More

    ಪಾರದರ್ಶಕತೆ ತನ್ನಿ; ಸರ್ಕಾರಿ ನೇಮಕಾತಿ ವಿಶ್ವಾಸಾರ್ಹತೆ ಕುಂದಬಾರದು..

    ರಾಜ್ಯದ ಪೊಲೀಸ್ ಇಲಾಖೆಯಲ್ಲಿ 545 ಪೊಲೀಸ್ ಸಬ್​ಇನ್​ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದು, ಆ ಬಗ್ಗೆ ಈಗ ಸಿಐಡಿ ತನಿಖೆ ಪ್ರಗತಿಯಲ್ಲಿರುವುದು ಸರಿಯಷ್ಟೆ. ಈ ಪ್ರಕರಣ ದಿನದಿನಕ್ಕೂ ತಿರುವು ಪಡೆಯುತ್ತಿದ್ದು, ಬಂಧನಗಳು ನಡೆಯುತ್ತಲೇ ಇವೆ. ತನಿಖೆಯನ್ನು ನಿಷ್ಪಕ್ಷಪಾತವಾಗಿ, ಸಮಗ್ರವಾಗಿ ನಡೆಸುವುದಾಗಿ ಸರ್ಕಾರ ಹೇಳಿದ್ದು, ಆ ಮಾತನ್ನು ಉಳಿಸಿಕೊಳ್ಳುವ ಮೂಲಕ, ಪ್ರಾಮಾಣಿಕ ಉದ್ಯೋಗಾಕಾಂಕ್ಷಿಗಳಲ್ಲಿ ಭರವಸೆ ತುಂಬುವ ಕೆಲಸ ಮಾಡಬೇಕಿದೆ. ಈ ಪ್ರಕರಣದ ಅಡ್ಡಪರಿಣಾಮವೋ ಎಂಬಂತೆ, ಪೊಲೀಸ್ ಇಲಾಖೆಯಲ್ಲಿ ನಡೆಯಬೇಕಿದ್ದ ಹಲವು ಹುದ್ದೆಗಳ ನೇಮಕ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸಿಐಡಿ ತನಿಖೆ ಮುಗಿದ ಮೇಲೆಯೇ ಈ ಹುದ್ದೆಗಳ ನೇಮಕ ನಡೆಯುವ ಸಾಧ್ಯತೆ ಗೋಚರಿಸಿದೆ. ಒಂದು ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ಬೆಳಕಿಗೆ ಬಂದರೆ, ಉಳಿದ ನೇಮಕಗಳನ್ನು ನಿಲ್ಲಿಸಿದರೆ ಅದು ಪರಿಹಾರವಾಗುವುದಿಲ್ಲ. ಬದಲಿಗೆ, ಅಕ್ರಮ ವ್ಯವಹಾರಕ್ಕೆ ಆಸ್ಪದವಾಗದಂತೆ ವ್ಯವಸ್ಥೆಯನ್ನು ರೂಪಿಸುವುದು ಮುಖ್ಯ. ಮಾಹಿತಿ ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಖಾಸಗಿ ವಲಯದ ಬೆಳವಣಿಗೆ ಹಾಗೂ ಸರ್ಕಾರಿ ನೌಕರಿಯಲ್ಲಿ ಸೀಮಿತ ಅವಕಾಶದ ಕಾರಣಕ್ಕೆ ಖಾಸಗಿಯತ್ತ ಮುಖಮಾಡುವವರ ಸಂಖ್ಯೆ ಈಗ ಹೆಚ್ಚಿದ್ದರೂ, ಸರ್ಕಾರಿ ನೌಕರಿ ಎಂದರೆ ಜನರಲ್ಲಿ ಈಗಲೂ ಜನರಲ್ಲಿ ಒಂದು ಬಗೆಯ ಕ್ರೇಜ್ ಇರುವುದನ್ನು ಅಲ್ಲಗಳೆಯಲಾಗದು.

    ಉದ್ಯೋಗ ಭದ್ರತೆ ಹಾಗೂ ನಿಶ್ಚಿತ ವೇತನ ಸಹ ಇದಕ್ಕೆ ಕಾರಣ. ಅದರಲ್ಲೂ ಉನ್ನತ ಹುದ್ದೆಯಾದರಂತೂ ಸಾಮಾಜಿಕವಾಗಿ ಅಂಥವರ ಪ್ರತಿಷ್ಠೆಯೂ ಸಹಜವಾಗಿ ಹೆಚ್ಚಿಗೆ ಇರುತ್ತದೆ. ಆದರೆ ಇವತ್ತಿನ ಸಂದರ್ಭದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ಹೀಗೆ ಅಕ್ರಮ- ಅವ್ಯವಹಾರಗಳು ಪದೇಪದೆ ಕಂಡುಬಂದರೆ, ನೇಮಕಾತಿಗಳ ಬಗ್ಗೆ ಜನರಿಗೆ ಸಂದೇಹ ಬರುವುದರ ಜತೆಗೆ, ಒಟ್ಟಾರೆ ವ್ಯವಸ್ಥೆಯ ಬಗೆಗೆ ಜನರಲ್ಲಿ ಅಪನಂಬಿಕೆ-ಅವಿಶ್ವಾಸ ಮೂಡಲು ಕಾರಣವಾಗುವ ಅಪಾಯ ಇದೆ. ನಮ್ಮ ರಾಜ್ಯ ಮಾತ್ರ ಎಂದಲ್ಲ, ಇತರ ಅನೇಕ ರಾಜ್ಯಗಳಲ್ಲಿ ಸಹ ಸರ್ಕಾರಿ ನೇಮಕಾತಿಯಲ್ಲಿ ಈ ಬಗೆಯ ಅಪಸವ್ಯಗಳು ವರದಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಅಕ್ರಮ ಹಾದಿಯಲ್ಲಿ ನೇಮಕಗೊಂಡವರು, ಮುಂದೆ ಯಾವರೀತಿ ಕಾರ್ಯನಿರ್ವಹಿಸಬಹುದು? ಎಷ್ಟರಮಟ್ಟಿಗೆ ಪ್ರಾಮಾಣಿಕರಾಗಿರಬಲ್ಲರು? ಆಡಳಿತ ವ್ಯವಸ್ಥೆಯಲ್ಲಿ ಇಂಥ ಒಂದಷ್ಟು ಜನರು ತೂರಿಕೊಂಡರೆ ದೇಶದ ಗತಿ ಏನು? ಎಂದು ಜನರು ಅನುಮಾನಿಸಿದರೆ ಅದು ಸಹಜವೇ. ಜನರು ವ್ಯವಸ್ಥೆಯ ಕುರಿತು ನಂಬಿಕೆ ಕಳೆದುಕೊಳ್ಳುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಬೆಳವಣಿಗೆಯಲ್ಲ. ಸರ್ಕಾರದ ಬದ್ಧತೆಯ ಜತೆಗೆ ವ್ಯಕ್ತಿಗತ ನೈತಿಕತೆಯ ಆಯಾಮವೂ ಇದಕ್ಕಿದೆ.

    ಗುರಿ ಸಾಧಿಸಲು ಮಾರ್ಗವೂ ಮುಖ್ಯವಾಗುತ್ತದೆ. ತಾನು ವಾಮಮಾರ್ಗದ ಮೂಲಕ ಉದ್ಯೋಗಗಿಟ್ಟಿಸಿಕೊಳ್ಳಲು ಮುಂದಾಗುವುದಿಲ್ಲ ಎಂಬ ಸ್ವಯಂನಿರ್ಧಾರವನ್ನು ಅಭ್ಯರ್ಥಿಗಳು ಮಾಡಿಕೊಂಡು ಅದನ್ನು ಪಾಲಿಸಿದರೆ, ಅವ್ಯವಹಾರಕ್ಕೆ ಅರ್ಧ ಕಡಿವಾಣ ಬಿದ್ದಂತೆಯೇ. ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ. ಸರ್ಕಾರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಅಥವಾ ಅನ್ಯವ್ಯಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲದಂತೆ ಸಮಗ್ರ ವ್ಯವಸ್ಥೆಯನ್ನು ರೂಪಿಸುವತ್ತ ತುರ್ತಾಗಿ ಕ್ರಮವಾಗಬೇಕಿದೆ ಮತ್ತು ಪಕ್ಷಭೇದ ಮರೆತು, ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ರಾಜಕೀಯ ಪಕ್ಷಗಳೂ ಇದಕ್ಕೆ ಬೆಂಬಲ ನೀಡಬೇಕಾದುದು ಅಗತ್ಯ. ಇದನ್ನು ಬಿಟ್ಟು ಇವರು ಅವರ ಮೇಲೆ, ಅವರು ಇವರ ಮೇಲೆ ಆಕ್ಷೇಪದ ಬೆರಳು ತೋರಿಸುತ್ತ ಕುಳಿತರೆ ಪ್ರಯೋಜನವಿಲ್ಲ. ಈ ವಿಷಯದಲ್ಲಿ ತಡವಾದಷ್ಟು ಹಾನಿ ಆಗುತ್ತಲೇ ಇರುತ್ತದೆ ಎಂಬುದನ್ನು ಸಂಬಂಧಪಟ್ಟವರು ಮರೆಯಬಾರದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts