ ಮತದಾನ ಮಾಡಿದವರ ಪೈಕಿ ಶೇ.40ಕ್ಕೂ ಹೆಚ್ಚು ಜನರು ಈ ಕಾರಣಗಳನ್ನು ನಮೂದಿಸಿದ್ದಾರೆ. ಉಳಿದಂತೆ, ಸಂಬಂಧಿಗಳ ಪ್ರಚೋದನೆ, ಕಿರುಕುಳ (ಶೇ.13.27 ಮತ), ಪತಿಯು ಮತ್ತೊಬ್ಬ ಮಹಿಳೆಯೊಡನೆ ಹೊಂದಿರುವ ಸಂಬಂಧ (ಶೇ.10.88 ಮತ) ಕಾರಣ ಎನ್ನಲಾಗಿದೆ. ಇದಲ್ಲದೆ, ಪತ್ನಿ ಬಗ್ಗೆ ಅನುಮಾನ ತಳೆಯುವುದು, ಅಪ್ಪ-ಅಮ್ಮನ ಮಾತು ಕೇಳಿ ಪತ್ನಿಗೆ ಕಿರುಕುಳ ನೀಡುವುದು, ಸಿಟ್ಟು, ಆವೇಶ… ಹೀಗೆ ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಈ ಮೂಲಕ ತಲಾಕ್ ಸಾಮಾಜಿಕ ಸಮಸ್ಯೆಯಾಗಿ ಹೊರಹೊಮ್ಮಿದೆ ಎಂಬುದನ್ನು ಮುಸ್ಲಿಂ ವಿದ್ವಾಂಸರು, ವಿಚಾರವಾದಿಗಳು ಒಪ್ಪಿಕೊಳ್ಳುತ್ತಿದ್ದಾರಾದರೂ ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗುತ್ತಿಲ್ಲ.

ಮನೋಭಾವ ಬದಲಾಗಬೇಕು: ಮುಸ್ಲಿಂ ಕುಟುಂಬಗಳಲ್ಲಿ ಇಷ್ಟೊಂದು ಅಪನಂಬಿಕೆ, ಅಸಮಾಧಾನ, ಅಶಾಂತಿ ಯಾಕೆ ಬೇರೂರುತ್ತಿದೆ ಎಂದು ಅವಲೋಕಿಸಿದಾಗ, ಲೇಖನದ ಆರಂಭದಲ್ಲೇ ಹೇಳಿರುವಂತೆ ಕೌಟುಂಬಿಕ ಮೌಲ್ಯಗಳ ನಾಶವೇ ಕಾರಣವಾಗಿ ಕಂಡುಬರುತ್ತದೆ. ಹಿಂದೂ, ಕ್ರೖೆಸ್ತ, ಪಾರ್ಸಿ ಯಾವುದೇ ಧರ್ಮಗಳು ಕೂಡ ವಿಚ್ಛೇದನವನ್ನು ಪ್ರೋತ್ಸಾಹಿಸುವುದಿಲ್ಲ, ಆ ಬಗ್ಗೆ ಈ ಧರ್ಮಗಳು ಮಾತನಾಡುವುದಿಲ್ಲ. ಏಕೆಂದರೆ, ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವೆ, ಇಲ್ಲಿ ನಡೆಯುವುದೆಲ್ಲ ಕೇವಲ ಔಪಚಾರಿಕ ವಿಧಿ ಎಂದು ಬಲವಾಗಿ ನಂಬಿರುವ ಅವು ಮದುವೆ, ದಾಂಪತ್ಯ, ಸಂಸಾರ… ಈ ಎಲ್ಲ ಪ್ರಕ್ರಿಯೆಗಳನ್ನು ಪವಿತ್ರವಾಗಿ ಕಾಣುತ್ತವೆಯೇ ಹೊರತು ವ್ಯಾವಹಾರಿಕವಾಗಿ ಅಲ್ಲ.

ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯ ಅವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಇನ್ನೆಷ್ಟು ಮಹಿಳೆಯರು, ಮಕ್ಕಳು ತಲಾಕ್ ವ್ಯವಸ್ಥೆಯ ಪೀಡಿತರಾಗಿ ಜೀವನದಲ್ಲಿ ನೋವು ಅನುಭವಿಸಬೇಕು? ಪತಿ-ಪತ್ನಿಯದು ಬಿಡಿಸಲಾಗದ, ಅನನ್ಯ ಬಂಧ. ಕಷ್ಟ-ಸುಖ ಯಾವುದೇ ಬಂದರೂ ಸರಿಸಮನಾಗಿ ಹಂಚಿಕೊಳ್ಳುತ್ತ ಜೀವನವೆಂಬ ಬಂಡಿಯಲ್ಲಿ ಪಯಣಿಸಬೇಕು ಎಂದು ಹೇಳಲಾಗುತ್ತದೆ. ಹೀಗಿರುವಾಗ, ಮೂರು ಕೇವಲ ಶಬ್ದಗಳಿಗೆ ಸಂಬಂಧ, ಸಂಸಾರ ಮುರಿದು ಬೀಳುವುದಾದರೆ ಆ ಸಮಾಜ, ಅಲ್ಲಿ ಸಂವೇದನೆ ಹೊಂದಿರುವ ಮನಸ್ಸುಗಳ ಸ್ಥಿತಿ ಏನಾಗಬೇಕು? ಧರ್ಮವು ಸಂಬಂಧಗಳನ್ನು ಬೆಸೆಯುವುದನ್ನೇ ಹೇಳಿಕೊಡಬೇಕು. ಆಗಲೇ, ಆಯಾ ಸಮುದಾಯಗಳು ಅಲ್ಲಿನ ವಿಚಾರಗಳನ್ನು, ಆದರ್ಶಗಳನ್ನು ವ್ಯಕ್ತಿಗತ ಜೀವನದಲ್ಲಿ ಮೈಗೂಡಿಸಿಕೊಂಡು ಸಾರ್ಥಕ, ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯ.

ಈಗಾಗಲೇ ತಲಾಕ್ ವಿರುದ್ಧ ಹೋರಾಟದ ಜ್ವಾಲೆ ತೀವ್ರಗೊಳ್ಳುತ್ತಿದೆ. ಮಹಿಳೆಯರ ಈ ಕಷ್ಟವನ್ನು ಅರಿತು ಅದಕ್ಕೆ ಸಮುದಾಯವೂ ಸ್ಪಂದಿಸಿದರೆ ಅಭೂತಪೂರ್ವ ಬದಲಾವಣೆಗೆ ನಾಂದಿ ಹಾಡಬಹುದು. ಈಗಲೂ ಕಾಲ ಮಿಂಚಿಲ್ಲ.

 

ತಲಾಕ್ ನೀಡಿದವನಿಗೆ 2 ಲಕ್ಷ ರೂ. ದಂಡ

ಬಹುರ್ಚಚಿತ ತ್ರಿವಳಿ ತಲಾಕ್ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠದ ಮುಂದೆ ನಡೆಯುತ್ತಿರುವ ಮಧ್ಯೆಯೇ ಕೌಟುಂಬಿಕ ಕಲಹ ಮುಂದಾಗಿಸಿಕೊಂಡು ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಛೇದನ ನೀಡಿದ ವ್ಯಕ್ತಿಯೊಬ್ಬನಿಗೆ 2 ಲಕ್ಷ ರೂ. ದಂಡ ವಿಧಿಸಿರುವ ಉತ್ತರ ಪ್ರದೇಶದ ಸಂಭಾಲ್ ಪಂಚಾಯಿತಿಯು, ಪತ್ನಿಗೆ 60 ಸಾವಿರ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ. ಸಂಭಾಲದ ರೈಸಾತಿ ಪ್ರದೇಶದಲ್ಲಿರುವ ಮದರಸಾ ಖಲೀಲ್ ಉಲ್ ಉಲೂಮ್ಲ್ಲಿ ಭಾನುವಾರ 52 ಗ್ರಾಮಗಳ ಪ್ರಮುಖರು ಭಾಗಿಯಾಗಿದ್ದ ತುರ್ಕ್ ಸಮುದಾಯದ ಪಂಚಾಯಿತಿಯಲ್ಲಿ ಈ ತೀರ್ಪು ಪ್ರಕಟಿಸಲಾಗಿದ್ದು, ಮದುವೆಯ ಸಂದರ್ಭದಲ್ಲಿ ನೀಡಿದ್ದ ವರದಕ್ಷಿಣೆಯನ್ನೂ ವಧುವಿನ ಮನೆಯವರಿಗೆ ಮರಳಿಸುವಂತೆ ಸೂಚಿಸಲಾಗಿದೆ. 45 ವರ್ಷದ ವ್ಯಕ್ತಿ, 22 ವರ್ಷದ ಮಹಿಳೆಯನ್ನು ದಶಕದ ಹಿಂದೆ ವಿವಾಹವಾಗಿದ್ದ. ‘ಹಾಲಿ ಪ್ರಕರಣದಲ್ಲಿ ಪುರುಷನ ಕಡೆಯಿಂದ ತಪ್ಪಾಗಿದೆ. ತಲಾಕ್​ನಂಥ ಸಾಮಾಜಿಕ ಪಿಡುಗನ್ನು ನಿವಾರಿಸುವ ಯತ್ನ ನಡೆಯುತ್ತಿದೆ. ವರದಕ್ಷಿಣೆ, ತ್ರಿವಳಿ ತಲಾಕ್​ಗೆ ಸಂಬಂಧಿಸಿದಂತೆ ಪಂಚಾಯಿತಿಯ ಆದೇಶ ಪಾಲಿಸದವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಪಂಚಾಯಿತಿ ಪ್ರಮುಖರು ಹೇಳಿದ್ದಾರೆ.

 

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top