More

    ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

    ಹಾನಗಲ್ಲ: ಪ್ರಾಂಶುಪಾಲರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜ್‌ನ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಅತಿಥಿ ಉಪನ್ಯಾಸಕ ಗದಿಗೆಯ್ಯ ಹಳ್ಳಿಕೊಪ್ಪದಮಠ, ಸುವರ್ಣಾ ಹಿರೇಗೌಡ್ರ, ಶ್ರೀದೇವಿ ಪಾಟೀಲ ಮಾತನಾಡಿ, ಪ್ರಥಮ ದರ್ಜೆ ಕಾಲೇಜ್‌ನಲ್ಲಿ 36 ಜನ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಸಣ್ಣ ಪುಟ್ಟ ವಿಚಾರಗಳಿಗೆ ಪ್ರಾಂಶುಪಾಲ ಎಚ್.ಬಿ. ವಿಜಯಕುಮಾರ್ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮಾನಸಿಕ ಸ್ಥಿತಿ ಹಾಳಾಗುತ್ತಿದೆ.

    ಪಾಠ ಮಾಡುವ ಮನಸ್ಥಿತಿಯೂ ಹಾಳಾಗುತ್ತಿದೆ. ಕಾಲೇಜು ಅವಧಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಗೆ ಮುಗಿದರೂ 5 ಗಂಟೆವರೆಗೂ ಕಾಲೇಜಿನಲ್ಲಿ ಇರುವಂತೆ ಸೂಚಿಸುತ್ತಿದ್ದಾರೆ. ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಉಪನ್ಯಾಸಕರು ಬಸ್ ಸಮಸ್ಯೆಯಾಗಿ ಸ್ವಲ್ಪ ತಡವಾದರೂ ಪ್ರಾಂಶುಪಾಲರು ಕಿರಿ ಕಿರಿ ಮಾಡುತ್ತಾರೆ. ನಮಗೆ ಇಎಲ್, ಸಿಎಲ್ ಸೇರಿದಂತೆ ಯಾವುದೇ ರಜೆ ಇಲ್ಲ. ವಿನಾಕಾರಣ ಪ್ರಾಂಶುಪಾಲರು ನೋಟಿಸ್ ಜಾರಿಗೊಳಿಸುತ್ತಾರೆ ಎಂದು ಆರೋಪಿಸಿದರು.

    ವಿದ್ಯಾರ್ಥಿಗಳ ಸಮಸ್ಯೆ ಕುರಿತು ಮಾತನಾಡುವ ಉಪನ್ಯಾಸಕರಿಗೆ ನೋಟಿಸ್ ಜಾರಿ ಮಾಡುತ್ತಾರೆ. ಉಪನ್ಯಾಸಕರೊಂದಿಗೆ ಅಸಭ್ಯವಾಗಿ ವರ್ತಿಸುವುದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ಇವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಕುರಿತು ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಾಂಶುಪಾಲರ ಈ ವರ್ತನೆಯಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ತೊಂದರೆಯಾಗುತ್ತಿದೆ. ಸರ್ವಾಧಿಕಾರಿ ಧೋರಣೆಯ ಪ್ರಾಂಶುಪಾಲರನ್ನು ತಕ್ಷಣ ವರ್ಗಾವಣೆ ಮಾಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ವೀರಪ್ಪ ಬಡಿಗೇರ, ಪ್ರೇಮಕಿಶನ್ ಬಳ್ಳಾರಿ, ವಿನಾಯಕ ಕುಲಕರ್ಣಿ, ಪ್ರಭು ನಿಂಬಕ್ಕನವರ, ಕರುಣಾ ನಾಯ್ಕ, ಕಿರಣ ಮೋರೆ, ಬಾಪುಗೌಡ ಪಾಟೀಲ, ನಾಗನಗೌಡ ಪಾಟೀಲ, ಗಿರೀಶ ಮುದುಕಣ್ಣನವರ, ತಿಪ್ಪಣ್ಣ ಬಾರಕೇರ, ನಾಗರಾಜ ದೊಡ್ಡಮನಿ, ಅಣ್ಣಪ್ಪ ಹುನಗುಂದ, ಜಗದೀಶ ಜವಳಿ, ಮಂಜುನಾಥ ಹೂಗಾರ, ಹರೀಶ ಸಮ್ಮಸಗಿ ಇತರರು ಪಾಲ್ಗೊಂಡಿದ್ದರು.

    ಕಾಲೇಜ್‌ನ ಶೈಕ್ಷಣಿಕ ವಿಷಯದಲ್ಲಿ ಎಲ್ಲ ಉಪನ್ಯಾಸಕರೂ ಸಮಯಕ್ಕೆ ಸರಿಯಾಗಿ ಹಾಜರಿದ್ದು, ಕಾರ್ಯ ನಿರ್ವಹಿಸಬೇಕು. ಕಾನೂನು ಪ್ರಕಾರ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದೇನೆ. ಅದನ್ನು ಅತಿಥಿ ಉಪನ್ಯಾಸಕರು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಶಿಸ್ತುಬದ್ಧವಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಅವರು ಅದನ್ನು ಪಾಲಿಸುತ್ತಿಲ್ಲ. ಬೆಳಗಿನಿಂದ ಸಂಜೆವರೆಗೆ ಪೂರ್ಣ ಪ್ರಮಾಣದ ಅವಧಿಯಲ್ಲಿ ಕೆಲಸ ಮಾಡಬೇಕು ಎಂದು ಆದೇಶಿಸಿದ್ದೇನೆ. ಇದನ್ನೇ ಉಪನ್ಯಾಸಕರು, ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದಾರೆ.

    ಎಚ್.ಬಿ. ವಿಜಯಕುಮಾರ, ಪ್ರಾಂಶುಪಾಲ, ಸರ್ಕಾರಿ ಪ್ರಥಮ ದರ್ಜೆ ಕಾಲೆಜ್ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts