Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಕರ್ನಾಟಕದಲ್ಲಿ 150 ಸ್ಥಾನ ಗೆದ್ದೇ ಗೆಲ್ಲುತ್ತೇವೆ

Monday, 12.02.2018, 3:04 AM       No Comments

| ಅಶ್ವಿನ್ ಗೌತಮ್ ಯು. ಬೆಂಗಳೂರು

‘ಕಳೆದ ಐದು ವರ್ಷದಿಂದ ದೇಶದ ಯಾವುದೇ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ವಣವಾಗಿಲ್ಲ. ಕರ್ನಾಟಕದಲ್ಲೂ ಈ ಬಾರಿ ಚುನಾವಣೆಯಲ್ಲಿ ಮತದಾರರು ಸ್ಪಷ್ಟ ತೀರ್ಪು ನೀಡಲಿದ್ದಾರೆ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ ’… ಇದು ಕರ್ನಾಟಕ ಬಿಜೆಪಿ ಚುನಾವಣಾ ಪ್ರಭಾರಿ ಪ್ರಕಾಶ್ ಜಾವಡೇಕರ್ ವಿಶ್ವಾಸದ ನುಡಿ. ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್ 24/7’ ವಿಶೇಷ ಸಂದರ್ಶನದಲ್ಲಿ ಅವರು ಚುನಾವಣೆ ರಣತಂತ್ರ, ಕೇಂದ್ರ ಸರ್ಕಾರದ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯ, ಮೈತ್ರಿ, ರೈತರ ಆತ್ಮಹತ್ಯೆ ಸೇರಿ ಅನೇಕ ವಿಚಾರ ಹಂಚಿಕೊಂಡಿದ್ದಾರೆ.

# ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸುಲಭವಲ್ಲ ಎನ್ನಿಸುತ್ತಿಲ್ಲವೇ?

-ಇಲ್ಲ. ಇಲ್ಲ. ಕರ್ನಾಟಕದಲ್ಲಿ ಗೆಲವು ಅತ್ಯಂತ ಸುಲಭದ ಕೆಲಸ. ಆದರೆ, ಕಾಂಗ್ರೆಸ್​ಗೆ ಕಷ್ಟದ ಕೆಲಸ. ಅವರು ಇಲ್ಲಿ ಗೆಲ್ಲುವುದು ಸಾಧ್ಯವೇ ಇಲ್ಲ. ಬಿಜೆಪಿ ಎಲ್ಲೆಡೆ ಅಸ್ತಿತ್ವದಲ್ಲಿದೆ. ಮೇ 10 ರಂದು ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ನಿಮಗೆ ಗೊತ್ತಾಗುತ್ತದೆ. ಬಿಜೆಪಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ.

# ರಾಜ್ಯದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತಿದೆಯಲ್ಲ?

-ನಾವು ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಲೇ ಇದ್ದೇವೆ. ಇತ್ತೀಚೆಗೆ, ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ. 3,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ, ನೀರಾವರಿ ಕಾಮಗಾರಿಗಳ ಕುರಿತು ಎರಡು ಪುಟದ ಜಾಹೀರಾತು ನೀಡಿದೆ. ಭವಿಷ್ಯದ ಕಾಮಗಾರಿಗಳಿವೆಯೇ ಹೊರತು, ಕಳೆದ 5 ವರ್ಷಗಳಲ್ಲಿ ಏನು ಮಾಡಿದ್ದೇವೆ ಎಂದು ಎಲ್ಲಿಯೂ ಹೇಳಿಲ್ಲ. ರಾಜಕೀಯದಲ್ಲಿ ಕೋಮುವಾದ ಬೆರೆಸುತ್ತಿದ್ದಾರೆ. ಈ ನೀತಿಗಳು ರಾಜ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

# ಬಿಜೆಪಿಯ ಹಲವು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಇದಕ್ಕೇನು ಹೇಳುತ್ತೀರಿ?

-ಕೆಲವರಿಗೆ ಟಿಕೆಟ್ ಖಾತ್ರಿಯಾಗಿಲ್ಲ. ಕೆಲವರು ಸ್ಥಳೀಯ ಅಂಶಗಳನ್ನು ಪರಿಗಣಿಸಿ, ತಮಗೆ ತಾವೇ ಕೆಲವು ರಣತಂತ್ರಗಳನ್ನು ರೂಪಿಸಿಕೊಂಡಿದ್ದಾರೆ. ಅಂತಹವರು ಪಕ್ಷ ಬಿಡುತ್ತಿದ್ದಾರೆ. ಆದರೆ, ಹೆಚ್ಚು ಜನ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ವಾರ ಸಂಡೂರಿನ ಮಹಾರಾಜ ಬಿಜೆಪಿ ಸೇರ್ಪಡೆಯಾದರು. ಇದು ಬಳ್ಳಾರಿಯಲ್ಲಿ ಪಕ್ಷಕ್ಕೆ ಬಲ ತುಂಬಲಿದೆ. ಇನ್ನೂ ಹಲವರು ಸರದಿಯಲ್ಲಿ ಕಾಯುತ್ತಿದ್ದಾರೆ. ಇಬ್ಬರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ.

# ಬಿಜೆಪಿ ನಾಯಕರ ಸ್ಲಂ ವಾಸ್ತವ್ಯದ ಹಿಂದಿರುವ ಗುಟ್ಟೇನು?

ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಬಡವರು ಈಗ ಮೋದಿ ಮತ್ತು ಬಿಜೆಪಿ ಜತೆ ಗುರುತಿಸಿಕೊಳ್ಳುತ್ತಿದ್ದಾರೆ. ಮುಂದಿನ 5 ವರ್ಷದಲ್ಲಿ ಮೋದಿ ಮಾತ್ರ ನಮಗೆ ಸೂರಿನ ಭರವಸೆ ನೀಡಬಲ್ಲರು, ಸ್ಲಂಗಳು ಮಾಯವಾಗುತ್ತವೆ ಎಂಬುದನ್ನು ಅರಿತಿದ್ದಾರೆ.

# ನಿಮ್ಮ ಸಿಎಂ ಅಭ್ಯರ್ಥಿ ಯಡಿಯೂರಪ್ಪ ವಿರುದ್ಧ ಹಲವು ಆರೋಪಗಳನ್ನು ಕಾಂಗ್ರೆಸ್ ಹೊರಿಸುತ್ತಿದೆ?

ಈ ಆರೋಪಗಳೆಲ್ಲವೂ ಸಾಬೀತಾಗುವುದಿಲ್ಲ. ಯಡಿಯೂರಪ್ಪ ಖುಲಾಸೆಯಾಗಿದ್ದಾರೆ. ಅವರು ಅತ್ಯಂತ ಜನಪ್ರಿಯ ನಾಯಕ. ಮುಂದಿನ ಟಾರ್ಗೆಟ್ ನೀವೇ ಎಂದು ವಿಧಾನಸಭೆಯಲ್ಲಿ ಸಿ.ಟಿ. ರವಿ ಅವರಿಗೆ ಕಾಂಗ್ರೆಸ್ ಸದಸ್ಯರೊಬ್ಬರು ಹೇಳಿದ್ದರು. ಕಾಂಗ್ರೆಸ್ಸಿನ ಅಸಲಿ ಮುಖ. ಬೆದರಿಕೆಗಳಿಗೆ ಮಣಿಯಲ್ಲ. ಹೋರಾಡುತ್ತೇವೆ. ಎಸ್​ಡಿಪಿಐ, ಪಿಎಎಫ್​ಐ ಬ್ಯಾನ್ ಮಾಡಲೇಬೇಕಿದ್ದ ಸರ್ಕಾರ, ಅವಕ್ಕೆ ಸ್ವಾಗತ ನೀಡುತ್ತಿದೆ.

# ಈ ಸಂಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?

ಕಾನೂನು ಸುವ್ಯವಸ್ಥೆ ರಾಜ್ಯದ ವಿಚಾರ. ಕೇಂದ್ರ ಸರ್ಕಾರ ಮೂಗು ತೂರಿಸುವಂತಿಲ್ಲ. ಬೆಂಗಳೂರಿನ ಪಾದಚಾರಿ ಮಾರ್ಗದಲ್ಲೇ ಅತ್ಯಾಚಾರಗಳು ನಡೆಯುತ್ತಿವೆ. ಪೊಲೀಸರಿಗೇ ರಕ್ಷಣೆ ಇಲ್ಲ. ಪೊಲೀಸರ ಪಿಸ್ತೂಲ್, ರೈಫಲ್​ಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಇದು ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯ ಪ್ರತಿಬಿಂಬ.

