More

    ಕಾಳಜಿಯಿಂದ ವರ್ತಿಸಿ; ಮಾನವೀಯ ಸಂಕಟದ ಸಮಯದಲ್ಲಿ ಹಣ ಮಾಡುವ ಧಾವಂತ ಸಲ್ಲ…

    ಕರೊನಾ ಮಹಾಮಾರಿ ಎಂಥ ದೊಡ್ಡ ಮಾನವೀಯ ಸಂಕಷ್ಟವನ್ನು ತಂದೊಡ್ಡಿದೆ ಎಂಬುದನ್ನು ನೋಡುತ್ತಿದ್ದೇವೆ. ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳುತ್ತಿದೆ, ವೈದ್ಯಕೀಯ ರಂಗ ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡುತ್ತಿದೆ. ಕೋವಿಡ್ ಸೋಂಕಿನ ಸರಪಳಿ ಮುರಿಯಲು ಜನಸಂಚಾರ ನಿಯಂತ್ರಣಕ್ಕೆ 14 ದಿನಗಳ ಜನತಾ ಕರ್ಫ್ಯೂ ಕೂಡ ಜಾರಿಗೊಳಿಸಲಾಗಿದೆ. ಆದರೂ, ಸೋಂಕು ಪ್ರಕರಣಗಳ ಏರಿಕೆ ಮುಂದುವರಿದಿದೆ. ಈ ನಡುವೆ ಸೋಂಕಿನ ಲಕ್ಷಣ ಇರುವವರು ಮತ್ತು ಸಾಮಾನ್ಯ ಜನರು ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ತಜ್ಞರ ಸಲಹೆಯಂತೆ ತೀರಾ ಅವಶ್ಯಕ ಔಷಧ ಮತ್ತು ವೈದ್ಯಕೀಯ ಪರಿಕರಗಳ ಖರೀದಿಗೆ ಮುಂದಾಗಿದ್ದಾರೆ. ಹೀಗಿರುವಾಗ ಇಂಥ ಸುರಕ್ಷತಾ ಪರಿಕರಗಳನ್ನು ಜನರ ಕೈಗೆ ಸೂಕ್ತವಾಗಿ ಎಟಕುವಂತೆ ಮಾಡುವುದು ವ್ಯವಸ್ಥೆಯ ಜವಾಬ್ದಾರಿ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಔಷಧ ಮತ್ತು ವೈದ್ಯಕೀಯ ಪರಿಕರಗಳ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, ಬಡವರು, ಮಧ್ಯಮವರ್ಗದವರು ಪರದಾಡುವಂತಾಗಿದೆ.

    ಕರೊನಾ ಮೊದಲ ಅಲೆ ಕಾಣಿಸಿ ಕೊಂಡ ಸಂದರ್ಭದಲ್ಲೂ ಇಂಥ ಘಟನೆಗಳು ಸಂಭವಿಸಿದ್ದವು. ಮುಖ ಗವಸು ಮತ್ತು ಸ್ಯಾನಿಟೈಸರ್​ನ ಕೃತಕ ಕೊರತೆ ಸೃಷ್ಟಿಸಲಾಗಿತ್ತು. ಅಲ್ಲದೆ, ಎರಡು-ಮೂರು ಪಟ್ಟು ಅಧಿಕ ಬೆಲೆಗೆ ಮಾರುವ ಜಾಲಗಳು ಹುಟ್ಟಿಕೊಂಡಿದ್ದವು. ಈ ಹೊತ್ತಲ್ಲೂ ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸುತ್ತಿರುವುದು ವಿಪರ್ಯಾಸಕರ. ಕಳೆದ ತಿಂಗಳು 900, 1000 ರೂಪಾಯಿಗೆ ಲಭ್ಯವಿದ್ದ ಪಲ್ಸ್ ಆಕ್ಸಿಮೀಟರ್ ಅನ್ನು ಎರಡು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಡಿಜಿಟಲ್ ಥರ್ವಮೀಟರ್ ಬೆಲೆ 250ರಿಂದ 400 ರೂ.ಗೆ ಹೆಚ್ಚಳ ಮಾಡಲಾಗಿದ್ದರೆ, ಸ್ಟೀಮರ್ ಬೆಲೆ 250ರಿಂದ 400ಕ್ಕೆ ಏರಿಕೆಯಾಗಿದೆ. ಬೇಡಿಕೆ ಹೆಚ್ಚಿದಂತೆ ಉಪಕರಣಗಳ ದರ ಹೆಚ್ಚಿಸಲಾಗುತ್ತಿದೆ. ರೆಮ್ೆಸಿವಿರ್ ವಿಷಯದಲ್ಲೂ ಇಂಥ ಅಪಸವ್ಯ ಬೆಳಕಿಗೆ ಬಂದಿದೆ. ರೆಮ್ೆಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡುವ ಹಲವು ಜಾಲಗಳು ಸಕ್ರಿಯವಾಗಿದ್ದು, ವೈದ್ಯರೂ ಸೇರಿದಂತೆ ಹಲವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೇಹದ ಉಷ್ಣತೆ ಮತ್ತು ಆಮ್ಲಜನಕ ಪ್ರಮಾಣವನ್ನು ಪರೀಕ್ಷಿಸಲು ಮನೆಯಲ್ಲೇ ಅಗತ್ಯ ಪರಿಕರ ಹೊಂದಿರುವುದು ಸೂಕ್ತ ಎಂದು ತಜ್ಞರು ಸೂಚಿಸಿದ್ದಾರೆ. ಇದರಿಂದ ಡಿಜಿಟಲ್ ಥರ್ವಮೀಟರ್, ಪಲ್ಸ್ ಆಕ್ಸಿಮೀಟರ್ ಖರೀದಿ ಹೆಚ್ಚಿರುವುದು ಗೊತ್ತಿರುವಂಥದ್ದೇ. ಇಂಥ ಸಂಕಷ್ಟದ ದಿನಗಳಲ್ಲಿ ಜನಸಾಮಾನ್ಯರ ಪರಿಸ್ಥಿತಿಯನ್ನೂ ಅರ್ಥಮಾಡಿಕೊಳ್ಳಬೇಕು. ಎಲ್ಲ ಸಂದರ್ಭಗಳಲ್ಲೂ ಹಣ ಮಾಡುವುದೇ ಮುಖ್ಯವಾಗಬಾರದು. ಕೃತಕ ಕೊರತೆ ಸೃಷ್ಟಿಸುವುದು, ದಿಢೀರ್ ಬೆಲೆ ಹೆಚ್ಚಿಸುವಂಥ ವರ್ತನೆಗಳು ಅಮಾನವೀಯ ಅಲ್ಲದೆ ಜನರ ಸೌಲಭ್ಯಗಳನ್ನು ಕಿತ್ತುಕೊಂಡಂತೆ ಆಗುತ್ತವೆ. ಮೊದಲೇ ಜನರು ಆತಂಕದಲ್ಲಿದ್ದಾರೆ. ಸಣ್ಣ ಶೀತಕ್ಕೂ ಹೆದರಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಹೀಗಿರುವಾಗ ಜನರ ಸಂಕಷ್ಟವನ್ನು ಹೆಚ್ಚಿಸಬಾರದು. ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವ, ವೈದ್ಯಕೀಯ ಪರಿಕರಗಳನ್ನು ಸೂಕ್ತ, ನ್ಯಾಯಯತ ಬೆಲೆಗೆ ಸಿಗುವಂತೆ ಮಾಡುವ ತುರ್ತು ಅಗತ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts