Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ರಾಜಕೀಯ ಹಸ್ತಕ್ಷೇಪ ಸಲ್ಲ

Tuesday, 13.03.2018, 3:04 AM       No Comments

ಸರ್ಕಾರ ಮತ್ತು ಅಧಿಕಾರಶಾಹಿ ಆಡಳಿತ ನಿರ್ವಹಣೆಯ ಪ್ರಮುಖ ಕೊಂಡಿಗಳು. ಸಮರ್ಥ ಅಧಿಕಾರಿಗಳಿಲ್ಲದೆ ಸರ್ಕಾರದ ಯಾವುದೇ ಯೋಜನೆ, ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಕಷ್ಟಸಾಧ್ಯವೇ ಸರಿ. ಆದರೆ, ಅಧಿಕಾರಶಾಹಿ ಕಾರ್ಯನಿರ್ವಹಿಸುವಾಗ ಪ್ರತಿ ಹಂತದಲ್ಲೂ ರಾಜಕೀಯ ಶಕ್ತಿಗಳು ಹಸ್ತಕ್ಷೇಪ ಮಾಡಿದರೆ ಅದರಿಂದ ಆಡಳಿತಯಂತ್ರಕ್ಕೆ ಹೊಡೆತ ಬೀಳುವ ಜತೆಗೆ ಅಧಿಕಾರಿಗಳ ಆತ್ಮಸ್ಥೈರ್ಯಕ್ಕೂ ಪೆಟ್ಟು ಬೀಳುತ್ತದೆ. ಕೆಲ ಅಧಿಕಾರಿಗಳು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಸರ್ಕಾರದ ತಾಳಕ್ಕೆ ತಕ್ಕಂತೆ ವರ್ತಿಸಿದರೆ ಮತ್ತೆ ಕೆಲವರು ಜನಾನುರಾಗಿ ಆಗಿ ಕಾರ್ಯನಿರ್ವಹಿಸುತ್ತ ತಮ್ಮದೇ ಛಾಪು ಬೀರುತ್ತಾರೆ. ಹೀಗೆ ಜನರಿಗೆ ಹತ್ತಿರವಾಗಿ ಕೆಲಸ ಮಾಡುವ ಅಧಿಕಾರಿಗಳು ಸುಖಾಸುಮ್ಮನೆ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಅಶೋಕ್ ಖೇಮ್ಕಾ, ದುರ್ಗಾಶಕ್ತಿ ನೈಪಾಲ್ ಮುಂತಾದವರ ಪ್ರಕರಣಗಳು ಸಾಕ್ಷಿ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸಿರುವಾಗಲೇ ಕರ್ತವ್ಯದಲ್ಲಿ ಸರ್ಕಾರ/ರಾಜಕೀಯ ಹಸ್ತಕ್ಷೇಪ ಮಾಡುತ್ತಿದೆ ಎಂದು ಐಪಿಎಸ್ ಅಧಿಕಾರಿಗಳೇ ಅಸಮಾಧಾನ ವ್ಯಕ್ತಪಡಿಸಿರುವುದು, ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಗಂಭೀರ ಬೆಳವಣಿಗೆ. ಪ್ರಮುಖ ಪ್ರಕರಣಗಳ ತನಿಖೆಯನ್ನು ಹೈಜಾಕ್ ಮಾಡುವ ಮೂಲಕ ರಾಜಕೀಯ ನಾಯಕರು ಪೊಲೀಸರ ನೈತಿಕತೆ ಕುಗ್ಗಿಸುತ್ತಿದ್ದು, ವರ್ಗಾವಣೆ ನಿಯಮವನ್ನೂ ಪಾಲಿಸದೆ ಪೊಲೀಸರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗುವಂತೆ ಮಾಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿಗಳೇ ದನಿ ಎತ್ತಿರುವುದರಿಂದ, ಸರ್ಕಾರ ತುರ್ತು ಗಮನ ಹರಿಸುವ ಅವಶ್ಯಕತೆ ಇದೆ.

