Tuesday, 16th October 2018  

Vijayavani

ಜಮಖಂಡಿಯಲ್ಲಿ ಕಾಂಗ್ರೆಸ್-ಬಿಜೆಪಿ ಜಂಗೀಕುಸ್ತಿ- ಕೈ-ಕಮಲ ಅಭ್ಯರ್ಥಿಗಳಿಂದ ನಾಮಿನೇಷನ್​​ - ಬಿಎಸ್​ವೈ, ಸಿದ್ದು ಶಕ್ತಿಪ್ರದರ್ಶನ        ಗಣಿಧಣಿಗಳ ನಾಡಲ್ಲಿ ಬಿಗ್ ಫೈಟ್-ಉಗ್ರಪ್ಪ-ಶಾಂತಾರಿಂದ ಉಮೇದುವಾರಿಕೆ-ರಾಮುಲು, ಡಿಕೆಶಿ ನಡುವೆ ಅಸಲಿ ಕದನ        ಶಿವಮೊಗ್ಗ ಅಖಾಡದಲ್ಲಿ ಮಾಜಿ ಸಿಎಂ ಪುತ್ರರ ಸಮರ-ಇಂದು ಮಧು ಬಂಗಾರಪ್ಪ ನಾಮಪತ್ರ-ಜೆಡಿಎಸ್‌ ಅಭ್ಯರ್ಥಿಗೆ ಕಾಂಗ್ರೆಸ್ ಸಾಥ್        ಮಂಡ್ಯ ಲೋಕಸಭಾ ಚುನಾವಣೆ ಕದನ-ಇಂದು ಬಿಎಸ್​​ವೈ, ಎಚ್​ಡಿಕೆಯಿಂದ ಪ್ರಚಾರ-ದೋಸ್ತಿಗೆ ಸೆಡ್ಡು ಹೊಡೆಯಲು ಕಮಲ ಪ್ಲಾನ್​​        ರಾಮನಗರದಲ್ಲಿ ಕೋಟ್ಯಧಿಪತಿಗಳ ಕಾರುಬಾರು-ಸಿಎಂ ಪತ್ನಿ 127 ಕೋಟಿ ರೂ. ಒಡತಿ-ನಾನೇನು ಕಮ್ಮಿನಾ ಅಂತಿದ್ದಾರೆ ಚಂದ್ರಶೇಖರ್        ಬೈ ಎಲೆಕ್ಷನ್​ ಟೆನ್ಷನ್​ ಮಧ್ಯೆಯೇ ಡಿಸಿಎಂ ವರ್ಕಿಂಗ್​​-ಹುಬ್ಬಳ್ಳಿ ಠಾಣೆಗೆ ದಿಢೀರ್ ವಿಸಿಟ್​​​​​​​​​​-ಬೀಟ್ ಸಿಸ್ಟ್ಂ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪಾಠ       
Breaking News

ಈಶಾನ್ಯದತ್ತ ಗಮನ

Tuesday, 25.09.2018, 3:04 AM       No Comments

‘ಸಪ್ತ ಸಹೋದರಿಯರು’ ಎಂದೇ ಕರೆಯಲ್ಪಡುವ ಈಶಾನ್ಯದ ಏಳು ರಾಜ್ಯಗಳನ್ನು ಸ್ವಾತಂತ್ರ್ಯಪ್ರಾಪ್ತಿಯ ಬಳಿಕ ನಿರ್ಲಕ್ಷಿಸಿಕೊಂಡು ಬರಲಾಗಿದೆ ಎಂಬ ಅಸಮಾಧಾನ ವ್ಯಾಪಕವಾಗಿತ್ತು. ಈ ನಿರ್ಲಕ್ಷ್ಯದ ಪರಿಣಾಮ ಅಲ್ಲಿ ಉಲ್ಪಾ ಸೇರಿದಂತೆ ಕೆಲ ಸಮಾಜವಿರೋಧಿ ಶಕ್ತಿಗಳು ಸಕ್ರಿಯವಾದ ಕಾರಣ ಸಾಮಾಜಿಕ ವಾತಾವರಣವೂ ಬಿಗಡಾಯಿಸಿತು. ಪ್ರತ್ಯೇಕತೆಯ ದನಿಯೂ ಕೇಳಿಬಂತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ತಮ್ಮ ಕಾರ್ಯಸೂಚಿಯಲ್ಲಿ ಈಶಾನ್ಯ ಭಾರತಕ್ಕೆ ಆದ್ಯತೆ ನೀಡದ ಪರಿಣಾಮ ಹಲವು ಅಪಸವ್ಯಗಳು ಹುಟ್ಟಿಕೊಂಡವು. ಆದರೆ, ಪ್ರಸಕ್ತ ಕೇಂದ್ರ ಸರ್ಕಾರ ಈಶಾನ್ಯದ ಮಹತ್ವವನ್ನು ಅರಿತುಕೊಂಡಿದೆ. ‘ಭಾರತದ ಬೆಳವಣಿಗೆಗೆ ಈಶಾನ್ಯ ರಾಜ್ಯಗಳನ್ನೇ ಪ್ರಮುಖ ಚಾಲನಾಶಕ್ತಿಯನ್ನಾಗಿಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಆ ಬದ್ಧತೆಯ ಸಾಕಾರಕ್ಕೆ ಮುಂದಾಗಿದ್ದಾರೆ. ಸಿಕ್ಕಿಂನ ಮೊದಲ ಮತ್ತು ದೇಶದ 100ನೇ ವಿಮಾನ ನಿಲ್ದಾಣವನ್ನು ಸೋಮವಾರದಂದು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ಬಳಿಯ ಪಾಕ್ಯೊಂಗ್ ಗ್ರಾಮದಲ್ಲಿ ಪ್ರಧಾನಿಯೇ ಉದ್ಘಾಟಿಸಿದ್ದು, ಸಿಕ್ಕಿಂ ಪಾಲಿಗೆ ಐತಿಹಾಸಿಕ ಕ್ಷಣ ಎನ್ನಬಹುದು.

ಭಾರತ-ಚೀನಾ ಗಡಿಯಿಂದ ಕೇವಲ 60 ಕಿ.ಮೀ. ದೂರದಲ್ಲಿ ಈ ಗ್ರೀನ್​ಫೀಲ್ಡ್ ಏರ್​ಪೋರ್ಟ್ ಇದ್ದು, ಭಾರತೀಯ ವಾಯುಪಡೆಯ ಯುದ್ಧವಿಮಾನಗಳನ್ನು ಲ್ಯಾಂಡ್ ಮಾಡಲು ಅನುಕೂಲವಾಗಲಿದೆ. 201 ಎಕರೆ ವಿಸ್ತೀರ್ಣದಲ್ಲಿ 605 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ವಣವಾಗಿದೆ. ಈ ಮೊದಲು, ಗ್ಯಾಂಗ್ಟಕ್ ತಲುಪಲು ಪಶ್ಚಿಮ ಬಂಗಾಳದ ಬಗ್​ಡೊಗ್ರಾ ಏರ್​ಪೋರ್ಟ್​ಗೆ ವಿಮಾನದಲ್ಲಿ ಬಂದು, ಅಲ್ಲಿಂದ 124 ಕಿ.ಮೀ. ಅಂತರವನ್ನು ಗುಡ್ಡಗಳನ್ನು ಏರಿ ಕ್ರಮಿಸಬೇಕಿತ್ತು. ಈಗ ಸಿಕ್ಕಿಂನೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳನ್ನು ಕೇಂದ್ರವಾಗಿಸಿಕೊಂಡು ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ರಸ್ತೆ ನಿರ್ವಣ, ರೈಲು ಸಂಪರ್ಕ, ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ಸಂಪರ್ಕವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಏಕೆಂದರೆ, ಈ ರಾಜ್ಯಗಳ ಜನರು ರಾಜಧಾನಿ ದೆಹಲಿ ಅಥವಾ ದೇಶದ ಪ್ರಮುಖ ಭಾಗಗಳಿಗೆ ಆಗಮಿಸಬೇಕಾದರೆ ಹಲವು ದಿನಗಳ ಪ್ರವಾಸ ಮಾಡಬೇಕಿತ್ತು. ಅಲ್ಲದೆ, ಆಯಾ ರಾಜ್ಯಗಳ ವಾಸ್ತವ ಸಮಸ್ಯೆಗಳನ್ನು ಗ್ರಹಿಸಿ, ಅವುಗಳಿಗೆ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಿಜೋರಾಂನಲ್ಲಿ ಹಣ್ಣು ಬೆಳೆಗಾರರಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಹಣ್ಣುಗಳಿಂದ ಉಪಉತ್ಪನ್ನ ತಯಾರಿಸುವ ಕಾರ್ಖಾನೆ ಆರಂಭಿಸಲಾಗಿದೆ. ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆಂದೇ ವಿಶೇಷ ಸ್ಕಾಲರ್​ಶಿಪ್ ಆರಂಭಿಸಲಾಗಿದೆ. ಮಾತ್ರವಲ್ಲ, ಅಲ್ಲಿನ ಸಂಸ್ಕೃತಿ, ಪರಂಪರೆಯ ರಕ್ಷಣೆ, ಸಂವರ್ಧನೆಗೂ ಕ್ರಮ ಕೈಗೊಳ್ಳಲಾಗಿದೆ. ಪರಿಣಾಮ, ಈಶಾನ್ಯ ರಾಜ್ಯಗಳ ಜನರು ಈಗ ಭಾವನಾತ್ಮಕವಾಗಿ ದೇಶದ ಬೇರೆ ಭಾಗಗಳೊಂದಿಗೆ, ಅಲ್ಲಿನ ಜನರೊಂದಿಗೆ ಬೆರೆಯುತ್ತಿದ್ದಾರೆ. ಏಳು ದಶಕಗಳ ಅನಾಥಭಾವವೊಂದು ಕೊನೆಗೊಂಡು ಅಭಿವೃದ್ಧಿಯ ಕಿರಣಗಳು ಗೋಚರಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆಯೇ ಸರಿ. ಭಾರತ ಅಖಂಡವಾಗಿ ಉಳಿಯಬೇಕಾದ್ದು ಅವಶ್ಯವೂ, ಅನಿವಾರ್ಯವೂ ಆಗಿದೆ. ಹಾಗಾಗಿ, ಒಡಕಿನ ದನಿಗಳನ್ನು, ಅಸಮಾಧಾನಗಳನ್ನು ಶಮನಗೊಳಿಸಲು ಅಭಿವೃದ್ಧಿಯೇ ಮುಖ್ಯ ಕೀಲಿಕೈ. ಅಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗದ ಅವಕಾಶಗಳನ್ನು ಒದಗಿಸುವ ಜತೆಗೆ ಹೆಚ್ಚು ಸಂಖ್ಯೆಯಲ್ಲಿ ಮುಖ್ಯವಾಹಿನಿಗೆ ತರುವ ಕೆಲಸ ಸಮರೋಪಾದಿಯಲ್ಲಿ ನಡೆದರೆ ನಿಜಾರ್ಥದಲ್ಲಿ ದೇಶದ ಬೆಳವಣಿಗೆಗೆ ಈಶಾನ್ಯವೇ ಅಭಿವೃದ್ಧಿಯ ಇಂಜಿನ್ ಆಗಬಲ್ಲದು.

Leave a Reply

Your email address will not be published. Required fields are marked *

Back To Top