More

    ಕರ್ನಾಟಕದ ಹೆಗ್ಗಳಿಕೆ; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಚಾಲನೆ

    ಕರೊನಾ ಕಾರಣದಿಂದಾಗಿ ಶಿಕ್ಷಣ ರಂಗ ಏರಿಳಿತಗಳ ನಡುವೆ ಸಾಗಿರುವಂತೆಯೇ, ಆಗಸ್ಟ್ 23 ಮಹತ್ವದ ದಿನವಾಗಿಯೂ ದಾಖಲಾಗಲಿದೆ. ಕೇಂದ್ರ ಸರ್ಕಾರ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ ನೀಡಿದ ದೇಶದ ಮೊದಲ ರಾಜ್ಯ ಎಂದ ಹೆಗ್ಗಳಿಕೆ ಕರ್ನಾಟಕಕ್ಕೆ ದಕ್ಕಿದೆ. ಇದೇ ದಿನದಂದು, 9ರಿಂದ 12ನೇ ವರ್ಗಗಳ ಭೌತಿಕ ತರಗತಿಗಳ ಪುನರಾರಂಭ ಸಹ ಆಗಿದೆ. ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರು ವರ್ಚುವಲ್ ಮೂಲಕ ಶಿಕ್ಷಣ ನೀತಿ ಜಾರಿಗೆ ಚಾಲನೆ ನೀಡಿದರು. ಇನ್ನೊಂದೆಡೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪ್ಯಾಡ್ ನೀಡುವುದು, ಉನ್ನತ ಶಿಕ್ಷಣ ಪರಿಷತ್ ಮಾದರಿಯಲ್ಲಿ ಕಲಬುರಗಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪರಿಷತ್ ಸ್ಥಾಪನೆ ಮತ್ತು ಎಂಟನೇ ತರಗತಿಯಿಂದಲೇ ಕರಿಯರ್ ಗೈಡೆನ್ಸ್ ಕಡ್ಡಾಯ ಮಾಡುವುದು ಮುಂತಾದ ಯೋಜನೆಗಳನ್ನು ಪ್ರಕಟಿಸಿದ್ದಾರೆ.

    ಒಟ್ಟಿನಲ್ಲಿ, ಶಿಕ್ಷಣ ನೀತಿ ಜಾರಿಯಲ್ಲಿ ರಾಜ್ಯ ದಾಪುಗಾಲು ಇಟ್ಟಂತಾಗಿದೆ. ಕೇಂದ್ರವು ಹೊಸ ನೀತಿ ಘೋಷಿಸಿದ ಕೆಲವೇ ದಿನಗಳಲ್ಲಿ, ರಾಜ್ಯ ಈ ಬಗ್ಗೆ ಸಕ್ರಿಯವಾಗಿ ತೊಡಗಿಕೊಂಡು ನೀತಿ ಜಾರಿಗೆ ಸಂಬಂಧಿಸಿ ರೂಪುರೇಷೆ ಸಿದ್ಧಪಡಿಸಲು ತಜ್ಞರ ಸಮಿತಿಯನ್ನು ನೇಮಿಸಿತು. ಆ ಸಮಿತಿಯ ವರದಿ ಆಧರಿಸಿ ಮುಂದಡಿ ಇಟ್ಟಿತು. ಹೊಸ ನೀತಿಯಲ್ಲಿ, ಕನ್ನಡ ಕಲಿಕೆಗೆ ತೊಂದರೆ ಉಂಟಾಗುವ ಅಂಶ ಇದೆಯೆಂದು ಕೆಲವರು ಆಕ್ಷೇಪ ಎತ್ತಿದ್ದು, ಕನ್ನಡಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ. ಈ ನೀತಿಯನ್ವಯವೇ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಈಗ ಚಾಲನೆ ಸಿಕ್ಕಿದ್ದು, ಅಕ್ಟೋಬರ್ 1ರಂದು ತರಗತಿಗಳು ಆರಂಭವಾಗುತ್ತವೆ. ಆನ್​ಲೈನ್ ಮೂಲಕವೇ ಪ್ರವೇಶಾತಿ ನಡೆಯುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇದರಿಂದ ಬೆರಳತುದಿಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ.

    ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರು, ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿ ಶಿಕ್ಷಣ ವಲಯದ ಜತೆ ಸಂವಾದವನ್ನೂ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊರಹೊಮ್ಮುವ ಅಭಿಪ್ರಾಯ-ಸಲಹೆಗಳನ್ನು ಆಧರಿಸಿ, ಅವಶ್ಯವಿದ್ದಲ್ಲಿ ನೀತಿಯಲ್ಲಿ ಸೂಕ್ತ ಮಾರ್ಪಡು ಮಾಡಿಕೊಳ್ಳಲೂ ಸರ್ಕಾರ ಮುಕ್ತ ಮನಸ್ಸು ಹೊಂದಿರಬೇಕು. ಸ್ವಾತಂತ್ರ್ಯ ನಂತರದಿಂದ ಈವರೆಗೆ ಅನುಸರಿಸಿಕೊಂಡು ಬಂದ ಶಿಕ್ಷಣ ನೀತಿಯ ಕುಂದುಕೊರತೆಗಳ ಬಗ್ಗೆ ಬಹಳ ಚರ್ಚೆಗಳು ನಡೆದಿವೆ. ಆದರೆ ದೊಡ್ಡಮಟ್ಟದ ಬದಲಾವಣೆ ಕಂಡುಬಂದಿರಲಿಲ್ಲ. ಹೊಸ ನೀತಿಯು ದೇಶದ ಹಾಗೂ ಜಾಗತಿಕ ವಾತಾವರಣಕ್ಕೆ ಅನುಗುಣವಾಗಿ ರೂಪಿತವಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಆದ್ಯತೆ ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಇದು ಕೇವಲ ಆಶಯವಾಗದೆ, ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳುವ ಹೊಣೆ ಎಲ್ಲರ ಮೇಲಿದೆ. ಶಿಕ್ಷಣ ನೀತಿ ಬಗ್ಗೆ ಏನಾದರೂ ತಕರಾರು ಇದ್ದಲ್ಲಿ, ಪರಸ್ಪರ ಚರ್ಚೆ ಮೂಲಕ ಒಮ್ಮತಕ್ಕೆ ಬಂದು ಮುನ್ನಡೆಯಬೇಕೆ ವಿನಾ ರಾಜಕೀಯ ಹಗ್ಗಜಗ್ಗಾಟಕ್ಕೆ ಆಸ್ಪದ ನೀಡಬಾರದು ಎಂಬ ವಿವೇಚನೆ ಎಲ್ಲ ಪಕ್ಷಗಳಿಗೂ ಇರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts