More

    ಸಂಪಾದಕೀಯ|ಉದ್ಯೋಗದ ಭರವಸೆ; ನಿರುದ್ಯೋಗ ದರ ಅಲ್ಪ ಏರಿಕೆ

    ದೇಶದಲ್ಲಿ ನಿರುದ್ಯೋಗ ದರವು ಈ ತಿಂಗಳು ಏರಿಕೆ ಕಂಡಿದೆ ಈ ವರ್ಷದ ಸೆಪ್ಟೆಂಬರ್​ನಲ್ಲಿ ಶೇ. 6.43ರಷ್ಟಿದ್ದ ನಿರುದ್ಯೋಗ ದರವು ಅಕ್ಟೋಬರ್​ನಲ್ಲಿ ಶೇ. 7.77ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಹೇಳಿರುವುದು ದೇಶದ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಹಿತಕರ ಬೆಳವಣಿಗೆಯಲ್ಲ ಹಾಗೂ ಉದ್ಯೋಗ ಬಯಸುವ ಯುವ ಸಮುದಾಯಕ್ಕೆ ಕಳವಳಕಾರಿ ಸಂಗತಿಯಾಗಿ ಗೋಚರಿಸುತ್ತದೆ. ಕಳೆದ ಸೆಪ್ಟೆಂಬರ್​ನಲ್ಲಿ ಶೇ. 5.84ರಷ್ಟಿದ್ದ ಗ್ರಾಮೀಣ ನಿರುದ್ಯೋಗ ದರವು ಅಕ್ಟೋಬರ್​ನಲ್ಲಿ ಶೇ. 8.04ರಷ್ಟು ತೀವ್ರ ಏರಿಕೆ ಕಂಡಿದ್ದರೆ, ನಗರ ನಿರುದ್ಯೋಗ ದರವು ಸೆಪ್ಟೆಂಬರ್​ನಲ್ಲಿ ಶೇ. 7.7 ಇದ್ದುದು ಅಕ್ಟೋಬರ್​ನಲ್ಲಿ ಶೇ. 7.21ಕ್ಕೆ ಇಳಿಕೆಯಾಗಿದೆ.

    ಒಟ್ಟಾರೆ ಮೂರ್ನಾಲ್ಕು ವರ್ಷಗಳ ಪರಿಸ್ಥಿತಿ ಹಾಗೂ ಅಂಕಿ-ಅಂಶಗಳನ್ನು ಗಮನಿಸಿದರೆ ದೇಶದ ನಿರುದ್ಯೋಗ ದರವು ಸಾಕಷ್ಟು ನಿಯಂತ್ರಣದಲ್ಲಿದೆ ಎಂದೇ ಹೇಳಬಹುದಾಗಿದೆ. 2019 ಮತ್ತು 2020ನೇ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ಪರಿಣಾಮವಾಗಿ ಆರ್ಥಿಕ ಬಿಕ್ಕಟ್ಟು ತಲೆದೋರಿ ನಿರುದ್ಯೋಗ ದರವು ಆಂತಕದ ಸ್ಥಿತಿ ತಲುಪಿತ್ತು. ಈ ನಿರುದ್ಯೋಗ ದರವು 2022ರ ಸೆಪ್ಟೆಂಬರ್ ತಿಂಗಳಲ್ಲಿ ಶೇ. 6.43ಕ್ಕೆ ಇಳಿಕೆಯಾಗಿ, 2018ರ ಆಗಸ್ಟ್ ನಿಂದಲೂ, ಅಂದರೆ ಸರಿಸುಮಾರು ನಾಲ್ಕು ವರ್ಷಗಳಲ್ಲೇ ಅತಿ ಕಡಿಮೆ ಪ್ರಮಾಣ ತಲುಪಿತ್ತು. ಈಗ ಮತ್ತೆ ಒಂದು ತಿಂಗಳಲ್ಲಿ ಶೇ. 1.34ರಷ್ಟು ಹೆಚ್ಚಾಗಿದೆ.

    ಜಗತ್ತಿನಲ್ಲಿ ಅತಿಹೆಚ್ಚು ನಿರುದ್ಯೋಗ ದರ ಇರುವ ರಾಷ್ಟ್ರಗಳಲ್ಲಿ ದಕ್ಷಿಣ ಆಫ್ರಿಕಾ ಶೇ. 33.6, ಜಿಬೂಟಿ ಶೇ. 28.4, ಈಸ್ವಾಟಿನಿ ಶೇ. 25.8, ವೆಸ್ಟ್​ಬ್ಯಾಂಕ್ ಮತ್ತು ಗಾಜಾ ಶೇ. 24.9 ಮುಂಚೂಣಿಯಲ್ಲಿವೆ. ಥಾಯ್ಲೆಂಡ್ ಅತಿ ಕಡಿಮೆ ನಿರುದ್ಯೋಗ ದರ ಶೇ 1 ಹೊಂದಿದೆ. ಜಾಗತಿಕವಾಗಿ ಸರಾಸರಿ ನಿರುದ್ಯೋಗ ದರವು 2020ರಲ್ಲಿ ಶೇ. 6.57 ಇದ್ದರೆ, 2021ರಲ್ಲಿ ಇದು ಶೇ. 6.18ಕ್ಕೆ ಇಳಿದಿತ್ತು. 2022ರಲ್ಲಿ ಸದ್ಯ ಶೇ. 7.11ಕ್ಕೆ ಏರಿಕೆ ಕಂಡಿದೆ. ಈ ಅಂಕಿ-ಅಂಶಗಳಿಗೆ ತುಲನೆ ಮಾಡಿದರೆ ಭಾರತದ ದರವು ಜಾಗತಿಕವಾಗಿ ಸರಾಸರಿಗೆ ಆಸುಪಾಸಿನಲ್ಲಿಯೇ ಇದೆ. ಆದರೆ, ಇನ್ನೊಂದು ಗಮನಿಸತಕ್ಕ ಸಂಗತಿಯೆಂದರೆ, 2022ನೇ ಸಾಲಿನಲ್ಲಿ ಏಷ್ಯಾ ಖಂಡದಲ್ಲಿ ನಿರುದ್ಯೋಗ ದರವು ಶೇ. 14.9ಕ್ಕೆ ತಲುಪಬಹುದಾಗಿದೆ ಎಂದು ಅಂದಾಜಿಸಲಾಗಿದೆ. ನೆರೆಯ ಹಾಗೂ ನಮ್ಮ ಖಂಡದ ದೇಶಗಳಿಗೆ ಹೋಲಿಸಿದರೆ ಭಾರತ ಸ್ಥಿತಿ ಆಶಾದಾಯಕವಾಗಿ ಕಂಡುಬರುತ್ತದೆ.

    ಮುಂಬರುವ ಒಂದೂವರೆ ವರ್ಷದಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದಾಗಿ ಜೂನ್ ತಿಂಗಳಲ್ಲಿ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ದೀಪಾವಳಿ ಸಂದರ್ಭದಲ್ಲಿ ಉದ್ಯೋಗ ಮೇಳದ ಮೂಲಕ 75 ಸಾವಿರ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇನ್ನು ಕರ್ನಾಟಕದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, 2 ವರ್ಷಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯೋತ್ಸವ ಸಂದರ್ಭದಲ್ಲಿ ವಾಗ್ದಾನ ಮಾಡಿದ್ದಾರೆ. ಅಲ್ಲದೆ, ಪ್ರಸ್ತುತ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಮೊದಲ ದಿನವೇ 7.5 ಲಕ್ಷ ಕೋಟಿ ರೂಪಾಯಿ ಹೂಡಿಕೆಯಾಗುವ ಭರವಸೆ ವ್ಯಕ್ತವಾಗಿರುವುದು ಕೂಡ ಖಾಸಗಿ ವಲಯದಲ್ಲಿ ವ್ಯಾಪಕ ಉದ್ಯೋಗ ಸೃಷ್ಟಿಯ ನಿರೀಕ್ಷೆಯನ್ನು ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts