Tuesday, 20th February 2018  

Vijayavani

ಸದನದಲ್ಲಿ ಶಾಸಕರಿಲ್ಲದೆ ಬಣಬಣ - ಇಂದಿನ ಕಲಾಪಕ್ಕೆ ಬರೀ 22 ಮಂದಿ ಹಾಜರ್​ - ಬಜೆಟ್​ ಅಧಿವೇಶನವೂ 3 ದಿನ ಮೊಟಕು.        ಒಬ್ಬರಿಗಿಂತ ಮತ್ತೊಬ್ಬ ಖತರ್ನಾಕ್​​ - ಎಂಎಲ್​ಎ ಪುತ್ರನ ಟೀಂನಲ್ಲಿ 8 ಮಂದಿ - ಇದು ನಲಪಾಡ್​​​​​ ಗ್ಯಾಂಗ್​ನ ಕಂಪ್ಲೀಟ್​ ಕಹಾನಿ.        ವಿದ್ವತ್​ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ - ಮೂಗಿನ ಮೂಳೆ‌ ಕಟ್​​​, ಮೂಖ ಊದಿಕೊಂಡಿದೆ - ಐಸಿಯುನಲ್ಲೇ ಚಿಕಿತ್ಸೆ ಅಂದ್ರು ಮಲ್ಯ ಆಸ್ಪತ್ರೆ ವೈದ್ಯರು.        ವಿದ್ವತ್​​​​​​​​​​ ಬಿಜೆಪಿ ಕಾರ್ಯಕರ್ತ ವಿಚಾರ - ವಿವಾದದ ಬಳಿಕ ತಪ್ಪು ಸರಿಪಡಿಸಿಕೊಂಡ ಬಿಜೆಪಿ - ಅವ್ರು ನಮ್ಮ ಕಾರ್ಯಕರ್ತನಲ್ಲ ಅಂತಾ ಅಮಿತ್ ಷಾ ಸ್ಪಷ್ಟನೆ.        ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ - ಚಲಿಸುತ್ತಿದ್ದ ಲಾರಿಯ ಟಯರ್ ಸ್ಫೋಟ - ಇಬ್ಬರ ದುರ್ಮರಣ, ಲಾರಿ ಚಾಲಕನ ಸ್ಥಿತಿ ಗಂಭೀರ.       
Breaking News

