Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಭಾರತಕ್ಕೆ ನೈತಿಕ ಜಯ

Friday, 19.05.2017, 3:00 AM       No Comments

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಾತ್ಕಾಲಿಕ ತಡೆಯೊಡ್ಡಿದೆ. ಇದರಿಂದಾಗಿ ಜಾಧವ್, ಅವರ ಕುಟುಂಬಿಕರು ಕೊಂಚ ನಿರಾಳರಾಗುವಂತಾಗಿದೆ. ಈ ಪ್ರಕರಣದ ಅಂತಿಮ ತೀರ್ಪು ಆಗಸ್ಟ್​ನಲ್ಲಿ ಪ್ರಕಟವಾಗಲಿದ್ದು, ಅಲ್ಲಿಯವರೆಗೆ ಜಾಧವ್​ರನ್ನು ಜಾಗರೂಕವಾಗಿ ನೋಡಿಕೊಳ್ಳಬೇಕು ಎಂಬುದಾಗಿ ನ್ಯಾಯಾಲಯವು ಪಾಕಿಸ್ತಾನಕ್ಕೆ ತಾಕೀತು ಮಾಡಿರುವುದು ಗಮನಿಸಬೇಕಾದ ಸಂಗತಿ. ಬೇಹುಗಾರಿಕೆ ಆರೋಪ ಹೊರಿಸಿ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಬಂಧಿಸಿ, ಅಲ್ಲಿನ ಸೇನಾ ನ್ಯಾಯಾಲಯ ಗಲ್ಲುಶಿಕ್ಷೆ ನೀಡಿದ್ದನ್ನು ಪ್ರಶ್ನಿಸಿದ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಕುಲಭೂಷಣ್ ಪರ ವಕೀಲರ ಸಮರ್ಥ ವಾದಮಂಡನೆ ಹಾಗೂ ಸುಸಂಗತ ಪುರಾವೆಗಳ ಪ್ರಸ್ತುತಿಯಿಂದಾಗಿ ಸದರಿ ಗಲ್ಲುಶಿಕ್ಷೆಗೆ ತಾತ್ಕಾಲಿಕ ತಡೆ ಸಿಕ್ಕಿದ್ದು, ಇದು ಭಾರತಕ್ಕೆ ದಕ್ಕಿದ ನೈತಿಕ ವಿಜಯ ಎನ್ನಲಡ್ಡಿಯಿಲ್ಲ. ಇದಕ್ಕೂ ಮೊದಲು, ಪಾಕಿಸ್ತಾನ ಸೇನಾ ನ್ಯಾಯಾಲಯದ ತೀರ್ಪನ್ನು ಅಲ್ಲಿನ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸುವ, ಒಂದೊಮ್ಮೆ ಕಾನೂನು ಮಾರ್ಗದಲ್ಲಿ ಪ್ರಕರಣಕ್ಕೆ ಸೋಲು ಅಥವಾ ಹಿನ್ನಡೆ ಉಂಟಾದರೆ, ‘ರಾಜತಾಂತ್ರಿಕ’ ಮಾಗೋಪಾಯಗಳನ್ನು ಬಳಸಿ ಇದಕ್ಕೊಂದು ರ್ತಾಕ ಅಂತ್ಯ ಹಾಡುವ ಕುರಿತು ಕೇಂದ್ರ ಸರ್ಕಾರ ಚಿಂತನ-ಮಂಥನ ನಡೆಸಿತ್ತು ಎಂಬುದಿಲ್ಲಿ ಸ್ಮರಣಾರ್ಹ.

ಕುಲಭೂಷಣ್ ವಿಚಾರದಲ್ಲಿ ಪಾಕಿಸ್ತಾನದ ನಡೆಗಳು ಆಕ್ಷೇಪಾರ್ಹವಾಗಿವೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಒತ್ತಿಹೇಳಿದೆ. ತನ್ನ ವಿರುದ್ಧ ಗೂಢಚರ್ಯುಯಲ್ಲಿ ಜಾಧವ್ ತೊಡಗಿಸಿಕೊಂಡಿದ್ದರು ಎಂಬ ಆರೋಪಕ್ಕೆ ಬಲ ತುಂಬಲು ಪಾಕಿಸ್ತಾನ ಒದಗಿಸಿರುವ ಸಾಕ್ಷ್ಯಾಧಾರಗಳು ಸಮರ್ಪಕವಾಗಿಲ್ಲ; ವಿಯೆನ್ನಾ ಒಪ್ಪಂದದಡಿ ಜಾಧವ್​ರನ್ನು ಬಿಡಿಸಿಕೊಳ್ಳಲು ಭಾರತ ಯತ್ನಿಸಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರೂ, ಪಾಕಿಸ್ತಾನ ಈ ಪ್ರಕರಣದಲ್ಲಿ ಮನಸೋ ಇಚ್ಛೆ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಜತೆಗೆ, ಜಾಧವ್ ಪ್ರಕರಣದ ಸಂಬಂಧದ ಚರ್ಚೆಗೆ ಅಥವಾ ಅವರೊಂದಿಗಿನ ಭೇಟಿಗೆ ಭಾರತ ಹಲವು ಬಾರಿ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಿದರೂ ಪಾಕಿಸ್ತಾನ ಅದಕ್ಕೆ ನೀರೆರಚಿದೆ. ಇದನ್ನು ಸರ್ವಥಾ ಅಂಗೀಕರಿಸಲಾಗದು ಎಂದಿರುವ ನ್ಯಾಯಾಲಯ, ಪಾಕ್ ಹುನ್ನಾರವನ್ನು ಬಯಲಿಗೆಳೆದಿದೆ.

ಕಸಬ್ ಪ್ರಕರಣವನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ. ಕಸಬ್​ಗೆ ಭಾರತದಲ್ಲಿ ಗಲ್ಲುಶಿಕ್ಷೆಯಾಗುವುದಕ್ಕೂ ಮುನ್ನ, ಆ ಪ್ರಕರಣದ ವಿಚಾರಣಾ ಪ್ರಕ್ರಿಯೆ ಎಷ್ಟು ಸುದೀರ್ಘವಾಗಿತ್ತು ಮತ್ತು ಯಾವ ಹಂತದಲ್ಲೂ ಕಾನೂನಿನ ಉಲ್ಲಂಘನೆಯಾಗಿರಲಿಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಜತೆಗೆ, ಅವನ ಭದ್ರತೆ, ಊಟೋಪಚಾರ ಯಾವುದಕ್ಕೂ ಕುಂದುಬಾರದಂತೆ ಎಚ್ಚರವಹಿಸಿದ ಭಾರತ, ಈ ಪ್ರಕರಣದ ನಿಭಾವಣೆಗೆಂದೇ ಕೋಟ್ಯಂತರ ರೂಪಾಯಿ ಖರ್ಚುಮಾಡಿತ್ತು. ಆದರೆ, ಇದನ್ನೆಲ್ಲ ಹಳದಿಕಣ್ಣಲ್ಲೇ ನೋಡಿದ ಪಾಕಿಸ್ತಾನ, ಭಾರತದ ವಿರುದ್ಧ ಸಾಂಪ್ರದಾಯಿಕ ಸೇಡು ತೀರಿಸಿಕೊಳ್ಳಲು ಜಾಧವ್ ಪ್ರಕರಣದಲ್ಲಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದು ನಿಯಮಬಾಹಿರ ನಡೆಯೇ ಸರಿ. ಪಾಕಿಸ್ತಾನದ ಇಂಥ ಮುಖವಾಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಸಂದರ್ಭಗಳಲ್ಲಿ ಕಳಚಲ್ಪಡುತ್ತಿದ್ದರೂ ಅದರಿಂದ ಪಾಠ ಕಲಿಯುವ ತಂಟೆಗೇ ಅದು ಹೋಗದಿರುವುದು ವಿಪರ್ಯಾಸ. ಜಾಧವ್ ಪ್ರಕರಣದಲ್ಲಿ ಒದಗಿದ ಹಿನ್ನಡೆಯನ್ನು ಕಂಡಾದರೂ ಪಾಕಿಸ್ತಾನ ಎಚ್ಚೆತ್ತುಕೊಳ್ಳುವುದೇ ಎಂಬುದು ಈಗಲೂ ಅಷ್ಟಿಷ್ಟು ಉಳಿದಿರುವ ಆಶಾಭಾವನೆ.

Leave a Reply

Your email address will not be published. Required fields are marked *

Back To Top