Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಕುಲಭೂಷಣ್ ಪ್ರಕರಣ: ಐಸಿಜೆ ನ್ಯಾಯಾಧೀಶರ ಪೈಕಿ ಭಾರತೀಯರೂ ಒಬ್ಬರಿದ್ದರು!

Friday, 19.05.2017, 1:31 PM       No Comments

ಹೇಗ್​: ಪಾಕಿಸ್ತಾನವು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್​ ಜಾಧವ್​ ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ಗುರುವಾರ ತಡೆಯಾಜ್ಞೆ ನೀಡಿದೆ.

ಅಂತಾರಾಷ್ಟ್ರೀಯ ನ್ಯಾಯಲಯದ ನ್ಯಾಯಮೂರ್ತಿ ರೋನಿ ಅಬ್ರಾಹಾಂ ನೇತೃತ್ವದ 11 ನ್ಯಾಯಮೂರ್ತಿಗಳ ಪೀಠ ಈ ಮಹತ್ವರ ತೀರ್ಪು ನೀಡಿದೆ. ಭಾರತದ ಪರ ಹರೀಶ್ ಸಾಳ್ವೆ ಹಾಗೂ ದೀಪಕ್ ಮಿತ್ತಲ್​ ವಾದ ಮಂಡಿಸಿದ್ದರು.

ಆದರೆ ದಾಖಲಾರ್ಹ ಸಂಗತಿಯೆಂದರೆ ಆ 11 ನ್ಯಾಯಮೂರ್ತಿಗಳ ಪೀಠದಲ್ಲಿ ಭಾರತದ ನ್ಯಾಯಾಧೀಶರೂ ಒಬ್ಬರು ಇದ್ದರು! ಯಾರಪ್ಪಾ ಆ ಮೇಧಾವಿ ಕಾನೂನು ಪಂಡಿತ ಅಂದರೆ ಅವರು, ಜಸ್ಟೀಸ್ ದಲ್ವೀರ್ ಭಂಡಾರಿ. ಜಸ್ಟೀಸ್ ದಲ್ವೀರ್ ಭಂಡಾರಿ ಅವರು ಈ ಹಿಂದೆ ಭಾರತದ ಸುಪ್ರೀಂ ಕೋರ್ಟಿನಲ್ಲಿ ಜಡ್ಜ್​ ಆಗಿ ಸೇವೆ ಸಲ್ಲಿಸಿದ್ದಾರೆ. 69 ವರ್ಷದ ಜಸ್ಟೀಸ್ ಭಂಡಾರಿ ಅವರು ಮೂಲತಃ ರಾಜಸ್ತಾನದವರು.

ಸುಮಾರು 20 ವರ್ಷಗಳ ನಂತರ ಜಸ್ಟೀಸ್ ಭಂಡಾರಿ ಅವರು ಭಾರಿ ಮತಗಳ ಅಂತರದಲ್ಲಿ ICJಗೆ ನೇಮಕಗೊಂಡರು. ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಜಸ್ಟೀಸ್ ಭಂಡಾರಿ ಅವರಿಗೆ 122 ಮತಗಳು ಸಂದಾಯವಾಗಿದ್ದವು. ಮತ್ತು 15-ರಾಷ್ಟ್ರಗಳ ಭದ್ರತಾ ಮಂಡಳಿಯಲ್ಲಿ 13 ಮತಗಳ ಭಾರಿ ಬಹುಮತದೊಂದಿಗೆ 2012ರಲ್ಲಿ ಈಗಿನ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. 2018ರವರೆಗೂ ಜಸ್ಟೀಸ್ ಭಂಡಾರಿ ಅವರು ICJ ಜಡ್ಜ್​ ಆಗಿ ಮುಂದುವರಿಯಲಿದ್ದಾರೆ.

ಇಷ್ಟೆಲ್ಲಾ ವಿಶೇಷತೆಗಳ ಜಸ್ಟೀಸ್ ಭಂಡಾರಿ ಅವರಿಗೆ ನಮ್ಮ ತುಮಕೂರು ವಿಶ್ವವಿದ್ಯಾಲಯವು 2010ರಲ್ಲಿ ಡಾಕ್ಟರೇಟ್ ನೀಡಿ, ಅವರ ಕಾನೂನು ಪಾಂಡಿತ್ಯವನ್ನು ಗೌರವಿಸಿದೆ.

ಅಮೆರಿಕದಲ್ಲಿ ಕಾನೂನು ಶಿಕ್ಷಣ/ ಸೇವೆ ಸೇರಿದಂತೆ ಜಸ್ಟೀಸ್ ಭಂಡಾರಿ ಅವರು ವಿಶ್ವ ಮಟ್ಟದಲ್ಲಿ ಅನೇಕ ಆಯಕಟ್ಟಿನ ಸ್ಥಳಗಳಲ್ಲಿ ಜಡ್ಜ್​ ಆಗಿ ಸೇವೆ ಸಲ್ಲಿಸಿದ್ದಾರೆ.
2007ರಲ್ಲಿ ಭಾರತದ ಅಂತಾರಾಷ್ಟ್ರೀಯ ಕಾನೂನು ಫೌಂಡೇಶನ್​ನ ಅಧ್ಯಕ್ಷರಾಗಿ ಆಯ್ಕೆಗೊಂಡ ಜಸ್ಟೀಸ್ ಭಂಡಾರಿ ಅವರು ಇಂದಿಗೂ ಆ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತದ ವತಿಯಿಂದ ಅಂತಾರಾಷ್ಟ್ರೀಯ ಕಾನೂನು ಒಕ್ಕೂಟದ ಕಾರ್ಯಕಾರಿ ಸದಸ್ಯರಾಗಿಯೂ 1994ರಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಕಳೆದ ಫೆಬ್ರವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರ ಸಮ್ಮುಖದಲ್ಲಿ ಜಸ್ಟೀಸ್ ಭಂಡಾರಿ ರಚಿಸಿರುವ ‘ನ್ಯಾಯಾಂಗ ಸುಧಾರಣೆ- ವಿಶ್ವಮಟ್ಟದಲ್ಲಿನ ಇತ್ತೀಚಿನ ವಿದ್ಯಮಾನಗಳು’ ಎಂಬ ಕೃತಿಯನ್ನು ಬಿಡುಗಡೆ ಮಾಡಿದ್ದರು.

ಇನ್ನೂ ದಾಖಲಾರ್ಹ ಸಂಗತಿಯೆಂದರೆ ಭಾರತದವರೇ ಆದ ಜಸ್ಟೀಸ್ ನಾಗೇಂದ್ರ ಸಿಂಗ್ ಅವರು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ICJ) ನ್ಯಾಯಾಧೀಶರಾಗಿ ಮತ್ತು ಅಧ್ಯಕ್ಷರೂ ಆಗಿದ್ದರು. ಅವರ ಹೆಸರಿನಲ್ಲಿ ಕೊಡಮಾಡುವ ‘ನಾಗೇಂದ್ರ ಸಿಂಗ್ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ‘ಯನ್ನು ಮೊಟ್ಟಮೊದಲ ಬಾರಿಗೆ ಜಸ್ಟೀಸ್ ಭಂಡಾರಿ ಅವರಿಗೆ 2014ರಲ್ಲಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಪ್ರದಾನ ಮಾಡಿದ್ದರು.

Leave a Reply

Your email address will not be published. Required fields are marked *

Back To Top