ನಂಬಿಕೆ ಮಾಯವಾಗದಿರಲಿ

Monday, 22.01.2018, 3:04 AM       No Comments

ಖಾಸಗಿ ಆಸ್ಪತ್ರೆಗಳು ಆಧುನಿಕ ಸವಲತ್ತುಗಳ ಮೂಲಕ ಜನರಿಗೆ ಆರೋಗ್ಯಸೇವೆ ನೀಡುತ್ತಿರುವುದು ಹೌದಾದರೂ. ಇವುಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂದೇಹ ಇದ್ದೇ ಇದೆ. ಅನಗತ್ಯವಾಗಿ ಪರೀಕ್ಷೆಗಳು ಹಾಗೂ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ರೋಗಿಗಳ ಹೊರೆಯನ್ನು ಹೆಚ್ಚಿಸಲಾಗುತ್ತದೆ ಎಂಬ ದೂರು ವ್ಯಾಪಕವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಸಿಸೇರಿಯನ್ ಪ್ರಮಾಣ ಈ ಮಾತಿಗೆ ಪುಷ್ಟಿ ನೀಡುತ್ತದೆ. ಹಾಗಂತ ಇಲ್ಲಿ ಕೇವಲ ವೈದ್ಯರ ಬಗ್ಗೆ ದೂರುವಂತಿಲ್ಲ, ಜನರ ಮನೋಭಾವವೂ ಕೆಲಮಟ್ಟಿಗೆ ಇಲ್ಲಿ ಪಾತ್ರವಹಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, 2005-06ರಲ್ಲಿ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಶೇ.31.9 ಇದ್ದುದು 2015-16ರಲ್ಲಿ ಶೇ.40.3ಕ್ಕೆ ಏರಿದೆ. ಇದೇ ವೇಳೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಪ್ರಮಾಣ ಶೇ.0.3ರಷ್ಟು ಕಡಿಮೆಯಾಗಿದೆ. ಗರ್ಭಿಣಿಯರಲ್ಲಿ ಪೋಷಕಾಂಶ ಕೊರತೆ, ಮಧುಮೇಹ, ಆಹಾರ ಪದ್ಧತಿ ಇವುಗಳ ಜತೆಗೆ, ಕೆಲವರು ಅಮಾವಾಸ್ಯೆ, ಶಕುನ ಸರಿಯಿಲ್ಲ ಮುಂತಾದ ಕಾರಣಗಳಿಂದಾಗಿ ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಇದು ಸಿಸೇರಿಯನ್ ಹೆಚ್ಚಳಕ್ಕೆ ಕಾರಣ ಎಂದು ವೈದ್ಯರು ಬೊಟ್ಟುಮಾಡುತ್ತಾರೆ. ಗರ್ಭಸ್ಥ ಮಗು ದಪ್ಪ ಅಥವಾ ಅತಿತೂಕ ಹೊಂದಿದ್ದರೆ, ಮಗು ತಲೆಕೆಳಗಾಗಿದ್ದರೆ, ತಂತ್ರಜ್ಞಾನದ ಮೂಲಕ ಗರ್ಭಧರಿಸಿದ್ದರೆ ಈ ಮುಂತಾದ ಸಂದರ್ಭಗಳಲ್ಲಿ, ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಿಂದ ಸಿಸೇರಿಯನ್ ಅಗತ್ಯವಾಗುತ್ತದೆ. ಆದರೆ ಸಹಜ ಹೆರಿಗೆಯಾಗುವ ಸಂದರ್ಭದಲ್ಲೂ ಬೇಕೆಂದೇ ಸಿಸೇರಿಯನ್ ಮಾಡಲಾಗುತ್ತದೆ ಎಂಬ ಆಕ್ಷೇಪಗಳನ್ನು ಕಡೆಗಣಿಸಲಾಗದು. ಹಿಂದೆಲ್ಲ ಈಗಿನಂತೆ ವೈದ್ಯಕೀಯ ಸವಲತ್ತುಗಳಿರಲಿಲ್ಲ. ಅಲ್ಲದೆ, ಹೆರುವ ಮಕ್ಕಳ ಸಂಖ್ಯೆಯೂ ಜಾಸ್ತಿಯಿರುತ್ತಿತ್ತು. ಹೀಗಿದ್ದೂ, ಕೆಲ ಪ್ರಕರಣಗಳನ್ನು ಹೊರತುಪಡಿಸಿದರೆ ಉಳಿದಂತೆ ತಾಯಂದಿರು ಆರಾಮಾಗೇ ಇರುತ್ತಿದ್ದರು. ಹಳ್ಳಿಯ ಸೂಲಗಿತ್ತಿಯರೇ ಪ್ರಸೂತಿತಜ್ಞರಾಗಿದ್ದರು, ಅವರೇನು ವೈದ್ಯಕೀಯ ಓದಿದವರಲ್ಲ, ಸಾಂಪ್ರದಾಯಿಕ ಜ್ಞಾನವೇ ಅವರನ್ನು ಈ ವಿಷಯದಲ್ಲಿ ಕುಶಲಿಗಳನ್ನಾಗಿಸುತ್ತಿತ್ತು. ಹೆರಿಗೆಯೆಂಬುದು ಸಹಜ ಪ್ರಕ್ರಿಯೆಯಾಗಿದ್ದರೆ, ನಂತರದಲ್ಲಿ ತಾಯಂದಿರು ಎದುರಿಸುವ ಆರೋಗ್ಯ ಸಮಸ್ಯೆಗಳೂ ಕಡಿಮೆಯಾಗುತ್ತದೆ. ಆದರೆ ಆಧುನಿಕ ವೈದ್ಯಕೀಯ ಸೌಲಭ್ಯಗಳು ಹೆಚ್ಚುತ್ತ ಹೋದಂತೆ ಮಾನವನ ಆರೋಗ್ಯವೂ ಸೂಕ್ಷ್ಮವಾಗುತ್ತಿರುವಂತಿದೆ. ಹೀಗಾಗಿಯೇ ಆಸ್ಪತ್ರೆಗಳು ತುಂಬಿತುಳುಕುವುದು. ಅಗತ್ಯ ಸಂದರ್ಭಗಳಲ್ಲಿ ಸಿಸೇರಿಯನ್ ಮಾಡುವುದು ತಪ್ಪಲ್ಲ. ಏಕೆಂದರೆ ಅಲ್ಲಿ ತಾಯಿ ಹಾಗೂ ಮಗು ಇಬ್ಬರ ಜೀವನದ ಪ್ರಶ್ನೆಯೂ ಅಡಗಿರುತ್ತದೆ. ಆದರೆ, ವಾಣಿಜ್ಯಕ ಉದ್ದೇಶಕ್ಕಾಗಿ ಅನಗತ್ಯವಾಗಿ ಸಿಸೇರಿಯನ್ ಮಾಡಿದರೆ ಅದು ಅಕ್ಷಮ್ಯ.

