More

    ಸಂಪಾದಕೀಯ: ರಾಜಕೀಯ ಅಪರಾಧೀಕರಣಕ್ಕೆ ತಡೆ

    ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ರಾಜಕಾರಣ ಹಾಗೂ ಶಾಸನ ರಚನೆಯಿಂದ ದೂರವಿಡಬೇಕು ಎಂಬ ಆಶಯ, ಆಗ್ರಹ ಹಳೆಯದ್ದೇ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಹಲವು ಸಲಹೆ, ಸೂಚನೆ ನೀಡಿವೆ. ಆದರೆ, ಅದರ ಪರಿಣಾಮ ಅಷ್ಟಕಷ್ಟೇ. ಆದರೂ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವವರು ರಾಜಾರೋಷವಾಗಿ ರಾಜಕೀಯದಲ್ಲಿ ಸದ್ದು ಮಾಡುತ್ತಿರುವುದಲ್ಲದೆ, ಆಡಳಿತದ ಕೇಂದ್ರ ಭಾಗ ಪ್ರವೇಶಿಸುತ್ತಿರುವುದು ದೌರ್ಭಾಗ್ಯಕರ.

    ಕೆಲ ರಾಜಕೀಯ ಪಕ್ಷಗಳಂತೂ, ಇಂಥ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯ ಜನಪ್ರಿಯತೆ ನೋಡಿಯೇ ಟಿಕೆಟ್ ನೀಡುತ್ತವೆ ಎಂಬುದು ದೊಡ್ಡ ವಿಪರ್ಯಾಸ. ಇದಕ್ಕೆಲ್ಲ ತಡೆ ಹಾಕುವುದು ಹೇಗೆ? ರಾಜಕೀಯ ವ್ಯವಸ್ಥೆಯ ಶುದ್ಧೀಕರಣ ಹೇಗೆ? ಎಂಬ ಬಗ್ಗೆ ಹಲವು ಬಗೆಯಲ್ಲಿ ಚರ್ಚೆಗಳು ನಡೆಯುತ್ತಿರಬೇಕಾದರೆ ‘ಅಪರಾಧ ಹಿನ್ನೆಲೆಯುಳ್ಳವರಿಗೆ ಚುನಾವಣಾ ಟಿಕೆಟ್ ನೀಡದಂತೆ ನಿರ್ದೇಶನ ಜಾರಿ ಮಾಡಬೇಕು’ ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್​ಗೆ ವರದಿ ನೀಡಿದೆ. ಹಾಗಾಗಿ, ರಾಜಕೀಯ ಶುದ್ಧೀಕರಣದ ಪ್ರಕ್ರಿಯೆ ಕುತೂಹಲದ ಘಟ್ಟವನ್ನು ಪ್ರವೇಶಿಸಿದೆ ಎನ್ನಬಹುದು.

    ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಟಿಕೆಟ್ ಸಿಕ್ಕ ನಂತರ ತಮ್ಮ ಮೇಲಿರುವ ಪ್ರಕರಣಗಳ ಬಗ್ಗೆ ವಿದ್ಯುನ್ಮಾನ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಜಾಹೀರಾತಿನ ಮೂಲಕ ಮಾಹಿತಿ ನೀಡಬೇಕೆಂಬ ನಿಯಮವನ್ನು ಆಯೋಗ ಕಳೆದ ಚುನಾವಣೆಯಲ್ಲೇ ಜಾರಿ ಮಾಡಿತ್ತು. ಈ ನಿಯಮದಿಂದ ಅಪರಾಧಿಗಳ ರಾಜಕೀಯ ಪ್ರವೇಶ ತಡೆಯಲು ಸಾಧ್ಯವಾಗಿಲ್ಲ ಎಂಬುದು ವಾಸ್ತವವೇ. ಅಭ್ಯರ್ಥಿಗಳಿಗೆ ಚುನಾವಣಾ ಟಿಕೆಟ್ ನೀಡುವುದು ರಾಜಕೀಯ ಪಕ್ಷಗಳೇ.

    ಹಾಗಾಗಿ, ರಾಜಕೀಯದಲ್ಲಿ ಅಪರಾಧೀಕರಣ ತಡೆಯಲು ಈ ಪಕ್ಷಗಳೇ ಮುಂದಾಗಬೇಕಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಅವರ ಸಂಪೂರ್ಣ ಹಿನ್ನೆಲೆ, ವ್ಯಕ್ತಿತ್ವ, ಚಾರಿತ್ರ್ಯ, ವಿವಾದಗಳು ಇತ್ಯಾದಿಗಳನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿ, ಒಳ್ಳೆಯ ವ್ಯಕ್ತಿತ್ವಕ್ಕೆ ಮಣೆ ಹಾಕಿದರೆ ಸಮಸ್ಯೆಗೆ ಪರಿಹಾರದ ಹಾದಿ ಕಂಡುಕೊಳ್ಳಬಹುದು. ಎಲ್ಲ ರಾಜಕೀಯ ಪಕ್ಷಗಳಿಂದಲೂ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ಗೆದ್ದು ಬರುತ್ತಲೇ ಇದ್ದಾರೆ.

    ಸಂಸತ್ ಮತ್ತು ವಿಧಾನಸಭೆಗಳಲ್ಲಿ ಇಂಥವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಅಥವಾ ಚುನಾವಣಾ ಆಯೋಗ ತಡೆಯಬಹುದೆ? ಎಂಬ ಪ್ರಶ್ನೆಗೆ ಅವು ಪ್ರಯತ್ನ ಹಾಕಬಲ್ಲವು, ಸಲಹೆ ಸೂಚನೆ ನೀಡಬಲ್ಲವು ಎಂಬುದು ನಿಜ. ಆದರೆ, ಈ ಬಗೆಯ ಬದ್ಧತೆ, ರಾಜಕೀಯ ರಂಗದ ಶುದ್ಧೀಕರಣ ಪರಿಣಾಮಕಾರಿಯಾಗಿ ಆಗಬೇಕಾದರೆ ರಾಜಕೀಯ ಪಕ್ಷಗಳೇ ಅಳೆದು ತೂಗಿ ಟಿಕೆಟ್ ನೀಡಬೇಕು, ಸೂಕ್ತ ನಿಯಮ ರೂಪಿಸಿಕೊಳ್ಳಬೇಕು.

    ಇದು ತುಂಬ ಸೂಕ್ಷ್ಮ ವಿಚಾರ. ಈ ನಿಟ್ಟಿನಲ್ಲಿ ವಿವೇಚನೆಯ ಮತ್ತು ನಿಜವಾದ ಕಳಕಳಿಯ ನಿರ್ಧಾರವನ್ನು ಎಲ್ಲ ರಾಜಕೀಯ ಪಕ್ಷಗಳು ತೆಗೆದುಕೊಳ್ಳುವ ಮೂಲಕ ವ್ಯವಸ್ಥೆಯ ಉತ್ಕರ್ಷಕ್ಕೆ ಶ್ರಮಿಸಬೇಕು. ಈ ಆಶಯ ಈಡೇರಿದರೆ ಜನರ ಬಹುಕಾಲದ ಆಗ್ರಹ ಮತ್ತು ಚುನಾವಣಾ ಆಯೋಗದ ಹಲವು ವರ್ಷಗಳ ಪ್ರಯತ್ನ ಈಡೇರಿದಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts