Thursday, 20th September 2018  

Vijayavani

Breaking News

ನಿಯಮ ಜಾರಿ ಮುಖ್ಯ

Saturday, 08.09.2018, 3:02 AM       No Comments

ಗುಟ್ಖಾ ಪದಾರ್ಥಗಳ ಮೇಲಿನ ನಿಷೇಧದ ಹೊರತಾಗಿಯೂ, ಅದರ ವ್ಯವಹಾರದ ಕಬಂಧಬಾಹುಗಳು ತೆರೆಮರೆಯಲ್ಲೇ ಚಾಚಿಕೊಂಡಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಪ್ರತ್ಯಕ್ಷ ಗುಟ್ಖಾ ಮಾರಾಟಕ್ಕೆ ಲಗಾಮು ಹಾಕಿದಾಗಿನಿಂದ, ಪಾನ್ ಮಸಾಲ ಹಾಗೂ ತಂಬಾಕನ್ನು ಪ್ರತ್ಯೇಕ ಪ್ಯಾಕೆಟ್​ಗಳಲ್ಲಿ ಮಾರುವ ಮೂಲಕ ವ್ಯಾಪಾರಸ್ಥರು ‘ರಂಗೋಲಿ ಕೆಳಗೆ ನುಸುಳುವ’ ಚಾಣಾಕ್ಷತೆ ಮೆರೆದಿರುವುದು ಇದಕ್ಕೆ ಪುಷ್ಟಿನೀಡುವ ಸಂಗತಿ. ಇದು ಅಧಿಕಾರಸ್ಥರ, ಆರಕ್ಷಕರ ಒತ್ತಾಸೆಯೊಂದಿಗೇ ನಡೆಯುತ್ತಿದೆ ಎಂಬ ಆರೋಪ ಬಂದ ಕಾರಣ ಸಿಬಿಐ ಅಧಿಕಾರಿಗಳು ದೇಶದ ವಿವಿಧೆಡೆ ದಾಳಿನಡೆಸಿದ್ದೇನೋ ವರದಿಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ, ತಂಬಾಕು ಕೃಷಿ ಮತ್ತು ಉತ್ಪನ್ನಗಳ ಮಾರಾಟಕ್ಕೆ ಸಾರಾಸಗಟಾಗಿ ನಿಷೇಧ ಹೇರಿಬಿಡಬೇಕು ಎಂಬ ದನಿಯೂ ಕೇಳಿಬರುತ್ತಿದೆ. ಮನುಷ್ಯನ ದೈಹಿಕ ಆರೋಗ್ಯಕ್ಕೆ, ತನ್ಮೂಲಕ ಸಾಮಾಜಿಕ ಸ್ವಾಸ್ಥ್ಯಕ್ಕೆ ಸಂಚಕಾರ ಒಡ್ಡುವ ಯಾವುದೇ ಬಾಬತ್ತಿಗೆ ಕಡಿವಾಣ ಹಾಕಬೇಕು ಎಂಬುದು ಒಪು್ಪವಂಥ ಸಂಗತಿಯೇ ಆದರೂ, ಈ ಚರ್ಚಾವಿಷಯದ ಮತ್ತೊಂದು ಮಗ್ಗುಲನ್ನೂ ಅವಲೋಕಿಸುವ ಅಗತ್ಯವಿದೆ.

ಕ್ಯಾನ್ಸರ್ ಸೇರಿದಂತೆ 80ಕ್ಕೂ ಹೆಚ್ಚು ಕಾಯಿಲೆಗಳನ್ನು ಉಂಟುಮಾಡುತ್ತದೆ ಎನ್ನಲಾಗುವ ಗುಟ್ಖಾದಲ್ಲಿ ಅಡಕೆ, ಸುಣ್ಣ, ಮಸಾಲ, ತುಂಬಾಕು ಪದಾರ್ಥಗಳು ಮಿಳಿತವಾಗಿರುತ್ತವೆ. ಗುಟ್ಖಾದ ಮೇಲೆ ನಿಷೇಧದ ಅಂಕುಶ ಬಿದ್ದಾಗಿನಿಂದ, ತಂಬಾಕು ಮಾರಾಟಕ್ಕೆ ನಿರ್ಬಂಧವಿಲ್ಲದ ಅಂಶವನ್ನೇ ಗಟ್ಟಿಯಾಗಿ ಹಿಡಿದುಕೊಂಡ ಗುಟ್ಖಾ ಕಂಪನಿಗಳು ಒಂದು ಪ್ಯಾಕೆಟ್​ನಲ್ಲಿ ಮಸಾಲೆ-ಸುಣ್ಣ-ಅಡಕೆಯನ್ನೂ, ಮತ್ತೊಂದರಲ್ಲಿ ತಂಬಾಕನ್ನೂ ತುಂಬಿಸಿ ಮಾರಾಟ ಮಾಡುತ್ತಿವೆ. ಅಕ್ರಮ ಗುಟ್ಖಾ ತಯಾರಿಕೆಯಲ್ಲಿ ಹಾಗೂ ಮಾರಾಟದಲ್ಲಿ ತೊಡಗಿದವರಿಗೆ ಯಥೋಚಿತ ಶಿಕ್ಷೆ ಮತ್ತು ದಂಡನೆಯನ್ನು ನಿಗದಿಪಡಿಸಲಾಗಿದೆ; ಆದರೆ ಹೀಗೆ ವಾಮಮಾರ್ಗದ ಮೊರೆಹೊಕ್ಕವರ ಮೇಲೆ ಏನು ಶಿಸ್ತುಕ್ರಮ ಎಂಬುದಿಲ್ಲಿ ಪ್ರಶ್ನೆ. ಇದನ್ನೇ ಗಮನದಲ್ಲಿಟ್ಟುಕೊಂಡು ತಂಬಾಕು ನಿಷೇಧಕ್ಕೆ ಮುಂದಾದರೆ, ತಂಬಾಕು ಬೆಳೆಯುವುದನ್ನೇ ಜೀವನೋಪಾಯ ಆಗಿಸಿಕೊಂಡಿರುವವರ ಬದುಕು ದುಸ್ತರವಾಗುತ್ತದೆ ಮತ್ತು ರಾತ್ರೋರಾತ್ರಿ ಮತ್ತೊಂದರ ಕೃಷಿಗೆ ಅವರು ಒಡ್ಡಿಕೊಳ್ಳುವಂತಾಗುವಷ್ಟು ಸುಲಭವೂ ಅಲ್ಲ, ಅದಕ್ಕೆ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಹಂತಹಂತವಾಗಿ ಹೆಜ್ಜೆಯಿರಿಸುವುದು ವಿವೇಚನೆಯ ನಡೆಯಾದೀತು. ಗುಟ್ಖಾದಲ್ಲಿನ ಒಂದು ಘಟಕವಾಗಿದೆ ಎಂಬ ಕಾರಣಕ್ಕೆ ಅಡಕೆಯನ್ನೂ ನಿಷೇಧಿಸಬೇಕು ಎಂಬ ದನಿ ಮುನ್ನೆಲೆಗೆ ಬಂದಾಗ ಕ್ಯಾಂಪ್ಕೊ ಕಂಪನಿ ಈ ವಿಷಯದಲ್ಲಿ ವಾದಕ್ಕೆ ಮುಂದಾಗಿ, ಅಡಕೆಯಲ್ಲಿ ಔಷಧೀಯ ಗುಣಗಳೂ ಇರುವುದರಿಂದ ಸಾರಾಸಗಟಾಗಿ ಹೀಗೆ ನಿಷೇಧ ಹೇರಲಾಗದು ಎಂದು ಸಮರ್ಥಿಸಿದ್ದು ಇಲ್ಲಿ ಉಲ್ಲೇಖನೀಯ. ಹಾಗಂತ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ತಂಬಾಕು ಕೃಷಿಗೆ ಮತ್ತು ಅದರ ಉತ್ಪನ್ನಗಳಿಗೆ ಉತ್ತೇಜಿಸಬೇಕು ಎಂಬುದು ಈ ಮಾತಿನ ಇಂಗಿತವಲ್ಲ; ತಂಬಾಕು ಕೃಷಿಕರು, ಕೂಲಿಕಾರರು, ಬೀಡಿ-ಸಿಗರೇಟು-ಕಚ್ಚಾ ಹೊಗೆಸೊಪ್ಪಿನಂಥ ತಂಬಾಕು ಆಧರಿತ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ವಿವಿಧ ಸ್ತರದ ಉದ್ಯೋಗಿಗಳು ಮುಂತಾದವರ ಪುನರ್ವಸತಿ ಅಥವಾ ಮರುನಿಯೋಜನೆ ಕುರಿತೂ ಸಂಬಂಧಪಟ್ಟವರು ಮುನ್ನಂದಾಜು ಮಾಡಿ ಸೂಕ್ತ ನಿರ್ಧಾರ ಮಾಡಬೇಕಾಗುತ್ತದೆ. ಜತೆಗೆ, ಯಾವುದೇ ಅನಪೇಕ್ಷಿತ ಬೆಳವಣಿಗೆಯನ್ನು ಕಾನೂನು-ಕಟ್ಟಳೆಯೊಂದೇ ತಹಬಂದಿಗೆ ತರಲಾಗದು. ಇಂಥದೊಂದು ನಿರೀಕ್ಷೆಯ ಜತೆಜತೆಗೆ, ಸ್ವಯಂನಿಯಂತ್ರಣದ ಕುರಿತೂ ಸಾರ್ವಜನಿಕರು ಚಿಂತನೆ ನಡೆಸಬೇಕು.

Leave a Reply

Your email address will not be published. Required fields are marked *

Back To Top