Friday, 21st September 2018  

Vijayavani

Breaking News

ದೆಹಲಿಗೆ ಹಿಂಬಡ್ತಿ-ಮುಂಬಡ್ತಿ ವಿವರ

Sunday, 22.04.2018, 3:03 AM       No Comments

ಬೆಂಗಳೂರು: ಪರಿಶಿಷ್ಟರ ಬಡ್ತಿ ಮೀಸಲು ಸೌಲಭ್ಯ ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಇಲಾಖೆಗಳ ಮುಖ್ಯಸ್ಥರು ಸಿದ್ಧಪಡಿಸಿರುವ ಸರ್ಕಾರಿ ನೌಕರರ ಹಿಂಬಡ್ತಿ-ಮುಂಬಡ್ತಿ ಅಂಕಿ-ಅಂಶಗಳ ಪಟ್ಟಿಯನ್ನು ರಾಜ್ಯ ಸರ್ಕಾರ ದೆಹಲಿಗೆ ಕೊಂಡೊಯ್ದಿದೆ.

ಬಿ.ಕೆ. ಪವಿತ್ರ ಪ್ರಕರಣದಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ್ತಿ ಮೀಸಲು ಸೌಲಭ್ಯ ರದ್ದುಪಡಿಸಿ 2017ರ ಫೆ. 9ರಂದು ಸುಪ್ರಿಂಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ, ಯಾವ ಇಲಾಖೆಗಳಲ್ಲಿ ಎಷ್ಟು ಮಂದಿ ಹಿಂಬಡ್ತಿ-ಮುಂಬಡ್ತಿ ಪಡೆಯಲಿದ್ದಾರೆ ಎಂಬ ಅಂಕಿ-ಅಂಶದ ಪಟ್ಟಿಯನ್ನು ಏ. 25ರೊಳಗೆ ಸಲ್ಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ 18 ಇಲಾಖೆಗಳ ಹಿಂಬಡ್ತಿ-ಮುಂಬಡ್ತಿಯ ಅಂಕಿ ಅಂಶದ ಪಟ್ಟಿ ಶನಿವಾರ ದೆಹಲಿಗೆ ಕೊಂಡೊಯ್ಯಲಾಗಿದೆ. ರಾಜ್ಯ ಸರ್ಕಾರದ ಪರ ವಕೀಲರ ಬಳಿ ಈ ಬಗ್ಗೆ ರ್ಚಚಿಸಿ, ಸರ್ಕಾರದ ಎಲ್ಲ ಇಲಾಖೆಗಳ ಅಂಕಿ-ಅಂಶ ಪಟ್ಟಿಯನ್ನು ಸಲ್ಲಿಸಲು ಸುಪ್ರೀಂಕೋರ್ಟ್​ನಲ್ಲಿ ಮತ್ತೆ ಸಮಯಾವಕಾಶ ನೀಡುವಂತೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

40 ಇಲಾಖೆಯಲ್ಲಿ ಬಾಕಿ: ಹದಿನೆಂಟಕ್ಕೂ ಹೆಚ್ಚಿನ ಇಲಾಖೆಗಳ ಬಡ್ತಿ ಪುನರ್ ಪರಿಶೀಲನೆ ಪಟ್ಟಿ ರಚಿಸಲಾಗಿದ್ದರೂ ಅಂದಾಜು 40ಕ್ಕೂ ಅಧಿಕ ಇಲಾಖೆಗಳ ಪಟ್ಟಿ ಸಿದ್ದಪಡಿಸಲು ಬಾಕಿ ಇದೆ. ಮುಂಬಡ್ತಿ-ಹಿಂಬಡ್ತಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ ಈ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆ ತೋರುತ್ತಿರುವುದರಿಂದ ಸಿಬ್ಬಂದಿಗಳಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಸದ್ಯ ಸಿದ್ಧವಾಗಿರುವ ಅಂಕಿ-ಅಂಶಗಳ ಪಟ್ಟಿ ಸಲ್ಲಿಸಿ, ಬಾಕಿ ಇರುವ ಇಲಾಖೆಗಳ ಅಂಕಿ-ಅಂಶಗಳ ವಿವರಗಳನ್ನು ಶೀಘ್ರದಲ್ಲಿ ಸಂಬಂಧಿತ ಅಧಿಕಾರಿಗಳು ಸುಪ್ರೀಂ ಕೋರ್ಟ್​ಗೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದೆ ವಿಳಂಬ ಮಾಡಿದರೆ, ನ್ಯಾಯಾಂಗ ನಿಂದನೆಗೆ ಎಡೆ ಮಾಡಿಕೊಡಬಹುದು ಎಂಬ ತಜ್ಞರ ಅಭಿಪ್ರಾಯದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Back To Top