Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಭಾರತದ ಚಾಣಾಕ್ಷ ನಡೆ

Thursday, 18.05.2017, 3:00 AM       No Comments

ವಿಶ್ವದ ದೊಡ್ಡಣ್ಣನಾಗುವ ಕನಸು ಕಾಣುತ್ತಿರುವ ಚೀನಾ, ಇದರ ಸಾಕಾರಕ್ಕೆ ಇನ್ನಿಲ್ಲದಂತೆ ಹೆಣಗುತ್ತಿದೆ. ‘ಒನ್ ಬೆಲ್ಟ್ ಒನ್ ರೋಡ್’ (ಒಬಿಒಆರ್) ಯೋಜನೆಯ ಹೆಸರಲ್ಲಿ ಏಷ್ಯಾ, ಯುರೋಪ್, ಆಫ್ರಿಕಾ ದೇಶಗಳ ಜತೆ ಕೈಜೋಡಿಸಿ ರಸ್ತೆ, ಜಲ ಮತ್ತು ರೈಲುಸಂಪರ್ಕ ಕಲ್ಪಿಸುವುದು, ಮೂಲಸೌಕರ್ಯ ಒದಗಿಸುವುದು ಚೀನಾ ಉದ್ದೇಶ. ಸಹಯೋಗಿ ದೇಶಗಳ ಉನ್ನತಿಯ ಆಶಯ ಇದರ ಹಿಂದಿದೆ ಎಂದು ಮೇಲ್ನೋಟಕ್ಕೆ ಅನಿಸಿದರೂ, ಇದರಿಂದ ಹೆಚ್ಚಿನ ಆರ್ಥಿಕ ಲಾಭ, ರಾಜಕೀಯ ಪ್ರಯೋಜನ ದಕ್ಕುವುದು ಚೀನಾಕ್ಕೇ ಎಂಬುದು ನಿರ್ವಿವಾದ. ಹೀಗಾಗಿ ಇಂಥ ಏಕಪಕ್ಷೀಯ ಯೋಜನೆಯ ಮೂಲಕ ಇತರ ರಾಷ್ಟ್ರಗಳ ಭೌಗೋಳಿಕ ಸಾರ್ವಭೌಮತೆಯನ್ನು ಚೀನಾ ಕಡೆಗಣಿಸಿದೆ ಎಂಬ ಕೂಗು ಕೆಲ ರಾಷ್ಟ್ರಗಳಿಂದ ಹೊಮ್ಮಿದೆ. ಈ ಯೋಜನೆಯಲ್ಲಿ ಭಾರತ ಗುರುತಿಸಿಕೊಂಡಿಲ್ಲ; ಕಾರಣ, ವಾಣಿಜ್ಯೋದ್ದೇಶಕ್ಕಿಂತ ಭಾರತವನ್ನು ವ್ಯೂಹಾತ್ಮಕವಾಗಿ ಸುತ್ತುಗಟ್ಟುವ ಹುನ್ನಾರವೇ ಇದರಲ್ಲಡಗಿದೆ ಎಂಬುದು ಭಾರತದ ಸ್ಪಷ್ಟ ಗ್ರಹಿಕೆ. ಬಾಂಗ್ಲಾ, ಮ್ಯಾನ್ಮಾರ್, ಪಾಕಿಸ್ತಾನ, ಶ್ರೀಲಂಕಾಗಳಲ್ಲಿ ಚೀನಾ ಈಗಾಗಲೇ ನೌಕಾನೆಲೆಗಳನ್ನು ಸ್ಥಾಪಿಸಿರುವುದು ಈ ಗ್ರಹಿಕೆಗೆ ಪುಷ್ಟಿನೀಡುವಂಥದ್ದು. ಹೀಗಾಗಿ ಚೀನಾದ ತಂತ್ರಕ್ಕೆ ಪ್ರತಿತಂತ್ರವಾಗಿ ಭಾರತವು ಜಪಾನ್ ಜತೆ ಕೈಜೋಡಿಸಿದೆ. ಆಫ್ರಿಕಾ, ಶ್ರೀಲಂಕಾ, ಇರಾನ್ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಉಭಯದೇಶಗಳು ಯೋಜಿಸಿದ್ದು, ಇದು ಚೀನಾದ ಏಕಪಕ್ಷೀಯ ತಂತ್ರಕ್ಕೆ ಮಾರುತ್ತರ ಎಂದೇ ಬಿಂಬಿಸಲ್ಪಟ್ಟಿದೆ. ಪೂರ್ವ ಆಫ್ರಿಕಾದಲ್ಲಿನ ಮೂಲಸೌಕರ್ಯ ಮತ್ತು ಸಾಮರ್ಥ್ಯವರ್ಧನೆಯ ಯೋಜನೆಗಳಿಗೆ ಆರ್ಥಿಕ ಬೆಂಬಲ, ಇರಾನ್​ನ ಚಾಬಹಾರ್ ಬಂದರು, ಥಾಯ್-ಮ್ಯಾನ್ಮಾರ್ ಗಡಿಗುಂಟದ ದಾವೀ ಬಂದರಿನ ಅಭಿವೃದ್ಧಿ ಉಭಯ ದೇಶಗಳ ಕಾರ್ಯಸೂಚಿಯಲ್ಲಿ ಸೇರಿವೆ. ಆಫ್ರಿಕಾದಲ್ಲಿ ಕೈಗೊಳ್ಳಲಾಗುವ ಯೋಜನೆಗಳ ಸಂಬಂಧ ಅಲ್ಲಿನ ಮಧ್ಯಸ್ಥಗಾರರೊಂದಿಗೆ ಭಾರತ-ಜಪಾನ್ ಅಹಮದಾಬಾದ್​ನಲ್ಲಿ ಸದ್ಯದಲ್ಲೇ ಪೂರ್ವಭಾವಿ ಚರ್ಚೆಯಲ್ಲಿ ಪಾಲ್ಗೊಳ್ಳಲಿವೆ. ಈ ಬೆಳವಣಿಗೆಗಳಿಂದಾಗಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುವುದರಲ್ಲಿ ಸಂದೇಹವಿಲ್ಲ.

