More

    ವ್ಯವಸ್ಥೆ ಬಲಪಡಿಸಿ; ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಅಕ್ಷಮ್ಯ

    ಕರೊನಾ ಎರಡನೇ ಅಲೆಯ ಆರ್ಭಟ ಹಲವು ಸಂಕಷ್ಟಗಳನ್ನು ತಂದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ, ಮರಣ ಪ್ರಮಾಣ ಹೆಚ್ಚುತ್ತಿದೆ. ಬೆಂಗಳೂರಿನ ಸ್ಥಿತಿಯಂತೂ ಅಯೋಮಯವಾಗಿದೆ. ಜಿಲ್ಲಾಕೇಂದ್ರಗಳಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಿಂದ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಹೆಚ್ಚಿದೆ ಎನ್ನುವುದು ನಿಜವಾದರೂ, ಪರಿಸ್ಥಿತಿ ನಿಭಾಯಿಸುವಲ್ಲಿ ಎಡವಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯ ಇಲ್ಲ, ಹಾಸಿಗೆ ಇದ್ದರೆ ಐಸಿಯು, ಇತರ ವೈದ್ಯಕೀಯ ಸೇವೆಗಳಿಲ್ಲ. ಖಾಸಗಿ ಆಸ್ಪತ್ರೆಗಳ ದುಬಾರಿ ಶುಲ್ಕವನ್ನು ಭರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಸರ್ಕಾರದ ಆಂಬುಲೆನ್ಸ್​ಗಳೂ ಸಿಗುತ್ತಿಲ್ಲ. ಖಾಸಗಿ ಅಂಬುಲೆನ್ಸ್​ಗಳು ಕೆಲವೇ ಗಂಟೆಗೆ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿವೆ.

    ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಕಾಣಿಸಿಕೊಂಡಾಗ ಆರೋಗ್ಯ ವ್ಯವಸ್ಥೆ ಎಚ್ಚೆತ್ತುಕೊಂಡು, ಸಮರೋಪಾದಿಯಲ್ಲಿ ಕೆಲಸ ಮಾಡಿತ್ತು. ಆದರೆ, ದುರದೃಷ್ಟವಶಾತ್, ಈ ಬಾರಿ ಆ ಉತ್ಸಾಹ, ಕಾಳಜಿ ಎರಡೂ ಕಾಣುತ್ತಿಲ್ಲ. ಸೋಂಕಿತರಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿಲ್ಲ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಪ್ರಕ್ರಿಯೆ ನಿಂತುಹೋಗಿದೆ. ಎಷ್ಟೋ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿದ್ದರೂ, ಚಿಕಿತ್ಸೆ ನಿರಾಕರಿಸಲಾಗುತ್ತಿದೆ. ಮೊದಲೇ ಆತಂಕಗೊಂಡಿರುವ ಜನತೆಗೆ ವ್ಯವಸ್ಥೆ, ಸರ್ಕಾರ ಭರವಸೆ ತುಂಬಬೇಕೆ ಹೊರತು ಈ ಬಗೆಯ ಅಧ್ವಾನಗಳಿಂದ ಮತ್ತಷ್ಟು ಭೀತಿ ಸೃಷ್ಟಿಸಬಾರದು.

    ಕಳೆದ ಬಾರಿ ಕರೊನಾ ಎದುರಿಸುವುದು ಆರೋಗ್ಯ ಇಲಾಖೆಗೆ, ಒಟ್ಟಾರೆ ಸರ್ಕಾರಕ್ಕೆ ಹೊಸದಾಗಿತ್ತು. ಏನು ಕ್ರಮ ಕೈಗೊಳ್ಳಬೇಕು, ಸೋಂಕು ಪ್ರಸರಣದ ವೇಗ ತಗ್ಗಿಸುವುದು ಹೇಗೆ ಎಂಬ ಬಗ್ಗೆ ಹಲವು ಪ್ರಶ್ನೆ, ಅನುಮಾನಗಳಿದ್ದವು. ಆದರೆ, ಈ ಬಾರಿ ಆ ಸ್ಥಿತಿ ಇಲ್ಲ. ಒಂದು ವರ್ಷದ ಅನುಭವದ ಬಳಿಕ ಅಧಿಕಾರಿಗಳು ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಕಾರ್ಯನಿರ್ವಹಿಸಬೇಕಿತ್ತು. ಸೋಂಕು ಪ್ರಕರಣಗಳು ಏರಿಕೆ ಕಾಣುತ್ತಿದ್ದಂತೆ ಆರೋಗ್ಯ ಇಲಾಖೆಯ ತಯಾರಿ ಕೊರತೆ ಢಾಳಾಗಿ ಗೋಚರಿಸಿವೆ. ಎಲ್ಲೂ ಸಮರ್ಪಕವಾದ ಔಷಧಗಳಿಲ್ಲ, ಆಮ್ಲಜನಕ ಸಿಲಿಂಡರ್​ಗಳಿಗಂತೂ ಭಾರಿ ಪರದಾಟ. ರೋಗಿಗಳನ್ನು ಚಿಕಿತ್ಸೆಗೆ ದಾಖಲು ಮಾಡಬೇಕಾದರೆ ದೊಡ್ಡ ಹೋರಾಟ ನಡೆಸುವಂತಾಗಿದೆ. ಆ ಬಳಿಕವೂ ಸಮರ್ಪಕ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಅಂದಮೇಲೆ ಕರೊನಾ ವಿರುದ್ಧದ ಹೋರಾಟ ಪರಿಣಾಮಕಾರಿಯಾಗಿ ಹೇಗೆ ನಡೆಯಬಲ್ಲದು?

    ಕೋವಿಡ್ ರೋಗಿಗಳಿಗಾಗಿರುವ ರಾಜ್ಯದ ‘ಆಪ್ತಮಿತ್ರ’ ಹಾಗೂ ಬಿಬಿಎಂಪಿ ಸಹಾಯವಾಣಿ ನೆರವಿಗೆ ಬರುತ್ತಿಲ್ಲ. ಮೊದಲನೇ ಅಲೆ ಸಂದರ್ಭದಲ್ಲಿ ‘ಆಪ್ತಮಿತ್ರ’ ಸಹಾಯವಾಣಿ ಲಕ್ಷಾಂತರ ರೋಗಿಗಳಿಗೆ ಸಹಾಯ ಮಾಡಿತ್ತು. ಆದರೀಗ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಬಿಬಿಎಂಪಿ ಕೋವಿಡ್ ವಾರ್ ರೂಮ್ ಸ್ಥಾಪಿಸಿರುವ ಸಹಾಯವಾಣಿಯಿಂದಲೂ ಯಾವುದೇ ನೆರವು ಸಿಗುತ್ತಿಲ್ಲ. ಹಾಸಿಗೆ ವ್ಯವಸ್ಥೆಗೆ ನೋಡಲ್ ಅಧಿಕಾರಿ ನೇಮಿಸಿಲ್ಲ. ಹೀಗೆ ಸಾಲು ಸಾಲು ನಿರ್ಲಕ್ಷ್ಯಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಇದೊಂದು ಮಾನವೀಯ ಸಂಕಟವಾಗಿದ್ದು, ಅಧಿಕಾರಿಗಳು, ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಒಂದೊಂದು ಜೀವದ ಮೌಲ್ಯವನ್ನೂ ಅರ್ಥಮಾಡಿಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts