More

    ವಿವೇಚನೆಯಿಂದ ತೀರ್ಮಾನಿಸಿ; ಚುನಾವಣೆಗಿಂತ ಜನರ ಆರೋಗ್ಯ ಮುಖ್ಯ..

    ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಹೆಸರು ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್​ನ ಅಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಮೇ 9ರಂದು ಚುನಾವಣೆ ನಡೆಸಿ, 12ರಂದು ಫಲಿತಾಂಶ ಘೋಷಿಸಲು ನಿರ್ಧರಿಸಲಾಗಿದೆ. ಚುನಾವಣೆ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಕಸಾಪ ಚುನಾವಣಾಧಿಕಾರಿ ಹೇಳಿದ್ದಾರೆ. ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರಬಹುದು, ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನು ನಡೆಸಿರಬಹುದು. ಅಂದ ಮಾತ್ರಕ್ಕೆ ತರಾತುರಿಯಲ್ಲಿ ಚುನಾವಣೆ ನಡೆಸಬೇಕೆ? ಸಾಮಾನ್ಯ ಸನ್ನಿವೇಶವಿದ್ದರೆ ಚುನಾವಣೆ ನಿಗದಿತ ವೇಳಾಪಟ್ಟಿಯಂತೆ ನಡೆಸಲು ಯಾವುದೇ ಅಭ್ಯಂತರ ಇರಲಿಲ್ಲ. ಆದರೆ, ಕರೊನಾ ಎರಡನೇ ಅಲೆಯ ತೀವ್ರತೆ ವ್ಯಾಪಕವಾಗಿದೆ. ಬೆಂಗಳೂರು ಮಾತ್ರವಲ್ಲದೆ ಜಿಲ್ಲಾ ಕೇಂದ್ರಗಳಲ್ಲೂ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಹೆಚ್ಚಿದೆ.

    ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ವಾರಾಂತ್ಯ ಲಾಕ್​ಡೌನ್ ಮತ್ತು ರಾತ್ರಿ ಕರ್ಫ್ಯೂವಿನಂಥ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣೆ ಹೊತ್ತಲ್ಲಿ ಬೇರೆ ರಾಜ್ಯಗಳಲ್ಲಿ ಏನೆಲ್ಲ ಆಗಿದೆ ಎಂಬುದು ಗೊತ್ತಿರುವಂಥದ್ದೇ. ಪ್ರಧಾನಿ ನರೇಂದ್ರ ಮೋದಿ ಕೂಡ ಪಶ್ಚಿಮ ಬಂಗಾಳದ ಚುನಾವಣಾ ರ್ಯಾಲಿಗಳನ್ನು ರದ್ದು ಗೊಳಿಸಿದ್ದಾರೆ. ಕರ್ನಾಟಕದಲ್ಲಿ ನಡೆದ ಉಪಚುನಾವಣೆ ವೇಳೆಯಲ್ಲೂ ಜನ ಸಂದಣಿ ಸೇರಿದ್ದು, ಸುರಕ್ಷಾ ಕ್ರಮ ಗಳ ಉಲ್ಲಂಘನೆಯಾಗಿದ್ದರಿಂದ ಕರೊನಾ ಪ್ರಕರಣಗಳು ಹೆಚ್ಚಿದ ನಿದರ್ಶನ ಕಣ್ಮುಂದೆಯೇ ಇದೆ. ಅಲ್ಲದೆ, ಪ್ರತಿಷ್ಠಿತ ಒಕ್ಕಲಿಗರ ಸಂಘದ ಚುನಾವಣೆಯನ್ನು ಮುಂದೂಡುವಂತೆ ರಾಜ್ಯ ಸರ್ಕಾರ ಮಾಡಿಕೊಂಡಿದ್ದ ಮನವಿಗೆ ಹೈಕೋರ್ಟ್ ಸಮ್ಮತಿಸಿದೆ. ಕಸಾಪ ಚುನಾವಣೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುವುದಿಲ್ಲ. ಒಟ್ಟಾರೆ ರಾಜ್ಯಾದ್ಯಂತ ಅದಕ್ಕೆ ಮೂರು ಲಕ್ಷ ಮತದಾರರು ಇದ್ದಾರೆ ಎಂಬುದು ವಾಸ್ತವ. ಆದರೆ, ಈಗಿನ ಸಂದರ್ಭದಲ್ಲಿ ಒಂದು ಸಣ್ಣ ಪ್ರಮಾದ ನಡೆದರೂ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಅಲ್ಲದೆ, ಕಸಾಪದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಹಿರಿಯ ನಾಗರಿಕರೇ ಆಗಿದ್ದಾರೆ. ಕರೊನಾ ಸೋಂಕಿಗೆ ತುತ್ತಾಗುತ್ತಿರುವವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿದ್ದು, ಚುನಾವಣೆಗಿಂತಲೂ ಜೀವ ಮತ್ತು ಜನರ ಆರೋಗ್ಯ ಮುಖ್ಯವಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಹಿರಿಯ ನಾಗರಿಕರು ಮನೆಯಿಂದ ಆಚೆ ಬರುತ್ತಿಲ್ಲ. ಹೀಗಿರುವಾಗ ಮತ ಹಾಕಲು ಬರುವರೇ? ಅನಿವಾರ್ಯ ಸಂದರ್ಭದಲ್ಲಿ ಕಸಾಪದ ಚುನಾವಣೆ ಮುಂದೂಡಿದ ನಿದರ್ಶನಗಳಿವೆ. ಈ ಬಾರಿ ಯಂತೂ ಶೈಕ್ಷಣಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ನಿಯಮಗಳು ಕೂಡ ಕಾಲಕಾಲಕ್ಕೆ ಬಿಗಿಗೊಳ್ಳುತ್ತಿವೆ. ‘ಅನವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ ಜನರಲ್ಲಿ ವಿನಂತಿಸಿಕೊಂಡಿದ್ದಾರೆ. ಹಾಗಾಗಿ, ಪ್ರತಿಷ್ಠೆ ಅಥವಾ ತರಾತುರಿಯನ್ನು ಬದಿಗಿಡುವುದು ಅನಿವಾರ್ಯ. ಈಗಿನ ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಚುನಾವಣೆ ನಡೆಸಬೇಕೆ ಅಥವಾ ಮುಂದೂಡಬೇಕೆ ಎಂಬುದನ್ನು ಕನ್ನಡ ಸಾಹಿತ್ಯ ಪರಿಷತ್ ವಿವೇಚನೆಯಿಂದ ತೀರ್ವನಿಸಲಿ. ಯಾವುದೇ ತೀರ್ವನಕ್ಕೆ ಬರುವ ಮುನ್ನ ಜನರ ಆರೋಗ್ಯ ರಕ್ಷಣೆ ಮುಖ್ಯ ಎಂಬುದನ್ನು ಅರಿಯಲಿ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts