Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ನಿಸರ್ಗಸ್ನೇಹಿ ಬದುಕಿನತ್ತ ಮರಳಿ ಸಾಗೋಣ

Tuesday, 23.05.2017, 3:00 AM       No Comments

ಮನುಷ್ಯನ ಅತಿಸ್ವಾರ್ಥ ಭಯಂಕರವಾದ ಪರಿಣಾಮವನ್ನೇ ಸೃಷ್ಟಿಸುತ್ತದೆ ಎಂಬ ಆತಂಕ ನಿಜವಾಗುತ್ತಿದೆ. ದೇಶದಲ್ಲಿ ಕ್ಷಾಮ ಸಂಕಷ್ಟಗಳನ್ನು ತಂದೊಡ್ಡಿದೆ. ಅದೆಷ್ಟೋ ಭಾಗಗಳಲ್ಲಿ ವರ್ಷವಿಡೀ ಬೇಸಿಗೆ ಕಾಲವಷ್ಟೇ ಕಂಡುಬರುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಹುಚ್ಚಾಟ, ಪರಿಸರದ ಶೋಷಣೆ ಹೀಗೇ ಮುಂದುವರಿದರೆ ಆಪತ್ತು ತಪ್ಪಿದ್ದಲ್ಲ.

 

ಬದಲಾವಣೆ ಜಗದ ನಿಯಮ ಎಂಬುದೇನೋ ನಿಜ. ಆದರೆ, ಈ ಬದಲಾವಣೆಗಳು ಸಮಷ್ಟಿಗೆ-ಜೀವಸಂಕುಲಕ್ಕೆ ಪೂರಕವಾಗಿರಬೇಕೆ ವಿನಾ ವ್ಯತಿರಿಕ್ತವಾಗಿರಬಾರದು. ಆಧುನಿಕತೆಯ ಹೆಸರಿನಲ್ಲಿ ಎಲ್ಲವನ್ನೂ ಧಿಕ್ಕರಿಸಿಕೊಂಡು ಬಂದ ಪರಿಣಾಮ ನಮ್ಮದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಸುಮ್ಮನೆ ಒಮ್ಮೆ ನಿಮ್ಮ ಹಳೇ ನೆನಪುಗಳನ್ನು ತಾಜಾಗೊಳಿಸಿ. ತುಂಬಾ ಹಿಂದೇನಲ್ಲ, ಮೂರ್ನಾಲ್ಕು ದಶಕಗಳ ಹಿಂದಿನ ಮಾತು. ಹೊತ್ತುಹೊತ್ತಿಗೆ ಮಳೆ-ಬೆಳೆ ಎಲ್ಲ ಆಗುತ್ತಿತ್ತು. ಪ್ರಾಕೃತಿಕ ಪ್ರಕೋಪಗಳು ಆಗಾಗ ಸಂಭವಿಸುತ್ತಿದ್ದವಾದರೂ ಅದರ ತೀವ್ರತೆ ಹಾಗೂ ದುಷ್ಪರಿಣಾಮ ಈಗಿನಷ್ಟಿರಲಿಲ್ಲ. ಆಗಿನ ಜೀವನಶೈಲಿಯೇ ಪರಿಸರಕ್ಕೆ ಪೂರಕವಾಗಿತ್ತು. ನಮ್ಮ ಅಸ್ತಿತ್ವಕ್ಕೆ, ಉಳಿವಿಗೆ ಎಷ್ಟು ಅಗತ್ಯವೋ ಅಷ್ಟೇ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು, ಉಳಿದಿದ್ದನ್ನು ಮುಂದಿನ ಪೀಳಿಗೆಗಳಿಗಾಗಿ ಕಾಪಿಡಬೇಕು ಎಂಬ ವಿವೇಕ ಸದಾ ಜಾಗೃತವಾಗಿರುತ್ತಿತ್ತು. ಹಾಗಾಗಿಯೇ, ಜಲ, ಜಮೀನು, ಮಣ್ಣು, ಮರ, ಕಾಡು, ಪ್ರಾಣಿ-ಪಕ್ಷಿ… ಇವೆಲ್ಲ ಜೀವನದ ಅವಿಭಾಜ್ಯ ಅಂಗವಾಗಿದ್ದವು ಮಾತ್ರವಲ್ಲ, ಅವುಗಳನ್ನು ಪವಿತ್ರ ಭಾವದಿಂದ ಕಾಣಲಾಗುತ್ತಿತ್ತು. ನಿಸರ್ಗ ನಮಗೆ ಮಾಡುವ ಉಪಕಾರ, ಕೊಡುವ ಕೊಡುಗೆ ಕುರಿತಂತೆ ಹಿರಿಯರು ಸದಾ ಹೊಸಪೀಳಿಗೆಗೆ ತಿಳಿಹೇಳುತ್ತಿದ್ದರು. ಆದ್ದರಿಂದಲೇ, ಜಲ ಎಂದರೆ ಜೀವನ, ಗೋವು ಎಂದರೆ ಬದುಕು, ಪ್ರಾಣಿಪ್ರಪಂಚ ಎಂದರೆ ವಿಶಿಷ್ಟ ಭಾವಲೋಕ ಎಂಬಂಥ ಸ್ಥಿತಿ ಇತ್ತು.

ಇಂದೇನಾಗಿದೆ? ಸರ್ಕಾರವನ್ನು ಎಚ್ಚರಿಸಬೇಕಾದ ಸಮುದಾಯ, ಸಮಷ್ಟಿಯ ಹಿತವನ್ನು ರಕ್ಷಿಸಬೇಕಾದ ಸರ್ಕಾರ ಎರಡೂ ಪರಿಸರವನ್ನು ವಿವಿಧ ಬಗೆಯಲ್ಲಿ ಶೋಷಿಸುತ್ತಿವೆ. ಸರ್ಕಾರಗಳು ಅಭಿವೃದ್ಧಿ ಯೋಜನೆಗಳ ಹೆಸರಲ್ಲಿ ಪರಿಸರಕ್ಕೆ ನಿರಂತರ ಧಕ್ಕೆ ತರುತ್ತಿದ್ದರೆ, ಜನಸಾಮಾನ್ಯರು ನೈಸರ್ಗಿಕ ಸಂಪನ್ಮೂಲಗಳನ್ನು ವೇಗವಾಗಿ ಬರಿದು ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮೊದಲಿನ ಭಾರತದ ಸುಜಲಾಂ-ಸುಫಲಾಂ ಚಿತ್ರಣ ಇಂದೆಲ್ಲಿ ಕಾಣಲು ಸಾಧ್ಯ? ಪ್ರಸಕ್ತ ವರ್ಷ ದೇಶದ ಯಾವ ಭಾಗದಲ್ಲಿ ಕಣ್ಣಾಡಿಸಿದರೂ ಬರದ ಘೊರ ಚಿತ್ರಣವೇ ಕಣ್ಣಿಗೆ ರಾಚುತ್ತಿದೆ. ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಜನರು, ನೀರು-ಆಹಾರ ಸಿಗದೆ ಪ್ರಾಣಬಿಡುತ್ತಿರುವ ಪ್ರಾಣಿಪಕ್ಷಿಗಳು, ಉಷ್ಣಾಘಾತದ ಪ್ರಕೋಪಕ್ಕೆ ನಲಗುತ್ತಿರುವ ಜನ-ಜಾನುವಾರುಗಳು, ಹನಿನೀರಿಲ್ಲದೆ ಆಟದ ಮೈದಾನಗಳಂತೆ ಆಗಿರುವ ಕೆರೆ-ಕೊಳಗಳು… ಅಬ್ಬಾ ಎಂಥ ಘೊರ ಸ್ಥಿತಿ. ಉಷ್ಣಾಂಶದ ಮಾಪಕ ನೋಡಿದರಂತೂ ಗಾಬರಿಯಾಗುತ್ತದೆ. ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಉಷ್ಣಾಂಶ 46 ಡಿಗ್ರಿ ಸೆಲಿಯಸ್ ದಾಟಿದರೆ, ಉತ್ತರಪ್ರದೇಶ, ರಾಜಸ್ಥಾನದಲ್ಲಿ 47 ಡಿಗ್ರಿ ಸೆಲ್ಸಿಯಸ್​ನ್ನೂ ದಾಟಿದೆ. ಭೂಮಿ ಇದೇ ರೀತಿ ಬಿಸಿಯಾಗುತ್ತ ಹೋದರೆ ಮನುಷ್ಯ ತಾನು ಜೀವಿಸಲು ಅನ್ಯಗ್ರಹಗಳ ಶೋಧ ನಡೆಸಬೇಕಷ್ಟೇ.

ಅರಣ್ಯ ಪ್ರಮಾಣ: 2013-2015ರ ಅವಧಿಯಲ್ಲಿ ಭಾರತದ ಅರಣ್ಯ ಪ್ರದೇಶ 5,081 ಚದರ ಕಿಲೋಮೀಟರ್​ಗಳಷ್ಟು ಹೆಚ್ಚಿದ್ದು, ಅರಣ್ಯವನ್ನು ಹೊಂದಿರುವ ದೇಶದ ಭೂಭಾಗ ಶೇ.21.34ರಷ್ಟು ಹೆಚ್ಚಿದೆ ಎಂದು ಇತ್ತೀಚೆಗೆ ಪರಿಸರ ಸಚಿವಾಲಯದಿಂದ ಹೊರಬಿದ್ದ ವರದಿಯೊಂದು ಹೇಳಿದೆ. ಮಿಝೋರಂ ತನ್ನ ಭೂಭಾಗದ ಶೇ.88.93ಷ್ಟು ಅರಣ್ಯವನ್ನು ಹೊಂದುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಅರಣ್ಯ ಹೊಂದಿದ ಪ್ರದೇಶ ಎಂಬ ಖ್ಯಾತಿ ಹೊಂದಿದೆ. ಇದು ಸಮಾಧಾನಕರ ಸಂಗತಿಯೇನೋ ಹೌದು. ಆದರೆ, ಮಾಲಿನ್ಯವೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವೇ ಹೇಳಿರುವಂತೆ ಕಾರ್ಬನ್ ಸ್ಟಾಕ್ ಪ್ರಮಾಣ 103 ಮಿಲಿಯನ್ ಟನ್​ಗಳಿಗೆ ಏರಿಕೆಯಾಗಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಮೇಘಾಲಯ, ಕೇರಳ, ಅರುಣಾಚಲ ಪ್ರದೇಶ, ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಾಡು ಕಡಿಮೆಯಾಗಿದೆ ಎಂದೂ ವರದಿ ಬೊಟ್ಟು ಮಾಡಿದೆ.

ಈ ಬಗೆಯ ಸ್ಥಿತಿ ಸೃಷ್ಟಿಯಾಗಲಿದೆ ಎಂಬ ಎಚ್ಚರಿಕೆಯನ್ನೂ ಹಲವು ವರ್ಷಗಳ ಹಿಂದೆಯೇ ನೀಡಲಾಗಿದೆ. ನಾಗರಿಕತೆಯ ಆರ್ಭಟಕ್ಕೆ ಅರಣ್ಯ ಪ್ರದೇಶಗಳು ಶರವೇಗದಲ್ಲಿ ಬಯಲಾಗುತ್ತಿದ್ದು, ಹಸಿರು ಮಾಯವಾಗತೊಡಗಿದೆ. ಹಸಿರಿನ ಮಹತ್ವವೇ ಗೊತ್ತಿಲ್ಲದ ಹೊಸ ಪೀಳಿಗೆ ಎಲ್ಲವನ್ನೂ ರೆಡಿಮೇಡ್ ಆಗಿ ತಯಾರಿಸಿಕೊಳ್ಳುವ ಆತುರದಲ್ಲಿದೆ. ಆದರೆ, ವಿಜ್ಞಾನ-ತಂತ್ರಜ್ಞಾನ, ಮತ್ತೊಂದು-ಮಗದೊಂದು ಎಂದು ಎಷ್ಟೇ ಮುಂದುವರಿದರೂ ಶುದ್ಧ ಗಾಳಿ, ನೀರನ್ನು ನಿರ್ವಿುಸಲಾಗುವುದಿಲ್ಲ ಎಂಬ ಕಹಿಸತ್ಯ ಅದ್ಯಾಕೆ ಅರಿವಿಗೆ ಬರುವುದಿಲ್ಲವೋ ಗೊತ್ತಾಗುತ್ತಿಲ್ಲ. ಕ್ಷಾಮ ಬಂದಾಗ ಹಸಿರು, ಜಲ ಸಂರಕ್ಷಣೆ ಬಗ್ಗೆ ಮಾತಾಡುವ ಸರ್ಕಾರಗಳು