ರಾಜಕೀಯ ಪ್ರಭಾವವನ್ನು ಬಳಸಿ ಸ್ವಹಿತಾಸಕ್ತಿ ಸಾಧಿಸಿಕೊಳ್ಳುವುದು, ಅದಕ್ಕಾಗಿ ಅಧಿಕಾರಿಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವುದು ಕೆಲ ರಾಜಕಾರಣಿಗಳ ಹಳೆಯ ಚಾಳಿ. ಇದಕ್ಕೆ ಪಕ್ಷ, ಸರ್ಕಾರದ ಭೇದವೇನಿಲ್ಲ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಮೊದಲು ಕೈಹಾಕುವುದು ಅಧಿಕಾರಿಗಳ ವರ್ಗಾವರ್ಗಿಗೇ! ಆಯಕಟ್ಟಿನ ಜಾಗಗಳಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ಪ್ರತಿಷ್ಠಾಪಿಸಿ, ಮುಂದಿನ ದಾರಿ ಸಲೀಸಾಗಿಸಿಕೊಳ್ಳುವ ಪರಿ ಇಂದು-ನಿನ್ನೆಯದೇನಲ್ಲ. ಆಡಳಿತ ಸುಧಾರಣೆ ನಿಟ್ಟಿನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಂಡರೆ ಯಾರೂ ಆಕ್ಷೇಪಿಸಲಾರರು. ಆದರೆ, ಕರ್ತವ್ಯ ನಿರ್ವಹಣೆಯ ವೇಳೆ ಒತ್ತಡ, ಪ್ರಭಾವ, ವರ್ಚಸ್ಸು ಹೇರಿ ಅಪಸವ್ಯಗಳಿಗೆ ಎಡೆ ಮಾಡಿಕೊಡುವುದು ಸರಿಯಲ್ಲ.

ರಾಜ್ಯದಲ್ಲಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಅಧಿಕಾರಿಗಳು ರಾಜಕೀಯ ಹಸ್ತಕ್ಷೇಪದಿಂದ ಬಳಲಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಿಂದ ಹಿಡಿದು ಭ್ರಷ್ಟಾಚಾರ ಸಂಬಂಧಿ ಪ್ರಕರಣಗಳವರೆಗೆ ಯಾವವೂ ರ್ತಾಕ ಅಂತ್ಯ ಕಂಡಿಲ್ಲ ಎಂಬುದು ಕಣ್ಣಿಗೆ ರಾಚುವ ಸತ್ಯ. ಸಾಮಾನ್ಯವಾಗಿ ಇದರ ವೈಫಲ್ಯದ ಹೊಣೆ ಪೊಲೀಸ್ ಇಲಾಖೆ ಮೇಲೆ ಹೇರಲಾಗುತ್ತದೆ. ಆದರೆ, ಮುಕ್ತವಾಗಿ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವಿಲ್ಲದಂಥ ಸ್ಥಿತಿ ರಾಜಕೀಯ ಹಸ್ತಕ್ಷೇಪದಿಂದ ಸೃಷ್ಟಿಯಾಗಿರುವಾಗ ನ್ಯಾಯಪ್ರಾಪ್ತಿಯ ಆಶಯ ಈಡೇರುವುದಾದರೂ ಹೇಗೆ?

ಸರ್ಕಾರ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಐಪಿಎಸ್ ಅಧಿಕಾರಿ ವಲಯದಲ್ಲಿ ಸೃಷ್ಟಿಯಾಗಿರುವ ಅಸಮಾಧಾನ ನಿವಾರಣೆಗೆ ಬದ್ಧವಾಗಬೇಕು. ಕರ್ತವ್ಯ ನಿರ್ವಹಣೆಗೆ ಪೂರಕ ವಾತಾವರಣ ನಿರ್ವಿುಸಿ ಕೊಟ್ಟರೆ ಬಹುತೇಕ ಅಪಸವ್ಯಗಳನ್ನು ತಡೆಯಬಹುದು ಎಂಬ ವಾಸ್ತವ ಸರ್ಕಾರ ಅರಿಯಲಿ.

Leave a Reply

Your email address will not be published. Required fields are marked *

Back To Top