Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಹೀಗಿರಲಿದೆ ನಮ್ಮ ನಾಡಧ್ವಜ

Thursday, 18.01.2018, 3:05 AM       No Comments

| ರುದ್ರಣ್ಣ ಹರ್ತಿಕೋಟೆ

ಬೆಂಗಳೂರು: ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವ ಕಾಲ ಸಮೀಪಿಸಿದೆ. ಹಳದಿ, ಬಿಳಿ ಹಾಗೂ ಕೆಂಪು ಬಣ್ಣಗಳನ್ನು ಒಳಗೊಂಡ ನಾಡಧ್ವಜ ಮಾದರಿ ಅಂತಿಮಗೊಂಡಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಸಮ್ಮತಿ ದೊರೆತ ಬಳಿಕ ಅಂತಿಮ ಒಪ್ಪಿಗೆಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಲಾಗುತ್ತದೆ. ಈ ಮೂಲಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕನ್ನಡ ಅಸ್ಮಿತೆಯ ಪ್ರಬಲ ಅಸ್ತ್ರವೊಂದನ್ನು ಬತ್ತಳಿಕೆಗೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಸಜ್ಜಾಗಿದೆ.

ರಾಜ್ಯಕ್ಕೆ ಪ್ರತ್ಯೇಕ ಧ್ವಜದ ಕಾನೂನಿನ ಅಂಶಗಳ ಪರಿಶೀಲನೆ ಹಾಗೂ ಧ್ವಜ ವಿನ್ಯಾಸ ಅಂತಿಮ ಮಾಡಲು ಜುಲೈನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅಧ್ಯಕ್ಷತೆಯಲ್ಲಿ ರಚನೆ ಆಗಿದ್ದ ಸಮಿತಿ ಸತತ ಸಭೆಗಳನ್ನು ನಡೆಸಿ ಧ್ವಜದ ಮಾದರಿಯನ್ನು ಅಂತಿಮಗೊಳಿಸಿದೆ.

ಸೋಮವಾರ ಅಂತಿಮ ಸಭೆ: ಧ್ವಜ ಸಮಿತಿ ಸೋಮವಾರ ಅಂತಿಮ ಸಭೆ ನಡೆಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ವಿನ್ಯಾಸದ ಸಹಿತ ವರದಿಯನ್ನು ಸಲ್ಲಿಸಲಿದೆ. ಬಳಿಕ ಸಚಿವರು ಸಿಎಂ ಜತೆ ರ್ಚಚಿಸಿ ಸಚಿವ ಸಂಪುಟದ ಮುಂದೆ ಮಂಡಿಸಿ ಒಪ್ಪಿಗೆ ಪಡೆದು ನಂತರ ಕೇಂದ್ರದ ಅನುಮತಿಗಾಗಿ ರವಾನಿಸಲಾಗುತ್ತದೆ.

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ನಾಡಧ್ವಜ ಹೊಂದುವ ಎರಡನೇ ರಾಜ್ಯವೆಂಬ ಖ್ಯಾತಿ ಕರ್ನಾಟಕದ ಮುಡಿಗೇರಲಿದೆ. 1972ರಿಂದಲೂ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ಧ್ವಜ ಹೊಂದಿದೆ.

ಧ್ವಜದ ಇತಿಹಾಸ

ರಾಜ್ಯಕ್ಕೂ ಪ್ರತ್ಯೇಕ ಧ್ವಜ ಇರಬೇಕೆಂಬ ಬೇಡಿಕೆಗೆ 5 ದಶಕಗಳ (1960)ಇತಿಹಾಸವಿದೆ. ಧ್ವಜದ ಕೂಗಿಗೆ ಯಾವುದೇ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಮಾ. ರಾಮಮೂರ್ತಿ ಅವರು ಕನ್ನಡ ಪಕ್ಷಕ್ಕಾಗಿ ರಚಿಸಿದ್ದ ಹಳದಿ, ಕೆಂಪು ಧ್ವಜವನ್ನೇ ಬಳಸಲಾಗುತ್ತಿದೆ. 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಕನ್ನಡ ರಾಜ್ಯೋತ್ಸವದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸುವಂತೆ ಸುತ್ತೋಲೆ ಹೊರಡಿಸಿದ್ದರು. ಆ ನಂತರ ಡಿ.ವಿ. ಸದಾನಂದಗೌಡರು ಬಜೆಟ್​ನಲ್ಲಿ ಘೊಷಣೆ ಮಾಡಿದ್ದರು. ಆದರೆ ಈ ನಿರ್ಧಾರವನ್ನು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದರಿಂದಾಗಿ 2012ರಲ್ಲಿ ಸುತ್ತೋಲೆ ವಾಪಸ್ ಪಡೆಯಲಾಗಿತ್ತು.

ಸಮಿತಿ ಸದಸ್ಯರ್ಯಾರು?

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಡಿಪಿಎಆರ್, ಕಾನೂನು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ, ಕನ್ನಡ ವಿವಿ ಕುಲಪತಿ ಡಾ. ಮಲ್ಲಿಕಾ ಘಂಟಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಸರ್ಕಾರದ ಮತತಂತ್ರ?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನ್ನಡದ ಅಸ್ಮಿತೆ ವಿಚಾರ ಮುಂದಿಟ್ಟುಕೊಂಡು ಜನರ ಬಳಿ ಹೋಗಲು ಸಿಎಂ ಸಿದ್ದರಾಮಯ್ಯ ತಂತ್ರ ಹೆಣೆದಿದ್ದಾರೆ. ಅದಕ್ಕೆ ಪೂರಕವಾಗಿಯೇ ಕನ್ನಡ ಧ್ವಜ ರೂಪಿಸಲಾಗುತ್ತಿದೆ. ಸಂಪುಟ ಅನುಮೋದನೆ ಬಳಿಕ ಕೇಂದ್ರಕ್ಕೆ ಒಪ್ಪಿಗೆಗಾಗಿ ರವಾನಿಸಿ ಬಿಜೆಪಿಯನ್ನು ಸಂಕಷ್ಟಕ್ಕೆ ಸಿಲುಕಿಸುವ ಲೆಕ್ಕಾಚಾರ ಈ ಉದ್ದೇಶದ ಹಿಂದಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ನಾಡಧ್ವಜ ರಚನೆಗೆ ಮುಂದಾದಾಗ ರಾಷ್ಟ್ರಧ್ವಜವೇ ಸಾಕು ಎಂಬ ಅಭಿಪ್ರಾಯ ಬಿಜೆಪಿ ನಾಯಕರಿಂದ ವ್ಯಕ್ತವಾಗಿತ್ತು.

ಬಣ್ಣಗಳ ಆಯ್ಕೆ ಹೇಗೆ?

ಕನ್ನಡ ಹೋರಾಟಗಾರ ಮ. ರಾಮಮೂರ್ತಿ ವಿನ್ಯಾಸ ಮಾಡಿದ್ದ ಹಳದಿ ಮತ್ತು ಕೆಂಪು ಧ್ವಜ ಜನರನ್ನು ಭಾವನಾತ್ಮಕವಾಗಿ ಬೆಸೆದಿದೆ. ಆ ಬಣ್ಣಗಳನ್ನು ಇಟ್ಟುಕೊಂಡೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಲ್ಕು ಮಾದರಿಗಳನ್ನು ಕಲಾವಿದರಿಂದ ವಿನ್ಯಾಸ ಮಾಡಿಸಿತ್ತು. ಅದರಲ್ಲಿ ಹಳದಿ, ಬಿಳಿ ಮತ್ತು ಕೆಂಪು ಬಣ್ಣ ಹಾಗೂ ಮಧ್ಯದಲ್ಲಿ ‘ಸತ್ಯಮೇವ ಜಯತೆ’ ಎಂಬ ಘೋಷವಾಕ್ಯ, ಗಂಡಭೇರುಂಡದ ಲಾಂಛನ ಒಳಗೊಂಡ ಧ್ವಜವನ್ನು ಅಂತಿಮ ಮಾಡಲಾಗಿದೆ. ಈ ಮೂರು ವರ್ಣಗಳು ಶಾಂತಿ, ಧೈರ್ಯ, ಸಹಬಾಳ್ವೆ, ಗೌರವವನ್ನು ಪ್ರತಿನಿಧಿಸುತ್ತವೆ.

ವಿಶೇಷತೆ ಏನು?

ಹಳದಿ, ಬಿಳಿ ಹಾಗೂ ಕೆಂಪು ವರ್ಣಗಳ ಪೈಕಿ ಬಿಳಿಯ ಬಣ್ಣದ ಮಧ್ಯದಲ್ಲಿ ರಾಜ್ಯದ ಲಾಂಛನ ಇರುತ್ತದೆ. ಸದ್ಯ ಹಳದಿ ಹಾಗೂ ಕೆಂಪು ಬಣ್ಣದ ಕನ್ನಡ ಧ್ವಜ ಚಾಲ್ತಿಯಲ್ಲಿದೆ. ಆದರೆ ಅದು ಕನ್ನಡ ಪಕ್ಷವೊಂದರ ಧ್ವಜವೂ ಆಗಿರುವ ಕಾರಣ ಅದರಲ್ಲಿಯೇ ಸ್ವಲ್ಪ ಬದಲಾವಣೆ ಮಾಡಿಕೊಂಡು ಹೊಸ ವಿನ್ಯಾಸದ ಧ್ವಜವನ್ನು ಅಂತಿಮಗೊಳಿಸಲಾಗಿದೆ.

 ಕಾನೂನು ತೊಡಕಾಗಲ್ಲ

ಬುಧವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕಾನೂನು, ಡಿಪಿಎಆರ್ ಹಾಗೂ ಗೃಹ ಇಲಾಖೆಯ ಅಧಿಕಾರಿಗಳು ಪ್ರತ್ಯೇಕ ಧ್ವಜ ಹೊಂದಲು ಕಾನೂನಿನ ಸಮಸ್ಯೆ ಏನಿಲ್ಲ, ಆದರೆ ಕೇಂದ್ರದ ಒಪ್ಪಿಗೆಯಷ್ಟೇ ಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಲ್ಕು ವಿನ್ಯಾಸಗಳಲ್ಲಿ ಒಂದನ್ನು ಅಂತಿಮ ಮಾಡಿದ್ದೇವೆ. ಜ.22ಕ್ಕೆ ಮತ್ತೊಂದು ಸಭೆ ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ. ರಾಜ್ಯದ ಜನರ ಬಹುದಿನಗಳ ಕನಸು ಈಡೇರುವ ಕಾಲ ಹತ್ತಿರ ಬರುತ್ತಿದೆ.

-ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

ನಾಲ್ಕು ವಿನ್ಯಾಸಗಳನ್ನು ಪರಿಶೀಲಿಸಿ ಒಂದನ್ನು ಅಂತಿಮ ಮಾಡಿದ್ದೇವೆ. ರಾಜ್ಯ ಧ್ವಜ ಇರಬಾರದೆಂದು ಕಾನೂನಿನಲ್ಲಿ ಹೇಳಿಲ್ಲ, ಆದರೆ ಕೇಂದ್ರದ ಒಪ್ಪಿಗೆ ಅಗತ್ಯವೆಂಬುದನ್ನು ಕಾನೂನು ಹಾಗೂ ಡಿಪಿಎಆರ್ ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದಾರೆ.

| ಡಾ. ಮನು ಬಳಿಗಾರ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು

Leave a Reply

Your email address will not be published. Required fields are marked *

Back To Top