ಆ ಬಳಿಕ ಮೌನವಾಗಿಬಿಡುತ್ತವೆ. ಹಾಗಾಗಿಯೇ, ವರ್ಷದಿಂದ ವರ್ಷಕ್ಕೆ ಬರಪೀಡಿತ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಬರೀ ಅನುದಾನಗಳ ಲೆಕ್ಕದಲ್ಲಿ ಬರವನ್ನು ಎದುರಿಸಲು ಆಗದು ಎಂಬ ಸರಳ ಸತ್ಯ ನಮ್ಮ ಆಳುಗರಿಗೆ ಗೊತ್ತಾಗುತ್ತಿಲ್ಲ. ಬರಪೀಡಿತ ಪ್ರದೇಶಗಳು ಎಂದು ಘೊಷಣೆಯಾದಾಕ್ಷಣ ರಾಜ್ಯ ಸರ್ಕಾರಗಳು ಕೇಂದ್ರದ ನೆರವು ಕೇಳುತ್ತವೆ. ಕೇಂದ್ರ ಸರ್ಕಾರ ಒಂದಿಷ್ಟು ನೆರವು ನೀಡಿ, ಉಳಿದಿದ್ದನ್ನು ರಾಜ್ಯ ಸರ್ಕಾರವೇ ನಿಭಾಯಿಸಬೇಕು ಎನ್ನುತ್ತದೆ. ಈ ಪ್ರಹಸನಗಳ ನಡುವೆ ಜನರ ಸಂಕಷ್ಟ, ಕಣ್ಣೀರಿಗೆ ಬೆಲೆ ನೀಡುವವರು ಯಾರು? ಕೃಷಿರಂಗ ಈಗಾಗಲೇ ಸೊರಗಿದೆ. ಕೃಷಿ ಎಂದರೆ ಸಮೃದ್ಧಿ ಎಂಬಂತಿದ್ದ ಸ್ಥಿತಿ ಈಗ ನಷ್ಟದ ಬಾಬತ್ತು ಎಂಬಂತಾಗಿದೆ. ಬೇರಾವ ಪರ್ಯಾಯ ಮಾರ್ಗಗಳೂ ಇಲ್ಲದವರು, ಈವರೆಗೆ ಕೃಷಿ ಬಿಟ್ಟು ಬೇರೇನೂ ಮಾಡದವರು ಮಾತ್ರ ಈಗಲೂ ಅನಿವಾರ್ಯವಾಗಿ ಕೃಷಿಗೆ ಅಂಟಿಕೊಂಡಿದ್ದಾರೆ.

ಹಿಮಾಲಯವನ್ನೂ ರಕ್ಷಿಸಬೇಕಿದೆ: ಒಂದೆಡೆ ಅರಣ್ಯ ಭೂಮಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ರೈತರಿಗೆ ಆಧಾರವಾಗಿರುವ ಕೃಷಿ ಭೂಮಿಯೂ ಕರಗುತ್ತಿದೆ. ಎರಡನ್ನೂ ಕಳೆದುಕೊಂಡು ನಾವು ಪಡೆದುಕೊಂಡದ್ದಾದರೂ ಏನು ಎಂದು ಯೋಚಿಸಿದರೆ ಅದಕ್ಕೆ ಉತ್ತರ ಕ್ಷಾಮ ಮತ್ತು ಭೀಕರ ಕ್ಷಾಮ. ಪರಿಸರದ ಮೇಲಿನ ಪ್ರಹಾರ ಮುಂದುವರಿದಿರುವ ಬೆನ್ನಲ್ಲೇ ನಮ್ಮ ನೈಸರ್ಗಿಕ ರಕ್ಷಾಕವಚಗಳನ್ನೂ ಕಳೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದೇವೆ. ಹಿಮಾಲಯದ ಸ್ಥಿತಿ ಇದಕ್ಕೆ ಉತ್ತಮ ಉದಾಹರಣೆ. ಎರಡು ವರ್ಷಗಳ ಹಿಂದೆ ಅಂದರೆ 2015ರ ಏಪ್ರಿಲ್​ನಲ್ಲಿ ನೇಪಾಳದಲ್ಲಿ ಭಾರಿ ಭೂಕಂಪನ ಸಂಭವಿಸಿದಾಗ ಹಿಮಾಲಯ ಪ್ರದೇಶ ಹಲವು ಬಾರಿ ಕಂಪಿಸಿತ್ತು. ಭಾರತ ಮತ್ತು ಯುರೇಷಿಯನ್ ಪ್ರಸ್ಥಭೂಮಿಗಳು ಕೂಡುವ ಸ್ಥಳ ಇದಾಗಿದ್ದು, ಶಿಲಾಪದರದ ಒಳತಳ್ಳುವಿಕೆ ಹೆಚ್ಚಾಗಿರುವುದರಿಂದ ಉಂಟಾಗುವ ಒತ್ತಡ ಭೂಕಂಪನಕ್ಕೆ ಕಾರಣವಾಗುತ್ತಿದೆ. ಹಾಗಾಗಿಯೇ 1934, 1950ರಲ್ಲಿ 8.3 ಹಾಗೂ 8.5 ತೀವ್ರತೆಯ ಭೂಕಂಪನಗಳು ಸಂಭವಿಸಿದೆ. ಆದರೆ, ಈ ವಲಯದಲ್ಲಿ ಭೂಮಿಯೊಳಗೆ ಉಂಟಾಗುತ್ತಿರುವ ಒತ್ತಡವನ್ನು ಗಮನಿಸಿದರೆ 8 ಹಾಗೂ 9 ತೀವ್ರತೆಯ ಭೂಕಂಪನಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಭೂಗರ್ಭ ತಜ್ಞರು ಎಚ್ಚರಿಸಿದ್ದಾರೆ. ಹಿಮಾಲಯದ ಸುತ್ತಮುತ್ತಲಿನ 2,500 ಕಿ.ಮೀ. ಪ್ರದೇಶದಲ್ಲಿರುವ ಹಿಂದುಕುಶ್ ವಲಯ ಸುಮಾರು 9 ತೀವ್ರತೆಯ ಭೂಕಂಪನ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. 9 ತೀವ್ರತೆಯ ಭೂಕಂಪನ 8 ತೀವ್ರತೆಯದ್ದಕ್ಕಿಂತ ಸುಮಾರು 32 ಪಟ್ಟು ಶಕ್ತಿಶಾಲಿಯಾಗಿರುತ್ತದೆ. ಹಾಗಾಗಿ ಭಾರಿ ತೀವ್ರತೆಯ ಭೂಕಂಪನ ಉಂಟಾದರೆ ನೇಪಾಳ ಸೇರಿ ಹಿಮಾಲಯ ವಲಯ ಬಹುತೇಕ ಸರ್ವನಾಶವಾಗುವುದು ಖಚಿತ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಯೋಜನೆಗಳಿಗೆ ಬೇಕು ನಿಯಂತ್ರಣ: ಹಿಮಾಲಯದ ಮಡಿಲಲ್ಲಿ ದೇಶದ ಪ್ರಮುಖ ನದಿಗಳು ಹರಿಯುತ್ತಿರುವುದರಿಂದ ಇಲ್ಲೇ ಹೆಚ್ಚು ಯೋಜನೆಗಳು ತಲೆಎತ್ತಿವೆ. ಉತ್ತರಾಖಂಡದಲ್ಲಿ ಹೆಚ್ಚು ಜಲವಿದ್ಯುತ್ ಯೋಜನೆಗಳಿದ್ದರೆ, ಉ.ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು-ಕಾಶ್ಮೀರ ರಾಜ್ಯದಲ್ಲೂ ಸಾಕಷ್ಟು ಸಂಖ್ಯೆಯಲ್ಲಿವೆ. ಆದರೆ, ಇಲ್ಲೆಲ್ಲ ಯೋಜನೆ ಆರಂಭಿಸುವ ಮುನ್ನ ಅದರಿಂದ ಪರಿಸರ, ಜನಜೀವನ, ಜೀವವೈವಿಧ್ಯದ ಮೇಲಾಗುವ ಪರಿಣಾಮ ಗಳನ್ನು ಅವಲೋಕಿಸಲಾಗಿಲ್ಲ, ಸ್ಥಳೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿಲ್ಲ.