# ಎಲ್ಲ ಸಮೀಕ್ಷೆಗಳೂ ಅತಂತ್ರ ಸ್ಥಿತಿ ಎನ್ನುತ್ತಿವೆಯಲ್ಲ?

ಸರ್ವೆಗಳ ಬಗ್ಗೆ ಸಹಮತ ವ್ಯಕ್ತಪಡಿಸಲ್ಲ. ಉತ್ತರಪ್ರದೇಶ ಚುನಾವಣೆಗೂ ಮುನ್ನ ಬಿಜೆಪಿ 160 ರಿಂದ 180 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸರ್ವೆಗಳು ಹೇಳಿದ್ದವು. ಬಿಜೆಪಿ 325 ಸ್ಥಾನ ಪಡೆಯಿತು.

# ಪರಿವರ್ತನಾ ಯಾತ್ರೆ ಬಳಿಕ ಯಾವ ಪರಿವರ್ತನೆ ಕಂಡು ಬಂದಿದೆ?

ಪರಿವರ್ತನಾ ರ‍್ಯಾಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಬೆಂಗಳೂರಿನಲ್ಲಿ ಮೋದಿಯವರು ಚಾರಿತ್ರಿಕ ಮತ್ತು ಬೃಹತ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು. ಫೆ.19ಕ್ಕೆ ಮೈಸೂರಿಗೆ, 27ಕ್ಕೆ ದಾವಣಗೆರೆಗೆ ಪ್ರಧಾನಿ ಮೋದಿ ಬರಲಿದ್ದಾರೆ.

#  ಮೋದಿಯವರನ್ನಷ್ಟೇ ಬಿಂಬಿಸೋದು ಏಕೆ? ರಾಜ್ಯದಲ್ಲಿ ಸಮರ್ಥರಿಲ್ಲವೇ?

ನಮ್ಮ ಘೊಷಣೆಯೇ ಕರ್ನಾಟಕದ ವಿಕಾಸ ಜೋಡಿ, ಯಡಿಯೂರಪ್ಪ-ಮೋದಿ. ಇಬ್ಬರನ್ನೂ ಬಿಂಬಿಸುತ್ತಿದ್ದೇವೆ.

# ಜನ ಬಿಜೆಪಿಗೆ ಏಕೆ ಮತ ನೀಡಬೇಕು?

ನಾವು ತಾರತಮ್ಯ ಮಾಡುವುದಿಲ್ಲ. ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ನಮ್ಮ ತತ್ವ. ಭ್ರಷ್ಟಾಚಾರದ ನಿಮೂಲನೆಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಜನ ಸಾಮಾನ್ಯರು ಉತ್ತಮ ಜೀವನ ನಡೆಸಲು ಮೂಲಸೌಕರ್ಯ ಕಲ್ಪಿಸುತ್ತಿದ್ದೇವೆ. ದೇಶದ 50 ಕೋಟಿ ಜನರಿಗೆ ಆರೋಗ್ಯ ರಕ್ಷಣೆ ನಿಡುವ ಆಯುಷ್ಮಾನ್ ಭಾರತ, ರೈತರ ಬವಣೆ ನೀಗಿಸಲು ಮೊಟ್ಟ ಮೊದಲ ಬಾರಿಗೆ ಸ್ವಾಮಿನಾಥನ್ ಸಮಿತಿ ವರದಿ ಅಂಗೀಕರಿಸಿದ್ದೇವೆ.

# ಮೈತ್ರಿ ಕುರಿತು ನಿಮ್ಮ ದೃಷ್ಟಿಕೋನವೇನು?

ಮೈತ್ರಿಯ ಪ್ರಶ್ನೆಯೇ ಇಲ್ಲ. ಬಿಜೆಪಿ ಏಕಾಂಗಿಯಾಗಿ ಸೆಣಸುತ್ತಿದೆ. ಬಿಜೆಪಿ ಮೂರನೇ ಎರಡರಷ್ಟು ಸ್ಪಷ್ಟ ಬಹುಮತ ಪಡೆಯುತ್ತದೆ.

ಅಭಿನಂದನೆ

ದಿಗ್ವಿಜಯ 247ನ್ಯೂಸ್ ಮತ್ತು ವಿಜಯವಾಣಿಗೆ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಏಕೆಂದರೆ, ದಿಗ್ವಿಜಯ ನ್ಯೂಸ್ ಮತ್ತು ವಿಜಯವಾಣಿ ಕನ್ನಡಿಗರ ಜನಮನ ಗೆದ್ದು, ವಿಶ್ವಾಸಾರ್ಹತೆಯನ್ನು ಸಂಪಾದಿಸಿವೆ.

Leave a Reply

Your email address will not be published. Required fields are marked *

Back To Top