ಮತ್ತೊಂದೆಡೆ, ವಿಶ್ವದ ಪರಮಾಣು ಪೂರೈಕೆದಾರರ ಗುಂಪಿನ (ಎನ್​ಎಸ್​ಜಿ) ಸದಸ್ಯತ್ವ ಪಡೆಯುವ ಕನಸಿನ ಸಾಕಾರಕ್ಕೆ ಪಣತೊಟ್ಟಿರುವ ಭಾರತ, ಮಿತ್ರರಾಷ್ಟ್ರ ರಷ್ಯಾದ ಮೇಲೆ ಒತ್ತಡ ಹೇರಲಾರಂಭಿಸಿರುವುದು ಹೊಸ ಬೆಳವಣಿಗೆ. ಈ ನಿಟ್ಟಿನಲ್ಲಿ ತನ್ನನ್ನು ಬೆಂಬಲಿಸದಿದ್ದಲ್ಲಿ, ಕೂಡಂಕೂಳಂನ ಅಣುವಿದ್ಯುತ್ ಘಟಕಗಳ 5 ಮತ್ತು 6ನೇ ಹಂತದ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ರಷ್ಯಾಕ್ಕೆ ಭಾರತ ಬೆದರಿಕೆ ಹಾಕಿದೆ ಎನ್ನಲಾಗಿದೆ. ಚೀನಾದೆಡೆಗೆ ಸದ್ದಿಲ್ಲದೆ ಕೈಚಾಚುತ್ತಿರುವ ರಷ್ಯಾ, ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ದೊರಕಿಸಿಕೊಡುವ ನಿಟ್ಟಿನಲ್ಲಿ ಒಮ್ಮನಸ್ಸಿನಿಂದ ಯತ್ನಿಸುತ್ತಿಲ್ಲ ಎಂಬುದು ಅರಿವಾಗಿರುವ ಕಾರಣದಿಂದಲೇ ಭಾರತ ಇಂಥ ನಡೆಗೆ ಮುಂದಾಗಿದೆ. ಈ ಬೆಳವಣಿಗೆಗಳು ವಿಶ್ವ ಮಟ್ಟದಲ್ಲಿ ಭಾರತದ ಮಹತ್ವವನ್ನು ಎತ್ತಿಹಿಡಿಯಬಲ್ಲವು ಎಂಬುದು ರಾಜತಾಂತ್ರಿಕರ ಅಭಿಮತ. ಒಬಿಒಆರ್ ಯೋಜನೆಯಿಂದ ಭಾರತ ಹೊರಗುಳಿದಿದ್ದಕ್ಕೆ ‘ಅಂತಾರಾಷ್ಟ್ರೀಯ ಮಹತ್ವ ದಕ್ಕಿಸಿಕೊಳ್ಳುವ ಸದವಕಾಶವನ್ನು ಭಾರತ ಕಳಕೊಂಡಿದೆ’ ಎಂಬರ್ಥದಲ್ಲಿ ಚೀನಾ ಅಧ್ಯಕ್ಷ ಭಾರತವನ್ನು ಪರೋಕ್ಷವಾಗಿ ಕುಟುಕಿದ್ದಾರೆ. ಆದರೆ, ಇಂಥ ಮಹತ್ವ ದಕ್ಕಿಸಿಕೊಳ್ಳಲು ಈ ಯೋಜನೆಯ ಸಹಭಾಗಿಯೇ ಆಗಬೇಕಿಲ್ಲ, ತನಗೆ ಸ್ವಂತಬಲವಿದೆ ಎಂಬುದನ್ನು ಭಾರತ ಇತ್ತೀಚಿನ ಇಂಥ ನಡೆಗಳ ಮೂಲಕ ಮಾರುತ್ತರ ನೀಡಿದೆ ಎಂಬುದು ದಿಟ.

Leave a Reply

Your email address will not be published. Required fields are marked *

Back To Top