ಜಲವಿದ್ಯುತ್ ಯೋಜನೆಗಳ ಅನುಷ್ಠಾನಕ್ಕಾಗಿ ನೂರಾರು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಅಷ್ಟೊಂದು ಜನರ ಪುನರ್ವಸತಿ, ಉದ್ಯೋಗ ಅದಕ್ಕಿಂತ ಮುಖ್ಯವಾಗಿ ಅವರ ಜೀವನಪದ್ಧತಿಗಳ ಬಗ್ಗೆ ಸರ್ಕಾರಗಳು ಚಿಂತಿಸುವುದೇ ಇಲ್ಲ. ಜನರು ಅಲ್ಲಲ್ಲಿನ ಪರಿಸರ, ಸಂಸ್ಕೃತಿಗೆ ಅನುಗುಣವಾಗಿ ಜೀವನಪದ್ಧತಿ ರೂಪಿಸಿಕೊಂಡಿರುತ್ತಾರೆ. ಏಕಾಏಕಿ ಸ್ಥಳಾಂತರದಿಂದ ಅವರೆಲ್ಲ ದಿಕ್ಕುತೋಚದಂತಾಗುತ್ತಾರೆ. ಅಲ್ಲದೆ, ಅಣೆಕಟ್ಟು ನಿರ್ವಣದ ಮುನ್ನ ಆ ಪ್ರದೇಶ ಭೂಕಂಪದ ದೃಷ್ಟಿಯಿಂದ ಸೂಕ್ಷ್ಮಪ್ರದೇಶವೋ ಎಂಬುದನ್ನು ಗಮನಿಸಬೇಕು. ಇಂಥ ಯೋಜನೆಗಳ ಜಾರಿಗೆ ಪರಿಸರವಾದಿಗಳು, ಪರಿಸರತಜ್ಞರು ಮುಂಚಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಾಲಯಗಳೂ ಸರ್ಕಾರಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿಯಾಗಿದೆ. ಆದಾಗ್ಯೂ, ಸರ್ಕಾರಗಳ ಧೋರಣೆಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಆಗಿಲ್ಲ. ಉತ್ತರದ ರಾಜ್ಯಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಹೊಸ ಯೋಜನೆಗಳೇಕೆ ಬೇಕು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಾಗಾಗಿ, ಯಾರೇ ವಿರೋಧಿಸಲಿ ಜಲವಿದ್ಯುತ್ ಯೋಜನೆಗಳಂತೂ ಹೆಚ್ಚುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕದಿದ್ದಲ್ಲಿ ಉತ್ತರಾಖಂಡದಂಥ ಮಹಾಪ್ರವಾಹವನ್ನು ಮತ್ತೆ ಎದುರಿಸುವ ದಿನಗಳು ಬರಬಹುದು.

ಹಿಮಾಲಯದ ಹೆಚ್ಚು ಪರ್ವತಶ್ರೇಣಿಗಳನ್ನು ಹೊಂದಿರುವ ಉತ್ತರಾಖಂಡವೊಂದರಲ್ಲೇ ಮುಂದಿನ ಕೆಲವರ್ಷಗಳಲ್ಲಿ 558 ಜಲವಿದ್ಯುತ್ ಯೋಜನೆಗಳು ಜಾರಿಗೆ ಬರಲಿವೆ. ಇದಕ್ಕಾಗಿ ಇಲ್ಲಿನ ಬೃಹತ್ ನದಿಗಳು ಹಾಗೂ ಸಣ್ಣಪುಟ್ಟ ನದಿಗಳಿಗೂ ಅಣೆಕಟ್ಟು ಕಟ್ಟಲಾಗುತ್ತದೆ. ಈ ಪೈಕಿ ಈಗಾಗಲೇ ಹಲವು ಯೋಜನೆಗಳ ಕಾಮಗಾರಿ ಪೂರ್ಣಗೊಂಡಿದ್ದರೆ, ಇನ್ನು ಕೆಲವು ಪ್ರಗತಿಯಲ್ಲಿವೆ. ಅಲಕನಂದಾ ನದಿತೀರದಲ್ಲಿ 101 ಹಾಗೂ ಭಾಗೀರಥಿ ನದಿತೀರದಲ್ಲಿ 85 ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಜಲವಿದ್ಯುತ್ ಯೋಜನೆಯಿಂದ ಉತ್ತರಾಖಂಡದ ಒಂದು ನದಿಯೂ ಹೊರತಾಗಿಲ್ಲ ಎಂದರೆ ಅಭಿವೃದ್ಧಿ ಹೆಸರಿನಲ್ಲಿನ ಮನುಷ್ಯದಾಹ ಎಷ್ಟು ತೀವ್ರ ಹಾಗೂ ಅಸಹನೀಯವಾದದ್ದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಹೀಗೆ, ಹೆಜ್ಜೆ-ಹೆಜ್ಜೆಗೂ ಸವಾಲುಗಳಿವೆ. ಬರದೊಂದಿಗೆ ಹೋರಾಡಬೇಕಿದೆ, ನೆರೆಯನ್ನು ನಿಯಂತ್ರಿಸಬೇಕಿದೆ. ಆದರೆ, ಇದೆಲ್ಲ ಸಾಧ್ಯವಾಗಬೇಕಾದರೆ ಮನುಷ್ಯ ಮತ್ತೆ ನಿಸರ್ಗದೊಂದಿಗೆ ಬೆರೆಯಬೇಕು. ಆಧುನಿಕತೆ ಎಂದರೆ ಪರಿಸರವನ್ನು ಹಾಳು ಮಾಡಿ ನಮ್ಮ ಜೀವನಶೈಲಿಯನ್ನು ಉತ್ತಮಪಡಿಸಿಕೊಳ್ಳುವುದು ಎಂಬ ಭ್ರಮೆ ನಿವಾರಣೆಯಾಗಬೇಕು. ನವೀಕರಿಸಬಹುದಾದ ಸಂಪನ್ಮೂಲಗಳೇ ದಿನಬಳಕೆಯಲ್ಲಿ ಪ್ರಧಾನವಾಗಬೇಕು. ಸೂರ್ಯನ ಯಥೇಚ್ಛ ಬೆಳಕನ್ನು ಸೌರಶಕ್ತಿಯಾಗಿ ಪರಿವರ್ತಿಸುವುದು, ಪವನ ಶಕ್ತಿಯನ್ನು ಹೆಚ್ಚಿಸುವ ಮೂಲಕ ಇಂಧನ ಕೊರತೆಯನ್ನು ನೀಗಿಸಿಕೊಳ್ಳುವುದು, ವೈಯಕ್ತಿಕ ಬದುಕನ್ನು ಪರಿಸರಸ್ನೇಹಿಯಾಗಿಸಿಕೊಳ್ಳುವುದು, ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕಾಯುತ್ತ ಕೂಡದೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವುದು, ಆ ಮೂಲಕ ಪ್ರಾಣಿ-ಪಕ್ಷಿಗಳೂ ನೆಮ್ಮದಿಯಿಂದ ಬಾಳುವಂತೆ ಮಾಡುವುದು ಹೀಗೆ ಸಣ್ಣ ಸಣ್ಣ ಆದರೆ ಮಹತ್ವದ ಹೆಜ್ಜೆಗಳ ಮೂಲಕ ಅಸಾಧಾರಣ ಬದಲಾವಣೆಯನ್ನು ತರಬಹುದು. ಪಠ್ಯಕ್ರಮಗಳಲ್ಲಿಯೂ ಪರಿಸರದ ಮಹತ್ವವನ್ನು ಪರಿಣಾಮಕಾರಿಯಾಗಿ ಬಿಂಬಿಸಬೇಕು. ಯಾವ್ಯಾವುದಕ್ಕೋ ಸಬ್ಸಿಡಿ ಕೊಡುವುದನ್ನು ಬಿಟ್ಟು ನಿಸರ್ಗಸ್ನೇಹಿ ಜೀವನಶೈಲಿ ರೂಪಿಸಿಕೊಳ್ಳುವವರಿಗೆ ಸರ್ಕಾರ ಸಬ್ಸಿಡಿ ನೀಡಬೇಕು. ಮುಖ್ಯವಾಗಿ, ನಾವು ಕುಡಿಯುವ ನೀರನ್ನು, ಸೇವಿಸುವ ಗಾಳಿಯನ್ನು ವಿಷಮುಕ್ತಗೊಳಿಸಬೇಕಾಗಿದೆ. ಇಲ್ಲವಾದಲ್ಲಿ, ಬದುಕು ಅಸಹನೀಯವಾದೀತು, ಸಮಸ್ಯೆಗಳ ಚಕ್ರವ್ಯೂಹವೇ ನಿರ್ವಿುತವಾದೀತು. ಹಾಗಾಗುವ ಮುನ್ನವೇ ಎಚ್ಚೆತ್ತುಕೊಂಡರೆ ಒಳಿತಲ್ಲವೇ?

 

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top