ಖಾಸಗಿ ಆಸ್ಪತ್ರೆಗಳಿಗೂ ಈಗ ಕಾಪೋರೇಟ್ ಸ್ಪರ್ಶ ಬಂದಿದೆ. ಇದಲ್ಲದೆ, ಬಗೆ ಬಗೆ ತೆರಿಗೆಗಳು ಬೇರೆ. ಹೀಗಾಗಿ ಆಸ್ಪತ್ರೆಗಳಿಗೂ ತುಂಬ ಖರ್ಚಿರುತ್ತದೆ ಎಂಬ ಮಾತು ಒಪ್ಪತಕ್ಕಂಥದ್ದೇ. ಆದರೆ ರೋಗಿಗಳ ಜೇಬಿಗೆ ಹೊರೆಯಾಗದಂತೆ ನೋಡಿಕೊಳ್ಳುವ ನೈತಿಕ ಹೊಣೆಗಾರಿಕೆ ವೈದ್ಯರ ಮೇಲಿರುವುದನ್ನು ಮರೆಯಬಾರದು. ಅದೇ ವೇಳೆ, ಜನರು ಕೂಡ ನಂಬಿಕೆ, ನೋವು ತಾಳಿಕೊಳ್ಳಲು ಹಿಂಜರಿಕೆ ಮುಂತಾದ ಕಾರಣಗಳಿಂದಾಗಿ ಸಿಸೇರಿಯನ್ ಮಾಡುವಂತೆ ವೈದ್ಯರ ಬಳಿ ಆಗ್ರಹಿಸುವ ಪ್ರವೃತ್ತಿ ತಗ್ಗಬೇಕು. ಏಕೆಂದರೆ ಇದರಿಂದ ನಂತರದಲ್ಲಿ ಆರೋಗ್ಯ ಸೂಕ್ಷ್ಮವಾಗುವ ಸಂಭವ ಇರುತ್ತದೆ. ಆರೋಗ್ಯಕರ ಸಮಾಜ ನಿರ್ವಣದಲ್ಲಿ ಸಮಾಜ ಹಾಗೂ ವೈದ್ಯಕೀಯ ವಲಯ ಇಬ್ಬರ ಪಾತ್ರವೂ ಇದೆ.

Leave a Reply

Your email address will not be published. Required fields are marked *

Back To Top